ಅಪಘಾತ ಎಂದರೆ ಅನಿರೀಕ್ಷಿತವಾಗಿ, ಯಾವುದೇ ಪೂರ್ವಯೋಜನೆಯಿಲ್ಲದೆ ನಡೆಯುವ, ದುಃಖದ ಸನ್ನಿವೇಶವನ್ನು ಉಂಟುಮಾಡುವ, ತಡೆಯಲು ಸಾಧ್ಯವಾಗದ ಮತ್ತು ಗಾಯಗಳಿಗೆ ಕಾರಣವಾಗುವ ದುರ್ಘಟನೆಯಾಗಿದೆ. ಅಪಘಾತಕ್ಕೆ ಒಳಗಾದವರು ಉದ್ದೇಶಪೂರ್ವಕವಾಗಿ ವರ್ತಿಸಿರುವುದಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕಡೆ ಮನುಷ್ಯರ ಮತ್ತು ಯಂತ್ರಗಳ ನಿಯಂತ್ರಣ ತಪ್ಪಿ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾಗರಿಕತೆಯು ಬೆಳೆದಂತೆ, ಜನಸಂಖ್ಯೆ ಹೆಚ್ಚಿದಂತೆ, ಅವಸರದ ಬದುಕಿನಿಂದಾಗಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ.
ಅಪಘಾತಗಳಲ್ಲಿ ಹಲವಾರು ಬಗೆಗಳಿವೆ. ಇಂದು ವಿಶ್ವದಾದ್ಯಂತ ಎಲ್ಲ ರಸ್ತೆಗಳಲ್ಲಿ ವೇಗವಾಗಿ ಸಂಚರಿಸುತ್ತಿರುವ ವಾಹನಗಳು ಪರಸ್ಪರ ಡಿಕ್ಕಿಯಾಗಿ ಅಪಘಾತಗಳು ನಡೆಯುತ್ತವೆ. ಮನೆ, ಕಚೇರಿ, ಕಾರ್ಖಾನೆಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಟ್ಟಡಗಳು, ಯಂತ್ರಗಳು ಸುಟ್ಟುಹೋಗುವ, ಮನುಷ್ಯರು ಸತ್ತುಹೋಗುವ ಘಟನೆಗಳು ಅಪಘಾತದ ಇನ್ನೊಂದು ಬಗೆಯಾಗಿದೆ. ಅತ್ಯಂತ ವಿಚಿತ್ರ ಕಾರಣಗಳಿಂದಾಗಿ ಮನುಷ್ಯರು ಬಿದ್ದು, ಉರುಳಿ, ಸಿಕ್ಕಿಕೊಂಡು ಅಪಘಾತಕ್ಕೆ ಒಳಗಾಗುವುದೂ ಇದೆ. ಇಂಥ ಅಪಘಾತಗಳನ್ನು ಈ ರೀತಿಯಾಗಿ ವಿಂಗಡಿಸಬಹುದು:
೧) ಕೆಲಸ ಸಂಬಂಧಿತ ಅಪಘಾತಗಳು: ಚಟುವಟಿಕೆಯಿಂದ ಆಗುವ ಅಪಘಾತಗಳು: ಕೆಲಸದ ವೇಳೆಯಲ್ಲಿ ನಡೆಯುವ ಇಂಥ ದುರ್ಘಟನೆಗಳನ್ನು ಕೆಲಸ ಸಂಬಂಧಿತ ಅಪಘಾತ ಎನ್ನುತ್ತಾರೆ.
೨) ವಿರಾಮ ಸಂಬಂಧಿತ ಅಪಘಾತಗಳು: ವಿರಾಮಕಾಲದ ಚಟುವಟಿಕೆಗಳನ್ನು ನಡೆಸುವಾಗ, ಮುಖ್ಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಅಪಘಾತಗಳಾಗುತ್ತವೆ.
೩) ವಾಹನಗಳಿಂದ ಆಗುವ ಅಪಘಾತಗಳು : ರೈಲು, ಸಂಚಾರದಟ್ಟಣೆ, ಹಡಗು, ಭೂಸಾರಿಗೆ ವಾಹನಗಳ ಅಪಘಾತಗಳು
೪) ಅನಿರೀಕ್ಷಿತ ಅಪಘಾತಗಳು: ಕಟ್ಟಡ ಉರುಳುವುದು, ಭೂಕುಸಿತಕ್ಕೆ ಜನರು ಸಿಲುಕುವುದು, ಸೇತುವೆ ಮುರಿಯುವುದು, ಯಂತ್ರಗಳು ಕೆಟ್ಟು ಹಾನಿಯಾಗುವುದು ಇತ್ಯಾದಿ ಅಪಘಾತಗಳು
ಅಪಘಾತಗಳು ನಡೆಯಲು ಕಾರಣಗಳು
ಅಪಘಾತಗಳು ನಡೆಯುವುದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುದು ಮನುಷ್ಯನ ಅಜಾಗರೂಕತೆ. ವಾಹನವನ್ನು ಚಲಾಯಿಸುವಾಗ, ಯಂತ್ರಗಳನ್ನು ಬಳಸುವಾಗ, ಕೆಲಸ ಮಾಡುವಾಗ ಒಂದೇ ಕ್ಷಣವೂ ಜಾಗರೂಕತೆ ವಹಿಸದಿದ್ದರೂ ಸಾಕು, ಭಾರೀ ಅಪಘಾತ ನಡೆಯುತ್ತದೆ. ಉದಾಹರಣೆಗೆ ವಾಹನ ಚಲಾಯಿಸುವಾಗ ಮೊಬೈಲ್ ಫೋನಿನತ್ತ ಗಮನ ನೀಡಿದರೆ, ಅಥವಾ ರಸ್ತೆ ದಾಟುವಾಗ ಮೊಬೈಲಿನಲ್ಲಿ ಮಾತನಾಡುತ್ತಿದ್ದರೆ ಅಪಘಾತವಾಗುವುದು ಸಾಮಾನ್ಯ. ಕತ್ತರಿಸುವ ಯಂತ್ರಗಳಿಗೆ ಕೈಗಳು ಸಿಗದಂತೆಎಚ್ಚರಿಕೆ ವಹಿಸದಿದ್ದರೆ, ಕೈ ಕತ್ತರಿಸಿಹೋಗುತ್ತದೆ.
ಅಪಘಾತಗಳು ನಡೆಯುವುದಕ್ಕೆ ಇನ್ನೊಂದು ಕಾರಣ – ಯಂತ್ರಗಳ ವೈಫಲ್ಯ. ರೈಲುಹಳಿಗಳ ಸಂಪರ್ಕವನ್ನು ಬದಲಿಸುವ ಯಂತ್ರವು ಕೆಟ್ಟುಹೋದರೆ, ಎರಡು ರೈಲುಗಳು ಡಿಕ್ಕಿಯಾಗುತ್ತವೆ. ವಿಮಾನದ ಯಂತ್ರ ಕೆಟ್ಟರೆ ಅದು ಆಕಾಶದಿಂದ ಬೀಳುತ್ತದೆ. ಬಸ್ಸು, ಕಾರು, ಲಾರಿ, ಬೈಕುಗಳ ಬ್ರೇಕ್ ವಿಫಲವಾದರೆ ವಾಹನಗಳು ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆಯುತ್ತವೆ.
ಅಪಘಾತಕ್ಕೆ ಇನ್ನೊಂದು ಮುಖ್ಯ ಕಾರಣ : ಅನಿರೀಕ್ಷಿತ ಸಂದರ್ಭಗಳು. ವಿದ್ಯುತ್ ಸಂಪರ್ಕದ ವೈರುಗಳು ಹಳೆಯದಾದರೆ, ಅವು ಯಾವಾಗಲೋ ಒಮ್ಮೆ ಸುಟ್ಟುಹೋಗಿ, ಕಟ್ಟಡಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ. ಪ್ರಯೋಗಾಲಯದಲ್ಲಿ ಇದ್ದ ಯಾವುದೋ ಆಮ್ಲದ ಬಾಟಲಿಯು ಬಿದ್ದು ಚರ್ಮವೇ ಸುಟ್ಟುಹೋಗುತ್ತದೆ.
ರಸ್ತೆಯಲ್ಲಿ ನಡೆಯುವ ಅಪಘಾತಗಳಿಗೆ ಇನ್ನೊಂದು ಕಾರಣ: ಕಾನೂನಿನ ಉಲ್ಲಂಘನೆ. ವಾಹನ ಚಲಾಯಿಸುವಾಗ ರಸ್ತೆ ನಿಯಮಗಳಿಗೆ ತಕ್ಕಂತೆ ವಾಹನವನ್ನು ಓಡಿಸಬೇಕು. ಆದರೆ ಇಂಥ ನಿಯಮಗಳನ್ನು ಅಲಕ್ಷಿಸಿದ್ದರಿಂದಲೇ ಹೆಚ್ಚಿನ ವಾಹನ ಅಪಘಾತಗಳು ನಡೆದಿವೆ. ವೇಗವಾಗಿ ಚಲಾಯಿಸಿ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆಯುವುದು ಇದಕ್ಕೆ ಒಂದು ಉದಾಹರಣೆ.
ಅಪಘಾತಗಳಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ದೇಹದ ನಿಯಂತ್ರಣ ತಪ್ಪಿರುವುದು: ಹಲವರು ನಿದ್ರೆ, ಮಾನಸಿಕ ಒತ್ತಡ, ಕುಡಿತ – ಈ ಕಾರಣಗಳಿಂದಾಗಿ ಅಜಾಗರೂಕತೆ ತೋರಿ ಅಪಘಾತಕ್ಕೆ ಒಳಗಾಗುತ್ತಾರೆ.
ಅಪಘಾತಗಳ ಪರಿಣಾಮಗಳು
ಅಪಘಾತಗಳಿಂದ ಹಲವು ಪರಿಣಾಮಗಳಾಗುತ್ತವೆ:
೧) ಜೀವಹಾನಿ: ಅಪಘಾತಗಳಲ್ಲಿ ಜನರು ಜೀವ ಕಳೆದುಕೊಳ್ಳುತ್ತಾರೆ. ಇದರಿಂದ ಮೃತ ಕುಟುಂಬಗಳು ಅಪಾರವಾದ ಭಾವನಾತ್ಮಕ ನೋವನ್ನು ಅನುಭವಿಸುತ್ತವೆ. ಅಲ್ಲದೆ ಅಂಥ ಕುಟುಂಬಗಳ ವರಮಾನಕ್ಕೂ ತೊಂದರೆಯಾಗುತ್ತದೆ.
೨) ಅಂಗಾಂಗ ನಷ್ಟ: ಅಪಘಾತಗಳಲ್ಲಿ ಭಾಗಿಯಾದರೂ ಜೀವ ಕಳೆದುಕೊಳ್ಳದವರು ವಿವಿಧ ಅಂಗಾಂಗಗಳನ್ನು ಕಳೆದುಕೊಳ್ಳುತ್ತಾರೆ. ಕೆಲವರಿಗೆ ಬೆನ್ನು ಮೂಳೆಯೇ ಮುರಿದು ಜೀವನಪೂರ್ತಿ ಹಾಸಿಗೆ ಹಿಡಿದರೆ, ಹಲವರು ಕೈ-ಕಾಲು-ಕಣ್ಣು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರ ಮೆದುಳಿನ ಮೇಲೆ ಪೆಟ್ಟು ಬಿದ್ದು ಅವರು ತಮ್ಮ ದೇಹದ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾರೆ.
೩) ವಾಹನಗಳ ನಾಶ: ಇಂದು ಅಪಘಾತಗಳಿಗೆ ತುತ್ತಾಗುವ ವಾಹನಗಳು ಹಾಳಾಗಿಹೋಗುತ್ತವೆ. ಇದರಿಂದಾಗಿ ಕುಟುಂಬಗಳಿಗೆ, ಸಂಸ್ಥೆಗಳಿಗೆ ಅಪಾರ ಹಾನಿಯಾಗುತ್ತದೆ.
೪) ಅಪಘಾತಗಳಿಂದ ಜನರ ಮಾನಸಿಕ ಸ್ಥಿತಿಯ ಮೇಲೆ ದುಷ್ಪರಿಣಾಮವಾಗುತ್ತದೆ. ಹಲವರು ಅಪಘಾತಗಳಿಂದ ಆಘಾತಗೊಂಡು ಜೀವನಪೂರ್ತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ.
ಇತ್ತೀಚೆಗೆ ನಡೆದ ವಿಮಾನ ಅಪಘಾತ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ೮೧೨ರ ದುರಂತ
೨೦೧೦ರ ಮೇ ೨೨ರ ಬೆಳಗ್ಗೆ ೬.೩೦ರ ಹೊತ್ತಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗೆ ಸೇರಿದ ಬೋಯಿಂಗ್ ೭೩೭ ವಿಮಾನವು ದುಬಾಯಿಯಿಂದ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಭೀಕರ ಅಪಘಾತಕ್ಕೆ ಒಳಗಾಯಿತು. ವಿಮಾನವು ಭೂಸ್ಪರ್ಶ ಮಾಡಲು ಬಳಸುವ ಇಳಿಯುವ ಹಾದಿ (ರನ್‌ವೇ)ಯನ್ನು ಮೀರಿ ಪಕ್ಕದ ಕಣಿವೆಗೆ ಬಿದ್ದು ಸುಟ್ಟುಹೋಯಿತು. ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ೧೫೨ ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿಗಳು ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಉಳಿದ ಎಂಟು ಪ್ರಯಾಣಿಕರು ಹಲವು ಗಾಯಗಳೊಂದಿಗೆ ಬದುಕಿ ಉಳಿದರು. ೨೦೧೦ರಲ್ಲಿ ನಡೆದ ಅತಿ ಕೆಟ್ಟ ವಿಮಾನ ಅಪಘಾತ ಇದಾಗಿದೆ.
ಅಪಘಾತದ ವಿವರ: ಬೋಯಿಂಗ್ ಸಂಸ್ಥೆಯು ತಯಾರಿಸಿದ ಈ ವಿಮಾನವು ಹಾರಾಟ ಆರಂಭಿಸಿ ಕೇವಲ ಎರಡೂವರೆ ವರ್ಷಗಳಾಗಿದ್ದವು. ವಿಮಾನದ ಪೈಲಟ್‌ಗಳಿಬ್ಬರೂ ಅಪಾರ ಅನುಭವ ಇರುವ ಸಿಬ್ಬಂದಿಗಳಾಗಿದ್ದರು. ಆದರೂ ಈ ಅಪಘಾತ ನಡೆದೇಹೋಯಿತು.
ಅಪಘಾತದ ಕಾರಣ: ಮಂಗಳೂರು ವಿಮಾನ ನಿಲ್ದಾಣದ ರನ್‌ವೇಯು ದೇಶದ ಕೆಲವೇ ಟೇಬಲ್‌ಟಾಪ್ ರನ್‌ವೇಗಳಲ್ಲಿ ಒಂದಾಗಿದೆ. ಅಂದರೆ ಈ ರನ್‌ವೇಯ ಎರಡೂ ಬದಿಯಲ್ಲಿ ಕಂದಕಗಳಿವೆ. ಅಲ್ಲದೆ ವಿಮಾನವನ್ನು ಹಾರಿಸಲು ಅಥವಾ ಇಳಿಸಲು ಇರುವ ಒಟ್ಟಾರೆ ಮಾರ್ಗದ ಉದ್ದವು ಇತರೆ ವಿಮಾನ ನಿಲ್ದಾಣಗಳಿಗಿಂತ ಕಡಿಮೆಯಾಗಿದೆ. ಆದ್ದರಿಂದ ಇಲ್ಲಿ ವಿಮಾನವು ಏರುವಾಗ ಮತ್ತು ಇಳಿಯುವಾಗ ಅತ್ಯಂತ ನಿಖರವಾಗಿ ಚಲಾಯಿಸಬೇಕಾಗುತ್ತದೆ. ವಿಮಾನವು ಇಳಿಯುವಾಗ ಹಠಾತ್ತನೆ ಕೆಳಗೆ ಬರಬೇಕಾದ್ದರಿಂದ ಮತ್ತು ರನ್‌ವೇಯು ಚಿಕ್ಕದಾಗಿದ್ದರಿಂದ ವಿಮಾನವು ಹೇಗೋ ನಿಯಂತ್ರಣ ತಪ್ಪಿಕೊಂಡು ಕಂದಕಕ್ಕೆ ಉರುಳಿತು ಎಂದು ಅನುಮಾನ ಪಡಲಾಗಿದೆ. ಈ ಕುರಿತ ತನಿಖೆಗಳು ಇನ್ನೂ ಮುಗಿದಿಲ್ಲ.
ವಿಮಾನವು ಹಠಾತ್ತನೆ ರನ್‌ವೇ ಪಕ್ಕದ ಕಂದಕಕ್ಕೆ ಹೊರಳುವಾಗ ಪೈಲಟ್‌ನಿಂದ ಯಾವುದೇ ಸಂಕಷ್ಟದ ಸಂದೇಶವು ಬಂದಿಲ್ಲ. ವಿಮಾನವು ಇಳಿಯುವಾಗ ವಾತಾವರಣವೂ ಚೆನ್ನಾಗಿತ್ತು. ಆದರೂ ಅದು ಪಕ್ಕದ ಮರಳುದಿಣ್ಣೆಯನ್ನು ಹಾದು ಕಂದಕಕ್ಕೆ ಬಿತ್ತು. ಕೂಡಲೇ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು. ಸುತ್ತಮುತ್ತಲಿನ ಹಳ್ಳಿಯ ಜನರು ಕೂಡಲೇ ವಿಮಾನದ ಬಳಿ ಹೋಗಿ ಪ್ರಯಾಣಿಕರನ್ನು ಬದುಕಿಸಲು ಯತ್ನಿಸಿದರು.
ಅಲ್ಲದೆ ಕೂಡಲೇ ಅಪಘಾತದ ಸ್ಥಳಕ್ಕೆ ೧೫ ಅಗ್ನಿಶಾಮಕ ವಾಹನಗಳು, ೨೦ ಅಂಬ್ಯುಲೆನ್ಸ್‌ಗಳು ಸುರಕ್ಷತಾ ಸಿಬ್ಬಂದಿಗಳೊಂದಿಗೆ ಧಾವಿಸಿದವು. ಆದರೆ ಅಷ್ಟುಹೊತ್ತಿಗೆ ಅಪಘಾತದಿಂದ ಜನರು ಜೀವ ಕಳೆದುಕೊಂಡಿದ್ದರು. ಎಂಟು ಜನ ಮಾತ್ರ ಹೇಗೋ ಹಾರಿ ಹೊರಬಂದು ಜೀವ ಉಳಿಸಿಕೊಂಡರು.
ಅಪಘಾತದ ಸ್ಥಳಕ್ಕೆ ಧಾವಿಸಿದ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡ್ಯೂರಪ್ಪ, ಕೇರಳದ ಮುಖ್ಯಮಂತ್ರಿ ಶ್ರೀ ವಿ.ಎಸ್.. ಅಚ್ಯುತಾನಂದನ್ ಮುಂತಾದವರು ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.
ಈ ಅಪಘಾತದ ಪರಿಣಾಮವಾಗಿ ಜೀವವಿಮಾ ಸಂಸ್ಥೆಗಳು ಒಟ್ಟು ೪೦೦ ಕೋಟಿ ರಊ.ಗಳನ್ನು ಪರಿಹಾರವಾಗಿ ನೀಡಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಮೃತರ ಕುಟುಂಬಗಳಿಗೆ ಸರ್ಕಾರವು ತಲಾ ೨ ಲಕ್ಷ ರೂ.ಗಳನ್ನು ನೀಡಿತು; ಗಾಯಗೊಂಡವರಿಗೆ ೫೦ ಸಾವಿರ ರೂ.ಗಳನ್ನು ನೀಡಲಾಯಿತು.
ಈ ವಿಮಾನ ನಿಲ್ದಾಣವು ವಿಮಾನಗಳ ಇಳಿಯುವಿಕೆ/ ಏರುವಿಕೆಗೆ ಸೂಕ್ತವಾಗಿಲ್ಲ, ಅಪಾಯಕಾರಿಯಾಗಿದೆ ಎಂದು ಬೆಂಗಳೂರು ಮೂಲದ ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಎಂಬ ಸೇವಾ ಸಂಸ್ಥೆಯು ನ್ಯಾಯಾಲಯಗಳಲ್ಲಿ ಕೆಲವು ವರ್ಷಗಳ ಹಿಂದೆಯೇ ದಾವೆ ಹೂಡಿತ್ತು. ಮೇ ೨೨ರಂದು ನಡೆದ ಅಪಘಾತದಿಂದ ಈ ಸಂಸ್ಥೆಯ ಊಹೆಯು ನಿಜವಾಗಿದೆ. ಮುಂದಿನ ದಿನಗಳಲ್ಲಾದರೂ ಮಂಗಳೂರು ವಿಮಾನ ನಿಲ್ದಾಣದ ಸ್ಥಳವನ್ನೇ ಬದಲಿಸಬಹುದು ಎಂದು ನಿರೀಕ್ಷಿಸಲಾಗಿದೆ.
Leave a Reply
You must be logged in to post a comment.