ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ವಿಮರ್ಶೆ

ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ ಎಂದು ಭಾವಿಸಿದ್ದೆ ಮತ್ತು ೨೦೦೨ರಲ್ಲಿ ವಿಜಯ ಕರ್ನಾಟಕದಲ್ಲಿ ಇದ್ದಾಗ ಅಂಥದ್ದೊಂದು ಲೇಖನವನ್ನೂ ಪ್ರಕಟಿಸಿದ್ದೆ. ಆದರೆ `ದಿ ಈಮೈಲ್‌ ರೆವೊಲುಶನ್‌: ಅನ್‌ಲೀಶಿಂಗ್‌ ದಿ ಪವರ್‌ ಟು ಕನೆಕ್ಟ್‌’ ಎಂಬ ಪುಸ್ತಕವನ್ನು ಓದಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ.  ಪುಸ್ತಕವನ್ನು ಓದಿದ ಮೇಲೆ ನನ್ನದೇ ಆಳ ಗೂಗಲಿಂಗ್‌ ನಡೆಸಿ, ಅಲ್ಲಲ್ಲಿ ವಿವಿಧ ಆಯಾಮಗಳ ಹೇಳಿಕೆಗಳನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ.

vashiva-06
ಹೌದು! ಈಮೈಲ್‌ ಕಂಡುಹಿಡಿದವರು ಭಾರತ ಮೂಲದ ವಿ ಎ ಶಿವ ಅಯ್ಯದೊರೈ ಎಂದು ನಾನೀಗ ಅತ್ಯಂತ ವಿನೀತನಾಗಿ ಮತ್ತು ಸಹರ್ಷ ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಶಿವ ಅವರ ಭಾರತೀಯತೆಯೊಂದೇ ಕಾರಣವಲ್ಲ; ಅವರು ನೀಡಿದ ವಿವರಣೆಗಳೇ ನನ್ನನ್ನು ಬದಲಿಸಿವೆ.
ಹೊಸ ಕಂಪೆನಿ ಆರಂಭಿಸಿದ ನಾನು ಈಮೈಲ್‌ ಮಾರ್ಕೆಟಿಂಗ್‌ ಕುರಿತು ಭಾರತೀಯನೊಬ್ಬ ಬರೆದ ಪುಸ್ತಕಕ್ಕಾಗಿ ಹುಡುಕಾಟ ನಡೆಸಿದಾಗ ಶಿವ ಬರೆದ ಪುಸ್ತಕ ಸಿಕ್ಕಿತು. ಆದರೆ ಪುಸ್ತಕದಲ್ಲಿ ಈಮೈಲ್‌ ಮಾರ್ಕೆಟಿಂಗ್‌ ಸೂತ್ರಗಳನ್ನು ಬರೆದ ಶಿವ ಅಯ್ಯದೊರೈಯವರೇ ಈಮೈಲನ್ನು ರೂಪಿಸಿದವರು ಎಂಬ ಸತ್ಯವೂ ಗೋಚರವಾಗಿ ನನಗೆ ಜ್ಞಾನೋದಯವೇ ಆದಂತಾಯಿತು. ಕನ್ನಡದ ಐಟಿ ವಿಷಯದ ಲೇಖಕ ಮಿತ್ರರು ಈ ಬಗ್ಗೆ ಚರ್ಚೆ ನಡೆಸಲಿ. ಆದರೆ ನಾನಂತೂ ಶಿವರನ್ನೇ ಸದ್ಯಕ್ಕೆ ಒಪ್ಪುತ್ತೇನೆ (ನನ್ನಂಥ ಯಕಃಶ್ಚಿತ್‌ ಬ್ಲಾಗರ್‌  ಒಪ್ಪಿದರೆಷ್ಟು ಬಿಟ್ಟರೆಷ್ಟು ಹೇಳಿ!)
ಶಿವ ಅಯ್ಯದೊರೈ ಬರೆದ ಈ ಪುಸ್ತಕದಲ್ಲಿ ಮೊದಲು ಈಮೈಲಿನ ಇತಿಹಾಸವಿದೆ; ಅದಕ್ಕೇ ಹೊಂದಿಕೊಂಡಂತೆ ಶಿವ ಅಯ್ಯದೊರೈಯವರ ಆತ್ಮಕಥೆಯೂ ಇದೆ. ೧೪ರ ಹರೆಯದ ಶಿವ ಅಯ್ಯದೊರೈಯವರು ಬೇಸಗೆ ಕಾರ್ಯಕ್ರಮದಲ್ಲಿ   ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಕೌರಾಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥೆಮ್ಯಾಟಿಕಲ್‌ ಸೈನ್ಸಸ್‌ನಲ್ಲಿ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಲಿಯುತ್ತಾರೆ. ಆಮೇಲೆ ಪ್ರೌಢಶಾಲಾ ಕಲಿಕೆಯ ಸಮಯದಲ್ಲಿ ನ್ಯೂಜೆರ್ಸಿಯ ಯೂನಿವರ್ಸಿಟಿ ಆಫ್‌ ಮೆಡಿಸಿನ್‌ ಎಂಡ್‌ ಡೆಂಟಿಸ್ಟ್ರಿಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅಲ್ಲೇ ಅವರು ಲೆಸ್ಲೀ ಮೈಕೇಲ್‌ಸನ್‌ ಸೂಚನೆಯಂತೆ ಸಂಸ್ಥೆಯ ಪತ್ರವ್ಯವಹಾರವನ್ನು ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಮಾಡುವ ವ್ಯವಸ್ಥೆಯನ್ನು ಸಂಶೋಧಿಸುತ್ತಾರೆ. ೧೯೭೮ರಲ್ಲಿ, ಅಂದರೆ ೧೪ರ ಹರೆಯದಲ್ಲೇ ಈಮೈಲ್‌ನ್ನು ಪೂರ್ಣಪ್ರಮಾಣದಲ್ಲಿ ರೂಪಿಸಿದ ಕೀರ್ತಿ ಶಿವರಿಗೇ ಸಲ್ಲುತ್ತದೆ. ಇನ್‌ಬಾಕ್ಸ್‌, ಸಿಸಿ, ಬಿಸಿಸಿ, ಅಟ್ಯಾಚ್‌ಮೆಂಟ್‌, ಸಿಗ್ನೇಚರ್‌, – ಇತ್ಯಾದಿಯಾಗಿ ಕಾಗದದ ಪತ್ರವ್ಯವಹಾರದಲ್ಲಿ ಬಳಸುವ ಎಲ್ಲ ಪ್ರಕ್ರಿಯೆಗಳನ್ನೂ ಅವರೇ ವಿದ್ಯುನ್ಮಾನಕ್ಕೆ ಒಳಪಡಿಸಿದ್ದು ಎಂಬುದನ್ನು ಈ ಪುಸ್ತಕ ಓದಿ ಖಚಿತಪಡಿಸಿಕೊಳ್ಳಬಹುದು. ಏಕೆಂದರೆ ಇಲ್ಲಿ ಶಿವ ಹೇಳುವ ಮಾತುಗಳಿಗೆ ದಾಖಲೆಗಳಿವೆ.
vashiva-dna-newspaper
೧೯೭೭ರಲ್ಲಿ ಅಮೆರಿಕಾದ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಕೇವಲ ಸಂಗೀತ ಮತ್ತು ಸಾಹಿತ್ಯವನ್ನು ಮಾತ್ರ ನೋಂದಾಯಿಸಬಹುದಿತ್ತು. ಆದ್ದರಿಂದ ಶಿವರಿಗೆ ಈಮೈಲ್‌ ಕುರಿತ ಪೇಟೆಂಟ್‌ ಸಿಕ್ಕಿದ್ದು ೧೯೮೨ರಲ್ಲಿ. EMAIL ಎಂದು ದೊಡ್ಡ ಅಕ್ಷರಗಳಲ್ಲಿ (ಕ್ಯಾಪಿಟಲ್‌ ಲೆಟರ್‌)  ಹಕ್ಕುಪತ್ರ ಪಡೆದಿದ್ದನ್ನೂ ಈ ಪುಸ್ತಕದಲ್ಲಿ ನೋಡಬಹುದು. `ಟೈಮ್‌’ ಮ್ಯಾಗಜಿನ್‌ನ ಮುಖಪುಟ ವರದಿಯಲ್ಲೇ ಶಿವ ಅವರ ಸಂಶೋಧನೆಗೆ ಮನ್ನಣೆ ಸಿಕ್ಕಿದೆ ಎಂಬುದೇ ಸಮಾಧಾನದ ಸಂಗತಿ. ದೀಪಕ್‌ ಛೋಪ್ರಾ ಮತ್ತು ನೋಮ್‌ ಚೋಮ್ಸ್ಕಿ – ಕೂಡಾ ಶಿವರನ್ನು ಬೆಂಬಲಿಸಿದ್ದಾರೆ.
ಈ ಮೈಲ್‌ನ್ನು ರೂಪಿಸಿದ ಶಿವ ಮುಂದೆ ಇಕೋಮೈಲ್ ಎಂಬ ಈ ಮೈಲ್ ರವಾನಿಸುವ ಮತ್ತು ವಿಭಾಗಶಃ ಸ್ವೀಕರಿಸಿ ವಿಂಗಡಿಸಿ ಸ್ವಯಂಚಾಲಿತವಾಗಿ, ವೈಯಕ್ತಿಕವಾಗಿ ಉತ್ತರಿಸುವ ತಂತ್ರಾಂಶವನ್ನೂ ರೂಪಿಸಿದರು. ಈ ಮೂಲಕ ಅವರು ಬರುವ ಸಾವಿರಾರು ಮೈಲ್‌ಗಳನ್ನು ವಿಂಗಡಿಸಿ, ಓದಿ, ಅವುಗಳಲ್ಲಿ ಇರುವ ಸಾರಾಂಶವನ್ನು ವರ್ಗೀಕರಿಸಿ ಪಟ್ಟಿ ಮಾಡುವ ವ್ಯವಸ್ಥೆಯನ್ನು ಆರಂಭಿಸಿದ ಮೊದಲಿಗರಾದರು. ಬಿಲ್‌ ಕ್ಲಿಂಟನ್‌ ನೀಡಿದ ಆಹ್ವಾನದಲ್ಲಿ ವಿವಿಧ ಸಂಸ್ಥೆಗಳ ಸವಾಲನ್ನೂ ಸೋಲಿಸಿ  ಶ್ವೇತಭವನದ ಪತ್ರಗಳ ಉಸ್ತುವಾರಿಯ ಗುತ್ತಿಗೆ ಪಡೆದವರೂ ಶಿವ ಅಯ್ಯದೊರೈ. ಮುಂದೆ ಹಲವು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಗೆ, ಅಮೆರಿಕಾದ ಅಂಚೆ ಇಲಾಖೆಗೆ ಸಲಹೆ ನೀಡಿದ ಶಿವ ಈಗ ೫೧ರ ಹರೆಯದಲ್ಲಿ ಇನ್ನಷ್ಟು ಉತ್ಸಾಹದ ಚಿಲುಮೆಯಾಗಿದ್ದಾರೆ.
vashiva-the-email-revolution-cover
ಈ ಮಧ್ಯೆ ಅವರನ್ನು ಭಾರತ ಸರ್ಕಾರವು (ಡಾ|| ಮನಮೋಹನಸಿಂಗ್‌ ರ ಯುಪಿಎ ೨)  ಕರೆಸಿಕೊಂಡು  ಸಂಶೋಧನಾ ರಂಗದ ಪ್ರಗತಿ ಸಾಧ್ಯತೆ ಕುರಿತು ಅಧ್ಯಯನ ಮಾಡಿಸಿದ್ದು, ಶಿವ ಅವರು ವಸ್ತುನಿಷ್ಠವಾಗಿ ಭಾರತದ ಸಂಶೋಧನಾ ರಂಗ ಏಕೆ ಹಿನ್ನಡೆ ಕಾಣುತ್ತಿದೆ ಎಂದು ವರದಿ ಬರೆದಾಗ ಸಿಎಸ್‌ಐಆರ್‌ನ ಹಲವರ ಕುತಂತ್ರದಿಂದ  ದೇಶವನ್ನೇ ಬಿಟ್ಟು ಓಡಿಹೋಗಬೇಕಾಗಿದ್ದು, ಈಮೈಲ್‌ ವಿರೋಧಿ ಬಣಗಳು ಅಮೆರಿಕಾದಲ್ಲಿ ಕಾಟ ಕೊಟ್ಟಿದ್ದು, ಈಗಲೂ ಹಲವು ಪ್ರತಿಷ್ಠಿತ ಸಂಸ್ಥೆಗಳು, ವ್ಯಕ್ತಿಗಳು ಶಿವರಿಗೆ ಸೂಕ್ತ ಮನ್ನಣೆ ನೀಡಲು ನಿರಾಕರಿಸುತ್ತಿರುವುದು – ಹೀಗೆ ಹಲವು ರೋಚಕ ಮತ್ತು ಒಳನೋಟ ಬೀರುವ ಘಟನೆಗಳನ್ನು ಶಿವ ಯಾವ ಭಾವತೀವ್ರತೆಯನ್ನೂ ಪ್ರಕಟಿಸದೆ ದಾಖಲಿಸಿದ್ದಾರೆ.
ಶಿವ ಕುರಿತು ಭಾರತದ ಹಲವು ಪತ್ರಿಕೆಗಳು ಬರೆದಿವೆ; ಆದರೆ ಅವರಿಗೆ ಸಿಗಬಹುದಾಗಿದ್ದ ಗೌರವ ಮತ್ತು ಅವರಿಂದ ಭಾರತಕ್ಕೆ ಸಿಗಬಹುದಾಗಿದ್ದ ಬೆಂಬಲ ಸಿಕ್ಕಿಲ್ಲ ಎಂದು ನನಗೆ ಅನ್ನಿಸುತ್ತದೆ.  ಭಾರತದ ಪಾರಂಪರಿಕ ವೈದ್ಯಪದ್ಧತಿಯನ್ನೂ ಆಳವಾಗಿ ಅಧ್ಯಯನ ಮಾಡಿರುವ ಶಿವ ಯಾವುದೇ ಸಮಾಜದ ಒಳ್ಳೆಯ ಆಸ್ತಿ.
ನೀವು ವಿಕಿಪೀಡಿಯಾದಲ್ಲಿ ಶಿವ ಅಯ್ಯದೊರೈ ಕುರಿತ ಪುಟವನ್ನು ನೋಡಿದರೆ ಅವರ ವಾದವನ್ನು ವಿರೋಧಿಸುವ ಸಾಕಷ್ಟು ಅಂಶಗಳು ಕಾಣುತ್ತವೆ. ಆದರೆ ಈಮೈಲ್‌ನ ಖಚಿತ ಚಹರೆಯನ್ನು ಮತ್ತು ಅದರ ಎಲ್ಲ ಸಾಧ್ಯತೆಗಳನ್ನೂ ಪಟ್ಟಿ ಮಾಡಿ ಜಾರಿಗೆ ತಂದವರು ಶಿವ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ವಿಕಿಪೀಡಿಯಾದಲ್ಲಿ ಕೊಟ್ಟ ಎಲ್ಲ ಪ್ರತಿಪಾದನೆಗಳಿಗೂ ಶಿವ ತಮ್ಮ ಪುಸ್ತಕದಲ್ಲಿ ಖಚಿತ ಉತ್ತರಗಳನ್ನೂ ನೀಡಿದ್ದಾರೆ. ಅವರಿಗಿಂತ ಹಿಂದೆ ಕಂಪ್ಯೂಟರ್‌ಗಳ ನಡುವೆ ಸಂದೇಶ ಕಳಿಸುವ ವ್ಯವಸ್ಥೆ ಇತ್ತೇ ಹೊರತು ಈಗಿನ ಈಮೈಲ್‌ ಇರಲಿಲ್ಲ. ಇಷ್ಟಕ್ಕೂ, ಇಂಥ ಈಮೈಲ್‌ ವ್ಯವಸ್ಥೆ ಮೊದಲೇ ಇದ್ದಿದ್ದೇ ಆದರೆ, ಶಿವ ಅವರಿಗೆ ಆ  ಯುಎಂಡಿಎನ್‌ಜೆ ಸಂಸ್ಥೆಯು ಮತ್ತೊಮ್ಮೆ ಸಂಶೋಧನೆ ನಡೆಸಲು ಕೇಳುವುದಾದರೂ ಹೇಗೆ ಸಾಧ್ಯವಿತ್ತು? ಜಗತ್ತಿನಲ್ಲೇ ಕ್ರಾಂತಿ ಉಂಟು ಮಾಡಿದ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಸಂಶೋಧನಾ ಪ್ರಬಂಧ ಬರೆಯಲು ಶಿವ ಏನು ಪೆದ್ದರೆ?
vashiva-first-us-copyright-for-email-1
vashiva-first-us-copyright-for-email-2
ಈ ಪುಸ್ತಕದಲ್ಲಿ ಈಮೈಲ್‌ ಮಾರುಕಟ್ಟೆ, ಈಮೈಲ್‌ನ ಪ್ರಯೋಜನಗಳನ್ನೂ ಶಿವ ಅತ್ಯಂತ ಪ್ರಭಾವಿ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಈಮೈಲ್‌ ಕುರಿತು ಅವರು ನೀಡುವ ಕಿವಿಮಾತುಗಳು ಮತ್ತು ಘೋಷವಾಕ್ಯಗಳು ಈಗಲೂ ಪ್ರಸ್ತುತ. ಅವರ ಪುಸ್ತಕವನ್ನು ಓದಿದ ಮೇಲೆ ಈಮೈಲ್‌ ಕುರಿತು ಹೆಚ್ಚಿನ ಗೌರವ ಮೂಡುತ್ತದೆ. `ಫೇಸ್‌ಬುಕ್‌’ ಹೇಗೆ ಈಮೈಲನ್ನು ಬದಿಗೆ ಸರಿಸಿದೆ ಎಂಬ ದುಃಖದ ಕಥೆಯೂ ಇಲ್ಲಿದೆ.
೨೦೧೪ರ ಮೇ ೧೬ರ ನಂತರ ಬರುವ ಹೊಸ ಕೇಂದ್ರ ಸರ್ಕಾರವು ಶಿವ ಅಯ್ಯದೊರೈಯವರ ಸೇವೆಯನ್ನು ಪಡೆದರೆ ಒಳ್ಳೆಯದೇನೋ ಎಂದು ನನಗನ್ನಿಸುತ್ತದೆ. ಶಿವರಂಥ ಪ್ರತಿಭೆಗಳನ್ನು ಭಾರತದ ಏಳಿಗೆಗಾಗಿ ಬಳಸಬೇಕು. ಅವರ ಅಗತ್ಯ ಅಮೆರಿಕಾಗಿಂತ ಭಾರತಕ್ಕೇ ಇದೆ.
ಈ ಪುಸ್ತಕ ಓದಿದ ಮೇಲೆ ನನಗೆ ಈಮೈಲ್‌ ಕಥೆ, ಅದರ ಬಳಕೆಯ ಸಾಧ್ಯತೆಗಳು, ಚಿಕ್ಕ ಉದ್ಯಮದಲ್ಲಿ ಅದನ್ನು ಸಮರ್ಥವಾಗಿ ಬಳಸುವ ಬಗೆ – ಎಲ್ಲದರ ಬಗ್ಗೆ ಹೊಸಬೆಳಕು ಮೂಡಿತು.
ಅವರ ವೆಬ್‌ಸೈಟ್‌: http://vashiva.com/

Leave a Reply

Theme by Anders Norén