ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ

ಉಮೇಶ ಅಲ್ಲಿ ಟರಂ ಟರಂ ತಮಟೆ ಬಾರಿಸುತ್ತಿದ್ದ.

ಉಮೇಶ, ಅತಿಥಿಗೃಹದಲ್ಲಿ ನಮ್ಮ ಊಟಕ್ಕೆ ಎಲ್ಲ ವ್ಯವಸ್ಥೆ ಮಾಡಿದ್ದ.

ಉಮೇಶ, ಯಾವಾಗ ಯಾವ ಹಳ್ಳಿಗೆ ಹೋಗಬೇಕು ಎಂದು ಮೊದಲೇ ಪಟ್ಟಿ ಮಾಡಿದ್ದ.

ಉಮೇಶ, ನನಗಾಗಿ ಹಾಡಿದ. ಕತ್ತಲೇ ತುಂಬಿಕೊಂಡಿದ್ದ ಆ ಕೋಣೆಯಲ್ಲಿ ಅವನ ಹಾಡು ನನ್ನೆದೆಯನ್ನು ತುಂಬಿತ್ತು.

ಉಮೇಶ ಪ್ಲಾಸ್ಟಿಕ್ ಕವರನ್ನು ನನ್ನ ಬಾಚಣಿಗೆಗೆ ಸುತ್ತಿ ತಮಿಳು ಹಾಡನ್ನು ಮೀಟಿದ.

 

ಒಂದು ತಿಂಗಳು ಕಳೆದ ಮೇಲೆಯೂ ನನಗೆ ಉಮೇಶನದೇ ನೆನಪು. ಅವನು ಕೆಲಸ ಮಾಡುತ್ತಿರುವ ಸಂಘಟನೆಯ ಮುಖ್ಯಸ್ಥ ಕಿರಣ್ ಕಮಲ್ ಪ್ರಸಾದರೇ ನನ್ನ – ಉಮೇಶನ ಪರಿಚಯಕ್ಕೆ ಕಾರಣ. ಆದರೆ ಈಗ ಮತ್ತೆ ಮತ್ತೆ ಉಮೇಶನದೇ ನೆನಪಾಗುತ್ತಿದೆ.

ಏಪ್ರಿಲ್ ಮೊದಲ ವಾರ ನಾನು ಕಿರಣ್ ಕಮಲ್ ಪ್ರಸಾದರ ಜೀವಿಕ ಸಂಸ್ಥೆಯ ಬಗ್ಗೆ ಅಮೆರಿಕಾದ ಫ್ರೀ ದಿ ಸ್ಲೇವ್ಸ್ ಸಂಘಟನೆಯು ಡಾಕ್ಯುಮೆಂಟರಿ ತಯಾರಿಸಲೆಂದು ಬಂದಾಗ ಅವರೊಂದಿಗೆ ಹೆಗ್ಗಡದೇವನಕೋಟೆಗೆ ಹೋಗಿದ್ದೆ. ಒಂಥರ ದುಬಾಷಿಯಾಗಿ ಹೋಗಿದ್ದ ನನಗೆ ನನ್ನ ವೃತ್ತಿಯ ಕೆಲಸಗಳಿಗಿಂತ ಉಮೇಶನೇ ದೊಡ್ಡವನು ಎಂದೆನಿಸಿತು.

ಬೆಂಗಳೂರಿನ ನಾಗರಭಾವಿ ರಸ್ತೆಯಲ್ಲಿರುವ ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಸ್ಥೆಯ ಕಚೇರಿಗೆ ಪೂರ್ವಭಾವಿ ಚರ್ಚೆಗೆ ಹೋದಾಗ ಅಲ್ಲಿ ಉಮೇಶ ಇದ್ದ. ನನ್ನ ಭೇಟಿಯಾದ ಕೂಡಲೇ ಬರ್‍ತೀನಿ ಸರ್ ಎಂದು ಹೊರಟೇ ಹೋದ. ಜೀವಿಕ ಸಂಸ್ಥೆಯ ಕಾರ್ಯಕರ್ತ ಎಂದಷ್ಟೆ ತಿಳಿದು ಸುಮ್ಮನಿದ್ದೆ.

ಹೆಗ್ಗಡದೇವನಕೋಟೆಗೆ ಹೋದಾಗ ಉಮೇಶನ ನಿಜ ಪರಿಚಯವಾಯಿತು. ಉಮೇಶ ಮೈರಡಾ ಸಂಸ್ಥೆಯ ಎಫ್ ಸಿ ವಿದ್ಯಾರ್ಥಿ ( ಅಂದರೆ ಫಂಡೆಡ್ ಕ್ಯಾಂಡಿಡೇಟ್ ಇರಬಹುದು ಎಂದು ಅಂದುಕೊಂಡಿದ್ದೇನೆ). ಈಗ, ಹದಿನೈದು ವರ್ಷಗಳಿಂದ ಆತ ಜೀವಿಕ ಸಂಸ್ಥೆಯ ಮುಖ್ಯ ಕಾರ್ಯಕರ್ತ. ಜೀವಿಕ ಸಂಸ್ಥೆ ಎಂದರೆ? ಅದು ಜೀತ ಸಮಸ್ಯೆಯ ನಿವಾರಣೆಗಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ. ಅದರ ಮುಖ್ಯಸ್ಥರು ಕಿರಣ್ ಕಮಲ್ ಪ್ರಸಾದ್. ಅವರು ಮೂಲತಃ ದಕ್ಷಿಣ ಕನ್ನಡದವರು. ಒಂದೊಮ್ಮೆ ಉತ್ತರ ಕನ್ನಡದ ಸಿದ್ದಿ ಸಮುದಾಯದ ನಡುವೆಯೇ ಬದುಕಿ ಅವರ ಇತಿಹಾಸದ ಅಧ್ಯಯನ ನಡೆಸಿ ಸಂಶೋಧನಾ ಪುಸ್ತಕ ಬರೆದವರು. ಕ್ರೈಸ್ತ ಮತ ಪ್ರಚಾರದ ವ್ಯಕ್ತಿಯಾಗಿದ್ದ ಅವರೀಗ ಒಂದು ರೀತಿಯಲ್ಲಿ ಮುಕ್ತರು. ಸಾಂಸ್ಥಿಕ ಮತೀಯ ಚಟುವಟಿಕೆಗಳಲ್ಲಿ ನಂಬಿಕೆ ಕಳೆದುಕೊಂಡ ಅವರು ತಮ್ಮ ವೈಯಕ್ತಿಕ ಆಸಕ್ತಿಯ ಹಿನ್ನೆಲೆಯಲ್ಲಿ ಜೀತ ಸಮಸ್ಯೆಯನ್ನು ಎತ್ತಿಕೊಂಡು ಕಳೆದ ಸುಮಾರು ಇಪ್ಪತ್ತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯಕ್ಷೇತ್ರಗಳಲ್ಲಿ ಹೆಗ್ಗಡದೇವನಕೋಟೆಯೂ ಒಂದು. ಹೀಗಾಗಿ ಉಮೇಶನೂ ಬೆಳಕಿಗೆ ಬಂದಿದ್ದು. ಈಗ ಉಮೇಶ ತಾನಿರುವ ಪ್ರದೇಶದಲ್ಲಿ ಜನಪ್ರಿಯ ಮತ್ತು ಪ್ರಭಾವಶಾಲಿ ಯುವ ನಾಯಕನಾದರೂ ಜೀವಿಕ ಬಿಟ್ಟಿರಲಾರ.

ಉಮೇಶನಿಗೆ ಏನು ಬರುತ್ತೆ, ಏನು ಬರುವುದಿಲ್ಲ? ಉಮೇಶ ಬೀದಿ ನಾಟಕವನ್ನು ಬರೆದು ನಿರ್ದೇಶಿಸಬಲ್ಲ; ಅದರಲ್ಲಿ ಪಾತ್ರ ವಹಿಸಿ ತಮಟೆ ಬಾರಿಸಬಲ್ಲ. ಉಮೇಶನ ಕಂಠ ಜಾನಪದೀಯ ಸತ್ವದ್ದು. ನೆಲದ ನೋವಿನಿಂದ ಮೊಳೆತದ್ದು. ಆದ್ದರಿಂದ ಆತನ ಕಂಠದಲ್ಲಿ ಮೂಡುವ ಹಾಡುಗಳಿಗೆ ಭಾವವಿರುತ್ತೆ; ಎದೆ ತುಂಬಿ ಹಾಡುವ ಉಮೇಶ ಮತ್ತು ಅವನ ಸಹ ಕಾರ್ಯಕರ್ತರು ಹಾಡಿರುವ ಜೀತ ಸಮಸ್ಯೆ ಕುರಿತ ಹಾಡುಗಳ ಕ್ಯಾಸೆಟ್ ಕೂಡಾ ಬಂದಿದೆ. ಉಮೇಶ ಸಂಗೀತ ಸಂಯೋಜನೆ ಮಾಡಬಲ್ಲ; ಯಾವುದೇ ಹಾಡು ಕೇಳಿದರೂ ಅದಕ್ಕೆ ತಕ್ಷಣವೇ ಟ್ಯೂನ್ ಮಾಡಬಲ್ಲ. ಯಾವ ಹಾಡು ಯಾವ ಇನ್ನೊಂದು ಹಾಡಿನ ಥರ ಇದೆ ಎಂದು ಥಟ್ಟನೆ ಗುರುತಿಸಬಲ್ಲ.

ಅವನೇ ಸ್ವತಃ ಹಾಡು ಬರೆದು, ಸಂಗೀತ ಸಂಯೋಜಿಸಿ ಹಾಡಬಲ್ಲ. ಈ ಹಾಡು ಕೇಳಿ:

[podcast]http://mitramadhyama.riverthoughts.com/wp-content/uploads/2010/05/Track06.mp3[/podcast]

ಉಮೇಶನ ಇನ್ನೊಂದು ವಿಶೇಷ ಅಂದ್ರೆ, ನಾವು ಎಸೆಯುವ ಪ್ಲಾಸ್ಟಿಕ್ ಕವರ್‌ನಲ್ಲಿ ಒಂದು ಬಾಚಣಿಗೆಯನ್ನು ಸುತ್ತಿ ಅದನ್ನು ಮೌತ್ ಆರ್ಗನ್ ಥರ ಹಿಡಿದು ಭಾವಪೂರ್ಣವಾಗಿ ಬಾರಿಸಬಲ್ಲ. ಕೊಂಚ ನಗು ಬರುವ ಧ್ವನಿ ಇರುವ ಈ ವಿಶೇಷ ವಾದ್ಯದಲ್ಲಿ ಉಮೇಶ ಮಂದ್ರದಿಂದ ತಾರಸಪ್ತಕದವರೆಗೆ ಲೀಲಾಜಾಲವಾಗಿ ಹಾಡಬಲ್ಲ.

ಉಮೇಶ ಹಾಡಿದ ಜೀತ ವಿಮುಕ್ತಿ ಹಾಡನ್ನು ಇಲ್ಲಿ ಕೇಳಿ. ಇದನ್ನು ಪ್ರಕಟಿಸಿದವರು ಜೀವಿಕ ಸಂಸ್ಥೆ.

ಉಮೇಶ ನನಗಾಗಿ ಹಾಡಿದ ಬಾಚಣಿಗೆ ಸಂಗೀತವನ್ನು ಇಲ್ಲಿ ಕೇಳಿ.

ಆ ರಾತ್ರಿ ಉಮೇಶ ನನಗಾಗಿ ಹಾಡಿದ ಹಾಡನ್ನು ಇಲ್ಲಿ ಕೇಳಿ.

ಮೈರಡಾ ಸಂಸ್ಥೆಯ ಆ ಅತಿಥಿಗೃಹದಲ್ಲಿ ನಾವಿದ್ದ ಆ ರಾತ್ರಿ ಕರೆಂಟು ಹೋಗಿತ್ತು. ಉಮೇಶ ನನ್ನೆದುರು ಕೂತು ಸುಶ್ರಾವ್ಯವಾಗಿ `ಓ ನನ್ನ ಚೇತನಾ’ ಹಾಡೂ ಸೇರಿದಂತೆ ನಾಲ್ಕಾರು ಹಾಡುಗಳನ್ನು ಹೇಳಿದ. ಕತ್ತಲೇ ತುಂಬಿದ್ದ ಆ ವಾತಾವರಣದಲ್ಲಿ ನನ್ನ ಎದೆಯೊಳಗೆ ಏನೋ ಬೆಳಕು ಹರಿದಂತಾಯಿತು.

ಒಂದು: ನಾವು ಬರೆಯುವ ಹಾಡು ಜನರನ್ನು ತಲುಪದಿದ್ದರೆ, ಅದು ಎಂಥ ಕಾವ್ಯವಾಗಿದ್ದರೂ ವ್ಯರ್ಥ.

ಎರಡು: ನಗರಗಳಲ್ಲಿ ಚಾನ್ಸ್ ದಕ್ಕಿಸಿಕೊಂಡು ಹಾಡುವ ಪ್ರತಿಭೆಗಳಿಗಿಂತ, ಹಳ್ಳಿಗಳಲ್ಲಿ ನ್ಯಾಯಕ್ಕಾಗಿ ಹೋರಾಡುವುದಕ್ಕೆಂದೇ ಭಾವ ಸ್ಫುರಣವಾಗುವಂತೆ ಹಾಡುವವರೇ ನಿಜವಾದ ಹಾಡುಗಾರರು.

ಮೂರು: ಕರ್ನಾಟಕದಲ್ಲಿ, ಮತ್ತು ದೇಶದ ಇತರೆ ಭಾಗಗಳಲ್ಲಿ ಜೀತದ ಸಮಸ್ಯೆ ಇನ್ನೂ ಇದೆ. ಜೀವಂತವಾಗಿದೆ. ಹಲವು ಜೀತದಾಳುಗಳನ್ನು ಕಣ್ಣಾರೆ ಕಂಡು, ಜೀತವಿಮುಕ್ತರನ್ನೂ ಮಾತನಾಡಿಸಿ ಬರೆಯುತ್ತಿರುವೆ.

ಉಮೇಶನೊಬ್ಬನೇ ಅಲ್ಲ; ರಾಮಸ್ವಾಮಿಯಿಂದ ಹಿಡಿದು ಶಿವಣ್ಣನವರೆಗೆ, ಚಿನ್ನಮ್ಮನವರೆಗೆ ಎಷ್ಟೋ ಜನ ಜೀತ ಸಮಸ್ಯೆಯ ಬಗ್ಗೆ ಹೋರಾಡುತ್ತಿದ್ದಾರೆ. ಅವರಿಗೆಲ್ಲ ಈ ಶಕ್ತಿ ತುಂಬಿದ ಕಿರಣ್ ಕಮಲ್ ಪ್ರಸಾದ್ ಬಗ್ಗೆ ಏನು ಹೇಳಲಿ?

ಕಿರಣ್ ಮನೆಯೂ ಜೀವಿಕ ಕಚೇರಿಯ ಮೇಲೇ ಇದೆ. ಕಂಡಲ್ಲೆಲ್ಲ ಪುಸ್ತಕಗಳ ರಾಶಿ. ಅದೆಲ್ಲವನ್ನೂ ಅವರು ಓದಿದ್ದಾರೆ. ಕಮ್ಯುನಿಸಂನಿಂದ ಹಿಡಿದು ಝೆನ್‌ವರೆಗೆ ಅವರಿಗೆ ಗೊತ್ತಿಲ್ಲದ ಸಂಗತಿಯಿಲ್ಲ.  ಹೆಗ್ಗಡದೇವನಕೋಟೆ ಪ್ರವಾಸದ ಸಂದರ್ಭದಲ್ಲಿ ಮುಂಜಾನೆ ಎದ್ದು ಯೋಗಾಭ್ಯಾಸ ಮಾಡಿ, ವಿಪಶ್ಶನ ಕ್ರಿಯೆ ಮಾಡುವ ಕಿರಣ್ ನೋಡಲಿಕ್ಕೆ ತಣ್ಣನೆಯ, ಮೃದು ವ್ಯಕ್ತಿತ್ವ. ಅವರೊಳಗೆ ಜೀತ ಸಮಸ್ಯೆಯ ಬಗ್ಗೆ ಇರುವ ಬೆಂಕಿಯಂಥ ಆಕ್ರೋಶ ಮಾತ್ರ ಅದಮ್ಯ. ಆ ಬಗ್ಗೆ ಸದ್ಯವೇ ಇನ್ನೊಂದು ಬ್ಲಾಗ್ ಬರೆಯುವೆ.

ನಮ್ಮ ಪ್ರವಾಸದಲ್ಲಿ ಹೆಚ್ಚಾಗಿ ನನ್ನ ಜೊತೆಗೇ ಪಯಣಿಸಿದ ಉಮೇಶ ನನ್ನ ಮೇಲೆ ಗಾಢ ಪರಿಣಾಮ ಬೀರಿದ್ದಾನೆ. ಅವನ ಹಾಡುಗಳನ್ನು ನನ್ನೊಳಗೆ ಈಗಲೂ ರಿಂಗಣಿಸುತ್ತಿವೆ.

Leave a Reply

Theme by Anders Norén