ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

Uncategorized

`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ

ಉಳಿದವರು ಕಂಡಂತೆ ಎಂಬ ಸಿನೆಮಾ ಬಂದಿದೆ, ಚೆನ್ನಾಗಿದೆಯಂತೆ ಎಂದು ಮನೆಗೆ ಬಂದ ಪತ್ರಕರ್ತ, `ಸಾಂಗತ್ಯ’ದ ಸಂಪಾದಕ ಅರವಿಂದ ನಾವಡರು ಹೇಳಿದಾಗ ಹೌದೆ ಎಂದು ನನ್ನ ಮಗನನ್ನು ಕೇಳಿದೆ. `ನಾನು ಕಾಮಾಖ್ಯದಲ್ಲಿ ನೋಡಿದೆ. ಚೆನ್ನಾಗಿದೆ. ನೀನೂ ನೋಡು’ ಎನ್ನಬೇಕೆ? ಎಲಾ ಇವನ, ಕನ್ನಡ ಸಿನೆಮಾ ಎಂದರೆ ಮೂಗು ಮುರೀತಿದ್ದವನಿಗೆ ಇದು ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ. ಆದರೆ ಈ ಹಿಂದೆ `ಲೂಸಿಯಾ’ ಸಿನೆಮಾವನ್ನೂ ಅವನೇ ಮೊದಲು ನೋಡಿ ನನಗೆ ಒತ್ತಾಯಿಸಿದ್ದು ನೆನಪಾಯಿತು. ಲೂಸಿಯಾ ನಿರ್ದೇಶಕ ಪವನ್‌ ಕುಮಾರರೇ ನನ್ನ ಮಗನನ್ನು ಮಹಾ ಅಭಿಮಾನಿ ಎಂದು ಫೇಸ್‌ಬುಕ್ಕಿನಲ್ಲಿ ಕೊಂಡಾಡಿದ್ದನ್ನೂ ನಾನು ಓದಿದ್ದೆ. ಆದ್ದರಿಂದ `ಉಳಿದವರು ಕಂಡಂತೆ’ ನೋಡುವಾ ಎಂದು ತೀರ್ಮಾನಿಸಿ ನಿನ್ನೆ ನೋಡಿದೆ. ರಾತ್ರಿಯೇ ಸಿನೆಮಾದ ಬಗ್ಗೆ  ಗೂಗಲ್‌ ಮಾಡಿದೆ. ಕನ್ನಡ ಪತ್ರಿಕೆಗಳಲ್ಲಿ (ಉದಯವಾಣಿ ಹೊರತುಪಡಿಸಿ) ಈ ಸಿನೆಮಾದ ಬಗ್ಗೆ ವಿಮರ್ಶಕರೆಲ್ಲ ಟೀಕೆ ಮಾಡಿದ ಬಗ್ಗೆಯೂ ಶ್ರೀವತ್ಸ ಜೋಶಿಯವರು ಬರೆದಿದ್ದನ್ನು ಓದಿದೆ. ಆ ವಿಮರ್ಶೆಗಳಲ್ಲಿ ಕೆಲವನ್ನು ಓದಿದೆ. ಕೆಲವು ಬ್ಲಾಗಿಗರು ಬರೆದ ಕನ್ನಡದ ಮತ್ತು ಇಂಗ್ಲಿಶಿನ ವಿಮರ್ಶೆಗಳನ್ನೂ ಗಮನಿಸಿದೆ. ಸಿನೆಮಾದ ಯಜಮಾನ ರಕ್ಷಿತ್‌  ಶೆಟ್ಟಿಯವರ ಫೇಸ್‌ಬುಕ್ಕನ್ನೂ ಎಡತಾಕಿದೆ. 

UlidavaruKandanthe-Poster7

ಕನ್ನಡದಲ್ಲಿ ಬಂದ ಟೊರಾಂಟಿನೋ ಮಾದರಿಯ ಅತ್ಯುತ್ತಮ ಪ್ರಯತ್ನ ಮತ್ತು ಅತ್ಯಂತ ಕಾವ್ಯಮಯವಾಗಿ ಮೂಡಿಬಂದ  ಸಿನೆಮಾ ಇದು ಎಂದು ನಾನು ಖಚಿತವಾಗಿ ಹೇಳುತ್ತೇನೆ. ಇಂದಿನ ಸಂಗೀತಮಯ ವಿಡಿಯೋಗಳನ್ನು ನೋಡಿದವರು, ಹೊಸಕಾಲದ ಸಂಗೀತವನ್ನು ಕೇಳಿದವರು (ಟ್ಯೂನ್‌ ಇನ್‌ ಗೊತ್ತಿದೆ ತಾನೆ?), ಟೊರಾಂಟಿನೋ ಸಿನೆಮಾಗಳನ್ನು, `ನಿಯೋ ನೋಯಿರ್‌’ ಕಥನಗಳನ್ನು ವೀಕ್ಷಿಸಿದವರು, `ಡಾರ್ಕ್‌ ಹ್ಯೂಮರ್‌’ನ್ನು   ಕಂಡವರು, ನವೀನ ಥ್ರಿಲ್ಲರ್‌ಗಳನ್ನು ಗಮನಿಸಿದವರು – ಇಂಥವರು ಯಾರೂ ಈ ಸಿನೆಮಾವನ್ನು ಟೀಕಿಸಲು ಕಷ್ಟಸಾಧ್ಯ. ಹಾಲಿವುಡ್‌ನ ಸಾಧ್ಯತೆಗಳನ್ನು ನಾಟಿ ಮೀನಿನ ವಾಸನೆಯ ಮೂಲಕ ಸಾಧಿಸಿದ ರಕ್ಷಿತ್‌ ಶೆಟ್ಟಿ ಅಭಿನಂದನಾರ್ಹರು. ಇಂಥ ಚುರುಕಿನ ಯುವಕ ಮುಂದೆ ಇನ್ನೂ ಹಲವು ಭರ್ಜರಿ ಸಿನೆಮಾಗಳನ್ನು ಕೊಡುತ್ತಾರೆ ಎಂಬ ವಿಶ್ವಾಸ ನನಗೆ ಈ ಹೊತ್ತಿನಲ್ಲಿ ಮೂಡಿದೆ.

ಈ ಸಿನೆಮಾದಲ್ಲಿ ಸಂಭಾಷಣೆ ಎಲ್ಲಿ ಶುರುವಾಗಬೇಕು, ಶಬ್ದದ ಲಯ ಎಲ್ಲೆಲ್ಲಿ ಮೂಡಿ ಮರೆಯಾಗಬೇಕು, ಎಲ್ಲಿ ಬೈಕಿನ ಗುಡುಗುಡು ಬರಬೇಕು, ಎಲ್ಲಿ ಹಾಡು ಹಾಡಾಗಿ ಮೂಡಬೇಕು, ಮತ್ತೆ ಎಲ್ಲಿ ಹಾಡುಗಳ ನಡುವೆಯೇ ಘಟನೆಗಳು ನಡೆಯಬೇಕು, ನೈಜ ಶಬ್ದಗಳ ಬದಲಿಗೆ ಹಾಡೇ ಹೇಗೆ ಕಥೆಯನ್ನು ಕಟ್ಟಬೇಕು, ಎಲ್ಲಿ ಬಣ್ಣಗಳನ್ನು ಎರಚಬೇಕು, ಎಲ್ಲಿ ಶಾಟ್‌ಗಳನ್ನು ಕಚಕ್‌ ಎಂದು ಕತ್ತರಿಸಿ ಮತ್ತೆಲ್ಲೋ ಜೋಡಿಸಿ ಸೂಪರ್‌ ಇಂಪೋಸ್‌ ಮಾಡಬೇಕು, ಅಥವಾ ಜಕ್ಸ್‌ಟಾಪೋಸ್‌ ಮಾಡಬೇಕು, ಎಲ್ಲಿ ಭಾವುಕತೆ, ಎಲ್ಲಿ ನಗು, ಎಲ್ಲಿ ರಮ್ಯತೆ, ಎಲ್ಲಿ ನಸುನಗು ಹುಟ್ಟಿ,  ಎಲ್ಲಿ ಬಾಗಿಲು ತಟ್ಟಬೇಕು –  ಈ ಪ್ರತಿಯೊಂದನ್ನೂ ಅಕ್ಷರಶಃ ಗಮನಿಸಿಯೇ ರೂಪಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೊದಲ ದೃಶ್ಯದಲ್ಲಿಯೇ ದೋಣಿ ರಿಪೇರಿಯ ಸದ್ದಿನ ಲಯದ ಫೇಡ್‌ ಔಟ್‌ ಆಗುತ್ತಲೇ ರಿಚಿಯ ಸ್ಲೋಗನ್‌ ಖಚಿತವಾಗುವುದು ಒಂದು ಪುಟ್ಟ ನಿದರ್ಶನ.

ಇಡೀ ಸಿನೆಮಾದಲ್ಲಿ ಹೊಳೆಯಾಗಿ ಹರಿದಿರುವ ಹಾಡುಗಳಲ್ಲಿ ಹೊಸತನ ಮತ್ತು ಮೆದುವಾದ ಲಯ ಇದೆ. ಅಬ್ಬರದ ಕ್ರೈಮ್‌ ಘಟಿಸುವಾಗ ಢಂಗಣಕ್ಕ ಕೂಡಾ ಕೇಳುತ್ತದೆ. ಹುಲಿವೇಷವು ಇಡೀ ಸಿನೆಮಾದ ಹಲವು ಮನುಷ್ಯರ ಕ್ರೌರ್ಯದ ಮುಖವಾಡಕ್ಕೆ ಸಾಕ್ಷಿಯಾಗುತ್ತದೆ. ಹುಲಿಯಂತೆ ಕುಣಿಯುವವರು ನಾಯಿಯಂತೆ ಬೊಗಳಲೂ ಆಗದ ಅಸಹಾಯಕರು. ಹುಲಿವೇಷ ಹಾಕದವರೇ ಇಲ್ಲಿ ಹುಲಿಗಿಂತ ಕ್ರೂರಿಗಳು; ನರಹಂತಕರು. (ರಕ್ಷಿತ್‌ ಶೆಟ್ಟಿ ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೋ, ಅಥವಾ ಸಿನೆಮಾ ಆದಮೇಲೆ ನನಗೆ ಮಾತ್ರ ಹೀಗೆ ಅನ್ನಿಸಿತೋ?).

ನಿಜ, ರಿಮ್ಯಾಂಡ್‌ ಹೋಮ್‌ನ ನರಕಸದೃಶ ಬದುಕಿನಿಂದಲೇ ರಿಚಿ ಸೇಡುಗಾರನಾದ. ಸಿನೆಮಾಗೆ ಬೇಕಾದ ಕಥೆ, ಕಾರಣ ಎಲ್ಲವೂ ಇದರಲ್ಲೇ ಇದೆ. ಇದು ಸಿನೆಮಾದಲ್ಲಿ ಒಂದೇ ಸೂತ್ರವಾಗಿ ಕಥೆ ಹರಿಯಬೇಕು ಎಂಬ ಸಂಪ್ರದಾಯವಾದಿಗಳಿಗೆ ಮಾತ್ರ. ಆದರೆ ಸಿನೆಮಾ ಕೊನೆಗೆ ಏನೇನು ಕಟ್ಟಿಕೊಡುತ್ತದೆ, ಎಂಥ ವಿಸ್ಮಯವನ್ನು ಒಡ್ಡುತ್ತದೆ, ಎದೆಯೊಳಗಿನ ಯಾವ ರಮ್ಯಭಾವನೆಗಳನ್ನು, ಪ್ರೀತಿಯನ್ನು, ದ್ವೇಷವನ್ನು, ಅಭಿಮಾನವನ್ನು, ಮುಗ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಯಸುವ ನನ್ನಂಥ ಬಡಪಾಯಿಗಳಿಗೆ  ಬೇಕಾಗಿರುವುದು ಬೇರೆಯೇ. ನಾಟಕಗಳಲ್ಲಿ ಹಠಾತ್ತಾಗಿ ಬಿ. ಜಯಶ್ರೀ ಹಾಡು ಶುರುವಾದರೆ ಇಡೀ ವೇದಿಕೆಯೇ ಕಳೆಗಟ್ಟುವ ಹಾಗೆ ಎನರ್ಜಿ ತುಂಬಿರುವ ಹಾಡುಗಳಿಂದ ಈ ಸಿನೆಮಾ ನಮ್ಮನ್ನು ಜಗ್ಗುತ್ತದೆ. ರಮ್ಯತೆ, ನಾಟಕೀಯತೆಯ ನಡುವೆಯೇ ರೌದ್ರವೂ ಮನೆಮಾಡುತ್ತದೆ; ಇಲ್ಲಿ ಕಥೆಗಿಂತ ಕಥೆ ಹೇಳುವ ರೀತಿಯೇ ಒಂದು ಕಾವ್ಯವಾಗಿದೆ. ಸರಳ ರೇಖೆಯಲ್ಲಿ ಹರಿಯದೆ ಮತ್ತೆ ಮತ್ತೆ ನಿರೂಪಣೆ ರಿಪೀಟ್‌ ಆಗಿದೆ ಎಂಬ ವಿಮರ್ಶೆಯನ್ನು ಓದಿ ನನಗೆ ದಿಗಿಲಾಗಿದೆ. ಅವರೇನಾದರೂ `ರನ್‌ ಲೋಲಾ ರನ್‌’ ಸಿನೆಮಾ ನೋಡಿದ್ದರೆ ಒಂದೇ ಕಥೆಯನ್ನು ಮೂರು ಸಲ ಮನಸ್ಸಿಗೆ ತೋಚಿದ ಹಾಗೆ ರೂಪಿಸಿದ್ದಾರೆ ಎಂದು ಬದಿಗೆ ಸರಿಸುವುದು ಖಂಡಿತ. ರಿಪೀಟ್‌ ಸೂತ್ರವನ್ನು `೧೨ ಮಂಕೀಸ್‌’ನಲ್ಲೂ, `ದಿ ಕಾನ್ವರ್ಸೇಶನ್‌’ ಸಿನೆಮಾದಲ್ಲೂ ನೀವು ಅನುಭವಿಸಿಯೇ ಇದ್ದೀರಿ ಅಲ್ಲವೆ?

ಈ ಸಿನೆಮಾದಲ್ಲಿ ದೃಶ್ಯಸಂಯೋಜನೆಯ ಮಾಟದ ಹಾಗೆಯೇ ನನ್ನನ್ನು ಸೆಳೆದಿದ್ದು ಸಂಗೀತದ ಉನ್ಮಾದ. ಕೆಲವೊಮ್ಮೆ ಹಾಲಿವುಡ್‌ ಸಿನೆಮಾ ನೋಡುತ್ತಿದ್ದೇವೆಯೋ ಎಂಬಂತೆ ಉಸುರಿದರೂ, ಒಟ್ಟಾರೆಯಾಗಿ ಮಲ್ಪೆಯ ಪಿಸುಮಾತುಗಳನ್ನು, ನಗು,ಅಳು, ರೋಷ, ತಮಾಷೆ, ಎಲ್ಲವನ್ನೂ ಸಂಗೀತ ನೀಡುತ್ತದೆ. ಕ್ಯಾಮೆರಾ ವೈಫಲ್ಯ? ನನಗಂತೂ ಗೊತ್ತಾಗಲಿಲ್ಲ. ಹಸಿಮೀನಿನ, ಮೀನಿನ ಸಾರಿನ ವಾಸನೆ ಮೂಗಿಗೆ ಬಡಿಯುವಂತೆ ಹಲವು ಕ್ಲೋಸ್‌ಅಪ್‌ಗಳನ್ನು ನೋಡಿದೆ.

ಇನ್ನೊಂದು ಗಮನಾರ್ಹ ವಿಷಯ ಎಂದರೆ, ನಾಯಕನಷ್ಟೇ ಉಳಿದ ಪಾತ್ರಗಳಿಗೂ ಜೀವ ಇರುವುದು ಮತ್ತು ಅವರೆಲ್ಲರೂ ಅತ್ಯಂತ ಕಾಳಜಿ ವಹಿಸಿ ನಟಿಸಿರುವುದು. ತಾಯಿ ತಾರಾ ಮತ್ತು ಮಗನ ಭೇಟಿಯ ಸನ್ನಿವೇಶ ಕೊಂಚ ಉದ್ದ ಆಯಿತು ಎನ್ನಿಸಿದರೂ, ಆ ಕ್ಷಣದ ಮಹತ್ವಕ್ಕೆ ಕೊರತೆ ತರಬಾರದು ಎಂಬ ಆಶಯ ಇತ್ತೇನೋ ಬಿಡಿ.

`ಲೂಸಿಯಾ’ಗಿಂತ ಸಂಕೀರ್ಣ ಪ್ಲಾಟ್‌, ಸಂಕೀರ್ಣ ಜೋಡಣೆ, ರಿಯಲಿಸ್ಟಿ‌ಕ್‌ ಸನ್ನಿವೇಶಗಳಲ್ಲೇ ಫ್ಯಾಂಟಸಿ ತೋರಿಸಿದ ಈ ಸಿನೆಮಾದಲ್ಲಿ ನಿರೂಪಣೆಯೇ ಇಲ್ಲದಿದ್ದರೂ ಕಥೆಗೆ, ದೃಶ್ಯಗಳ ಓಘಕ್ಕೆ,  ಅವೆಲ್ಲವೂ ಮನಸ್ಸಿನೊಳಗೆ ಕಟ್ಟುವ ದೃಶ್ಯಗಳಿಗೆ ಏನೂ ಕುಂದಾಗುತ್ತಿರಲಿಲ್ಲ. ಹೆಚ್ಚೆಂದರೆ ಸಿದ್ಧಸೂತ್ರವನ್ನು ಮುರಿದ ಇನ್ನೊಂದು ಹೆಜ್ಜೆ ಆಗುತ್ತಿತ್ತು. ರಕ್ಷಿತ್‌ ಕೆಲವೊಮ್ಮೆ ಸುರಕ್ಷಿತ್‌ ಆಗುತ್ತಾರೆ ಎನ್ನುವುದಕ್ಕೆ ಇದೂ ಸಾಕ್ಷಿ!

ಇಂಥಪ್ಪ ಮಾದರಿಯ ಕನ್ನಡ ಸಿನೆಮಾಗಳನ್ನು ನಾವು ಸಮುದ್ರದ ದಡದಲ್ಲಿ ಬೀಸಿಬರುವ ಗಾಳಿಯಷ್ಟೇ ತೆರೆದ ಮನಸ್ಸಿನಿಂದ ಸ್ವಾಗತಿಸಬೇಕಿದೆ. ಇವತ್ತು ಭಾಷೆ, ಸಂಸ್ಕೃತಿಯ ರಕ್ಷಣೆಯ ಬಗ್ಗೆ, ಆಧುನಿಕತೆಯ ಬಗ್ಗೆ, ಪ್ರಯೋಗಶೀಲತೆಯ ಬಗ್ಗೆ ಮತ್ತು ಶಿಸ್ತಿನ ನಿರ್ಮಾಣದ ಬಗ್ಗೆ ಮಾತನಾಡುವುದೇ ಆದರೆ, `ಉಳಿದವರು ಕಂಡಂತೆ’ ಸಿನೆಮಾ ಒಂದು ವೃತ್ತಿಪರ, ದಕ್ಷ ಮತ್ತು ಸಮಾಜದ, ಸನ್ನಿವೇಶದ ಹೊಣೆಯರಿತ ನಿರ್ಮಾಣ. ಸಿನೆಮಾದಲ್ಲಿ ಕುಡಿತ, ಸ್ಮೋಕಿಂಗ್‌ ಎಲ್ಲ ಅತಿಯಾಯ್ತು ಎಂದು ಬೇಸರಿಸಿದರೆ, ಕ್ಷಮಿಸಿ, ಈ ಸಿನೆಮಾದಲ್ಲಿ ಈ ಯಾವುದನ್ನೂ (ಬಾಟಲಿ ಮತ್ತು ಸಿಗರೇಟು) ವಾಸ್ತವತೆಗಿಂತ ಅತಿಯಾಗಿ ಬಿಂಬಿಸಿಲ್ಲ. ಇಂಥ ವ್ಯಕ್ತಿಗಳೇ ಸಂಚರಿಸುವ  ಭೂಗತ ಸಮಾಜಕ್ಕೆ ಕನ್ನಡಿ ಹಿಡಿದರೆ  ಬೇರೆ ಏನು ಸಿಗಬೇಕು ಹೇಳಿ?

ಕೆಲವು ಕತ್ತರಿಸಿದ ಪದಗಳನ್ನು ಬಳಸುವ ಮುನ್ನವೇ ರಕ್ಷಿತ್‌ ಯೋಚಿಸಿದ್ದರೆ ಅಲ್ಲಿ ಉಂಟಾದ ಜೆರ್ಕ್‌‌ಗಳನ್ನು ಅವಾಯ್ಡ್‌ ಮಾಡಬಹುದಾಗಿತ್ತು. ಸೆನ್ಸಾರ್‌ ಮಂಡಳಿಯಲ್ಲಿ ಎರಡು ವರ್ಷ ಡಜನ್‌ಗಟ್ಟಳೆ ಕನ್ನಡ ಸಿನೆಮಾಗಳನ್ನು ನೋಡಿದ ಅನುಭವದ ಹಿನ್ನೆಲೆಯಲ್ಲಿ ಈ ಸಲಹೆ. ಏಕೆಂದರೆ ಸೆನ್ಸಾರ್‌ ಮಂಡಳಿಯು ಸಮಾಜದ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ. (ಆಫ್‌ ಕೋರ್ಸ್‌ ಅದು ಐಡಿಯಲ್‌ ಉದ್ದೇಶ ಬಿಡಿ).

ರಕ್ಷಿತ್‌ ಶೆಟ್ಟಿಗೆ ನನ್ನ ತುಂಬು ಮನಸ್ಸಿನ ಅಭಿನಂದನೆಗಳು ಮತ್ತು ಶುಭಾಶಯಗಳು.  ನಾನ್‌ ಲೀನಿಯರ್‌ ನಿರೂಪಣೆಗೆ ಜಯವಾಗಲಿ!

(ಸಿನೆಮಾದ `ಕಥೆ’ ಏನು, ಅದರಲ್ಲಿ ಹೀರೋ ಯಾರು, ವಿಲನ್‌ ಯಾರು ಎಂಬಿತ್ಯಾದಿ ಮಾರ್ಜಿನಲ್‌ ಸಂಗತಿಗಳನ್ನು ನೀವು ಸಿನೆಮಾ ನೋಡಿ, ಇತರೆ ವಿಮರ್ಶೆಗಳನ್ನು ಓದಿ ತಿಳಿದುಕೊಳ್ಳಬಹುದು)

Leave a Reply

Theme by Anders Norén