ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ ಸೀಮೆನ್ಸ್ ಎಸ್ ೬ ಎಂಬ ಇಟ್ಟಿಗೆ ಗಾತ್ರದ ಮೊಬೈಲ್ ಪಡೆದು ಎಲ್ಲೆಲ್ಲಿಗೋ ಮಾತನಾಡುತ್ತಿದ್ದ. ಅವತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಚುನಾವಣೆ ನಡೆಯುವುದಿತ್ತು. ಕೊನೆಗೆ ಎಲ್ಲವೂ ಸಮಾಧಾನದಿಂದಲೇ ಮುಗಿಯಿತು. ಎಚ್. ಕೆ. ಪಾಟೀಲರ ಮುಕ್ತ ಆಹ್ವಾನ ಅವನಿಗೆ ಬಂದಿತ್ತು. ಮಂಡಳಿಯ ಒಬ್ಬ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ.

ಇವತ್ತು ಅದೇ ಮೆಟ್ಟಿಲುಗಳ ಮೇಲೆ ನಾನು ನಿಂತಿದ್ದೆ. ಮೇಲೆ ಬೇಸಗೆ ಮಳೆಯ ಕಾರ್ಮೋಡಗಳು ರಾಚಿದ್ದವು. ಜನವೋ ಜನ. ಹಲವರು ತಮ್ಮ ಹೈಟೆಕ್ ಮೊಬೈಲ್ ಕಿವಿಗೆ ಹಚ್ಚಿಕೊಂಡು `ಮಸ್ಕಿ ಸೋತ್ನಪಾ’ ಎಂದು ಮಾತಾಡಿಕೊಳ್ಳುತ್ತಿದ್ದರು. ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆಯೇ ಎನ್ನುವಂತೆ ಬ್ಲಾಕ್‌ಬೆರ್ರಿ ಮೊಬೈಲ್ ಇಟ್ಟುಕೊಂಡಿದ್ದ ಮಸ್ಕಿ ಅಲ್ಲಿ ಕಾಣಸಿಗಲಿಲ್ಲ.

ಫಲಿತಾಂಶ ಮಾತ್ರ ನೀಲಾಕಾಶದಂತೆ ನಿಚ್ಚಳವಾಗಿತ್ತು. ಎಚ್. ಕೆ. ಪಾಟೀಲರು ಮತ್ತು ಅವರ ತಂಡದ ಎಲ್ಲ ಸದಸ್ಯರು ಫೆಡರೇಶನ್ನಿನ ನಿರ್ದೇಶಕ ಮಂಡಳಿಗೆ ಮಸ್ಕಿಯ ರಾಜಕೀಯ ಪ್ರೇರಿತ ಚುನಾವಣೆಯ ನಡುವೆಯೂ ಗೆದ್ದಿದ್ದರು. ರಾಜ್ಯ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಹೆಸರು ಬಳಸಲಾಗದ ಯಾವುದೋ ಒತ್ತಡಕ್ಕೆ ತುತ್ತಾಗಿದ್ದಂತಿದ್ದ ಮಸ್ಕಿಯು ಸಹಕಾರ ಭಾರತಿ ಎಂಬ ಸಂಘಪರಿವಾರದ ಸಹಕಾರ ಕ್ಷೇತ್ರದ ಸಂಘಟನೆಯ ಬ್ಯಾನರ್ ಸಿಗಿಸಿಕೊಂಡು ಚುನಾವಣೆಗೆ ತನ್ನದೇ ಪ್ಯಾನೆಲ್‌ನ್ನು ನಿಲ್ಲಿಸಿದ್ದ; ತಾನೂ ನಿಂತಿದ್ದ. ಈಗಾತ ವಿಧಾನಪರಿಷತ್ ಸದಸ್ಯ ಕೂಡಾ. ಸಹಕಾರ ರಂಗಕ್ಕಾಗಿ ರಾಜಕೀಯಕ್ಕೆ ಬಂದೆ ಎಂದು ಪ್ರಚಾರ ಗಿಟ್ಟಿಸಿಕೊಂಡ ಮಸ್ಕಿಗೆ ಫಲಿತಾಂಶ ಹೀಗೆ ರಾಚುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲವೇನೋ….

ಅದಕ್ಕೇ ಇರಬೇಕು, ನನ್ನ ಮತ್ತು ಅನೂಪ ದೇಶಪಾಂಡೆಯ ವಿರುದ್ಧ ಕಾನೂ ಕ್ರಮ ಕೈಗೊಳ್ಳುವುದಾಗಿ (ಅವನು ನಮ್ಮನ್ನು ಸ್ನೇಹಿತರು ಎಂದು ಕರಪತ್ರದಲ್ಲಿ ಕರೆದಿದ್ದರಿಂದ ನಾವೇ ಆ ಸ್ನೇಹಿತರು ಎಂದು ಭಾವಿಸಿದ್ದೇವೆ; ವಾಸ್ತವದಲ್ಲಿ ಆತ ನಮಗೆ ಈಗಂತೂ ಯಾವ ಸ್ನೇಹಿತನೂ ಅಲ್ಲ; ನಮ್ಮ ಕಣ್ಣಿನಲ್ಲಿ ಆತ ಸಹಕಾರಿ ರಂಗದಲ್ಲಿ ಕಳಂಕಿತ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿ) ಪ್ರಕಟಿಸಿ, ನಮಗೆ ಸದ್ಬುದ್ಧಿ ಬರಲಿ ಎಂದು ಹಾರೈಸಿದ್ದಾನೆ. `ನಿಂದಕರಿರಬೇಕು’ ಎಂದು ಸ್ವಾಗತಿಸಿದ್ದಾನೆ; ಈಗ ಚುನಾವಣೆಯಲ್ಲಿ ತಾನೇ ಸ್ವತಃ ಗತಿಸಿದ್ದಾನೆ! ಯಾಕೆಂದರೆ ಬಹುತೇಕ ಮತದಾರರು ಅವನಿಗೆ ಮತ ನೀಡದೆಯೇ ಸ್ಪಂದಿಸಿದ್ದಾರೆ.

ಒಂದು ಫ್ಲಾಶ್ ಬ್ಯಾಕ್

ನಿಮಗೆ ಇನ್ನೊಂದು ಫ್ಲಾಶ್‌ಬ್ಯಾಕ್ ಹೇಳಲೇಬೇಕು: ಮಸ್ಕಿಯೇ ನನ್ನ ಆದರ್ಶ ವ್ಯಕ್ತಿ ಎಂದು ನಾನು ಭ್ರಮೆಯಲ್ಲಿ ಇದ್ದ ದಿನಗಳಲ್ಲಿ ನಾನು ಮೂರೂವರೆ ವರ್ಷಗಳ ಕಾಲ ಅರ್ಬನ್ ಬ್ಯಾಂಕ್ ಫೆಡರೇಶನ್‌ಗೆ ಮಾಧ್ಯಮ ಸಲಹೆಗಾರನಾಗಿದ್ದೆ. ಮಸ್ಕಿಯನ್ನು ಎಚ್. ಕೆ. ಪಾಟೀಲರು ನಿರ್ದೇಶಕ ಮಂಡಳಿಗೆ ಕರೆದುಕೊಂಡಾಗಿನಿಂದಲೂ ನಾನು ಪಾಟೀಲರನ್ನು ನೋಡುತ್ತ ಬಂದವ. ೨೦೦೬ರಲ್ಲಿ ಮಸ್ಕಿಯು ಎಂ ಎಲ್ ಸಿ ಆದಾಗ, ಅವನ ವರ್ತನೆಗಳೂ ಬದಲಾದಾಗ (ಅಥವಾ ಅವನ ನಿಜ ವರ್ತನೆಯು ನನಗೆ ಆಗ ಗೊತ್ತಾದಾಗ) ನಾನು ಫೆಡರೇಶನ್ ಕೆಲಸ ಬಿಟ್ಟೆ. ಈ ದಿನಗಳಲ್ಲಿ ನನಗೆ ಪಾಟೀಲರ ವೈಯಕ್ತಿಕ ಪರಿಚಯ ಆಯಿತು. ಅವರು ನನ್ನನ್ನು ನೋಡಿದ ಪರಿ, ನನಗೆ ಕೊಟ್ಟ ಗೌರವ ನನ್ನನ್ನು ಅಚ್ಚರಿಗೆ ಕೆಡವಿತು. ಇದೆಲ್ಲವೂ ರಾಜಕಾರಣಿಗಳ ಎಂದಿನ ನಾಟಕ ಎಂದೇ ನಾನು ಹಲವಾರು ತಿಂಗಳುಗಳ ಕಾಲ ಭಾವಿಸಿದ್ದೆ. ಆದರೆ ಪಾಟೀಲರು ಅದನ್ನು ಹುಸಿಗೊಳಿಸಿದರು. ಅವರ ಸಚಿವಖಾತೆ ಬದಲಾದಾಗ ನನ್ನನ್ನೂ ಖುದ್ದು ಕರೆಸಿಕೊಂಡು, ಉಳಿದೆಲ್ಲ ಆಪ್ತರೊಂದಿಗೆ ಚರ್ಚಿಸಿದಂತೆ ನನ್ನಲ್ಲೂ ಚರ್ಚಿಸಿದರು; ನನ್ನ ಅಭಿಪ್ರಾಯಗಳನ್ನು ಆಲಿಸಿದರು. ಇಂಥ ಘಟನೆಗಳು ಹಲವು ಬಾರಿ ಮರುಕಳಿಸಿದವು. ಅವರ ಬಗೆಗೆ ನನ್ನ ಅಭಿಪ್ರಾಯಗಳು ಕ್ರಮೇಣವಾಗಿ ಬದಲಾದವು. ಮಸ್ಕಿಯಿಂದ ಪರಿಚಯವಾದರೂ ನನಗೆ ಕೊಟ್ಟ ಪ್ರತ್ಯೇಕ ಸ್ನೇಹಿತನ ಸ್ಥಾನವೇ ನನ್ನ ಬದಲಾವಣೆಗಳಿಗೆ ಕಾರಣ.

ಇದಕ್ಕೆ ಇನ್ನೊಂದು ನೆಗಟಿವ್ ಕಾರಣವೂ ಇದೆ. ಬಿಜೆಪಿಯ ಹಲವು ನಾಯಕರಿಗೆ ನಾನು ಗೊತ್ತು. ಒಂದಾನೊಂದು ಕಾಲದಲ್ಲಿ ನಾವೆಲ್ಲರೂ ಒಟ್ಟಿಗೆ ಕೂತು ಚಾ ಕುಡಿದವರೇ; ಚಿತ್ರಾನ್ನವನ್ನು ಹಂಚಿಕೊಂಡವರೇ. ಆದರೆ ಅವರಾರೂ ನನಗೆ ಎಂದೂ ಈವರೆಗೂ ಅವರಾಗೇ ಕರೆದು ಕೇಳುವ ಅಭ್ಯಾಸ ಇಟ್ಟುಕೊಂಡಿಲ್ಲ; ಬಹುಶಃ ಈ ವರ್ತನೆಯೂ ಪಾಟೀಲರ ಬಗೆಗಿನ ನನ್ನ ಪ್ರೀತಿ ಹೆಚ್ಚುವುದಕ್ಕೆ ನೆಗಟಿವ್ ಆಗಿ ಕಾರಣವಾಗಿರಬಹುದು!

ಇವತ್ತು ಚುನಾವಣೆಯ ವಿಷಯಕ್ಕೇ ಬರುವುದಾದರೆ, ೨೦೦೮ರ ಸೆಪ್ಟೆಂಬರ್ ೩೦ರಂದು ಮನೋಹರ ಮಸ್ಕಿಯು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಎಂಬ ರಾಜ್ಯಮಟ್ಟದ ಶೃಂಗ ಸಂಸ್ಥೆಯ ಅಧ್ಯಕ್ಷಸ್ಥಾನದ ಚ್ಯುತಿಗೆ ಕಾರಣವಾಗಿದ್ದು ಸಹಕಾರ ಭಾರತಿ ಎಂಬ ಸಂಘಟನೆಯೇ. ಈಗ ಸಹಕಾರ ಭಾರತಿಯ ಹೆಸರಿನಲ್ಲೇ ಈತ ಸ್ಪರ್ಧೆಗೆ, ಅದರಲ್ಲೂ ತನ್ನನ್ನು `ಚೆಡ್ಡಿ ಸಹಕಾರಿ ಧುರೀಣ’ ಎಂದು ಗೊತ್ತಿದ್ದೂ ಅಕಾಮಡೇಟ್ ಮಾಡಿದ ಎಚ್ ಕೆ ಪಾಟೀಲರ ವಿರುದ್ಧ ತನ್ನದೇ ಪ್ಯಾನೆಲ್ ಕಟ್ಟಿಕೊಂಡು ಸ್ಪರ್ಧಿಸುತ್ತಾನೆ ಎಂದರೆ?

ಪಾಟೀಲ್ ನಾಮಪತ್ರವೇ ತಿರಸ್ಕೃತ!

ಈ ಮಧ್ಯೆ ಎಚ್ ಕೆ ಪಾಟೀಲರ ನಾಮಪತ್ರವನ್ನೇ ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು. ಕೊನೆಗೆ ಪಾಟೀಲರು ಹೈಕೋರ್ಟಿಗೆ ಹೋಗಿ (ಅಂತಿಮ ತೀರ್ಪಿಗೆ ಒಳಪಟ್ಟಂತೆ) ನಾಮಪತ್ರವನ್ನು ಸೇರಿಸಿಕೊಳ್ಳುವಂತೆ ಚುನಾವಣಾಧಿಕಾರಿಗೆ ಆದೇಶಿಸುವ ತೀರ್ಪನ್ನು ಪಡೆದರು ಎನ್ನುವುದು ಇನ್ನೊಂದು ಮುಖ್ಯ ಘಟನೆ.
ಇದಲ್ಲದೆ, ಮನೋಹರ ಮಸ್ಕಿಯು ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷಸ್ಥಾನದಿಂದ ಇಳಿಯಲು ಕಾರಣವಾದ ಇನ್ನೊಂದು ದಾಖಲೆಯೆಂದರೆ ನಾನು ಸಂಘಟನೆಯ ಕೆಲವು ಹಿರಿಯರಿಗೆ ಸಲ್ಲಿಸಿದ್ದ ಸುಮಾರು ನೂರು ಪುಟಗಳ ದಾಖಲೆ. ಈ ದಾಖಲೆಯಲ್ಲಿ ಏನಿತ್ತು, ಅದನ್ನು ಯಾರಿಗೆ ಸಲ್ಲಿಸಲಾಯಿತು ಎಂದು ಮಸ್ಕಿ ಈಗಲೂ ಪ್ರಶ್ನಿಸುತ್ತಿರುತ್ತಾನೆ ಬಿಡಿ!

೮೦ ಲಕ್ಷ ರೂ. ದುರ್ಬಳಕೆಯ ಹಗರಣ

ಮುಖ್ಯವಾಗಿ ಈ ದಾಖಲೆಗಳಲ್ಲಿ ಇದ್ದ ಒಂದು ಪ್ರಕರಣವೆಂದರೆ ೮೦ ಲಕ್ಷ ರೂ.ಗಳ ಸಹಕಾರಿ ಹಣ ದುರ್ಬಳಕೆಯ ಹಗರಣ. ಇದನ್ನು ನೀವು ಈ ಬ್ಲಾಗಿನಲ್ಲಿ ವಿವರವಾಗಿ ಓದಿ.  

ನನ್ನ – ಅನೂಪ ದೇಶಪಾಂಡೆಯ ಪತ್ರ ಮತ್ತು ರವಿ-ಲೋಕೇಶ್‌ರ ಸ್ಪಷ್ಟೀಕರಣದ ಪತ್ರಗಳು ಎಲ್ಲ ಮತದಾರರಿಗೆ ತಲುಪಿದವು. ಈ ಮತದಾರರೇನೂ ಸಾಮಾನ್ಯರಲ್ಲ; ಎಲ್ಲರೂ ಒಂದೊಂದು ಅರ್ಬನ್ ಬ್ಯಾಂಕನ್ನು ಪ್ರತಿನಿಧಿಸುವವರು. ಅವರಿಗೆ ನಾವು ಕಾನೂನು ತಿಳಿವಳಿಕೆಯನ್ನೇನೂ ಕೊಡಬೇಕಿಲ್ಲ; ಎಲ್ಲರೂ ಪ್ರಜ್ಞಾವಂತರೇ.

ಪಾಟೀಲರ ಪಕ್ಷರಾಜಕೀಯ ರಹಿತ ಸಹಕಾರ ತತ್ವದ ಪ್ರಮುಖ ತಳಹದಿ, ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಕ್ರಮಗಳು – ನ್ಯಾಯಾಲಯದಿಂದ ಅವುಗಳಿಗೆ ವಿರಾಮ ಸಿಕ್ಕಿದ್ದು, ಮಸ್ಕಿಯು ರಾಜಕೀಯವನ್ನು ತುರುಕಲು ಯತ್ನಿಸಿ ಹಿಂದೆಂದೂ ಕಂಡುಬಾರದ ತ್ವೇಷದ ವಾತಾವರಣಕ್ಕೆ ಕಾರಣವಾಗಿದ್ದು, – ಕೊನೆಯಲ್ಲಿ ನಮ್ಮ ಹೇಳಿಕೆಗಳು – ಎಲ್ಲವೂ ಸೇರಿ ಮಸ್ಕಿಯ ಸ್ಕೀಮುಗಳನ್ನು ಉಲ್ಟಾ ಪಲ್ಟಾ ಮಾಡಿದವು. ಬೆಳಗ್ಗೆ ಮಿಂಚುತ್ತಿದ್ದ ಅವನ ಟೆಂಟು ಸಂಜೆಯಾಗುವುದರಲ್ಲಿ ಕಿತ್ತುಹೋಗಿತ್ತು. `ಸಾರಿ, ನಾವು ಸೋತೆವು; ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಡೆಯಲಿಲ್ಲ’ ಎಂದು ವಿಷಾದನೀಯ ಎಸ್ ಎಂ ಎಸ್ ಕಳಿಸಿ ಜಾಗ ಖಾಲಿ ಮಾಡಿದ ಮಸ್ಕಿ.

ನಮ್ಮ ಮೇಲೆ ಕಾನೂನು ಕ್ರಮ ಸ್ವಾಗತಾರ್ಹ

ಆದರೆ ನಮ್ಮ ಹೇಳಿಕೆಗಳಿಂದ ಅಪ್ರತಿಭನಾದ ಮಸ್ಕಿಯು ಪ್ರತಿ ಹೇಳಿಕೆಯನ್ನು ಮುದ್ರಿಸಿ ಹಂಚಲು ಮರೆಯಲಿಲ್ಲ. ಅದರ ಒಕ್ಕಣಿಕೆ ಹೀಗಿದೆ:

ಶ್ರೀ ಮನೋಹರ ಮಸ್ಕಿರವರ ಸ್ಪಷ್ಟೀಕರಣ

  • ಕೆಲವು ಸ್ನೇಹಿತರು ನನ್ನ ಬಗ್ಗೆ ಸತ್ಯಕ್ಕೆ ದೂರವಾದ (ಅಪ)ಪ್ರಚಾರಗಳನ್ನು ಮಾಡಿ ಸಹಕಾರಿಗಳಲ್ಲಿ ನನ್ನ ಬಗ್ಗೆ ಗೊಂದಲ ಮೂಡಿಸುವ ಪ್ರಯತ್ನ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ.
  • ಈ ಕರಪತ್ರಗಳಲ್ಲಿ ಹೇಳಿರುವ ವಿಷಯಗಳ ಬಗ್ಗೆ ಆಯಾ ಸಂಸ್ಥೆಗಳ ಆಡಳಿತ ಮಂಡಳಿಗಳ ಸಭೆಗಳಲ್ಲಿ ಹಾಗೂ ಸರ್ವಸದಸ್ಯರ ಸಭೆಗಳಲ್ಲಿ ಚರ್ಚೆ ನಡೆದು ಸತ್ಯಕ್ಕೆ ದೂರ ಎನ್ನುವುದು ಹಾಗೂ ಆಡಿಟ್ ವರದಿಗಳಲ್ಲೂ ಇದು ಸತ್ಯಕ್ಕೆ ದೂರ ಎನ್ನುವುದು ಸಾಬೀತಾಗಿದೆ.
  • (ಅಪ) ಪ್ರಚಾರ ಮಾಡುತ್ತಿರುವ ಸ್ನೇಹಿತರು ಆಯಾ ಸಂಸ್ಥೆಗಳ ಸದಸ್ಯರೂ ಅಲ್ಲ, ಷೇರುದಾರರೂ ಅಲ್ಲ.
  • ಚುನಾವಣಾ ಸಮಯದಲ್ಲಿ ಈ ರೀತಿ ಕೆಸರು ಎರಚುವ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಬುದ್ದಿ ಸಿಗಲಿ ಎಂದಷ್ಟೇ ಹಾರೈಸುವೆ. ಆದ್ದರಿಂದಲೇ ಪುರಂದರದಾಸರು ಹೇಳಿದ್ದಾರೆ `ನಿಂದಕರಿರಬೇಕು…’
  • ಈ ಸ್ನೇಹಿತರ ಅಪಪ್ರಚಾರಗಳಿಗೆ ಇದುವರೆಗೆ ನಾನು ಪ್ರತಿಕ್ರಿಯಿಸಿರಲಿಲ್ಲ. ಇದೀಗ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದೇನೆ. ಯಾವುದೇ (ಅಪ) ಪ್ರಚಾರಗಳಿಗೆ ಕಿವಿಗೊಡದೆ ಸಹಕಾರಿ ಭಾರತಿಯ ತಂಡಕ್ಕೆ ಮತ ನೀಡಲು ಕೋರುತ್ತೇನೆ.

ನಮಗೆ ಒಳ್ಳೆಯ ಬುದ್ಧಿಯನ್ನು ಕೊಡುವಂತೆ ಆತ ಕೋರುವುದಿರಲಿ, ಮತದಾರರು ಸದ್ಬುದ್ಧಿಯನ್ನು ಹೊಂದಿದ್ದರಿಂದಲೇ ತಾನು ಸೋತೆ ಎಂದು ಆತ ಅರಿತುಕೊಂಡರೇ ಅದೇ ಅವನ ಜೀವನದಲ್ಲಿ ಗೋಚರಿಸಬಹುದಾದ ಏಕೈಕ ಸದ್ಬುದ್ಧಿ.

`ಸಹಕಾರ ಭಾರತಿ’ಯನ್ನು `ಸಹಕಾರಿ ಭಾರತಿ’ ಎಂದು ಟೈಪ್ ಮಾಡಿದ ಮಸ್ಕಿಯು  ತಾನೇ ಒಂದೊಮ್ಮೆ ಕೆಲಸ ಮಾಡಿದ ಸಂಸ್ಥೆಯ ಹೆಸರನ್ನು ತಪ್ಪಾಗಿ ಬರೆದಿರುವುದಕ್ಕೆ ಏನು ಹೇಳುತ್ತಾನೋ? ಅಂದಹಾಗೆ ಸಂಸ್ಥೆಗಳ ಸದಸ್ಯರು, ಷೇರುದಾರರು ಮಾತ್ರ  ದೂರು ಕೊಡಬಹುದು ಎಂದರೆ, ಇಂದು ಎಲ್ಲ ಪತ್ರಿಕೆಗಳೂ ತೆಪ್ಪಗೆ ಕೂಡಬೇಕು. ಅವಕ್ಕೆ ಯಾವುದೇ ಸಂಸ್ಥೆಯ ಮೇಲೆ ಅದರ ಸದಸ್ಯತ್ವ ಪಡೆಯದೆ ಅದರ ಹಗರಣವನ್ನು ಬರೆಯುವಂತಿಲ್ಲ!! ನಮ್ಮ ಸೋ ಕಾಲ್ಡ್ ಅಪಪ್ರಚಾರಕ್ಕೆ ಸಹಕಾರಿಗಳು ಕಿವಿಗೊಟ್ಟಿದ್ದಕ್ಕೇ ಮಸ್ಕಿ ಸೋತ ಎನ್ನುವುದಾದರೆ ಅದು ನಮಗೆ ಸಿಗುವ ದೊಡ್ಡ ಕ್ರೆಡಿಟ್!!!

ಕಾನೂನು ಕ್ರಮ ಜರುಗಿಸುವುದಾಗಿ ಮಸ್ಕಿಯು ಬಹಿರಂಗವಾಗೇ ಹೇಳಿದ್ದಾನೆ. ಸ್ವಾಗತ. ಸ್ನೇಹಿತರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವನ ಇಬ್ಬಂದಿತನಕ್ಕೆ ಏನು ಹೇಳೋಣ? ಯಾವಾಗಲೂ ಸ್ನೇಹಿತರು ಎಂದು ಕರೆದ ಕೂಡಲೇ ಆತ ಸ್ಟ್ರಾಟೆಜಿಕ್ ರಾಜಕಾರಣಿಯಾಗುವುದಿಲ್ಲ; ಅದರಲ್ಲೂ ಅವನ ಮೇಲೆ ಹಗರಣಗಳ ಆಪಾದನೆಯನ್ನು ಸರಣಿರೂಪದಲ್ಲಿ ಮಾಡಿದವರನ್ನು ಸ್ನೇಹಿತರು ಎಂದು ಆತ ಕರೆದರೆ ಅದನ್ನು ಗೋಸುಂಬೆತನ ಎಂದು ಕರೆಯಬೇಕಾಗುತ್ತದೆ. ಪಾಪ ಗೋಸುಂಬೆಗೂ ಅವಮಾನವಾಯ್ತು ಅಂತೀರ?

ಇನ್ನಾದರೂ?

ಮುಂದೆ? ಸಹಕಾರ ಭಾರತಿ ಎಂಬ ಸಂಘಟನೆಯ ಹಿರಿಯರು ಕೂತು ಯೋಚಿಸಲಿ: ಮಸ್ಕಿಯು ಹೇಗೆ ಬಿಜೆಪಿ ಮೂಗಿಗೆ ಒರೆಸಬೇಕಾಗಿದ್ದ ಸೋಲಿನ ರಾಡಿಯನ್ನು ಸಹಕಾರ ಭಾರತಿಯ ಮೂತಿಗೆ ಕೈತುಂಬ ಹಚ್ಚಿಕೊಂಡು ಒರೆಸಿದ  ಎಂಬ ಬಗ್ಗೆ ಪರಾಮರ್ಶೆ ನಡೆಸಲಿ. ಮಸ್ಕಿಯನ್ನು ಇಳಿಸಲು ನಮ್ಮ ನೆರವು ಕೇಳಿದ ಸಹಕಾರ ಭಾರತಿಯು ನಮ್ಮನ್ನು ಟಿಶ್ಯೂ ಪೇಪೇರಿನಂತೆ ಬಳಸುವಂತಿಲ್ಲ; ಅಂತೆಯೇ ಸಹಕಾರ ಭಾರತಿ ಎಂಬ ಸಂಘಟನೆಯನ್ನು ಒಂದು ಟಿಶ್ಯೂ ಪೇಪರಿನಂತೆ ಮಸ್ಕಿಯೂ ಬಳಸಲಾಗದು.

ಸಹಕಾರ ಭಾರತಿಯು ದೇಶದಲ್ಲಿ ಒಂದಷ್ಟಾದರೂ ಒಳ್ಳೆಯ ಕೆಲಸ ಮಾಡುತ್ತಿದೆ ಎಂಬ ನಂಬುಗೆಯಿಂದ, ಅದರಲ್ಲಿ ಸಾಕಷ್ಟು ಪ್ರಜ್ಞಾವಂತರು ಇದ್ದಾರೆ ಎಂಬ ವಿಶ್ವಾಸದಿಂದ ನಾವು ಇದ್ದೇವೆ. ಈಗಲಾದರೂ ಹೇಗೆ ಮಸ್ಕಿಯು ತನ್ನ ಸ್ವಾರ್ಥಕ್ಕೋಸ್ಕರ ಸಹಕಾರ ಭಾರತಿಯ ಬ್ರಾಂಡನ್ನು ಬಲಿಹಾಕಿದ ಎಂಬುದನ್ನು ಅರ್ಥ ಮಾಡಿಕೊಳ್ಳಲಿ.

ಹಾಗೆಯೇ ಆಡಳಿತಾರೂಢ ಬಿಜೆಪಿಯಲ್ಲಿ ಮಸ್ಕಿಯ ರಾಜಕಾರಣದ ತಂತ್ರವನ್ನು ಬೆಂಬಲಿಸಿ ಬೇಸ್ತುಬಿದ್ದ ಸಚಿವರು, ಸಂಘಟನಾ ಪದಾಧಿಕಾರಿಗಳು ಹೇಗೆ ಮಸ್ಕಿಯು ತನ್ನ ಅತಿ ಆತ್ಮವಿಶ್ವಾಸದಿಂದ ಪಕ್ಷದೆ ವರ್ಚಸ್ಸಿಗೆ ಕುಂದು ತಂದ ಎಂದು ಪರಾಮರ್ಶಿಸಲಿ. ಇದೊಂದು ಫೆಡರೇಶನ್ ಕೈಗೆ ಬರಬೇಕು ಎಂದು ಆಮಿಷ ಒಡ್ಡಿದ ಮಸ್ಕಿಯ ಮನಸ್ಸಿನಲ್ಲಿ ಇರುವ ಹೊಂಚೇನು ಎಂಬುದನ್ನು ಅರಿಯಲಿ. ಇನ್ನೆರಡು ವರ್ಷಕ್ಕೆ ಎಂ ಎಲ್ ಸಿ ಸದಸ್ಯತ್ವ ಮುಗಿಯುತ್ತೆ. ಆಗ ಸಹಕಾರಿ ಸ್ವಾಹಾಕಾರಿ ಬದುಕಿಗೇನು ಎಂದು ಯೋಚಿಸಿಯೇ ಮಸ್ಕಿಯು ಈ ದುಸ್ಸಾಹಸಕ್ಕೆ ಕೈ ಹಾಕಿದ ಎಂಬುದನ್ನು ಅರಿಯಲಿ. ಫೆಡರೇಶನ್ನಿನ ಸಿ ಇ ಓ ಆದಾಗ ಮನೆಗೇ ಆಫೀಸ್ ಕಂಪ್ಯೂಟರನ್ನು ತರಿಸಿ ಹಾಕಿಸಿಕೊಂಡ ಮಸ್ಕಿಗೆ ಇದೆಲ್ಲವೂ ಕರತಲಾಮಲಕ.

ಈ ಭರ್ಜರಿ ಡಿಬೇಕಲ್‌ಗೆ ಕಾರಣನಾದ ಮಸ್ಕಿಯು ತನ್ನ ಎಂ ಎಲ್ ಸಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೆ ಅತಿ ಯೋಗ್ಯ. ಆಗ ಖಂಡಿತವಾಗಿಯೂ ನಾವು ಅವನನ್ನು ಅಭಿನಂದಿಸುತ್ತೇವೆ.

ಪಾಟೀಲರ ಮಡಿಲಲ್ಲೇ ಸಹಕಾರ ಭಾರತಿ ಕೆಂಡ!

ಅರ್ಬನ್ ಬ್ಯಾಂಕ್ ಫೆಡರೇಶನ್ ಎಂದರೆ ಅದು ಉಳಿದ ಸಹಕಾರಿ ಸಂಸ್ಥೆಗಳಂತೆ ಇಲ್ಲ; ಅಕಾಮಡೇಟಿವ್ ಮತ್ತು ರೆಸಿಪ್ರೊಕೇಟಿವ್ ಸ್ವಭಾವದ ಸಹಕಾರಿ – ಸುಮಧುರ ರಾಜಕಾರಣ ಅಲ್ಲಿದೆ. ಅದಕ್ಕೇ ಮಸ್ಕಿಗೆ ಈ ಹಿಂದೆ ಪ್ರವೇಶ ಸಿಕ್ಕಿದ್ದು. ಅಂಥ ಪ್ರವೇಶ ಕೊಟ್ಟ ಪಾಟೀಲರನ್ನೇ ಎತ್ತಂಗಡಿ ಮಾಡಲು ಹೊರಟರೆ? ಅದು ವಿದ್ವೇಷ ಮತ್ತು ವಿದ್ರೋಹದ ರಾಜಕಾರಣವಾಗುತ್ತದೆ. ಇದನ್ನೂ ಬಿಜೆಪಿ ಮತ್ತು ಸಹಕಾರ ಭಾರತಿ ನಾಯಕರು ಅರಿಯಲಿ. ಇಷ್ಟಕ್ಕೂ, ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗೆ ನಾಮಕಾವಸ್ತೆ ಬಾಡಿಗೆ ಮೇಲೆ ಮೊದಲಿನಿಂದಲೂ, ಈವರೆಗೂ ಕಚೇರಿ ಜಾಗ ಕೊಟ್ಟವರು ಪಾಟೀಲರೇ. ಅಲ್ಲಿ ಅಂದಿನಿಂದಲೂ ಸೌಹಾರ್ದ ಸಹಕಾರ ಚಳವಳಿಯ ಜೊತೆಗೇ ಸಹಕಾರ ಭಾರತಿಯ ಚಟುವಟಿಕೆಗಳೂ ನಡೆದಿವೆ; ನಡೆಯುತ್ತಿವೆ. ಒಂಥರ ಮಡಿಲಲ್ಲೇ ಬೆಂಕಿ ಇಟ್ಟುಕೊಂಡ ಹಾಗಾಯ್ತು ಪಾಟೀಲರ ಕಥೆ!  ಇಷ್ಟಾಗಿಯೂ ಒಂದಿನವೂ ಅವರು ಸೌಹಾರ್ದ ಚಳುವಳಿ, ಸಹಕಾರ ಭಾರತಿಯ ಚಟುವಟಿಕೆ – ಯಾವುದಕ್ಕೂ ಅಡ್ಡಿ ಬರಲಿಲ್ಲ; ಏನು ಮಾಡ್ತಿದ್ದೀರಿ ಎಂದು ಕೇಳಲೂ ಇಲ್ಲ. ಒಂದು ಸಲ ಮಾತ್ರ `ಏನ್ರೀ ಇಷ್ಟೆಲ್ಲ ಒಳ್ಳೆ ಇಂಟೀರಿಯರ್ ಮಾಡ್ಕಂಡಿದೀರಿ’  ಎಂದು ಮಸ್ಕಿಯನ್ನು ಛೇಡಿಸಿದ್ದಿದೆ. ಇಂಥ ಸಹಕಾರವನ್ನು ನೀವು ಎಚ್ ಕೆ ಪಾಟೀಲರಲ್ಲದೆ ಬೇರೆ ಯಾರಿಂದಲೂ ಪಡೆಯೋದು ಸಾಧ್ಯವಿಲ್ಲ.

ಎಷ್ಟೋ ದಿನಗಳಾದ ಮೇಲೆ ಈ ಥರ ಬ್ಲಾಗ್ ಬರೆಯುತ್ತಿದ್ದೇನೆ. ನನ್ನ ಒಂದು ವರ್ಷದ ನಿರುದ್ಯೋಗದ ಕಥೆಯನ್ನೇ ಯಾಕೆ ನಿಮ್ಮೊಂದಿಗೆ ಹಂಚಿಕೊಳ್ಳಬಾರದು ಎಂದು ಯೋಚಿಸುತ್ತಿದ್ದಂತೆ ಈ ಫೆಡರೇಶನ್ ಚುನಾವಣೆ ಪ್ರಕರಣ ಎದುರಾಯಿತು. ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಒಂದೊಮ್ಮೆ ನನ್ನ ಬದುಕಿನ ಮೇಲೆ ತೀವ್ರ ಪರಿಣಾಮ ಮಾಡಿ ಈಗ ನನ್ನ ಬದುಕಿನ ಮೇಲೆ ತೀವ್ರ ದುಷ್ಪರಿಣಾಮ ಮಾಡಿರುವ ಮಸ್ಕಿಯೆಂಬ ಕಳಂಕಿತನ ಬಗ್ಗೆ ಬರೆದು ಹಾಳಾಗಿ ಹೋಗುವುದಾದರೆ ನನಗೇನೂ ಬೇಜಾರಿಲ್ಲ. ಅವನಿಂದ ನನ್ನ ಬದುಕೇ ಬದಲಾಗಿದೆ ಎಂದಮೇಲೆ ಮುಂದಿನ ದಿನಗಳಲ್ಲಿ ಅವನೇ ಮತ್ತಷ್ಟು ಬದಲಾವಣೆ ತಂದರೆ ಆಗುವುದೇನಿದೆ ಹೇಳಿ?

ಬದುಕಿನ್ನೂ ಬದುಕಿದೆ ಎಂದ ಆ ಜೀವಕ್ಕೆ ನಮನ

ಥತ್ತೇರಿಕಿ, ಇಂಥ ಸಾಮೂಹಿಕ ಆದರ್ಶಗಳ ಅರ್ಥಹೀನ ಗಲಾಟೆಯಲ್ಲಿ ಇಷ್ಟೆಲ್ಲ ಒರಟು ಪದಗಳನ್ನು ಬಳಸುವವರೆಗೆ ನಾನು ರೂಪಾಂತರಗೊಂಡೆನಲ್ಲ ಎಂದು ನನ್ನ ಮೇಲೆ ನನಗೇ ಬೇಜಾರಾಗುತ್ತದೆ. ಅರೆ ಇಸ್ಕಿ, ಇದಕ್ಕೆಲ್ಲ ಕಾರಣ ಅದೇ ಮಸ್ಕಿ ಎಂದು ಇನ್ನೊಂದು ಮನಸ್ಸು ಹೇಳುತ್ತದೆ.

ಎಲ್ಲೋ ಒಬ್ಬರು ನನ್ನ ಮಾತನ್ನು ಕೇಳಿ, ಓದಿ, ನನ್ನ ಎಸ್ ಎಂ ಎಸ್‌ಗಳ ಮೇಲೆ ವರ್ಕ್ ಮಾಡಿ ನನ್ನ ಬೇಗುದಿಯ ಹೇಳಿಕೆಗಳನ್ನು ಒರೆಗೆ ಹಚ್ಚಿ ಕೂಡಲೇ ಸ್ಪಂದಿಸ್ತಾ ಇದಾರಲ್ಲ….. ಅದೊಂದೇ ಸದ್ಯ ನನ್ನ ಬದುಕನ್ನು ಸಹನೀಯಗೊಳಿಸಿದೆ. ಯಾವುದೋ ಮೂಲೆಯಿಂದ ಅವರು ಕಳಿಸುವ ಪುಟ್ಟ ಈ ಮೈಲ್, ಕ್ಲುಪ್ತ ಎಸ್ ಎಂ ಎಸ್ – ಅವೇ ನನ್ನ ನಿರಾಶೆಗೆ, ಹತಾಶೆಗೆ ತಡೆ ಒಡ್ಡಿವೆ.

`ಇಲ್ಲ ಮಾರಾಯಾ, ಬದುಕಿನ್ನೂ ಬದುಕಿದೆ’ ಎಂದು ಹೇಳುತ್ತಿವೆ.

ಆ ಜೀವಕ್ಕೆ ನನ್ನ ಎದೆಯಾಳದ ವಂದನೆಗಳು.

Leave a Reply

Theme by Anders Norén