ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ), ಮಾಹಿತಿ / ಲೇಖನ

ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್‌ ಶ್ರೀಧರ್‌ ಅಂಕಣ ಆರಂಭ

ಯುವ ತಂತ್ರಜ್ಞ, ದೃಷ್ಟಿಸವಾಲನ್ನು ಎದುರಿಸಿ ಬದುಕನ್ನು ದಿಟ್ಟವಾಗಿ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದ ಶ್ರೀ ಟಿ ಎಸ್‌ ಶ್ರೀಧರರು ಮಿತ್ರಮಾಧ್ಯಮಕ್ಕಾಗಿ ಅಂಕಣ ಬರೆದುಕೊಡಲು ಮುಂದೆ ಬಂದಿದ್ದಾರೆ. ಅವರದು ತೀರ ಸಂಕೋಚದ ಸ್ವಭಾವ. ಜೊತೆಗೆ ಸಮಾಜಕ್ಕೆ ತನ್ನದೇನಾದರೂ ಕೊಡುಗೆ ಇರಬೇಕೆಂದೇ ತವಕಿಸುವ ಜೀವ; ಹೊರತು ಸಮಾಜವು ತನಗೆ ಕೊಡುವುದೇನೂ ಇಲ್ಲ ಎಂಬ ನಮ್ರ ಭಾವ.

ಇನ್ನುಮುಂದೆ ಅವರ ಲೇಖನಗಳನ್ನು ಮಿತ್ರಮಾಧ್ಯಮದಲ್ಲಿ ಓದಿ, ಪ್ರತಿಕ್ರಿಯಿಸಿರಿ. ಅವರು ನನಗೆ ಪರಿಚಯವಾಗಿದ್ದೇ ನನ್ನ `ಕಣಜ’ದ ಸೇವಾವಧಿಯಲ್ಲಿ. ಅವರ ಬಗ್ಗೆ, ಅವರು ಕಣಜಕ್ಕಾಗಿ, ಕನ್ನಡಕ್ಕಾಗಿ ಮಾಡಿದ ಕೆಲಸಗಳನ್ನು ಇಲ್ಲಿ ಓದಿ. ಹಾಗೆಯೇ ಅವರ ಬ್ಲಾಗ್‌ ಇಲ್ಲಿದೆ, ಭೇಟಿ ಕೊಡಿ.

ಅವರ ಮೊದಲ ಅಂಕಣ ಬರಹ ಇಲ್ಲಿದೆ:

ಆಂಡ್ರಾಯ್ಡ್  : ನಮಗೆಲ್ಲರಿಗೂ ಅನುಕೂಲಕರ, ಹಿತಕರ

ಆಂಡ್ರಾಯ್ಡ್ ಎಂಬುದು ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್‌ಗಳಿಗಾಗಿ ರೂಪಿಸಿದ ಒಂದು ಮುಕ್ತ ಆಕರ ಕಾರ್ಯಾಚರಣೆ  ವ್ಯವಸ್ಥೆ. ಇದರಿಂದಾಗಿ ಒಂದು ಚಿಕ್ಕ ಎಲಕ್ಟ್ರಾನಿಕ್ ಉಪಕರಣ ಅಂದರೆ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಇತ್ಯಾದಿಗಳಿಂದ ಅತೀ ಹೆಚ್ಚಿನ ಕೆಲಸ ಮಾಡಿಸಲು ಸಾಧ್ಯವಾಗುತ್ತದೆ. ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯು ಆಪಲ್ ಕಂಪನಿಯ ಐಓಎಸ್ (IOS) ಕಾರ್ಯಾಚರಣೆ ವ್ಯವಸ್ಥೆಗೆ ಪ್ರಬಲ ಪ್ರತಿಸ್ಫರ್ದೆಯನ್ನೊಡ್ಡಿತಲ್ಲದೇ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಆಪಲಿನ ಮೋನೋಪೋಲಿಯನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಐಓಎಸ್ ಒಂದು ಪ್ರೊಪ್ರೈಟರೀ ತಂತ್ರಾಂಶ. ಐಓಏಸ್ ವ್ಯವಸ್ಥೆಯನ್ನು ಬಳಸಿ ತಯಾರಿಸಿದ ಗ್ಯಾಜೆಟ್ಟುಗಳು ದುಬಾರಿ. ಅಲ್ಲದೇ ಆಪಲ್ ಕಂಪನಿಯನ್ನು ಹೊರತುಪಡಿಸಿ ಬೇರೆ ಯಾವುದೇ ಕಂಪನಿಗಳು ಇದನ್ನು ಬಳಸಬೇಕಾದರೆ ಆಪಲ್ ಕಂಪನಿಗೆ ರಾಯಲ್ಟೀ ಕೊಡಬೇಕಾಗುತ್ತದೆ. (ನನಗೆ ಗೊತ್ತಿರುವಂತೆ ಸದ್ಯದಲ್ಲಿ ಆಪಲ್ ಹೊರತುಪಡಿಸಿ ಯಾರೂ ಇದನ್ನು ಬಳಸುತ್ತಿಲ್ಲ) ಅಲ್ಲದೇ ಇದನ್ನು ತಮ್ಮ ಅಗತ್ಯಗಳಿಗನುಗುಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಈ ಎಲ್ಲಾ ತೊಂದರೆಗಳನ್ನೂ ಆಂಡ್ರಾಯ್ಡ್ ವ್ಯವಸ್ಥೆಯು ನಿವಾರಿಸಿದೆ. ಆಪಲ್ ಕಂಪನಿಯ ಐಓಎಸ್ ವ್ಯವಸ್ಥೆಯಲ್ಲಿ ಮಾಡಬಹುದಾದ ಹೆಚ್ಚೂ ಕಡಿಮೆ ಎಲ್ಲಾ ಕೆಲಸಗಳನ್ನೂ ಆಂಡ್ರಾಯ್ಡ್ ವ್ಯವಸ್ಥೆಯಲ್ಲಿ ಮಾಡಬಹುದು. ಇದು ಮುಕ್ತ ತಂತ್ರಾಂಶವಾಗಿರುವುದರಿಂದ ಯಾವುದೇ ಹೊಸ ಸೌಲಭ್ಯವನ್ನು ಇದರಲ್ಲಿ ಸೇರಿಸುವುದು ಸುಲಭ. ಅಲ್ಲದೇ ಇದರ ಬಳಕೆ ಅಥವಾ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಯಾರಿಗೂ ರಾಯಲ್ಟೀ ಕೊಡಬೇಕಾಗಿಲ್ಲ! ಹೀಗಾಗಿ ಆಂಡ್ರಾಯ್ಡ್ ಬಳಸುವ ಗ್ಯಾಜೆಟ್ಟುಗಳ ಬೆಲೆಯೂ ಅತ್ಯಧಿಕವಾಗುವ ತೊಂದರೆ ಇಲ್ಲ. ಸ್ಯಾಂಸಂಗ್, ಎಲ್‌ಜೀ, ಎಚ್‌ಟೀಸೀ, ಮೋಟೋರೋಲಾ, ಫಿಲಿಪ್ಸ್, ತೋಶೀಬಾ, ಸ್ಪೈಸ್ ಟೆಲಿಕಾಮ್, ಮೈಕ್ರೋಮ್ಯಾಕ್ಸ್, ಕಾರ್ಬನ್, ಅಲ್ಕಾಟಲ್, ಇತ್ಯಾದಿ ಹತ್ತು ಹಲವು ದೈತ್ಯ ಹಾಗು ಸಣ್ಣ-ಪುಟ್ಟ ಎಲಕ್ಟ್ರಾನಿಕ್ಸ್ ಕಂಪನಿಗಳು ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಈ ಫೋನ್‌ಗಳ ಬೆಲೆ ಸುಮಾರು ೩೫೦೦ ರೂಪಾಯಿಗಳಿಂದ ಹಿಡಿದು ಸುಮಾರು ೪೦-೫೦೦೦೦ ರೂಪಾಯಿಗಳಾಗಿವೆ. ಇದು ಎಲ್ಲಾ ವರ್ಗದ ಗ್ರಾಹಕರಿಗೂ ಕೈಗೆಟಕುವಂತಾಗಿದೆ. ಕೆಲವು ಮೊಬೈಲ್ ಕಂಪನಿಗಳು ಗ್ರಾಹಕರ ಅನುಕೂಲಕ್ಕಾಗಿ ದೇಶ-ಭಾಷೆಗಳ ಆದಾರದ ಮೇಲೆ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಸಣ್ಣ-ಪುಟ್ಟ ಬದಲಾವಣೆಗಳನ್ನೂ ಮಾಡಿಕೊಂಡಿವೆ. ಉದಾಹರಣೆಗೆ, ಸ್ಯಾಮ್ಸಂಗ್ ಕಂಪನಿಯ ಇತ್ತೀಚಿನ ಸ್ಮಾರ್ಟ್ ಫೋನ್ ಮಾಡೆಲ್‌ಗಳು ಯುನಿಕೋಡ್ ಬಳಸಿ ಬರೆಯುವ ದಕ್ಷಿಣ ಭಾರತದ ಭಾಷೆಗಳ ರೆಂಡರಿಂಗ್ (ಅಕ್ಷರಗಳನ್ನು ಪರದೆಯ ಮೇಲೆ ಮೂಡಿಸುವುದು) ತೊಂದರೆಗಳನ್ನು ನಿವಾರಿಸಿ ಇದಕ್ಕಾಗಿ ತನ್ನದೇ ಫಾಂಟನ್ನು ಸಹಾ ನೀಡುತ್ತಿದೆ. ಆಂಡ್ರಾಯ್ಡ್‌ನ ಇನ್ನೊಂದು ವಿಶೇಷತೆಯೆಂದರೆ ನಮ್ಮ ಅಗತ್ಯಕ್ಕನುಗುಣವಾಗಿ ನಾವು ಇದರಲ್ಲಿ ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬಹುದು. ಅನೇಕ ತಂತ್ರಾಂಶಗಳು ಆಂಡ್ರಾಯ್ಡ್ ಮಾರ್ಕೇಟಿನಲ್ಲಿ ಲಭ್ಯವಿವೆ.

’ಆಂಡ್ರಾಯ್ಡ್ ಇನ್ಕಾರ್‌ಪೊರೇಶನ್’ ಅನ್ನು ೨೦೦೩ ರಲ್ಲಿ ಆಂಡೀ ರೂಬಿನ್ ಎನ್ನುವವರು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೋದಲ್ಲಿ ಆರಂಭಿಸಿದರು. ನಂತರ ೨೦೦೫ ರಲ್ಲಿ ಗೂಗಲ್ ಕಂಪನಿಯು ಇದನ್ನು ಕೊಂಡುಕೊಂಡಿತು. ಇದಾದ ನಂತರ ನೊವೆಂಬರ್ ೫, ೨೦೦೭ ರಲ್ಲಿ ಗೂಗಲ್ ನೇತೃತ್ವದಲ್ಲಿ ಅನೇಕ ಕಂಪನಿಗಳು ಸೇರಿ ’ಓಪನ್ ಹ್ಯಾಂಡ್‌ಸೆಟ್ ಅಲಯನ್ಸ್’ (Open Handset alliance) ಎನ್ನುವ ಕನ್ಸೊರ್ಷಿಯಮ್ ಸ್ಥಾಪನೆಯಾಯಿತು. ಇದರಿಂದಾಗಿ ಆಂಡ್ರಾಯ್ಡ್ ಬೆಳವಣಿಗೆಗೆ ಅನುಕೂಲವಾಯಿತು. ಇದರಲ್ಲಿದ್ದ ಅನೇಕ ಕಂಪನಿಗಳು ಆಂಡ್ರಾಯ್ಡ್ ಅನ್ನು ತಾವು ತಯಾರಿಸುವ ಸ್ಮಾರ್ಟ್ ಫೋನ್‌ಗಳಲ್ಲಿ ಬಳಸಲು ಉತ್ಸುಕತೆ ತೋರಿದವು. ೨೦೦೮ ಸೆಪ್ಟೆಂಬರ್‌ನಲ್ಲಿ ಜನಸಾಮಾನ್ಯರ ಬಳಕೆಗೆ ಆಂಡ್ರಾಯ್ಡ್‌ನ ಮೊದಲ ಆವೃತ್ಥಿ ಲಭ್ಯವಾಯಿತು. ಇತ್ತೀಚಿನ ಆವೃತ್ಥಿ ಆಂಡ್ರಾಯ್ಡ್ ೪.೦ ’ಐಸ್ಕ್ರೀಮ್ ಸ್ಯಾಂಡ್‌ವಿಚ್’ (Icecream Sandwich) 2012 ರ ಜನವರಿ ೩೧ ರಂದು ಬಿಡುಗಡೆಯಾಯಿತು.

ಆಂಡ್ರಾಯ್ಡ್ ಎಂಬುದು ಸ್ಮಾರ್ಟ್ ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಒಂದು ಮುಕ್ತ ಆಖರ ಕಾರ್ಯಾಚರಣೆ ವ್ಯವಸ್ಥೆ. ಇದರಿಂದಾಗಿ ಒಂದು ಸ್ಮಾರ್ಟ್ ಫೋನ್ ಬೇಕಾದಷ್ಟು ಕೆಲಸ ಮಾಡಬಲ್ಲದು. ಇದರಲ್ಲಿರುವ ಜೀ.ಪೀ.ಎಸ್‌.ನ ಸಹಾಯದಿಂದ ನಾವು ಅಂದರೆ, ನಿರ್ದಿಷ್ಟ ಸ್ಮಾರ್ಟ್ ಫೋನ್ ಬಳಕೆದಾರರು, ಇರುವ ನಿಖರ ಸ್ಥಳವನ್ನು ನಮಗೆ ತಿಳಿಸಬಲ್ಲುದಲ್ಲದೇ ಸುತ್ತಮುತ್ತಲಿನ ಪರಿಸರ, ಹೋಟೆಲ್, ಪ್ರೇಕ್ಷಣೀಯ ಸ್ಥಳಗಳು, ಬ್ಯಾಂಕ್, ಹೀಗೆ ಹತ್ತು ಹಲವು ಮಾಹಿತಿಯನ್ನು ಕೊಡಬಲ್ಲದು. ಇದರಿಂದ ಮೊಬೈಲ್ ನೆಟ್‌ವರ್ಕ್ ಅಥವಾ ‘ವೈಫೈ’ ಅಂದರೆ ವೈರ್‌ಲೆಸ್ ನೆಟ್‌ವರ್ಕ್ ನೆರವಿನಿಂದ ಅಂತರಜಾಲಕ್ಕೆ ಎಲ್ಲಿಂದ ಯಾವಾಗ ಬೇಕಾದರೂ ಸಂಪರ್ಕ ಪಡೆದು ನಮಗೆ ಬೇಕಾದ ಯಾವ ಮಾಹಿತಿಯನ್ನಾಗಲಿ ಪಡೆದುಕೊಳ್ಳಬಹುದು. ಉದಾಹರಣೆಗೆ, ಒಬ್ಬ ಹಳ್ಳಿಯ ಕೃಷಿಕ ತನ್ನ ಮೊಬೈಲ್ ಅಥವಾ ಸ್ಮಾರ್ಟ್ ಫೋನ್ ನೆರವಿನಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳ ಧಾರಣೆ, ತಾನು ಇರುವ ಸ್ಥಳದ ಸಮಗ್ರ ಹವಾಮಾನ ವರದಿ, ಹೀಗೆ ಹತ್ತು ಹಲವು ಮಾಹಿತಿಗಳನ್ನು ಬೆರಳ ತುದಿಯಲ್ಲೇ ಪಡೆಯಬಹುದು.

ಅಂಧರು ಅಥವಾ ದೃಷ್ಟಿ ಮಾಂದ್ಯರೂ ಸಹಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನೆರವಿನಿಂದ ಬಹುತೇಕ ಮಟ್ಟಿಗೆ ತಮ್ಮ ಸ್ವಾವಲಂಬನೆ ಹೆಚ್ಚಿಸಿಕೊಳ್ಳ ಬಹುದು. ಅವರು ಮೇಲೆ ಹೇಳಿದ ಜೀ.ಪೀ.ಎಸ್‌ ವ್ಯವಸ್ಥೆಯ ಪ್ರಯೋಜನವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಸಮಯದಲ್ಲಿ ಪಡೆದುಕೊಳ್ಳಬಹುದು. ಇದು ಅವರು ಇರುವ ಸ್ಥಳ, ಚಲಿಸುತ್ತಿರುವ ದಿಕ್ಕೂ, ಚಲಿಸಿರುವ ದೂರ, ಹೋಗಬೇಕಾಗಿರುವ ದೂರ ಹಾಗೂ ರಸ್ತೆ, ತಿರುಗಬೇಕಾದ ಜಾಗ (ತಲುಪಬೇಕಾದ ಸ್ಥಳವನ್ನು ಮೊದಲೇ ಸ್ಮಾರ್ಟ್ ಫೋನ್‌ಗೆ ತಿಳಿಸಿದ್ದರೆ), ಇತ್ಯಾದಿ ಅನೇಕ ಮಾಹಿತಿಗಳನ್ನು ಕೈಯಲ್ಲೇ ನೀಡುತ್ತದೆ. ಇದರಲ್ಲಿ ನಮಗೆ ಬೇಕಾದ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವ ಅವ್ಕಾಶ ಇರುವುದರಿಂದ ಅಂಧರಿಗಾಗಿಯೇ ಅನೇಕ ಉಚಿತ ತಂತ್ರಾಂಶಗಳು ಆಂಡ್ರಾಯ್ಡ್ ಮಾರ್ಕೇಟಿನಲ್ಲಿ ಲಭ್ಯವಿವೆ.

ಅವುಗಳಲ್ಲಿ ಮುಖ್ಯವಾದವೆಂದರೆ,

೧. ಟಾಕ್‌ಬ್ಯಾಕ್:(Talkback) ಈ ತಂತ್ರಾಂಶವು ಆಂಡ್ರಾಯ್ಡ್ ಸ್ಮಾರ್ಟ್ ಫೋನಿನ ಪರದೆಯ ಮೇಲೆ ಮೂಡುವ ಪಠ್ಯವನ್ನು ಓದಿ ಹೇಳಬಲ್ಲುದು. ಇದರಿಂದ ಅಂಧರು ತಮ್ಮ ಸ್ಮಾರ್ಟ್ಫೋನ್ ನೋಡದೆಯೇ ಅದನ್ನು ಬಳಸಬಹುದು. ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ತಂತ್ರಾಂಶವನ್ನು ಮೊದಲೇ ಅಳವಡಿಸಿರುತ್ತಾರೆ.

೨. ಕಿಕ್‌ಬ್ಯಾಕ್: (Kickback) ಈ ತಂತ್ರಾಂಶವು ಸ್ಪರ್ಶಪರದೆ (Touch screen) ಯನ್ನು ಮುಟ್ಟಿದ ಕೂಡಲೆ ಫೋನ್ ವೈಬ್ರೇಟ್ ಆಗುವಂತೆ ಮಾಡಿ ಮುಟ್ಟಿದ್ದನ್ನು ಅಂಧರಿಗೆ ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ.

೩. ಸೌಂಡ್‌ಬ್ಯಾಕ್: (Soundback) ಈ ತಂತ್ರಾಂಶವು ಫೋನಿನಲ್ಲಿ ಮಾಡಿದ ಬೇರೆ-ಬೇರೆ ಚಟುವಟಿಕೆಗಳನ್ನು ವಿವಿಧ ಬಗೆಯ ಶಬ್ದಗಳ ಮೂಲಕ ತಿಳಿಸುತ್ತದೆ.

೪. ದಿ ವಾಯ್ಸ್ ಫಾರ್ ಆಂಡ್ರಾಯ್ಡ್:(The VOIC For Android) ಇದೊಂದು ವಿಶಿಷ್ಟ ಬಗೆಯ ಬಹೋಪಯೋಗಿ ತಂತ್ರಾಂಶ. ಇದು ಸ್ಮಾರ್ಟ್ ಫೋನಿನ ಕ್ಯಾಮರಾವನ್ನು ಬಳಸಿಕೊಂಡು ವಸ್ಥುಗಳ ಸ್ಥಳ ಪತ್ತೆ ಮಾಡುವುದು, ಬಣ್ಣವನ್ನು ಪತ್ತೆ ಮಾಡಿ ಹೇಳುವುದು, ಬೆಳಕಿನ ಅಸ್ತಿತ್ವವನ್ನು ವಿವಿಧ ಶಬ್ದಗಳ ಮೂಲಕ ತಿಳಿಸುವುದು, ಮನುಷ್ಯರ ಮುಖ ಪರಿಚಯ ಕಂಡುಹಿಡಿಯುವುದು, ಮುದ್ರಿತ ಪುಸ್ತಕ ಅಥವಾ ಯಾವುದೇ ಮುದ್ರಿತ ಪಠ್ಯವನ್ನು ಸ್ಮಾರ್ಟ್ಫೋನಿನ ಕ್ಯಾಮರಾದ ನೆರವಿನಿಂದ ಓದಿ ಹೇಳುವುದು, ಇತ್ಯಾದಿ ಇನ್ನೂ ಹತ್ತು ಹಲವು ಅತ್ಯುಪಯುಕ್ತ ಕೆಲಸಗಳನ್ನು ಈ ತಂತ್ರಾಂಶ ಮಾಡಬಲ್ಲದು. ಒಟ್ಟಿನಲ್ಲಿ ಹೇಳುವುದಾದರೆ, ಕಣ್ಣಿಲ್ಲದವರಿಗೆ ಈ ತಂತ್ರಾಂಶವು ಕಣ್ಣಾಗಬಲ್ಲದು. ಈ ತಂತ್ರಾಂಶದ ಬಗೆಗೆ ಬರೆಯುತ್ತಾ ಹೋದಂತೆಲ್ಲಾ ಇನ್ನೂ ಹೆಚ್ಚು ಹೆಚ್ಚು ಬರೆಯುವ ಅಂಶಗಳು ಸಿಗುತ್ತವೆ.

Leave a Reply

Theme by Anders Norén