ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ), ಮಾಹಿತಿ / ಲೇಖನ

ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ…..

ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು ದಿನ ನಿತ್ಯದ ಕೆಲಸಗಳಿಗೆ ಅಂದರೆ ಅವರ ಶೈಕ್ಷಣಿಕ ಹಾಗು ಜ್ಞಾನಾಭಿವೃದ್ಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮೈಸೂರು ವಿಶ್ವವಿದ್ಯಾಲಯದ  ಕುವೆಂಪು ಕನ್ನಡ ಅಧ್ಯಯನ ಕೇಂದ್ರಕ್ಕೆ ಆಹ್ವಾನಿಸಿದ್ದರು.  ಅಲ್ಲಿ ನನಗೆ ಭಾಷಾವಿಜ್ಞಾನಿ ಡಾ|| ಪಂಡಿತಾರಾಧ್ಯ ಅವರನ್ನು ಬೇಟಿ ಮಾಡಿಸಿದರು. ಅವರೊಟ್ಟಿಗೆ ಕೆಲ ಹೊತ್ತು ಕಳೆಯುವ ಅವಕಾಶ ನನಗೆ ಸಿಕ್ಕಿತು. ಅವರೊಟ್ಟಿಗೆ ಕನ್ನಡದ ಕುರಿತು ಹಾಗೇ ಸುಮ್ಮನೆ ಮಾತನಾಡುತ್ತಿದ್ದೆ. ನಮ್ಮ ಮಾತುಗಳಲ್ಲಿ ಆಂಡ್ರಾಯ್‌ಡ್ ಟ್ಯಾಬ್ಲೆಟ್ಟಿನಿಂದ ಹಿಡಿದು ಇನ್ನು ಕೆಲವು ತಂತ್ರಜ್ಞಾನಗಳಲ್ಲಿ ಕನ್ನಡದ ಬಗೆಗೂ ಮಾತು-ಕಥೆಯಾಯಿತು. ಹಾಗೆಯೇ ಅವರು ಅಂಧರ ಹಾಗು ಅಂಗವಿಕಲರ ಬಗೆಗೂ ಮಾತನಾಡಿದರು. ಆ ಸಂದರ್ಭದಲ್ಲಿ ಅವರು ಹೇಳಿದ ಒಂದು ವಿಷಯ ನನ್ನಲ್ಲೂ ಪ್ರಶ್ನೆ ಹುಟ್ಟು ಹಾಕಿತು. ಅದನ್ನೇ ಇಲ್ಲಿ ನಾನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ.
ಅವರು ಹೇಳಿದ್ದೇನೆಂದರೆ ‘ವಿಕಲಚೇತನ’ ಎಂಬ ಪದದ ಬಳಕೆ ಸರಿಯಲ್ಲ. ಏಕೆಂದರೆ ಅಂಗವಿಕಲರು ದೈಹಿಕವಾಗಿ ಯಾವುದಾದರೂ ಅಂಗದ ವಿಕಲತೆಯನ್ನು ಹೊಂದಿರುತ್ತಾರೆಯೇ ಹೊರತೂ ಅವರಿಗೆ ಚೈತನ್ಯವೇ ವಿಕಲವಾಗಿರುವುದಿಲ್ಲ! ಈ ಮಾತು ನನಗೂ ಸರಿಯೆನಿಸಿತು. ಇದಾದ ಮೇಲೆ ಈ ಬಗ್ಗೆ ನಾನು ತುಂಬ ಯೋಚಿಸಿದೆ. ಮತ್ತೆ ಕೆಲವರೊಂದಿಗೆ ಈ ವಿಚಾರವನ್ನು ಹಂಚಿಕೊಂಡೆ. ಆ ಬಳಿಕ ನನಗೆ ತೋಚಿದ ಕೆಲ ವಿಷಯಗಳನ್ನು ಈಗ ಹೇಳುತ್ತಿದ್ದೇನೆ / ಬರೆಯುತ್ತಿದ್ದೇನೆ!
‘ವಿಕಲತೆ’ ಎಂದರೆ ಇಲ್ಲದಿರುವುದು. ಇದು ಇಂಗ್ಲೀಷ್‌ನ ‘disability’ ಎಂಬ ಪದಕ್ಕೆ ಸರಿ ಸಮ. ‘ಅಂಗವಿಕಲ’ ಅಥವಾ ‘ವಿಕಲಾಂಗ’ ಎಂದರೆ ಯಾವುದೋ ಒಂದು ಅಂಗ ಇಲ್ಲದಿರುವುದು ಅಥವಾ ಯಾವುದೋ ನಿರ್ದಿಷ್ಟ ಅಂಗ ತನ್ನ ಕಾರ್ಯವನ್ನು ಭಾಗಶಹಾ ಅಥವಾ ಸಂಪೂರ್ಣವಾಗಿ ನಿರ್ವಹಿಸಲು ಅಸಮರ್ಥವಾಗಿರುವ ಸ್ಥಿತಿ. ಹಾಗಾದರೆ, ‘ವಿಕಲಚೇತನ’ ಎಂದರೇನು? ಏನಿಲ್ಲ,
ವ್ಯಕ್ತಿಯಲ್ಲಿ ಚೈತನ್ಯ ಇಲ್ಲದಿರುವುದು! ಅಲ್ಲವೇ? ಇಷ್ಟು ವಿಷಧವಾಗಿ ಗೊತ್ತಾದ ಮೇಲೂ ನಾವು ಈ ಪದವನ್ನು ಬಳಕೆ ಮಾಡುವುದು ಸರಿಯೇ? ಬೇಳೂರು ಸುದರ್ಶನ ಅವರೊಂದಿಗೆ chatಇಸುತ್ತಿರುವಾಗ ಅವರು ‘ವಿಶಿಷ್ಟಚೇತನ’ ಎಂಬ ಪದವನ್ನು ಕೊಟ್ಟರು. ಆ ಪದ ನನಗೆ ಸೂಕ್ತ ಅನಿಸಿತು. ಅದು ಇಂಗ್ಲೀಷ್‌ನ ‘differently abled’ ಎಂಬ ಪದಕ್ಕೆ ಸರಿ ಸಮ!
ಇದಲ್ಲದೇ ನಾವು ದೈಹಿಕ ಸವಾಲು ಹೊಂದಿರುವ ವ್ಯಕ್ತಿಗಳು ಅಂತಲೂ ಕರೆಯಬಹುದು. ಅಂಧರನ್ನು `ದೃಷ್ಟಿ ಸವಾಲುಳ್ಳವರು’ ಎಂದು ಕೆಲವು ಕಡೆ ಬಳಸುವುದನ್ನು ನಾವು ನೋಡಿದ್ದೇವೆ. ಇದೂ ಒಂದು ಸರಿಯಾದ ಬಳಕೆ ಅನ್ನಬಹುದು.
ಇಂಗ್ಲೀಷ್‌ನಲ್ಲಿ ‘handicapped’ ಎಂದು ಬಳಸುವುದನ್ನು ಆಗಾಗ ನಾವು ನೋಡುತ್ತಿರುತ್ತೇವೆ. ಈ ಪದದ ಬಳಕೆಯೂ ತಪ್ಪು! ಹೀಗೆ ಹೇಳುವ ಮುನ್ನ ಈ ಪದದ ಮೂಲವನ್ನು ಕೊಂಚ ಗಮನಿಸೋಣ. ಕೆಲ ಶತಮಾನಗಳ ಹಿಂದೆ ಯುದ್ಧದಲ್ಲಿ ಅಂಗಾಂಗಗಳನ್ನು ಕಳೆದುಕೊಂಡ ಸೈನಿಕರು ಜನನಿಭಿಡ ಸ್ಥಳಗಳಲ್ಲಿ ತಮ್ಮ ಕೈಯಲ್ಲಿ ‘cap’ ಟೊಪ್ಪಿಯನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದರು. ಅವರನ್ನು ‘handicapped’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಎಲ್ಲಾ ಅಂಗವಿಕಲರನ್ನೂ ಅದೇ ಶಬ್ದದಿಂದ ಸಂಭೋದಿಸುವ ಪರಿಪಾಠ ಬೆಳೆದು ಬಂತು. ಆದ್ದರಿಂದ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ, ದಯವಿಟ್ಟು ‘ವಿಕಲಚೇತನ’, ’handicapped’ ಎಂಬಂಥ ಅವಹೇಳನಕಾರಿ ಪದಗಳನ್ನು ಬಳಸಬೇಡಿ.
ಅಂಗವಿಕಲರಿಗೆ ಯಾವುದೋ ಒಂದು ಅಂಗದ ನ್ಯೂನತೆ ಇರುತ್ತದೆಯೇ ಹೊರತು ಅವರಿಗೆ ಚೈತನ್ಯದ ನ್ಯೂನತೆ ಇರುವುದಿಲ್ಲ ಎಂದು ಅನೇಕ ಅಂಗವಿಕಲರು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ನಾವು ಇನ್ನು ಮುಂದೆ ಇಂತಹಾ ಪದಗಳ ಬಳಕೆಯನ್ನು ನಿಲ್ಲಿಸೋಣ, ಅಲ್ಲವೇ?

6 Comments

  1. vikala chetan tappu. nyunaanga annabahudu

  2. Nice article… Many use the words without the prior implication of what the words mean really. Some words do have harsh meanings whose usage have been more than usual. Really a ‘ಕಣ್’ ತೆರೆಸುವ ಲೇಖನ

  3. ನಿಮ್ಮ ಮಾತು ಶೇ. 100 ನಿಜ. ಅಂಗವಿಕಲರನ್ನು ಉಲ್ಲೇಖಿಸುತ್ತಾ ಪತ್ರಿಕೆಗಳು ಟಿವಿಗಳು ‘ವಿಕಲಚೇತನ’ ಎಂಬ ಪದ ಬಳಕೆ ಮಾಡುವುದು ಓದಿದಾಗ/ಕೇಳಿದಾಗಲೆಲ್ಲ ಮನಸ್ಸಿಗೆ ಬಹಳೇ ಹಿಂಸೆಯಾಗುತ್ತದೆ. ‘ವಿಕಲ’ ಹಾಗೂ ‘ಚೇತನ’ ಎಂಬ ಎರಡು ಪದಗಳೂ ಅಷ್ಟೊಂದು ಸ್ಪಷ್ಟವಾಗಿರುವಾಗ, ಅದ್ಯಾರು ಈ ವಿಕಲಚೇತನ ಎಂಬ ಪದದ ಬಳಕೆಯನ್ನು ಆರಂಭಿಸಿದರೋ ಅರ್ಥವಾಗೋದಿಲ್ಲ. ನಮ್ಮ ಮಾಧ್ಯಮಗಳಲ್ಲಿ ಒಳ್ಳೇ ಕನ್ನಡ ಬಲ್ಲವರೂ ಸಾಕಷ್ಟು ಮಂದಿಯಿದ್ದಾರಲ್ಲ; ಆದ್ರೂ ಯಾಕೆ ಹೀಗೆ?

  4. Girija

    ನನಗೆ ತಿಳಿದ ಮಟ್ಟಿಗೆ ವಿಕಲ ಚೇತನ ಪದವು ಇತ್ತೀಚೆಗಿನ ವರ್ಷಗಳಲ್ಲಿ ಕೇಳಿದ ಅಂತ್ಯಂತ ಕೆಟ್ಟ ಪದ…

  5. ನಮಸ್ಕಾರ.

    ನಿಮ್ಮ ವಿವೇಚನೆ ತುಂಬಾ ಚೆನ್ನಾಗಿದೆ.. ನನ್ನದೂ ಸಂಪೂರ್ಣ ಒಪ್ಪಿಗೆ ಇದೆ.. ನನ್ನ ಪ್ರಕಾರ “ವಿಶೇಷ ಚೇತನ” ಪದದ ಬಳಕೆ ಅತಿ ಹೆಚ್ಚು ಸೂಕ್ತ!! ಯಾರೂ/ಯಾರ ಚೈತನ್ಯವೂ ವಿಕಲವಾಗಿರದು. ವಿಕಲತೆ ಇರೋದು ನೋಡುಗರ ನೋಟದಲ್ಲು… ಯೋಚಿಸುವ ಯೋಚನೆಯಲ್ಲಿ ಅಷ್ಟೇ..

    ನಾನೂ ಒರ್ವ ವಿಶೇಷ ಚೇತನ ವ್ಯಕ್ತಿ. ನನ್ನ ಅನುಭವಗಳನ್ನು.. ವಿಶೇಷ ಚೇತನರ ಸಮಸ್ಯೆಗಳನ್ನು ಆಗಾಗ ನನ್ನ ಬ್ಲಾಗ್ ನಲ್ಲಿ ಬರೆಯುತ್ತಿರುತ್ತೇನೆ. ಸಾಧ್ಯವಾದಾಗ… ಈ ಎರಡು ಲಿಂಕ್ಸ್ ನೋಡಿ.

    http://www.manasa-hegde.blogspot.in/2012/06/blog-post.html
    &
    http://www.manasa-hegde.blogspot.in/2008/12/blog-post.html

  6. Geetha H

    nimma anisike sampoorna sariyaagide!

Leave a Reply

Theme by Anders Norén