ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ), ಮಾಹಿತಿ / ಲೇಖನ

ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ

ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.

೨೦೧೦ ರ ಡಿಸೆಂಬರ್‌ನಲ್ಲಿ ನಾನು ಮಾಡುತ್ತಿದ್ದ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ಕೆಲಸಕ್ಕೆ ಗುಡ್‌ಬೈ ಹೇಳಿಬಿಟ್ಟೆ! ಮುಂದೇನು ಎನ್ನುವ ಯೋಚನೆಗೆ ಆಸ್ಪದವಿಲ್ಲದಂತೆ ಈಸ್ಪೀಕ್ ತಂತ್ರಾಂಶದಲ್ಲಿ ಕನ್ನಡ ಸೇರಿಸಲು ಕೆಲಸ ಮಾಡುವ ಅವಕಾಶ ಸಿಕ್ಕಿತು. ೨೦೧೧ ರ ಆರಂಭದಲ್ಲಿ ಬರಹದಲ್ಲಿ ಕನ್ನಡ ಬೆರಳಚ್ಚು ಮಾಡುವುದನ್ನು ಕಲಿಯಲು ಪ್ರಾರಂಭಿಸಿದೆ. ಇದಕ್ಕೆ ನನ್ನ ತಂದೆಯವರು ಸಹಾಯ ಮಾಡಿದರು. ಈ ಮಧ್ಯೆ, ನನಗೆ ಕರ್ನಾಟಕ ಸರಕಾರ ಹಾಗು ಕೆಲವು ಎನ್‌ಜೀಓ ಗಳು ಸೇರಿ ಜನವರಿಯಲ್ಲಿ ನಡೆಸಿದ ಐಟೀ ಫಾರ್ ದಿ ಡಿಸೇಬಲ್ಡ್ ವಿಚಾರ ಘೋಷ್ಟಿಯಲ್ಲಿ ಭಾಗವಹಿಸುವ ಅವಕಾಶ ತಮಿಳುನಾಡಿನ ನನ್ನ ಸ್ನೇಹಿತರಿಂದ ಸಿಕ್ಕಿತು. ಅಲ್ಲಿ ಅನೇಕ ವ್ಯಕ್ತಿಗಳ ಪರಿಚಯವಾಯಿತು. ಆ ಎಲ್ಲಾ ಕಥೆಯನ್ನು ನಿಮಗೆ ಹೇಳುತ್ತಾ ಕುಳಿತರೆ ಒಂದು ಸಣ್ಣ ಕಿರುಹೊತ್ತಿಗೆಯನ್ನೇ ಬರೆಯಬಹುದು! ಇರಲಿ, ಅದರಿಂದ ನನ್ನ ಸ್ನೇಹಿತ ವರ್ಗ, ಹಾಗು ನನ್ನ ತಿಳುವಳಿಕೆ ಹೆಚ್ಚಾಯಿತು ಎನ್ನುವುದು ಮಾತ್ರ ಸತ್ಯ. ಈ ಸಮಯದಲ್ಲಿ ನನಗೆ ತಮಿಳುನಾಡಿನ ತರ್ಡ್‌ ಐ ಟೆಕ್ನಿಕಲ್ ವಾಲೆಂಟರಿ ಗ್ರೂಪಿನ ಬಗೆಗೆ ತಿಳಿಯಿತು. ಅದಾದ ನಂತರ ಜನವರಿ ಅಂತ್ಯದಲ್ಲಿ ನನ್ನ ಬಗ್ಗೆ ಹಾಗೂ ಈಸ್ಪೀಕ್ ಕನ್ನಡದ ಬಗ್ಗೆ ಅಬಸಿ ಶ್ರೀನಾಥ್ (ನನ್ನ ತಂದೆ) ಬರೆದ ಲೇಖನವೊಂದು ದಟ್ಸ್‌ಕನ್ನಡ ಪೋರ್ಟಲ್‌ನಲ್ಲಿ ಪ್ರಖಟವಾಯಿತು.

ಅಲ್ಲಿಂದ ನನ್ನ ಸ್ನೇಹಿತ ವರ್ಗ ಮತ್ತೂ ದೊಡ್ಡದಾಯಿತು ಕೆಲ ಗೆಳೆಯರ ವತ್ತಾಯದ ಮೇರೆಗೆ ನಾನೂ ಫೇಸ್‌ಬುಕ್‌ಗೆ ಬಂದೆ! ಅದುವರೆಗೆ ಕೇವಲ ಆರ್ಕುಟ್ ಬಳಸುತ್ತಿದ್ದೆ. ನನ್ನ ತಮ್ಮ ವಿನಾಯಕನ ನೆರವಿನಿಂದ ಫೇಸ್‌ಬುಕ್ಕಿನ ಕೆಲವು ಫೀಚರುಗಳನ್ನು ತಿಳಿದುಕೊಂಡೆ. ಅದಾದನಂತರ ಮಾರ್ಚಿನಲ್ಲಿ ನನ್ನ ಬಗ್ಗೆ ಹಾಗು ಕನ್ನಡ ಈಸ್ಪೀಕ್‌ನ ಬಗ್ಗೆ ನನ್ನ ಬ್ಲಾಗಿನಲ್ಲಿ ನಾನೇ ಬರೆದುಕೊಂಡೆ! ಈ ಸಮಯದಲ್ಲಿಯೇ ಕನ್ನಡಕ್ಕಾಗಿ ಕೆಲಸಮಾಡುತ್ತಿರುವ ಡಾ|| ಪವನಜ ಅವರ ಪರಿಚಯ ಅನಿರೀಕ್ಷಿತವಾಗಿ ಫೋನಿನಲ್ಲಾಯಿತು. ಅದಾದ ನಂತರ ಪೂರ್ಣಪ್ರಜ್ಞ ಬೇಳೂರು ಅವರು ನಮ್ಮ ಮನೆಗೆ ಕೆಲವು ಪತ್ರಕರ್ತರನ್ನು ಕರೆತಂದರು. ಅವರು ನನ್ನ ಸಂದರ್ಶನ ಪಡೆದರು. ನನ್ನ ಕುರಿತಾಗಿ ಪ್ರಜಾವಾಣಿ, ಹೊಸದಿಗಂತ, ಕನ್ನಡಪ್ರಭ, ಡೆಕ್ಕನ್ ಹೆರಾಲ್ಡ್‌ ಪತ್ರಿಕೆಗಳಲ್ಲಿ ಲೇಖನಗಳು ಬಂದವು. ಇದಾದ ನಂತರ ನನ್ನ ಸ್ನೇಹಿತ ವರ್ಗ ಇನ್ನೂ ಹೆಚ್ಚಾಯಿತು. ಪೂರ್ಣಪ್ರಜ್ಞ ಅವರು ಬೇಳೂರು ಸುದರ್ಶನ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟರು. ಸುದರ್ಶನ ಅವರು ಆ ಸಮಯದಲ್ಲಿ ಕರ್ನಾಟಕ ಜ್ಞಾನ ಆಯೋಗದ ಕಣಜ ಜಾಲತಾಣದ ಸಮನ್ವಯಕಾರರಾಗಿದ್ದರು. ಅವರು ಈಸ್ಪೀಕ್ ಕನ್ನಡ ಆವೃತ್ತಿಯನ್ನು ಕಣಜ ಜಾಲತಾಣದಲ್ಲಿ ಸೇರಿಸಿಕೊಂಡರು. ಈ ಮಧ್ಯೆ, ಸಾಗರದ ಸರಕಾರಿ ನೌಕರರ ಸಂಘದ ಅಧ್ಯಕ್ಶರಾಗಿರುವ ಮಾಸಾ ನಂಜುಂಡಸ್ವಾಮಿಯವರು ನನಗೆ ಪರಿಚಯವಾದರು. ಅವರು ಸರಕಾರಿ ನೌಕರರ ಸಂಘ ಏಪ್ರಿಲ್ ನಲ್ಲಿ ಸಾಗರದಲ್ಲಿ ನಡೆಸಿದ ‘ಪೀಯೂಸಿ ನಂತರ ಮುಂದೇನು’ ಪಿಯೂಸೀ ವಿದ್ಯಾರ್ಥಿಗಳಿಗೆ ನಡೆಸಿದ ಒಂದು ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿ ನನ್ನಿಂದಲೇ ಆ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದರು. ಇದೇ ಸಮಯದಲ್ಲಿ ನಮ್ಮೂರಿನವರೇ ಆದ ದಿನೇಶ್ ಜೋಷಿ ಅವರ ಒಡನಾಟಕ್ಕೆ ಬಂದೆ. ಶಿವಮೊಗ್ಗದ ಪ್ರೊಫೆಸರ್ ಶಾಸ್ತ್ರೀ ಅವರ ಪರಿಚಯವಾಯಿತು.

ಇದಕ್ಕೂ ಮುನ್ನ ತಮಿಳುನಾಡಿನಲ್ಲಿರುವ ತರ್ಡ್ ಐ ಟೆಕ್ನಿಕಲ್ ವಾಲೆಂಟರೀ ಗ್ರೂಪಿನ ಕಾರ್ಯದರ್ಶಿ ಅವರ ಮನೆಗೆ ಹೋಗಿದ್ದೆ. ಅವರು ನನಗೆ ತರ್ಡ್ ಐ ಪರವಾಗಿ ಒಂದು ಜಿಪೀಎಸ್ ಸಾಧನವನ್ನು ಉಡುಗೊರೆಯಾಗಿಕೊಟ್ಟರು. ಹವ್ಯಕ ಸಾಗರ ಸಂಸ್ಥೆಯವರು ಜೂನ್ ತಿಂಗಳಿನಲ್ಲಿ ಅವರ ಒಂದು ಕಾರ್ಯಕ್ರಮದಲ್ಲಿ ನನಗೆ ಸನ್ಮಾನ ಮಾಡಿದರು. ಇದಾದ ನಂತರ ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ವಿಪ್ರ ನೌಕರರ ಸಂಘದ ಒಂದು ಕಾರ್ಯಕ್ರಮವನ್ನು ನಂಜುಂಡಸ್ವಾಮಿಯವರು ನನ್ನಿಂದಲೇ ಉದ್ಘಾಟನೆ ಮಾಡಿಸಿದರು. ಕಣಜ ಯೋಜನೆಯವರು ಅದೇ ತಿಂಗಳಿನಲ್ಲಿ ಕನ್ನಡ ಈಸ್ಪೀಕ್ ತಂತ್ರಾಂಶಕ್ಕಾಗಿ ನಾನು ಮಾಡಿದ ಕೆಲಸಕ್ಕೆ ಒಂದು ಪ್ರಮಾಣಪತ್ರವನ್ನು ನೀಡಿದರು. ಇದಾದ ನಂತರ ಸುದರ್ಶನ ಅವರು ಕಣಜ ಯೋಜನೆಯ ಪರವಾಗಿ ನನ್ನನ್ನು ಸಮರ್ಥನಾಮ್ ಎಂಬ ಎನ್‌ಜೀಒ ದಲ್ಲಿ ಕನ್ನಡ ತಂತ್ರಾಂಶವನ್ನು ತೋರಿಸಲು ಕರೆದುಕೊಂಡು ಹೋಗಿದ್ದರು. ಇದೇ ತಿಂಗಳಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಅವರು ತಯಾರಿಸುತ್ತಿರುವ ಒಂದು ಕನ್ನಡ ತಂತ್ರಾಂಶದ ಪರೀಕ್ಷೆಗಾಗಿ ನನ್ನನ್ನು ಸುಮಾರು ಒಂದು ತಿಂಗಳುಗಳ ಕಾಲ ಕರೆಸಿಕೊಂಡರು. ಅಗಷ್ಟ್ ತಿಂಗಳಿನಲ್ಲಿ ಸೊರಬದಲ್ಲಿ ನಡೆದ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಒಂದು ಸನ್ಮಾನ ಮಾಡಿದರು. ಇದಕ್ಕಾಗಿ ನಾನು ಸೊರಬ ತಾಲ್ಲೂಕು ಸಾಹಿತ್ಯ ಪರಿಶತ್ತೂ, ಶಾಸಕ ಹಾಲಪ್ಪನವರು, ಹಾಗು ಪತ್ರಕರ್ತ ಮಿತ್ರರಾದ ಉಮೇಶ್ ಬಿಚ್ಚುಗತ್ತಿ, ಶ್ರೀಪಾದ ಬಿಚ್ಚುಗತ್ತಿ, ಹಾಗು ದಿನಕರ ಭಟ್ ಭಾವೆ, ಮತ್ತಿತರರಿಗೆ ಕೃತಜ್ಞ. ಬೇಳೂರು ಸುದರ್ಷನ ಅವರ ಜೊತೆ ಟಿವಿ೯ ರಲ್ಲಿ ‘ಕನ್ನಡ ದ ಕಣಜ’ ಎಂಬ ಒಂದು ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಇದರ ಜೊತೆಗೆ ಕನ್ನಡ ಓಸೀಆರ್ ತಂತ್ರಾಂಶ ತಯಾರಿಸುತ್ತಿರುವ ಮೈಸೂರಿನ ಪ್ರೊಫೆಸರ್ ಯೋಗಾನಂದ ಅವರನ್ನು ಸುದರ್ಶನ ಅವರು ಪರಿಚಯಿಸಿದರು. ಮೈಸೂರಿನಲ್ಲಿ ಡಾ|| ಪವನಜ ಅವರನ್ನು ಬೇಟಿಯಾಗುವ ಅವಕಾಶ ಸಿಕ್ಕಿತು. ಸಿದ್ಧಾಪುರದ ನನ್ನ ಹಳೆಯ ಶಾಲೆಯ ಸ್ಥಾಪಕರು ನನ್ನನ್ನು ಕರೆದು ನನಗೆ ಸನ್ಮಾನಿಸಿದರು. ಒಬ್ಬ ವ್ಯಕ್ತಿಗೆ ತಾನು ಓದಿದ ಹಳೆಯ ಶಾಲೆಯವರು ತನ್ನನ್ನು ಗುರುತಿಸುವುದಕ್ಕಿಂತಾ ದೊಡ್ಡ ಸೌಭಾಗ್ಯ ಇನ್ನೇನಿದೆ?!

ಇದೆಲ್ಲಾ ನಡೆಯುತ್ತಿರುವಂತೆ ಕಂಪ್ಯೂಟರಿನಲ್ಲಿ ಹೆಚ್ಚಿನದನ್ನು ಕಲಿಯ ಬೇಕೆಂಬ ನನ್ನ ಆಸಕ್ತಿ ಹೆಚ್ಚಾಯಿತು. ಕಂಪ್ಯೂಟರ್ ಪ್ರೋಗ್ರಾಮಿಂಗ್ ಲಾಂಗ್ವೇಜ್ (c c++ java) ಸರಿಯಾಗಿ ಕಲಿಯಲು ಪ್ರಯತ್ನ ಆರಂಭಿಸಿದೆ. ಈ ಸಮಯದಲ್ಲಿ ನನ್ನ ಸೋದರ ಮಾವ (ಸಂದೇಶ್) ಅವರು ಕೆಲವರನ್ನು ಬೇಟಿ ಮಾಡಿ ನನಗೆ ಅವಕಾಶವನ್ನು ಒದಗಿಸಿಕೊಟ್ಟರು. ಬೆಂಗಳೂರಿನ ಅವರ ಮನೆಯಲ್ಲಿಯೇ ನನಗೆ ಆಶ್ರಯ ಕೊಟ್ಟು ನನ್ನ ಕಂಪ್ಯೂಟರ್ ತರಗತಿಗಳಿಗೆ ಹೋಗಿ ಬರಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಅವರಿಗೆ ನಾನು ಚಿರಋಣಿ.

ಡಿಸೆಂಬರ್ ತಿಂಗಳಿನಲ್ಲಿ ಸಾಗರದ ಬಳಿಯ ಹೊಂಗಿರಣ ಶಾಲೆಯ ವಾರ್ಷಿಕೋತ್ಸವದ ವಿಜ್ಞಾನೋತ್ಸವದ ಸಮಾರೋಪ ಸಮಾರಂಭಕ್ಕೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಕರೆದಿದ್ದರು. ಇದಕ್ಕೆ ಕಾರಣ ಪೂರ್ಣಪ್ರಜ್ಞ ಬೇಳೂರುಅವರು. ಬೇಳೂರು ಸುದರ್ಶನ ಹಾಗು ಪೂರ್ಣಪ್ರಜ್ಞ ಬೇಳೂರು ಅವರುಗಳ ವೊತ್ತಾಯದ ಮೇರೆಗೆ ಡಾಕ್ಟ್ರ್ ಬಾತ್ರಾಸ್ ಪಾಸಿಟಿವ್ ಹೆಲ್ತ್ ಅವಾರ್ಡ್‌ಗೆ ಅರ್ಜಿ ಹಾಕಿದೆ. ಡಿಸೆಂಬರ್ ತಿಂಗಳಿನಲ್ಲಿ ಆ ಅವಾರ್ಡ್ ನನಗೆ ಸಿಕ್ಕಿತು.

ಈ ಲೇಖನದಲ್ಲಿ ನನಗೆ ಪ್ರೀತಿ ತೋರಿಸಿದ ಎಲ್ಲಾ ಸ್ನೇಹಿತರ/ಹಿರಿಯರ ಹೆಸರು ಹಾಕಲು ಸಾಧ್ಯವಾಗಿಲ್ಲ. ಅವರೆಲ್ಲರನ್ನೂ ಅದಕ್ಕಾಗಿ ಕ್ಷಮೆ ಕೇಳುತ್ತೇನೆ.

ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ, ನನಗೆ ವಿದ್ಯಾ ದಾನ ಮಾಡಿದ ಎಲ್ಲಾ ಗುರುಗಳಿಗೂ, ನನ್ನ ತಂದೆ-ತಾಯಿಯರಿಗೂ, ನನ್ನ ಮನೆಯ ಎಲ್ಲರಿಗೂ, ನನ್ನ ಸೋದರಮಾವ ಸಂದೇಶ್ ಅವರಿಗೂ, ನಿಮ್ಮೆಲ್ಲರಿಗೂ ಈ ಸಂದರ್ಬದಲ್ಲಿ ವಂದಿಸಬಯಸುತ್ತೇನೆ.

೨೦೧೧ ನನ್ನ ಪಾಲಿಗಂತೂ ಒಂದು ಮರೆಯಲಾಗದ ವರ್ಷ. ಈ ಲೇಖನವನ್ನು ಮುಗಿಸುವ ಮುನ್ನ ೨೦೧೧ ವರ್ಷಕ್ಕೆ ನನ್ನ ಅಂತಿಮ ನಮನ. ಹೊಸ ವರ್ಷ ೨೦೧೨ ನಮ್ಎಲ್ಲರ ಬಾಳಿಗೂ ಹರುಷದ ಸುಧೆ ಹರಿಸಲಿ ಎಂದು ಆಶಿಸುತ್ತೇನೆ.

ಮೂಲ: ಶ್ರೀಧರರ ಬ್ಲಾಗ್‌

Leave a Reply

Theme by Anders Norén