ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು

ಸಮಕಾಲೀನ ಸಂದರ್ಭದಲ್ಲಿ  ಕನ್ನಡಕ್ಕೆ ಅಗತ್ಯವಿರುವ ತಾಂತ್ರಿಕತೆಯ ಅರಿವು, ಪರಿಣತಿ ಇಲ್ಲದ ಸಂಸ್ಥೆ­ಯೊಂದು ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಬಳಸ­ದೆಯೇ ‘ಬಳಕೆಗೆ ಯೋಗ್ಯ’ ಎಂದು ಶಿಫಾರಸು ಮಾಡಿದರೆ ಆಗುವುದಿ­ನ್ನೇನು? ಅಂಧರಿಗಿದ್ದ ಅನುಕೂಲಗಳನ್ನೆಲ್ಲ ಸ್ಥಗಿತಗೊಳಿಸುವ ವಿಕೃತ ಬ್ರೈಲ್‌ ತಂತ್ರಾಂಶ; ಆಂಡ್ರಾಯ್ಡ್‌ ಗೊತ್ತಿರುವ ಪ್ರಾಥ­ಮಿಕ ಹಂತದವರೂ ಕೆಲ ತಾಸು­ಗಳಲ್ಲಿ  ರೂಪಿಸಬಹುದಾದ ಮೊಬೈಲ್‌ ಕೀಲಿಮಣೆ;  ಒಮ್ಮೆ ವಕ್ಕರಿಸಿದರೆ ಎಂದೆಂದೂ ಬೇರೆ ಫಾಂಟ್‌ಗಳನ್ನು ಬಳ­ಸಲು ಬಿಡದ ಕೀಲಿಮಣೆ ಎಂಜಿನ್‌ ಮತ್ತು ಪ್ರಸ್ತುತತೆ  ಕಳೆದುಕೊಂಡಿರುವ ಯೂನಿ­ಕೋಡ್‌ ಪರಿವರ್ತಕ!

ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ‘ಮಾರ್ಗದರ್ಶನ’ದ ಗೈರು: ಹಿರಿಯ ಸಾಹಿತಿಗಳಿರುವ ಈ ಸಮಿತಿ­ಯಲ್ಲಿ ಕೆಲವು ತಜ್ಞರೂ ಇದ್ದಾರೆ. ತಂತ್ರಾಂಶ­ಗಳು ಹೇಗಿರಬೇಕು ಎಂಬು­ದರಿಂದ ಹಿಡಿದು ತಂತ್ರಾಂಶ ತಯಾ­ರಕರ ತಾಂತ್ರಿಕ ಅರ್ಹತೆಯನ್ನು ಗಮನಿಸು­ವವರೆಗೆ, ಅವರು ತಂತ್ರಾಂಶ ರೂಪಿಸುವ ವಿವಿಧ ಹಂತಗಳಲ್ಲಿ ಸಲಹೆ ನೀಡು­ವು­ದಕ್ಕೆ, ಆಮೇಲೆ ತಂತ್ರಾಂಶ­ಗಳನ್ನು ದೃಢೀಕರಿಸುವುದಕ್ಕೆ, – ಹೀಗೆ ಎಲ್ಲ ಹಂತಗಳಲ್ಲೂ ಇದೊಂದೇ ಸಮಿತಿಯ ಅದೇ ತಜ್ಞರ ತಂಡ ಕೆಲಸ ಮಾಡಿದ್ದು ಸರಿಯೇ? ಈ ತಂತ್ರಾಂಶಗಳನ್ನು ಪರಿಶೀಲಿಸುವ ತಜ್ಞ, ಬಾಹ್ಯ ತಂಡವೇ ಈ ಪ್ರಕ್ರಿಯೆಯಲ್ಲಿ ಇರಲಿಲ್ಲ. ಇದು ಸಂಪೂರ್ಣ ಅವೈಜ್ಞಾನಿಕ ಮತ್ತು ಏಕ­ಪಕ್ಷೀಯ ನಡೆ. ನಿಷ್ಪ್ರಯೋಜಕ, ಅಂಧ­ವಿರೋಧಿ  ಬ್ರೈಲ್‌ ತಂತ್ರಾಂಶ, ಮೈಸೂ­ರಿನ ವಾಕ್‌ ಶ್ರವಣ ಸಂಸ್ಥೆ, ಅಧಿಕೃತವಾಗಿ  ದೃಢೀ­ಕರಿಸುವ ಮುನ್ನವೇ ಬಿಡುಗಡೆ ಆಗಿಹೋಗಿದೆ!

ಕನ್ನಡ ಸಮೂಹದ ಅರಿವಿನ ನಿರ್ಲಕ್ಷ್ಯ: ಕನ್ನಡ ತಂತ್ರಾಂಶದ ಕೆಲಸ­ವನ್ನು ಸಮಿತಿಯೊಳಗಿರುವ ತಂತ್ರಜ್ಞರೇ ಮಾಡ­­ಬೇಕೆಂದು ಎಲ್ಲೂ ಯಾರೂ ಹೇಳಿರ­ಲಿಲ್ಲ. ಆದರೆ ಸಮಿತಿಯಾಗಲೀ, ಸರ್ಕಾರ­ವಾಗಲೀ ಯುವ  ( ಉದಾ: ಲಿನಕ್ಸ್‌ ಗುಂಪು)  ಮತ್ತು ಅನುಭವಿ  ಕನ್ನಡ ತಂತ್ರಜ್ಞರ (ಉದಾ: ಕೆ.ಪಿ.­ರಾವ್‌)  ಸಮೂಹದ ನೆರವನ್ನು ಪಡೆ­ಯಲು ಮುಂದಾಗಲೇ ಇಲ್ಲ. ಕ್ಷಣ­ಕ್ಷಣಕ್ಕೂ ಬದಲಾಗುವ ತಂತ್ರಜ್ಞಾನ­ವನ್ನು ಒಳಗೊಳ್ಳಲೆಂದೇ ಈಗ ಬಳಕೆ­ಯಲ್ಲಿರುವ ‘ಕ್ರೌಡ್‌ಸೋರ್ಸಿಂಗ್‌’  ವಿಧಾನ­­ವನ್ನು ಎಲ್ಲರೂ ಜಾಣತನದಿಂದ ಮರೆತರು. ಸರ್ಕಾರಕ್ಕೆ ಇರುವ ತಾಂತ್ರಿಕ ತಜ್ಞತೆಯ ಕೊರತೆಯನ್ನು ಸಮಿತಿಯು ಸಮೂ­ಹದ ಸಕ್ರಿಯ ಭಾಗಿತ್ವದಿಂದ ನೀಗ­ಬಹು­ದಾಗಿತ್ತು. ಅದಾಗಲಿಲ್ಲ.

ಬಳಕೆಯ ಬೇಡಿಕೆ ಕಡೆಗಣನೆ: ಈಗ ಎಂತೆಂಥ ಹಳೆಯ ಫಾಂಟ್‌ಗಳಲ್ಲಿ ಇರುವ ಏನೆಲ್ಲ ದಾಖಲೆಗಳನ್ನು ಯೂನಿ­ಕೋಡ್‌ಗೆ ಪರಿವರ್ತಿಸಬೇಕಾದ ಅಗತ್ಯ­ವಿದೆ ಎಂಬ ಬೇಡಿಕೆಯ ಪ್ರಮಾಣವನ್ನು ಸಮಿತಿ­ಯಾಗಲೀ  ಸರ್ಕಾರವಾಗಲೀ ಅಂದಾ­ಜಿಸಲು ಹೋಗಿಲ್ಲ. ಹೊಸ ಫಾಂಟ್‌­ಗಳಿಗೆ ಹಲವು ಕನ್ನಡ ತಂತ್ರಾಂಶ­ಗಳಿಂದ ಪರಿವರ್ತಕಗಳು ಸಿಗುತ್ತಿವೆ. ಈಗ ಬಿಡುಗಡೆಯಾದ ಕೀಲಿಮಣೆಗಿಂತ ಸುಧಾರಿತ ಕನ್ನಡ ಎಂಜಿನ್‌ಗಳೇ ಇವೆ. ಹೀಗಿರು­ವಾಗ ಈ ಸಾಧನಗಳನ್ನು ಮತ್ತೆ ರೂಪಿ­ಸುವ ಅಗತ್ಯವೇ ಇರಲಿಲ್ಲ.

ಲಭ್ಯ ತಂತ್ರಜ್ಞಾನದ ಬಗ್ಗೆ ಗೊತ್ತಿದ್ದೂ ನಿರ್ಲಕ್ಷ್ಯ: ಮುದ್ರಿತ ಕನ್ನಡ ಪುಸ್ತಕಗಳನ್ನೇ ಯೂನಿ­ಕೋಡ್‌ನಲ್ಲಿ ಓದುವ ತಂತ್ರ­ಜ್ಞಾನವೇ (ಸಾಫ್ಟ್‌ ಓಸಿಆರ್‌)  ಹೆಚ್ಚೂಕಡಿಮೆ ಬಂದಿರುವಾಗ ಫಾಂಟ್‌ ಆಧಾ­ರಿತ ಪರಿವರ್ತಕದ ಅಗತ್ಯ ಏನಿತ್ತು? ಯೂನಿಕೋಡ್‌ ಅಕ್ಷರಗಳನ್ನೇ ಬ್ರೈಲ್‌ಗೆ ಪರಿ­ವರ್ತಿಸುವ ಸಾಧನ ಇದ್ದಾಗ, ೭೦ರ ದಶಕದ ಪ್ರೆಸ್‌ಗೆ ಅಗತ್ಯವಾದ ಕೀಲಿ­ಮಣೆ ಏಕೆ ಬೇಕಿತ್ತು? ಖಾಸಗಿ ತಂತ್ರಾಂಶ ತಯಾರಕರೇ ತಮ್ಮೆಲ್ಲ ಸಾಧನಗಳನ್ನು, ಫಾಂಟ್‌­ಗಳನ್ನು ಸರ್ಕಾರದ ಮೂಲಕ ಕನ್ನಡಿಗ­ರಿಗೆ ಉಚಿತವಾಗಿ ಕೊಡಲು ಮುಂದೆ ಬಂದರೂ ಸರ್ಕಾರ ಏಕೆ ಪರಿಗಣಿಸಲಿಲ್ಲ?

ಸಮಷ್ಟಿ ಪ್ರಜ್ಞೆಯ ಕೊರತೆ: ಈ ತಂತ್ರಾಂಶಗಳನ್ನೆಲ್ಲ ವಿಂಡೋಸ್‌ ೭ರಲ್ಲಿ ಮಾತ್ರ ಬಳಸಲೆಂದೇ ರೂಪಿಸಲಾಗಿದೆ. ಸರ್ಕಾರದ ಹೆಚ್ಚಿನಂಶ ಕಂಪ್ಯೂಟರ್‌ಗಳು ಹಳೆಯ ವಿಂಡೋಸ್‌ ಎಕ್ಸ್‌ಪಿಯಲ್ಲೇ ಕಾರ್ಯಾಚರಿಸುತ್ತಿವೆ. ಅಲ್ಲದೆ ಮುಕ್ತ ಆಪರೇಟಿಂಗ್‌ ಸೋರ್ಸ್‌ಗಳನ್ನು ಲೆಕ್ಕಕ್ಕೇ ಹಿಡಿದಿಲ್ಲ. ಇದು ಕಾರ್ಪೊರೇಟ್‌ ಪ್ರಭಾವ­ದಿಂದ ಸಮಿತಿ ಮತ್ತು ಸರ್ಕಾರ­ಗಳು ಹೊರತಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಅವೈಜ್ಞಾನಿಕ ಮಾರ್ಗ: ಬಿಡುಗಡೆ­ಯಾದ ಎಲ್ಲ ತಂತ್ರಾಂಶಗಳೂ ಈಗಾ­ಗಲೇ ಬಳಕೆಯಲ್ಲಿರುವ ಅಂಥದ್ದೇ ತಂತ್ರಾಂ­ಶ­ಗಳಿಗಿಂತ ಕಳಪೆಯಾಗಿವೆ ಎಂದರೆ  ಇಡೀ ಪ್ರಕ್ರಿಯೆಯೇ ದೋಷ­ಪೂರಿತ. ಅಲ್ಲದೆ ಫಾಂಟ್‌ನ ಸೌಂದ­ರ್ಯ­ದ ಬಗ್ಗೆ ಯಾವುದೇ ಅಧ್ಯಯನ, ದಾಖಲೀ­­ಕರಣವನ್ನೂ ಈ ಪ್ರಕ್ರಿಯೆ­ಯಲ್ಲಿ ಕಂಡಿಲ್ಲ.  ಬೇರೆ ಭಾಷೆಗಳಿಗೆ ಮಾದರಿ­­ಯಾಗುವಂತೆ ತಂತ್ರಾಂಶ ರಚನಾ ಪ್ರಕ್ರಿಯೆಗಳನ್ನು, ಮಾನದಂಡ­ಗ­ಳನ್ನು ರೂಪಿಸಬೇಕಾದ ನಾವು ಯಾವುದೇ ಪ್ರಕ್ರಿಯೆಯನ್ನೂ ದಾಖ­ಲಿಸದೆ,  ಮೊದಲು ತಂತ್ರಾಂಶವನ್ನು ಅನು­­ಮೋದಿಸಿ ಆಮೇಲೆ ವ್ಯಾಲಿಡೇಷನ್‌ ಪ್ರಕ್ರಿಯೆ ವರದಿಯನ್ನು ಸಲ್ಲಿಸಿದ್ದೇವೆ! ಬೀಟಾ ವರ್ಶನ್‌ ಎಂಬ ಹೆಸರು ಕೊಟ್ಟು ಅದ­­ಕ್ಕಿಂತ ಹಿಂದಿನ ಆವೃತ್ತಿಗಳ ಬಗ್ಗೆ ಉಸಿ­ರೆತ್ತು­ವುದಿಲ್ಲ! ತಂತ್ರಾಂಶ ಕುರಿತ ದೂರು­­ಗಳನ್ನು ಇ-ಮೇಲ್‌ ಮೂ­ಲಕ ಪಡೆಯುವವರೂ ಇದೇ ಸಂಸ್ಥೆ, ತಜ್ಞರೇ ಹೊರತು ಸರ್ಕಾರವಲ್ಲ! ಇಂಥ ಏಕ­ಪಕ್ಷೀಯ ಅನುಮೋದನಾ ವ್ಯವ­ಸ್ಥೆ­ಯ­ನ್ನು ಧಿಕ್ಕರಿಸಲೇಬೇಕಿದೆ.

ಕನ್ನಡ ತಂತ್ರಾಂಶಗಳನ್ನು ರೂಪಿಸಿದ ಪ್ರಕ್ರಿಯೆ­ಯು ನಾವೆಲ್ಲರೂ ಅವಮಾನ­ದಿಂದ ನಾಚಿಕೆ­ಪಟ್ಟು­ಕೊಳ್ಳು­ವಷ್ಟು ಅವೈ­ಜ್ಞಾ­ನಿಕ­­ವಾಗಿದೆ; ಸಾರ್ವಜನಿಕ ನಿಧಿಯ ಬೇಜ­ವಾಬ್ದಾರಿ ದುರ್ಬಳಕೆ­ಯಾಗಿದೆ. ಮುಖ್ಯವಾಗಿ ಕನ್ನಡಿಗರ ಸಮೂಹ­ದಲ್ಲೇ ಲಭ್ಯವಿರುವ, ವಿಶ್ವ­ಸ್ತರದ  ತಿಳಿವಳಿಕೆಗೆ ಮಾಡಿದ ಘೋರ ಅವ­ಮಾನವೂ ಆಗಿದೆ
(ರಿವರ್‌ಥಾಟ್ಸ್‌ ಮೀಡಿಯಾ ಸಂಸ್ಥೆಯನ್ನು ನಡೆಸುತ್ತಿರುವ ಲೇಖಕರು ಮುಕ್ತ ಮಾಹಿತಿ ಆಂದೋಲನದಲ್ಲಿ ಸಕ್ರಿಯರು ಮತ್ತು ಡೆಸ್ಕ್ ಟಾಪ್ ತಂತ್ರಾಂಶಗಳಲ್ಲಿ ಪರಿಣತರು.)

ಇದೇ ಪುಟದಲ್ಲಿ ಬಂದ ಇನ್ನಿತರೆ ಲೇಖನಗಳು ಇಲ್ಲಿವೆ:

 

20140201a_006100001 antarala converter 20140201a_006100002 mobile antarala R N Sridhar 20140201a_006100004 keyboard vasudhendra 20140201a_006100006 antarala sridhar Braille

ಅಪರಿವರ್ತನೀಯ ಪರಿವರ್ತಕ!  

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪರಿವರ್ತಕ ಅಥವಾ ಕನ್ವರ್ಟರ್ ತಂತ್ರಾಂಶಗಳು ವಿಂಡೋಸ್ ಬಳಕೆದಾರರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವಂತಿದೆ.

ಕನ್ನಡವನ್ನು ಲಿನಕ್ಸ್ ಮತ್ತು ಐ–ಓಎಸ್‌ನಲ್ಲಿ ಬಳಸುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಇದನ್ನೆಲ್ಲಾ ಮರೆತು ಇದನ್ನು ವಿಂಡೋಸ್‌ನಲ್ಲಿಯೇ ಬಳಸಲು ಹೊರಟರೂ ಈ ತಂತ್ರಾಂಶದ ಜೊತೆಗಿರುವ ಸಹಾಯ ಕಡತಗಳು ಯಾವ ಸಹಾಯವನ್ನೂ ಮಾಡುವುದಿಲ್ಲ. ದತ್ತ ನಿರ್ಮಾಣ ಎಂಬ ಆಯ್ಕೆ ಮೊದಲಿಗೆ ಈ ತಂತ್ರಾಂಶ ನೋಡುವವರನ್ನು ತಬ್ಬಿಬ್ಬುಗೊಳಿಸುತ್ತದೆ. GOK (Kuvempu NUDI Baraha) ಎಂಬ ಆಯ್ಕೆ ಬಳಸಿ, ನುಡಿ ಅಥವಾ ‘ಆಸ್ಕಿ’ಯಲ್ಲಿರುವ ಕಡತವನ್ನು ಯೂನಿಕೋಡ್‌ಗೆ ಪರಿವರ್ತಿಸಿ ಕೊಳ್ಳಬಹುದು ಎಂಬುದನ್ನು ಅರಿಯುವಲ್ಲಿ ಸುಸ್ತಾದರೂ, ಅದರ ಫಲಿತಾಂಶ ಮೊದಲ ಟೆಸ್ಟ್‌ನಲ್ಲಿ ಪಾಸ್ ಆಗಿದೆ. ಬ್ರೈಲ್ ಕನ್ವರ್ಟರ್ ಬಳಕೆ, ಅದನ್ನು ಬಳಸುವ ತಂತ್ರಾಂಶ ಇತ್ಯಾದಿಗಳ ಬಗ್ಗೆ ಉಲ್ಲೇಖಗಳಿಲ್ಲ, ಇವನ್ನು ಟೆಸ್ಟ್ ಮಾಡುವ ಅವಕಾಶ ಕೂಡ ಇಲ್ಲ.

ಪರೀಕ್ಷೆಗಾಗಿ ಕೊಟ್ಟಿರುವ ಮಾದರಿಗಳಲ್ಲಿ ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು ಇತ್ಯಾದಿಗಳನ್ನು ಬಳಸಿಲ್ಲವಾದ್ದರಿಂದ ಅವನ್ನು  ಪರೀಕ್ಷಿಸುವ ಸಾಧ್ಯತೆಗಳೇ ಇಲ್ಲ. ಇನ್ನು ಈ ಎಲ್ಲ ಸಾಫ್ಟ್‌ವೇರ್‌ಗಳನ್ನು ಹುಡುಕಿ ತಂದು ಇನ್‌ಸ್ಟಾಲ್ ಮಾಡಿಕೊಂಡು ಪರೀಕ್ಷೆ ಮಾಡಲು ಯಾರು ಸಿದ್ಧರಿರುತ್ತಾರೆ?

ಸಂರಕ್ಷಣ ಕಡತ (ನಿಮಗೆ ಸಿಗುವ ಫಲಿತಾಂಶವನ್ನು ಉಳಿಸಿಕೊಳ್ಳುವ ಫೈಲ್‌ನ ಹೆಸರು ಮತ್ತು ವಿಳಾಸ) ಇದರಲ್ಲಿ ಫೈಲ್ ಹೆಸರು ಜೊತೆಗೆ ಫೈಲ್ ಎಕ್ಸ್‌ಟೆನ್ಷನ್ ಕೊಡುವುದನ್ನು ಮರೆತರೆ ಆ ಕಡತಗಳನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಸಾಮಾನ್ಯನೊಬ್ಬ ಬಳಸುವ ತಂತ್ರಾಂಶ ಎಷ್ಟು ಚೊಕ್ಕ ಮತ್ತು ಸುಲಭವಾಗಿರಬೇಕು ಎಂದು ತಿಳಿಸುವ ವಿನ್ಯಾಸ ಸಂಬಂಧೀ ವಿಚಾರಗಳನ್ನು ಅಭಿವೃದ್ಧಿ ಮಾಡಿದ ತಂಡ ನಿರ್ಲಕ್ಷಿಸಿರುವುದಕ್ಕೆ ಇದು ಸಾಕ್ಷಿಯಾಗುತ್ತದೆ. ರಾಶಿ ರಾಶಿ ಕಡತಗಳು ಆಸ್ಕಿಯಲ್ಲಿ ಕೊಳೆಯುತ್ತಿರುವಾಗ ಒಂದೊಂದೇ ಫೈಲ್ ಬಳಸಿ ಕನ್ವರ್ಟ್ ಮಾಡುವಂತೆ ಮಾಡುವ ತಂತ್ರಾಂಶದ ಅವಶ್ಯಕತೆ ಮತ್ತು ಅದರ ಭವಿಷ್ಯದ ಬಗ್ಗೆ ಈಗಲೇ ಕೊರಗಿದೆ. ಹತ್ತಾರು ಕಡತಗಳನ್ನು ಒಟ್ಟಿಗೆ ಪಡೆದು, ಅವನ್ನು ಅದರ ಎಕ್ಸ್‌ಟೆನ್ಷನ್ ಅಥವಾ ಕಡತದ ಮಾಹಿತಿಗಳನ್ನು ಬಳಸಿ ಅರ್ಥಮಾಡಿಕೊಂಡು ಅವನ್ನು ಸುಲಭವಾಗಿ ಕನ್ವರ್ಟ್ ಮಾಡಿಕೊಡುವಂತೆ ಅಭಿವೃದ್ಧಿ ಪಡಿಸುವ ಸಾಧ್ಯತೆಯನ್ನು ಸರ್ಕಾರ ಮರೆತಿರುವಂತಿದೆ.

ಈ ತಂತ್ರಾಂಶ ಬಳಸಿ ಮೈಕ್ರೋಸಾಫ್ಟ್ ಆಫೀಸ್‌ಗೆ ಸಂಬಂಧಪಟ್ಟ ಕಡತಗಳನ್ನು ಮಾತ್ರ ಯೂನಿಕೋಡ್‌ಗೆ ಬದಲಾಯಿಸಬಹುದೇ ಹೊರತು ಡಿ.ಟಿ.ಪಿ ಆಪರೇಟರ್‌ಗಳು ಬಳಸುವ ಅಡೋಬಿಯ ತಂತ್ರಾಂಶಗಳಿಗೆ ಇದು ಪ್ರಯೋಜನಕ್ಕೆ ಬಾರದು.

(ಲೇಖಕರು ವಚನ ಸಂಚಯದ ರೂವಾರಿಗಳಲ್ಲೊಬ್ಬರು. ಐ.ಟಿ. ಉದ್ಯೋಗಿ)

ಹಿತಕರವಲ್ಲದ ‘ಕ್ಷೇಮ’

 

ಇಡೀ ತಂತ್ರಾಂಶ ವೃತ್ತಿಪರತೆಯ ಕೊರತೆಯಿಂದ ಅವಸರದಲ್ಲಿ ಅಭಿ­ವೃದ್ಧಿಪಡಿಸಿದಂತೆ ಕಾಣುತ್ತದೆ. ‘ಕ್ಷೇಮ’ ಕನ್ನಡ ಕೀ ಬೋರ್ಡ್ ಬಳಸಿ­ಕೊಂಡು ಪ್ರಕಾಶನದ ಕೆಲಸ ಮಾಡು­ವುದು ಬಹಳ ಕಷ್ಟ.

ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯ­ವಿರುವ ತಂತ್ರಾಂಶಗಳಿಗಿಂತಲೂ ಹೆಚ್ಚಿನ ಸೌಲಭ್ಯ­ವನ್ನು ಬಳಕೆದಾರರು ನಿರೀಕ್ಷಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸೌಕರ್ಯ­ಗಳ ಮಾತಂತಿರಲಿ, ಮೂಲ ಸೌಕರ್ಯಗಳೂ ಇಲ್ಲ.

ಕೀ ಬೋರ್ಡ್ ಚಾಲೂ ಮಾಡಿದ ಮೇಲೆ ಅದು ಕನ್ನಡ ಅಕ್ಷರಗಳನ್ನು ಮಾತ್ರ ಬಳಸಿಕೊಳ್ಳುವಂತೆ ಒತ್ತಾಯಿ­ಸುತ್ತದೆ. ಪ್ರಕಾಶನದ ಸಾಫ್ಟ್‌ವೇರ್‌­ಗಳಲ್ಲಿ ಇರುವ ಇಂಗ್ಲಿಷ್ ಆಯ್ಕೆಗಳನ್ನು ಹೇಗೆ ಪಡೆದುಕೊಳ್ಳಬೇಕೋ ತಿಳಿಯುವುದಿಲ್ಲ.

ಪ್ರಕಾಶನಕ್ಕೆ ಬಹುಮುಖ್ಯವಾಗಿ ಬೇಕಾದ ‘ಅಡೋಬಿ ಇನ್‌ಡಿಸೈನ್‌’ನಲ್ಲಿ ಒತ್ತಕ್ಷರಗಳನ್ನು ಬರೆಯಲು ಸಾಧ್ಯ­ವಾಗುವುದಿಲ್ಲ. ಕನ್ನಡದ ಅಂಕಿಗಳನ್ನು ಹೇಗೆ ಮೂಡಿಸಬೇಕೋ ಗೊತ್ತಾಗಲಿಲ್ಲ. ಯಾವುದೇ ರೀತಿಯ ಸಹಾಯದ ಕಡತಗಳೂ ಸರಿಯಾಗಿಲ್ಲ.

ಡೆವಲಪರ್‌ ಒಬ್ಬನ ಕಂಪ್ಯೂಟರಿನ ಅರೆಬೆಂದ ಕಡತಗಳನ್ನೇ ಬಳಕೆದಾರರಿಗೆ ಹಸಿಹಸಿಯಾಗಿ ಕೊಟ್ಟ ಹಾಗೆ ಭಾಸವಾ­ಗುತ್ತದೆ. ಕೆಲವು ಕಡತಗಳಲ್ಲಂತೂ ಯಾವುದೋ ಸಂಬಂಧವಿಲ್ಲದಂತಹ ಫಾಂಟ್‌ಗಳ ಹೆಸರುಗಳಿವೆ. ಹಳೆಯ ಆವೃತ್ತಿಯ ಕಡತಗಳು ಹಾಗೆ ಹಾಗೇ ಅಡಕಗೊಂಡಿವೆ. ಅಕ್ಷರವೇ ಮೂಡದ ಜಂಕ್‌ ಇರುವ ಕಡತಗಳು ಬಹಳಷ್ಟಿವೆ. ಉದಾಹರಣೆಯಾಗಿ ಕೊಟ್ಟ ಕೆಲವು ಕಡತಗಳ ಉದ್ದೇಶವೂ ತಿಳಿಯುವುದಿಲ್ಲ.

ಪವರ್‌ ಪಾಯಿಂಟ್ ಕಡತವೊಂದು ಇದೆಯಾದರೂ ಅದು ಯಾವುದೇ ಸಹಾಯವನ್ನು ಬಳಕೆದಾರರಿಗೆ ಕೊಡು­ವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಈ ತಂತ್ರಾಂಶದ ಹಕ್ಕುಗಳು ಹಾಸನದ ಕಂಪೆನಿಯೊಂದರ ಹೆಸರಿನಲ್ಲಿವೆ. ಇವು ಸರಕಾರಕ್ಕೆ ಸೇರಿದ್ದಲ್ಲವೇ? ಹಾಗಿದ್ದರೆ ನಾವು ಯಾವ ಧೈರ್ಯದಿಂದ ಇವನ್ನು ಬಳಸಲು ಪ್ರಾರಂಭಿಸಬೇಕು ಎಂದು ಭಯವಾಗುತ್ತದೆ.

ಇದಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಇನ್ನೂ ಒಂದೆರಡು ಕೋಟಿ ಹಣ ಬೇಕು ಎನ್ನುವ ಕೋರಿಕೆಯನ್ನೂ ಹಿರಿಯ ಸಾಹಿತಿಗಳೊಬ್ಬರು ಮಂಡಿಸಿ­ದ್ದಾರೆ. ಈ ತರಹದ ದೋಷಗಳಿಂದ ಕೂಡಿದ ತಂತ್ರಾಂಶ ಸೃಷ್ಟಿಸಲು ಇಷ್ಟೊಂದು ಹಣವಾದರೂ ಏಕೆ ಬೇಕು ಎಂಬುದು ತಿಳಿಯುವುದಿಲ್ಲ. ಮುತು­ವರ್ಜಿಯಿಂದ ಮಾಡಬೇಕಾದ ಸರ್ಕಾರದ ಕೆಲಸವೊಂದು ಬೇಕಾಬಿಟ್ಟಿ­ಯಾಗಿ ಮೂಡಿದೆಯೆಂದು ಬಹಳ ಬೇಸರವಾಗುತ್ತದೆ.

(ಲೇಖಕರು ಕಥೆಗಾರ, ಪ್ರಕಾಶಕ)

‘ತೊಡಕು’ ನಿವಾರಣೆಯಲ್ಲೇ ತೊಡಕು

 

ಕನ್ನಡ, ಕಂಪ್ಯೂಟರ್ ಜಗತ್ತಿನಲ್ಲಿ ಅನಾಥವಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿ ರಚಿಸಿತ್ತು. ಅದರ ಶಿಫಾರಸಿನ ಅನ್ವಯ ತಯಾರಿಸಿದ ತಂತ್ರಾಂಶಗಳ ಬೀಟಾ ಆವೃತ್ತಿಯನ್ನು ಸರ್ಕಾರ ಈಗ ಬಿಡುಗಡೆ ಮಾಡಿದೆ. ತಂತ್ರಜ್ಞಾನ ವಿಸ್ತರಿಸಿಕೊಳ್ಳುವ ವೇಗಕ್ಕೆ ಅನುಗುಣವಾದ ತಂತ್ರಾಂಶ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳದೇ ರೂಪುಗೊಂಡ ಈ ತಂತ್ರಾಂಶಗಳ ಪ್ರಯೋಜನದ ಬಗ್ಗೆಯೇ ಪ್ರಶ್ನೆಗಳೆದ್ದಿವೆ. ತೆರಿಗೆದಾರರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ ತಂತ್ರಾಂಶಗಳ ಇತಿಮಿತಿಗಳ ಬಗ್ಗೆ ತಜ್ಞ ಬಳಕೆದಾರರು ನಡೆಸಿರುವ ಸ್ವತಂತ್ರ ಮೌಲ್ಯಮಾಪನ ಇಲ್ಲಿದೆ.

ಕರ್ನಾಟಕ ಸರ್ಕಾರ ಇತ್ತೀಚೆಗೆ ಅಂಧರಿಗೆ ಉಪಯುಕ್ತವಾಗುವ ತಂತ್ರಾಂಶ ಬಿಡುಗಡೆ ಮಾಡಿದೆ ಎಂದು ತಿಳಿದಾಗ ಸಂತೋಷ­ಪಟ್ಟ­ವರಲ್ಲಿ ನಾನೂ ಒಬ್ಬ. ನಮ್ಮಂಥವರನ್ನೂ ಸರ್ಕಾರ ಗಮನದಲ್ಲಿಟ್ಟುಕೊಂಡಿದೆ ಎಂಬುದು ಈ ಸಂತೋಷಕ್ಕೆ ಕಾರಣ. ಆದರೆ ಇದನ್ನು ಡೌನ್‌­ಲೋಡ್ ಮಾಡಿಕೊಂಡು ಪರೀಕ್ಷಿಸಿದಾಗ ನಿರಾಶೆ­ಯಾ­ಯಿತು. ಇದು ಅಂಧರಿಗೆ ಅಗತ್ಯವಿರುವ ಕನಿಷ್ಠ ಸವಲತ್ತುಗಳ ಬಗ್ಗೆಯೂ ಗಮನಹರಿಸಿಲ್ಲ.

ಸರ್ಕಾರದ ಬ್ರೈಲ್ ತಂತ್ರಾಂಶದ ವಿಮರ್ಶೆಗೆ ಮುನ್ನ ಬ್ರೈಲ್ ಎಂದರೇನು ಎಂದು ನೋಡೋಣ. ೧೯ನೇ ಶತಮಾನದಲ್ಲಿ ಲೂಯಿ ಬ್ರೈಲ್ ಎಂಬ ಫ್ರಾನ್ಸ್‌ನ ಅಂಧ ವಿಜ್ಞಾನಿಯೊಬ್ಬರು ಬ್ರೈಲ್ ಲಿಪಿ­ಯನ್ನು ಕಂಡುಹಿಡಿದರು. ಈ ಲಿಪಿಯಲ್ಲಿ ದಪ್ಪ ಕಾಗ­­ದದ ಮೇಲೆ ಸ್ಪರ್ಶಾನುಭವಕ್ಕೆ ಬರುವ ಚುಕ್ಕೆ­ಗಳನ್ನು ಮೂಡಿಸಿ ತನ್ಮೂಲಕ ಅಕ್ಷರ ವಿನ್ಯಾಸ­ಗಳನ್ನು ರೂಪಿಸಲಾಗುತ್ತದೆ. ಲಂಬ ಕೋನದಲ್ಲಿ ಒಂದರ ಪಕ್ಕ ಒಂದು ೩–೩ ಚುಕ್ಕೆಗಳಿರುವ ಒಂದು ಬ್ರೈಲ್ ಸೆಲ್ (ಖಾನೆ) ಅನ್ನು ಒಂದು ಅಕ್ಷರ ಬರೆಯಲು ಬಳಸಲಾಗುತ್ತದೆ. ಈ ಆರು ಚುಕ್ಕೆಗಳ ಸಂಯೋನೆಯ ವಿವಿಧ ಮಾದರಿಗಳನ್ನು ಬಳಸಿ ಜಗ­ತ್ತಿನ ಎಲ್ಲಾ ಭಾಷೆಗಳನ್ನು ಬ್ರೈಲ್ ಲಿಪಿಯಲ್ಲಿ ಬರೆಯ­ಬಹುದು. ಈ ಆರು ಚುಕ್ಕೆಗಳಲ್ಲಿ ಒಟ್ಟು ೬೪ ವಿವಿಧ ‘combination’ ಗಳನ್ನು ಮಾಡ­ಬಹುದು. ಈ ಬಗೆಯ ಲಿಪಿಯನ್ನು ಬರೆಯಲು ಬ್ರೈಲ್ ಖಾನೆಗಳನ್ನು (cell)  ಒಳಗೊಂಡ ಪಾಟಿ­ಯಂತಹ ಬ್ರೈಲ್ ಬರೆಯುವ ಸಾಧನ ಲಭ್ಯವಿದೆ. ಇದಕ್ಕಾಗಿಯೇ ತಯಾರಿಸಿದ ಮೊಳೆಯಂಥ ಸಾಧನವನ್ನು ಬಳಸಿ ಕಾಗದದ ಮೇಲೆ ಚುಕ್ಕೆ­ಗಳನ್ನು ಮೂಡಿಸುವ ಮೂಲಕ ಬ್ರೈಲ್ ಬರೆಯ­ಲಾಗುತ್ತದೆ. ಇದೇ ಮಾದರಿಯನ್ನು ಅನುಸರಿಸಿ ಬ್ರೈಲ್ ಮುದ್ರಣ ಯಂತ್ರಗಳು ರೂಪುಗೊಂಡವು. ಅವುಗಳಲ್ಲಿ ಮೊಳೆಗಳನ್ನು ಜೋಡಿಸಿ ಬ್ರೈಲ್ ಮುದ್ರಣ ಮಾಡಲಾಗುತ್ತಿತ್ತು.

ಮಾಹಿತಿ ತಂತ್ರಜ್ಞಾನದಲ್ಲಿನ ಪ್ರಗತಿಯು ಬ್ರೈಲ್ ಮುದ್ರಣ ಯಂತ್ರಗಳನ್ನು ಗಣಕದಿಂದ ನಿಯಂತ್ರಿಸಿ ಬಳಸುವ ಅವಕಾಶವನ್ನು ಒದಗಿಸಿ­ಕೊಟ್ಟಿತು. ಹೀಗೆ, ಗಣಕದಲ್ಲಿ ಬ್ರೈಲ್ ಅಕ್ಷರ­ಗಳನ್ನು ಬೆರಳಚ್ಚಿಸುವ, ಹಾಗೂ ಬೆರಳಚ್ಚಿಸಿದ ಸಾಮಾನ್ಯ ಅಕ್ಷರಗಳನ್ನು ಬ್ರೈಲ್‌ಗೆ ಪರಿವರ್ತಿಸುವ ತಂತ್ರಾಂಶಗಳು ರೂಪುಗೊಳ್ಳುವ ಅವಕಾಶ ಉಂಟಾ­ಯಿತು. ಈ ಉದ್ದೇಶಕ್ಕಾಗಿ ರೂಪಿಸಲಾದ ತಂತ್ರಾಂಶವನ್ನೇ ಬ್ರೈಲ್ ತಂತ್ರಾಂಶ ಎನ್ನಬಹುದು. ಬ್ರೈಲ್ ತಂತ್ರಾಂಶವನ್ನು ಎರಡು ಭಾಗವಾಗಿ ವಿಂಗಡಿ­ಸೋಣ ಒಂದು ಸಾಮಾನ್ಯ ‘ASCII’ ಅಥವಾ ‘Unicode’ ಅಕ್ಷರಗಳಿಂದ ಬ್ರೈಲ್ ಅಕ್ಷರ­ಗಳಿಗೆ ಪರಿವರ್ತಿಸುವ ಪರಿವರ್ತಕ. ಮತ್ತೊಂದು ಬ್ರೈಲ್ ಲಿಪಿಯಲ್ಲಿಯೇ ಬೆರಳಚ್ಚು ಮಾಡುವ ವಿಶೇಷ ಕೀಲಿಮಣೆ ವಿನ್ಯಾಸ. ಕಂಪ್ಯೂಟರಿ­ನಲ್ಲಿರುವ ಕೀಲಿಮಣೆಯಲ್ಲಿನ ಆರು ಕೀಲಿ (f, d, s ಮತ್ತು l, k, j) ಹಾಗು ‘space bar’ ಗಳನ್ನು ಬ್ರೈಲ್ ಲಿಪಿ ಮೂಡಿಸಲು ಬಳಸ­ಲಾಗು­ತ್ತದೆ. ರಾಜ್ಯ ಸರ್ಕಾರ ಇಂಥದ್ದೇ ಒಂದು ಕೀಲಿಮಣೆ ತಂತ್ರಾಂಶವನ್ನು ಕನ್ನಡ ಬ್ರೈಲ್ ಬರವಣಿಗೆಗಾಗಿ ರೂಪಿಸಿದೆ.

ಅಂಧರು ಕಂಪ್ಯೂಟರ್ ಬಳಸುವುದಕ್ಕೆ ಬೇಕಿರುವ ಮತ್ತೊಂದು ಸವಲತ್ತು ಸ್ಕ್ರೀನ್ ರೀಡರ್. ಅಂದರೆ ಕಂಪ್ಯೂಟರ್  ಪರದೆಯ ಮೇಲೆ ಮೂಡುವ ಪಠ್ಯವನ್ನು ಓದಿ ಹೇಳುವ ತಂತ್ರಾಂಶ. ಈ ಕೆಲಸವನ್ನು ‘ಟೆಕ್ಸ್ಟ್ ಟು ಸ್ಪೀಚ್’ ಅಥವಾ ಪಠ್ಯವನ್ನು ಧ್ವನಿರೂಪಕ್ಕೆ ಪರಿವರ್ತಿಸುವ ತಂತ್ರಾಂಶ ಮಾಡುತ್ತದೆ. ವಿವಿಧ ಬಗೆಯ ಸ್ಕ್ರೀನ್ ರೀಡರ್‌­ಗಳು ಈಗ  ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ತಂತ್ರಾಂಶಗಳು ವಿಂಡೋಸ್, ಲಿನಕ್ಸ್,  ಆಂಡ್ರಾಯ್ಡ್, ಐಓಎಸ್ ಹೀಗೆ ಹೆಚ್ಚೂ ಕಡಿಮೆ ಎಲ್ಲಾ ಕಾರ್ಯಾಚರಣಾ ವ್ಯವಸ್ಥೆಗಳಿಗೂ ಲಭ್ಯ­ವಿವೆ. ಕಾರ್ಯಾಚರಣೆ ವ್ಯವಸ್ಥೆಯಲ್ಲಿನ ‘accessibility API’ ಎಂಬ ಸವಲತ್ತನ್ನು ಬಳಸಿ­ಕೊಂಡು ಈ ತಂತ್ರಾಂಶಗಳು ಕೆಲಸ ಮಾಡುತ್ತವೆ. ಈ ಸ್ಕ್ರೀನ್ ರೀಡರ್‌ಗಳನ್ನು ಬಳಸಿಕೊಂಡು ‘ವಿಡಿಯೊ’, ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಿಟ್ಟು ಉಳಿದ ಎಲ್ಲಾ ಕೆಲಸಗಳನ್ನೂ ಅಂಧರು ಸ್ವತಂತ್ರ­ವಾಗಿ ಮಾಡಬಹುದು.

ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿರುವ ಬ್ರೈಲ್ ತಂತ್ರಾಂಶದ ನಿಯಂತ್ರಕಗಳನ್ನು ಅಂಧರು ಬಳಸುವ ಸ್ಕ್ರೀನ್ ರೀಡರ್‌ಗಳು ಗುರುತಿಸುವುದಿಲ್ಲ. ಕಾರ್ಯಾ­ಚರಣೆ ವ್ಯವಸ್ಥೆಯಲ್ಲಿನ ‘Accessibility interface’ ನ ಜೊತೆ ಸಂಪರ್ಕ ಈ ತಂತ್ರಾಂಶಕ್ಕೆ ಸಾಧ್ಯವಾಗಿಲ್ಲ.  ಸ್ಕ್ರೀನ್ ರೀಡರ್ ಬಳಸುವ ಅಂಧರು ಸಾಮಾನ್ಯವಾಗಿ ಮೌಸ್ ಬಳಸುವುದಿಲ್ಲ, ಬದಲಾಗಿ ಎಲ್ಲಾ ಕೆಲಸ­ಗಳನ್ನೂ ಕೀಲಿಮಣೆಯ ನೆರವಿನಿಂದಲೇ ಮಾಡು­ತ್ತಾರೆ. ಈ ಕನ್ನಡ ಬ್ರೈಲ್ ತಂತ್ರಾಂಶವನ್ನು ನೋಡಿದರೆ, ಇದರ ತಯಾರಕರಿಗೆ ಅಂಧರು ಹೇಗೆ ಗಣಕವನ್ನು ಬಳಸುತ್ತಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲ ಎಂದು ತೋರುತ್ತದೆ. ಅಂಧರನ್ನೇ ಗಮನ­ದಲ್ಲಿಟ್ಟುಕೊಂಡು ರೂಪಿಸಿದ ಈ ತಂತ್ರಾಂಶ­ವನ್ನು ಅಂಧರೇ ಬಳಸಲು ಸಾಧ್ಯವಿಲ್ಲ ಎಂಬುದು ಹಾಸ್ಯಾಸ್ಪದವಲ್ಲವೇ?

ದುರಂತವೆಂದರೆ, ಈ ತಂತ್ರಾಂಶದ ಸಹಾಯಕ ಕಡತ­ವನ್ನೂ ಅಂಧರು ಬಳಸಲು ಸಾಧ್ಯವಿಲ್ಲ. ಕನ್ನಡ ಟೆಕ್ಸ್ಟ್ ಟು ಸ್ಪೀಚ್ (eSpeak) ಯೂನಿ­­ಕೋಡ್ ಕನ್ನಡ ಪಠ್ಯ­ವನ್ನು ಮಾತ್ರ ಓದುತ್ತದೆ. ಈ ತಂತ್ರಾಂ­ಶ­ದ ಸಹಾಯಕ ಕಡತವು ‘pdf’ ರೂಪ­ದ­ಲ್ಲಿದ್ದು, ಇದರಲ್ಲಿ ಯೂನಿಕೋಡ್ ಬಳಕೆ­ಯಾ­ಗಿಲ್ಲ.  ‘pdf’ ಕಡತ ಮಾದರಿ ಯುನಿ­ಕೋಡ್‌ ಅನ್ನು  ಬೆಂಬಲಿಸು­ವುದಿಲ್ಲ­ವಾಗಿದ್ದರೆ ಈ ಸಹಾ­ಯಕ ಕಡತವನ್ನು ‘HTML’ ಅಥವ ‘DOC’ ರೂಪದಲ್ಲಿ­ಯಾ­ದರೂ ನೀಡ­ಬಹು­ದಿತ್ತು.
ಈ ಎಲ್ಲಾ ಮಿತಿಗಳನ್ನು ಮುಂದೆ ಸರಿಪಡಿಸಬಹುದು ಎಂಬ ನಂಬಿಕೆ­ಯಿಟ್ಟು­ಕೊಂಡರೂ ಪ್ರಯೋಜನವಿಲ್ಲ. ಏಕೆಂದರೆ ರಾಜ್ಯ  ಸರ್ಕಾರ ರೂಪಿಸಿರುವ ಬ್ರೈಲ್ ಕೀಲಿಮಣೆ ವಿನ್ಯಾಸ­ವನ್ನು ಬಳಸುವವರು ಈಗ ತುಂಬಾ ಕಡಿಮೆ. ಈಗಿರುವ ಸ್ಥಿತಿಯಲ್ಲಿ ಈ ತಂತ್ರಾಂಶವನ್ನು ಅಂಧರು ಸ್ವತಂತ್ರವಾಗಿ ಚಾಲೂ ಮಾಡಲು ಬರುವುದಿಲ್ಲ. ಯಾರಾದರೂ ಇದನ್ನು ಚಾಲೂ ಮಾಡಿ­ಕೊಟ್ಟರೆ, ಇದರಲ್ಲಿ ಬ್ರೈಲ್ ಬೆರಳಚ್ಚು ಮಾಡಬಹುದು. ಕೆಲಸ ಮುಗಿದ ಮೇಲೆ ಅದನ್ನು ಉಳಿಸಿಟ್ಟುಕೊಳ್ಳಲು ಯಾರಾದರೂ ದೃಷ್ಟಿ ಇರುವವರ ಸಹಾಯ ಬೇಕು. ಹೀಗೆ ಬೇರೆಯವರ ನೆರವಿ­ನಿಂದ ಅಂಧರು ಬಳಸುವಾಗ ಬೆರಳಚ್ಚಿನಲ್ಲಿ ಆದ ತಪ್ಪನ್ನು ಸ್ವತಂತ್ರವಾಗಿ ತಿದ್ದಲು ಅಥವಾ ಪರಿ­ಶೀಲಿ­ಸಲು ಸಾಧ್ಯವೇ ಇಲ್ಲ. ಬೆರಳಚ್ಚಿಸುವಾಗ ಒಂದು ಧ್ವನಿಯು ಅಕ್ಷರಗಳನ್ನು ಉಚ್ಚರಿಸು­ತ್ತದೆ­ಯಾ­ದರೂ, ಅದು ಈಗಿನ ಕಾಲಕ್ಕೆ ಏನೂ ಅಲ್ಲ. ಸ್ಕ್ರೀನ್ ರೀಡರ್‌ಗಳ ಕಾಲದಲ್ಲಿ ಇದು ತೀರಾ ಕಡಿಮೆ.  ಇದರ ಬದಲು, ಒಂದು ಯೂನಿ­ಕೋಡ್‌­ನಿಂದ ಬ್ರೈಲ್‌ಗೆ ಪರಿವರ್ತಿಸುವ ಪರಿ­ವರ್ತಕ ಸಾಕಾಗಿತ್ತು. ಅದರ ನೆರವಿನಿಂದ ಅನೇಕ ಬ್ರೈಲ್ ಪುಸ್ತಕಗಳನ್ನು ಮುದ್ರಿಸಬಹುದಾಗಿತ್ತು. ಅಂಧರಿಗೆ ಕನ್ನಡ ಟೈಪಿಂಗ್ ಕಷ್ಟವೇನಲ್ಲ. ಕನ್ನಡ ಟೆಕ್ಸ್ಟ್ ಟು ಸ್ಪೀಚ್ ಬಳಸಿ, ಕನ್ನಡ ಯೂನಿ­ಕೋಡ್‌­ನಲ್ಲಿ ಬೆರಳಚ್ಚು ಮಾಡಿ ನಾಗರಾಜ್ ಎಂಬ ಅಂಧ ವಿದ್ಯಾರ್ಥಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತ­ಕೋತ್ತರ ಪರೀಕ್ಷೆಯಲ್ಲಿ ರ್‍ಯಾಂಕ್‌ ಪಡೆದಿದ್ದಾರೆ.

ಜಗತ್ತಿನ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ತಮ್ಮ ಎಲ್ಲಾ ಜಾಲತಾಣ ಹಾಗೂ ತಂತ್ರಾಂಶ­ಗಳನ್ನು accessible ಆಗಿ ಮಾಡಲು ಒಂದೊಂದು accessibility ತಂಡಗಳನ್ನೇ ರಚಿಸಿ­ಕೊಂಡಿವೆ. ಖಾಸಗಿ ಕಂಪೆನಿಗಳ ಈ ಕೆಲಸವನ್ನು ನೋಡಿ, ಸರ್ಕಾರವು ತನ್ನ ತಂತ್ರಾಂಶ ಹಾಗೂ ಜಾಲ­ತಾಣಗಳನ್ನು accessible  ಮಾಡುವ ನಿಟ್ಟಿನಲ್ಲಿ ಗಮನ ನೀಡುವುದು ಉತ್ತಮ. ಸರ್ಕಾರ ಈಗ ಬಿಡುಗಡೆ ಮಾಡಿರುವ ಬ್ರೈಲ್ ತಂತ್ರಾಂಶದಂಥ ತಂತ್ರಾಂಶಗಳು ೬-೭ ವರ್ಷ­ಗಳಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಲ್ಲದೇ, ಇದೇ ಬಗೆಯ ತಂತ್ರಾಂಶವನ್ನು (ಎಲ್ಲಾ ಭಾರತೀಯ ಭಾಷೆಗಳಿಗೂ) ೫-೬ ವರ್ಷಗಳ ಹಿಂದೆಯೇ, ಒಂದು ಎಂಜಿನಿಯರಿಂಗ್ ಪ್ರಾಜೆಕ್ಟ್ ಆಗಿ ತಯಾರಿಸಿದ್ದರು. ಈ ಎಲ್ಲಾ ಕಾರಣಗಳಿಂದ ಸರ್ಕಾರ, ಬಿಡುಗಡೆ ಮಾಡಿರುವ ಈ ಬ್ರೈಲ್ ತಂತ್ರಾಂಶವು ನಿಷ್ಪ್ರಯೋಜಕ ಎನಿಸುತ್ತದೆ.

accessibility ಎಂದರೇನು?
ಸಾಫ್ಟ್‌ವೇರ್ ಅಥವಾ ವೆಬ್ accessibility ಎಂದರೆ, ದೈಹಿಕ ನ್ಯೂನತೆ­ಗಳನ್ನು ಹೊಂದಿರುವವರಿಗೂ  ಸಾಫ್ಟ್‌­ವೇರ್  ಮತ್ತು ವೆಬ್ ಸೈಟ್‌ಗಳನ್ನು ಬಳಸಲು ತೊಡಕಾ­ಗದಂತೆ ಮಾಡುವುದು. ಅಂದರೆ, ಅವರು ಬಳ­ಸುವ ವಿಶೇಷ ತಂತ್ರಾಂಶಗಳಾದ ಉದಾ: ಸ್ಕ್ರೀನ್ ರೀಡರ್ ಅಥವಾ ಆನ್-ಸ್ಕ್ರೀನ್ ಕೀಬೋರ್ಡ್ ಇತ್ಯಾದಿ; ಬಳಸಿದಾಗಲೂ ಅವರು ಸಮಸ್ಯೆಗಳಿಗೆ ಒಳಗಾಗದಂತೆ ಸಾಫ್ಟ್‌­ವೇರ್  ಅಥವಾ ವೆಬ್‌ಸೈಟ್ ಬಳಸುವಂತೆ ಮಾಡು­ವುದು. ಹೆಚ್ಚಿನ ಎಲ್ಲಾ ಕಾರ್ಯಾ­ಚರಣಾ ವ್ಯವಸ್ಥೆಗಳಲ್ಲಿಯೂ ‘accessibility application interface’ ಎಂಬ ತಂತ್ರಾಂಶ ಇದ್ದೇ ಇರುತ್ತದೆ. ಇದು ವಿಶೇಷ ಅಗತ್ಯ­ಗಳಿರುವವರು ಬಳಸುವ ತಂತ್ರಾಂಶ ಹಾಗೂ ಕಾರ್ಯಾಚರಣಾ ವ್ಯವಸ್ಥೆಯ ಮಧ್ಯೆ ಸಂಪರ್ಕ ಮಾಧ್ಯಮ­ವಾಗಿ ಕೆಲಸ ಮಾಡುತ್ತದೆ.

ಯಾವುದೇ ತಂತ್ರಾಂಶವನ್ನು ಬಳಸುವಾಗ, ಅದರಲ್ಲಿ ಯಾವುದಾದರೂ ಕಾರ್ಯ ನಡೆದರೆ, ಉದಾ: ಒಂದು ಬಟನ್ ಕ್ಲಿಕ್ ಮಾಡಿ­ದರೆ ಅಥವಾ ಪಠ್ಯವನ್ನು ನಮೂದಿಸಿದರೆ, ಒಂದು ‘event’ ಉಂಟಾಗುತ್ತದೆ. ಅದು ಕಾರ್ಯಾ­ಚರಣಾ ವ್ಯವಸ್ಥೆಗೆ ಯಾವ ಕೆಲಸ ನಡೆ­ದಿದೆ ಎಂಬ ಸಂದೇಶವನ್ನು ರವಾನಿಸುತ್ತದೆ. ಈ ‘event’ಗಳನ್ನು ಬಳಸಿಕೊಂಡು ಈ ‘accessibility API’ ವಿಶೇಷ ತಂತ್ರಾಂಶಗಳಿಗೆ ಸಂದೇಶ ನೀಡುತ್ತದೆ. ಯಾವುದೇ ತಂತ್ರಾಂಶವನ್ನು ತಯಾರಿಸುವ ಹೊತ್ತಿನಲ್ಲಿ ಅಂದರೆ ತಂತ್ರಾಂಶಕ್ಕೆ ಸಂಕೇತ­ಗಳನ್ನು (coding) ಬರೆಯುವ ಹೊತ್ತಿನಲ್ಲಿ, ‘acces­sible’ ‘property’ಯನ್ನು ಸೂಚಿಸ­ಬೇಕಾಗುತ್ತದೆ.

ಹೆಚ್ಚಿನ ಎಲ್ಲಾ ‘Programming language’ ಗಳಲ್ಲಿ ಎಲ್ಲ ‘class’ ಹಾಗೂ ‘interface’ ಗಳಿಗೂ ಈ ‘accessible’ ‘property’ ಯನ್ನು ಸೂಚಿಸ­ಬಹುದು. ತಂತ್ರಾಂಶ ಅಭಿವೃದ್ಧಿಗಾರರೂ  ಈ ಅಂಶ­ವನ್ನು ನೆನಪಿನಲ್ಲಿಟ್ಟುಕೊಂಡಿದ್ದರೆ ದೃಷ್ಟಿ­ವಂಚಿತ ಹಾಗೂ ಇತರೆ ಅಂಗವಿಕಲರಿಗೆ ತಂತ್ರಾಂಶದ ಬಳಕೆಯಲ್ಲಿನ ತೊಡಕನ್ನು ನಿವಾರಿಸಬಹುದು.

(ಲೇಖಕರು ಇ– -ಸ್ಪೀಕ್‌ ಎಂಬ ಪಠ್ಯವನ್ನು ಓದುವ ಬಹುಭಾಷಾ ತಂತ್ರಾಂಶದ ಕನ್ನಡ ಭಾಗವನ್ನು ರೂಪಿಸಿಕೊಟ್ಟ ಯುವತಂತ್ರಜ್ಞ.  ಸಂಪೂರ್ಣ ದೃಷ್ಟಿಸವಾಲನ್ನು ಗೆದ್ದಿರುವ  ಜೀವನೋತ್ಸಾಹಿ)

 

ಮೊಬೈಲ್‌: ಕನ್ನಡ ವ್ಯಾಪ್ತಿ ಪ್ರದೇಶದಲ್ಲಿಲ್ಲ!

ಆಂಡ್ರಾಯ್ಡ್‌ ಕನ್ನಡವನ್ನು ಸಂಪೂರ್ಣವಾಗಿ ಬೆಂಬಲಿ­ಸುತ್ತಿ­ರುವ ಹೊತ್ತಿ­ನಲ್ಲಿ ಕರ್ನಾಟಕ ಸರ್ಕಾರ ಆಂಡ್ರಾಯ್ಡ್ ಫೋನುಗಳಿಗಾಗಿ ಕನ್ನಡ ತಂತ್ರಾಂಶ­ವೊಂದನ್ನು ಬಿಡುಗಡೆ ಮಾಡಿದೆ. ಹಳೆಯ ಆವೃತ್ತಿಗಳಲ್ಲಿ ಕನ್ನಡ ಬೆಂಬಲವಿಲ್ಲದೇ ಇರುವು­ದರಿಂದ ಇದು ಒಳ್ಳೆಯದೇ ಎಂದು ಭಾವಿಸಿದರೆ ತಪ್ಪಾಗಿ­ಬಿಡುತ್ತದೆ. ಏಕೆಂದರೆ ಈ ಕೆಲಸ ಮಾಡು­ವುದಕ್ಕೆ ಸಾಮಾನ್ಯರಿಗೆ ಸಾಧ್ಯವಿಲ್ಲ. ಇದಕ್ಕೆ ಫೋನನ್ನು ರೂಟ್ ಮಾಡುವ ಧೈರ್ಯ ಬೇಕಾಗುತ್ತದೆ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಫೋನ್ ಹಾಳಾದರೆ ಅಥವಾ ಅದರ ವಾರಂಟಿ ಇಲ್ಲವಾಗುವಂಥ ಸ್ಥಿತಿ ಉದ್ಭ­ವಿಸಿ­ದರೆ ಅದಕ್ಕೆ ಕನ್ನಡ ತಂತ್ರಾಂಶವನ್ನು ತಯಾರಿಸಿದವರು ಅಥವಾ ಅದನ್ನು ವಿತರಿ­ಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಣೆಯಲ್ಲ!

ಆಂಡ್ರಾಯ್ಡ್ ಫೋನುಗಳಿಗೆ ಅಭಿವೃದ್ಧಿ­ಪಡಿಸಲಾಗುವ ಆ್ಯಪ್‌ಗಳನ್ನು ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿ­ರು­ವಂತೆ ನೋಡಿಕೊಳ್ಳ­ಲಾಗು­ತ್ತದೆ. ಅಲ್ಲಿಂದ ಡೌನ್‌ಲೋಡ್ ಮಾಡಿ­ಕೊಂಡು ಬಳಸುವುದು ಬಳಕೆದಾರರಿಗೆ ಸುಲಭ. ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆ­ಗಾಗಲೀ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದವರಿಗಾಗಲೀ ಈ ಮೂಲ­ಭೂತ ವಿಷಯ ಯಾಕೆ ತಿಳಿದಿಲ್ಲ ಎಂಬುದು ಅರ್ಥವಾಗುವುದಿಲ್ಲ. ಸಹಾಯದ ಕಡತಗಳಲ್ಲಿ ವಿವರಿಸಿದಂತೆ ಆಂಡ್ರಾಯ್ಡ್ 2.3.4­ಗಿಂತ ಮೇಲಿನ ಆವೃತ್ತಿ­­ಯಲ್ಲಿ ‘ಇನ್‌ಸ್ಟಾಲ್‌’ ಮಾಡಿದರೆ  ಕನ್ನಡ ಬಳಸುವುದಕ್ಕೆ ಅನು­ಕೂಲ­ಕರ­ವೇನೂ ಅಲ್ಲ. ಇದು ಕನಿಷ್ಠ, ಕನ್ನಡ ಅಕ್ಷರಗಳನ್ನು ಮೂಡಿಸುವುದೂ ಇಲ್ಲ. ಈಗಾಗಲೇ ಸಂಪೂರ್ಣ ಕನ್ನಡ ಬೆಂಬಲವಿರುವ ಫೋನ್‌ಗಳಲ್ಲೂ ಇದು ಸರಿ­ಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಎಂಬುದು ಇದರ ಮತ್ತೊಂದು ತಮಾಷೆ.

ಇಷ್ಟಕ್ಕೂ ಈ ತಂತ್ರಾಂಶದ ಉದ್ದೇಶ­ವೇನು ಎಂಬುದು ಸ್ಪಷ್ಟವಾಗು­ವುದಿಲ್ಲ. ಆಂಡ್ರಾಯ್ಡ್‌­ನಲ್ಲಿ ಕನ್ನಡ ಬಳಸಬೇಕೆನ್ನುವವರಿಗೆ ಈಗಾಗಲೇ ಆರಕ್ಕೂ ಹೆಚ್ಚು ಆಯ್ಕೆಗಳಿವೆ. ಇವು ಕನ್ನಡ ಬರೆಯಲು ಬಳಸುವ ಎಲ್ಲಾ ಪ್ರಮುಖ ಕೀಲಿಮಣೆ ಮಾದರಿಗಳನ್ನೂ ಒದಗಿಸು­ತ್ತಿವೆ. ಅಷ್ಟೇ ಅಲ್ಲ, ಕನ್ನಡ ಅಕ್ಷರಗಳನ್ನು ಸರಿಯಾಗಿ ಮೂಡಿಸು­ತ್ತಲೂ ಇವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವು­ಗಳನ್ನು ಇನ್‌ಸ್ಟಾಲ್‌ ಮಾಡಲು ಯಾವ ಸರ್ಕಸ್‌ನ ಅಗತ್ಯವೂ ಇಲ್ಲ. ಗೂಗಲ್ ಪ್ಲೇ ಸ್ಟೋರ್‌ನಿಂದ ನೇರ­ವಾಗಿ ಫೋನ್‌ಗೆ ಡೌನ್‌­ಲೋಡ್ ಮಾಡಿ­ಕೊಂಡು ಬಳಸಲು ಆರಂಭಿಸಬಹುದು.

ಸರ್ಕಾರ ಒದಗಿಸುವ ತಂತ್ರಾಂಶ ಹೇಗಿದೆ ಎಂಬುದಕ್ಕೆ ಈ ಬರಹದ ಜೊತೆ­ಗಿರುವ ಚಿತ್ರವನ್ನು ಗಮನಿಸಿದರೆ ಸಾಕಾಗುತ್ತದೆ. ಆಂಡ್ರಾಯ್ಡ್ ಇಲ್ಲಿ ಆ್ಯಂಡ್ ರೈಡ್ ಆಗಿದೆ. ಕನ್ನಡ ನೋಟ್ ಎಂಬು­ದನ್ನು ಧ್ವನಿಸುವ ಇಂಗ್ಲಿಷ್‌ನ KAN NOTE ಇಲ್ಲಿ ‘ಕಾನ್ ನೋಟ್’. ಇದೆಲ್ಲಾ ಏನು? ಇದರಲ್ಲಿ ಒದಗಿಸ­ಲಾಗಿರುವ ಕೀಲಿಮಣೆ­ಯಲ್ಲಿ ಕನ್ನಡ ಅಂಕಿಗಳು ಇಲ್ಲವೇ ಇಲ್ಲ. ಬಹು­ಕಾಲದ ಹಿಂದೆಯೇ ಬಿಡುಗಡೆಯಾಗಿದ್ದ ಕನ್ನಡ ಕೀಲಿಮಣೆಯೊಂದರ ನಕಲಿನಂತೆ ಇದು ಕಾಣಿಸು­ತ್ತ­ದೆಯೇ ಹೊರತು ಈ ಕಾಲಕ್ಕೆ ಅಗತ್ಯವಿರುವ ಯಾವುದೂ ಇದರಲ್ಲಿಲ್ಲ.

ಇದೇಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇಲ್ಲ ಎಂಬುದಕ್ಕೆ ಊಹಿಸಬಹುದಾದ ಉತ್ತರ­ವೊಂದಿದೆ. ಇದು ಗೂಗಲ್ ಪ್ಲೇ ಸ್ಟೋರ್ ಸ್ವೀಕರಿ­ಸಬಹುದಾದ ಗುಣ­ಮಟ್ಟದ ಕಿರುತಂತ್ರಾಂಶ­ವಲ್ಲ. ಸರ್ಕಾರ ಇಂಥ ತಂತ್ರಾಂಶಗಳನ್ನು ಅಭಿವೃದ್ಧಿ­ಪಡಿಸುವಾಗ ಈ ಬಗೆಯ ಮೂಲ­ಭೂತ ವಿಚಾರ­ಗಳನ್ನು ಏಕೆ ಗಮನಿಸಿಲ್ಲ ಎಂಬುದು ಯಕ್ಷ ಪ್ರಶ್ನೆ.

(ಲೇಖಕರು: ಆಂಡ್ರಾಯ್ಡ್ ಮೊಬೈಲ್ ಕಿರುತಂತ್ರಾಂಶ ತಜ್ಞ)

 

ಸೌಜನ್ಯ: ಪ್ರಜಾವಾಣಿ

Leave a Reply

Theme by Anders Norén