ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್

ಈ ಬೆಂಗಳೂರು ನಗರದ ಬಗ್ಗೆ ಯಾವುದೇ ಅನುಕಂಪವನ್ನೂ ಇಟ್ಟುಕೊಳ್ಳಬಾರದು; ಅದರ ಬಗ್ಗೆ ಯಾವುದೇ ಲೇಖನವನ್ನು ಬರೆಯಬಾರದು ಎಂದು ನಾನು ಎರಡು ವರ್ಷಗಳ ಹಿಂದೆ ಮಾಡಿಕೊಂಡಿದ್ದ ಸ್ವಯಂನಿರ್ಧಾರವನ್ನು ಮುರಿದು ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೆಯ ಲೇಖನವನ್ನು ಬರೆಯುತ್ತಿದ್ದೇನೆ. ಪದೇ ಪದೇ ಬೆಂಗಳೂರಿನ ತೊಂದರೆ ತಾಪತ್ರಯಗಳ ಬಗ್ಗೆ ದಿನಪತ್ರಿಕೆಗಳಲ್ಲಿ ಸುದ್ದಿಗಳನ್ನು, ಛಾಯಾಚಿತ್ರಗಳನ್ನು ನಿಮ್ಮಲ್ಲಿ ಬಹಳಷ್ಟು ಜನ ನೋಡಿರುತ್ತೀರಿ. ಹಲವು ಕಾಲಮಿಷ್ಟುಗಳು ಒಳ್ಳೆ ವಿಷಯ ಸಿಗದಿದ್ದಾಗೆಲ್ಲ ಬೆಂಗಳೂರಿನ ಸಮಸ್ಯೆಯನ್ನು ಎತ್ತಿಕೊಂಡು ಬರೆದಿದ್ದೂ ಇದೆ. ತಪ್ಪೇನಲ್ಲ. ಕೋಟಿ ತಲುಪುತ್ತಿರುವ ಜನಸಂಖ್ಯೆಯ ಈ ಮಹಾನ`ಗರ’ದ ಬಗ್ಗೆ ಬರೆದಷ್ಟೂ ಇದೆ.

ನಗರಗಳು ಹಳ್ಳಿಗಳನ್ನು ತಿಂದುಬಿಡುತ್ತವೆ ಎಂಬುದು ನಾನು ಬೆಂಗಳೂರನ್ನು ಪ್ರೀತಿಸದ ಬಗ್ಗೆ ಇರುವ ಒಂದು ಕಾರಣ. ‘ಉದಯವಾಣಿ’ಗಾಗಿ ಬೆಂಗಳೂರು ತಿಂದ ಇಂಥ ಒಂದು ಹಳ್ಳಿಯ ಬಗ್ಗೆ ಲೇಖನವನ್ನು ಬರೆದಾಗ (ಕೆ ಬ್ಲಾಕ್ ಎಂದರೆ ಕೇತಮಾರನಹಳ್ಳಿ) ನನಗೆ ಇನ್ನೆಂದೂ ಬೆಂಗಳೂರು ನಗರದ ಬಗ್ಗೆ ಕನಿಕರ ಇಟ್ಟುಕೊಳ್ಳಬಾರದು ಎನ್ನಿಸಿತು. ನಿನ್ನೆ ತಾನೇ ದೊಡ್ಡಮಾವಳ್ಳಿ, ಸಾರಕ್ಕಿ ಗ್ರಾಮದೇವತೆಗಳ ಉತ್ಸವದ ಫ್ಲೆಕ್ಸ್‌ಗಳನ್ನು ನೋಡಿದ ಮೇಲೆ ನನ್ನ ಕಟುಕತನ ಇನ್ನೂ ಹೆಚ್ಚಿತು. ಆಮೇಲೆ ಬಿಟಿಎಂ ಲೇಔಟ್‌ನಿಂದ ವಿದ್ಯಾರಣ್ಯಪುರಕ್ಕೆ ನಗರದ ಮಾರ್ಗವಾಗಿ, ವಾಪಸ್ ಬರುವಾಗ ರಿಂಗ್ ರಸ್ತೆಯ ಮೇಲೆ ಬಂದು ಮೈಯೆಲ್ಲ ಟೆನ್ಶನ್ ಹಬ್ಬಿದಾಗ, ಅಲ್ಲಲ್ಲಿ ಕುರಗಳಂತೆ ಮೇಲೆದ್ದ ಚಿತ್ರವಿಚಿತ್ರ ಕಾಂಕ್ರೀಟ್ ರಚನೆಗಳನ್ನು ನೋಡಿದಾಗ, ನಿರೀಕ್ಷಿಸದೇ ಇದ್ದ ಜಾಗದಲ್ಲಿ ಹಠಾತ್ತಾಗಿ ಗುಂಡಿಗಳನ್ನು ಹಾರಿದಾಗ, – ನಾನೂ ಯಾಕೆ ಬೆಂಗಳೂರು ಬಗ್ಗೆ ಲೇಖನ ಬರೆಯಬಾರದು ಅನ್ನಿಸಿದೆ; ಅಲ್ಲದೆ ನನ್ನ ಪ್ರವಾಸದಲ್ಲಿ ಪಶ್ಚಿಮ ಘಟ್ಟದ ನಿವಾಸಿಗಳು ಬೆಂಗಳೂರಿನ ಬಗ್ಗೆ ಹೇಳಿದ ಮಾತುಗಳನ್ನು ಕೇಳಿದಾಗ ಕೂಡ ಅವರ ಕೋಟ್‌ಗಳೇ ಒಂದು ಲೇಖನವಾಗಬಹುದು ಅನ್ನಿಸಿತ್ತು. ಈ ಲೇಖನ ನನ್ನೆಲ್ಲ ಬ್ಲಾಗ್‌ಗಳಿಗಿಂತ ತುಸು ದೊಡ್ಡದು; ಆದರೆ ಬೆಂಗಳೂರಿನಂತೆ ಮಹಾರಾಕ್ಷಸನಲ್ಲ!

ಇವತ್ತಷ್ಟೇ ಬೆಂಗಳೂರು ನಗರ ಆಯುಕ್ತ ಸುಬ್ರಹ್ಮಣ್ಯಂರವರು ತಮ್ಮ ವಿರುದ್ಧ ಲೋಕಾಯುಕ್ತರು ವಿನಾಕಾರಣ ಆರೋಪ ಮಾಡಿದ್ದಾರೆ ಎಂದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇವತ್ತು ಬೆಂಗಳೂರಿನಲ್ಲಿ ನಡೆಯುತ್ತಿರುವ ಎಲ್ಲ ಕಾಂಕ್ರೀಟ್ ರಸ್ತೆ, ಅಂಡರ್‌ಪಾಸ್, ಓವರ್‌ಬ್ರಿಜ್, ಫ್ಲೈ ಓವರ್, ಸಬ್‌ವೇ, ಮ್ಯಾಜಿಕ್ ಬಾಕ್ಸ್ ಕಾಮಗಾರಿಗಳೂ ಸುಬ್ರಹ್ಮಣ್ಯರವರ ನೇರ ವ್ಯಾಪ್ತಿಯಲ್ಲಿ ಬರುತ್ತವೆ. ಇವತ್ತಷ್ಟೇ ಇನ್ನೂ ಎಷ್ಟೋ ಫ್ಲೈ ಓವರ್‌ಗಳಿಗೆ ಅನುಮೋದನೆ ಸಿಕ್ಕಿದೆ ಎಂದು ಅವರೇ ಪ್ರಕಟಿಸಿದ್ದಾರೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಅಡ್ಡಾತಿಡ್ಡಿಯಾಗಿ ಕಟೆದ ಮ್ಯಾಜಿಕ್ ಬಾಕ್ಸ್‌ಗಳಿಂದಾಗಿ ಪ್ರಸಿದ್ಧಿಗೆ ಬಂದ ಸುಬ್ರಹ್ಮಣ್ಯರಿಗೆ ಇಂಥ ನೂರಾರು ಫ್ಲೈ ಓವರ್‌ಗಳನ್ನು, ಸಬ್‌ವೇಗಳನ್ನು ಕಟ್ಟಿ, ಸಂಚಾರ ನಿಯಂತ್ರಣ ದೀಪಗಳಿಲ್ಲದೇ ಜನ ಅಡ್ಡಾಡುವುದಕ್ಕೆ ಅನುಕೂಲ ಮಾಡುವುದೆಂದರೆ ಮಹಾನ್ ಖುಷಿ. ಹೊರವರ್ತುಲ ರಸ್ತೆಯನ್ನು ಕೆಲವೇ ತಿಂಗಳುಗಳಲ್ಲಿ ಸಿಗ್ನಲ್‌ಮುಕ್ತ ರಸ್ತೆಯನ್ನಾಗಿ ಮಾಡುವುದೂ ಅವರ ಇತ್ತೀಚೆಗಿನ ಗುರಿ.

ಎಲ್ಲವೂ ಒಳ್ಳೆಯದೇ. ಬೆಂಗಳೂರಿನ ಜನ ಸರಾಗವಾಗಿ ಅಡ್ಡಾಡಬೇಕು. ಪತ್ರಿಕೆಗಳಲ್ಲಿ ಬರುವ ಫೆಸ್ಟಿವಲ್‌ಗಳಿಗೆ, ಮದುವೆ ಮುಂಜಿಗಳಿಗೆ, ಸಿನೆಮಾಗೆ, ನಾಟಕಕ್ಕೆ, ಉತ್ಸವಗಳಿಗೆ, ನೆಂಟರು – ಸ್ನೇಹಿತರ ಮನೆಗಳಿಗೆ ಚಕಚಕ ಓಡಾಡಬೇಕು.  ಆದರೆ ಎಲ್ಲೂ ಸಿಗ್ನಲುಗಳು ಅಡ್ಡ ಬರಬಾರದು. ಎಲ್ಲೂ ನಡೆದಾಡುವ ಜನ  ಅಡ್ಡ ಬರಕೂಡದು. ಪಾದಚಾರಿಗಳಿಗೆ ಫುಟ್‌ಪಾತ್ ಇಲ್ಲದಿದ್ದರೇನಂತೆ, ರಸ್ತೆಯನ್ನು ಅಗಲಿಸಬೇಕು. ಇರುವ ಫುಟ್‌ಪಾತಿನಲ್ಲಿ ಅತಿಕ್ರಮಣ ನಡೆದರೂ ಪರವಾಗಿಲ್ಲ; ರಸ್ತೆಗಳು ಮಾತ್ರ ನುಣುಪಾಗಿರಬೇಕು; ಟಾರಿನ ಮೇಲೆ ಟಾರು ಹಾಕುವುದು , ಸಿಂಗಲ್ ರಸ್ತೆಗಳಿದ್ದರೆ ಕಾಂಕ್ರೀಟಿನ ಪಾಯಸ ಹಾಯಿಸುವುದು, ಎಲ್ಲ ದೊಡ್ಡ ರಸ್ತೆಗಳಲ್ಲಿ ಮಕ್ಕಳು, ಮುದುಕರು ದಾಟಲಾಗದಂಥ ದಪ್ಪ ಅರ್ದ ಕಾಂಪೌಂಡ್ ಕಟ್ಟಿ ಅವರೆಲ್ಲ ಎರಡು ಫರ್ಲಾಂಗು ನಡೆಯುವಂತೆ ಮಾಡುವುದು – ಇವೆಲ್ಲ ಏನು? ಮಳೆ ಬಂದರೆ ಮುಳುಗಿಹೋಗುವ ಮ್ಯಾಜಿಕ್ ಬಾಕ್ಸ್‌ಗಳು ಮತ್ತು ಸಬ್‌ವೇಗಳಿಂದ ಏನು ಪ್ರಯೋಜನ? ಮೆಜೆಸ್ಟಿಕ್‌ನಲ್ಲಿ ಕಟ್ಟಿದ ಸಬ್‌ವೇ ಯಾಕೆ ದರಿದ್ರ ಅವಸ್ಥೆಯಲ್ಲಿದೆ?

ಅದಿರಲಿ, ಬೆಂಗಳೂರಿನ ಸಂಚಾರ ಸಮಸ್ಯೆಗೆ ಚಿಕ್ಕ ರಸ್ತೆಗಳೇ ಕಾರಣ; ಮರಗಳನ್ನು ಕಡಿದು, ಕಟ್ಟಡಗಳನ್ನು ಕೆತ್ತಿ, ರಸ್ತೆಗಳನ್ನು ಅಗಲ ಮಾಡಿದರೆ ಸಂಚಾರ ಸುಲಭವಾಗಿ ಪರಿಹಾರ ಕಾಣುತ್ತದೆ ಎಂಬುದು ಬಿಬಿಎಂಪಿ ಯೋಚನೆ. ಇದಕ್ಕಿಂತ ಮೂರ್ಖತನದ ಚಿಂತನೆ ಇನ್ನೊಂದಿಲ್ಲ. ಅತ್ತ ಸಾರ್ವಜನಿಕ ವಾಹನಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಖಾಸಗಿ ವಾಹನಗಳ ಬಳಕೆಯನ್ನು ತಗ್ಗಿಸಿದ ಮಾತ್ರಕ್ಕೆ ಸಮಸ್ಯೆ ಇನ್ನಷ್ಟು ಪರಿಹಾರವಾಗುತ್ತದೆ ಎಂದು ಅಬೈಡ್ ಇತ್ಯಾದಿ ಹೊಸ ಹೊಸ ಹೆಸರಿನ ಕಾರ್ಯತಂಡಗಳು ಹೇಳುತ್ತವೆ. ಆ ಬಸ್ಸುಗಳನ್ನು ಕೇಳುವವರಾರು? ಬಸ್ಸು ಹಾಕಿಸುವುದು ಮಾತ್ರವಲ್ಲ, ಕಾರನ್ನು ಬಳಸುವವರಿಗೆ ಖಚಿತ ಮಾಹಿತಿ ಕೊಡುವ ಯತ್ನ ನಡೆದಿದೆಯೆ? ಹಾಗಂತ ಕಾರೆಂಬ ಲಕ್ಷುರಿಯನ್ನು ಪ್ರದರ್ಶಿಸುವವಂಥವರೇ ಹೆಚ್ಚಿರುವಾಗ ಅವರನ್ನು ತಡೆಯುವ ಕಾನೂನು ಇದೆಯೆ? ಸಿಲಿಕಾನ್ ಸಿಟಿ ಆದಮೇಲೆ ಕಾರಿನ ಭರಾಟೆಯನ್ನು ತಡೆಯುವವರಾರು? ನ್ಯಾನೋ ಬಂದಮೇಲೆ ಈ ರಸ್ತೆಗಳಾದರೂ ಸಾಲುತ್ತವೆಯೆ?

ಒಂದೆಡೆ ಮೆಟ್ರೋ ಕಟ್ಟೋಣ, ಇನ್ನೊಂದೆಡೆ ಕಾಂಕ್ರೀಟ್ ರಸ್ತೆ ಬದಲಾವಣೆಗಳ ದೊಡ್ಡ ಅಭಿಯಾನ- ಮತ್ತೊಂದೆಡೆ ಹಲವು ಫುಟ್‌ಪಾತ್‌ಗಳನ್ನು ಕಿತ್ತುಹಾಕಿದ ಸನ್ನಿವೇಶ – ಇವುಗಳಿಂದ ಜನರಿಗೆ ಇನ್ನು ಎರಡು ಮೂರು ವರ್ಷಗಳಲ್ಲಿ ಬಿಡುಗಡೆಯಾಗುತ್ತದೆ ಎಂದು ತಿಳಿದುಕೊಂಡಿದ್ದರೆ ತಪ್ಪು: ನನ್ನ ಪ್ರಕಾರ ಮುಂದಿನ ದಿನಗಳಲ್ಲಿ ಬೆಂಗಳೂರು ಇನ್ನಷ್ಟು ಸಂಕೀರ್ಣವಾಗಲಿದೆ. ಸಂಚಾರದ ಕೋಟಲೆಗಳು ಹೆಚ್ಚಲಿವೆ. ಬಿಸಿಲು ಎಲ್ಲರ ತಲೆಯ ಮೇಲೆ ಮೊಟಕಲಿದೆ. ಹಿಡಿದಿಡದ, ಇಂಗದ ನೀರು ಬೆಂಗಳೂರಿನ ಸ್ಲಮ್ಮುಗಳನ್ನು ಇನ್ನಷ್ಟು ಮುಳುಗಿಸಲಿದೆ; ಮತ್ತಷ್ಟು ಆಬಿಷೇಕ್ ಪ್ರಕರಣಗಳು ನಡೆದರೂ ಅಚ್ಚರಿಯಿಲ್ಲ. ಕೆಲವು ವರ್ಷಗಳ ಹಿಂದೆ ಮೋರಿಯಲ್ಲಿ ಮಾರುತಿ ಕಾರೇ ಮುಳುಗಿ ಮೂವರು ಸತ್ತುಹೋಗಿದ್ದನ್ನು ಮರೆತಿರಾ?

ಬೆಂಗಳೂರಿನ ಜನಸಂಖ್ಯೆ ಹೆಚ್ಚಳದ ಬಗ್ಗೆ ಯಡ್ಡಯೂರಪ್ಪನವರು ಒಂದು ವರ್ಷದಿಂದ ಹೇಳಿದ್ದೇ ಹೆಚ್ಚು; ಹಳ್ಳಿಗಳಿಂದ ನಗರಕ್ಕೆ ಬರುವವರನ್ನ ತಡೆಯಬೇಕು ಎಂದು ಅವರಿಗೆ ಬಲವಾಗಿ ಅನ್ನಿಸಿದೆ. ಆದರೆ ಅದನ್ನು ಜಾರಿಗೊಳಿಸಲು ಆಗುತ್ತಿಲ್ಲ; ಕಾರಣ ಇಷ್ಟೆ: ಇದಕ್ಕಾಗಿ ಒಂದು ವಿಶೇಷ ಅಭಿಯಾನವೇ ಆಗಬೇಕು. ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ನಗರತಡೆ ಸಹಾಯಕೇಂದ್ರಗಳಾಗಬೇಕು; ಕೆಲಸ ಹುಡುಕಿಕೊಂಡು ಬರುವವರನ್ನು ಅಲ್ಲೇ ತಡೆದು ಕೆಲಸ ಕೊಡಿಸಬೇಕು. ಇವೆಲ್ಲ ಸಾಧ್ಯವಾಗದೇ ಬೆಂಗಳೂರಿನ ಜನದಟ್ಟಣೆಯನ್ನು ತೆಪ್ಪಗೆ ಒಪ್ಪಿಕೊಳ್ಳುವ ಪ್ರಜಾತಂತ್ರದಿಂದ ಬೆಂಗಳೂರು ಮತ್ತಷ್ಟು ಉಸಿರುಕಟ್ಟಿ ಸಾಯುತ್ತದೆ.

ಹೊರವರ್ತುಲು ರಸ್ತೆಯನ್ನೂ ಮೀರಿ ಇನ್ನೊಂದು ಮಹಾನ್ ರಿಂಗ್‌ರಸ್ತೆಯನ್ನು ಕಟ್ಟುವ ಯೋಜನೆಯೂ ಪ್ರಗತಿಯಲ್ಲಿದೆ ಎಂದು ನಾನು ಕೇಳಿದ್ದೇನೆ. ಈ ರಸ್ತೆಯೂ ಅಷ್ಟೆ: ಇನ್ನೊಂದು ಭೀಕರ ಕಾಂಕ್ರೀಟ್ ಯೋಜನೆ. ರಸ್ತೆ ಉಬ್ಬುಗಳಿಲ್ಲದ ಇಂಥ ರಸ್ತೆಗಳು ಸಾಮಾನ್ಯರನ್ನು ಹೊಸಕಿಹಾಕುತ್ತವೆ. ಅನೇಕ ಜನನಿಬಿಡ ಪ್ರದೇಶಗಳನ್ನು ಹಾಯುವ ವಿಮಾನ ನಿಲ್ದಾಣದ ರಸ್ತೆಯಲ್ಲಿ ನೀವು ತಾಸಿಗೆ ೮೦ ಕಿಮೀ ವೇಗದಲ್ಲಿ ಸಂಚರಿಸಲು ಅನುಮತಿ ಇದೆಯೆಂದರೆ ಯೋಚಿಸಿ: ಜನ ರಸ್ತೆ ದಾಟುವುದಾದರೂ ಹೇಗೆ ?

ಮುಂದಿನ ಐದು ವರ್ಷಗಳಲ್ಲಿ ನಾನು ಕಾಣುವ ಸಿನೇರಿಯೋ ಇದು: ನೂರಾರು ಫೈಓವರ್‌ಗಳಲ್ಲಿ ಎಲ್ಲಿ ತಿರುಗಬೇಕೆಂದು ಹೊಳೆಯದೆ, ತಿರುತಿರುಗಿ ಗೊಣಗಾಡುವವರ ಸಂಖ್ಯೆ ಹೆಚ್ಚುತ್ತದೆ. ಮಳೆಗಾಲದಲ್ಲಿ ಬಿಕ್ಕಟ್ಟು, ಇಕ್ಕಟ್ಟು ಇನ್ನೂ ಬಿಗಿಯಾಗುತ್ತದೆ. ಕೆಳಪ್ರದೇಶಗಳಲ್ಲೂ ಕಾಂಕ್ರೀಟು, ಟಾರ್ ಹಾಕಿಸುವುದರಿಂದ ಹರಿವ ನೀರಿಗೆ ದಿಕ್ಕುದೆಸೆಯಿಲ್ಲದೆ ಟಾರಿನ ಮೇಲೆ ಹರಿಯುತ್ತದೆ; ಇನ್ನಾವುದೋ ಕೆಳಪ್ರದೇಶ ಮುಳುಗುತ್ತದೆ. ಹೇಳಿಕೇಳಿ ಬೆಂಗಳೂರು ಸಮತಟ್ಟಾದ ಜಾಗದಲ್ಲಿಲ್ಲ; ಹಲವು ಕೆರೆಗಳನ್ನು ನುಂಗಿ ಬೆಳೆದ ಬೆಂಗಳೂರಿನಲ್ಲಿ ಸ್ಟಾರ್ಮ್‌ವಾಟರ್ ನಿರ್ವಹಣೆ ಮಾಡಲು ಪರಿಸರ ಪ್ರಜ್ಞೆಯೂ ಬೇಕು. ಇಡೀ ನಗರದಲ್ಲಿ ನಮಗೆ ಕಾಣೋದು ಕಾಂಕ್ರೀಟ್ ಹಾಸಿದ ಮನೆಗಳು, ಟಾರ್ ಬೀಸಿದ ರಸ್ತೆಗಳು; ಇವುಗಳಿಂದ ಉಸಿರುಗಟ್ಟಿ ಮರಗಳು ಬೀಳುತ್ತಿವೆ; ಬಿಬಿಎಂಪಿಗೆ ಈಗ ‘ಈ ಪ್ರದೇಶದಲ್ಲಿ ಮಳೆ, ಬಿರುಗಾಳಿಯಿಂದ ಮರಗಳು ಬೀಳುತ್ತವೆ’ ಎಂದು ಬೋರ್ಡ್ ಹಾಕಿಸುವುದಷ್ಟೇ ಕೆಲಸ! ಜವಾಬ್ದಾರಿ ಕಡಿಮೆ. (ಬಿ ಟ್ರಾಕ್ ಮಾಡಿದ್ದಾದರೂ ಇಷ್ಟೆ ತಾನೆ? ಕಂಡಕಂಡಲ್ಲಿ ಸಂಚಾರ ಫಲಕಗಳನ್ನು ಹಾಕಿದ್ದು?) ಅಂದಮೇಲೆ ನೀರು ಇಂಗುವುದಾದರೂ ಎಲ್ಲಿ? ಇಂಗುಗುಂಡಿಗಳು, ನೀರು ಸಂಗ್ರಹ ಕೇಂದ್ರಗಳು – ಇವುಗಳನ್ನು ಸ್ಥಾಪಿಸಿ ಇಡೀ ಬೆಂಗಳೂರಿಗೆ ಕಾವೇರಿ ನೀರಿನ ಏಕೈಕ ಮೂಲ ಅವಲಂಬನೆಯನ್ನು ತಪ್ಪಿಸುವುದು ಸಾಧ್ಯವಿದೆ. ಆದರೂ ನೋಡಿ: ಪರಿಸರ ದಿನ ಎಂಬ ಕಾಟಾಚಾರಕ್ಕೆ ಒಂದು ಮಳೆ ಕೊಯ್ಲಿನ ಮನೆಯನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರಿನಲ್ಲಿ ಛಾವಣಿ ನೀರು ಸಂಗ್ರಹ ಅಸಾಧ್ಯ ಎಂದು ಬೆಂಗಳೂರಿನ ಹಲವು ಹಿರಿಯ ಅಧಿಕಾರಿಗಳು ಅಧಿಕೃತ ಸಭೆಗಳಲ್ಲಿ ಹೇಳಿದ್ದನ್ನು ನಾನು ಖುದ್ದು ಕೇಳಿದ್ದೇನೆ. ಇರುವ ಹದಿನೆಂಟು ಕೆರೆಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗ್ಗೆಯೂ ಯಾರಲ್ಲೂ ಸಮನ್ವಯವಿಲ್ಲ. ಜಲಮಂಡಳಿಯವರು ತಮ್ಮ ಕೈಯಲ್ಲಿರುವ ನೀರೆಳೆಯುವ ಬಗೆಯನ್ನು ಚಿಂತಿಸಿದರೆ, ಅರಣ್ಯ ಇಲಾಖೆಯವರು ತಮ್ಮ ಕೆರೆಗಳನ್ನು ಸಂರಕ್ಷಿಸಬೇಕು ಎನ್ನುತ್ತಾರೆ; ಬಿಡಿಎ ಅಧಿಕಾರಿಗಳು ಕೆರೆಗಳನ್ನು ಸುಂದರಗೊಳಿಸಿ ಪ್ರವಾಸಿ ತಾಣ ಮಾಡಲು ಹೊಂಚು ಹಾಕುತ್ತಾರೆ. ಇಂಥ ದಿಕ್ಕಿಲ್ಲದ ಚಿಂತನೆಯಿಂದ ಇದ್ದಬದ್ದ ಕೆರೆಗಳೂ ಅತಂತ್ರವಾಗಲಿವೆ.

ಬೆಂಗಳೂರಿನ ಜನ ಜಂಕ್‌ಫುಡ್ ಪ್ರಿಯರು. ಅವರು ದಿನವೂ ಹೊರಗೆ ಎಸೆಯುವ ಕಸಕಡ್ಡಿಗಳನ್ನು ನೋಡಿ: ಅವು ಎಲ್ಲಿಗೆ ಹೋಗುತ್ತವೆ? ದಿನವೂ ಗೊಳೋ ಎಂದು ಈ ಕಸವನ್ನು ಹಒತ್ತೊಯ್ಯುವ ಲಾರಿಗಳು ಎಲ್ಲಿಗೆ ಹೋಗಿ ಈ ಕಸವನ್ನು ರಾಶಿ ಹಾಕುತ್ತವೆ? ಒಂದೋ, ಕೊಳಚೆಯಿಂದ ರಸಗೊಬ್ಬರ ತಯಾರಿಸುವ ಒಂದು ಅಧಿಕೃತ ಕೇಂದ್ರಕ್ಕೆ. ಅಥವಾ ಸುತ್ತಮುತ್ತಲಿನ ಹಳ್ಳಿಗಳಿಗೆ. ಕೆಲವರ್ಷದ ಹಿಂದೆ ಮಾಗಡಿ ರಸ್ತೆಯಲ್ಲಿ ಹೀಗೆ ಹಳ್ಳಿಗಳಲ್ಲಿ ಎಸೆದ ಕಸದಿಂದ ರಾಸುಗಳು ಸತ್ತಿದ್ದನ್ನು, ಜನರಿಗೆ ರೋಗ ತಗುಲಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ. ಈ ಕಸದಿಂದ ರಸ ಮಾಡುವ ಒಂದೆರಡು ಘಟಕಗಳೂ ಈಗ ಸತ್ತುಹೋಗಿವೆ. ತ್ಯಾಜ್ಯ ಪ್ಲಾಸ್ಟಿಕ್‌ನಿಂದ ರಸ್ತೆ ಮಾಡಬಹುದು ಎಂದು ಬೆಂಗಳೂರಿನವರೇ ಆದ ಅಹ್ಮದ್ ಖಾನ್ ತೋರಿಸಿಕೊಟ್ಟಿದ್ದಾರೆ ( ಚರ್ಚ್ ಸ್ಟ್ರೀಟ್‌ನಲ್ಲಿ ಈ ಕುರಿತ ಬೋರ್ಡನ್ನು ನೀವು ಕಾಣಬಹುದು). ಆದರೆ ಅವರ ಜುಜುಬಿ ೬ ಕೋಟಿ ಪ್ರಾಜೆಕ್ಟ್‌ಗೆ ಹಣ ನೀಡಲು ಬಿಬಿಎಂಪಿಗಾಗಲೀ, ಸರ್ಕಾರಕ್ಕಾಗಲೀ ಆಗುವುದಿಲ್ಲ. ಕೋಟಿಗಟ್ಟಳೆ ಹಣವನ್ನು ಸುರಿದು ಕಾಂಕ್ರೀಟಿನಿಂದ ಬೆಂಗಳೂರಿನ ಉಸಿರುಗಟ್ಟಿಸುವ ಈ ಅಧಿಕಾರಿಗಳು ಅಹ್ಮದ್‌ಖಾನ್‌ಗೆ ಹಣ ಕೊಟ್ಟು ಇಡೀ ನಗರದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಪರಿಹಾರ ಹುಡುಕಬಹುದಿತ್ತು. ಆದರೆ ಅಂಥ ರಾಜಕೀಯ ದೃಢತೆ ಯಾರಿಗಿದೆ?

ಘನತ್ಯಾಜ್ಯದ ಈ ಸಮಸ್ಯೆಯ ಬಗ್ಗೆ ದನಿಯೆತ್ತಿ ಹೋರಾಡಿ,  ಕೊನೆಗೆ ಸರ್ವೋಚ್ಚ ನ್ಯಾಯಾಲಯದಿಂದಲೇ ಸಮಿತಿಯೊಂದನ್ನು ಸ್ಥಾಪಿಸಿ ಅದರಲ್ಲೂ ಸದಸ್ಯರಾಗಿ ನಗರಗಳ ಘನತ್ಯಾಜ್ಯದ ವಿಳೇವಾರಿಯ ಬಗ್ಗೆ ಅತ್ಯಂತ ಮಾಹಿತಿಪೂರ್ಣವಾದ ದಾಖಲೆಯನ್ನು ಸಿದ್ಧಪಡಿಸಿದವರು ಯಾರು ಗೊತ್ತೆ? ಬೆಂಗಳೂರಿನವರೇ ಆದ ಅಲ್ಮಿತ್ರಾ ಎಚ್ ಪಟೇಲ್. ಆದರೆ ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಮಾತ್ರ ಯಾರಿಗಾದರೂ ವಾಕರಿಕೆ ಬರುವಂತಿದೆ. 

ಹೋಗಲಿ, ಎಂಥದೇ ನಾನ್ ರಿಸೈಕ್ಲಬಲ್, ನಾನ್ ಬಯೋ ಡಿಗ್ರೇಡಬಲ್ ಪ್ಲಾಸ್ಟಿಕನ್ನು ಲಿಕ್ವಿಡ್ ಹೈಡ್ರೋಕಾರ್ಬನ್ ಅಂದರೆ ಪೆಟ್ರೋಲ್ ಆಗಿ ಪರಿವರ್ತಿಸುವ ಪುಣೆಯ ಅಲ್ಕಾ ಝಡ್‌ಗಾಂವ್ಕರ್ ತಂತ್ರಜ್ಞಾನದ ಬಗ್ಗೆ ಯಾರಿಗೆ ಗೊತ್ತು? ಈ ಇಂಧನವನ್ನು ರೈತರ ಪಂಪ್‌ಸೆಟ್‌ಗಳಿಗೆ ಬಳಸಬಹುದು; ಯಡ್ಯೂರಪ್ಪನವರು ಉಚಿತ ವಿದ್ಯುತ್ ಕೊಡುವ ಬದಲು ರೈತರಿಗೆ ನಗರದಿಂದ ಒಂದಾದರೂ ಕೊಡುಗೆ ಕೊಡುವುದಿದ್ದರೆ ಅದು ಬಹುಶಃ ಈ ಇಂಧನ. ಈ ಬಗ್ಗೆ ಮುಖ್ಯಮಂತ್ರಿಯವರ ಸಲಹೆಗಾರ ಮತ್ತು ಆರ್ಥಿಕ ತಜ್ಞ ಕೆ ವಿ ರಾಜು ಈಗಲಾದರೂ ಗಮನಿಸುವರೆ? ಹೋಗಲಿ, ಪುಣೆಯ ಅಪ್ರಾಪ್ರಿಯೇಟ್ ರೂರಲ್ ಟೆಕ್ನಾಲಜಿಯ ಇನ್‌ಸ್ಟಿಟ್ಯೂಟ್‌ನ ಪ್ಲಾಸ್ಟಿಕ್‌ನಿಂದ ಮೀಥೇನ್ ತಯಾರಿಸುವ ಘಟಕದ ಬಗ್ಗೆ ಯಾರಾದರೂ ವಾರೆ ನೋಟ ಬೀರಿದ್ದಾರೆಯೆ? ಮಹಾರಾಷ್ಟ್ರದಲ್ಲಿ ಈಗಾಗಲೇ ಇಂಥ ೨೫೦೦ ಘಟಕಗಳು ಇವೆಯಂತೆ.

ಛಾವಣಿ ನೀರು ಸಂಗ್ರಹ, ರಸ್ತೆ ನೀರು ಸಂಗ್ರಹ, ಸ್ಟಾರ್ಮ್ ವಾಟರ್ ನಿರ್ವಹಣೆಗೆ ಇಂಗುಗುಂಡಿಗಳು, ನಗರದ ನಡುವೆ ಮೈದಾನ, ಪಾರ್ಕ್‌ಗಳಂಥ ಸಿವಿಕ್ ಅಮೆನಿಟಿ (ಸಿಎ) ಜಾಗಗಳ  ಹಾಗೆಯೇ ನೀರು ನಿರ್ವಹಣೆಗೂ ವಿಶೇಷ ಜಾಗಗಳ ನಿಗದಿ, ಪ್ಲಾಸ್ಟಿಕ್ ನಿರ್ವಹಣೆ, ಘನತ್ಯಾಜ್ಯದಿಂದ ಗೊಬ್ಬರ, ಕಸ ಬಿಸಾಡುವ ಜನರಿಗೆ ತೀವ್ರ ಶಿಕ್ಷೆ, ಸಾರ್ವಜನಿಕ ವಾಹನಗಳ ಪಾಯಿಂಟ್‌ಗಳ ಹೆಚ್ಚಳ, ನಗರಕ್ಕೆ ಬರುವ ಯುವಕರನ್ನು ತಡೆಯುವ ವಿಕೇಂದ್ರೀಕೃತ ವ್ಯವಸ್ಥೆ, ವೃಷಭಾವತಿ ಕೆರೆಗೆ ಬೆಂಗಳೂರಿನ ತ್ಯಾಜ್ಯ ಹರಿಯದಂತೆ ತಡೆ, – ಹೀಗೆ ಹತ್ತಾರು ಕ್ರಮಗಳನ್ನು ಕೈಗೊಂಡಾಗಲಷ್ಟೇ ಬೆಂಗಳೂರು ಕೊಂಚ ಸರಿಯಾದೀತು. ಇಷ್ಟಕ್ಕೂ ಬೆಂಗಳೂರು ಯಾಕೆ  ಸರಿಯಾಗಬೇಕು ಎಂಬ ಮೂಲಪ್ರಶ್ನೆಯನ್ನೂ ನಾನು ಕೇಳುತ್ತೇನೆ. ಬದುಕಲು ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ನಮಗೆ ಈ ಕಷ್ಟಗಳು ಗೊತ್ತಿದ್ದೇ ಇವೆ; ಸುಮ್ಮನೆ ಯಾಕೆ ಗೊಣಗಬೇಕು? ಅದಕ್ಕೇ ನಾನು ಟ್ರಾಫಿಕ್ ಜಾಮ್ ಆದಾಗ ಆರಾಮಾಗಿರುತ್ತೇನೆ ; ಕಸದ ಲಾರಿ ಸಾಗಿದರೆ ನನ್ನದೇ ಪಾಪಕರ್ಮ ಎಂದುಕೊಳ್ಳುತ್ತೇನೆ!

ಇನ್ನು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಅಬೈಡ್ ಎಂಬ ತಂಡವು ಒಳ್ಳೆಯ ಚಿಂತನೆಯನ್ನೇನೋ ಹೊಂದಿದೆ. ಆದರೆ ಅದಕ್ಕೆ ಇಡೀ ಸಮಾಜದ ಸಮಷ್ಟಿ ಹಿತದ ನೋಟವಿಲ್ಲ; ಬೆಂಗಳೂರೊಂದು ಸರಿಯಾದರೆ ಸಾಕು ಎಂಬ ಸೀಮಿತ ಕನಸು; ಅದರಲ್ಲೂ ಈ ಎಲ್ಲಾ ಕಾಂಕ್ರೀಟ್ ಯೋಜನೆಗಳು ಸೇರಿಕೊಂಡಿವೆ. ಈ ಹಿಂದೆ ಬೆಂಗಳೂರು ಫಾರ್ವರ್ಡ್ ಎಂಬ ಅಭಿಯಾನವಿತ್ತು. ಇವೆಲ್ಲವೂ ಸುಮಾರಿಗೆ ಒಂದೇ ಥರದವು. ಈ ಸಲ ರಾಜೀವ್ ಚಂದ್ರಶೇಖರ್ ಇದಾರೆ ಎಂಬುದೊಂದೇ ಆಶಾಕಿರಣ. ಆದರೆ ಅಭ್ಯುದಯದ ಕಲ್ಪನೆ ಇಲ್ಲದೆ ಕೇವಲ ಅಭಿವೃದ್ಧಿಯೆಂಬ ಕಾಂಕ್ರೀಟ್ ಚಿಂತನೆಯೇ ಪ್ರಧಾನವಾಗಿದ್ದರೆ ಅಬೈಡ್ ಕೂಡಾ ವಿಫಲವಾಗೋದ್ರಲ್ಲಿ ಯಾವ ಸಂಶಯವೂ ಇಲ್ಲ.

ನೂರಾರು ಹಿರಿಯ ಮರಗಳನ್ನು ಕಡಿದ ಬಿಬಿಎಂಪಿ  ಹೊಸ ಕಾಂಕ್ರೀಟ್ ರಸ್ತೆಗಳ ಇಕ್ಕೆಲಗಳಲ್ಲಿ  ಸಸಿಗಳನ್ನು ನೆಡುವುದಕ್ಕಾಗಿ ಯಾವ ಯೋಜನೆಯನ್ನೂ ಹಾಕಿಕೊಂಡಿಲ್ಲ; ರಸ್ತೆಗಳು ಫುಟ್‌ಪಾತಿಗೂ ಜಾಗ ಬಿಡದಂತೆ ಕಾಣುತ್ತಿವೆ; ಇನ್ನು ಮರಗಳು ಹೇಗೆ ಬೆಳೆಯುತ್ತವೆ? ರಾತ್ರೋರಾತ್ರಿ ಒಂದು ಮ್ಯಾಜಿಕ್ ಬಾಕ್ಸನ್ನು ನಿರ್ಮಿಸಬಹುದು; ಆದರೆ ಶೇಷಾದ್ರಿ ರಸ್ತೆಯಲ್ಲಿ ಕಡಿದ ಮರಗಳನ್ನು ಮತ್ತೆ ಬೆಳೆಸಲು ದಶಕಗಳೇ ಬೇಕು. ಈ ಬಗ್ಗೆ ಬಿಬಿಎಂಪಿ ಕ್ಷುದ್ರಮೌನ ತಾಳಿದೆ. ಬೆಂಗಳೂರೆಂಬ ಹೆಸರು ಬಂದಿದ್ದೇ ವೆಂಗ ವೃಕ್ಷಗಳಿಂದ. ಆದರೆ ಈಗ ಬಿಬಿಎಂಪಿ, ಬಿಡಿಎ, ಬಿ ಎಂ ಆರ್ ಡಿ ಎ ಗಳು ಮರಗಳನ್ನು ಮರೆತಿವೆ. ಅರ್ಬನ್ ಗಾರ್ಡನಿಂಗ್ ಮಾಡಿದ ಮಾತ್ರಕ್ಕೆ, ಕೆಲವು ಸರ್ಕಲ್ಲುಗಳಲ್ಲಿ ಹೂಗಿಡಗಳನ್ನು ನೆಟ್ಟ ಮಾತ್ರಕ್ಕೆ ಬೆಂಗಳೂರು ಗ್ರೀನ್ ಆಗುತ್ತದೆ ಎಂದು ಕನಸು ಕಂಡರೆ ಹ್ಯಾಗೆ?

ಹೀಗೆ ಬೆಂಗಳೂರು ರಕ್ಕಸನಗರವಾಗುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದೆ. ಇದರೊಳಗೆ ಬದುಕುವವರು ದಿ ಟೈಮ್ ಮೆಶಿನ್ ಸಿನೆಮಾದಲ್ಲಿ (ಅಥವಾ ಜ್ಯೂಲ್ಸ್ ವೆರ್ನ್ ಕಾದಂಬರಿಯಲ್ಲಿ) ಮಿಲಿಯಗಟ್ಟಳೆ ವರ್ಷಗಳ ನಂತರ ಬದುಕುವ ಗುಹೆವಾಸಿಗಳಂತೆ ಕಾಣುತ್ತಿದ್ದಾರೆ.

ಗಮನಿಸಿ: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ ಕುರಿತ ಮಾಹಿತಿಗಳನ್ನು ನಾನು ಎರಡು ವರ್ಷಗಳ ಹಿಂದೆ ತೋರಣಗಲ್ಲಿನ ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್‌ನ ಸಾಮಾಜಿಕ ಹೊಣೆಗಾರಿಕೆಯ ಭಾಗವಾದ ಹಳ್ಳಿಗಳ ತ್ಯಾಜ್ಯ ನಿರ್ವಹಣೆ ಯೋಜನೆಯನ್ನು ತಯಾರಿಸುವಾಗ ಸಂಗ್ರಹಿಸಿದ್ದೇ ಹೊರತು ಲೇಖನಕ್ಕಾಗಿ ಗೂಗಲ್ ಮಾಡಿದ್ದಲ್ಲ. ಈ ಎಲ್ಲ ವಿಷಯಗಳ ಒಂದು ದೊಡ್ಡ ಕಡತವೇ ನನ್ನಲ್ಲಿದೆ. ನಾನು ಅಲ್ಕಾ ಝಡ್‌ಗಾಂವ್ಕರ್ ಜೊತೆಗೂ ಮಾತನಾಡಿದ್ದೇನೆ; ಅಹ್ಮದ್‌ಖಾನ್ ಜೊತೆಗೂ ಚರ್ಚಿಸಿದ್ದೇನೆ; ಅವರ ಯೋಜನೆಗಳ ಬಗ್ಗೆ ನನಗಂತೂ ಪೂರ್ತಿ ವಿಶ್ವಾಸವಿದೆ. ತೋರಣಗಲ್ಲಿನ ಸುತ್ತಮುತ್ತ ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಮಾಡಿದ ವಿಕಾಸ ಯುವಕ ಮಂಡಳಿಯು ಈಗಾಗಲೇ ತನ್ನ ಅನುಭವವನ್ನು ವಿಸ್ತರಿಸುವ ಹಂತದಲ್ಲಿದೆ.

1 Comment

  1. ಸಮದ್‌ ಕೊಟ್ಟೂರು

    ಪ್ರಿಯ ಸುದರ್ಶನ್‌ರವರೇ,
    ಬೆಂಗಳೂರಿನ ಕುರಿತು ತಮ್ಮ ’ಕಟುವಾದ’ ಲೇಖನ ನನಗೆ ಚಿಂತೆಗೀಡು ಮಾಡಿದೆ. ಈಗಲೇ ಬೆಂಗಳೂರು ಹೀಗೆ. ಮುಂದೆ ಇನ್ನೊಂದು ಇಪ್ಪತ್ತು-ಮುವ್ವತ್ತು ವರ್ಷಗಳ ನಂತರ ಹೇಗಾಗಿರುತ್ತದೆಯೋ ಎಂದು ಆತಂಕವಾಗುತ್ತಿದೆ. ನಾವು ರಾಜಧಾನಿಯನ್ನು ಬಿಟ್ಟು ಬದುಕುವಂತಿಲ್ಲ. ವರ್ಷಕ್ಕೆ ನಾಲ್ಕೈದು ಬಾರಿಯಾದರೂ ಬಂದು ಹೋಗಲೇಬೇಕು. ಬೆಂಗಳೂರಿಗೆ ಬರುವಾಗ ಇರುವ ತವಕ, ಕೆಲವೇ ಕ್ಷಣಗಳಲ್ಲಿ ಜರ‍್ರೆಂದು ಇಳಿದು ಹೋಗುವುದು. ಬೆಳಿಗ್ಗೆಯೇ ಎದುರಾಗುವ ಗಬ್ಬುನಾರುವ ಕಸದ ಡಬ್ಬಿಗಳು, ಶ್ವಾಸಕೋಶಗಳನ್ನೇ ಉಸಿರುಗಟ್ಟಿಸುವ ವಾಹನಗಳ ಹೊಗೆ, ಆ ಗದ್ದಲ, ದುಬಾರಿ ಹೋಟೆಲುಗಳು, ಅಬ್ಬಾ ಕೆಲವೇ ಗಂಟೆಗಳಲ್ಲಿ ಸಾಕಪ್ಪಾ ಈ ಊರು ಎನಿಸುವುದು.
    ಈ ಬೆಂಗಳೂರನ್ನು ನಮ್ಮವರಿಗೆ ಮ್ಯಾನೇಜ್‌ ಮಾಡಲು ಬರುವುದಿಲ್ಲವೆಂದೋ ಅಥವಾ ಈ ಟೋಕಿಯೋ, ಬೀಜಿಂಗ್‌ ನಗರಗಳು ಅಷ್ಟೊಂದು ಜನರನ್ನೂ ಹೇಗೆ ನಿಭಾಯಿಸುತ್ತಿವೆ ಎಂದು ಅರಿಯುವಲ್ಲಿ ನಮ್ಮ ಅಧಿಕಾರಿಗಳು, ರಾಜಕಾರಣಿಗಳಿಗೆ ನಿರುತ್ಸಾಹವೋ. ’ಟೌನ್‌ ಪ್ಲಾನಿಂಗ್‌’ ಬಗ್ಗೆ ಅವರಲ್ಲಿ ಎಂತಹ ವ್ಯವಸ್ಥ ಇದೆ, ನಮ್ಮಲ್ಲಿ ಏನಾಗಬೇಕಿದೆ ಎಂದು ವಿಶ್ಲೇಷಿಸಬೇಕಿದೆ. ಹೀಗೆಯೇ ಬೆಂಗಳೂರನ್ನು ವಿಸ್ತರಿಸುತ್ತಾ ಹೋದರೆ ಇನ್ನೊಂದು ಐವತ್ತು ವರ್ಷಗಳಲ್ಲಿ ಅದು ಈಕಡೆ ತುಮಕೂರನ್ನೂ ಆಕಡೆ ಮಂಡ್ಯ-ಮೈಸೂರನ್ನೂ ನುಂಗಿ ನೀರು ಕುಡಿದು ಬಿಡುತ್ತೇನೋ?

Leave a Reply

Theme by Anders Norén