ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ವಿಮರ್ಶೆ

ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ

ಆಫ್ರಿಕಾ ಖಂಡವನ್ನು ಈಗ ಕತ್ತಲಿನ ಖಂಡ ಎಂದು ಕರೆಯುವುದೇ ತಪ್ಪು. ಎಂತೆಂಥ ಲೇಖಕರು, ಕಥೆಗಾರರು ಅಲ್ಲೀಗ ಮೂಡಿದ್ದಾರೆ. ಹೆಚ್ಚಾಗಿ ಪಾಶ್ಚಾತ್ಯ ಇಂಗ್ಲಿಶ್‌ ಸಾಹಿತ್ಯವನ್ನೇ ಓದುವ ನಾವು ಪೂರ್ವದೇಶಗಳ, ಆಫ್ರಿಕಾದ ಸಾಹಿತ್ಯವನ್ನು ಓದುವುದು ಅಪರೂಪವೇ. ನಾನಂತೂ ಆಫ್ರಿಕಾದ ಸಾಹಿತ್ಯವನ್ನು ಓದಿಯೇ ಇಲ್ಲ . ಅಚಾನಕವಾಗಿ ಪುಸ್ತಕದ ಅಂಗಡಿಯಲ್ಲಿ ಒಳ್ಳೆಯ ಕವರ್‌ಪೇಜ್‌ ಇದೆಯಲ್ಲ ಎಂದು ಅದೀಚೆಯ ಕಥಾ ಸಂಕಲನ ಖರೀದಿಸಿದೆ. ಕತೆಗಳನ್ನು ಓದಿದ ಮೇಲೆ ಕವರ್‍ಪೇಜ್‌ ಅಲ್ಲ, ಇಡೀ ಪುಸ್ತಕವೇ ಎಷ್ಟು ಚೆನ್ನಾಗಿದೆ ಎಂಬ ಭಾವ ತುಂಬಿಕೊಂಡಿತು. ಒಂದು ತಿಂಗಳಿಡೀ ಅದೀಚೆ ಪ್ರಭಾವದಲ್ಲೇ ಇದ್ದೆ!

`ದಿ ಥಿಂಗ್‌ ಅರೌಂಡ್‌ ಯುವರ್‌ ನೆಕ್‌’ ಎಂಬ ಈ ಕಥಾ ಸಂಕಲನದಲ್ಲಿ ಇರುವುದು ಕೇವಲ ಹನ್ನೆರಡು ಕತೆಗಳು. ಎಲ್ಲ ಕತೆಗಳಿಗೂ ನೈಜೀರಿಯಾದ ಸಂಸ್ಕೃತಿಯೇ ಆಧಾರ. ಈ ಕತೆಗಳಿಗೂ ಭಾರತದ ಸನ್ನಿವೇಶಗಳಿಗೂ ತುಂಬಾ ಸಾಮ್ಯಗಳಿವೆ ಎಂದು ನನಗೆ ಪದೇ ಪದೇ ಅನ್ನಿಸಿತು. ಕುಟುಂಬ ವ್ಯವಸ್ಥೆ, ಸಂಪ್ರದಾಯ, ಸಂಬಂಧಗಳು, ಭಾವನೆಗಳು, ಸಾಂಸ್ಕೃತಿಕ ದಾಳಿ,  ನಾಗರಿಕತೆ ತಂದ ಬದಲಾವಣೆಗಳು – ಹೀಗೆ ಅದೀಚೆ ಹೇಳುವುದೆಲ್ಲ ಭಾರತಕ್ಕೂ ಪಕ್ಕಾ ಅನ್ವಯವಾಗುತ್ತವೆ. `ಜಂಪಿಂಗ್‌ ಮಂಕಿ ಹಿಲ್‌’ ಎಂಬುದೊಂದು ಸಾಹಿತ್ಯ ಮತ್ತು ಸಂಕೇತಗಳ ಹಂದರದ ಕತೆಯಾಗಿ ಕೊಂಚ ಸಂಕೀರ್ಣ ಎನ್ನಿಸಿತು. ಉಳಿದಂತೆ ಎಲ್ಲ ಕತೆಗಳೂ ನನಗೆ ಒಂದು ಸಂಸ್ಕೃತಿಯನ್ನೇ ಅಲ್ಪಸ್ವಲ್ಪವಾದರೂ ಅರಿತ ಭಾವವನ್ನು  ಕೊಟ್ಟವು.

ನನಗೆ ಇಡೀ ಪುಸ್ತಕದಲ್ಲಿ ತುಂಬಾ ಖುಷಿ ಕೊಟ್ಟ ಕತೆಯೆಂದರೆ `ದಿ ಹೆಡ್‌ಸ್ಟ್ರಾಂಗ್‌ ಹಿಸ್ಟೋರಿಯನ್‌.’ ಈ ಕತೆಯನ್ನು  ಓದುತ್ತ ನನಗೆ ಪರಂಪರೆಯ ಕೊಂಡಿಗಳೆಲ್ಲ ಹೇಗೆ ಕಳಚಿಹೋಗುತ್ತವೆ,  ಬದಲಾವಣೆ ಎನ್ನುವುದು ಹೇಗೆ ಬಿರುಗಾಳಿಯಂತೆ ಒಂದು ಸಂಸ್ಕೃತಿಯನ್ನು ಆವರಿಸುತ್ತದೆ ಎಂದು ಸರಳವಾಗಿ ಹೇಳುವ ಈ ಕತೆಯಲ್ಲಿ ಕೊನೆಗೆ ಅಭ್ಯುದಯದ ಹೊಸ ದಿಕ್ಕೂ ಕಾಣುತ್ತದೆ. `ದಿ ಶಿವರಿಂಗ್‌’ ಕತೆಯಂತೂ ಸೂಕ್ಷ್ಮ ಸಂವೇದನೆಗಳನ್ನು ಕಟ್ಟಿಕೊಡುತ್ತದೆ. ವೃದ್ಧರ ಸನ್ನಿವೇಶಗಳನ್ನು ಒಂದು ಕನಸಿನಂತೆ ಬಿಚ್ಚಿಡುವ `ಘೋಸ್ಟ್ಸ್‌’ , ನೈಜೀರಿಯಾದಲ್ಲಿ ನಡೆದ ವಿಮಾನ ಪತನವು ಅಮೆರಿಕಾದ ಯುವತಿಗೆ ತಂದ ತಳಮಳದಿಂದ ಆರಂಭವಾಗುವ `ದಿ ಶಿವರಿಂಗ್‌’, –  ನನಗೆ ಇಷ್ಟವಾದ ಇನ್ನಿತರೆ ಕತೆಗಳು. ಉಳಿದ ಕತೆಗಳೂ ತುಂಬಾನೇ ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ.

ಅದೀಚೆಯವರ ಶೈಲಿಯ ಹೆಚ್ಚುಗಾರಿಕೆ ಎಂದರೆ ನವಿರಾದ ಭಾವಗಳನ್ನು  ಹಾಗೆಯೇ ತಟ್ಟುವಂತೆ ವಿವರಿಸಲು ಕಡಿಮೆ ಪದಗಳನ್ನು ಬಳಸುವುದು; ಬೇಕಾದಾಗ ಸಂಭಾಷಣೆಗಳ ಮೂಲಕ ಘಟನೆಯು ನಿಧಾನವಾಗಿ ಹರಿದರೆ, ಕೆಲವೊಮ್ಮೆ ಕಾಲಪ್ರವಾಹದಲ್ಲಿ ಕೊಚ್ಚಿಹೋದ ಘಟನೆಗಳೆಲ್ಲವೂ ಒಂದೇ ಪ್ಯಾರಾದಲ್ಲಿ ಬರುತ್ತವೆ. ಇದೆಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ಹದವರಿತು ನೀಡುವ ಕಲೆ ಅದೀಚೆಯವರಿಗೆ ಸಿದ್ಧಿಸಿದೆ.

ಅದೀಚೆಯ ಮೊದಲ ಪುಸ್ತಕ `ಪರ್ಪಲ್‌  ಹೈಬಿಸ್ಕಸ್‌ ‘ ಎಂಬ ಕಾದಂಬರಿ. ಅವರು ಬರೆದ `ಹಾಫ್‌ ಆಫ್‌ ಯೆಲ್ಲೋ ಸನ್‌’ಗೆ ಹಲವು ಬಹುಮಾನಗಳು ಬಂದಿವೆ. ಈ ಕಾದಂಬರಿಯೀಗ ಮೂವತ್ತು ಭಾಷೆಗಳಿಗೆ ಅನುವಾದಗೊಂಡಿದೆ.  ಇತ್ತೀಚೆಗಷ್ಟೆ ಅದೀಚೆಯವರು ಕಾಮನ್‌ವೆಲ್ತ್‌ ವೇದಿಕೆಯಲ್ಲಿ ತನ್ನ ಬರವಣಿಗೆ ಕುರಿತು ಒಂದು ಸುದೀರ್ಘ ಭಾಷಣವನ್ನು ನೀಡಿದರು.

Leave a Reply

Theme by Anders Norén