ವೆಂಕಟೇಶ್‌ಕುಮಾರ್ ಹಿಂದುಸ್ತಾನಿ ಗಾಯನವನ್ನು ಕೇಳುತ್ತ ಕೇಳುತ್ತ ನೀವೂ ಮೈ ಮರೆಯುತ್ತೀರಿ. ಮಾಧುರ್ಯ, ಭಾವ, ಲಯ, ಎಲ್ಲವನ್ನೂ ಹದವಾಗಿ ಮಿಳಿತಗೊಳಿಸಿ ಮಂದ್ರದಿಂದ ತಾರಕಕ್ಕೆ ಏರುಹಾದಿಯಲ್ಲಿ ಸಲೀಸಾಗಿ ಜಾರಿ ಹಾಗೇ ಗೊತ್ತಾಗದಂತೆ ಮೆಲುವಾಗಿ ಇಳಿದು ನಿಮ್ಮನ್ನು ಮುದಗೊಳಿಸುತ್ತ ಹೋಗುತ್ತಾರೆ. ಅವರ ಮಾಲ್‌ಕೌಂಸ್ ಕೇಳುತ್ತಲೇ ನನ್ನ ಪ್ರವಾಸದಲ್ಲಿ ಸಂಗ್ರಹಿಸಿದ ಪುಸ್ತಕಗಳ ಬಗ್ಗೆ ಕಿರುಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಸುಂದರ ವದನ ಕೇ ಎಂದು ವೆಂಕಟೇಶ್ ಕುಮಾರ್ ಹಾಡುತ್ತಿದ್ದಂತೆ ನನಗೆ ಕೊಡಚಾದ್ರಿಯ ರುದ್ರರಮಣೀಯ ದೃಶ್ಯಗಳು, ಕುದುರೆಮುಖದ ಹಾದಿಯಲ್ಲಿ ಕಂಡ ಸಾಲು ಸಾಲು ಗಿರಿಶ್ರೇಣಿಗಳು ನೆನಪಾಗುತ್ತಿವೆ.
ಕಳೆದ ವಾರವಿಡೀ ನನಗೆ ಒಂದೇ ಥರದ ಕನಸುಗಳು ಬಿದ್ದವು. ಎಲ್ಲೋ ಘಟ್ಟ ತಿರುತಿರುಗಿ ಸಾಗುತ್ತಿರುವ ಹಾಗೆ; ಎಲ್ಲೋ ಒಮ್ಮೆ ತೀರಾ ಪ್ರಪಾತದ ಅಂಚಿಗೆ ಬಂದ ಹಾಗೂ ಅನ್ನಿಸಿ ಎಚ್ಚರವಾಗಿದೆ. ಈಗ ಈ ಪುಸ್ತಕಗಳನ್ನು ನೋಡುತ್ತಿದ್ದರೆ ಪ್ರವಾಸ ನಿಜಕ್ಕೂ ನನಗೆ ಒಂದಿಷ್ಟು ತಿಳಿವಳಿಕೆಯನ್ನೂ ಕೊಟ್ಟಿದೆ ಎಂಬ ಸಮಾಧಾನದ ಭಾವ ಆವರಿಸುತ್ತಿದೆ. ಸದಾ ಹಸಿರನ್ನು ಕಣ್ಣುತುಂಬಿಸಿಕೊಳ್ಳುತ್ತಲೇ ಡ್ರೈವ್ ಮಾಡುತ್ತಿದ್ದ ನನಗೆ ಈ ಪುಸ್ತಕಗಳನ್ನು ನೋಡಲು, ಓದಲು ಸಾಧ್ಯವಾಗಿದ್ದು ಈಗಲೇ. ಕೆಲವನ್ನು ಓದಿದ್ದೇನೆ.
ದೈತೋಟದಲ್ಲಿ ಜಯಚಿಕ್ಕಿ ಕೊಟ್ಟ ಪುಸ್ತಕಗಳು ನಿಜಕ್ಕೂ ನನ್ನ ಮನಸ್ಸಿಗೆ ಹಿಡಿಸಿವೆ. ದೇಹಕ್ಕೆ ಹಿಡಿಸಬೇಕಷ್ಟೆ! ಯಾಕೆಂದರೆ ಅವರ ಪುಸ್ತಕಗಳೆಲ್ಲ ದೇಹದ ಆರೋಗ್ಯದ ಬಗ್ಗೆಯೇ ಇವೆ. ಮೊದಲನೆಯದು ಡಾ. ಸಾವಿತ್ರಿ ದೈತೋಟ ಬರೆದ `ಅನುಭೂತ ಯೋಗ ಸಂಗ್ರಹ : ಸುಲಭ ಚಿಕಿತ್ಸೆ’ ಎಂಬ ಸಾಮಾನ್ಯ ರೋಗ ರುಜಿನಗಳಿಗೆ ಸುಲಭದಲ್ಲಿ ಸಿಗುವ ಮೂಲಿಕೆ ಚಿಕಿತ್ಸೆಗಳನ್ನು ವಿವರಿಸುವ ೮೮ ಪುಟಗಳ ಪುಸ್ತಕ. ಎರಡನೆಯದು : `ಅನ್ನ – ಆರೋಗ್ಯ – ಔಷಧ’ ಎಂಬ ಜಯಲಕ್ಷ್ಮೀ ಮತ್ತು ವೆಂಕಟ್ರಾಮ ದೈತೋಟ ಬರೆದ ಊಟ ಮಾಡುವುದು ಹೇಗೆ ಎಂಬ ವಿವರಗಳನ್ನು ಒಳಗೊಂಡ ೮೦ ಪುಟಗಳ ಪುಸ್ತಕ. ಈ ಜಯಲಕ್ಷ್ಮಿಯೇ ನನ್ನ ಜಯ ಚಿಕ್ಕಿ.
ಜಯ ಚಿಕ್ಕಿ ಎಂದರೆ ನನ್ನ ಅಜ್ಜಿಯ ತಂಗಿಯ ಮಗಳು. ಅವಳು ೧೯೭೦ರಲ್ಲಿ ವೆಂಕಟ್ರಾಮ ದೈತೋಟರನ್ನು ಮದುವೆಯಾದಾಗ ನಾನು ಐದು ವರ್ಷದ ಮಾಣಿ. ಆಗ ನಾನು ದೈತೋಟಕ್ಕೆ ಹೋಗಿದ್ದು, ಅಲ್ಲಿ ಮಂಜಟ್ಟಿ ಮಣಿಯನ್ನು ಆರಿಸಿಕೊಂಡು ಬಂದಿದ್ದು, ದಾರಿಯಲ್ಲಿ ಒಂದು ಹೊಳೆಯನ್ನು ದಾಟಿದ್ದು – ಎಲ್ಲವೂ ನೆನಪಿವೆ. ವೆಂಕಟ್ರಾಮ ದೈತೋಟ ಎಂದರೆ ನಾಡಿನ ಟಾಪ್ ರೇಟೆಡ್ ಆಯುರ್ವೇದ ಪರಿಣತರು; ಸಸ್ಯಜ್ಞಾನಿ. `ಅಡಿಕೆ ಪತ್ರಿಕೆ’ಯಲ್ಲಿ ಅವರು ಬರೆಯುತ್ತಿರುವ `ಮನೆಮದ್ದು’ ಕನ್ನಡದ ಅತಿ ಜನಪ್ರಿಯ ಅಂಕಣಗಳಲ್ಲೊಂದು.
ಈ ಪುಸ್ತಕದಲ್ಲಿ ದೈತೋಟ ವೈದ್ಯಪರಂಪರೆಯ ಕಿರುಪರಿಚಯವೂ ಇದೆ; ಹಾಗಂತ ಜಯಚಿಕ್ಕಿ ಮತ್ತು ವೆಂಕಟ್ರಾಮ ದೈತೋಟರು ತಮ್ಮ ಪರಿಚಯವನ್ನು ಇಲ್ಲಿ ಹೇಳಿಕೊಂಡಿಲ್ಲ.
ಜಯಚಿಕ್ಕಿ ಕೊಟ್ಟ ಇನ್ನೊಂದು ಪುಸ್ತಕ `ಪಾಣಾಜೆ ಪಂಡಿತರ ಅಜ್ಜಿಮದ್ದು’. ದೇಹದ ವಿವಿಧ ಅಂಗಗಳ ಆರೋಗ್ಯ ರಕ್ಷಣೆಯ ಕಿವಿಮಾತುಗಳು ಈ ಪುಸ್ತಕದಲ್ಲಿವೆ. ಹೆಸರೇ ಹೇಳುವಂತೆ ಇವೆಲ್ಲವೂ ಪಾಣಾಜೆಯ ಪಂಡಿತರ ಅನುಭವ ದ್ರವ್ಯವನ್ನು ಆಧರಿಸಿವೆ. ಜಯಚಿಕ್ಕಿ ನನಗೆ ಪಾಣಾಜೆ ವೈದ್ಯ ಶಂಕರನಾರಾಯಣಭಟ್ಟ ಬರೆದ `ಮಧುದೀಪಿಕಾ’ ಎಂಬ ಜೇನು ಆಧಾರಿಕ ಚಿಕಿತ್ಸೆಯ ವಿವರಗಳಿರುವ ಪುಸ್ತಕವನ್ನು ಕೊಟ್ಟಿದ್ದಾರೆ. ಈ ಪುಸ್ತಕದ ಮೊದಲ ಆವೃತ್ತಿ ಪ್ರಕಟವಾಗಿದ್ದೇ ೧೯೪೮ರಲ್ಲಿ.
ಇದಕ್ಕಿಂತ ಮುಖ್ಯ ಜಯಚಿಕ್ಕಿ ನನಗೆ ಕೊಟ್ಟ ಘಮಘಮಿಸುವ ಹಲಸಿನ ಕಡುಬು, ಹೋಳಿಗೆ, ಕೈಯಾರೆ ತೆಂಗು ತುರಿದು ಒಗ್ಗರಣೆ ಹಾಕಿದ ಅವಲಕ್ಕಿ, ಕಷಾಯ, – ಎಲ್ಲದಕ್ಕೂ ಮೇಲೋಗರವಾಗಿ ಹೊಯ್ದ ಪ್ರೀತಿಯ ಧಾರೆ – ಮರೆಯಲಾಗದ ಕ್ಷಣಗಳು. ಅವರ ಪುಸ್ತಕವನ್ನು ನೋಡುತ್ತ ನನಗೆ ೩೭ ವರ್ಷಗಳ ಹಿಂದೆ ಈ ಜಾಗಕ್ಕೆ ಬಂದಿದ್ದ ಮಾಣಿಯೇ ಅಲ್ಲವೆ, ಈಗಲೂ ಇಷ್ಟೆಲ್ಲ ಅಜ್ಞಾನಿಯಾಗಿರುವೆ. ಈಗಲೂ ವಿದ್ಯುತ್ ಸಂಪರ್ಕವೂ ಇಲ್ಲದ ಮನೆಯಲ್ಲಿ ಸ್ವತಃ ಔಷಧ ಮಿಶ್ರಣಗಳನ್ನು ಕುಟ್ಟಿ, ರುಬ್ಬಿ ಶ್ರದ್ಧೆಯಿಂದ ತಯಾರಿಸುವ ಜಯಚಿಕ್ಕಿ ಎಲ್ಲಿ….. ನಾನೆಲ್ಲಿ? ಟರ್ಮಿನಲ್ ರೋಗಗಳಿಗೂ ಔಷಧ ಕೊಟ್ಟಿದ್ದೇವೆ ಎಂದು ಸವಾಲೆಸೆವ ಜಯ ಚಿಕ್ಕಿ, ಸಂಸಾರದ ಬಗ್ಗೆ ಮಾತನಾಡದೆ, ಕೇವಲ ಎರಡು ಸಸ್ಯಗಳ ಬಗ್ಗೆ ಪ್ರೀತಿಯಿಂದ ವಿವರಣೆ ಕೊಟ್ಟು ಥೈಲ್ಯಾಂಡಿನ ಗ್ರೇಪ್ಸ್ ಕೊಟ್ಟ ವೆಂಕಟ್ರಾಮ ದೈತೋಟ ಎಂದ ಜ್ಞಾನದ ಹೆಮ್ಮರ…. ದಿನವೂ ಬಿಡುವಿಲ್ಲದೆ ರೋಗಿಗಳನ್ನು ಮಾತಾಡಿಸಿ ಅನಾರೋಗ್ಯದ ಮೂಲದ ಬಗ್ಗೆ ಕುತೂಹಲ ಮತ್ತು ಆಸ್ಥೆಯಿಂದ ಚರ್ಚಿಸುವ ಈ ದಂಪತಿಗಳನ್ನು ನೋಡಿ ನನಗೆ ಅನ್ನಿಸಿದ್ದಿಷ್ಟು: ಈ ದೇಶದಲ್ಲಿ ಇಂಥವರು ಇರೋದ್ರಿಂದಾನೇ ಸಮಾಜ ಇಷ್ಟಾದರೂ ನೆಮ್ಮದಿಯಿಂದಿದೆ.
ಇವಲ್ಲದೆ ನನಗೆ ಮಂಗಳೂರಿನಲ್ಲಿ ಅಡ್ಡೂರು ಕೃಷ್ಣರಾವ್ ಕೆಲವು ಪುಸ್ತಕಗಳನ್ನು ಕೊಟ್ಟರು. ಅವುಗಳೆಲ್ಲವೂ ಅಪರೂಪದ್ದೇ. ನನ್ನ ಗೆಳೆಯರೇ ಬರೆದ ಈ ಪುಸ್ತಕಗಳ ಬಗ್ಗೆ ಈ ವಾರದಲ್ಲೇ ಬರೆಯುವೆ. ಬೇರೇನೂ ಮಹಾನ್ ಕೆಲಸ ನನಗಿಲ್ಲ!
ಮೇಲೆ ಉಲ್ಲೇಖಿಸಿದ ಪುಸ್ತಕಗಳು ಈ ಕೆಳಗಿನ ವಿಳಾಸದಲ್ಲಿ ಸಿಗುತ್ತವೆ: ಆಯುರ್ವೇದ ಪ್ರಕಾಶನ, ಅಬ್ಬೆ ಕೊಟ್ಟಗೆ, ದೈತೋಟ, ಪಾಣಾಜೆ, ದಕ್ಷಿಣ ಕನ್ನಡ, ಪಿನ್ ಕೋಡ್: ೫೭೪೨೫೯. ದಊರವಾಣಿ: ೦೮೨೫೧ ೨೮೭೨೨೯ ಈ ಮೈಲ್: abbecottage@yahoo.com
ನಿಮಗೆ `ಅರಿವಿರಲಿ ಆಯುರ್ವೇದ’ ಎಂಬ ಮೂರು ತಿಂಗಳುಗಳ ಅಂಚೆ/ ಆನ್‌ಲೈನ್ ಶಿಕ್ಷಣವನ್ನೂ ಪಡೆಯುವ ಆಸಕ್ತಿ ಇದ್ದರೆ ಮೇಲಿನ ವಿಳಾಸವನ್ನು ಸಂಪರ್ಕಿಸಿ.
Leave a Reply
You must be logged in to post a comment.