ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ವಿಮರ್ಶೆ

ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ

ಅನ್ಯಗ್ರಹಜೀವಿಗಳ ಬಗ್ಗೆ ನೀವು ಎಷ್ಟೇ ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳನ್ನು ನೋಡಿರಬಹುದು. ಎಷ್ಟೆಲ್ಲ ಸ್ಪೆಶಿಯಲ್ ಎಫೆಕ್ಟ್‌ಗಳನ್ನು ಅನುಭವಿಸಿ ರೋಮಾಂಚಿತರಾಗಿರಬಹುದು. ಡಿಸ್ಟ್ರಿಕ್ಟ್ ೯ ಸಿನೆಮಾವನ್ನೂ ಅದೇ ಪಟ್ಟಿಗೆ ಸೇರಿಸೋದು ಅಸಾಧ್ಯ. ಇದೂ ಅನ್ಯಗ್ರಹ ಜೀವಿಗಳನ್ನು ಕುರಿತೇ ಇದೆ; ಇಲ್ಲೂ ಹತ್ತಾರು / ನೂರಾರು ಸ್ಪೆಶಿಯಲ್ ಎಫೆಕ್ಟ್‌ಗಳಿವೆ. ಇಲ್ಲೂ ‘ಇಂಡಿಪೆಂಡೆನ್ಸ್ ಡೇ’ ಸಿನೆಮಾದಲ್ಲಿ ಕಾಣುವಂಥ ಬೃಹತ್ ಅನ್ಯಗ್ರಹ ನೌಕೆಯಿದೆ. ಸಿಗಡಿ ಮೀನಿನ ದೇಹವುಳ್ಳ ಅನ್ಯಗ್ರಹಜೀವಿಗಳ ವಸಾಹತೇ ಇಲ್ಲಿದೆ.

district_9_01

 

ಈ ಎಲ್ಲ ವಿಶೇಷಗಳ ಜೊತೆಗೆ ಈ ಸಿನೆಮಾಗೆ ಇನ್ನೊಂದು ವಿಶಿಷ್ಟ ಗುಣವಿದೆ: ಸಹಜ, ಮಾನವೀಯ ಭಾವನೆಗಳು. ಇಂಥದ್ದೊಂದು ಸಿನೆಮಾವನ್ನು ಹಾಲಿವುಡ್ ಯಾವಾಗಲೋ ಮಾಡಬಹುದಿತ್ತು. ಮನುಷ್ಯ ಸಹಜ, ವಾಸ್ತವ ಸನ್ನಿವೇಶಗಳನ್ನು ಕಲ್ಪಿಸಿಕೊಂಡು, ಮನುಕುಲದ ಈಗಿನ ಜನಾಂಗೀಯ ವರ್ಣಭೇದ ಇತ್ಯಾದಿ ಜೀವವಿರೋಧಿ ಸಮಸ್ಯೆಗಳನ್ನು ಸೂಚ್ಯವಾಗಿ ಬಿಂಬಿಸುವ, ಇಂಥ ಏಲಿಯನ್ ಮೂವೀ ಮಾಡಲು ದಕ್ಷಿಣ ಆಫ್ರಿಕಾದ ನಿರ್ದೇಶಕ ನೀಲ್ ಬ್ಲೋಮ್‌ಕ್ಯಾಂಪ್ ಬರಬೇಕಾಯ್ತು. 
ಪ್ರತೀ ಸಲ ಅನ್ಯಗ್ರಹ ಜೀವಿಗಳು ಬರೋ ಸಿನೆಮಾದಲ್ಲಿ ಅವು ಮನುಷ್ಯನಿಗೆ ಏನೇನು ಮಾಡುತ್ತವೆ ಅನ್ನೋ ಚಿತ್ರಣ ಇರುತ್ತೆ. ಇಲ್ಲಿ, ಅವುಗಳನ್ನು ನಾವು ಅರ್ಥಾತ್ ಮನುಷ್ಯರು ಹೇಗೆ ನಡೆಸಿಕೊಳ್ಳುತ್ತೇವೆ ಎಂಬ (ಅ) ಮಾನವೀಯ ಚಿತ್ರಣವಿದೆ.

ಶತಮಾನಗಳ ಕಾಲ ಈ ಭೂಮಿಯ ಮೇಲೆ ಮನುಷ್ಯರ ಮೇಲೆ ಮನುಷ್ಯರೇ ನಡೆಸಿದ ಅಮಾನುಷ ದಮನದ ಇತಿಹಾಸವೇ ಇರಬೇಕಾದರೆ, ಈಗಲೂ ಇಂಥ ಮಾನವ ಹಕ್ಕುಗಳ ದಮನ ನಡೆಯುತ್ತಿರೋವಾಗ, ಈ ಸಿನೆಮಾದ ಕಥೆಯನ್ನು ಬೆಳೆಸುವುದು ಕಷ್ಟವೇನಲ್ಲ!

14district9_600

ಕಥೆ ಹೀಗಿದೆ: ೧೯೭೯ರಲ್ಲಿ ಏನಾಗುತ್ತಪ್ಪಾ ಅಂದ್ರೆ, ಒಂದು ಅನ್ಯಗ್ರಹ ನೌಕೆಯು ಹಠಾತ್ತನೆ ದಕ್ಷಿಣ ಆಫ್ರಿಕಾ ರಾಜಧಾನಿ ಜೋಹಾನ್ಸ್‌ಬರ್ಗ್‌ನ ನೆತ್ತಿಯ ಮೇಲೆ ಬಂದು ನಿಂತುಬಿಡುತ್ತದೆ. ಈ ನೌಕೆಯಿಂದ ಬಿದ್ದ ಅನ್ಯಗ್ರಹ ಜೀವಿಗಳನ್ನು ಅಲ್ಲಿನ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಹೊರವಲಯದಲ್ಲಿ ಬೇಲಿ ಹಾಕಿ ಕಟ್ಟಿದ ಶಿಬಿರದಲ್ಲಿ ಇರಗೊಡುತ್ತದೆ. ೨೦ ವರ್ಷ ಕಳೆದ ಮೇಲೆ ಈ ಅನ್ಯಗ್ರಹಜೀವಿಗಳ ಉಪಟಳ ಹೆಚ್ಚಾಗುತ್ತದೆ. ಊರಿನೊಳಕ್ಕೆ ಬಂದು ಹಲವು ಬಗೆಯ ಗಲಾಟೆಯಲ್ಲಿ ತೊಡಗುವ ಈ ಜೀವಿಗಳನ್ನು ದೂರ ಸಾಗಿಸಬೇಕೆಂದು ಜನ ಬೀದಿಗಿಳಿಯುತ್ತಾರೆ. ಸರಿ, ಮಲ್ಟಿ ನ್ಯಾಶನಲ್ ಯುನೈಟೆಡ್ (ಎಂ ಎನ್ ಯು) ಎಂಬ ಖಾಸಗಿ ಸಂಸ್ಥೆಗೆ ಈ ಸ್ಥಳಾಂತರದ ಗುತ್ತಿಗೆ ಸಿಗುತ್ತೆ. ಈ ಸಂಸ್ಥೆಯ ಮುಖ್ಯಸ್ಥ ಲೂಯಿಸ್ ಮಿನ್ನಾರ್ ತನ್ನ ಮಗ ‘ವೈಕಸ್ ವಾನ್ ಡರ್ ಮರ್ವ್’ನನ್ನೇ ಈ ಗುತ್ತಿಗೆಯ ಮುಖ್ಯಸ್ಥನನ್ನಾಗಿ ಕಳಿಸುತ್ತಾನೆ.

ವೈಕಸ್ ಹೇಳಿ ಕೇಳಿ ಒಬ್ಬ ಸಭ್ಯ ಮನುಷ್ಯ. ಅವನಿಗೆ ದ್ವೇಷವೆಂಬುದೇ ಗೊತ್ತಿಲ್ಲ. ಅನ್ಯ ಗ್ರಹಜೀವಿಗಳನ್ನು ಆತ ತುಂಬಾ ಪ್ರೀತಿಯಿಂದ, ಅಕ್ಕರೆಯಿಂದ ಕಾಣುತ್ತಾನೆ.  ಒಳ್ಳೆಯ ಮಾತುಗಳಿಂದ ರಮಿಸುತ್ತಾನೆ. ಅವನ ಧ್ವನಿ, ಅವನ ವಾಕ್ಯಸರಣಿ, ಉಚ್ಚಾರಣಾ ಶೈಲಿ ಎಲ್ಲವೂ ಈ ಚಿತ್ರದ ಅತಿ ವಿಶಿಷ್ಟ ಭಾಗವಾಗಿಬಿಡುತ್ತವೆ.

ಈ ಸ್ಥಳಾಂತರದ ಹೊತ್ತಿನಲ್ಲೇ ಅನ್ಯಗ್ರಹಜೀವಿಗಳ ಒಂದು ರಾಸಾಯನಿಕದ ವಾಸನೆ ನೋಡಿದ ವೈಕಸ್‌ನಲ್ಲಿ ಅನ್ಯಗ್ರಹಜೀವಿಯ ಲಕ್ಷಣಗಳು ಕಾಣಿಸಿಕೊಂಡು, ಅವನ ಎಡಗೈಯು ಲೋಹದ ಕೈಯಾಗಿ ಮಾರ್ಪಟ್ಟು, ಪೊಲೀಸರು ಅವನನ್ನೇ ಬೇಟೆಯಾಡುವುದಕ್ಕೆ ಮುಂದಾಗುತ್ತಾರೆ. ಕೊನೆಗೆ ವೈಕಸ್ ನೌಕೆಯ ದುರಸ್ತಿಗೆಂದು ಇಪ್ಪತ್ತು ವರ್ಷ ತಲೆಕೆಡಿಸಿಕೊಂಡಿದ್ದ ಕ್ರಿಸ್ಟೋಫರ್ ಜಾನ್ಸನ್ ಎಂಬ ಅನ್ಯ ಗ್ರಹ ಜೀವಿಯ ದೋಸ್ತಿ ಬೆಳೆಸಿ, ತನ್ನ ಕೈ ಗುಣಪಡಿಸಿಕೊಳ್ಳುವ ನಿರೀಕ್ಷೆ ಹೊತ್ತುಕೊಳ್ಳುತ್ತಾನೆ.

district_9_03

ಕೊನೆಗೂ ನೌಕೆ ರಿಪೇರಿಯಾಯ್ತೆ, ವೈಕಸ್‌ನಕೈ ಸರಿಯಾಯಿತೆ? ಎಲ್ಲ ಅನ್ಯ ಗ್ರಹಜೀವಿಗಳೂ ಭೂಮಿಯಲ್ಲೇ ಉಳಿದರೆ, ಅಥವಾ ಹೊರಟುಹೋದರೆ …. ಇವೆಲ್ಲ ನೀವು ಸಿನೆಮಾ ನೋಡಿ ತಿಳಿದುಕೊಳ್ಳಿ!

ಈ ಸಿನೆಮಾದ ಸ್ಪೆಶಿಯಲ್ ಎಫೆಕ್ಟ್ ಎಷ್ಟು ಚೆನ್ನಾಗಿದೆ ಅಂದ್ರೆ ಹೀಗೆ ಸ್ಪೆಶಿಯಲ್ ಎಫೆಕ್ಟ್ ಇದೆ ಅಂತ ಗೊತ್ತಾಗೋದೇ ಇಲ್ಲ. ಅದೇ ಈ ಸಿನೆಮಾದ ವಿಶೇಷ. ಅನ್ಯಗ್ರಹ ಜೀವಿಗಳು ಮನುಷ್ಯರನ್ನು ಹಿಗ್ಗಾಮುಗ್ಗ ತಳಿಸುವುದಿಲ್ಲ; ಹಾಗಂತ ಸುಮ್ಮನಿರೋದೂ ಇಲ್ಲ. ಮನುಷ್ಯರೂ ಈ ಸಂದರ್ಭದಲ್ಲಿ ಅನ್ಯಗ್ರಹ ಜೀವಿಗಳಿಗಾಗಿ ಕ್ಯಾಂಟೀನು ನಡೆಸುವ ದೃಶ್ಯವೂ ಇದರಲ್ಲಿದೆ ಅನ್ನಿ.

ಡಾಕ್ಯುಮೆಂಟರಿ ಥರ ಸಂದರ್ಶನಗಳ ಮೂಲಕ ಆರಂಭವಾಗೋ ಈ ಸಿನೆಮಾ ಕೊನೆಗೆ ಎಂದಿನಂತೆ ಹಾಲಿವುಡ್ ಶೈಲಿಯಲ್ಲಿ ಮುಗಿಯುತ್ತದೆ. ಇಡೀ ಚಿತ್ರದುದ್ದಕ್ಕೂ ವೈಕಸ್ ಪಾತ್ರ ವಹಿಸಿದ ಶಾರ್ಲ್‌ಟೋ ಕಾಪ್ಲೆಯ ಅದ್ಭುತ ನಟನೆ ಕಣ್ಣಿಗೆ ಕಟ್ಟುತ್ತದೆ. ಮೊದಲಿಂದ ಕೊನೆವರೆಗೂ ಆತ ತೋರುವ ಅಮಾಯಕತೆ, ಪ್ರಾಮಾಣಿಕತೆ ಮತ್ತು ಯೂನಿವರ್ಸಲ್ ಪ್ರೀತಿಯ ಗುಣಗಳು ಸದಭಿರುಚಿಯ ಪ್ರೇಕ್ಷಕರ ಎದೆಯಾಳವನ್ನೇ ಸ್ಪರ್ಶಿಸುತ್ತವೆ. ಕಾಪ್ಲೆಗೆ ಇದೇ ಮೊದಲ ಸಿನೆಮಾವಂತೆ. ಈ ಸಿನೆಮಾದಲ್ಲಿ ಅವನ ನಟನೆಗೆ ಆಸ್ಕರ್ ಸಿಕ್ಕಿದರೆ ಏನೂ ಅಚ್ಚರಿಯಿಲ್ಲ. ಅಂಥ ಐತಿಹಾಸಿಕ ಅಭಿನಯವನ್ನು ಕಾಪ್ಲೆ ತೋರಿದ್ದಾನೆ. ಒಂದು ಗಂಟೆ ಐವತ್ತೊಂದು ನಿಮಿಷಗಳ ಈ ಸಿನೆಮಾ ಈ ವರ್ಷ ನೀವು ನೋಡಲೇಬೇಕಾದ ಸಿನೆಮಾ. ತೀವ್ರ ಸ್ವರೂಪದ ಹಿಂಸೆಯ ದೃಶ್ಯಗಳು ಮತ್ತು ಕೆಲವು ತೀವ್ರ ಸಂಭಾಷಣೆಗಳಿಂದಾಗಿ ಈ ಸಿನೆಮಾಗೆ ೧೭ ವಯಸ್ಸಿನ ಮೇಲ್ಪಟ್ಟವರು ಮಾತ್ರ ನೋಡಬೇಕೆಂಬ ಪ್ರಮಾಣಪತ್ರ ಕೊಟ್ಟಿದ್ದಾರೆ.

district_9_05

ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ ಇದ್ದ, ಈಗಲೂ ಅನಧಿಕೃತವಾಗಿರುವ ವರ್ಣಭೇದ ನೀತಿಯಷ್ಟೇ ಅಲ್ಲ, ಮನುಕುಲದ ಇತಿಹಾಸದಲ್ಲಿ ಉಳ್ಳವರು ನಡೆಸಿದ ಎಲ್ಲ ಶೋಷಣೆಯ ಮುಖಗಳನ್ನು ಈ ಸಿನೆಮಾ ಬಯಲು ಮಾಡುತ್ತೆ.

ಕಳೆದ ಆಗಸ್ಟ್‌ನಲ್ಲಿ ಬಿಡುಗಡೆಯಾದ ಈ ಸಿನೆಮಾವನ್ನು ಎಲ್ಲ ಪ್ರಮುಖ ಪತ್ರಿಕೆಗಳು ಮುಕ್ತಕಂಠದಿಂದ ಶ್ಲಾಘಿಸಿವೆ. ಬಹುತೇಕ ವಿಮರ್ಶೆಗಳು ಸಿನೆಮಾವನ್ನು `ವರ್ಷದ ಚಿತ್ರ’ ಎಂದು ಬಣ್ಣಿಸಿವೆ.

ಸುಮ್ನೆ ಒಂದು ಸಿನೆಮಾ ಅಂದುಕೊಂಡು ನೋಡಿದ ನನಗೂ ಚಿತ್ರ ಮುಗಿದ ಮೇಲೆ ಹಾಗೇ ಅನ್ನಿಸಿತು. ವೈಕಸ್‌ನ ಮುಗ್ಧ ಕಣ್ಣುಗಳು ನನ್ನನ್ನೇ ನೋಡುತ್ತಿರುವಂತೆ ಭಾಸವಾಯಿತು.

ನೀವೂ ನೋಡಿ. ಆನಂದಿಸುವ ಸಿನೆಮಾ ಅನ್ನೋದಕ್ಕಿಂತ ನಿಮಗೆ ಏನನ್ನೋ ಹೇಳುವ ಸಿನೆಮಾ ಇದು.

 

1 Comment

  1. Anonymous

    ನನ ಹೆಸರು ಪ್ರವೀಣ್ ಈ ಕಲಮ್ ತುಂಬಾ ಚನಗೆದೆ

Leave a Reply

Theme by Anders Norén