ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು, ವಿಮರ್ಶೆ

ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ

ಹಾಲಿವುಡ್ ಸಿನೆಮಾ ನೋಡುವ ವಿಪರೀತ ಚಟದಲ್ಲಿ ಯಾವ ಸಿನೆಮಾ ಬಂದರೂ ನೋಡುತ್ತಿದ್ದ ೮೦ರ ದಶಕದಲ್ಲಿ ನನ್ನನ್ನು ತೀವ್ರವಾಗಿ ಕಲಕಿದ ಸಿನೆಮಾ `ದಿ ಕಿಲ್ಲಿಂಗ್ ಫೀಲ್ಡ್ಸ್’. ಮೂರು ಆಸ್ಕರ್ ಪ್ರಶಸ್ತಿಗಳನ್ನು ದಕ್ಕಿಸಿಕೊಂಡ ಈ ಸಿನೆಮಾ ಯುದ್ಧ, ಕ್ರಾಂತಿ, ದೇಶಗಳ ನಡುವಣ ಸಂಘರ್ಷ, ಮಾನವತೆ, ಸ್ನೇಹ, ಹಿಂಸೆ – ಎಲ್ಲವನ್ನೂ ಎಲ್ಲ ಫ್ರೇಮುಗಳಲ್ಲಿ ತೋರಿಸುತ್ತ ಎದೆ ಕದಡುತ್ತದೆ. ಅದ್ಭುತ ಸೆಟಿಂಗ್‌ಗಳು, ಮಹಾನ್ ನಟನೆ, ಕ್ಷಣಕ್ಷಣಕ್ಕೂ ಏನಾಗುತ್ತದೆ ಎಂಬ ಕುತೂಹಲವನ್ನು ಕೆರಳಿಸುವ ಕಥಾ ಹಂದರ, – ಈ ಸಿನೆಮಾದಲ್ಲಿ ಏನಿದೆ, ಏನಿಲ್ಲ…….

vlcsnap-11411

 

ಅಮೆರಿಕಾದ ಪತ್ರಕರ್ತ, ನ್ಯೂಯಾರ್ಕ್ ಟೈಮ್ಸ್‌ನ ವರದಿಗಾರ ಸಿಡ್ನಿ ಶಾನ್‌ಬರ್ಗ್ ಕ್ಯಾಂಬೋಡಿಯಾ ಕಲಹವನ್ನು ವರದಿ ಮಾಡಲು ಹೋಗಿರುತ್ತಾನೆ. ಅವನಿಗೆ ಡಿತ್ ಪ್ರಾನ್ ಎಂಬ ಕ್ಯಾಂಬೋಡಿಯಾ ನಿವಾಸಿ ನೆರವಾಗುತ್ತಾನೆ. ಕ್ಮೆ ರೂ ಎಂಬ ಚೀನೀ ಪ್ರೇರಿತ ಕಟು ಎಡಪಂಥದ ಮಾವೋವಾದಿ ಸಂಘಟನೆ ಆಗಷ್ಟೆ ಕ್ಯಾಂಬೋಡಿಯಾವನ್ನು ಆಕ್ರಮಿಸುತ್ತಿದೆ.

vlcsnap-14618

Skulls of people killed in Cambodia (real picture, not from the movie)

Skulls of people killed in Cambodia (real picture, not from the movie)

ಈ ಸನ್ನಿವೇಶವನ್ನು ವರದಿ ಮಾಡುತ್ತ ಕ್ಮೆ ರೂ ಬಂದೂಕಿಗೆ ಗುರಿಯಾದ ಸಿಡ್ನಿಯನ್ನು ಪ್ರಾನ್ ತನ್ನ ಎಲ್ಲ ಚಾಕಚಕ್ಯತೆ ಬಳಸಿ ಉಳಿಸುತ್ತಾನೆ. ಆದರೆ ವಿಧಿ ಪ್ರಾನ್‌ನನ್ನು ಕ್ಮೆ ರೂ ಕರಾಳ ಹಸ್ತಕ್ಕೆ ಕೊಟ್ಟುಬಿಡುತ್ತದೆ. ಕೊನೆಗೆ ಹನ್ನೊಂದನೇ ಶತಮಾನದ ಕೃಷಿ ಪದ್ಧತಿಯನ್ನು ಜಾರಿಗೊಳಿಸಿದ ಕ್ಮೆ ರೂ ಆಡಳಿತದಲ್ಲಿ ಪ್ರಾನ್ ಕೂಡಾ ಒಬ್ಬ ಸೆರೆಯಾಳು ಕಾರ್ಮಿಕನಾಗುತ್ತಾನೆ. ಒಮ್ಮೆ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದ ಪ್ರಾನ್ ಎಲ್ಲೆಲ್ಲೋ ತಿರುಗುತ್ತಿದ್ದಾಗ ಕ್ಮೆ ರೂ ನಡೆಸಿದ ನರಮೇಧದ ಸ್ಥಳದಲ್ಲಿ ಅಡ್ಡಾಡುವ ಕ್ಷಣವೂ ಎದುರಾಗುತ್ತದೆ. ಸಾವಿರಾರು ತಲೆಬುರುಡೆಗಳು, ಹೆಣಗಳ ನಡುವೆ ಪ್ರಾನ್ ದಿಕ್ಕೆಟ್ಟು ಓಡಾಡುವ ದೃಶ್ಯವನ್ನು ಕಳೆದ ಐದು ದಶಕಗಳಲ್ಲಿ ಮೂಡಿ ಬಂದ ಅತ್ಯಂತ ಹೃದಯವಿದ್ರಾವಕ ಇಂಗ್ಲಿಶ್ ಸಿನೆಮಾ ದೃಶ್ಯ ಎನ್ನಬಹುದು. ಅದರಲ್ಲೂ ಡಿತ್ ಪ್ರಾನ್ ಪಾತ್ರ ವಹಿಸಿದ ಹ್ಯಾಂಗ್ ಎನ್ ಎನ್‌ಗೋರ್‌ನ ಸಹಜ ನಟನೆ ಪ್ರತಿ ಸೆಕೆಂಡೂ ಹಿಡಿದಿಡುತ್ತದೆ.

 

`ದಿ ಕಿಲ್ಲಿಂಗ್ ಫೀಲ್ಡ್ಸ್ ‘ ನೈಜ ಕಥೆಯನ್ನು ಆಧರಿಸಿದ ಸಿನೆಮಾ. ಈ ಸಿನೆಮಾದ ಪತ್ರಕರ್ತನ ಪಾತ್ರವಾದ ಸಿಡ್ನಿ ಶಾನ್‌ಬರ್ಗ್‌ಗೆ ಈಗ ೮೧ ವರ್ಷ. ಕ್ಯಾಂಬೋಡಿಯಾ ವರದಿಗಾಗಿ ೧೯೭೬ರಲ್ಲಿ ಅವರು ಪುಲಿಟ್ಜರ್ ಪ್ರಶಸ್ತಿಯನ್ನು  ಪಡೆದ ನಂತರ ಡಿತ್ ಪ್ರಾನ್‌ನನ್ನು ಹುಡುಕುಲು ನಡೆಸಿದ ಯತ್ನಗಳು ಸಿನೆಮಾದಲ್ಲಿ  ಮೂಡಿವೆ. ೫೦ ವರ್ಷಗಳ ಕಾಲ ಆತ ನ್ಯೂಯಾರ್ಕ್ ಟೈಮ್ಸ್‌ಗೆ ವರದಿ ಮಾಡಿದವರು. ಡಿತ್ ಪ್ರಾನ್ ಕೊನೆಗೆ  ಹೇಗೋ ರೆಡ್‌ಕ್ರಾಸ್ ಶಿಬಿರ ಸೇರಿಕೊಂಡು ಅಮೆರಿಕಾಗೆ ಬಂದು ನ್ಯೂಯಾರ್ಕ್ ಟೈಮ್ಸ್‌ನಲ್ಲೇ ಛಾಯಾಗ್ರಾಹಕವಾಗುತ್ತಾರೆ. ಕ್ಯಾನ್ಸರ್ ರೋಗದಿಂದಾಗಿ ಡಿತ್ ಪ್ರಾನ್ ೨೦೦೮ರಲ್ಲಿ ತೀರಿಕೊಂಡರು.

 

vlcsnap-16040

ಈ ಸಿನೆಮಾಗೆ ಪ್ರೇರಣೆಯಾಗಿದ್ದು ಸಿಡ್ನಿ ಬರೆದ `ಡೆತ್ ಎಂಡ್ ಲೈಫ್ ಆಫ್ ಡಿತ್ ಪ್ರಾನ್’ ಪುಸ್ತಕ. ೧೯೮೪ರಲ್ಲಿ ರೋಲಾಂಡ್ ಜೋಫ್ ನಿರ್ದೇಶನದಲ್ಲಿ ಬಂದ ಈ ಸಿನೆಮಾದಲ್ಲಿನ ಆತ್ಯುತ್ತಮ ಪೋಷಕ ನಟನೆಗಾಗಿ ಹ್ಯಾಂಗ್‌ಗೆ ಆಸ್ಕರ್ ಪ್ರಶಸ್ತಿ ಬಂತು. ಅತ್ಯುತ್ತಮ ಎಡಿಟಿಂಗ್ ಮತ್ತು ಅತ್ಯುತ್ತಮ ಸಿನೆಮ್ಯಾಟೋಗ್ರಫಿ (ಛಾಯಾಗ್ರಹಣ) ಆಸ್ಕರ್‌ಗಳೂ ಬಂದವು. ಸಿನೆಮಾಗೆ `ಬ್ಯಾಫ್ತಾ ಅತ್ಯುತ್ತಮ ಸಿನೆಮಾ ಪ್ರಶಸ್ತಿ’ಯೂ ಬಂದಿದೆ.

ಅರಸು ಮನೆತನದ ಆಳ್ವಿಕೆಯಲ್ಲಿದ್ದ ಕ್ಯಾಂಬೋಡಿಯಾ ೧೯೭೫ರಲ್ಲಿ ಕ್ಮೆ ರೂ ಎಂಬ ಪಾತಕ ಪಡೆಯ ಪಾಲಾಗುತ್ತದೆ. ಈ ಪಡೆಗೆ ಅನುಕೂಲ ಮಾಡಿಕೊಟ್ಟಿದ್ದೇ ಚೀನಾ ಪ್ರೇರಿತ ದೇಶಭ್ರಷ್ಟ ಕ್ಯಾಂಬೋಡಿಯಾ ದೊರೆ ಸಿನ್‌ಹಾಕ್! ಕೊನೆಗೆ ಕ್ಮೆ ರೂ ಕೈಗೊಂಬೆಯಾದ ಸಿನ್‌ಹಾಕ್ ಕಣ್ಣೆದುರೇ ನರಮೇಧಗಳು ನಡೆಯುತ್ತವೆ. ಸುಮಾರು ಮೂವತ್ತು ಲಕ್ಷ ಕ್ಯಾಂಬೋಡಿಯನ್ನರು (ಅಂದಿನ ಕ್ಯಾಂಬೋಡಿಯಾ ಜನಸಂಖ್ಯೆಯ ಶೇ. ೨೧ರಷ್ಟು) ಕೊಲೆ, ಹಸಿವು, ಬಲವಂತದ ಕಾರ್ಮಿಕ ಶಿಬಿರಗಳು, ಕಾಯಿಲೆಗೆ ತುತ್ತಾಗಿ ಸತ್ತರೆಂಬ ಲೆಕ್ಕವಿದೆ.

ಕ್ಮೆ ರೂ ಆಡಳಿತದಲ್ಲಿ ನಡೆದಿದ್ದಿಷ್ಟೆ: ಸಾವಿರಾರು ಜನ ತಮ್ಮ ಗೋರಿಯನ್ನು ತಾವೇ ತೋಡಿಕೊಂಡು ಅದರೊಳಗೆ ಮಲಗಿ ಜೀವಂತ ಬಲಿಯಾದರು. ಅವರನ್ನೆಲ್ಲ ಸಾಯಿಸಲು ಕಾಡತೂಸುಗಳನ್ನು ವ್ಯರ್ಥ ಮಾಡಬಾರದೆಂಬ ಆದೇಶವಿತ್ತಲ್ಲ!

ಕನ್ನಡಕ ಹಾಕಿಕೊಂಡವರೆಲ್ಲರೂ ಬುದ್ಧಿಜೀವಿಗಳೆಂದು ಹತರಾದರು. ಸಾವಿರಾರು ಜನರ ಚರ್ಮವನ್ನು ಅವರೆದುರೇ ಸುಲಿಯಲಾಯಿತು. ನಾಗರಿಕತೆಯನ್ನೆಲ್ಲ ನಾಶಪಡಿಸಿ, ಶೂನ್ಯ ವರ್ಷವನ್ನು ಆರಂಭಿಸಿ ಹನ್ನೊಂದನೇ ಶತಮಾನದ ಕೃಷಿ ಪದ್ಧತಿ ಜಾರಿಯಾಯಿತು.

ಈ ಕಾಲದಲ್ಲಿ ದುಡಿಯುವ ಮನುಷ್ಯರಿಗೆ ಸಿಗುತ್ತಿದ್ದುದು ಎರಡು ಬೋಗುಣಿ ಗಂಜಿ. ಇದರಿಂದಾಗೇ ಸಾವಿರಾರು ಜನ ಇನ್ನಿಲ್ಲವಾದರು.

Dith and Sydney in real life

Dith and Sydney in real life

೧೯೭೮ರಲ್ಲಿ ವಿಯೆಟ್ನಾಮ್ ಸೇನೆಯು ಕ್ಯಾಂಬೋಡಿಯಾವನ್ನು ಆಕ್ರಮಿಸಿ ಕ್ಮೆ ರೂ ಆಡಳಿತವನ್ನು ಕೊನೆಗೊಳಿಸುತ್ತದೆ. ೧೯೭೮ರಿಂದ ೧೯೯೭ರವರೆಗೆ ಗೆರಿಲ್ಲಾ ಸಮರ ಹೂಡಿದ್ದ ಕ್ಮೆ ರೂ ನಾಯಕ ಪೋಲ್ ಪೋಟ್ ಸತ್ತಿದ್ದು ೧೯೯೯ರಲ್ಲಿ. ಆಮೇಲೆ ಮತ್ತೆ ಒಂದು ದಶಕದ ಕಾಲ ಅಂತಃಕಲಹ ನಡೆಯುತ್ತದೆ. ಮತ್ತೆ ಸಿನ್‌ಹಾಕ್ ಅಮೆರಿಕಾದ ಬೆಂಬಲ ಪಡೆದು ಅಧಿಕಾರಕ್ಕೆ ಬರುತ್ತಾನೆ. ಈಗಲೂ ಸಿನ್‌ಹಾಕ್ ಮಗನೇ ಅಲ್ಲಿ ಅರಸು. ಒಂಥರದ ಪ್ರಜಾತಂತ್ರ ಇದೆ. ಸಿನ್‌ಹಾಕ್ ಈಗ ವಯೋವೃದ್ಧನಾಗಿ ಬೀಜಿಂಗ್‌ನಲ್ಲಿದ್ದಾನೆ. ಕ್ಯಾಂಬೋಡಿಯಾ ಈಗಲೂ ಒಂದು ಸುದೃಢ ದೇಶವಾಗುವುದಕ್ಕೆ ಹೆಣಗುತ್ತಿದೆ. ಅಲ್ಲಿ ಭ್ರಷ್ಟಾಚಾರ ವಿಪರೀತ.

೨೦೦೫ರ ಹೊತ್ತಿಗೆ ಕ್ಯಾಂಬೋಡಿಯಾದ ಶೇ. ೭೫ರಷ್ಟು ಜನತೆ ಯುವಕರೇ. ಹೀಗಾಗಿ ಪೋಲ್ ಪೋಟ್ ನಡೆಸಿದ ನರಮೇಧಗಳ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ಹೀಗಿದ್ದೂ ಈ ವರ್ಷದಿಂದ ಕ್ಯಾಂಬೋಡಿಯಾ ಪಠ್ಯದಲ್ಲಿ ಕ್ಮೆ ರೂ ನಡೆಸಿದ ನರಮೇಧಗಳ ಬಗ್ಗೆ ಪಾಠಗಳನ್ನು ಸೇರಿಸಲಾಗಿದೆ.

`ದಿ ಕಿಲ್ಲಿಂಗ್ ಫೀಲ್ಡ್ಸ್’ – ಬರೀ ಒಂದು ಒಳ್ಳೆಯ ಸಿನೆಮಾ ಮಾತ್ರವಲ್ಲ. ಸಮಕಾಲೀನ ಇತಿಹಾಸದ ವಾಸ್ತವಿಕ ದಾಖಲೆ. ಸುಮ್ಮನೇ ಚಿತ್ರೀಕರಿಸಿದ್ದರೆ ಒಂದು ಡಾಕ್ಯುಮೆಂಟರಿಯಾಗುತ್ತಿದ್ದ ಈ ಸಿನೆಮಾವನ್ನು ಒಂದು ಸಶಕ್ತ ಸಂದೇಶವನ್ನಾಗಿ ರೂಪಾಂತರಿಸಿದ ಹೆಗ್ಗಳಿಕೆ ನಿರ್ದೇಶಕ ರೋಲ್ಯಾಂಡ್‌ಗೆ ಸಲ್ಲುತ್ತದೆ.

ಪೂರ್ವದೇಶಗಳಲ್ಲಿ ಕಮ್ಯುನಿಸಂ ಕಡೆದಿಟ್ಟ ಕರಾಳ ಇತಿಹಾಸವನ್ನು ಅನುಭವಿಸಲು `ದಿ ಕಿಲ್ಲಿಂಗ್ ಫೀಲ್ಡ್ಸ್’ ನೋಡುವುದು ಒಂದು ಅತ್ಯುತ್ತಮ ಆರಂಭ.

1 Comment

  1. Murali

    Very nice blog. i have been enjoying reading various articls here. Thank you 🙂

Leave a Reply

Theme by Anders Norén