ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ನದೀಕಣಿವೆಯ ‘ಟೆಕ್’ ಸಂತನೊಂದಿಗೆ ಅರ್ಧ ದಿನ

`ನನ್ನ ಕಚೇರಿಯಲ್ಲಿ ಯಾರಿಗಾದರೂ ಪನಿಶ್‌ಮೆಂಟ್ ಕೊಡಬೇಕು ಅಂತ ಇದ್ರೆ ಅವರಿಗೆ ವಿಂಡೋಸ್ ಆಪರೇಟೆಡ್ ಕಂಪ್ಯೂಟರ್ ಕೊಟ್ಟು ಕೂಡಿಸಿದರೆ ಆಯ್ತು!’

ತನ್ನ ಸಿಗ್ನೇಚರ್ ನಗುವನ್ನು ಬೀರುತ್ತಲೇ ರಾಧಾಕೃಷ್ಣನ್ ಹೇಳುವಾಗ ನಾನು ಪೆದ್ದುಪೆದ್ದಾಗಿ ಬರೆದುಕೊಳ್ಳುತ್ತೇನೆ.

`ನೀವು ಇನ್ನೂ ವೈಸ್ವಿಗ್ (wysiwyg) ಮತ್ತು ಬಣ್ಣಬಣ್ಣದ ಪರದೆಗಳಿಂದ ಮುಕ್ತಿ ಹೊಂದಿಲ್ಲವೇ?’ ರಾಧಾಕೃಷ್ಣನ್ ಕಣ್ಣರಳಿಸಿ ಕೇಳಿದಾಗ `ಇಲ್ಲ ಸರ್, ನಾನಿನ್ನೂ ಇನ್‌ಡಿಸೈನ್ ಬಳಸುತ್ತಿದ್ದೇನೆ’ ಎಂದು ಪೆಚ್ಚುಪೆಚ್ಚಾಗಿ ಉತ್ತರಿಸುತ್ತೇನೆ. 

ಅವರು ನನ್ನನ್ನು ಒಬ್ಬ ಅಪರಾಧಿಯೆಂದು ಪರಿಗಣಿಸಿಯೂ ಪಕ್ಕದಲ್ಲಿ ಕೂಡಿಸಿಕೊಂಡು ಗಾಜಿನ ಲೋಟಕ್ಕೆ ಚಹಾ ಸುರಿಯುತ್ತಾರೆ. ಆ ಕ್ಯಾಂಟೀನಿನಲ್ಲಿ ಮೌನದ್ದೊಂದೇ ಸದ್ದು. ಬಿಟ್ಟರೆ ರಾಧಾಕೃಷ್ಣನ್‌ರ ದಿವ್ಯ ಚೇತನದ ಚಲನೆ.

`ಸರ್, ನಿಮ್ಮನ್ನು ಜೀವನದಲ್ಲಿ ಮೊದಲ ಸಲ ನೋಡುತ್ತಿದ್ದೇನೆ. ನಿಮ್ಮನ್ನು ನೋಡುವುದೇ ನನ್ನ ಆಸೆ. ಅಷ್ಟೆ’ ಎಂದು ಅವರನ್ನು ಕಂಡಕೂಡಲೇ ತಿಳಿಸಿದ್ದೆ.  `ಹೌದೆ?’ ಎಂದು ನಕ್ಕ ಅವರು ನನ್ನ ಮಗನ ಹೆಸರನ್ನೂ ಹೇಳಿ ವಿಚಾರಿಸಿದರು! ಈ ಅಪರಿಚಿತನ ಹಿನ್ನೆಲೆಯನ್ನು ಅವರು ಡಿಜಿಟಲ್ ಹೆಜ್ಜೆಗಳ ಮೂಲಕ ಅರಿತಿದ್ದರು. `ನನ್ನ ಬಗ್ಗೆ ಮೊದಲೇ ಬ್ಲಾಗ್ ಬರೆದಿದ್ದೀರ?’ ಎಂದು ಅಚ್ಚರಿಪಟ್ಟರು.

selected-river-7

ಅದಾಗಿ ಕೆಲವೇ ನಿಮಿಷಗಳಲ್ಲಿ ಅವರು ತಮ್ಮ ಯಾಂತ್ರೀಕೃತ ಗಾಲಿ ಕುರ್ಚಿಯಲ್ಲಿ ಕೂತು ಬನ್ನಿ ಎಂದು ಭರ್ರನೆ ಮೊಗಸಾಲೆಯಲ್ಲಿ  ಸಾಗಿ ನನ್ನನ್ನು ಕ್ಯಾಂಟೀನಿಗೆ ಕರೆದೊಯ್ದರು. ಅಲ್ಲೇ ನಾವು ಸುಮಾರು ಎರಡು ತಾಸು ಹರಟಿದೆವು. ನನಗಂತೂ ಎರಡು ನಿಮಿಷದ ಹಾಗೆ ಅನ್ನಿಸಿತು. ನಾನು ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿಲ್ಲ ಎಂದು ಅವರೇ ಸಮಾಧಾನ ಮಾಡಿದ ಮೇಲೆ ಸುಮ್ಮನೇ ಇರಲಾಗಲಿಲ್ಲ.

ವೈದ್ಯರ ಭವಿಷ್ಯ ನಿಜವಾಗಿದ್ದರೆ ರಾಧಾಕೃಷ್ಣನ್ ೧೯೮೩ರಲ್ಲೇ ಈ ಭೂಮಿಯನ್ನು ತೊರೆಯಬೇಕಿತ್ತು. (೧೯೭೮ರಲ್ಲಿ ಕಾಣಿಸಿಕೊಂಡ ನರಸಂಬಂಧೀ ರೋಗದಿಂದ ತತ್ತರಿಸಿದ ಅವರು ಹೇಗೆ ಮೇಲೆ ಬಂದು ಎಂದು ನನ್ನ ಬ್ಲಾಗಿನಲ್ಲಿ ಓದಿ). ಆದರೆ ೨೦೧೪ರ ಮೇ ೯ರ ಬೆಳಗ್ಗೆಯೂ ಅವರು ಚೇತೋಹಾರಿಯಾಗಿ ಓಡಾಡಿಕೊಂಡು, ೯೯ ಸ್ಥಳೀಯ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟು, ತಿರುವನಂತಪುರದ ಹೊರವಲಯದಲ್ಲಿ ತಮ್ಮದೇ ಕನಸಿನ ಕಚೇರಿ ಕಟ್ಟಿಕೊಂಡಿದ್ದಾರೆ. ಜಗತ್ತಿನ ಪ್ರತಿಷ್ಠಿತ ವಿಜ್ಞಾನದ ಜರ್ನಲ್‌ಗಳನ್ನು ವಿನ್ಯಾಸ ಮಾಡುವ  ವ್ಯವಹಾರದಲ್ಲಿ ಅವರೀಗ ಗ್ಲೋಬಲ್ ಲೀಡರ್. ಮೂವತ್ತೈದು ವರ್ಷಗಳ ಕಾಲ ಅವರ ಸಾಧನೆಯನ್ನು ಗಮನಿಸಿದ ಮೇಲೆ ಜವರಾಯ ವಾರೆನೋಟ ಬೀರಿದ್ದಾನೆ. ಈಗ ಅವರಿಗೆ ಹೆಚ್ಚು ನಡೆಯಲಾಗುವುದಿಲ್ಲ. `ತಲೆ ಒಂದೇ ಸಮ ಇದೆಯಲ್ಲ, ಬ್ಯಾಲೆನ್ಸ್ ತಪ್ಪಿ ಅದೂ ಹಾಳಾದರೆ ಸಮಸ್ಯೆ ಎಂದು ಈ ಕುರ್ಚಿ ಖರೀದಿಸಿದೆ’ ಎಂದು ರಾಧಾಕೃಷ್ಣನ್ ನಕ್ಕರು.

ಎರಡು ತಾಸು ನಾವು ಟೆಕ್, ಪುಸ್ತಕಗಳ ಡಿಸೈನ್ ಅಂಶಗಳು, ಮುಖಪುಟಗಳು, ಫಾಂಟ್, ಡಿಜಿಟೈಸೇಶನ್, ಇತಿಹಾಸ, ಪಿಡಿಎಫ್, ಸ್ಟೈಲ್‌ಬುಕ್, ಎಡಿಟಿಂಗ್ – ಹೀಗೆ ಎಷ್ಟೋ ಸಂಗತಿಗಳ ಬಗ್ಗೆ ಮಾತನಾಡಿದೆವು. ಬರೀ ಪತ್ರಕರ್ತನಾಗಿ ಪುಸ್ತಕವಿನ್ಯಾಸವನ್ನು ಅರೆಬರೆ ಕಲಿತ ನಾನೆಲ್ಲಿ? ದಶಕಗಳ ಕಾಲ ತಲೆಯೊಳಗೇ ಮೂಡುವ ವಿನ್ಯಾಸವನ್ನು ಕೇವಲ ಸೋರ್ಸ್‌ಕೋಡ್‌ಗಳ ಮೂಲಕ ಕಂಪೈಲ್ ಮಾಡಿ ಇನ್‌ಡಿಸೈನಿಗೇ ಹೊಟ್ಟೆ ಉರಿಯುವ ಹಾಗೆ ವಿನ್ಯಾಸ ಮಾಡುತ್ತಿರುವ ಅವರೆಲ್ಲಿ? ಆದರೂ ಹೇಗೋ ಸಂಭಾಳಿಸಿದೆ!

`ವಿನ್ಯಾಸ ಮಾಡುವುದಕ್ಕೆ ಮೂಲತಃ ಬೇಕಾದ್ದು ಕಂಪ್ಯೂಟರ್ ಅಲ್ಲ; ಕಮಿಟ್‌ಮೆಂಟ್. ಏಕೆಂದರೆ ನಾನೀಗ ಎಷ್ಟೆಲ್ಲ ಬಿಡಿಬಿಡಿ ತಂತ್ರಾಂಶಗಳನ್ನು ರೂಪಿಸಿದ್ದೇನೆ ಎಂದರೆ, ಒಂದು ಪುಸ್ತಕದ ಸ್ಪೈನ್ (ಪುಸ್ತಕದ ದಪ್ಪದ ಅಳತೆ) ನ್ನು ಕೂಡಾ ಆಟೋಮ್ಯಾಟಿಕ್ ಆಗಿ ಮಾಡುತ್ತೇವೆ; ಒಮ್ಮೆ ಎಲ್ಲ ಮಾಹಿತಿಗಳನ್ನು ಊಡಿಸಿದರೆ ಸಾಕು, ಮೂರು ನಿಮಿಷದಲ್ಲಿ ವಿನ್ಯಾಸ ಸಿದ್ಧ!’ ಅರೆ ಇನ್‌ಡಿಸೈನಿನಲ್ಲಿ ಮೂರು ಗಂಟೆಗಳಲ್ಲಿ ಮಾಡುವುದನ್ನು ಮೂರು ನಿಮಿಷದಲ್ಲಿ ಮಾಡಬಹುದು ಎನ್ನುತ್ತಿದ್ದಾರೆ!

`ಹಾಗಂತ ತಂತ್ರಜ್ಞಾನ ಇಲ್ಲ ಎಂದು ಭಾವಿಸಬೇಡ. ಎಲ್ಲವನ್ನೂ ಬಹಳ ವರ್ಷಗಳಿಂದ ರೂಪಿಸಿಕೊಂಡು ಬಂದಿದ್ದೇವೆ. ಎಲ್ಲವೂ ವೆಂಡರ್ ಲಾಕ್ ಆಗಿಲ್ಲ; ಓಪನ್‌ಸೋರ್ಸ್. ಆದ್ದರಿಂದಲೇ ನಮಗೆ ಇದೆಲ್ಲ ಸಾಧ್ಯವಾಗಿದೆ’ ಎಂದು ಅವರು ನನ್ನನ್ನು ಸಮಾಧಾನ ಮಾಡಿದರು. `ನಿನ್ನ ಕಚೇರಿಯಲ್ಲಿ ಎಲ್ಲವನ್ನೂ ಓಪನ್‌ಸೋರ್ಸ್ ಮಾಡಬೇಕು ಎಂಬ ಹಟ ಇದ್ದರೆ ಮಾತ್ರ ಸಾಧ್ಯ’ ಎಂದು ನನ್ನನ್ನು ಎಚ್ಚರಿಸಿದರು. ಟೆಕ್‌ಗಿಂತ ಮೊದಲು ಸ್ಕ್ರೈಬಸ್, ಗಿಂಪ್ ಶುರುಮಾಡು ಎಂದಾಗ ಬಚಾವಾದೆ ಅನ್ನಿಸಿತು! ಅವನ್ನೆಲ್ಲ ನನ್ನ ಕಚೇರಿಯ ಕಂಪ್ಯೂಟರುಗಳಲ್ಲಿ (ಎರಡು ಉಬುಂಟು ಓಎಸ್ ಸೇರಿದಂತೆ) ಸ್ಥಾಪಿಸಿದ್ದೆ.

selected-river-1

selected-river-6

ನೇಚರ್ ಸೆಲ್ ಬಯಾಲಜಿ, ಪ್ಲೋಸ್, ಎಲ್ಸ್‌ವೀರ್, ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್, ಕ್ಯೂಸೈನ್ಸ್, ಸ್ಪೈ – ಹೀಗೆ ಜಗತ್ತಿನ ೮೦ಕ್ಕೂ ಹೆಚ್ಚು ಪ್ರತಿಷ್ಠಿತ ಜರ್ನಲ್‌ಗಳನ್ನು ರೂಪಿಸುತ್ತ ಬಂದಿರುವ ರಾಧಾಕೃಷ್ಣನ್‌ರ ರಿವರ್‌ವ್ಯಾಲಿ ಟೆಕ್ನಾಲಜೀಸ್ (ನನ್ನ ಕಂಪೆನಿ ಹೆಸರು ರಿವರ್‌ಥಾಟ್ಸ್!) ಭಾರತದ ಹೆಮ್ಮೆ. ಕೇವಲ ಜಗತ್ತಿನ ಪ್ರಮುಖ ವಿನ್ಯಾಸ ಸಂಸ್ಥೆಯೆಂದಷ್ಟೇ ಅಲ್ಲ, ನೂರಕ್ಕೆ ನೂರು ಸ್ಥಳೀಯ ವಿಜ್ಞಾನದ ಹಿನ್ನೆಲೆಯ ಪದವೀಧರ ಪ್ರತಿಭೆಗಳನ್ನೇ ಆಯ್ಕೆ ಮಾಡಿ, ಮೂರು ತಿಂಗಳುಗಳ ತರಬೇತಿ ಕೊಟ್ಟು ಅವರನ್ನೆಲ್ಲ ಇಂಥ ಕೆಲಸದಲ್ಲಿ ಸಮರ್ಥವಾಗಿ ತೊಡಗಿಸಿದ್ದಕ್ಕೆ! ತಿರುವನಂತಪುರದ ಸುತ್ತಮುತ್ತಲ ಹಳ್ಳಿಗಳ ಪದವೀಧರ ವನಿತೆಯರನ್ನೇ ಸಂದರ್ಶನ ಮಾಡಿ ಕೆಲಸಕ್ಕೆ ಸೇರಿಸಿಕೊಳ್ಳುವ ರಿವರ್‌ವ್ಯಾಲಿ ಸಂಸ್ಥೆಯು ಸಿಬ್ಬಂದಿ ಸ್ನೇಹಿ ಎಂಬುದು ಒಟ್ಟಾರೆ ವಾತಾವರಣದಿಂದಲೇ ಗೊತ್ತಾಗುತ್ತದೆ. ಬೆಳಗ್ಗೆ ೭ರಿಂದ ಹತ್ತು ಗಂಟೆ ಒಳಗೆ ಯಾವಾಗ ಬೇಕಾದರೂ ಹಾಜರಿ ಹಾಕಿ ಎಂಟು ತಾಸು ಕೆಲಸ ಮಾಡಿದರೆ ಸರಿ! ೧೯೯೯ರಲ್ಲಿ ಇದ್ದ ೩೧ ಜನರಲ್ಲಿ ೨೬ ಮಂದಿ ಈಗಲೂ ಇದೇ ಸಂಸ್ಥೆಯಲ್ಲಿ ಮುಂದುವರೆದಿದ್ದಾರೆ ಎನ್ನುವುದೇ ರಾಧಾಕೃಷ್ಣನ್‌ರ ಅಕ್ಕರೆಯ ಕಾರ್ಯಸಂಸ್ಕೃತಿಗೆ ನಿದರ್ಶನ.

ಪ್ರತಿಷ್ಠಿತ ಜರ್ನಲ್‌ಗಳ  ಸಂಪಾದನೆ, ವಿನ್ಯಾಸ

ಈ ಸಂಸ್ಥೆಯು ವಹಿಸಿಕೊಂಡಿರುವ ಇನ್ನೊಂದು ಮುಖ್ಯ ಕೆಲಸ ಎಂದರೆ ಈ ಜರ್ನಲ್‌ಗಳನ್ನು ಸಂಪಾದಿಸುವುದು. ಪತ್ರಿಕೆಯ, ಪ್ರಕಾಶನ ಸಂಸ್ಥೆಯ ನೀತಿ ನಿಯಮಗಳು ಹಾಗೂ ಶೈಲಿಗೆ ಅನುಗುಣವಾಗಿ, ಅದರ ಓದುಗರಿಗೆ ಅರ್ಥವಾಗುವಂತೆ, ಅದಾಗಲೇ ಸಿದ್ಧವಾದ ಸ್ಟೈಲ್‌ಶೀಟ್ ಪ್ರಕಾರವೇ, ತಪ್ಪಿಲ್ಲದಂತೆ ಕರಡನ್ನು ಸಿದ್ಧಗೊಳಿಸುವುದು ಈ ಸಂಸ್ಥೆಯ ವಿಶೇಷ. ಇದಕ್ಕಾಗಿಯೇ ಫ್ರೀಲ್ಯಾನ್ಸ್ ಸಂಪಾದನಾ ತಜ್ಞರನ್ನು ರಾಧಾಕೃಷ್ಣನ್ ನೇಮಿಸಿಕೊಂಡಿದ್ದಾರೆ (ನನ್ನ ಕಂಪೆನಿಯದೂ ಫ್ರೀಲ್ಯಾನ್ಸ್ ಸೇವೆಯ ಫಿಲಾಸಫಿ ಎಂದು ಖುಷಿಯಾಯ್ತು).  `ಕಾಪಿ ಎಡಿಟಿಂಗ್’ ಈ ಕೆಲಸಗಳಲ್ಲೇ ಅತ್ಯಂತ ಮೇಧಾವಿತನ ಮತ್ತು ತಜ್ಞತೆ ಬೇಡುವ ಕೆಲಸ. ಆದರೆ `ಟೆಕ್’ನ ಸ್ಕ್ರಿಪ್ಟ್ ಬಳಕೆಯಿಂದಾಗಿ ಮೊದಲ ಹಂತದಲ್ಲೇ ಹಲವಾರು ಲೋಪದೋಷಗಳನ್ನು ತಿದ್ದುವ ಮಟ್ಟಿಗೆ ಬೆಳವಣಿಗೆ ಸಾಧಿಸಿದ್ದಾರೆ ರಾಧಾಕೃಷ್ಣನ್. `ಯಾಂತ್ರಿಕ ಹಂತದಲ್ಲೇ ಕರಡು ಬಹುತೇಕ ತಪ್ಪುಗಳಿಂದ ಮುಕ್ತವಾಗುತ್ತದೆ. ಅದಾದ ಮೇಲೆ ಭಾಷೆಯ ಲೋಪಗಳ ಕಡೆ ಗಮನ ಕೊಡುತ್ತೇವೆ’ ಎಂದು ಅವರು ತಿಳಿಸಿದರು.

selected-river-2

selected-river-3

selected-river-5

ಇನ್ನು ವಿನ್ಯಾಸಕ್ಕೆ ಸಂಬಂಧಿಸಿದಂತೆ ಬಿಬಿಲೋಗ್ರಫಿ, ಪಂಕ್ಚುಯೇಶನ್, ಸೈಟೇಶನ್, ಹೈಪರ್‌ಲಿಂಕ್, ಫುಟ್‌ನೋಟ್, ಇನ್‌ಲೈನ್ ಫುಟ್‌ನೋಟ್ (ಸಾಲಿನ ಕೆಳಗೇ ಟಿಪ್ಪಣಿ), ಫುಟರ್, ಫುಟರ್ ಇನಸೈಡ್ ಫುಟರ್ (ತುದಿಟಿಪ್ಪಣಿ ಮತ್ತು ತುದಿಟಿಪ್ಪಣಿಗೂ ಟಿಪ್ಪಣಿ), ಇವೆಲ್ಲವನ್ನೂ ಲೀಲಾಜಾಲವಾಗಿ ಮಾಡುತ್ತೇವೆ ಎಂದು ಮತ್ತೆ ರಾಧಾಕೃಷ್ಣನ್ ತುಂಟ ನಗು ಬೀರಿದರು. `ಡಬಲ್ ಕಾಲಂ ಫುಟ್‌ನೋಟ್’ನ್ನೂ ಅವರು ಬಳಸಿದ್ದಾರಂತೆ.

ಹೀಗೆ ಸಿದ್ಧವಾಗುವ ಪುಸ್ತಕವನ್ನು ಅವರು ನೇರವಾಗಿ ಮುದ್ರಣಾಲಯಕ್ಕೆ ಕಳಿಸುತ್ತಾರೆ. ಸಾಮಾನ್ಯವಾಗಿ ಈ-ಮ್ಯಾಗಜಿನ್‌ಗಳಾಗಿಯೇ ಇವು ಹಂಚಿಕೆಯಾಗುತ್ತವೆ ಅನ್ನಿ.

ವಿನ್ಯಾಸದ ಈ ಎಲ್ಲ ಹಂತಗಳ ಕೆಲಸಗಳನ್ನೂ ವಸ್ತುನಿಷ್ಠವಾಗಿ ನೋಡಿಕೊಳ್ಳುವ ಒಂದು ಯಾಂತ್ರೀಕೃತ ವಿಶ್ಲೇಷಣಾ ವ್ಯವಸ್ಥೆಯನ್ನು ರೂಪಿಸಿರುವುದರಿಂದ ಎಲ್ಲೂ ತಾರತಮ್ಯ ಮತ್ತು ವ್ಯಕ್ತಿಗತ ಅಭಿಪ್ರಾಯಗಳು ತೂರಿಕೊಳ್ಳುವುದಿಲ್ಲ. ಬಳಸುವ ಎಲ್ಲಾ ತಂತ್ರಾಂಶಗಳೂ ಓಪನ್ ಸೋರ್ಸ್ ಎಂದು ಮತ್ತೆ ಹೇಳಬೇಕೆ?

ಪಠ್ಯೇತರ ಚಟುವಟಿಕೆಗಳ ಖನಿ

ಇದು ಅವರ ಸಂಸ್ಥೆಯ ಕೆಲಸವಾಯ್ತು. ಇದರ ಜೊತೆಗೇ ರಾಧಾಕೃಷ್ಣನ್ ಹಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸಾಯಣಾರ್ ಪ್ರತಿಷ್ಠಾನದ ಮೂಲಕ ತಾಳೆ ಗರಿಗಳ ಡಿಜಿಟೈಸೇಶನ್ (ಇವುಗಳನ್ನು ಡಿಜೆವಿಯು ಫಾರ್ಮಾಟಿನಲ್ಲಿ ರೂಪಿಸಿದ್ದಾರೆ)ಗೆ ಕ್ರೌಡ್ ಸೋರ್ಸಿಂಗ್ ನೆರವು ಪಡೆದಿದ್ದಾರೆ. ಏಳು ಸಂಪುಟಗಳ ಮಲಯಾಳಂ ಇತಿಹಾಸ ಮತ್ತು ೩೦ ಇತರೆ ಪುಸ್ತಕಗಳು ಪ್ರಕಟವಾಗಿವೆ.  ಓಪನ್ ವಿಕಿ ಹಿಸ್ಟರಿ ಪುಟಗಳಲ್ಲಿ ಕೇರಳದ ಇತಿಹಾಸವನ್ನು ಮೂಡಿಸುವ ಉತ್ಸಾಹದಲ್ಲಿ ಇದ್ದಾರೆ. ಹಿಸ್ಟರಿ ಆಫ್ ಸೈನ್ಸ್ ಆಫ್ ಸೌತ್ ಏಶ್ಯಾ ಎಂಬ ಜರ್ನಲ್‌ನ್ನೂ ನಡೆಸುತ್ತಿದ್ದಾರೆ. ಎಡಪಂಥೀಯ ವಿಚಾರಗಳ ಬಗ್ಗೆ ಒಲವಿರುವ ರಾಧಾಕೃಷ್ಣನ್‌ಗೆ ನಮ್ಮ ದೇಸಿ ಸಂಸ್ಕೃತಿಯ ಬಗ್ಗೆಯೂ ಅಪಾರವಾದ ಗೌರವ ಇದೆ.

ಮಾತಿನ ನಡುವೆ ಫಾಂಟ್ ರಚನೆಯ ವಿಷಯ ಬಂದಾಗ ನಾನು ನೇರವಾಗಿ ಕೇಳಿದೆ: `ಸರ್, ಕನ್ನಡ, ಮಲಯಾಳಂ, ತಮಿಳು, ತೆಲುಗಿನಂಥ ಉರುಟುರುಟು ಅಕ್ಷರಗಳಿಗೆ ಮೆಟಾಫಾಂಟ್ ತಂತ್ರಜ್ಞಾನದ ಫಾಂಟ್ ತಯಾರಿ ಸೂಕ್ತವಲ್ಲವೆ? ನಾನು  ಮೆಟಾಫಾಂಟ್ ಬಗ್ಗೆ ಹೇಳಿದರೆ ತಪ್ಪಾಗುತ್ತದೆಯೆ?’ ನನಗೆ ಕನ್ನಡದ ಫಾಂಟ್‌ಗಳ ಮಟ್ಟಿಗೆ ಒಂದು ಖಚಿತ ಉತ್ತರ ಬೇಕಿತ್ತು.

`ಖಂಡಿತ ನೀನು ಹೇಳೋದು ಸರಿ. ಆದರೆ ಫಾಂಟ್ ಅಭಿವೃದ್ಧಿಪಡಿಸೋದು ಜೀವಮಾನದ ಸಾಧನೆಯಾಗಬೇಕೇ ಹೊರತು ಅವಸರದ ಕ್ರಿಯೆ ಆಗಬಾರದು; ಹಾಗೆ ಮಾಡಲು ಸಾಧ್ಯವೂ ಇಲ್ಲ. ಅದಕ್ಕೇ ನಾನು ನನ್ನ ಈ ಕೆಲಸ ಮುಗಿದ ಮೇಲೆ, ಬೇರೆ ಯಾವುದೇ ಕೆಲಸಗಳೂ ಇರದ ಕಾಲಾವಧಿಯಲ್ಲಿ ನನ್ನ ಸಮಯವನ್ನೆಲ್ಲ ಫಾಂಟ್ ಅಭಿವೃದ್ಧಿಗೇ ಕೊಡಬೇಕೆಂದು ನಿರ್ಧರಿಸಿದ್ದೇನೆ. ಸದ್ಯಕ್ಕಂತೂ ಆ ದಿನ ಕಾಣುತ್ತಿಲ್ಲ’ ಎಂದರು. ಕರ್ನಾಟಕ ಸರ್ಕಾರವು ಹೇಗೆ ಫಾಂಟ್‌ನ್ನು ಅಭಿವೃದ್ಧಿಪಡಿಸಿತು ಮತ್ತು ಯಾವ ಮಾನದಂಡಗಳನ್ನು ಅನುಸರಿಸಿತು ಎಂಬ ನನ್ನ ಅಭಿಪ್ರಾಯಸಹಿತದ ಕಥೆಯನ್ನು ಅವರಿಗೆ ವಿವರಿಸಿದೆ. ಸುಮ್ಮನೆ ನಕ್ಕರು. `ಮೆಟಾಫಾಂಟ್ ವಿಧಾನವೇ ಅತ್ಯುತ್ತಮ’ ಎಂದು ಮಾತು ಮುಗಿಸಿದರು.

ಸಂಗಾತಿ ವಿದ್ಯಾ

ಎಷ್ಟೋ ದಿನಗಳಿಂದ ಬಾಕಿ ಇದ್ದವರಂತೆ ಚಟಪಟ ಮಾತನಾಡುತ್ತ ಕೂತಾಗ, ಕ್ಯಾಂಟೀನಿನಲ್ಲಿ ಊಟದ ತಯಾರಿ ನಡೆಸಿದ ಮಹಿಳೆಯೇ ವಿದ್ಯಾ ಎಂದು ತಿಳಿದಾಗ ನನ್ನ ಪತ್ನಿಗೆ ಅಚ್ಚರಿ! ಕಂಪೆನಿ ಮಾಲೀಕರು ಊಟ ಬಡಿಸಬಹುದೆ? ಜವರಾಯನ ಇರುವಿಕೆಯನ್ನು ಒಪ್ಪಿಕೊಂಡೇ ಬಂದ ಅವರಿಗೆ ಸಾಥಿಯಾಗಿದ್ದಾರೆ, ಅದೇ ಸಂಸ್ಥೆಯಲ್ಲಿ ಎರಡು ದಶಕದಿಂದ ದುಡಿಯುತ್ತಿರುವ ವಿದ್ಯಾ. ಅವರಿಗೂ ಆರೋಗ್ಯದ ಸಮಸ್ಯೆ ಇದೆ. ಆದರೆ ವಿದ್ಯಾರ ಮೆದು ಮಾತು, ಸಹೋದ್ಯೋಗಿಗಳೊಂದಿಗೆ ಕೂತು ಹರಟುವ ಪರಿಯನ್ನು ಕಂಡರೆ, ಅವರ ಖುಲ್ಲಂಖುಲ್ಲಾ ನಗುವನ್ನು ಅನುಭವಿಸಿದರೆ, ಎಂಥ ಧೀರೆ ಎನ್ನಿಸುತ್ತದೆ.

ಅಪ್ಪಟ ಕೇರಳ ಶೈಲಿಯ ಊಟ ಮಾಡುತ್ತ ಅದೂ ಇದೂ ವೈಯಕ್ತಿಕ ಸಂಗತಿಗಳನ್ನು ಚರ್ಚಿಸಿದೆವು. `ನಿನ್ನ ಕಂಪೆನಿಯಲ್ಲಿ ಹೊಸಬರನ್ನೇ ಸೇರಿಸಿಕೊಂಡು ತರಬೇತಿ ಕೊಡು. ಇಲ್ಲದೇ ಹೋದರೆ ಹಳೆ ಕಸದ ನಿವಾರಣೆ ಕಷ್ಟ’ ಎಂದು ಕಿವಿಮಾತು ಹೇಳಿದರು.   ವಿದ್ಯಾರವರ

ತಿರುವನಂತಪುರದ ನೆಯ್ಯಾರ್ದಂ ಪ್ರದೇಶದ ಮಲಯಂಗೀಳ್‌ನ ಗ್ರಾಮೀಣ ವಾತಾವರಣದಲ್ಲಿ ಅರಳಿರುವ ನದೀಕಣಿವೆಯ ಸುತ್ತಮುತ್ತ ಒಂದು ನಡೆದಾಟ ಮಾಡಿದೆ. ಅಡುಗೆ ತ್ಯಾಜ್ಯವನ್ನು ಅನಿಲವಾಗಿ ಪರಿವರ್ತಿಸುವ ಘಟಕವನ್ನು ಸ್ಥಾಪಿಸಿದ್ದಾರೆ. ಸ್ಥಾಪನಾ ವೆಚ್ಚದ ಭಯದಿಂದ ಸೌರಶಕ್ತಿ ಘಟಕ ಸ್ಥಾಪಿಸಿಲ್ಲ. ಆದರೆ ಇಡೀ ಕಚೇರಿಯು ಅಂಥ ಕರಾವಳಿ ಬಿಸಿಲಿನಲ್ಲೂ ತಂಪಾಗಿತ್ತು. ಈಗ ರಾಧಾಕೃಷ್ಣನ್ ಕುಂಭಕೋಣಂನಲ್ಲೂ ಕಚೇರಿ ತೆರೆದಿದ್ದಾರೆ.

ಅವರ ಕಚೇರಿಯ ದೃಶ್ಯಗಳನ್ನು ಹಲವು ಕೋನಗಳಿಂದ ಸೆರೆಹಿಡಿದೆ. ರಾಧಾಕೃಷ್ಣನ್‌ರನ್ನೇ ಹಲವು ಕೋನಗಳಲ್ಲಿ ಸೆರೆಹಿಡಿಯಲು ಹೋದಾಗ ಅವರು ತುಂಬಾ ಸಂಕೋಚದಿಂದ ಕುಳಿತಿದ್ದರು.

ರಾಧಾಕೃಷ್ಣನ್ ನಮ್ಮ ನಡುವಿನ ಭರವಸೆ; ಮುಕ್ತ ತಂತ್ರಜ್ಞಾನದ ಅತ್ಯುತ್ತಮ ಹರಿಕಾರ. ಸ್ಥಳೀಯ ಪ್ರತಿಭೆಗಳನ್ನು ಅಲ್ಲೇ ಬಳಸಿಕೊಂಡ ಅದ್ವಿತೀಯ ಉದ್ಯಮಶೀಲ ವ್ಯಕ್ತಿತ್ವ.

ಇವರು ಇನ್ನೂ ಐದಾರು ದಶಕಗಳ ಕಾಲ ಓಡಾಡಬೇಕು; ನಮಗೆಲ್ಲ ಮಾರ್ಗದರ್ಶನ ನೀಡಬೇಕು. ಹಾಗೆಂದು ಪ್ರಾರ್ಥಿಸೋಣ.

Leave a Reply

Theme by Anders Norén