ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಮಾಹಿತಿ / ಲೇಖನ, ಲೇಖನಗಳು

ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್

ಸಮರ್ಥನಂ ಸಂಸ್ಥೆಯ ಆ ಶಾಲೆಗೆ ಹೋದಾಗ ಎಲ್ಲರೂ ಬ್ಯುಸಿಯಾಗಿದ್ರು. ನಾವು ಒಳಹೋದ ಕ್ಷಣದಲ್ಲೇ ಪ್ರಿಯಾ ಬಂದು ನಮ್ಮನ್ನು ಸ್ವಾಗತಿಸಿದರು. ಪುಟ್ಟ ದೇಹ, ನಗುಮುಖ. ಸ್ನೇಹಪರ ಮಾತು. ಸೀದಾ ಮೆಟ್ಟಿಲು ಹತ್ತಿ ಗಣಕದ ಕೊಠಡಿಗೆ ಹೋದೆವು. ಅಲ್ಲಿ ಎಲ್ಲರೂ ಕಂಪ್ಯೂಟರುಗಳಲ್ಲಿ ಏನೇನೋ ಕೆಲಸ ಮಾಡುತ್ತ ಕೂತಿದ್ದರು.

ಪ್ರಿಯಾರ ಹಿಂದೆಯೇ ಕಪ್ಪು ಕನ್ನಡಕ ಧರಿಸಿದ ವ್ಯಕ್ತಿಯೊಬ್ಬರು ಬಂದರು. ಎಲ್ಲೋ ನೋಡಿದ್ದೆನಾ ಅನ್ನಿಸಿತು. `ಇವರು ನಮ್ಮ ಫೆಕಲ್ಟಿ ಸರ್’ ಎಂದು ಪ್ರಿಯಾ ಪರಿಚಯಿಸಿದಾಗ ನನಗೆ ಮಿಂಚು ಹೊಡೆದಂತಾಯಿತು.

‘ನಿಮ್ಮ ಹೆಸರು?’  ಎಂದು ಮತ್ತೊಮ್ಮೆ ಗಟ್ಟಿಯಾಗಿ ಕೇಳಿದೆ.

`ಜಸ್ಟಿನ್’ ಎಂದು ಅವರು ಉತ್ತರಿಸಿದರು.

ಹತ್ತು ವರ್ಷಗಳ ಹಿಂದೆ ಸಂಪರ್ಕ ಕಡಿದುಕೊಂಡಿದ್ದ ಜಸ್ಟಿನ್ ನನ್ನೆದುರು ಮತ್ತೆ ಅದೇ ಮಂದಸ್ಮಿತ, ಮುಗ್ಧ ಚಹರೆಯೊಂದಿಗೆ ನಿಂತಿದ್ದರು.

2002ರಲ್ಲಿ ನಾನು `ವಿಜಯ ಕರ್ನಾಟಕ’ದಲ್ಲಿ ಮ್ಯಾಗಜಿನ್ ಸಂಪಾದಕನಾಗಿದ್ದಾಗ ನಮ್ಮ ಜಸ್ಟಿನ್ ತುಂಬಾ ಫಾಸ್ಟ್’  ಎಂಬ ಲೇಖನ ಬರೆದಿದ್ದೆ. ಬರೀ ಜಸ್ಟಿನ್ ನೆನಪಿನಲ್ಲೇ ಆ ಲೇಖನ ಬರೆದಿದ್ದೆ. ಎಷ್ಟೋ ಜನ ಜಸ್ಟಿನ್ ಕುರಿತ ಲೇಖನ ಚೆನ್ನಾಗಿತ್ತು ಎಂದು ತಿಳಿಸಿದ್ದರು. ಸರಾಗ, ಹೈಪರ್ ಲಿಂಕ್ ರಹಿತ ಓದಿಗಾಗಿ ಈ ಲೇಖನವನ್ನು ಮತ್ತೊಮ್ಮೆ ಇಲ್ಲಿ ಕೊಡುವೆ. ಓದಿದ ಮೇಲೆ ಮತ್ತೆ ವಾಸ್ತವಕ್ಕೆ ಬರೋಣ:

ನಮ್ಮ ಜಸ್ಟಿನ್ ತುಂಬಾ ಫಾಸ್ಟ್

(I wrote this article while I was in Vijaya Karnataka. I have no contact with Justin since many years. Still, his memory is lingering in my heart.)

ಇಂಟರ್‌ನೆಟ್ ಅಂದ್ರೆ ನನಗೆ ಒಂಥರ ಕ್ರೇಜ್. ಕಳೆದ ಎರಡು ವರ್ಷಗಳಲ್ಲಿ ನಾನು ಕೆಲಸ ಮಾಡಿದಲ್ಲೆಲ್ಲ ನಲ್ಲಿನೀರು ಬಂದಂತೆ ಇಂಟರ್‌ನೆಟ್ ಸಂಪರ್ಕ ಇತ್ತು. ವಿಶ್ವವ್ಯಾಪಿ ಜಾಲದೊಳಗೆ ನನ್ನ ಹಾಗೆ ಬೇರಾರೂ ಈಜಾಡಿಲ್ಲ ಎಂಬ ಹಮ್ಮು ಬೇರೆ. ಗೊತ್ತಿಲ್ಲದವರನ್ನು ಕೆಲವು ಸಲ ಗೇಲಿ ಮಾಡಿದ್ದೂ ಇದೆ. ಜೋಕುಗಳನ್ನು ಕಟ್ ಮಾಡಿದ್ದೂ ಇದೆ. ಆದ್ರೆ ಕೆಲವು ತಿಂಗಳುಗಳ ಹಿಂದೆ ನನ್ನ ಗರ್ವಭಂಗ ಆಯ್ತು.

ನಾನು ಕೆಲಸ ಮಾಡ್ತಿದ್ದ ಟಿ ವಿ ಕಂಪನಿಯಲ್ಲಿ ಟ್ರಾನ್ಸ್‌ಕ್ರೈಬ್ ಕೆಲಸ ಮಾಡಲಿಕ್ಕೆ ಒಬ್ಬ ಸೇರಿಕೊಂಡ. ಅವನ ಕೆಲಸ ತೀರಾ ಸುಲಭ. ಕಿವಿಗೆ ವಾಕ್‌ಮನ್‌ನ ಸ್ಪೀಕರುಗಳನ್ನು ಸಿಕ್ಕಿಸಿಕೊಳ್ಳೋದು. ಇಂಗ್ಲಿಶಿನಲ್ಲಿ ಹೇಳಿದ ಭಾಷಣ, ಸಂದರ್ಶನವನ್ನು ಸೀದಾ ಕಂಪ್ಯೂಟರಿನೊಳಕ್ಕೆ ಸಾಗಿಸೋದು. ಅದೂ ಇಂಗ್ಲಿಶ್ ಭಾಷೆಯಲ್ಲಿ.

ಜಸ್ಟಿನ್ ಬಂದಾಗ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಎಷ್ಟಂದರೂ ಕಾರಕೂನಿಕೆ ಕೆಲಸ ಮಾಡುವವ. ಅವನಿಗೆಲ್ಲಿ ಕಂಪ್ಯೂಟರ್ ಸಿಕ್ಕೀತು, ನನ್ನ ಹಾಗೆ ಖರ್ಚು ಮಾಡಲು ಹಣ ದಕ್ಕೀತು ? ಅವನಿಗೆ ಇಂಟರ್‌ನೆಟ್ ಸಂಪರ್ಕ ತೀರಾ ಕಡಿಮೆ ಎಂದೇ ಭಾವಿಸಿದ್ದೆ. ಮೊದಲ ದಿನವೇ ನನ್ನ ಊಹೆ ಸುಳ್ಳಾಯಿತು. ಅಂದು ತಾನೇ ಬಂದಿದ್ದ ಮಾಹಿತಿ ತಂತ್ರeನದ ಸುದ್ದಿ ಜಸ್ಟಿನ್‌ಗೆ ತಿಳಿದಿತ್ತು. ಹಾಗೇ ದೋಸ್ತಿ ಹೆಚ್ಚಿಸಿಕೊಂಡೆ. ಜಸ್ಟಿನ್‌ಗೆ ಕೆಲಸ ಮಾಡುವಾಗ ಇರೋ ಏಕಾಗ್ರತೆ ಮಾತನಾಡೋವಾಗ್ಲೂ ಇರುತ್ತೆ. ಯಾವತ್ತೂ ಸಂಯಮ ಮೀರದ ಮಾತು. ಅಚ್ಚಗನ್ನಡದಲ್ಲಿ ವಾಕ್ಯಗಳು. ಅಲ್ಲಲ್ಲಿ ಲಘು ಹಾಸ್ಯ. ದಿನದ ಯಾವುದೇ ರಾಜಕೀಯ ಬೆಳವಣಿಗೆಯ ಬಗ್ಗೆ ಜಸ್ಟಿನ್‌ಗೆ ಅವನದೇ ಅಭಿಪ್ರಾಯಗಳು ಇರುತ್ತಿದ್ದವು.

ಒಂದು ವಾರ ಕಳೆದಿರಬೇಕು. ಜಸ್ಟಿನ್ ಸೀದಾ ನನ್ನ ಹತ್ರಬಂದ. ಗೊತ್ತ , ವಿವಿಸಿಮೋ ಡಾಟ್ ಕಾಮ್ ಅಂತ ಒಂದು ಹೊಸ ಸರ್ಚ್ ಎಂಜಿನ್ ಬಂದಿದೆ ಅಂದ. ನಾನು ಬೆವರಿದೆ. ಅಷ್ಟು ದಿನ ನಾನು ಸರ್ಚ್ ಎಂಜಿನ್‌ಗಳು ಅಂದ್ರೆ ಏನು ಅಂತ ನನ್ನ ಮುಗ್ಧ ಸಹೋದ್ಯೋಗಿಗಳಿಗೆ ಬಿಟ್ಟಿ ಲೆಕ್ಚರ್ ಕೊಡುತ್ತಿದ್ದೆ. ವಿವಿಸಿಮೋ ನೋಡಿದೆ. ನಿಜಕ್ಕೂ ಜಸ್ಟಿನ್ ಆಯ್ಕೆ ಚೆನ್ನಾಗಿತ್ತು. ಈ ಸರ್ಚ್ ಎಂಜಿನ್‌ನಲ್ಲಿ ಏನನ್ನೇ ಹುಡುಕಿದರೂ ಅದನ್ನು ನೀಟಾಗಿ ಲೇಖನ, ವ್ಯಕ್ತಿಚಿತ್ರ, ಛಾಯಾಚಿತ್ರ, ಇತರೆ ಹೀಗೆಲ್ಲ ವಿಭಾಗಿಸಿ ಕೊಡ್ತಾರೆ. ಅದೂ ಕ್ಷಣ ಮಾತ್ರದಲ್ಲಿ. ಜಸ್ಟಿನ್ ಬಗ್ಗೆ ನಾನು ಹೊಂದಿದ್ದ ಭಾವನೆ ಬದಲಾಯಿತು.

ಜಸ್ಟಿನ್ ಇದ್ದದ್ದು ಸ್ವಾಗತಗಾರ್ತಿ ವನಿತಾ ಕುರ್ಚಿ ಪಕ್ಕದಲ್ಲಿ. ಅಕಸ್ಮಾತ್ ಆಕೆ ಎಲ್ಲಾದರೂ ಬೇರೆ ಕೆಲಸಕ್ಕೆ ಹೋಗಿದ್ದರೆ ದೂರವಾಣಿಗೆ ಕಿವಿ ಹಚ್ಚುವವನು ಜಸ್ಟಿನ್. ತನ್ನೆಲ್ಲ ಕೆಲಸದ ನಡುವೆಯೂ ಈ ಕೆಲಸವನ್ನು ಮಾಡುವುದಕ್ಕೆ ಜಸ್ಟಿನ್‌ಗೆ ಖುಷಿ.

ಮತ್ತೊಂದು ಸಲ ಜಸ್ಟಿನ್ ಬಂದಾಗ ಖಚಿತವಾಯ್ತು. ಇವತ್ತು ಏನೋ ಕಾದಿದೆ ಅಂತ. ಹೊಸ ಡೌನ್‌ಲೋಡ್ ಸಾಫ್ಟ್‌ವೇರ್ ಗೊತ್ತ ಅಂತ ಕೇಳಿದ. ಯಾವುದು ಅಂತ ಕೇಳಿದರೆ ಯಾನ್ಯೂ ಡಾಟ್‌ಕಾಮ್‌ನಲ್ಲಿ ಸಿಗೋ ಡಿ ಎಲ್ ಎಕ್ಸ್‌ಪರ್ಟ್ ಅಂದ. ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನಿಸ್ತು. ಹೌದು ! ಅವತ್ತು ಗುರುವಾರ. ದಿ ಹಿಂದೂ ಪತ್ರಿಕೆಯಲ್ಲಿ ಬರೋ ನೆಟ್ ಸ್ಪೀಕ್ ಅನ್ನೋ ಅಂಕಣದಲ್ಲಿ ಈ ಹೆಡಿಂಗ್ ನೋಡಿದ್ದೆ. ಆದ್ರೆ ಇಲ್ಲಿ ಆಫೀಸಿಗೆ ಬರೋದ್ರೊಳಗೆ ಈ ಮಹಾರಾಯ ಅದನ್ನೇ ಡೌನ್‌ಲೋಡ್ ಮಾಡಿಕೊಂಡು ನನಗೆ ಪಾಠ ಹೇಳ್ತಿದ್ದಾನೆ. “ನೀವೇ ಗೆದ್ರಿ ಜಸ್ಟಿನ್, ಈ ಸಲಾನೂ ನೀವೇ ಮುಂದೆ” ಅಂತ ಮನಃಪೂರ್ವಕ ಭುಜ ತಟ್ಟಿದೆ.

ಮತ್ತೂ ಒಂದು ದಿನ. ಸರ್ಫಿಂಗ್ ಮಾಡಲಿಕ್ಕೆ ( ಅಂದ್ರೆ ನಿಮ್ಮ ಕಂಪ್ಯೂಟರಿನಿಂದ ಇಂಟರ್‌ನೆಟ್ ಜಾಲದಲ್ಲಿ ವಿಹರಿಸಲಿಕ್ಕೆ) ಒಪೆರಾ ಅನ್ನೋ ಸಾಫ್ಟ್‌ವೇರ್ ಇದೆ. ಅದನ್ನು ಬಳಸಿದ್ರೆ ತುಂಬಾ ವೇಗದಲ್ಲಿ ಸರ್ಫಿಂಗ್ ಮಾಡಬಹುದು ಅಂದೆ. ಜಸ್ಟಿನ್‌ಗೆ ಇದು ಅಷ್ಟಾಗಿ ಗೊತ್ತಿರ್‍ಲಿಲ್ಲ. ಅವನ ಕಂಪ್ಯೂಟರಿನಲ್ಲಿ ಅದನ್ನು ಸ್ಥಾಪಿಸಲಿಕ್ಕೆ ತುಂಬಾನೇ ಕಷ್ಟ ಆಯ್ತು. ಆದ್ರೆ ನನ್ನ ಮಾಹಿತಿ ಮಾತ್ರ ಜಸ್ಟಿನ್‌ಗೆ ಸಂತೋಷ ತಂದಿದ್ದುಹೌದು. ಅಬ್ಬಾ ಇದರಲ್ಲಾದರೂ ಗೆದ್ದೆ ಅಂದುಕೊಂಡೆ.

ನಾನು ಆ ಕೆಲಸ ಬಿಟ್ಟು ಬೇರೆ ಸೇರಿಕೊಂಡೆ. ಜಸ್ಟಿನ್ ನನಗೆ ಶುಭ ಹಾರೈಸಿದ. ಈ ಮೇಲ್ ಕಳಿಸಿ, ಮರೀಬೇಡಿ ಅಂದ.

ಹೊಸ ಕೆಲಸಕ್ಕೆ ಸೇರಿಕೊಂಡು ಇನ್ನೂ ಒಂದು ವಾರವೂ ಆಗಿರ್‍ಲಿಲ್ಲ. ಜಸ್ಟಿನ್ ವಿ-ಪತ್ರ ಬಂತು.

“ ಒಪೆರಾದ ೫.೧೨ ವರ್ಶನ್ ಬದಲಿಗೆ ಹೊಸಾದು, ೬.೦ ವರ್ಶನ್ ಬಂದಿದೆ , ಡೌನ್‌ಲೋಡ್ ಮಾಡ್ಕೊಳ್ಳಿ” ಅಂತ ಬರೆದಿದ್ದ! ನನಗೆ ಒಪೆರಾ ಕಂಪೆನಿಯಿಂದ ಪತ್ರ ಬಂದೇ ಬರುತ್ತಿತ್ತು. ಆದ್ರೆ ಅದಕ್ಕಿಂತ ಮುಂಚೆ ಜಸ್ಟಿನ್ ಪತ್ರ ! ನಾನು ಬೆಚ್ಚಿ ಬಿದ್ದೆ. ಜಸ್ಟಿನ್ ನಮೋನ್ನಮಃ ಅಂದೆ. `ನಾನೇನು, ಬರೀ ಒಂದು ಈ ಮೇಲ್‌ನಷ್ಟು ದೂರ ಇದೀನಿ ಅಷ್ಟೆ ಅನ್ನೋದು ಅವನ ಪತ್ರದ ಕೊನೆಯ ಸಾಲು. ನನಗಂತೂ ಅವನು ನನ್ನ ಪಕ್ಕದಲ್ಲೇ ಇದಾನೆ ಅನ್ನಿಸಿತು.

ನಿಮಗೆ ಈಗ ಜಸ್ಟಿನ್ ಎಂಥ ಜಾಣ, ಎಷ್ಟು ಫಾಸ್ಟ್ ಅನ್ನಿಸಬಹುದು ಅಲ್ವ ? ನೀವೂ ಬೇಕಾದ್ರೆ ಜಸ್ಟಿನ್ ನ ಭೇಟಿ ಮಾಡಬಹುದು. ಎಲ್ಲಿ ಗೊತ್ತ ? ಬೆಂಗಳೂರಿನ ಅಲಸೂರಿನಿಂದ ಲಿಡೋ ಕಡೆ ಬರುವಾಗ ಸಿಗೋ ಸಿಟಿ ಬಸ್ ಸ್ಟಾಪಿನಲ್ಲಿ ಸಂಜೆ ಐದೂವರೆ ಸುಮಾರಿಗೆ ಬನ್ನಿ.

ಜಸ್ಟಿನ್ ಬರುತ್ತಾನೆ. ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿರ್ತಾನೆ. ಕೈಯಲ್ಲಿ ಒಂದು ಕೋಲಿರುತ್ತೆ. ಭುಜದಿಂದ ಒಂದು ಬ್ಯಾಗು ಜೋತಿರುತ್ತೆ.

ಜಸ್ಟಿನ್‌ನನ್ನ ಮಾತನಾಡಿಸಬೇಕು ಅಂತಿದ್ರೆ ಅವನ ಭುಜ ತಟ್ಟಿ. ಬಸ್ ನಂಬರ್ ಕೇಳಿ. ಆ ಬಸ್ಸು ಬಂದ ಕೂಡಲೇ ಜಸ್ಟಿನ್‌ಗೆ ತಿಳಿಸಿ. ಇಬ್ಬರೂ ಜೊತೆಗೆ ಹತ್ತಿ. ಕನಿಷ್ಟಪಕ್ಷ ಶಿವಾಜಿ ನಗರದವರೆಗಾದ್ರೂ ನೀವು ಜಸ್ಟಿನ್ ಜೊತೆ ಮಾತನಾಡಬಹುದು.

ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲಿಕ್ಕೆ ಮಾತ್ರ ಆಗುವುದಿಲ್ಲ.

———————————————–

ಬಿಳಿ ಅಂಗಿಯಲ್ಲಿ ಶ್ರೀಧರ್; ಅವರ ಎಡಕ್ಕೆ ಇರುವವರೇ ಜಸ್ಟಿನ್. ಉಳಿದವರು ಸಮರ್ಥನಂ ಬಳಗದ ಸದಸ್ಯರು

ಅದೇ ಲೇಖನದಲ್ಲಿ ಹೇಳಿದ್ದೆನಲ್ಲ….. ಜಸ್ಟಿನ್ ನೆನಪು ಮಾತ್ರ ಇದೆ…. ಜಸ್ಟಿನ್ ಇರವು ಗೊತ್ತಿಲ್ಲ…. ಇವತ್ತು  ಸಮರ್ಥನಂನಲ್ಲಿ ಗೆಳೆಯ ಶ್ರೀಧರ್ (ಇವರ್ಯಾರು ಎಂದು ಕೇಳಬೇಡಿ…. ಸದ್ಯದಲ್ಲೇ ಬರೆಯುವೆ) ಜೊತೆಗೆ ಹೋದಾಗ ಜಸ್ಟಿನ್ ಸಿಕ್ಕಿದ್ದು ನನಗೆ ತುಂಬಾ ಅಚ್ಚರಿ, ಸಂತಸ ತಂದಿದ್ದಂತೂ ನಿಜ. ಗೂಗಲ್+ನಲ್ಲಿ ಹಂಚಿಕೊಳ್ಳಲೆಂದೇ ಈ ಕಿರು ಬ್ಲಾಗ್ ಬರೆದಿರುವೆ.

ಹತ್ತು ವರ್ಷಗಳಿಂದ ಜಸ್ಟಿನ್ ಏನೆಲ್ಲ ಕಂಡಿರಬಹುದು.. ಏನೆಲ್ಲ ಸಂಗತಿಗಳನ್ನು ಅರಿತು ಬದುಕಿನ ನಿರ್ವಹಣೆಯನ್ನು ಕಲಿತಿರಬಹುದು…. ನನಗೆ ಇವೆಲ್ಲ ಪ್ರಶ್ನೆಗಳೇ.

ಕಣ್ಣಿದ್ದೂ ಕಾಣದ ನಮಗಿಂತ ಕಣ್ಣಿಲ್ಲದ ಜಸ್ಟಿನ್ ಮತ್ತು ಅವರಂಥ ಅವರಂಥ ಅಸಂಖ್ಯ ಜನ ಕಾಣುವ ಜಗತ್ತಿದೆಯಲ್ಲ…. ಅದು ನಮಗೆಂದೂ ಸಂಪೂರ್ಣವಾಗಿ ಅರ್ಥವಾಗದ ಲೋಕ ಎಂದು ಇವತ್ತು ನನಗನ್ನಿಸಿತು.

ಪಠ್ಯವನ್ನು ಬರಹವಾಗಿ ಓದುವ ಈ–ಸ್ಪೀಕ್  ಎಂಬ ತಂತ್ರಾಂಶದ ಬಗ್ಗೆ ಮಾಹಿತಿ ಕೊಡಲೆಂದು, ಈ ತಂತ್ರಾಂಶದ ಕನ್ನಡ ಭಾಗವನ್ನು ರೂಪಿಸಿಕೊಟ್ಟ ಶ್ರೀಧರ್ ಜೊತೆಗೆ ಹೋಗಿ, ಅಲ್ಲಿನ ದೃಷ್ಟಿ ಸವಾಲಿನ ಸಮೂಹದ ಜೊತೆಗೆ ಮಾತನಾಡಿದ ಮೇಲೆ ಅನ್ನಿಸಿದ್ದಿಷ್ಟು: ನಾವಿನ್ನೂ ಕಲಿಯುವುದು ಬಹಳಷ್ಟಿದೆ…..

ಆರ್ ಕೆ ಲಕ್ಷ್ಮಣ್ ಸಮರ್ಥನಂಗೆ ಭೇಟಿ ಕೊಟ್ಟಾಗ ಬರೆದ ಕಾರ್ಟೂನಿನ ಫೋಟೋವನ್ನು ಹೇಗೋ ತೆಗೆದೆ! ಗಣಪತಿಯು ಮಿ.ಸಿಟಿಜನ್ ಗೆ ಕನ್ನಡಕ ಕೊಡ್ತಾ ಇರೋ ಹಾಗಿದೆ ಅಲ್ವೆ?

ನನ್ನ ಹತ್ತು ವರ್ಷಗಳ ಹಿಂದಿನ ವೃತ್ತಿಜೊತೆಗಾರ ಜಸ್ಟಿನ್, ನನ್ನ ಮೂವತ್ತು ವರ್ಷಗಳ ಹಿಂದಿನ ಜಯಲಕ್ಷ್ಮಿ (ಎಸೆಸೆಲ್ಸಿ ಮ್ಯಾಥ್ಸ್) ಮೇಡಂ ಜೊತೆಗಿನ  ಇಂದಿನ ಮಾತುಕತೆ – ಎಲ್ಲವೂ ಈ ದಿನಕ್ಕೆ ಏನೋ ವಿಶಿಷ್ಟ ಚಹರೆ ತಂದಿವೆ.

ಸಂಬಂಧಿಯೊಬ್ಬನ ಜನ್ಮದಿನವಾದ ಇಂದು ನನ್ನ ಪ್ರಿಯ ಅಂಕಲ್ ಕೂಡಾ ತೀರಿಕೊಂಡ ಆಘಾತಕರ ಸುದ್ದಿ ಬಂದಿದೆ.

ಬದುಕು ಮುನ್ನಡೆದಿದೆ. ಹುಟ್ಟು ಸಾವುಗಳ  ಆಟ, ನಡುವಣ ಬದುಕಿನ ನೋಟ – ನಿಜಕ್ಕೂ ಎಂಥ ಸಂಕೀರ್ಣ ಎಂದು ಬಲವಾಗಿ ಅನ್ನಿಸಿದ್ದು ಇವತ್ತೇ.  ಎಲ್ಲದರ ನಡುವೆ ಇವತ್ತೇ ಟಿವಿ ಸ್ಟುಡಿಯೋದಲ್ಲಿ ಕೂತಾಗ ಜಸ್ಟಿನ್ ಮತ್ತು  ನಾನು ಕೆಲಸ ಮಾಡುತ್ತಿದ್ದ ಟಿವಿ ಚಾನೆಲ್ ಕೆಲಸವೂ ನೆನಪಾಯಿತು.

ಮರೆತೇನೆಂದರ ಮರೆಯಲಿ ಹ್ಯಾಂಗ…

1 Comment

  1. ಸರ್, ಲೇಖನ ತುಂಬಾ ಚೆನ್ನಾಗಿದೆ. ಮನ ಕಲಕಿತು. ಬಹುಶಹ ಆ ದಿನ ನಿಮಗೆ ತುಂಬಾ ನೋವಿನ ಹಾಗೂ ಅತ್ಯಂತ ಸಂತೋಷದ ದಿನ ಎರಡೂ ಆಗಿತ್ತು ಅನ್ಸೊತ್ತೆ ಅಲ್ಲ್ವಾ?

Leave a Reply

Theme by Anders Norén