ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?

ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು ಅವಳ ಕೈ ಕತ್ತರಿಸಿದ ವೈದ್ಯರು ಆಮೇಲೆ ಕಾಲುಗಳನ್ನೂ ಬಿಡಲಿಲ್ಲ. ಕೊನೆಗೆ ಹೊಟ್ಟೆ, ಮೂತ್ರಪಿಂಡಗಳನ್ನು ಕತ್ತರಿಸಿ ತೆಗೆದರು. ರೆಸ್ಪಿರೇಟರ್ ಮೂಲಕ ಉಸಿರಾಡುತ್ತಿದ್ದ ಮಾರಿಯಾನಾ ಜನವರಿ ೨೪ರಂದು ಇಹಲೋಕ ತ್ಯಜಿಸಬೇಕಾಯಿತು. ಆಕೆ ತನ್ನ ೨೦ನೇ ವಯಸ್ಸಿನಲ್ಲೇ ಹಠಾತ್ತನೆ ಸತ್ತಿದ್ದಕ್ಕೆ ಸ್ಯೂಡೋಮೋನಾಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾವೇ ಕಾರಣ ಎಂಬುದೀಗ ದೃಢಪಟ್ಟಿದೆ.

[Pseudomonas+aeruginosa.jpg]

 

ಮೊನ್ನೆ ವೈರಲ್ ಫಿವರ್‌ಗೆ ತುತ್ತಾಗಿ ಡಯಾಗ್ನಾಸ್ಟಿಕ್ ಸೆಂಟರ್‌ನಿಂದ ವರದಿಯೊಂದನ್ನು ಪಡೆದಾಗ ನನ್ನ ದೇಹದಲ್ಲಿ ಸ್ಯೂಡೋಮೋನಾಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾ ಮನೆ ಮಾಡಿದೆ ಎಂದು ಗೊತ್ತಾಗಿ ಗಾಬರಿ ಬಿದ್ದೆ. ಈ ಬ್ಯಾಕ್ಟೀರಿಯಾ ನಾಶಕ್ಕೆ ಆಂಟಿ-ಬಯಾಟಿಕ್ ತಗೊಳ್ಳಲೇಬೇಕು ಕಣೋ ಎಂದು ವೈದ್ಯಮಿತ್ರ ಹೇಳಿದಾಗ ವಿಧಿಯಿಲ್ಲದೆ ಕ್ಯಾಪ್ಸೂಲು, ಮಾತ್ರೆ ನುಂಗತೊಡಗಿದೆ. ಬ್ಯಾಕ್ಟೀರಿಯಾ ಕೊಟ್ಟ ನೋವು ಸಾಕಷ್ಟು ಕಡಿಮೆಯಾಗಿದೆ.

ಈ ಸ್ಯೂಡೋಮೋನಾಸ್ ಏರುಗಿನೋಸಾ ಬ್ಯಾಕ್ಟೀರಿಯಾದ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಎಂದು ಇಂಟರ್‌ನೆಟ್ ಜಾಲಾಡಿದೆ. ಸಿಗೋದೇನು…. ಪುಟಗಟ್ಟಳೆ ಪ್ರಬಂಧಗಳು, ಸುದ್ದಿಗಳು, ಲೇಖನಗಳು, ವಿಶ್ಲೇಷಣೆಗಳು ಕಂಡವು! ಈ ಮಾಹಿತಿಗಳನ್ನೆಲ್ಲ ಓದ್ತಾ ಇದ್ದ ಹಾಗೆ ಗೊತ್ತಾದ ವಿಷಯ ಏನಪ್ಪಾ ಅಂದ್ರೆ…….

ಮನುಕುಲವನ್ನು ಕಾಡುತ್ತಿರುವ ಆರು ಭಯಾನಕ ಕೀಟಾಣುಗಳಲ್ಲಿ ಸ್ಯೂಡೋಮೋನಾಸ್ ಏರುಗಿನೋಸಾ ಬ್ಯಾಕ್ಟೀರಿಯಾ ಕೂಡಾ ಒಂದು! ಈ ಬ್ಯಾಕ್ಟೀರಿಯಾ ಆಕ್ರಮಣವಾದ್ರೆ ಸಾವೂ ಬರಬಹುದು ಎಂದು ಒಂದು ವೈದ್ಯಕೀಯ ಮಾಹಿತಿ ಜಾಲತಾಣ ಪ್ರಕಟಿಸಿದ್ದನ್ನು ನೋಡಿ ದಿಗಿಲು ಬಿದ್ದೆ. ಮತ್ತೆ ವೈದ್ಯಮಿತ್ರನಿಗೆ ಫೋನ್ ಹೊಡೆದೆ.

ಅಂತೂ ಈ ಬ್ಯಾಕ್ಟೀರಿಯಾ ಡೇಂಜರಸ್ ಅನ್ನೋದು ತಿಳೀತಲ್ವ? ಗಾಬ್ರಿ ಆಗ್ಬೇಡ. ಅದೆಲ್ಲ ಪಾಶ್ಚಾತ್ಯ ವೆಬ್‌ಸೈಟ್‌ಗಳ ಹೇಳಿಕೆ. ಭಾರತೀಯರು ಹೆರ್ಡ್ ಕಮ್ಯುನಿಟಿಗೆ ಸೇರಿದವರು. ನಾಟಿ ಜನ. ಆದ್ದರಿಂದ ನಮ್ಮಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚು. ಅಮೆರಿಕಾದಲ್ಲಾಗಿದ್ದರೆ ನಿನ್ನ ವಿಮಾ ಏಜೆಂಟರೆಲ್ಲ ಹೌಹಾರಿ ಓಡಿಹೋಗ್ತಿದ್ದರು ಎಂದು ಆತ ಹೇಳಿದ್ದು ಸಮಾಧಾನವೋ, ತಣ್ಣನೆಯ ಬೆದರಿಕೆಯೋ ಗೊತ್ತಾಗಲಿಲ್ಲ. ಮಾರಿಯಾನಾ ಬಗ್ಗೆ ಜನವರಿಯಲ್ಲೇ ಓದಿ ಮರುಕಪಟ್ಟಿದ್ದ ನನಗೆ ಅವಳ ಸಾವಿನ ಕಾರಣ ಗೊತ್ತಾಗಿದ್ದೇ ಈಗ…. ಈ ಬ್ಯಾಕ್ಟೀರಿಯಾ ನನ್ನನ್ನೂ ಆವರಿಸಿದೆ ಎಂಬುದು ಕೊಂಚ ದಿಗಿಲು ಹುಟ್ಟಿಸೋ ವಿಚಾರಾನೇ ಅಂದುಕೊಳ್ಳಿ.

ಹೇಗೂ ಇರಲಿ ಅಂದುಕೊಂಡು ಈ ಅರಿ ಷಡ್ವರ್ಗಗಳ ಬಗ್ಗೆ ಮಾಹಿತಿ ಓದಿ, ಅದನ್ನೆಲ್ಲ ಕ್ರೋಡೀಕರಿಸಿ ಕೊಡ್ತಾ ಇದೀನಿ. ಮೋಡ ಕವಿದ, ಥಂಡಿ ಗಾಳಿ ಬೀಸಿ ಎಲ್ಲೆಲ್ಲೂ ವೈರಲ್ ಫಿವರ್ ಹಾವಳಿ ಹೆಚ್ಚಾದ ಈ ಹೊತ್ತಿನಲ್ಲಿ ಬಾಳೆ ದಿಂಡಿನ ರಸ ಕುಡೀತಾ ಇದನ್ನು ಓದಿ ! ಫೋರ್ಬಿಸ್ ಮ್ಯಾಗಜಿನ್‌ನಲ್ಲೇ ಈ ಟಾಪ್ ರೇಟೆಡ್ ಕೀಟಾಣುಗಳ ಬಗ್ಗೆ ಸ್ಲೈಡ್ ಶೋ ಇದೆ ಅಂದ್ರೆ ಅವು ಎಂಥ ಸ್ಟೇಟಸ್ ಪಡೆದಿವೆ ಅನ್ನೋದನ್ನು ಊಹಿಸಿ…

ಸ್ಯೂಡೋಮೋನಾಸ್  ಏರುಗಿನೋಸಾ ಬ್ಯಾಕ್ಟೀರಿಯಾ

ಇದು ಶ್ವಾಸಕೋಶ, ಮೂತ್ರನಾಳ ಇಲ್ಲೆಲ್ಲ ಮನೆಮಾಡುತ್ತೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲೇ ಈ ಬ್ಯಾಕ್ಟೀರಿಯಾ ಇರುತ್ತಂತೆ! ಸಿಪ್ರೋ, ಲೆವಾಕ್ವಿನ್, ನೋರ್‌ಫ್ಲಾಕ್ಸಾಸಿನ್ ಮುಂತಾದ ಆಚಿಟಿ ಬಯಾಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರೋ ಈ ಬ್ಯಾಕ್ಟೀರಿಯಾ ಉಳಿದೈದು ಕೀಟಾಣುಗಳಿಗಿಂತ ತುಂಬಾ ಬೇಗ ಔಷಧಿಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತೆ. ಅಂಥ ಬ್ಯಾಕ್ಟೀರಿಯಾ ಶ್ವಾಸಕೋಶಕ್ಕೆ ತಗುಲಿದರೆ, ಶ್ವಾಸಕೋಶವನ್ನೇ ಬದಲಿಸಬೇಕಂತೆ.

ಮೆಥಿಸಿಲಿನ್ ಪ್ರತಿರೋಧಕ ಶಕ್ತಿಯ ಸ್ಟಾಫಿಲೋಕೋಕಸ್ ಆರೆಯಸ್ (ಎಂ ಎಸ್ ಆರ್ ಎ)

ಇದು ಅಮೆರಿಕಾದಲ್ಲಿ ಪ್ರತಿವರ್ಷ ಒಂದು ಲಕ್ಷ ಜನರಿಗೆ ತಗುಲುವ ಕಿಲ್ಲರ್ ಬ್ಯಾಕ್ಟೀರಿಯಾ.

ಎಸ್‌ಶೀರಿಯಾ ಕೋಲಿ ಮತ್ತು ಕೆಬ್‌ಸೀಲಾ

ಇದೂ ಮೂತ್ರನಾಳದಲ್ಲೇ ಕಾಲೋನಿ ಕಟ್ಟುತ್ತೆ. ಕರುಳುಬೇನೆ ಇದ್ದವರನ್ನು, ಗಾಯಗೊಂಡವರನ್ನು ಬಿಡೋದಿಲ್ಲ.

ಅಸಿನೆಟೋಬ್ಯಾಕ್ಟರ್ ಬಾಮಾನ್ನಿ

ಇರಾಕಿನಿಂದ ಬಂದ ಸೈನಿಕರನ್ನೇ ಆಕ್ರಮಣ ಮಾಡಿದ ಬ್ಯಾಕ್ಟೀರಿಯಾ ಇದು. ನ್ಯೂಮೋನಿಯಾ ಕಾಯಿಲೆಗೆ ಈ ಬ್ಯಾಕ್ಟೀರಿಯಾವೂ ಕಾರಣ. ಇದಕ್ಕೂ ಖಚಿತ ಔಷಧಿ ಅಂತ ಇಲ್ಲ.

ಆಸ್ಪರ್‌ಗಿಲ್ಲಿಸ್

ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಕೊಂಡವರು, ಕಡಿಮೆ ಪ್ರತಿರೋಧಕ ಶಕ್ತಿ ಇರೋರು ಇಂಥವರಿಗೆ ಈ ಫಂಗಸ್ (ಇದು ಬ್ಯಾಕ್ಟೀರಿಯಾ ಅಲ್ಲ) ತಗುಲುತ್ತದೆ.

ವ್ಯಾಂಕೋಮೈಸಿನ್ ಪ್ರತಿರೋಧ ಶಕ್ತಿಯ ಎಂಟೆರೋಕಾಕಸ್ ಫೀಸಿಯಮ್ ( ವಿ ಆರ್ ಇ)

ಹೃದಯ, ಮೆದುಳು ಮತ್ತು ಕಿಬ್ಬೊಟ್ಟೆಯಲ್ಲಿ ಈ ಬ್ಯಾಕ್ಟೀರಿಯಾ ವಾಸಿಸುತ್ತದೆ. ಅಮೆರಿಕಾದ ಶೇ. ೧೦ರಷ್ಟು ರೋಗಿಗಳಲ್ಲಿ ಈ ಬ್ಯಾಕ್ಟೀರಿಯಾ ವಾಸಿಸಿದ್ದನ್ನು ಗುರುತಿಸಿದ್ದಾರೆ.

ಈ ಆರು ಕೀಟಾಣುಗಳಿಂದ ಅಮೆರಿಕಾದಲ್ಲೇ ಪ್ರತಿವರ್ಷ ೯೦ ಸಾವಿರ ಜನ ಸಾಯುತ್ತಿದ್ದಾರೆ.

ವಿಶ್ವದಾದ್ಯಂತ ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾಂಕ್ರಾಮಿಕ ರೋಗತಜ್ಞ, ಗ್ರೀಸ್ ದೇಶದ ಆಲ್ಫಾ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಮ್ಯಾಥ್ಯೂ ಫಲಗಾಸ್ ಹೇಳುತ್ತಾರೆ.

ಪರಿಹಾರಕ್ಕಾಗಿ ತಡಕಾಟ

ಇಂಥ ಬ್ಯಾಕ್ಟೀರಿಯಾಗಳ ವಿರುದ್ಧ ಔಷಧರಂಗ ಸಮರ ಸಾರುತ್ತಿದೆ. (ಕ್ಷಮಿಸಿ, ಈ ಔಷಧ ರಂಗವೂ ಒಂದು ರ್‍ಯಾಕೆಟ್ ಅಲ್ಲವೆ ಇತ್ಯಾದಿ ವಿಷಯಗಳು ಈ ಲೇಖನದ ಮಿತಿಯಾಚೆ ಇವೆ)

ಸ್ಯೂಡೋಮೋನಾಸ್ ಏರುಗಿನೋಸಾವು ಶ್ವಾಸಕೋಶದಲ್ಲಿದ್ದರೆ ಅದನ್ನು ನಿವಾರಿಸಲು ಕೇಸ್ಟನ್ (ಸಿ ಎಕ್ಸ್ ಎ ೧೦೧) ಎಂಬ ಪುಡಿಯನ್ನು ಕ್ಯಾಲಿಕ್ಸಾ ಥೆರೋಪೇಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆಯಂತೆ.

ಈ ಥರ ಔಷಧಿಗಳಿಗೇ ಸೆಡ್ಡು ಹೊಡೆಯುವ ಕೀಟಾಣುಗಳಿಗೆ ಔಷಧ ತಯಾರಿಸಲು ೭೭ ಲಕ್ಷ ಯೂರೋ (ಸುಮಾರು ೫೨ ಕೋಟಿ ರೂ.) ವೆಚ್ಚದಲ್ಲಿ ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಬಲ್ಗೇರಿಯಾ ದೇಶಗಳ ಆರು ಸಂಸ್ಥೆಗಳು ಒಗ್ಗೂಡಿ ಸಂಶೋಧನೆ ನಡೆಸಲಿವೆ. ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಶೋಧನೆಗಳು ಒಂದು ಹಂತಕ್ಕೆ ಬರಬಹುದು. ಮುಖ್ಯವಾಗಿ ಸ್ಯೂಡೋಮೋನಾಸ್ ಏರುಗಿನೋಸಾ ಮತ್ತು ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬಗ್ಗೆಯೇ ಈ ಸಂಶೋಧನೆಗಳು ನಡೆಯಲಿವೆ. ಈ ಯೋಜನೆಗೆ ಆಂಟಿ ಪ್ಯಾಥೋ ಜಿ ಎನ್ ಎಂದು ಕರೆದಿದ್ದಾರೆ.

ಹಾಗಾದರೆ ಬಾಳೆ ದಿಂಡಿನ ರಸ ಯಾಕೆ ಕುಡೀಬೇಕು ಎಂದು ನೀವೀಗ ಕೇಳಬಹುದು

ಬಾಳೆ ದಿಂಡಿನ ರಸವು ಮೂತ್ರಕೋಶದ ಕಲ್ಲುಗಳನ್ನು ನಿವಾರಿಸಲು ಅತ್ಯಂತ ಶಕ್ತಿಯುತವಾದ ಪರಿಹಾರ ಎಂದು ಸಂಶೋಧನೆಗಳು ದೃಢಪಡಿಸಿವೆ. ಯಾಕೆಂದರೆ ಬಾಳೆ ದಿಂಡಿನ ರಸದ ಚಿಕಿತ್ಸೆಯ ಬಗ್ಗೆ ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಣೆಗಳಿವೆ. ಸ್ಯೂಡೋಮೋನಾಸ್  ಏರುಗಿನೋಸಾ ವಿರುದ್ಧವೂ ಬಾಳೆ ದಿಂಡಿನ ರಸ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದಕ್ಕೆ, ಈಗ ಆರಾಮಾಗಿ ಲೇಖನ ಬರೆಯುತ್ತಿರುವ ನಾನೇ ಸಾಕ್ಷಿ ! ದಿನಾ ಬೆಳಗ್ಗೆ ಮತ್ತು ರಾತ್ರಿ ಒಂದು ಲೋಟ ಬಾಳೆ ದಿಂಡಿನ ರಸವನ್ನು ಕುಡಿಯುತ್ತೇನೆ. ಆಂಟಿ ಬಯಾಟಿಕ್‌ನನ್ನೇ ನಂಬಿ ಕೂರುವುದಕ್ಕೆ ಸಾಧ್ಯವೆ? ಅದರಲ್ಲೂ ವಿಜ್ಞಾನಿಗಳೇ ಕೈ ಚೆಲ್ಲಿ ಕೂತಿರೋವಾಗ!

Leave a Reply

Theme by Anders Norén