ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ

ಕರ್ನಾಟಕವು ಹೇಳಿ ಕೇಳಿ ಭಾರತದ್ದೇ ಪ್ರತಿಬಿಂಬ. ಭಾರತದಲ್ಲಿ ಕಾಣುವಂಥ ಭೌಗೋಳಿಕ ವೈವಿಧ್ಯಗಳೆಲ್ಲವನ್ನೂ ಕರ್ನಾಟಕದಲ್ಲೂ ಕಾಣಬಹುದು. ಇಲ್ಲಿ ಸಮುದ್ರವಿದೆ; ದಟ್ಟವಾದ ಕಾಡಿದೆ. ಬಯಲು ಸೀಮೆಯಿದೆ; ಮಳೆ ನರಳಿನ ಪ್ರದೇಶಗಳಿವೆ; ಬರಗಾಲವೂ ಇದೆ! ಇಂಥ ವಿಶಾಲ ರಾಜ್ಯದಲ್ಲಿ ಪತ್ರಿಕೆಗಳ ಆವೃತ್ತಿಗಳನ್ನು ವಿವಿಧ ಪ್ರದೇಶಗಳಲ್ಲಿ ಹೊರತರುವುದೇ ಒಂದು ಸವಾಲು. ಅದರಲ್ಲೂ ಕರಾವಳಿಯಲ್ಲೇ ತಮ್ಮ ಮೂಲ ನೆಲೆ ಹೊಂದಿದ ಉದಯವಾಣಿ ಮತ್ತು ಹೊಸದಿಗಂತ ಪತ್ರಿಕೆಗಳು ಹುಬ್ಬಳ್ಳಿಯಲ್ಲಿ ನೆಲೆ ಊರುವುದೆಂದರೆ ಸವಾಲಿನ ಮಾತೇ ಸರಿ. ಈ ಬಗೆಯ ಪ್ರಾದೇಶಿಕ ಭೇದವನ್ನು ಮೂಡಿಸಿದ್ದು ಆಯಾ ಆವೃತ್ತಿಗಳ ಭಾಷಾ ವೈವಿಧ್ಯ ಮತ್ತು ಸುದ್ದಿಗಳ ಆಯ್ಕೆ. ಅದರಲ್ಲೂ ಕರಾವಳಿಯಲ್ಲೇ ಬಹುಕಾಲ ಬೆಳೆದು ಬಲವಾದ ಪ್ರಭಾವ ಬೀರಿದ್ದ ಉದಯವಾಣಿಯು ಹುಬ್ಬಳ್ಳಿಯಲ್ಲಿ ತನ್ನ ಆವೃತ್ತಿ ಆರಂಭಿಸುವಾಗ ಇವೆಲ್ಲ ಸಂಗತಿಗಳನ್ನು ಗಮನಿಸುವ ಸವಾಲಿತ್ತು. ಹುಬ್ಬಳ್ಳಿ ಆವೃತ್ತಿಯ ಉದಯವಾಣಿಯ ಪ್ರಸರಣ ಸಂಖ್ಯೆಯೇ ಉದಯವಾಣಿಯ ೨೦೧೧ರ ವರ್ಷದ ಕೊನೆಯ ಆರು ತಿಂಗಳುಗಳ ಏರುಗತಿಯ ಪ್ರಸರಣ ಸಂಖ್ಯೆಗೆ ಸಮ ಎಂಬುದೇ ನಾನು ಇಲ್ಲಿ ಹೇಳಹೊರಟಿರುವ ವಿಷಯ. ಅದಕ್ಕಾಗೇ ಇಷ್ಟೆಲ್ಲ ಪೀಠಿಕೆ ಬರೆದೆ! ಸೂಕ್ಷ್ಮ ವಿಶ್ಲೇಷಣೆಗೆ ಬೇಕಾದಷ್ಟು ಮಾಹಿತಿ ನನಗೆ ಬಂದಿಲ್ಲ. ಆದರೆ ಸ್ಥೂಲವಾಗಿ ನೋಡಿದರೆ, ಉದಯವಾಣಿಯ (ಜು-ಡಿ ೨೦೧೧) ಪ್ರಸರಣದಲ್ಲಿ ಜ-ಜೂ ೨೦೧೧ರ ಪ್ರಸರಣಕ್ಕಿಂತ ಸುಮಾರು ೨೨ ಸಾವಿರ ಹೆಚ್ಚಳ ಕಂಡುಬಂದಿದೆ. ಇದು ಹುಬ್ಬಳ್ಳಿ ಆವೃತ್ತಿಯ ಪ್ರಸರಣಕ್ಕೆ ಬಹುತೇಕ ಸಮ.
ಒಟ್ಟರ್ಥ (ನನ್ನ ಅನಿಸಿಕೆ ಅನ್ನಿ) : ಉದಯವಾಣಿಯು ತನ್ನ ಕರಾವಳಿಯ ಹಣೆಪಟ್ಟಿಯನ್ನು ಕೊನೆಗೂ ನಿವಾರಿಸಿಕೊಂಡು ಉತ್ತರ ಕರ್ನಾಟಕಕ್ಕೂ ಕಾಲಿರಿಸಿದೆ. ಹುಬ್ಬಳ್ಳಿಯ ಈ ಪ್ರಸರಣ ಸಂಖ್ಯೆಯು ಬೆಂಗಳೂರಿನ ಪ್ರಸಾರದ ಮೂರನೇ ಒಂದರಷ್ಟು. ಆದರೆ ಜನಸಂಖ್ಯೆಯನ್ನೇ ಆಧಾರವಾಗಿ ಇಟ್ಟುಕೊಂಡರೆ, ಬೆಂಗಳೂರೆಲ್ಲಿ? ಹುಬ್ಬಳ್ಳಿಯೆಲ್ಲಿ? ಈ ಕಾರಣಕ್ಕಾಗೇ ಉದಯವಾಣಿಯ ಹುಬ್ಬಳ್ಳಿಯ ಬೆಳವಣಿಗೆ ಕನ್ನಡ ಪತ್ರಿಕೋದ್ಯಮದ ಹೊಸ ಹೆಜ್ಜೆಗುರುತು ಎಂದು ಸದ್ಯಕ್ಕಂತೂ ಹೇಳಲಡ್ಡಿಯಿಲ್ಲ. ಅಲ್ಲಿ ಕನ್ನಡಪ್ರಭದ ಪ್ರಸರಣ ಸಂಖ್ಯೆಯನ್ನು ದಾಟುವ ಸ್ಪರ್ಧೆಯೂ ಹುಟ್ಟಿಕೊಂಡಿರಬಹುದು.
ಉದಯವಾಣಿಯ ಈ ಅವಧಿಯ ಒಟ್ಟಾರೆ ಬೆಳವಣಿಗೆಯೂ  (ಎಲ್ಲವೂ ಜ-ಜೂ ೨೦೧೧ಕ್ಕೆ ಹೋಲಿಸಿ) ಶೇ. ೯ ದಾಟಿದೆ. ಅದರ ಪ್ರಸರಣ ಸಂಖ್ಯೆ ೨.೬೨ ಲಕ್ಷ ಅನ್ನಿ.  ಇಂಥ ಬೆಳವಣಿಗೆಯನ್ನು ಬೇರೆ ಪತ್ರಿಕೆಗಳಲ್ಲಿ ಕಾಣಲಾರೆವು. ಇದಕ್ಕೆ ತೀರಾ ಹತ್ತಿರ ಬರುವ ಕನ್ನಡಪ್ರಭದ ಬೆಳವಣಿಗೆಯ ಗತಿ ಶೇ. ೫ ದಾಟಿದೆ. ಇದಕ್ಕಿಂತ ಅರ್ಧ ಪ್ರಮಾಣದ ಬೆಳವಣಿಗೆ ಸಾಧಿಸಿದ ವಿಜಯ ಕರ್ನಾಟಕವು (ಶೇ. ೨ ದಾಟಿದೆ ಅನ್ನಿ)  ಆರು ಲಕ್ಷದ ಗಡಿಗೆ ಬಂದು ನಿಂತಿದೆ. ಕನ್ನಡಪ್ರಭವು ಎರಡು ಲಕ್ಷದ, ವಿಜಯ ಕರ್ನಾಟಕವು ಆರು ಲಕ್ಷದ ಮ್ಯಾಜಿಕ್ ಸಂಖ್ಯೆಯನ್ನು ಮುಟ್ಟುವ ತವಕದಲ್ಲಿವೆ ಎಂದು ಕಾವ್ಯಾತ್ಮಕವಾಗಿ ಹೇಳಬಹುದು! ಕಾವ್ಯದ ಮಾತು ಬೇಡವೆಂದರೆ: ಕನ್ನಡಪ್ರಭವು ೧.೯೫ ಲಕ್ಷವನ್ನು ಮುಟ್ಟುತ್ತಿದ್ದರೆ, ವಿಜಯಕರ್ನಾಟಕವು ೫.೮೫ ಲಕ್ಷದ ಗಡಿ ದಾಟಿದೆ.
ಅತಿ ಕಡಿಮೆ ಬೆಳವಣಿಗೆಯ ಗತಿಯನ್ನು ದಾಖಲಿಸಿದ್ದು ಪ್ರಜಾವಾಣಿ. ಅದು ಹಿಂದಿನ ಸಲವೇ ಐದು ಲಕ್ಷದ ಗಡಿಯನ್ನು ದಾಟಿಬಿಟ್ಟಿದೆ. ಈಗ ಅದರ ಪ್ರಸಾರ ಸಂಖ್ಯೆ ೫.೨೨ ಲಕ್ಷ.  ಇನ್ನು ಸಂಯುಕ್ತ ಕರ್ನಾಟಕವೂ ಕೊಂಚ ಪ್ರಗತಿ ಸಾಧಿಸಿ ತನ್ನ ಒಂದೂವರೆ ಲಕ್ಷದ ಸಂಖ್ಯೆಯನ್ನು ಉಳಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿ  ಅದಕ್ಕೀಗ ಉದಯವಾಣಿ, ಪ್ರಜಾವಾಣಿ ಮತ್ತು ವಿಜಯ ಕರ್ನಾಟಕ  ಪತ್ರಿಕೆಗಳ ನೇರ ಪೈಪೋಟಿಯಿದೆ. ಹೊಸದಿಗಂತವೂ ತನ್ನ ಪ್ರಭಾವ ಬೀರಿದೆಯಂತೆ. ವಿಜಯ ಸಂಕೇಶ್ವರರ ಸಾರಥ್ಯದ ವಿಜಯವಾಣಿಯ ಏಪ್ರಿಲ್ ೧ರಂದಷ್ಟೇ ಆರಂಭವಾಗಿರುವುದರಿಂದ ಈಗಲೇ ಏನನ್ನೂ ಹೇಳಲಾಗದು. (ನಾನು ವಿಜಯವಾಣಿಯನ್ನು ಅಹಿತಕರ ಸನ್ನಿವೇಶದಲ್ಲಿ ಬಿಟ್ಟಿದ್ದರೂ, ವಿಶ್ಲೇಷಣೆಯಲ್ಲಿ ಕೇವಲ ಅಂಕಿ ಅಂಶಗಳನ್ನಷ್ಟೇ ನೋಡುತ್ತೇನೆ).
ಈಗ ಗಮನಿಸಿ: ಉದಯವಾಣಿಯು ಹುಬ್ಬಳ್ಳಿಗೆ ಬಂದಿದ್ದರೂ ಶಿವಮೊಗ್ಗಕ್ಕೆ ಬಂದಿಲ್ಲ. ಹಾಗೆ ನೋಡಿದರೆ ಮಲೆನಾಡಿನ ಭಾಗಗಳಲ್ಲಿ ಉದಯವಾಣಿಯು ಹುಬ್ಬಳ್ಳಿಗಿಂತಲೂ ಹೆಚ್ಚಿನ ಸಾಂಸ್ಕೃತಿಕ ಸಂಬಂಧ ಹೊಂದಿದೆ. ಪ್ರಜಾವಾಣಿಯೂ ಶಿವಮೊಗ್ಗಕ್ಕೆ ಬಂದಿಲ್ಲ. ಕನ್ನಡಪ್ರಭವು ಶಿವಮೊಗ್ಗದಲ್ಲಿ ಜಯಭೇರಿ ಬಾರಿಸುತ್ತ ಮುನ್ನಡೆದಿದೆ. ಮುಂಬಯಿಗೆ ಉದಯವಾಣಿಯೊಂದೇ ಕಾಲಿಟ್ಟಿದೆ.  ಗಂಗಾವತಿಯಲ್ಲೂ ವಿಜಯಕರ್ನಾಟಕದ್ದೇ ಅಧಿಪತ್ಯ. ಹೊಸದಿಗಂತವು ಎಬಿಸಿ ಸದಸ್ಯತ್ವವನ್ನು ಪಡೆಯದೇ ಅದನ್ನು ಸ್ಪರ್ಧೆಯಲ್ಲಿ ಹೋಲಿಸಲು ಬರುವುದಿಲ್ಲ. (ನಾನು ಹೇಳುತ್ತಿರುವುದು ಮುದ್ರಣ ಕೇಂದ್ರಗಳ ಬಗ್ಗೆಯೇ ಹೊರತು ಆವೃತ್ತಿಗಳ ಬಗ್ಗೆ ಅಲ್ಲ).
ಕನ್ನಡ ದೈನಿಕ ಪತ್ರಿಕೋದ್ಯಮವು ಒಟ್ಟಾರೆ ಅತ್ಯಂತ  ಕಡಿಮೆ ಪ್ರಗತಿ ಸಾಧಿಸಿದ್ದರೂ, ಪ್ರಗತಿ ಇದೆಯಲ್ಲ ಎಂಬುದೇ ಸಮಾಧಾನ. ಈ ಪ್ರಗತಿಯ ಗತಿ ಶೇ. ಮೂರರ ಗಡಿಯಾಚೆಗೆ ಬಂದು ನಿಂತಿದೆ. ಒಂದು ರೀತಿಯಲ್ಲಿ ಇದು ಸಾಧನೆಯೇ.

—————————————–
(ಈ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದ್ದು, ಅಧಿಕೃತ ಮಾಹಿತಿಯನ್ನು ಆಡಿಟ್ ಬ್ಯೂರೋ ಆಫ್ ಸರ್ಕುಲೇಶನ್ – ಈ ಸಂಸ್ಥೆಯಿಂದಲೇ ಪಡೆಯಬೇಕಿದೆ. ಓದುಗರು ಇದನ್ನು ಕೇವಲ ಒಂದು ದಿಕ್ಸೂಚಿ ಮಾಹಿತಿ ಎಂದು ಭಾವಿಸಲು ವಿನಂತಿ.)

1 Comment

  1. RAMANATH GP MAIYA

    Fully endorse the views of the article. The total audited circulation sales of all Kannada dailies still do not match the audit sales of MALAYALAM MANORAMA alone. Still considering the changes in the ground realities such as increasing vendor issues, decreasing readership interest following the advent of new media avenues the growth is really satisfactory. Please note that majority of these Kannada dailies are sold and reach the eye ball of the readers, unlike the english dailies which find themselves in the raddi market, much before reaching the readers door-step.

Leave a Reply

Theme by Anders Norén