ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ವಿಮರ್ಶೆ

ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್‌ಪುಟ್‌ಡೌನಬಲ್ !

ಒಂದು ಮಾತು ಹೇಳ್ತೇನೆ: ಬೆಂಗಳೂರಿನಲ್ಲಿ ಹುಟ್ಟಿ, ಕೋಲ್ಕೊತಾದಲ್ಲಿ ಓದಿ ಮೆರೈನ್ ಇಂಜಿನಿಯರ್ ಆಗಿದ್ದ ಜಾರ್ಜ್ ಫಿಲಿಪೋಸ್ ಬರೆದ ‘ದಿ ಮೆನ್ ಇನ್‌ಸೈಡ್’ ಪುಸ್ತಕ ನಿಜಕ್ಕೂ ಅನ್‌ಪುಟ್‌ಡೌನಬಲ್. ಯಾವುದೋ ಖಿನ್ನತೆಯ ಕಷಣದಲ್ಲಿ ಜಯನಗರದ ಪುಸ್ತಕದಂಗಡಿ ಹೊಕ್ಕಾಗ ಕಂಡ ಈ ಪುಸ್ತಕವನ್ನು ಕುತೂಹಲದಿಂದ ಖರೀದಿಸಿ ಓದಿದೆ. ಅರೆ, ಖಿನ್ನತೆಯೂ ಇಂಥ ಅದೃಷ್ಟಕ್ಕೆ ಕಾರಣವಾಯಿತಲ್ಲ ಎಂದು ಖುಷಿಯಾಗುತ್ತಿದೆ!

the-men-inside

ಆರ್.ಕೆ.ನಾರಾಯಣರ ನಿರೂಪಣಾ ಶೈಲಿ. ಸರಳ, ನೈಜ ಪಾತ್ರಗಳು. ರಹಸ್ಯ, ವೈಚಿತ್ರ್ಯ, ಮಾನವ ಸ್ವಭಾವಗಳು, ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಥರಾವರಿ ಕಥೆಗಳು, ಹಡಗಿನ ಒಳಗೆ ಕಂಡುಬರುವ ಎಲ್ಲ ನಡಾವಳಿಗಳ ವಿವರಣೆ……… ನೀವು ಈ ಪುಸ್ತಕದ ಒಂದು ಕಥೆಯನ್ನು ಓದಿದರೆ ಸಾಕು, ಕೊನೆಯ ಪುಟ ಮುಟ್ಟುವವರೆಗೆ ಪುಸ್ತಕವನ್ನು ತೆಗೆದಿಡುವುದು ಕಷ್ಟ.

ಫಿಲಿಪೋಸ್ ಬೆಂಗಳೂರಿನ ಡೇವಿಸ್ ರಸ್ತೆಯಲ್ಲಿ ಹುಟ್ಟಿ ಬೆಳೆದವರು. ಮೆರೈನ್ ಇಂಜನಿಯರ್ ಆಗಿ ಹತ್ತಾರು ಕಾರ್ಗೋ ಹಡಗುಗಳಲ್ಲಿ ವೃತ್ತಿಜೀವನ ನಡೆಸಿದವರು. ಈಗ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರ ಈ ಮೈಲ್ ವಿಳಾಸಕ್ಕೆ ಕಳಿಸಿದ ಪತ್ರ ಬೌನ್ಸ್ ಆಗಿದೆ. ಆದ್ದರಿಂದ ಅವರ ಈ ಮೈಲ್ ಸಂದರ್ಶನದ ಯತ್ನ ವಿಫಲವಾಗಿದೆ.

ಜಾರ್ಜ್ ಫಿಲಿಪೋಸ್ ಬರೆದ ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಕ್ರಾನಿಕಲ್ಸ್ ಆಫ್ ಎ ಮಾಡರ್ನ್ ಮೆರೈನರ್ ಎಂಬ ವಾಕ್ಯವಿದೆ. ಈ ಹಿಂದೆ ಹಡಗುಯಾನದಲ್ಲಿ ತೊಡಗಿದ್ದವರು ಯಾವ ಥರದ ಪುಸ್ತಕಗಳನ್ನು ಬರೆದಿದ್ದರೋ ನನಗೆ ಹೆಚ್ಚು ಗೊತ್ತಿಲ್ಲ. ಭಾರತೀಯರಂತೂ ಈ ಥರ ಕಾವ್ಯಾತ್ಮಕವಾಗಿ, ಮಾನವೀಯ ಸ್ಪರ್ಶದ ಕಥೆಗಳನ್ನು ಬರೆದ ಬಗ್ಗೆ ಏನೂ ಗೊತ್ತಿಲ್ಲ. ಸದ್ಯಕ್ಕೆ ನನಗೆ ಕಾಣ್ತಾ ಇರೋದು ಫಿಲಿಪೋಸ್ ಬರೆದ ಈ ಪುಸ್ತಕ. ಇದರ ನಂತರ ಇನ್ನೂ ಒಂದು ಪುಸ್ತಕವನ್ನು ಅವರು ಬರೆದಿದ್ದಾರೆ. ಅದನ್ನು ಹುಡುಕಿ ಓದಿದ ಮೇಲೆ ಬರೆಯುತ್ತೇನೆ.

ದಿ ಮೆನ್ ಇನ್‌ಸೈಡ್‌ನಲ್ಲಿ ಕಾರ್ಗೋ ಹಡಗಿನ ನಿಜಪಾತ್ರಗಳನ್ನು, ನಿಜಘಟನೆಗಳನ್ನು ಆಧರಿಸಿದ ೨೦ ಕಥನಗಳಿವೆ. ಮೊದಲ ಕಥೆಯನ್ನು ನಿಮ್ಮ ಕುತೂಹಲಕ್ಕಾಗಿ ಹೇಳುತ್ತೇನೆ:

ಡಿಸ್ಟಂಟ್ ಡ್ಯಾಡ್ (ದೂರದಲ್ಲಿರೋ ತಂದೆ) ಶೀರ್ಷಿಕೆಯ ಈ ಕಥನದ ಮೊದಲ ವಾಕ್ಯವೇ ನಿಮ್ಮನ್ನು ಗೊಂದಲಕ್ಕೆ ಕೆಡಹುತ್ತದೆ. ನೀವು ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ಕಾನೂನು ಉಲ್ಲಂಘಿಸಿದರೆ ಅದನ್ನು ಅಪರಾಧ ಎಂದು ತಿಳಿಯಬೇಕೋ ಬೇಡವೋ? ನಿರೂಪಕ ಇಲ್ಲಿ ಹೆಸರು ಹೇಳಲಿಚ್ಛಿಸದ ಬಂದರಿನಿಂದ ಆಸ್ಟ್ರೇಲಿಯಾದ ಬ್ರಿಸ್‌ಬೇನ್ ಬಂದರಿಗೆ ಹೊರಟಿದ್ದಾನೆ. ಆ ದೇಶದ ಕಡಲತೀರದ ಹೋಟೆಲೊಂದರಲ್ಲಿ ಗುಂಡು ಹಾಕಿ ಹಡಗಿಗೆ ಬಂದಿದ್ದಾನೆ. ಇನ್ನೇನು ಅವ ತನ್ನ ಕ್ಯಾಬಿನ್‌ಗೆ ಹೋಗಬೇಕು, ಅನಾಮಿಕನೊಬ್ಬ ಅವನನ್ನು ಹಿಡಿದಿದ್ದಾನೆ. ಆ ದೇಶದಿಂದ ಅಕ್ರಮವಾಗಿ ಹಡಗು ಹತ್ತಿದ್ದಾನೆ. ಸದ್ಯಕ್ಕೆ ಅವನ ಹೆಸರು ಜಹಾಂಗೀರ್.

ಜಹಾಂಗೀರನ ಬೇಡಿಕೆ ಇಷ್ಟೆ: ಆಸ್ಟ್ರೇಲಿಯಾಗೆ ಹೋಗುವವವರೆಗೆ (ಅಂದರೆ ಮೂರು ವಾರ) ಅವನನ್ನು ನಿರೂಪಕ ತನ್ನ ಕ್ಯಾಬಿನ್‌ನಲ್ಲೇ ಬಚ್ಚಿಡಬೇಕು; ಆಸ್ಟ್ರೇಲಿಯಾದಲ್ಲಿ ಅವನ ಸಂಗಾತಿ ಇದ್ದಾಳೆ. ಅವಳಿಗೆ ಜಹಾಂಗೀರನ ಒಡನಾಟದಿಂದ ಹುಟ್ಟಿದ ಮಗ ಇದಾನೆ. ಅವನನ್ನು ನೋಡಲು ಜಹಾಂಗೀರ್ ಹೋಗಬೇಕು. ಆದರೆ ಜಹಾಂಗೀರನಿಗೆ ಯಾವುದೋ ಗಂಭೀರ ಕಾಯಿಲೆ ಇದೆ. ಆದ್ದರಿಂದ ಅವನನ್ನು ಆಸ್ಟ್ರೇಲಿಯಾದೊಳಕ್ಕೆ ಬಿಡುತ್ತಿಲ್ಲ.

ಈಗ ನಿರೂಪಕನಿಗೆ ಧರ್ಮಸಂಕಟ. ಕಾನೂನಿನ ಪ್ರಕಾರ ಆತ ವಿದೇಶಿಯೊಬ್ಬನನ್ನು ಅಕ್ರಮವಾಗಿ ಆಸ್ಟ್ರೇಲಿಯಾಗೆ ಸಾಗಿಸುತ್ತಿದ್ದಾನೆ! ಅವನನ್ನು ಬಚ್ಚಿಡಬೇಕು. ಮೂರು ವಾರ ಅವನಿಗೆ ಊಟ ಕೊಡಬೇಕು. ಅವನು ಹಡಗಿನಲ್ಲಿ ಯಾರಿಗೂ ಕಾಣದ ಹಾಗೆ ಎಚ್ಚರ ವಹಿಸಬೇಕು. ಆಮೇಲೆ ಅವನನ್ನು ಸುರಕ್ಷಿತವಾಗಿ ಬ್ರಿಸ್‌ಬೇನ್‌ನಲ್ಲಿ ಇಳಿಸಬೇಕು…….

ಈ ದಿನಗಳಲ್ಲಿ ನಿರೂಪಕ (ಅಂದರೆ ಇಲ್ಲಿ ಎಲ್ಲ ನಿರೂಪಕರೂ ಜಾರ್ಜ್ ಫಿಲಿಪೋಸ್ ಎಂದೇ ನೀವು ಭಾವಿಸಬಹುದು) ಪಟ್ಟ ಪಾಡುಗಳನ್ನು ನೀವು ಓದಬೇಕು…. ಒಂದು ಸಲ ನಗು ಬರುತ್ತೆ; ಒಂದು ಸಲ್ಲ ಅಯ್ಯೋ ಅನ್ಸುತ್ತೆ…. ಒಂದು ಸಲ ಅರೆ ಹೀಗೂ ಇದೆಯೆ ಅನ್ಸುತ್ತೆ.

ಕಥೆಯನ್ನು ಹೇಳುತ್ತಲೇ ಹಡಗಿನ ಕಾರ್ಯಸಂಸ್ಕೃತಿಯನ್ನು ವಿವರಿಸುವುದು ಫಿಲಿಪೋಸ್ ಮಾಡುವ ಇನ್ನೊಂದು ಉಪಕಾರ. ನಮಗೆಲ್ಲ ಹಡಗಿನ ಒಳಗೆ ಹೋಗೇ ಗೊತ್ತಿಲ್ಲ. ಅಂಥವರಿಗೆ ಫಿಲಿಪೋಸ್ ವಿವರಣೆಗಳು ತುಂಬಾ ಅನುಕೂಲಕರ. ಹಡಗಿನಲ್ಲಿ ಸಿಬ್ಬಂದಿ ವ್ಯವಸ್ಥೆ ಹೇಗಿರುತ್ತದೆ, ಕ್ಯಾಪ್ಟನ್ ಎಂದರೆ ಯಾರು, ಚೀಫ್ ಇಂಜಿನಿಯರ್ ಕೆಲಸಗಳೇನು, ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಇಂಜಿನಿಯರ್ ಯಾವಾಗ ಇಂಜಿನ್ ರೂಮಿಗೆ ಬರುತ್ತಾರೆ…… ಹಡಗಿನ ನೀತಿ ನಿಯಮಗಳೇನು, ಹಡಗಿನ ರಚನೆ ಹೇಗಿರುತ್ತದೆ, – ಒಂದಲ್ಲ ಎರಡಲ್ಲ, ಪುಸ್ತಕ ಓದಿ ಮುಗಿಸುವ ಹೊತ್ತಿಗೆ ನಿಮಗೆ ಹಡಗಿ ಒಳಹೊರಗೆಲ್ಲ ಪರಿಚಿತವಾಗುತ್ತದೆ. ಹಾಗೇ ಜಗತ್ತಿನ ವಿವಿಧ ಬಂದರುಗಳೂ ನಿಮ್ಮ ಊಹೆಗೆ ನಿಲುಕುತ್ತವೆ. ಸೂಯೆಜ್ ಕಾಲುವೆ, ಪನಾಮಾ ಕಾಲುವೆ, ಬರ್ಮುಡಾ ಟ್ರಯಾಂಗಲ್ – ಎಲ್ಲವೂ ಈ ಕಥೆಗಳಲ್ಲಿ ಬಂದು ಹೋಗುತ್ತವೆ.
ಎರಡನೇ ಕಥನ ; ಕ್ಯಾಪ್ಟನ್ಸ್ ವೈಫ್ ನನ್ನ ಮಟ್ಟಿಗೆ ಇಡೀ ಪುಸ್ತಕದಲ್ಲಿ ಬಂದ ಅತ್ಯುತ್ಕೃಷ್ಟ ಕಥೆ. ಕ್ಯಾಪ್ಟನ್ನನ ಯುವ ಪತ್ನಿಯು ಸಿಬ್ಬಂದಿ ಯುವಕನೊಡನೆ ಖರೀದಿಗೆ ಹೋಗಿದ್ದು, ಕ್ಯಾಪ್ಟನ್‌ನ ಅನುಭವಗಳಿಗೆ ಸೆಡ್ಡು ಹೊಡೆಯುವ ಇನ್ನೊಬ್ಬ ಮೇಲಧಿಕಾರಿ ಬಂದು ಕ್ಯಾಪ್ಟನ್ನನ ಮೌಲ್ಯವನ್ನೇ ಹಾಳುಗೆಡಹಿದ್ದು…. ಎಲ್ಲ ಪುಟ್ಟ ಪುಟ್ಟ ಬೆಳವಣಿಗೆಗಳು ಕೊನೆಗೆ ಕ್ಲೈಮಾಕ್ಸ್‌ನಲ್ಲಿ ಬಂದು ಕೂಡುವ ಬಗೆ ನಿಮ್ಮನ್ನು ಖಂಡಿತ ತಟ್ಟುತ್ತದೆ. ಫಿಲಿಪೋಸ್ ಅನುಭವ ಪಡೆದದ್ದಷ್ಟೇ ಅಲ್ಲ, ಅನುಭವವನ್ನು ಹೇಳುವ ವಿಧಾನವನ್ನೂ ಅರಿತಿರುವ ಪ್ರಾಜ್ಞ ಮನಸ್ಸಿನ ಕಥೆಗಾರ. ಕ್ಯಾಪ್ಟನ್ನನ ಪತ್ನಿಯನ್ನು ಉಳಿಸಲು ಆ ಮೇಲಧಿಕಾರಿ ತನ್ನ ಜಾಣತನವನ್ನೇ ಕಡೆಗಣಿಸಿ ಸುಮ್ಮನಿದ್ದುಬಿಡುವ ಸನ್ನಿವೇಶ ಒಂದು ಕಾವ್ಯದಂತೆ ಮೂಡಿದೆ. ಭಾವುಕ ಮನಸ್ಸಿನ ಫಿಲಿಪೋಸ್ ಕಥೆಯನ್ನು ಎಷ್ಟು ಚೆನ್ನಾಗಿ ನೇಯುತ್ತಾರೆ ಅಂದರೆ ನಿಮಗೆ ಹಡಗಿನ ವಿವರಗಳು ಅಲ್ಲಲ್ಲಿ ಎಡತಾಕಿದರೂ ಕಥೆಗಾಗಿ ನೀವು ಅದನ್ನೆಲ್ಲ ಅರಗಿಸಿಕೊಳ್ಳುತ್ತೀರಿ; ಪುಟ ಹಾರಿಸುವುದಿಲ್ಲ. ಪ್ರತೀ ಕಥೆಗೂ ಬೇಕಾದ ಮಾಹಿತಿಗಳು ಆಯಾ ಕಥೆಯಲ್ಲೇ ಇವೆ.

ಬಿಸ್ವಾಸ್ ಎಂಬ ಭಾರತದ ಇಂಜಿನಿಯರೊಬ್ಬನನ್ನು ಜನಾಂಗೀಯ ನಿಂದನೆಗೆ ಒಳಪಡಿಸಿದರೂ ಅವನು ಇಡೀ ಹಡಗು ಮುಳುಗಿಹೋಗುವುದನ್ನು ತಡೆದ ಕಥೆ, ಕ್ಯಾಪ್ಟನ್ ರಾಜಗೋಪಾಲನ ಮಗನ ಕಿತಾಪತಿಯಿಂದ ಇಡೀ ಹಡಗಿನ ನಿಯಂತ್ರಣವೇ ತಪ್ಪಿಹೋದ ರಾದ್ದಾಂತ, ಮಸೂದ್ ಎಂಬ ಅಮಾಯಕ ಜಾಣ ಹುಡುಗ ಇನ್ನೊಬ್ಬನ ಬೇಜವಾಬ್ದಾರಿಯಿಂದ ಸತ್ತುಹೋದ ದುರಂತ, ಚೀಫ್ ಆಫೀಸರನನ್ನು ಮೀನು ಶೈತ್ಯಾಗಾರದಲ್ಲೇ ಸಿಲುಕಿಸಿ ಕೊಲ್ಲುವ ಕೆಡೆಟ್‌ನ ಮಾನಸಿಕತೆ, ದಕ್ಷಿಣ ಕೊರಿಯಾದಲ್ಲಿ ಕಾಫಿ ಕುಡಿಯಲು ಹೋಗಿ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಕೊಂಡ ಫಜೀತಿ, ಪನಾಮಾ ಚಾನೆಲ್ ದಾಟುವಾಗ ಸಿಖ್ ಜನಾಂಗೀಯ ದ್ವೇಷದಿಂದ ಬೇಸತ್ತ ರೇಡಿಯೋ ಆಫೀಸರ್ ಹರಚರಣ್ ಸಿಂಗ್ ತಂದಿಟ್ಟ ಸಮಸ್ಯೆಗಳು, ಎಷ್ಟೋ ವರ್ಷಗಳ ಹಿಂದೆ ನಡೆದ ದುರಂತವನ್ನು ನೆನಪಿಸುವ ನಿಗೂಢ ಹೆಣ್ಣುಕೈಗಳು, ಸೆಂಟ್ರಿಫ್ಯೂಜ್ ಮಾಡುವಾಗ ತಪ್ಪಿದರೆ ಇಂಜಿನ್ ರೂಮಿನಲ್ಲಿ ಎಲ್ಲಿಂದಲೋ ಕೇಳಿಬರುವ ಅಬ್ಬರದ ನಗು, ಬರ್ಮುಡಾ ಟ್ರಯಾಂಗಲ್‌ನಲ್ಲಿ ಕಂಡ ವಿಚಿತ್ರ ಬೆಳಕು, ಜಾವೆಲಿನ್ ಭರ್ಚಿಯಿಂದ ಗಾಯಗೊಂಡ ಸಹಪಾಠಿಯು ಅದೇ ಜ್ಯಾವೆಲಿನ್ ಎಸೆತದಲ್ಲಿ ಬಹುಮಾನ ಪಡೆದ ಸ್ಫೂರ್ತಿಯ ಕಥೆ, ಒಂದೇ ಡಾಲಿರಿಗೆ ಸಿಕ್ಕಿದ ಜಪಾನೀ ಬೈಕುಗಳನ್ನು ನೋಡುವವರಿಲ್ಲದೆ ಸಮುದ್ರಕ್ಕೆ ಎಸೆದ ವಿಷಾದ,…… ಫಿಲಿಪೋಸ್….. ನಿಮ್ಮ ಕಥನಶೈಲಿ ಎಷ್ಟು ಚೆನ್ನಾಗಿದೆ ಅಂದ್ರೆ ಪ್ರತೀ ಪುಟದಲ್ಲೂ ಕಥೆ ಇದೆ. ಭಾವನೆಗಳಿವೆ. ಮಾಹಿತಿ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪ್ರಜ್ಞೆಯಲ್ಲಿ ಸಾಹಿತ್ಯದ ಸುಗಂಧವಿದೆ.

ಈ ಕಥೆಗಳ ಇನ್ನೊಂದು ವಿಶೇಷ ಎಂದರೆ ಪಾತ್ರಪೋಷಣೆ. ಪ್ರತೀ ಕಥೆಯ ಪ್ರಮುಖ ಪಾತ್ರಗಳ ಚಹರೆಯನ್ನು ಫಿಲಿಪೋಸ್ ತುಂಬಾ ಚೆನ್ನಾಗಿ ಬಣ್ಣಿಸಿದ್ದಾರೆ. ಒಂದು ಪಾತ್ರ ಹೇಗೆ ವರ್ತಿಸಬಹುದು ಎಂದು ನಿಮಗೆ ಗೊತ್ತಿದ್ದರೆ ಕಥೆಯ ಹರಿವಿನ ಬಗ್ಗೆ ಸಹಜ ಕಲ್ಪನೆಗಳು ಬೆಳೆಯುತ್ತವೆ. ಈ ಮಟ್ಟಿಗೆ ಫಿಲಿಪೋಸ್ ಎಲ್ಲೂ ಬ್ಯಾಲೆನ್ಸ್ ತಪ್ಪಿಲ್ಲ.

ಈ ಕಥನಗಳನ್ನು ಓದುತ್ತಿರುವಾಗ ನನಗೆ ಆರ್. ಕೆ. ನಾರಾಯಣರ ಸರಳ ನಿರೂಪಣಾ ಶೈಲಿ ನೆನಪಾಯಿತು. ಇಂಗ್ಲಿಶ್ ಸಾಹಿತ್ಯವನ್ನು ಅಷ್ಟಾಗಿ ಓದಿರದ ನಾನು ಈಗ ಫಿಲಿಪೋಸ್‌ರ ಕಥನಗಳನ್ನು ಓದಿ ಖುಷಿಪಟ್ಟಿರುವೆ.

ನಿಮ್ಮ ಮಾಹಿತಿಗೆ
ರೂಪಾ ಎಂಡ್ ಕೋ ಪ್ರಕಟಿಸಿರುವ ಈ ಪುಸ್ತಕದ ಬೆಲೆ ೧೯೫ ರೂ.
ಐ ಎಸ್ ಬಿ ಎನ್ ಸಂಖ್ಯೆ: ೮೧-೨೯೧-೦೫೫೦-೦
‘ದಿ ಹಿಂದೂ ಪತ್ರಿಕೆ’ಯಲ್ಲಿ  ಬಾಗೇಶ್ರೀಯವರು ಜಾರ್ಜ್ ಫಿಲಿಪೋಸ್ ಬಗ್ಗೆ ಬರೆದ ಕಿರುಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಫಿಲಿಪೋಸ್ ವೆಬ್‌ಸೈಟ್:  www.georgephillipos.com/

1 Comment

  1. Mahendra kumar

    Good. Very Interesting. After 2005 only a good Kannada reader reviewed same book. Mahendra Kumar – Bellary

Comments are Closed

Theme by Anders Norén