ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.

ಇತ್ತೀಚೆಗೆ ಬೆಂಗಳೂರಿಗೆ ಬಂದು ಗಾಂಧಿ ಪ್ರತಿಮೆಯೆದುರು ಈ ವಿಷಯವಾಗಿ ಧರಣಿ ನಡೆಸಿದ ತಿಮ್ಮಕ್ಕ ಅಲ್ಲಲ್ಲಿ ಸುದ್ದಿಯಾದರು. ಈಗಷ್ಟೇ ಕರ್ನಾಟಕ ಸರ್ಕಾರವು ಒಂದು ಲಕ್ಷ ರೂ. ನೆರವು ಘೋಷಿಸಿದೆ. ಸಾಕೆ?

ತಿಮ್ಮಕ್ಕ ಬರೀ ಮರ ನೆಟ್ಟವರಲ್ಲ. ನಮ್ಮ ಪ್ರಜ್ಞೆಯನ್ನೇ ನೆಟ್ಟಗಾಗಿಸಿದವರು. ಪರಿಸರ ಪ್ರೀತಿಯ ನೂರಾರು ಒಣ ಘೋಷಣೆಗಳಿಗಿಂತ ನೀರೆರೆದು ಬೆಳೆಸಿದ ಹಸಿ ಮರಗಳೇ ಮೇಲು ಎಂದು ಬಲವಾಗಿ ನಂಬಿದವರು. ಅವರನ್ನು ಅವರದೇ ಕಾಲಘಟ್ಟದಲ್ಲಿ ನೋಡುತ್ತಿರುವ ನಾವಾದರೂ ಕೊಂಚ ಹೆಚ್ಚು ಪ್ರೀತಿಸಬೇಕಲ್ಲವೆ?

ಬನ್ನಿ, ಸಾಲುಮರದ ತಿಮ್ಮಕ್ಕಂಗೆ ಸಾಲು ಸಾಲಾಗಿ ನೆರವಾಗಿ:

  • ಅವರ ಬ್ಯಾಂಕ್ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಲಿಕಲ್ ಶಾಖೆ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ
  • ಖಾತೆ ನಂ: ಚಿಕ್ಕತಿಮ್ಮಕ್ಕ, ಉಳಿತಾಯ ಖಾತೆ (ಎಸ್ ಬಿ) ನಂ: ೫೪೦೫೫೦೨೩೯೬೫ (54055023965)
  • (ಖಾತೆಯಲ್ಲಿ ಅವರ ಹೆಸರು ಚಿಕ್ಕತಿಮ್ಮಕ್ಕ ಎಂದಿದೆ ಗಮನಿಸಿ)

ಅಥವಾ ಅವರಿಗೆ ನೇರವಾಗಿ ಹಣ ಕಳಿಸಬೇಕೆಂದರೆ ತಿಮ್ಮಕ್ಕನ ಹೆಸರಿನಲ್ಲಿ ಮನಿಯಾರ್ಡರ್ ಮಾಡಿ.

ನಿಮ್ಮ ಮಕ್ಕಳ ಜನ್ಮದಿನದ ಸಂದರ್ಭದಲ್ಲೋ, ನಿಮ್ಮ ಇಷ್ಟಮಿತ್ರರ ಮದುವೆಯ ವಾರ್ಷಿಕೋತ್ಸವದ ದಿನದಲ್ಲೋ, ನಿಮ್ಮ ಮನೆಯ ಯಾವುದೋ ಶುಭಗಳಿಗೆಯಲ್ಲೋ, ಸಾಲುಮರದ ತಿಮ್ಮಕ್ಕ ನೆನಪಾಗಲಿ. ಅವರು ನಾಡಿಗೆ ಕೊಟ್ಟ ಸಂದೇಶ ನಮ್ಮನ್ನು ಕಾಡಲಿ.

ಅವಸರದ ಸಾಹಿತ್ಯ, ಅವಸರದ ಬದುಕಿನಲ್ಲಿ ದಿನದಿನವೂ ಕೋಶಕೋಶ ಹಬ್ಬಿ ಬೆಳೆವ ಮರಗಳನ್ನು ಅವಿರತವಾಗಿ ಬೆಳೆಸಿದ ತಿಮ್ಮಕ್ಕನ ಜೀವ ಇನ್ನುಮುಂದಾದರೂ ಚಡಪಡಿಸದಿರಲಿ.

Leave a Reply

Theme by Anders Norén