ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ

(ಗಮನಿಸಿ: ಈ ಲೇಖನವು ಕೊಂಚ ದೀರ್ಘವಾಗಿದೆ. ಯಾಕೆಂದರೆ ಇಲ್ಲಿ ದೇಶದ ಒಂದಲ್ಲ, ಆರು ಘನತೆವೆತ್ತ ವಿಜ್ಞಾನಸಂಸ್ಥೆಗಳ ಮಾಹಿತಿಗಳ್ಳತನದ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ)

ಸಂಸ್ಥೆ ೧: ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್. ಸ್ಥಾಪನೆ ೧೯೩೪. ಸ್ಥಾಪಕರು : ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್.

ಸಂಸ್ಥೆ ೨: ದಿ ಇಂಡಿಯನ್ ನ್ಯಾಶನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ಹೊಸದಿಲ್ಲಿ. ಸ್ಥಾಪನೆ ೧೯೮೭. ಭಾರತದ ಪ್ರತಿಷ್ಠಿತ ಇಂಜಿನಿಯರುಗಳು, ಇಂಜಿನಿಯರ್ – ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಒಳಗೊಂಡ ಸಂಸ್ಥೆ.

ಸಂಸ್ಥೆ ೩: ಇಂಡಿಯನ್ ನ್ಯಾಶಲ್ ಸೈನ್ಸ್ ಅಕಾಡೆಮಿ, ಹೊಸದಿಲ್ಲಿ. ಅದರ ವೆಬ್‌ಸೈಟೇ ಹೇಳುವಂತೆ ದೇಶದ ಮುಂಚೂಣಿ ವಿಜ್ಞಾನ ಅಕಾಡೆಮಿ.

ಸಂಸ್ಥೆ ೪: ನ್ಯಾಶನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್, ಹೊಸದಿಲ್ಲಿ. ದೇಶದ ಕೃಷಿ ಸಂಬಂಧಿ ನೀತಿ ಕುರಿತಂತೆ ವಿಶ್ವಾಸಾರ್ಹ ಚಿಂತನಾ ತಂಡವಾಗಿ ಮಾನ್ಯತೆ ಪಡೆಯುವುದೇ ಈ ಸಂಸ್ಥೆಯ ಉದ್ದೇಶವಂತೆ.

ಸಂಸ್ಥೆ ೫: ನ್ಯಾಶನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್, ಹೊಸದಿಲ್ಲಿ. ಈ ವೆಬ್‌ಸೈಟನ್ನು ನೋಡಿದರೆ ಸಾಕು, ಈ ಸಂಸ್ಥೆಯ ಶಿಸ್ತು ಗೊತ್ತಾಗುತ್ತದೆ. ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ. ಎತ್ತು ಉಚ್ಚೆ ಹೊಯ್ಯುವುದಕ್ಕಿಂತ ವಿಭಿನ್ನವಾದ ವಿನ್ಯಾಸ. ಆದ್ದರಿಂದ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ, ಕ್ಷಮಿಸಿ.

ಸಂಸ್ಥೆ ೬: ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್, ಅಲಹಾಬಾದ್. ಸ್ಥಾಪನೆ ೧೯೩೦. ಭಾರತೀಯ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಪ್ರಕಟಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುವುದೇ ಈ ಸಂಸ್ಥೆಯ ಉದ್ದೇಶ.

ಈ ಆರೂ ಸಂಸ್ಥೆಗಳು ಸೇರಿ ತಯಾರಿಸಿದ ವರದಿಯೇ  ‘ಇಂಟರ್ ಅಕಾಡೆಮಿ ರಿಪೋರ್ಟ್ ಆನ್ ಜಿ ಎಂ ಕ್ರಾಪ್ಸ್’ (ಕುಲಾಂತರಿ ಬೆಳೆಗಳ ಮೇಲೆ ಅಂತರ್- ಅಕಾಡೆಮಿ ವರದಿ). ಈ ವರದಿಯನ್ನು ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ರೂಪಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಿಗೆ ಸಲ್ಲಿಸಲಾಗಿದೆ. ಸಚಿವ ಜೈರಾಂ ರಮೇಶ್ ಮತ್ತು ಯೋಜನಾ ಆಯೋಗದ ಸದಸ್ಯ ಡಾ. ಕೆ. ಕಸ್ತೂರಿ ರಂಗನ್ ರವರ ಸೂಚನೆಯ ಮೇಲೆ ತಯಾರಿಸಿದ ಈ ವರದಿಯನ್ನು ಹೇಗೆ ತಯಾರಿಸಲಾಗಿದೆ ಎಂದೂ ವರದಿಯಲ್ಲೇ ಬರೆಯಲಾಗಿದೆಯಂತೆ. ಅಂದಮೇಲೆ ಈ ವರದಿಯು ನೀವು ಅತ್ಯಂತ ಘನವಾದ ಸಂಶೋಧನೆಗಳನ್ನೂ, ವಸ್ತುನಿಷ್ಠ ವೈಜ್ಞಾನಿಕ ಮಾಹಿತಿಗಳನ್ನೂ ಒಳಗೊಂಡಿದೆ ಎಂದು ವಿಶ್ವಾಸದಿಂದ ಬೀಗುತ್ತೀರಿ. ಆದರೆ ಹಾಗಾಗಿಲ್ಲ. ಈ ಆರೂ ಸಂಸ್ಥೆಗಳ ಘನ ವಿಜ್ಞಾನಿಗಳು ಇನ್ನಾವುದೋ ಕುಲಾಂತರಿ ಬದನೆ ಪ್ರೇಮಿ ವಿಜ್ಞಾನಿಯ ಲೇಖನವನ್ನೇ ಅನಾಮತ್ತಾಗಿ ಎತ್ತಿಕೊಂಡು ವರದಿಯನ್ನು ಕಟ್ಟಿ ಇಡೀ ದೇಶಕ್ಕೇ ಅವಮಾನ ಮಾಡಿದ್ದಾರೆ. ದೇಶದ ಜೀವವೈವಿಧ್ಯ ಉಳಿಸಬೇಕಾದ ಈ ವಿಜ್ಞಾನಿಗಳು ವಿಜ್ಞಾನ ಸಂಶೋಧನಾ ಪ್ರಬಂಧದ ಎಲ್ಲ ನೀತಿ ನಿಯಮಗಳನ್ನೂ ಗಾಳಿಗೆ ತೂರಿ ಬಿಟಿ ಬದನೆಯ ಪರವಾಗಿ ತುತ್ತೂರಿ ಊದಿದ್ದಾರೆ. ಇದು ದೇಶದ ಪ್ರಜ್ಞಾವಂತರೆಲ್ಲ ಖಂಡಿಸಬೇಕಾದ ಘಟನೆ.

ವಿಜ್ಞಾನವನ್ನು ಕಾರ್ಪೋರೇಟ್ ಹಿತಾಸಕ್ತಿಗಳಿಗೆ ಬಳಸಿಕೊಳ್ಳಬಹುದು ಎಂದಷ್ಟೇ ಭಾವಿಸಿದ್ದ ನಮಗೆ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳನ್ನೂ ಹೀಗೆ ಕಾರ್ಪೋರೇಟ್ ಪ್ರಭಾವದಿಂದ ತಾಳಕ್ಕೆ ತಕ್ಕಂತೆ ಕುಣಿಸಬಹುದು; ಇದಕ್ಕೆ ವಿಜ್ಞಾನಿಗಳೂ ತೆಪ್ಪಗೆ ಮಣಿಯುತ್ತಾರೆ ಎಂದು ಈ ವರದಿಯು ಖಚಿತಪಡಿಸಿದೆ. ಈ ವರದಿಯನ್ನು ಓದಿ, ಈ ವರದಿಗೆ ಮೂಲವಾದ ಲೇಖನವನ್ನೂ ಓದಿ, ಈ ಎಲ್ಲಾ ಸಂಸ್ಥೆಗಳಲ್ಲಿ ಸಿಗಬಹುದಾದ ಮಾಹಿತಿಗಳನ್ನು ಕಲೆಹಾಕಿ ಈ ಲೇಖನ ಸಿದ್ಧಪಡಿಸಿದ್ದೇನೆ. ಆದ್ದರಿಂದ ನೀವು ಸ್ವತಂತ್ರ ಸಂಶೋಧನೆ ಮಾಡುವುದಕ್ಕಿಂತ ಮೊದಲು ನನ್ನ ಲೇಖನವನ್ನು ನಕಲು ಮಾಡುವುದು ಉತ್ತಮ!

ಕುಲಾಂತರಿ ಮುಕ್ತ ಭಾರತ ಮೈತ್ರಿಕೂಟ (ಜಿ ಎಂ ಫ್ರೀ ಕೋಯಲಿಶನ್ ಇಂಡಿಯಾ)ವು ಈ ವರದಿಯು ಪ್ಲಜಿರಿಸಮ್‌ನ (ಕದ್ದು ಬಳಸುವುದು, ಕೃತಿಚೌರ್ಯ) ಪಕ್ಕಾ ಉದಾಹರಣೆ ಎಂದಿದೆ. ಆದರೆ ಈ ಎಲ್ಲಾ ಸಂಸ್ಥೆಗಳೂ ಪ್ರತಿಕ್ರಿಯೆ ನೀಡಿ ‘ಛೆ, ಛೆ, ಹಾಗಾಗುವುದುಂಟೆ? ನಮ್ಮ ವರದಿಯಲ್ಲಿನ ವಾಕ್ಯಗಳಿಗೆ ಉಲ್ಲೇಖ ನೀಡಿರಲಿಲ್ಲ. ಈಗ ಅದನ್ನೂ ನೀಡುತ್ತೇವೆ’ ಎಂದು ಸಮಜಾಯಿಷಿ ನೀಡಿವೆ. ದಶಕಗಳ ಕಾಲ ಸಂಶೋಧನೆ ಮಾಡಿ ಟನ್ನುಗಟ್ಟಳೆ ವೈಜ್ಞಾನಿಕ ವರದಿಗಳನ್ನು ತಯಾರಿಸಿದ ಈ ಸಂಸ್ಥೆಗಳಿಗೆ ಒಂದೇ ಪ್ರಶ್ನೆ: ಅಲ್ಲಾರೀ, ಬಿಟಿ ಬದನೆಯಂಥ ಜ್ವಲಂತ ಪಾರಿಸರಿಕ ವಿಷಯದ ಬಗ್ಗೆ ದೇಶವೇ ಹೊತ್ತುರಿದು, ಭಾರೀ ಪ್ರತಿಭಟನೆ ನಡೆದು ಅದರ ಪ್ರವೇಶಕ್ಕೇ ನಿಷೇಧ ಹೇರಿರುವಾಗ, ಅದೇ ವಿಷಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಾಗ ವೈಜ್ಞಾನಿಕ ವರದಿಯನ್ನು ತಯಾರಿಸುವ ಸ್ಟೈಲ್‌ಶೀಟುಗಳೆಲ್ಲ ಮರೆತೇಹೋದವೆ? ಏನನ್ನು ತಿಂದ ಪರಿಣಾಮವಾಗಿ ನೀವು ಈ ರೀತಿ ಉಲ್ಲೇಖಗಳನ್ನು ಕೊಡದೇ ಮಕ್ಕಿ ಕಾ ಮಕ್ಕಿ ಮಾಡಿ ವರದಿ ತಯಾರಿಸಿದಿರಿ?

ಮೊದಲು ಈ ವರದಿಯನ್ನು ಎಷ್ಟು ಕಷ್ಟಪಟ್ಟು ತಯಾರಿಸಲಾಗಿದೆ ಎಂದು ಈ ವರದಿಯೇ ಹೇಳಿದ್ದನ್ನು ತಿಳಿದುಕೊಳ್ಳೋಣ: ಮೊದಲು ಈ ವರದಿ ತಯಾರಿಸಲು ಬಂದ ಪತ್ರವನ್ನು ಎಲ್ಲ ಸಂಸ್ಥೆಗಳಿಗೂ ಕಳಿಸಲಾಯಿತಂತೆ. ಆಮೇಲೆ ೨೦೦೯ರ ಜೂನ್ ೧ರಂದು ಒಂದು ಬ್ರೈನ್ ಸ್ಟಾರ್ಮಿಂಗ್ ಗೋಷ್ಠಿಯನ್ನು ಐ ಎನ್ ಎಸ್ ಎ ನಲ್ಲಿ ನಡೆಸಲಾಯಿತಂತೆ. ಅಲ್ಲಿ ಅತಿ ಆಳವಾದ ಚರ್ಚೆ ನಡೆಯಿತಂತೆ. ಈ ವರದಿಯನ್ನು ಸಭೆಯ ನಡಾವಳಿಯನ್ನು ಅವಲಂಬಿಸಿಯೇ ತಯಾರಿಸಲಾಯ್ತಂತೆ. ಅಷ್ಟೇ ಅಲ್ಲ, ಅಲ್ಲಿ ಹಾಜರಿದ್ದ ಫೆಲೋಗಳು (ಹೂ ಆರ್ ದೀಸ್ ಫೆಲೋಸ್? ಐ ಡೋಂಟ್ ನೋ!!!!) ಅಲ್ಲಿ ತೋರಿಸಿದ ಹಲವು ದಾಖಲೆಗಳನ್ನೂ ಈ ವರದಿ ಒಳಗೊಂಡಿದೆಯಂತೆ. (The present document is based on the discussions at this meeting, the written comments given by Fellows and the documents brought to the attention of the meeting by different Fellows..)

ಹೀಗೆ ಭಾರೀ ಕಷ್ಟಪಟ್ಟು ತಯಾರಿಸಿದ ಈ ವೈಜ್ಞಾನಿಕ ವರದಿಯು ಆನಂದಕುಮಾರ್ ಎಂಬ ಬಿಟಿ ಬದನೆ ಪರವಾಗಿರುವ ವಿಜ್ಞಾನಿಯು ಕೇಂದ್ರ ಜೈವಿಕ ತಂತ್ರಜ್ಞಾನ ಸಚಿವಾಲಯದ ಪ್ರಕಟಣೆಯಾದ ಬಯೋಟೆಕ್ ನ್ಯೂಸ್ ಮ್ಯಾಗಜಿನ್‌ನ ಡಿಸೆಂಬರ್ ೨೦೦೯ರ ಸಂಚಿಕೆಯಲ್ಲಿ ಬರೆದ ಲೇಖನದ ಹಲವು ಪ್ಯಾರಾಗಳನ್ನು ಅನಾಮತ್ತಾಗಿ ಎತ್ತಿ ಸೇರಿಸಿಕೊಂಡಿದೆ. ಈ ವರದಿಯಲ್ಲಿ ಹೇಳಿರುವ ಹಾಗೆ ಈ ಲೇಖನವನ್ನೂ ಜೂನ್ ೧ ರ ಸಭೆಯಲ್ಲಿ ಮಂಡಿಸಲಾದ ಬಗ್ಗೆ ಮಾಹಿತಿ ಈವರೆಗೂ ಸಿಕ್ಕಿಲ್ಲ.

ಅದಿರಲಿ, ಪ್ರತಿಯೊಂದೂ ವೈಜ್ಞಾನಿಕ ವರದಿಯಲ್ಲಿ ಸೈಟೇಶನ್, ರೆಫರೆನ್ಸ್, – ಇತ್ಯಾದಿ ಮೂಲ ಆಕರಗಳನ್ನು ಉಲ್ಲೇಖಿಸುವ ಸಿದ್ಧ ಪರಂಪರೆಯೇ ಇದೆ. ಇದನ್ನು ಆಲ್ಬರ್ಟ್ ಐನ್‌ಸ್ಟೈನ್‌ನಿಂದ ಹಿಡಿದು ಸ್ಟೀಫನ್ ಹಾಕಿಂಗ್‌ವರೆಗೆ ಎಲ್ಲರೂ ಮಾಡುತ್ತಾರೆ. ಆದರೆ ಸಾವಿರಾರು ವಿಜ್ಞಾನಿಗಳಿಗೆ ವೈಜ್ಞಾನಿಕ ವರದಿಗಳನ್ನು ತಯಾರಿಸಲು ಸೂಚಿಸಿ ಅವುಗಳನ್ನೆಲ್ಲ ಜರಡಿ ಹಿಡಿದು ಪ್ರಕಟಿಸುವ ಹೊಣೆಗಾರಿಕೆ ಇರುವ ಈ ಆರೂ ಸಂಸ್ಥೆಗಳು ಯಾವುದೇ ಉಲ್ಲೇಖವೂ ಇಲ್ಲದ ಮತ್ತು ಬೇಕಾಬಿಟ್ಟಿ ಸ್ವೀಪಿಂಗ್ ಹೇಳಿಕೆಗಳನ್ನು ಮಾಡಿರುವ ವರದಿಯನ್ನು ತಯಾರಿಸಿರುವುದು ನಾಚಿಕೆಗೇಡು. ಈ ವರದಿಯ ಪ್ರಕಾರ ಬಿಟಿ ಬದನೆಯಿಂದ, ಅಥವಾ ಕುಲಾಂತರಿ ತಳಿಗಳಿಂದ ಜೀವವೈವಿಧ್ಯದ ಮೇಲೆ ಯಾವುದೇ ದುಷ್ಪರಿಣಾಮವೂ ಇಲ್ಲ!  ಈ ವಾದ ಎಷ್ಟು ಪೊಳ್ಳು ಎನ್ನುವುದಕ್ಕೆ ನೀವು ಪ್ರೊ. ಬಿ.ಎಂ. ಕುಮಾರಸ್ವಾಮಿಯವರ ಈ ಭಾಷಣವನ್ನು ಹತ್ತು ನಇಮಿಷ ಕೇಳಿದರೆ ಸಾಕು.

ಮೊದಲೇ ಈ ಬಿಟಿ ಬದನೆಯನ್ನು ತಯಾರಿಸುವಾಗ ನಮ್ಮ ದೇಸಿ ತಳಿಗಳನ್ನು ಯಾವ ಅಧಿಕೃತ ಅನುಮತಿಯೂ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಧಾರವಾಡ ವಿಶ್ವವಿದ್ಯಾಲಯದ ಮೇಲೆ ಎನ್‌ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ ಈಗಾಗಲೇ ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ದೂರು ನೀಡಿದ್ದು ಅದೀಗ ವಿಚಾರಣೆಯಲ್ಲಿದೆ. ಸಂಶೋಧನೆಗಾಗೇ ನಮ್ಮ ಪ್ರಿಯ ಬದನೆಯನ್ನು ಕದ್ದ ಮೇಲೆ ಅದನ್ನು ವಿರೂಪಗೊಳಿಸುವ ಸಿದ್ಧಾಂತಗಳನ್ನು ಕದಿಯುವುದರಲ್ಲಿ ಅಚ್ಚರಿಯೇನೂ ಇಲ್ಲ!

ಕೃತಿಚೌರ್ಯದ ಬಗ್ಗೆ ಈ ಆರು ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ತನ್ನ ವೆಬ್‌ಸೈಟಿನಲ್ಲೇ ಹೀಗೆ ಹೇಳಿಕೊಂಡಿದೆ:

The degree of plagiarism could be as mild as the copying of a single sentence from another author without acknowledgement, or could involve more extensive ‘lifting of material’ from other sources, including previous publications of the same author.

 ಕೃತಿಯ ಆಕರವನ್ನು ಉಲ್ಲೇಖಿಸದೆಯೇ ಒಂದು ವಾಕ್ಯವನ್ನೂ ಮರುಪ್ರಕಟಿಸುವುದು ಕೃತಿಚೌರ್ಯ ಎಂದು ಬೊಬ್ಬಿಡುವ ಈ ಸಂಸ್ಥೆಯೂ ಕುಲಾಂತರಿ ಬದನೆ ಕುರಿತ ವರದಿಯ ಪ್ಯಾರಾಗಟ್ಟಳೆ ಕಳ್ಳತನಕ್ಕೆ ಸಹಿ ಹಾಕಿದೆ. ಇಷ್ಟಾಗಿ, ಕೃತಿಚೌರ್ಯದ ವಿಷಯ ಗೊತ್ತಾದರೆ ಕೂಡಲೇ ಕ್ರಮ ತೆಗೆದುಕೊಳ್ಳುವುದಾಗಿಯೂ ಅದು ಖಚಿತಪಡಿಸಿದೆ:

To counter these problems, we are instituting several measures with immediate effect, uniformly for all Academy journals. Every case of suspected plagiarism brought to our attention will be investigated objectively and transparently by the journal editors as speedily as possible. If plagiarism is detected during the refereeing process, apart from immediate rejection the Academy will consider other steps commensurate with the seriousness of the case. In those situations where plagiarism is proven after publication, appropriate announcements will be placed, both on the Journal’s Web site and in the next possible print issue of the journal. The Academy reserves the right to bring such instances to the attention of the author’s employers, funding agencies and (where applicable) the original author whose work has been plagiarised. The journal from where the plagiarised material has been taken may also be alerted.

 ಹೀಗೆ ಈ ಸಂಸ್ಥೆಯೇ ಬರೆದುಕೊಂಡ ಮೇಲೆ, ಈ ಸಂಸ್ಥೆಯ ವಿರುದ್ಧವೇ ದೂರು ಕೊಡಬೇಕಾದ ಸ್ಥಿತಿ ಒದಗಿದೆ! ಛೆ, ಛೆ!

ಈ ವಿಜ್ಞಾನಿಗಳ ಸಭೆ ನಡೆದ ಐ ಎನ್ ಎಸ್ ಯ ಅಧ್ಯಕ್ಷರಾಗಿದ್ದ ಪ್ರೊ. ಎಂ. ಎಸ್. ವಲಿಯಾಥನ್ ೨೦೦೩ರ ಮಾರ್ಚ್ ೮ರಂದು ಸೊಸೈಟಿ ಫಾರ್ ಸೈಂಟಿಫಿಕ್ ವ್ಯಾಲ್ಯೂಸ್ (ಎಸ್ ಎಸ್ ವಿ) ಎಂಬ ಸ್ವತಂತ್ರ ಸಂಸ್ಥೆಯಲ್ಲಿ ‘ಎಥಿಕ್ಸ್ ಇನ್ ಸೈನ್ಸ್’ ವಿಚಾರ ಸಂಕಿರಣದಲ್ಲಿ ಮಾಡಿದ ಭಾಷಣದ ಒಂದು ಪ್ಯಾರಾ ಇಲ್ಲಿದೆ:

In his inaugural remarks, Prof M S Valiathan, President INSA, underlined the ethical concerns which have taken a central place in global societies particularly after the second world-war due to ever increasing role of science and technology in our lives. With rapid advances in life sciences, issues of medical, genetic and ecological sciences are riddled with ethical problems which are of concern to government departments, social organizations, NGOs, academies and learned societies. The dilemma of ethics for a scientist is epitomized by what Duryodhana of Mahabharat said : ” I know what I ought to do but I cannot do it; I know what I ought not do but I cannot help doing it”.

 ಹೀಗೆ ವಿಜ್ಞಾನ ರಂಗದಲ್ಲಿ ನೈತಿಕತೆಯ ಬಗ್ಗೆ ಉಪನ್ಯಾಸ ನೀಡುವ ಸಂಸ್ಥೆಗಳ ಮುಖ್ಯಸ್ಥರು ೨೦೧೦ರಲ್ಲಿ ಇಂಥ ಕಟ್ಟುಕಥೆಯನ್ನೂ ಮೀರಿಸುವ ವರದಿಗೆ ಸಹಿ ಹಾಕಿದ್ದಾದರೂ ಹೇಗೆ? ಇಲ್ಲಿ ಇವರೆಲ್ಲರೂ ದುರ್ಯೋಧನರೇ?

ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ಪ್ರಕಾರ ರೆಫರೆನ್ಸ್ ನೀಡುವ ಪದ್ಧತಿ ಹೀಗಿದೆ:

References
In many journals and books, references are placed at the end of the article or chapter; in others, they are treated as footnotes. In any case, place your list of references at the end of the manuscript.

 ಈ ಆನಂದಕುಮಾರ್ ಬರೆದ ವರದಿಯನ್ನು ಓದಿದರೆ ಎಂಥವರಿಗೂ ಇದು ಬಿಟಿ ಬದನೆಯ ಪರವಾಗಿಯಾವ ವಸ್ತುನಿಷ್ಠತೆಯೂ ಇಲ್ಲದೆ ಬರೆದದ್ದು ಎಂದು ಗೊತ್ತಾಗುತ್ತದೆ. ಈ ವಿಜ್ಞಾನಿಯು ಈ ಮೊದಲೇ ಬಿಟಿ ಬದನೆಯನ್ನು ಮಾನ್ಯ ಮಾಡಿದ್ದ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೂವಲ್ ಕಮಿಟಿಯ (ಜಿ ಇ ಎ ಸಿ) ಸದಸ್ಯರಾಗಿದ್ದರು ಅನ್ನೋದು ವಿಷಯವನ್ನು ಇನ್ನಷ್ಟು ವಿಶದೀಕರಿಸುತ್ತದೆ. ಇದೇ ಜಿ ಇ ಎ ಸಿಯ ವರದಿಯನ್ನೇ ದೇಶದಲ್ಲಿ ನಡೆದ ಸಾರ್ವಜನಿಕ ಸಂಪರ್ಕ ಸಭೆಗಳ ತರುವಾಯ ಸಚಿವ ಜೈರಾಂ ರಮೇಶ್ ತಿರಸ್ಕರಿಸಿದ್ದರು.

 

ಇನ್ನೂ ಒಂದು ವಿಷಯ: ಈ ಲೇಖನ ಬಂದ ಸಂಚಿಕೆಯಲ್ಲೇ ಮೊನ್ಸಾಂಟೋ ಯಾಜಮಾನ್ಯದ ಮಹಿಕೋ ಸಂಸ್ಥೆಯನ್ನು ವಾಚಾಮಗೋಚರವಾಗಿ ಹಾಡಿ ಹೊಗಳಿದ ಭಾರೀ ಲೇಖನವೊಂದು ಇದೇ ಸಂಚಿಕೆಯಲ್ಲಿ ಪ್ರಕಟವಾಗಿದೆ. ಅದು ಇಲ್ಲಿದೆ:

ಹೀಗೆ ನಕಲೇ ಅಸಲು ಎಂದು ನಂಬಿಸುವ ಕೆಲಸವನ್ನು ನಮ್ಮ ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳೇ ಮಾಡಿವೆ. ಬಹುಶಃ ನಮ್ಮ ದೇಶದ ಜೀವ ವೈವಿಧ್ಯಕ್ಕೆ, ಪರಂಪರೆಗೆ ಈ ಸಂಸ್ಥೆಗಳು ಎಂಥ ಅಪಚಾರ ಮಾಡಿವೆ ಎಂಬುದು ಈಗ ಗೊತ್ತಾಗುವುದಿಲ್ಲ. ಬಿಟಿ ಬದನೆಯು ವಕ್ಕರಿಸಿದ ಮೇಲೆಯೇ ತಿಳಿಯುತ್ತದೆ. ನಿಯಂತ್ರಿತ ವಾತಾವರಣದಲ್ಲಿ (ಕಂಟ್ರೋಲ್‌ಡ್ ಕಂಡಿಶನ್ಸ್) ಪ್ರಯೋಗ; ಹವಾನಿಯಂತ್ರಿಕ ಕೋಣೆಗಳಲ್ಲಿ ಸಭೆ – ಹೀಗೆಯೇ ಮಾಡುತ್ತ ಹೋದರೆ ಇವರೆಲ್ಲ ದೇಶದ ಜನರ ನಂಬಿಕೆಯನ್ನು ಪೂರ್ತಾ ಕಳೆದುಕೊಳ್ಳುತ್ತಾರೆ.

ಸದ್ಯ, ಈ ಲೇಖನ ಬರೆಯೋ ಹೊತ್ತಿಗೆ ಸಂಸ್ಥೆ ಸಂಖ್ಯೆ ೫, ನ್ಯಾಶನಲ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್ ಪತ್ರಿಕಾ ಹೇಳಿಕೆ ನೀಡಿ ಸದರಿ ವರದಿಗೆ ಹಾಕಿದ ಸಹಿಯನ್ನು ಹಿಂದೆಗೆದುಕೊಂಡಿದೆ. ಈಗ ಗೊತ್ತಾಗಿರೋ ಪ್ರಕಾರ, ಜೂನ್ ೧ರ ಸಭೆಯಲ್ಲಿ ೯೦ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗವಹಿಸಿದ್ದರು. ಆದರೆ ವರದಿ ಬರೆಯುವ ಹೊಣೆಗಾರಿಕೆಯನ್ನು ಐ ಎನ್ ಎಸ್ ಎ ವಹಿಸಿಕೊಂಡಿತಂತೆ. ೯೦ ಜನ ವಿಜ್ಞಾನಿಗಳೂ ನಂಬಿ ಮೋಸ ಹೋದರೆ? ಈ ವರದಿಯನ್ನು ಬರೆದ ಮೇಲೆ ಒಬ್ಬರಿಗೂ ಈ ವರದಿಯ ಅಂಶಗಳ ಬಗ್ಗೆ ಸೂಕ್ತವಾದ ಸೈಟೇಶನ್‌ಗಳನ್ನು ಬರೆಯಬೇಕು ಎಂಬುದು ತಲೆಗೆ ಹೊಳೆಯಲಿಲ್ಲವೆ?

ಕಣ್ಣುಮುಚ್ಚಿ ವರದಿಗೆ ಸಹಿ ಹಾಕುವ, ಹಿತಾಸಕ್ತ ಕಾರ್ಪೋರೇಟ್‌ಗಳ ಮೂಗಿನ ನೇರಕ್ಕೆ ವರದಿಯನ್ನು ಬರೆಯುವ ಇಂಥ ವಿಜ್ಞಾನಿಗಳ ಸಮೂಹವನ್ನು ಚೆನ್ನಾಗಿ ನಿಭಾಯಿಸದಿದ್ದರೆ ಇವರು ಹೇಳಿದ್ದೆಲ್ಲ ಘೋರ ಸತ್ಯಗಳು ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ.

ಈಗಲೇ ನಾವೆಲ್ಲ ಇಂಥ ನಕಲಿ ವರದಿಗಳನ್ನು ತಡೆಯುವ ಕೆಲಸ ಮಾಡಬೇಕು. ಕಾಲ ಮಿಂಚುತ್ತಿದೆ.

Leave a Reply

Theme by Anders Norén