ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!

ಮಾನ್ಯ ಸಂಪಾದಕರು
ವಿಜಯ ಕರ್ನಾಟಕ , – ಇವರಿಗೆ

ವಿಜಯ ಕರ್ನಾಟಕದಲ್ಲಿ ನವೆಂಬರ್ ೨೨ರಂದು ಪ್ರಕಟವಾದ ಡಾ. ಶಾಂತು ಶಾಂತಾರಾಮ್ ರವರ ‘ತಥಾಕಥಿತ ವಿರೋಧಿಗಳ ವಾದದಲ್ಲೇನಿದೆ ಬದನೆಕಾಯಿ?’ ಎಂಬ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಇಲ್ಲಿದೆ.
ಈ ಶೀರ್ಷಿಕೆಯೇ ಬದನೆಕಾಯಿಯಲ್ಲಿ ಏನಂಥ ಪೌಷ್ಟಿಕಾಂಶಗಳಿಲ್ಲ ಎಂಬ ಅರ್ಥವನ್ನು ಕೊಡುತ್ತದೆ. ಬದನೆಕಾಯಿಯಲ್ಲಿ ಏನೂ ಇಲ್ಲ ಎಂದಾದರೆ ಶಾಂತಾರಾಂರಂಥ ಘನ ವಿದ್ವಾಂಸರು ಯಾಕೆ ಬಿಟಿ ಬದನೆ ಬಗ್ಗೆ ಅಷ್ಟೆಲ್ಲ ಪುಂಗಿ ಊದಬೇಕಿತ್ತು ಎಂದು ಅರ್ಥವಾಗುತ್ತಿಲ್ಲ!


‘ಡಾ. ಶಾಂತಾರಾಮ್‌ರವರು ಅಮೆರಿಕಾದ ಕೃಷಿ ವಿಜ್ಞಾನ ಸಂಸ್ಥೆಯ ಜೈವಿಕ ತಂತ್ರಜ್ಞಾನದ ನಿರ್ವಾಹಕರಾಗಿ ಸಾವಿರಾರು ಕುಲಾಂತರಿ ಬೀಜಗಳ ಸಮೀಕ್ಷೆ ನಡೆಸಿದ್ದಾರೆ’ ಎಂದು ಈ ಲೇಖನದ ಪೀಠಿಕೆ ಹೇಳಿದೆ. ಹಾಗಂತ ಈ ವಿಜ್ಞಾನಿಯೇನೂ ಅಮೆರಿಕಾ ಸರ್ಕಾರದಲ್ಲಿ ನೇರವಾಗಿ ಕೆಲಸ ಮಾಡಿದವರೇನಲ್ಲ! ಇಷ್ಟಕ್ಕೂ ಅಮೆರಿಕಾದಲ್ಲಿ ಸಮೀಕ್ಷೆ ನಡೆಸಿದ ಮಾತ್ರಕ್ಕೆ ಅವರು ಹೀಗೆಲ್ಲ ಉಪದೇಶ ಕೊಡುವ ಅರ್ಹತೆಯನ್ನೇನೂ ಪಡೆಯುವುದಿಲ್ಲ ಅಲ್ಲವೆ? ಅವರಿಗಾದ ಅನುಭವವೆಲ್ಲ ಖಾಸಗಿ, ಬೀಜ ಮತ್ತು ಕೀಟನಾಶಕ ಉತ್ಪಾದನಾ ಸಂಸ್ಥೆಗಳಲ್ಲಿಯೇ ಹೊರತು, ರೈತರ ಹೊಲಗಳಲ್ಲಿ ಅಲ್ಲ. ಅದಲ್ಲದೆ ‘ಬಹುರಾಷ್ಟ್ರೀಯ ಕಂಪೆನಿಗೆ ತುತ್ತೂರಿ ಊದುವವನು ಎಂಬ ಪಲಾಯನ ಮಾಡದೆ’ ಎಂಬ ಷರತ್ತನ್ನೂ ಈ ಪೀಠಿಕೆ ಹಾಕಿದೆ. ದಶಕಗಳ ಕಾಲ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅವುಗಳ ಪರವಾಗಿಯೇ ಸಂಶೋಧನೆ ನಡೆಸಿ, ಪ್ರಬಂಧಗಳನ್ನು ಮಂಡಿಸಿದ ಈ ವಿಜ್ಞಾನಿಯು ಈಗ ಮಾತ್ರ ಅತ್ಯಂತ ವಸ್ತುನಿಷ್ಠವಾಗಿ ಭಾರತದ ರೈತರ ಪರವಾಗಿ ದನಿ ಎತ್ತಿದ್ದಾರೆ ಎಂದು ನಾವು ನಂಬಬೇಕಷ್ಟೆ!

badane-compiled

 

ಇರಲಿ. ಅವರ ಮಾತುಗಳನ್ನು ನಂಬುವ ಮುನ್ನ ಅವರೆಷ್ಟು ಬೊಗಳೆ ಬಿಟ್ಟಿದ್ದಾರೆ ಎಂದು ನೋಡೋಣ:

 •  ಶಾಂತಾರಾಂರವರನ್ನು ನಂಬಿ ಅವರು ಉಲ್ಲೇಖಿಸಿದ ಐಎಸ್‌ಎಎಎ ಡಾಟ್‌ಕಾಮ್ ಎಂಬ ವೆಬ್‌ಸೈಟಿಗೆ ಹೋಗಿದ್ದೆ. ತಾನೊಂದು ‘ಪ್ರಾಮಾಣಿಕ ದಲ್ಲಾಳಿ’ ಎಂದು ಹೇಳಿಕೊಳ್ಳುವ ಈ ಸಂಸ್ಥೆಯ ದಾನಿಗಳಾರು? ಬೇಯರ್, ಮಾನ್ಸಾಂಟೋ ಇವೇ ಮುಂತಾದವು. ಇವೆಲ್ಲವೂ ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ವಿಶ್ವದ ಆಹಾರ ಸಮಸ್ಯೆಯನ್ನು ನೀಗಿಸಲೆಂದೇ ಕಂಕಣ ತೊಟ್ಟು ಬೀಜ ಮತ್ತು ಕೀಟನಾಶಕಗಳನ್ನು ಹೊತ್ತು ತರುವ ಸಾವಿನ ದಲ್ಲಾಳಿಗಳು. ಜೊತೆಗೆ ಖ್ಯಾತ ಕೃಷಿತಜ್ಞ ಎಂದು ಹೆಸರಾಗಿರುವ (ದುರ್ಭಾಗ್ಯವಶಾತ್ ನಮ್ಮ ದೇಶದ ನೀತಿ ನಿರೂಪಕದಲ್ಲಿ ಒಬ್ಬರಾದ) ಡಾ. ಎಂ. ಎಸ್. ಸ್ವಾಮಿನಾಥನ್ ಎಂಬ ಮಹಾಶಯರು. ಇಂಥ ಕುಲಾಂತರಿ ಬೆಂಬಲಿಗರ ದಾನದಿಂದ ಹುಟ್ಟಿದ ಸಂಸ್ಥೆಯ ದಾಖಲೆಗಳನ್ನು ನಾವು ಅಧಿಕೃತ ಎಂದು ಓದಿ ಪುನೀತರಾಗಬೇಕೆಂದು ಡಾ. ಶಾಂತಾರಾಂ ದಿವ್ಯ ಸಂದೇಶ ನೀಡಿದ್ದಾರೆ.
 •  ಬೊಗಳೆ ಬಿಡುವುದರಲ್ಲಿ ಡಾ. ಶಾಂತಾರಾಂಗೂ, ಐಎಸ್‌ಎಎಎಗೂ ಸ್ಪರ್ಧೆಯೇ ಏರ್ಪಟ್ಟಿದೆ. ೨೫ ಅಭಿವೃದ್ಧಿಶೀಲ ದೇಶಗಳ ಶೇ. ೯೦ರಷ್ಟು ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರು ಕುಲಾಂತರಿ  ತಳಿಗಳನ್ನು ಬೆಳೆಯುತ್ತಿದ್ದಾರೆ ಎಂದು ಈ ಸಂಸ್ಥೆ ಕೊಚ್ಚಿಕೊಳ್ಳುತ್ತದೆ. ಸರಿಯಾಗಿ ಲೆಕ್ಕ ಮಾಡಿದರೆ ವಿಶ್ವದ ಮಟ್ಟದಲ್ಲಿ ಈ ಸಂಖ್ಯೆ ಶೇ. ೨.೭ನ್ನು ದಾಟುವುದಿಲ್ಲ. ಎಲ್ಲಾ ರೈತರನ್ನು ಸೇರಿಸಿದರೆ ಈ ಸಂಖ್ಯೆ ಶೇ. ೧ ದಾಟುವುದಿಲ್ಲ.
   ಡಾ.ಶಾಂತಾರಾಂರವರ ಸಂಸ್ಥೆಯಾದ ಫೌಂಡೇಶನ್ ಫಾರ್ ಬಯೋಟೆಕ್ನಾಲಜಿ ಅವೇರ್‌ನೆಸ್ ಎಂಡ್ ಎಜುಕೇಶನ್ (ಎಫ್ ಬಿ ಎ ಇ ಡಾಟ್ ಓ ಆರ್ ಜಿ : ಪ್ರಕಟಿತ ಲೇಖನದಲ್ಲಿ ಈ ವೆಬ್‌ಸೈಟ್ ತಪ್ಪಾಗಿ ಉಲ್ಲೇಖವಾಗಿದೆ)ನಲ್ಲಿ ಇರುವುದೇನು? ಕುಲಾಂತರಿ ತಳಿಗಳಿಂದ ಎಂತೆಂಥ ಪ್ರಯೋಜನ ಎಂದು ಕಿರುಚುವ ಖಾಸಗಿ ಸಂಸ್ಥೆಗಳ ಮುಖವಾಣಿ ಲೇಖನಗಳು.
 •  ಡಾ. ಶಾಂತಾರಾಂರವರ ಉಪದೇಶದಂತೆ ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟಿಗೂ ಹೋಗಿ ಓದಿದರೆ ಕಂಡಿದ್ದಿಷ್ಟು: ಜಿ ಎಂ ಧಾನ್ಯಗಳ ಬಗ್ಗೆ ಇದಮಿತ್ಥಂ ಎಂದು ಡಬ್ಲ್ಯು ಎಚ್ ಓ ಹೇಳಿಯೇ ಇಲ್ಲ. ಬದಲಿಗೆ ಕುಲಾಂತರಿ ತಳಿಗಳ ಅಪಾಯದ ಬಗ್ಗೆ, ವೈವಿಧ್ಯತೆಯ ನಾಶ, ರಾಸಾಯನಿಕಗಳ ಬಳಕೆ, ಹಕ್ಕುಸ್ವಾಮ್ಯದ ತಾಪತ್ರಯ, ಮನುಷ್ಯರ ಮೇಲಿನ ಪರಿಣಾಮ – ಇತ್ಯಾದಿಗಳ ಬಗ್ಗೆ ಚರ್ಚಿಸಬೇಕಾದ ಸಂಗತಿಗಳು, ಬೇಕಾದಷ್ಟಿವೆ ಎಂದು ಡಬ್ಲ್ಯು ಎಚ್ ಓ ಹೇಳಿದೆಯೇ ಹೊರತು, ಈವರೆಗೂ ಅದು ಕುಲಾಂತರಿ ತಳಿಗಳ ಪರವಾಗಿ ತಮಟೆ ಬಾರಿಸಿಲ್ಲ. ಸುಳ್ಳು ಸುಳ್ಳೇ ಡಬ್ಲ್ಯು ಎಚ್ ಓ ಕೂಡಾ ಕುಲಾಂತರಿ ಬೀಜಗಳನ್ನು ಸಮರ್ಥಿಸಿದೆ ಎಂಬಂತೆ ಮಾತನಾಡುವ ಡಾ. ಶಾಂತಾರಾಂ ಸ್ವಲ್ಪ ಎಚ್ಚರಿಕೆ ವಹಿಸುವುದು ಸೂಕ್ತ. ಬೇಕಾದರೆ ಡಬ್ಲ್ಯು ಎಚ್ ಓ ನ ಈ ಕೊಂಡಿಯನ್ನು ಓದಿ ಮಾಹಿತಿ ಪಡೆಯಿರಿ : 

http://www.who.int/foodsafety/publications/biotech/20questions/en/

 •  ಅವರ ಉಪದೇಶದಂತೆ ನ್ಯಾಶನಲ್ ಸೈನ್ಸ್ ಅಕಾಡೆಮೀಸ್ ವೆಬ್‌ಸೈಟಿಗೂ ಹೋದೆ: ಅಲ್ಲಿ ಬಾರ್ಬರ ಶಾಲ್ ಎಂಬ ತಜ್ಞೆಯು ಥೈಲ್ಯಾಂಡ್ ಮತ್ತು ಕೊರಿಯಾದಲ್ಲಿನ ರೈತರು ಬೆಳೆಯುತ್ತಿರುವ ಹತ್ತಾರು ಬಗೆಯ ಧಾನ್ಯದ ತಳಿಗಳ ಬಗ್ಗೆ, ಅವುಗಳಿಗೂ ವಲಸೆ ಬಂದ ಜನಸಮುದಾಯಗಳಿಗೂ ಇರುವ ಸಂಬಂಧಗಳ ಬಗ್ಗೆ, ಪಾರಂಪರಿಕ ತಿಳಿವಳಿಕೆಯನ್ನು ಗೌರವಿಸುವ ಬಗ್ಗೆ ಸಂದರ್ಶನ ನೀಡಿದ್ದಾಳೆಯೇ ಹೊರತು ಬೇರಾವ ದಾಖಲೆಯೂ ಸಿಗಲಿಲ್ಲ. ಕುಲಾಂತರವು ನಿಸರ್ಗದತ್ತ ಪ್ರಕ್ರಿಯೆ ಎಂಬುದು ಅವಳ ಇನ್ನೊಂದು ಹೇಳಿಕೆ. ಕುಲಾಂತರಿ ತಳಿ ವಿಷಯದಲ್ಲಿ ನೈತಿಕ ಸಂಗತಿಗಳನ್ನು ಅಲ್ಲಗಳೆಯಲಾಗದು ಎನ್ನುವ ಆಕೆ, ರಾಸಾಯನಿಕಗಳ ಬಳಕೆ ಕುಗ್ಗುತ್ತದಲ್ಲಾ ಎಂದು ವಾದಿಸುತ್ತಾಳೆ. ಆದರೆ ನೀರಿನ ಅತಿ ಬಳಕೆ ಬಗ್ಗೆ ಚಕಾರವಿಲ್ಲ. ಅಕ್ಕಿಯ ಬಗ್ಗೆಯೇ ಹೇಳುವುದಾದರೆ, ನೀರಾವರಿ ಭತ್ತದ ಗುಣಮಟ್ಟ ಕೆಲವೇ ವರ್ಷಗಳಲ್ಲಿ ಕುಗ್ಗಿಹೋಗುತ್ತದೆ ಎಂದು ಆಕೆ ಹೇಳುತ್ತಾಳೆ. ಬೇಕಾದರೆ ನೀವು ಈ ಕೊಂಡಿಯಲ್ಲಿ ಸಂದರ್ಶನ ಕೇಳಿ :

http://www.nasonline.org/site/PageServer?pagename=INTERVIEWS_Barbara_Schaal

 •  ಸರಿ, ಎಫ್ ಎ ಓ ವೆಬ್‌ಸೈಟ್ ಏನು ಹೇಳುತ್ತದೆ? (ಈಗಾಗಲೇ ಹಸಿರುಕ್ರಾಂತಿಯ ಭ್ರಾಂತಿಯ ಬಗ್ಗೆ ಅದು ಹೇಳಿದ್ದನ್ನು ಈ ಲೇಖನದ ಆರಂಭದಲ್ಲೇ ಓದಿದ್ದೀರಿ):

Indeed, the perceived profit potential of GMOs has already changed the direction of investment in research and development, in both the public and private sectors, away from systems-based approaches to pest management, and towards a greater reliance on monocultures. The possible long-term environmental costs of such strategies should not be overlooked.

 

 • ಎಫ್ ಎ ಓನ ಕೃಷಿ ವಿಭಾಗದ ಸಹಾಯಕ ಪ್ರಧಾನ ನಿರ್ದೇಶಕ ಲೂಯಿಸ್ ಫ್ರೆಸ್ಕೋ ಬರೆದ ಲೇಖನದ ಒಂದು ಪ್ಯಾರಾ ಇದು. (http://www.fao.org/Ag/Magazine/0111sp.htm) ಕುಲಾಂತರಿ ತಳಿಗಳ ಕಾಲ ಬಂದುಬಿಟ್ಟಿದೆ ಎನ್ನುತ್ತಲೇ ಫ್ರೆಸ್ಕೋ ಅವುಗಳ ಅಪಾಯದ ಬಗ್ಗೆಯೂ ಕರೆಗಂಟೆ ಒತ್ತಿದ್ದಾನೆ. ಕುಲಾಂತರಿ ತಳಿಗಳಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಡೆದ ಎಫ್ ಎ ಓ ನ ತಜ್ಞರ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಇದು:

It was stressed that when GM crops were grown, their benefits and the potential hazards to the  environment needed to be considered within the context of the broader ecosystem. There was a defined need for understanding the environmental effects of GM crops and it was very important that these effects were assessed locally, on a case by case basis.

source: ftp://ftp.fao.org/docrep/fao/field/006/ad690e/ad690e00.pdf

 • ಎಫ್ ಎ ಓ ನ ‘ದಿ ಸ್ಟೇಟ್ ಆಫ್ ಫುಡ್ ಎಂಡ್ ಅಗ್ರಿಕಲ್ಚರ್ ೨೦೦೩-೦೪’ ಪುಸ್ತಕದಲ್ಲಿ ಇರುವ ಇನ್ನೊಂದು ಉಲ್ಲೇಖವನ್ನು ನೋಡಿ:

What effects could genetically modified crops have on the environment?

Agriculture of any type has an impact on the environment. Genetic engineering may accelerate the damaging effects of agriculture, have the same impact as conventional agriculture, or contribute to more sustainable practices.

Growing genetically modified or conventional plants in the field has raised concern for the potential transfer of genes from cultivated species to their wild relatives. However, many food plants are not native to the areas in which they are grown. Locally, they may have no wild relatives to which genes could flow.

source: http://www.greenfacts.org/en/gmo/index.htm

ಹೀಗೆ ಡಾ. ಶಾಂತಾರಾಂ ಉಲ್ಲೇಖಿಸಿದ ಸಂಸ್ಥೆಗಳು ಒಂದೋ ಖಾಸಗಿ ಸಂಸ್ಥೆಗಳ ಪರವಾಗಿವೆ, ಇಲ್ಲವೇ ಕುಲಾಂತರಿ ತಳಿಗಳನ್ನು ಗಂಭೀರ ಅನುಮಾನದಿಂದಲೇ ಕಂಡಿವೆ ಎಂಬುದು ಖಚಿತವಾಗುತ್ತದೆ. ಅದಕ್ಕೇ ನನ್ನದೊಂದು ವಿನಂತಿ : ಸಂಸ್ಥೆಗಳ ಹೆಸರುಗಳನ್ನು ಪುಂಖಾನುಪುಂಖವಾಗಿ ಉದುರಿಸಿ, ಅವೆಲ್ಲವೂ ನಿಮ್ಮ ಪರವಾಗಿಯೇ ಇವೆ ಎಂಬ ಭ್ರಮೆ ಹುಟ್ಟಿಸಿ ಓದುಗರನ್ನು ಮೂರ್ಖರನ್ನು ಮಾಡುವ ಯತ್ನವನ್ನು ಕೈಬಿಡಿ ಡಾ. ಶಾಂತಾರಾಂ, ಬದಲಿಗೆ ದಾಖಲೆಗಳನ್ನು ಒದಗಿಸಿ.

ವಸ್ತುನಿಷ್ಠತೆಯ ಹೆಸರಿನಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿಯನ್ನು ಪ್ರಚಾರ ಮಾಡುತ್ತಿರುವ ಇಂಥ ಜಾಗತಿಕ ಸಂಸ್ಥೆಗಳಿಗೆ ಲೆಕ್ಕವಿಲ್ಲ. ಡಾ. ಶಾಂತಾರಾಂ, ಡಾ. ಸ್ವಾಮಿನಾಥನ್, ಶೇತ್ಕರಿ ಸಂಘಟನೆ, ಇಂಥ ನೂರಾರು ವ್ಯಕ್ತಿ – ಸಂಘಗಳು ಬಹುರಾಷ್ಟ್ರೀಯ ಸಂಸ್ಥೆಗಳಿಂದಲೇ ಪ್ರೇರಿತ; ಬೆಂಬಲಿತ. ಇಂಥ ವ್ಯಕ್ತಿಗಳನ್ನು ಮಿಥ್ ಮೇಕರ್ಸ್ (ಭ್ರಮಾಜನಕರು) ಎಂದು ಕರೆಯುತ್ತಾರೆ. ಈ ಭ್ರಮೆ ಹುಟ್ಟಿಸುವ  ‘ಬಹುರಾಷ್ಟ್ರೀಯ ಸಂಸ್ಥೆಗಳ ದಲ್ಲಾಳಿ’ಗಳ ಜಾತಕಗಳನ್ನು http://www.gmwatch.org/myth-makers ಈ ವೆಬ್‌ಸೈಟಿನಲ್ಲಿ ಪಟ್ಟಿ ಮಾಡಿದ್ದಾರೆ. ಇಲ್ಲಿಯೂ ಡಾ. ಶಾಂತಾರಾಂ ಬರೆದ ಪ್ರತಿಕ್ರಿಯೆಗಳು, ಅವುಗಳಿಗೆ ಉತ್ತರಗಳು ಇವೆ. ಇದರಿಂದ ಒಂದಂತೂ ಖಾತ್ರಿಯಾಗುತ್ತದೆ: ಡಾ. ಶಾಂತಾರಾಂ ಸಿರಿವಂತ ಕಂಪೆನಿಗಳ ‘ಉಗ್ರ ವಕ್ತಾರರು’.

ಉದಾಹರಣೆಗೆ ಇಂಟರ್‌ನ್ಯಾಶನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಂಬ ಸಂಘಟನೆಯನ್ನೇ ತೆಗೆದುಕೊಳ್ಳಿ. ಈ ಸಂಸ್ಥೆಯೂ ಜಗತ್ತಿನ ಎಂಬತ್ತು ಕೋಟಿ ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಘನ ಉದ್ದೇಶ ಹೊಂದಿದೆ. ಈ ಸಂಸ್ಥೆಯೂ ಬಹುರಾಷ್ಟ್ರೀಯ ಮಾರುಕಟ್ಟೆ ಸಂಸ್ಥೆಗಳ ಇನ್ನೊಂದು ಅವತಾರ. ಈ ಸಂಸ್ಥೆಯ ಪ್ರೇರಕ ಸಂಸ್ಥೆ? ಕನ್ಸಲ್ಟೇಟಿವ್ ಗ್ರೂಪ್ ಆನ್ ಇಂಟರ್‌ನ್ಯಾಶನಲ್ ಅಗ್ರಿಕಲ್ಚರಲ್ ರಿಸರ್ಚ್. ಈ ಸಂಸ್ಥೆಯೇ ಫಿಲಿಪೈನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯನ್ನೂ ನಡೆಸುತ್ತಿದೆ. ಈ ಎಲ್ಲ ಸಂಸ್ಥೆಗಳು ಹೇಗೆ ಪರಸ್ಪರ ರಾಜಕೀಯವಾಗಿ ಕೊಂಡಿ ಹೊಂದಿವೆ ಎಂಬುದನ್ನು ಪೊಲಿಟಿಕಲ್ ಫ್ರೆಂಡ್‌ಸ್ಟರ್ ಎಂಬ ಈ ವೆಬ್‌ಸೈಟಿನಲ್ಲಿ ತಿಳಿಯಬಹುದು. ಮಾನ್ಸಾಂಟೋ, ಡಾ.ಶಾಂತಾರಾಂ ಕೆಲಸ ಮಾಡುತ್ತಿದ್ದ ಸಿಂಜೆಂಟಾ, ವಿಶ್ವಬ್ಯಾಂಕ್, ಫೋರ್ಡ್ ಫೌಂಡೇಶನ್, ರಾಕ್‌ಫೆಲರ್ ಫೌಂಡೇಶನ್ – ಹೀಗೆ ಯಾವ್ಯಾವ ಸಂಸ್ಥೆಗಳು, ವ್ಯಕ್ತಿಗಳು ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ಒಮ್ಮೆ ಕಂಡುಕೊಂಡರೆ ಸಾಕು, ಇವುಗಳ ಸಂಘಟಿತ ಹುನ್ನಾರ ಬಯಲಾಗುತ್ತದೆ. ಎಲ್ಲ ಉದ್ದೇಶಗಳೂ ನೋಡುವುದಕ್ಕೆ ಬಣ್ಣ ಹಚ್ಚಿಕೊಂಡೇ ಇರುತ್ತವೆ. ಕೊನೆಗೆ ಎಲ್ಲವೂ ಸಿರಿವಂತರ, ಉಳ್ಳ ದೇಶಗಳ ಪಾಲಾಗುವುದು ಖಚಿತ. ಮಾನ್ಸಾಂಟೋದಂಥ ಸಂಸ್ಥೆಯ ಜೊತೆಗೆ ಬಿಲ್‌ಗೇಟ್ಸ್ ಪ್ರತಿಷ್ಠಾನವೂ ಆಫ್ರಿಕಾದಲ್ಲಿ ಎರಡನೇ ಹಸಿರು ಕ್ರಾಂತಿಗೆ ಕೈಜೋಡಿಸಿರುವುದು ಯಾರಿಗೆ ಗೊತ್ತಿಲ್ಲ?

೬೦ರ ದಶಕದಲ್ಲಿ ಭಾರತದಲ್ಲಿ ‘ಹಸಿರು ಕ್ರಾಂತಿ’ ಎಂಬ ಭ್ರಾಂತಿಯನ್ನು ತಂದಿಟ್ಟ ನಾರ್ಮನ್ ಬೋರ್ಲಾಗ್ ಚಿಂತನೆಯ ಕುಲಾಂತರಿ ಜೀವಿಗಳೇ ಇಂದಿನ ಜಿ ಎಂ ಸಂಸ್ಥೆಗಳ ಪ್ರಚಾರಕರು. ಅಂದು ಹಸಿರುಕ್ರಾಂತಿಯ ಹೆಸರಿನಲ್ಲಿ ನಡೆದಿದ್ದೇನು? ಗೋಧಿಯಲ್ಲಿ ಸ್ವಾವಲಂಬನೆ. ಇಂದು? ಭಾರತಕ್ಕೆ ಆಸ್ಟ್ರೇಲಿಯಾದ ಗೋಧಿ ಆಮದಾಗುತ್ತ ವರ್ಷಗಳೇ ಕಳೆದವು. ಪಂಜಾಬಿನ ರೈತರು ಕ್ಯಾನ್ಸರಿಗೆ ಬಲಿಯಾದರು. ಬೋರ್ಲಾಗ್ ಸೂತ್ರಕ್ಕೆ ಭಾರತವೇ ಬೋರಲಾಯಿತು ಎನ್ನುವುದು ಎಷ್ಟು ಜನರಿಗೆ ಗೊತ್ತು? ಇಂಗ್ಲೆಂಡಿನ ರಾಜಕುವ ಚಾರ್ಲ್ಸ್‌ನಿಂದ ಹಿಡಿದು ವಿಶ್ವದ ಹಲವು ಗಣ್ಯರು ಮೊದಲ ಮತ್ತು ಈಗ ಕುಲಾಂತರಿಗಳ ಮೂಲಕ ನಡೆಯುತ್ತಿರುವ ಎರಡನೇ ಹಸಿರುಕ್ರಾಂತಿಯನ್ನು ಸಾರಾಸಗಟಾಗಿ ವಿರೋಧಿಸಲು ಇದೇ ಕಾರಣ.

ಅದಿರಲಿ, ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’  ಎಂದು ಯಾರು ಹೇಳಿರಬಹುದು ಎಂದು ಊಹಿಸುತ್ತ ಮುಂದೆ ಓದಿ: 

‘ಮೊದಲೇನೋ ಈ ಕ್ರಾಂತಿಯು ಭಾರೀ ಯಶ ಸಾಧಿಸಿದಂತೆ ಕಂಡಿತು. ಜನಸಂಖ್ಯೆ ಬೆಳೆದಂತೆ ಮತ್ತು ಆಹಾರದ ಬೇಡಿಕೆ ಹೆಚ್ಚಿದಂತೆ ಆಹಾರದ ಬೆಲೆ ಇಳಿಯಲಿಲ್ಲ. ೯೦ರ ದಶಕದಲ್ಲಂತೂ ಈ ಹಸಿರು ಕ್ರಾಂತಿಗೆ ನಾವೆಂಥ ದುಬಾರಿ ಬೆಲೆ ತೆತ್ತಿದ್ದೇವೆ ಎಂಬುದು ಅರಿವಾಯಿತು.

‘ನಮ್ಮ ಕೃಷಿ ಜೀವವೈವಿಧ್ಯದ ಬಹುಭಾಗವನ್ನು ನಾವು ಕಳೆದುಕೊಂಡೆವು. ರೈತರು ಹೊಸ ಹೊಸ ತಳಿಗಳನ್ನು ಬಳಸಿದ ಹಾಗೆಯೇ ಹಲವಾರು ಸಾಂಪ್ರದಾಯಿಕ, ಸ್ಥಳೀಯ ತಳಿಗಳು ಅಲಕ್ಷಿಸಿದರು; ಅವೆಲ್ಲವೂ ವಿನಾಶವಾದವು. ಹಲವು ದೇಶಗಳಲ್ಲಿ ಕೀಟನಾಶಕಗಳ ಅತಿ ಬಳಕೆಯಿಂದಾಗಿ ತೀವ್ರ ಪ್ರಮಾಣದ ಪಾರಿಸರಿಕ ದುಷ್ಪರಿಣಾಮಗಳಾದವು. ಸಾರ್ವಜನಿಕ ಆರೋಗ್ಯ  ಹದಗೆಟ್ಟಿತು. ಹಸಿರು ಕ್ರಾಂತಿಯು ಭಾರೀ ಪ್ರಮಾಣದ ನೀರಾವರಿಯನ್ನೂ ಬೇಡಿತು. ಇದರಿಂದಾಗಿ ಜಗತ್ತಿನ ಜಲಸಂಪನ್ಮೂಲದ ಮೇಲಿನ ಒತ್ತಡ ಹೆಚ್ಚಾಯಿತು.

‘ಇಷ್ಟೇ ಅಲ್ಲ, ಹಸಿರುಕ್ರಾಂತಿಯ ಅತ್ಯಧಿಕ ಉತ್ಪಾದನೆಯ ನಡುವೆಯೂ ಹಸಿವು ಮಾತ್ರ ಇನ್ನೂ ಹಾಗೆಯೇ ಇದೆ. ಹಸಿರು ಕ್ರಾಂತಿಯ ಲಾಭವು ರೈತನಿಗೆ ಸಿಗಬೇಕಾದರೆ ಆತನಿಗೆ ಭೂಮಿ ಬೇಕು; ನೀರೂ ಬೇಕು. ಇವೆರಡೂ ಇರದ ರೈತರು ಹಸಿರುಕ್ರಾಂತಿಯಿಂದ ದೂರವೇ ಉಳಿದರು. ನಿಜ ಹೇಳಬೇಕೆಂದರೆ ಅವರು ಮತ್ತಷ್ಟು ಬಡವರಾದರು.’

ನಮ್ಮ ಪತ್ರಕರ್ತರು ಭಾವಿಸಿದಂತೆ ಯಾವುದೋ ಪರಿಸರವಾದಿಯೇ ಇದನ್ನೆಲ್ಲ ಗಳಹಿರಬೇಕೆಂದು ನೀವು ಸಹಜವಾಗೇ ಊಹಿಸುತ್ತೀರಿ. ನಿಜ ಬೇರೆ. ಈ ಮಾತುಗಳನ್ನು ಉಸುರಿದ್ದು ವಿಶ್ವಸಂಸ್ಥೆಯ ಸಂಸ್ಥೆಯಾದ ಫುಡ್ ಎಂಡ್ ಅಗ್ರಿಕಲ್ಚರಲ್ ಆರ್ಗನೈಸೇಶನ್ (ಎಫ್ ಎ ಓ) ನಿಮಗೆ ಖಚಿತವಾಗಬೇಕೆಂದರೆ  ಇಲ್ಲಿಗೆ ಭೇಟಿ ನೀಡಿ.

ರಂಗಕರ್ಮಿ ಮತ್ತು ಕೈಮಗ್ಗ ಉದ್ಯಮಕ್ಕೆ ಜೀವ ತಂದ ಚಿಂತಕ ಪ್ರಸನ್ನ ಇತ್ತೀಚೆಗೆ ‘ಯಂತ್ರಗಳನ್ನು ಕಳಚೋಣ ಬನ್ನಿ’ ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ:

ಹಸಿರುಕ್ರಾಂತಿಯು ಹೆಸರಿನಲ್ಲಿ ಹಸಿರಾದರೂ ತನ್ನ ದಎಸೆಯಲ್ಲಿ ಸಂಪೂರ್ಣ ಯಂತ್ರಮಯವಾಗಿದೆ. ಈವರೆಗೆ ರೈತ ಕಾಣದಿದ್ದ ಹಣದ ಪತ್ತಡ, ಸಾಲದ ಒತ್ತಡ, ತಂತ್ರಜ್ಞಾನದ ಒತ್ತಡ, ಪೇಟೆಂಟುಗಳ ಒತ್ತಡ, ಬೀಜಗಳ ಮೇಲಿನ ಏಕಸ್ವಾಮ್ಯ… ಹೀಗೆ ನೂರು  ರೀತಿಯ ಒತ್ತಡಗಳನ್ನು, ಗ್ರಾಮೀಣ ಪರಿಸರದೊಳಗೆ ನುಗ್ಗಿಸಿದೆ ಹಸಿರು ಕ್ರಾಂತಿ. ರೈತನ ಮೇಲೆ ಸಾಲದ ಹೊರೆ ಹೆಚ್ಚಾದದ್ದು, ಬೆಲೆಗಳು ಕುಸಿದದ್ದು, ಕಂಗಾಲಾದ ರೈತ ಆತ್ಮಹತ್ಯೆಯ ದಾರಿ ಹಿಡಿದದ್ದು ಹಸಿರುಕ್ರಾಂತಿಯ ಮಹತ್ವದ ಕೊಡುಗೆಯಾಗಿದೆ’.

ಪ್ರಸನ್ನರಂಥ ಒಬ್ಬ ಗ್ರಾಮವಾಸಿ ಚಿಂತಕರಿಗೆ ಅರಿವಾದ ಈ ಸತ್ಯ ಸದಾ ಹಾರುತ್ತಲೇ ಇರುವ ವಿಜ್ಞಾನಿ ಶಾಂತಾರಾಂಗೆ ಎಟುಕಿಲ್ಲ. ಬಯಲುಸೀಮೆಯಲ್ಲಿ ಸದಾ ನೀರು ಬೇಡುವ ಕಬ್ಬನ್ನು ಬೆಳೆಸುವ ಹುನ್ನಾರವೂ ಹಸಿರು ಕ್ರಾಂತಿಯದೇ ಎಂಬ ಪ್ರಸನ್ನರ ಸಾಮಾನ್ಯ ತರ್ಕವೂ ಶಾಂತಾರಾಂಗೆ ಹೊಳೆಯುವುದಿಲ್ಲ.

‘ಇರುವುದೊಂದೇ ಭೂಮಿ’ ಪುಸ್ತಕದಲ್ಲಿ ಶ್ರೀ ನಾಗೇಶ ಹೆಗಡೆ ಬರೆದಿದ್ದಾರೆ:

ಭಾರತದ ‘ಹೆಮ್ಮೆಯ’ ಹಸಿರುಕ್ರಾಂತಿ ಕೂಡ ವಿರೋಧಾಭಾಸಗಳಿಂದ ಕೂಡಿದೆ. ಕೃಷಿತಂತ್ರದ ಅಭಿವೃದ್ಧಿ ಆಯಿತೇ ವಿನಃ ಕೃಷಿಕನ ಅಭಿವೃದ್ಧಿ ಆಗಲಿಲ್ಲ. ಆಧುನಿಕ ಬೇಸಾಯ ತಂತ್ರಗಳಾದ ಹೈಬ್ರಿಡ್ ತಳಿ, ಭಾರೀ ನೀರಾವರಿ, ರಸಗೊಬ್ಬರ, ಕೀಟನಾಶಕ, ಟ್ರಾಕ್ಟರ್ – ಟಿಲ್ಲರ್ – ಪಂಪ್‌ಸೆಟ್‌ಗಳ ಬಳಕೆ ಹೆಚ್ಚಾಯಿತೇ ವಿನಃ ಸಾಮಾಜಿಕ ಸಂಬಂಧಗಳ ಸುಧಾರಣೆಯಾಗಲೀ, ಬಡತನ – ದೊರೆತನಗಳ ಮಧ್ಯೆಯ ಅಂತರ ನಿವಾರಣೆಯಾಗಲೀ ಆಗಲಿಲ್ಲ. ಅರಣ್ಯದ ಒತ್ತುವರಿ ಮಾಡಿ ಕೃಷಿಭೂಮಿಯ ಭಾರೀ ವಿಸ್ತರಣೆ ಆಯಿತು. ಧನಿಕ ಕೃಷಿಕರ ಕೈ ಬಲವಾಯಿತು. ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಬವಣೆ ಹೆಚ್ಚಾಯಿತು. ಅತಿಚಿಕ್ಕ ಬೇಸಾಯಗಾರರಂತೂ ಜಮೀನಿಗೆ ವಿದಾಯ ಹೇಳಿ, ‘ಕೂಲಿಗಾಗಿ ಕಾಳು’ ಯೋಜನೆ ಹುಡುಕುತ್ತ ಕೂಳಿಗಾಗಿ ಕಂಡವರ ಕಾಲು ಹಇಡಿಯುತ್ತಲೋ ಗುಳೆ ಹೊರಬೇಕಾಯಿತು. ಹಸಿರುಕ್ರಾಂತಿಯ ತುತ್ತೂರಿಯ ಗದ್ದಲದ ಮಧ್ಯೆ ಹಸಿವಿನಿಂದ ನರಳುವವರ ಸದ್ದಡಗಿದೆ.

ಹೊಸ ತಳಿಗಳ, ಆಗ್ರಿ ಬ್ಯಸಿನೆಸ್‌ನ ಕಬಂಧ ಬಾಹುಗಳ  ಅವಾಂತರದ ಬಗ್ಗೆ ನಾಗೇಶ ಹೆಗಡೆ ಹೀಗೆನ್ನುತ್ತಾರೆ: ಒಂದು ಕಐಯಲ್ಲಿ ಶ್ರಮಿಕರನ್ನು ಕುಣಿಸುತ್ತ, ಇನ್ನೊಂದು ಕೈಯಲ್ಲಿ ಬಳಕೆದಾರರನ್ನು ರಮಿಸುತ್ತ ಬಲಿಷ್ಠವಾಗಿರುವ, ರೈತನ ಸ್ವಾತಂತ್ರ್ಯವನ್ನೆಲ್ಲ ಹರಣ ಮಾಡುವ, ನಷ್ಟವಾದರೆ ಅದನ್ನು ರೈತರ ತಲೆಗೆ ಕಟ್ಟಿ, ಲಾಭವಾದರೆ ಸಂಶೋಧನೆಯ ಫಲ  ಎಂದು ಕುಣಿದಾಡುವ ಬಗ್ಗೆ ಅವರು ಬರೆದಿದ್ದನ್ನೆಲ್ಲ ಒಮ್ಮೆ ಓದಿದರೆ, ಸಂವೇದನಾಶೀಲರ ಮೈ ನಡುಗುತ್ತದೆ.

ಇಂಥ ಹಸಿರು ಕ್ರಾಂತಿಯ ಅಪರಾಧಿಗಳ ತಳಿಯಿಂದಲೇ ಈಗ ಕುಲಾಂತರಿ ಕ್ರಾಂತಿ ಎಂಬ ‘ಜಿಎಂ ಬೀಜಮಂತ್ರ’ ಆರಂಭವಾಗಿದೆ. ಈ ಕುಲಕಂಟಕ ಕ್ರಾಂತಿಯ ನೊಗವನ್ನು ಭಾರತ, ಆಫ್ರಿಕಾದ ರೈತರ ಮೇಲೆ ಹೊರಿಸಲು ಸಕಲ ಸಿದ್ಧತೆಗಳು ನಡೆದಿವೆ. ಗ್ರೀನ್ ರೆವೊಲುಶನ್‌ನಿಂದ ಜೀನ್ ರೆವೊಲುಶನ್‌ವರೆಗೆ ಭಾರತದ ರೈತರ ಮಗ್ಗಲು ಮುರಿಯುವ ಈ ಯತ್ನಗಳಿಗೆ ಬಿಟಿ ಬದನೆಕಾಯಿ, ಬಿಟಿ ಹತ್ತಿಯ ಪ್ರವೇಶ ರುದ್ರನಾಟಕದ ಮೊದಲ ಅಂಕ ಮಾತ್ರ.

ಡಾ. ಶಾಂತಾರಾಂ ಹೇಳುವ ಪ್ರಕಾರ ನಮ್ಮ ದೇಶದ ಜೀವವೈವಿಧ್ಯದಲ್ಲಿ ಏನೂ ಸುಖವಿಲ್ಲ. ನಮ್ಮ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರೇ ಹೆಚ್ಚು. ಆದ್ದರಿಂದ ಮಾನೋಕಲ್ಚರ್ ಸಾಧ್ಯವಾಗುವುದಿಲ್ಲ. ಹೌದೆ? ಮಾನೋಕಲ್ಚರ್ ವಿಕೃತಿಗೆ ದೊಡ್ಡ ಹಿಡುವಳಿಯೇ ಬೇಕೆಂದಿಲ್ಲ. ಒಂದೇ ತಳಿಯನ್ನು ಬೆಳೆದರೆ ಅದೇ ಮಾನೋಕಲ್ಚರ್. ಈ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಹೊಂದಲು ಶ್ರೀ ಶಿವಾನಂದ ಕಳವೆ ಬರೆದ ‘ಮಾನೋಕಲ್ಚರ್ ಮಹಾಯಾನ’ ಎಂಬ ಪುಸ್ತಕವನ್ನು ಓದುವುದು ಒಳಿತು. ಜೀವವೈವಿಧ್ಯವೇ ಬದುಕಿನ ಉಸಿರು; ಕೃಷಿಯಲ್ಲಿ ಇರುವ ಜೀವವೈವಿಧ್ಯವನ್ನು ನಾಶಮಾಡುವುದೇ ಬಹುರಾಷ್ಟ್ರೀಯ ಸಂಸ್ಥೆಗಳ ಹುನ್ನಾರ.
ದೊಡ್ಡ ಬಂದರು ಮತ್ತು ವಿದ್ಯುತ್ ಸ್ಥಾವರದ ಇಕ್ಕಳದಲ್ಲಿ ಸಿಲುಕುತ್ತಿರುವ ತದಡಿಯ ತಟದ ಮುಖಜಭೂಮಿಯಲ್ಲಿ ‘ಕಗ್ಗ’ ಎಂಬ ಭತ್ತ ಬೆಳೆಯುತ್ತಿದ್ದರು. ಚಿಪ್ಪಿನ ಉದ್ಯಮದಿಂದಾಗಿ ‘ಕಗ್ಗ’ ಇನ್ನಿಲ್ಲವಾಗಿದೆ. ಈ ಒಂದೇ ತಳಿಯ ವೈದ್ಯಕೀಯ ಗುಣಗಳನ್ನಾದರೂ ಡಾ. ಶಾಂತಾರಾಂ ಅಧ್ಯಯನ ಮಾಡಿದ್ದರೆ ಸಾಕಾಗಿತ್ತು; ಅವರ ‘ವೈವಿಧ್ಯವಿರೋಧಿ’ ಮಾನಸಿಕತೆ ದೂರಾಗುತ್ತಿತ್ತು. ಅಥವಾ ಮೈಸೂರಿನ ಹತ್ತಿರದಲ್ಲಿರುವ ಎ ಪಿ ಚಂದ್ರಶೇಖರ ಅವರ ತೋಟಕ್ಕೆ ಹೋಗಿಯಾದರೂ ಜೀವವೈವಿಧ್ಯ ಎಂಥ ಸಮಷ್ಟಿಪ್ರಜ್ಞೆಯ ವಿಚಾರ ಎಂಬ ಜ್ಞಾನೋದಯವಾಗುತ್ತಿತ್ತು.

ರೈತರು ಹಳೆ ತಳಿಗಳನ್ನು ಕೈಬಿಡಲು ಕಾರಣ ಅವು ಕಡಿಮೆ ಇಳುವರಿಯವು ಮತ್ತು ಲಾಭದಾಯಕವಲ್ಲದ್ದು ಎಂದು ಡಾ. ಶಾಂತಾರಾಂ ಸರಳೀಕರಿಸಿದ್ದಾರೆ. ಹಳೆಯ ತಳಿಗಳು ಹೆಚ್ಚು ನೀರು ಬೇಡುವುದಿಲ್ಲ; ಕೀಟನಾಶಕ, ರಸಗೊಬ್ಬರ ಕೇಳುವುದಿಲ್ಲ. ಮೊದಲೇ ಉದಾಹರಿಸಿದ ‘ಕಗ್ಗ’ದ ತಳಿ ಬೆಳೆಯುವುದೇ ಉಪ್ಪಿನೀರಿನಲ್ಲಿ ಅಂದಮೇಲೆ ಅದರ ಶಕ್ತಿಯನ್ನು ಊಹಿಸಿ. ಆದರೆ ಕುಲಾಂತರಿ ತಳಿಗಳಿಗೆ ಹಳೆ ತಳಿಗಳಿಗಿಂತ ಮೂರುಪಟ್ಟು ಹೆಚ್ಚು ನೀರು ಬೇಕು. ದಂಡಿಯಾಗಿ ರಸಗೊಬ್ಬರ ಹಾಕಬೇಕು; ಕೀಟನಾಶಕಗಳನ್ನು ಎಗ್ಗಿಲ್ಲದೆ ಸಿಂಪಡಿಸಬೇಕು. ಮೂರುಪಟ್ಟು ಸಂಪನ್ಮೂಲ, ಹಣ ಬೇಡುವ ಗೊಬ್ಬರ, ಕೀಟನಾಶಕ, ಇವನ್ನೆಲ್ಲ ಬಳಸಿ ಅಧಿಕ ಇಳುವರಿ ಪಡೆಯುವ ಹೊಸ ತಳಿಗಳ ನಿರ್ಲಜ್ಜ ಬೆಳೆಗಳಿಂದ ನಷ್ಟವೇ ಹೆಚ್ಚು.

ಕೀಟನಾಶಕಗಳಿಂದ ಕೀಟಬಾಧೆ ಬರುವುದಿಲ್ಲ; ಕೀಟಬಾಧೆ ಇಲ್ಲದ ತಳಿಗಳಿಂದ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬ ವಾದವೇ ನಿಸರ್ಗವಿರೋಧಿ. ಎರಡನೇ ಮಹಾಯುದ್ಧದ ನಂತರ ಸರ್ರನೆ ಏರಿದ ಕೀಟನಾಶಕಗಳ ಸಂಖ್ಯೆ ಈಗ ಲಕ್ಷ ದಾಟಿದೆ. ದಿನವೂ ೫೦೦ ಜನ ಕೀಟನಾಶಕಗಳಿಗೆ ಬಲಿಯಾಗುತ್ತಿದ್ದಾರೆ ; ೮೦೦೦ ಜನ ವಿಷದ ಪರಿಣಾಮಗಳಿಗೆ ರೋಗಿಗಳಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಡರ್ಟಿ ಡಜನ್ ಎಂದು ಕುಖ್ಯಾತವಾದ ವಿಷವನ್ನು ನಾವು ಇನ್ನೂ ಬಳಸುತ್ತಲೇ ಇದ್ದೇವೆ. ವೈವಿಧ್ಯಮಯ ಬೆಳೆ ಬೆಳೆಯದಿರುವುದು, ನೆಲಕ್ಕೆ ತಕ್ಕ ಕೃಷಿ ಮಾಡದಿರುವುದು, ಮಿತ್ರ ಕೀಟಗಳನ್ನು ಅರಿಯದಿರುವುದು, ಕನಿಷ್ಠ ವಿಷದ ಪರ್ಯಾಯ ಮಾರ್ಗವನ್ನು ಮೊದಲು ಪ್ರಯೋಗಿಸದಿರುವುದು, – ಇವೆಲ್ಲವೂ ಈ ವೈಫಲ್ಯಕ್ಕೆ ಕಾರಣವಾಗಿದೆಯೇ ಹೊರತು ಹಳೆಯ ತಳಿಗಳಲ್ಲಿ ಯಾವ ತಪ್ಪೂ ಇಲ್ಲ.

ಗುಣಮಟ್ಟದ ಬೀಜದ ಬದಲಿಗೆ ಕೀಟನಿರೋಧಕ ಬೀಜಗಳನ್ನೇ ಮಾರುತ್ತಿದ್ದೇವೆ ಎಂದು ಕೆಲವೇ ಬಹುರಾಷ್ಟ್ರೀಯ ಸಂಸ್ಥೆಗಳು ಡಂಗುರ ಹೊಡೆದ ಮಾತ್ರಕ್ಕೆ ಈ ವಸುಂಧರೆಯ ವೈವಿಧ್ಯತೆಯನ್ನು ಧಿಕ್ಕರಿಸಲು ಬರುವುದಿಲ್ಲ.

ಸಾವಯವ ಕೃಷಿ ಏನಿದ್ದರೂ ಅಡುಗೆಮನೆ ಕೈತೋಟ ಎಂದು ಟೀಕಿಸಿರುವ ಶಾಂತಾರಾಂ ಬಹುಶಃ ಅಮೆರಿಕಾ ಮತ್ತು ಯೂರೋಪಿನ ಅಂಕಿ ಆಂಶಗಳನ್ನೂ ನೋಡಿಲ್ಲ; ಯೂರೋಪಿನ ಶೇ. ೪ರಷ್ಟು ಉಳುಮೆ ಪ್ರದೇಶ ಸಾವಯವವಾಗಿದೆ. ಅಮೆರಿಕಾದಲ್ಲೂ ಸಾವಯವ ಕೃಷಿ ಹೆಚ್ಚುತ್ತಿದೆ.

ಭಾರತದ ರೈತರು ಪರಂಪರೆಯ ಪಾಲಕರು. ಪ್ರಜಾತಂತ್ರದಲ್ಲಿ ಏಕಸ್ವಾಮ್ಯಕ್ಕೆ ಒಳಗಾಗಿದ್ದ ರೇಡಿಯೋ ಕೇಳಿ ಕೇಳಿ ಡಿಡಿಟಿ ಎಂಡೋಸಲ್ಫಾನ್, ಇತ್ಯಾದಿ ಸಾವಿರಾರು ವಿಷಗಳ ಬಳಕೆ ಶುರು ಮಾಡಿದರು. ಈಗ ಅದೇ ಆಕಾಶವಾಣಿಯಲ್ಲಿ ಸಾವಯವ ಕೃಷಿ ಎಂದ ಪದಪುಂಜವನ್ನು ಕೇಳಿ ಅದಕ್ಕೂ ತಲೆದೂಗುತ್ತಿದ್ದಾರೆ. ಈಗ ಡಾ. ಶಾಂತಾರಾಂನಂಥ ಪಂಡಿತೋತ್ತಮರು ಸರ್ಕಾರಿ ಸಾಧನಗಳ ಮೂಲಕ ಕುಲಾಂತರಿ ತಳಿಗಳ ಬಗ್ಗೆ ಪ್ರಚಾರ ಮಾಡಿದರೆ ಅದನ್ನೂ ಅನುಸರಿಸುತ್ತಾರೆ.  ಈ ಹಸಿರುಕ್ರಾಂತಿ ಪಂಡಿತರ ಮಾತು ಕೇಳಿಯೇ ಇವತ್ತು ರಸಗೊಬ್ಬರಕ್ಕಾಗಿ ರೈತರು ಹಪಹಪಿಸಬೇಕಿದೆ. ಗೋಲಿಬಾರಿಗೆ ಮೈಯೊಡ್ಡಬೇಕಿದೆ. ಕಳಪೆ ಕೀಟನಾಶಕ ಕುಡಿದು ಸಾಯುವುದಕ್ಕೆ ಹೆಣಗಬೇಕಿದೆ. ಸಾಲಕ್ಕಾಗಿ ಬ್ಯಾಂಕಿಗೆ ಅಲೆಯಬೇಕಿದೆ. ಮನ್ನಾಕ್ಕಾಗಿ ರಾಜಕಾರಣಿಗಳು ನೀಡಿದ ಭರವಸೆಯನ್ನು ನೆಕ್ಕಬೇಕಿದೆ. ಪಂಪ್‌ಸೆಟ್‌ಗೆ ಸಬ್ಸಿಡಿ ಬೇಕು ಎಂದು ಹಟ ಹಿಡಿಯಬೇಕಿದೆ. ಕೃಷಿರಂಗಕ್ಕೆ ಖಾಸಗೀಕರಣದ, ಮಾರುಕಟ್ಟೆ ಪ್ರಚೋದಿತ ಶನಿಗಳು ವಕ್ಕರಿಸದಿದ್ದರೆ ಬಹುಶಃ ನಮ್ಮ ರೈತ ನಿಜಕ್ಕೂ ಬೇಕಾದ್ದು ಬೆಳಕೊಂಡು, ಕೀಟಗಳ ಜೊತೆಗೇ ನೆಮ್ಮದಿಯ ಬದುಕು ಸಾಗಿಸುತ್ತಿದ್ದ. ನಮ್ಮ ದೇಶದಲ್ಲಿ ಕೀಟಬಾಧೆ ಎಂಬ ಹೆಸರು ಹುಟ್ಟಿದ್ದೇ ಕೀಟನಾಶಕಗಳು ಬಂದಮೇಲೆ!

ಆದ್ದರಿಂದ ಬಿಟಿ ಬದನೆಕಾಯಿ ಮೂಲಕ, ಹತ್ತಿಯ ಮೂಲಕ ರೈತರ ಮೇಲೆ ಸವಾರಿ ಮಾಡಲು ಬರುತ್ತಿರುವ ಡಾ.ಶಾಂತಾರಾಂನಂಥವರನ್ನು ಎದುರಿಸಲೇಬೇಕು; ತಡೆಯಲೇಬೇಕು. ಹಸಿವಿಂಗಿಸುವ ಹೆಸರಿನಲ್ಲಿ ಅತ್ತ ನಿಶ್ಶಕ್ತ ತಳಿ, ಇತ್ತ ಪ್ರಬಲ ವಿಷ ಹಿಡಿದು ನರ್ತಿಸುತ್ತಿರುವ ಖಾಸಗಿ ಸಂಸ್ಥೆಗಳ ಹೂಟವನ್ನು ಮಣಿಸಲೇಬೇಕು.

(ವಿಜಯ ಕರ್ನಾಟಕದಲ್ಲಿ ಶ್ರೀ ಪ್ರತಾಪಸಿಂಹರು ನಾರ್ಮನ್ ಬೋರ್ಲಾಗ್ ಬಗ್ಗೆ ಬರೆದ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಹಸಿರು ಕ್ರಾಂತಿ ತಂದೊಡ್ಡಿದ ಅಪಾಯಗಳ ಬಗ್ಗೆ ನಾನು ಬರೆದ ಸರಣಿ ಲೇಖನಗಳನ್ನು www.mitramaadhyama.co.in ಇಲ್ಲಿ ಓದಬಹುದು)

2 Comments

 1. mahen

  it is a very good educative article. it should publish in same vk.

 2. Hari Prasad

  ವಿಜಯ ಕರ್ನಾಟಕದಲ್ಲಿ ಬಿ.ಟಿ. ಬದನೆ ಲೇಖನಕ್ಕೆ ಪ್ರತಿಕ್ರಿಯೆಗಳನ್ನೇ ಪ್ರಕಟಿಸುತ್ತಿಲ್ಲ..! ಏಕೆ ಹೀಗೆ?
  ಕೇವಲ ವಿಮಾನಗಳಲ್ಲಿ ಹಾರಾಡುತ್ತ, ಸಾವಯವ ಕೃಷಿ ಹೀಗಳೆಯುತ್ತ, ಬಾಯಿಗೆ ಬಂದಿದ್ದನ್ನು- ತಾನೇ ಪ್ರಶ್ನೆಯನ್ನೂ ಅದಕ್ಕೆ ಉತ್ತರವನ್ನೂ ಬರೆದುಕೊಂಡ ವಿ.ಕ,ದಲ್ಲಿ ಅರ್ಧ ಪುಟದಷ್ಟು ಜಾಗ ಪಡೆಯಲು ಶಾಂತಾರಾಮ ಏನೇನು ಕರಾಮತ್ತು ಮಾಡಿದ್ದಾರೋ?!
  ಅದಿರಲಿ; ವಿ.ಕ. ಬರೀ ಒಂದೇ ಕಡೆಯ ಲೇಖನ ಪ್ರಕಟಿಸಿದರೆ ಹೇಗೆ? ಇನ್ನೊಂದು ಮುಖದ ಅನಾವರಣ ಮಾಡುವುದು ಯಾವಾಗ?
  – ಹರಿಪ್ರಸಾದ, ಬೆಂಗಳೂರು

Leave a Reply

Theme by Anders Norén