ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?

ಹಸಿರುಕ್ರಾಂತಿಯ ಜಾಗತಿಕ ಕೇಂದ್ರವಾದ ಪಂಜಾಬ್ ಈಗ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ ಈಗ ಪಂಜಾಬಿನ  ಸಾಲದ ಮೊತ್ತ ೬೭,೭೨೧ ರೂ. ಈ ಋಣವನ್ನು ತೀರಿಸುವ ಬಗ್ಗೆ ಉಂಟಾದ ರಾಜಕೀಯದ ಫಲವಾಗಿ ಪಂಜಾಬಿನ ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಸಂಪುಟದಿಂದ ವಜಾ ಆಗಿದ್ದಾರೆ. ಅವರನ್ನು ಶಿರೋಮಣಿ ಅಕಾಲಿದಳದಿಂದ ಅಮಾನತು ಮಾಡಲಾಗಿದೆ. ಅಕ್ಟೋಬರ್ ೧೫ರ ರಾತ್ರಿ ಮನ್‌ಪ್ರೀತ್ ಬಾದಲ್ ಕಾರ್ಯ ನಿರ್ವಹಿಸುತ್ತಿದ್ದ ಬಹುಭದ್ರತೆಯ ಐದನೇ ಮಹಡಿ ಕಚೇರಿಗೆ ರಾಜಕೀಯ ದುಷ್ಕರ್ಮಿಗಳು ನುಗ್ಗಿ ದಾಖಲೆಗಳನ್ನು ಚೆಲ್ಲಾಡಿದ್ದಾರೆ; ಕಂಪ್ಯೂಟರನ್ನು ಜಾಲಾಡಿದ್ದಾರೆ. ಸಬ್ಸಿಡಿ ಕಡಿಮೆ ಮಾಡಿ, ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸಿ ಎಂದ ಮನ್‌ಪ್ರೀತ್ ಈಗ ಸರ್ಕಾರದಿಂದ ಹೊರಬೀಳಬೇಕಾಗಿದೆ. ಸುಮ್ಮನೆ ನೋಡಿದರೆ ಏನೋ ಹಣಕಾಸು ಸಮಸ್ಯೆ ಎಂದು ಭಾವಿಸಬಹುದಾದ ಈ ಪ್ರಕರಣವು ಬಹುಪ್ರಶಂಸಿತ ಹಸಿರು ಕ್ರಾಂತಿಯ ಹುಸಿ ಘೋಷಣೆಗಳನ್ನು ಬಯಲು ಮಾಡಿದೆ. ಪೊಳ್ಳು ಕ್ರಾಂತಿಯಿಂದ ಏನೇನಾಗಬಹುದು ಎನ್ನುವುದಕ್ಕೆ ಪಂಜಾಬ್ ಉದಾಹರಣೆ. ಕರ್ನಾಟಕವೂ ಈ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದಲೇ ಈ ಸುದ್ದಿಯನ್ನು ಮತ್ತಷ್ಟು ಕೆದಕಿ ನೋಡಬೇಕಿದೆ.

ನಾಲ್ಕು ವರ್ಷಗಳ ಹಿಂದೆ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ವಿತ್ತಸಚಿವರಾಗಿದ್ದ ಮನ್‌ಪ್ರೀತ್ ಬಾದಲ್, ಪ್ರಕಾಶ್ ಸಿಂಗ್ ಬಾದಲ್‌ರ ಸೋದರಳಿಯ ಕೂಡಾ. ಹೀಗಿದ್ದರೂ ಮನ್‌ಪ್ರೀತ್ ವಜಾ ಆಗಿದ್ದು ಹೇಗೆ? ಯಾಕೆ? ಅಕ್ಟೋಬರ್ ೧೬ರಂದು ಎನ್ ಡಿ ಟಿ ವಿ ಯ ವಾಕ್ ದಿ ಟಾಕ್ ಕಾರ್ಯಕ್ರಮದಲ್ಲಿ ಶೇಖರ್ ಗುಪ್ತಾ ಜೊತೆ ಮಾತನಾಡುತ್ತ ಮನ್‌ಪ್ರೀತ್ ಹೇಳಿದ್ದಿಷ್ಟು:

  • ಪಂಜಾಬಿನ ಸಾಲದ ಮೊತ್ತ ಸುಮಾರು ೭೦ ಸಾವಿರ ಕೋಟಿ ರೂ. ಇದು ಮುಖ್ಯತಃ ಪಂಜಾಬಿನ ಗೌರವ – ಘನತೆಯ ವಿಷಯ.
  • ಐದನೇ ಕ್ಲಾಸಿನ ಹುಡುಗನಿಗೂ ಗೊತ್ತು: ಸಾಲ ಹೆಚ್ಚಾದರೆ ಒಂದೋ ಖರ್ಚು ಕಡಿಮೆ ಮಾಡಬೇಕು; ಅಥವಾ ಸಂಪನ್ಮೂಲ ಹೆಚ್ಚಿಸಿಕೊಳ್ಳಬೇಕು.
  • ನೋಡಿ, ಇವತ್ತು ಸರ್ಕಾರವು ನೀಡ್ತಾ ಇರೋ ಸಬ್ಸಿಡಿಯ ಮೊತ್ತ (ಉಚಿತ ವಿದ್ಯುತ್ ಸೇರಿದಂತೆ) ೫೦೦೦ ಕೋಟಿ ರೂ. ಆದರೆ ನಮ್ಮ ರಾಜ್ಯದಲ್ಲಿ ೩೨ ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕ ಆಗಬೇಕಿದೆ. ಇದಕ್ಕೆ ಆಗೋ ಖರ್ಚು ವಾರ್ಷಿಕ ಕೇವಲ ೩೦೦ ಕೋಟಿ ರೂ.
  • ಹಣಕಾಸಿನ ರಂಗದಲ್ಲಿ ನಾವು ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಲೇಬೇಕು ಅಂತ ನಾನು ವಿರೋಧಪಕ್ಷದಲ್ಲಿದ್ದಾಗಲೂ ಲೇಖನ ಬರೆದಿದ್ದೆ.
  • ಚುನಾವಣೆ ಹತ್ತಿರ ಬರ್‍ತಾ ಇದೆ, ಸಬ್ಸಿಡಿ ಕಡಿತದಂಥ ಕ್ರಮಗಳು ಜನವಿರೋಧಿ ಆಗುತ್ತವೆ; ರಾಜಕೀಯದ ಕ್ರಮ ಆಗುತ್ತೆ ಅನ್ನೋ ಮಾತು ಬಂತು.

ಮನ್‌ಪ್ರೀತ್ ಬಾದಲ್‌ರನ್ನು ವಜಾ ಮಾಡಿದ ಕೂಡಲೇ ಪಂಜಾಬ್ ಸರ್ಕಾರವು ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ. ೧೦ರಷ್ಟು ಏರಿಸಿ ಖಜಾನೆಗೆ ವಾರ್ಷಿಕ ೪೯೫ ಕೋಟಿ ರೂ. ಖರ್ಚು ಬರೆದಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕಿಂತ ಇಂಥ ಕ್ರಮಗಳೇ ಚುನಾವಣೆಗೆ ಸಹಾಯವಾಗುತ್ತವೆ ಅಲ್ಲವೆ?

ಮನ್‌ಪ್ರೀತ್ ಬಾದಲ್ ಹೇಳಿದ್ದಷ್ಟನ್ನೇ ನಾವು ನಂಬಬೇಕಿಲ್ಲ. ರಿಸರ್ವ್ ಬ್ಯಾಂಕ್ ಪ್ರಕಟಿಸಿದ ರಾಜ್ಯಗಳ ವಿತ್ತಸ್ಥಿತಿ ಕುರಿತ ವರದಿಯ ಈ ಪುಟವನ್ನು ನೋಡಿದರೆ ಅಂಕಗಣಿತ ಗೊತ್ತಿರುವ ಯಾವನಿಗಾದರೂ ಯಾವ ರಾಜ್ಯದ ಸಾಲದ ಮೊತ್ತ ಎಷ್ಟು ಎಂದು ಗೊತ್ತಾಗುತ್ತೆ.

ಹೌದು. ಕರ್ನಾಟಕದ ಸಾಲದ ಮೊತ್ತ ಪಂಜಾಬಿಗಿಂತ ಹೆಚ್ಚು: ೭೬,೭೬೨ ಕೋಟಿ ರೂ. ಮೊದಲ ಸ್ಥಾನಗಳಲ್ಲಿ ಉತ್ತರಪ್ರದೇಶ ( ೨,೨೧,೧೦೬ ಕೋಟಿ ರೂ.), ಮಹಾರಾಷ್ಟ್ರ (೨,೦೭,೮೧೦ ಕೋಟಿ ರೂ.), ಪಶ್ಚಿಮ ಬಂಗಾಳ (೧,೬೮,೬೮೪), ಆಂಧ್ರಪ್ರದೇಶ (೧,೨೭,೫೮೧ ಕೋಟಿ ರೂ.) ಮತ್ತು ಗುಜರಾತ್ (೧,೨೦,೭೫೯) ಬರುತ್ತವೆ. ಉತ್ತರಪ್ರದೇಶದಲ್ಲಿ ಮುಲಾಯಂ – ಮಾಯಾವತಿಯರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರು, ಆಂಧ್ರದಲ್ಲಿ ಕಾಂಗ್ರೆಸ್ ಮತ್ತು ಗುಜರಾತಿನಲ್ಲಿ ಬಿಜೆಪಿಯ ನರೇಂದ್ರ ಮೋದಿ – ಇವರ ಆಡಳಿತದ ಕಾಲದಲ್ಲಿ ಈ ಸಾಲದ ಮೊತ್ತ ಏರಿದ್ದು ಎಂಬುದನ್ನು ಇಲ್ಲಿ ಗಮನಿಸಬೇಕು.

ಎಲ್ಲಾ ಕಾಲದಲ್ಲೂ ಸುಳ್ಳು ಹೇಳಲು ಬರುವುದಿಲ್ಲ

ಹಸಿರು ಕ್ರಾಂತಿಯಿಂದ ಪಂಜಾಬ್ ಸುಖೀ ರಾಜ್ಯವಾಗಿ ಪರಿವರ್ತಿತವಾಯಿತು ಎಂಬ ಕಂತೆ ಪುರಾಣವನ್ನು ಸರ್ಕಾರಗಳು, `ಹಸಿರು ಕ್ರಾಂತಿ’ಯ ಹರಿಕಾರ ನಾರ್ಮನ್ ಬೋರ್ಲಾಗ್ ಸೇರಿದಂತೆ ಸರ್ಕಾರಿ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಬೋರ್ಲಾಗ್ ತೀರಿಕೊಂಡಾಗ ಅವನ ಗುಣಗಾನ ಮಾಡಿದ ಲೇಖನಗಳಿಗೆ, ಅಂಕಣಗಳಿಗೆ ಲೆಕ್ಕವಿಲ್ಲ. ಆದರೆ ಹಸಿರು ಕ್ರಾಂತಿ ಎಂಥ ಘೋರ ಅಪಾಯಕ್ಕೆ ಕಾರಣವಾಯಿತು ಎಂಬುದು ಈಗಿನ ಅಂಕಿ ಅಂಶಗಳಿಂದಲೇ ಸಿದ್ಧವಾಗಿದೆ.

ಒಂದೊಮ್ಮೆ ಅತ್ಯಂತ ಸಮೃದ್ಧ ರಾಜ್ಯವಾಗಿದ್ದ ಪಂಜಾಬ್ ಈಗ ದಿವಾಳಿಯ ಅಂಚಿಗೆ ಬಂದು ನಿಂತಿದೆ ಎಂದು ಮನ್‌ಪ್ರೀತ್ ಪ್ರಕರಣದ ಹಿನ್ನೆಲೆಯಲ್ಲಿ ಸಂಪಾದಕೀಯ ಬರೆದ ಡೆಕನ್ ಹೆರಾಲ್ಡ್ ಹೇಳಿದೆ. ಸಾಲ ತೀರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ ಪಂಜಾಬ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಡೆಕನ್ ಹೆರಾಲ್ಡ್ ಹೇಳಿದೆ. ಆದರೆ ಇದೇ ಸಂಪಾದಕೀಯವು ಕರ್ನಾಟಕಕ್ಕೂ ಅನ್ವಯವಾಗುತ್ತದೆ.

ಪಂಜಾಬಿನ ದುರಂತವನ್ನು ಇತ್ತೀಚಿನವರೆಗೂ ಮುಚ್ಚಿಡುತ್ತಲೇ ಬರಲಾಗಿದೆ. ಆದರೆ ಈಗ ವಾಸ್ತವಾಂಶಗಳು ಬಯಲಾಗುತ್ತಿವೆ. ಪಂಜಾಬಿನ ಹಳ್ಳಿಗಳಲ್ಲಿ ಈಗ ವಾರ್ಷಿಕ ಸರಾಸರಿ ೩೦೦೦ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂವ್‌ಮೆಂಟ್ ಎಗನೆಸ್ಟ್ ಸ್ಟೇಟ್ ರಿಪ್ರೆಶನ್ ಎಂಬ ಸಂಸ್ಥೆಯು ದಾಖಲೆ ಸಹಿತ ವರದಿಯೊಂದನ್ನು ಸಿದ್ಧಪಡಿಸಿದೆ. ಆದರೆ ಸರ್ಕಾರಗಳು ಮಾತ್ರ ಕೆಲವೇ ರೈತರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತ ಬಂದಿದೆ. ಇದಕ್ಕೆ ಹಿಂದಿನ ಕಾಂಗ್ರೆಸ್, ಈಗಿನ ಅಕಾಲಿದಳ ಸರ್ಕಾರಗಳು ಹೊರತಲ್ಲ. `ಭಾರತದ ಬ್ರೆಡ್ ಬ್ಯಾಸ್ಕೆಟ್’ ಎಂದೇ ಪ್ರಸಿದ್ಧವಾಗಿದ್ದ ಪಂಜಾಬ್‌ನ ರೈತರ ಆತ್ಮಹತ್ಯೆ ವಿವರಗಳನ್ನು ಹೈದರಬಾದ್ ಮೂಲದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್ ತನ್ನ ವರದಿಯಲ್ಲಿ ಗಣನೆಗೆ ತೆಗೆದುಕೊಳ್ಳಲೇ ಇಲ್ಲ ಎಂದು ಶಿಕ್ಷಣತಜ್ಞ ಅಮ್ರಿಕ್ ಸಿಂಗ್ ಆರೋಪಿಸಿದ್ದರಲ್ಲಿ ಸತ್ಯವಿದೆ.

`ಕಟುಸತ್ಯವನ್ನು ಒಬ್ಬರು ಹೇಳಿದರೂ ಸಾಕಲ್ಲವೆ? ಸೂರ್ಯನ ಸುತ್ತ ಭೂಮಿ ತಿರುಗುತ್ತಿದೆ ಎಂದು ಗೆಲಿಲಿಯೋ ಎಲ್ಲರ ವಿರೋಧ ಕಟ್ಟಿಕೊಂಡು ಹೇಳಲಿಲ್ಲವೆ?’ ಎನ್ನುತ್ತಾರೆ ಮನ್‌ಪ್ರೀತ್ ಸಿಂಗ್.

ನಿಜ. ಗೆಲಿಲಿಯೋ ಹೇಳಿದ್ದನ್ನು ಜನ ನಂಬಲಿ ಬಿಡಲಿ, ಸೂರ್ಯ ಅವನ ಪಾಡಿಗೆ ಇದ್ದ; ಭೂಮಿ ತನ್ನ ಪಾಡಿಗೆ ಸೂರ್ಯನನ್ನು ತಿರುಗುತ್ತಲೇ ಇತ್ತು. ಆದರೆ ಹಣಕಾಸಿನ ದುಸ್ಥಿತಿ ಕುರಿತ ಘೋರ ಸತ್ಯವು ಪಂಜಾಬ್, ಕರ್ನಾಟಕ ಸಹಿತ ಹಲವು ರಾಜ್ಯ ಸರ್ಕಾರಗಳಿಗೆ, ಈ ರಾಜ್ಯಗಳ ಜನರಿಗೆ ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತೆ.

Leave a Reply

Theme by Anders Norén