ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

`ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?

ಮದ್ದೂರಿನ ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆಯಲ್ಲಿ ೨ನೆ ನೆರವಿಗ (SDA) ಆಗಿರುವ ಶ್ರೀ ಶ್ರೀನಿವಾಸಮೂರ್‍ತಿಯವರು ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಸದಸ್ಯ, ಮತ್ತು ಈ ತಂತ್ರಾಂಶಗಳ ತಯಾರಿ ಸಮಯದಲ್ಲಿ ಸಮಿತಿಯ ವತಿಯಿಂದ ತಾಂತ್ರಿಕ ಮೇಲ್ವಿಚಾರಣೆ ಮಾಡುತ್ತಿದ್ದ ಡಾ|| ಯು ಬಿ ಪವನಜರಿಗೆ ಮತ್ತು ಮಾರುತಿ ತಂತ್ರಾಂಶ ಸಂಸ್ಥೆಗೆ  ಬರೆದ ಪತ್ರ ಇಲ್ಲಿದೆ. ಮುಖ್ಯವಾಗಿ ಇದು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದ ಬ್ರೈಲ್‌ ತಂತ್ರಾಂಶದ ಕುರಿತಾಗಿದೆ.  

ಮಾನ್ಯರೇ,
ನೀವು ಕನ್ನಡ ತಂತ್ರಾಂಶಗಳ ಅಬಿವ್ರುದ್ದಿಯ ಶಿಪಾರಸ್ಸುಗಳ ಸಮಿತಿಯ ಸದಸ್ಯರಲ್ಲೊಬ್ಬರು ಆಗಿರುವಂತೆಯೇ ಕುರುಡರು ಬಳಸುವ ತಂತ್ರಾಂಶಗಳ ಬಗ್ಗೆ ಅರಿತವರೂ ಆಗಿದ್ದೀರ. ನಾವು ಬಳಸುವ Espeak TTS ತಂತ್ರಾಂಶವನ್ನು ಕನ್ನಡಕ್ಕೆ TS ಶ್ರೀಧರ್ ರವರು ಅನುವಾದಗೊಳಿಸಿದಾಗ ನೀವು ಆ ತಂತ್ರಾಂಶವನ್ನು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಮಂದಿಗಳಿಗೆ ಪರಿಚಯಿಸಿದಿರಿ. ಅಂತೆಯೇ ಕನ್ನಡದ ತಂತ್ರಾಂಶಗಳ ಗುಣಮಟ್ಟದಲ್ಲಿ ಬರಹ ಮೊದಲನೆಯದೆಂದೂ ಕೂಡ ನಿಮಗೆ ತಿಳಿದಿಯೇ ಇದೆ. ಬರಹ ತಂತ್ರಾಂಶದಲ್ಲಿ ಕುರುಡರಿಗೆ ಅನುಕೂಲವಾಗುವ Braille ಸವಲತ್ತು ಇದೆ ಎಂಬುವುದು ನಿಮಗೆ ತಿಳಿದಿದ್ದರೂ ತಾವು ಮಾರುತಿ ತಂತ್ರಾಂಶ ಅಬಿವ್ರುದ್ದಿಗಾರರಿಂದ ಕನ್ನಡ ಬ್ರಯ್ಲ್ ತಂತ್ರಾಂಶವನ್ನು ಯಾತಕ್ಕಾಗಿ ಅಬಿವ್ರುದ್ದಿಪಡಿಸಲು ಅನುಕೂಲ ಮಾಡಿಕೊಟ್ಟಿರಿ? ಈ ತಂತ್ರಾಂಶವು ಒಳಗೊಂಡಿರುವ coding ವಿದಾನವೂ ಕೂಡ ಜಾಗತಿಕ ಮಟ್ಟದಿಂದ ಕೂಡಿಲ್ಲವೆಂದೂ ನಿಮಗೂ ತಿಳಿದಿದೆ.

  • ಇನ್ನು ಕನ್ನಡ ಕ್ಷೇಮ ಕೀಲಿಮಣೆಯೂ ಕೂಡ ನಾವು ಬಳಸುವ screen reader ತಂತ್ರಾಂಶಕ್ಕೆ ಅಷ್ಟಾಗಿ ಹೊಂದಿಕೆಯಾಗಿಲ್ಲ. ಈ ತಂತ್ರಾಂಶವನ್ನು ಚಾಲುಗೊಳಿಸಿದಾಗ ೩೨ bit win ಗೆ ವ್ಯಾಲಿಡ್ ಆಗುವುದಿಲ್ಲವೆಂದು ತೋರಿಸುತ್ತದೆ. ಈಗಾಗಲೆ ಕನ್ನಡದಲ್ಲಿ ಕೀಲಿಮಣೆ ಇದ್ದಾಗ್ಯೂ ಇದರ ಇರುವಿಕೆ ಎಂತದ್ದು? ದಯವಿಟ್ಟು ನಮಗೆ ತಿಳಿಸಿ!
  • ನಾವು Touch-screen ಮೊಬಯ್ಲ್ಗಳನ್ನು ಬಳಸುತ್ತೇವೆಂದು ನಿಮಗೂ ಗೊತ್ತಿದೆ ಅಲ್ಲವೆ? ನೋಡಿ ಮಾರುತಿ ತಂತ್ರಾಂಶ ಅಬಿವ್ರುದ್ದಿಗಾರರು ಅಣಿಗೊಳಿಸಿರುವ ಮೊಬಯ್ಲ್ ಆವ್ರುತ್ತಿಯ ತಂತ್ರಾಂಶಗಳೂ ಕೂಡ Talk-back ತಂತ್ರಾಂಶಕ್ಕೆ ಅನುವಾಗಿಲ್ಲ. ನೀವು ಪ್ರಾಯೋಗಿಕ ಆವ್ರುತ್ತಿಯನ್ನು ಹೊರತರುವ ಮುಂಚೆ ಯಾತಕ್ಕಾಗಿ ಈ ರೀತಿಯ ತಂತ್ರಾಂಶಗಳಲ್ಲಿನ ತಪ್ಪುಗಳನ್ನು ಹೆಕ್ಕಿ ತೋರಿಸಿಲ್ಲ. ಆ ಕ್ಶಣದಲ್ಲಿ ನಾವು ನಿಮಗೆ ನೆನಪೇ ಆಗಲಿಲ್ಲವೆ?
  • Ascii-Unicode ಪರಿವರ್ತಕವು ೧೬೪ MB, ಕನ್ನಡ ಬ್ರಯ್ಲ್ ತಂತ್ರಾಂಶವು ೧೫ MB ಯಶ್ಟನ್ನು ಅನುಸ್ತಾಪಿಸಿಕೊಂಡಾಗ ಆಕ್ರಮಿಸಿಕೊಳ್ಳುತ್ತದೆ. ಆದರೆ ಬರಹ ಕೇವಲ ೨೩ MB ರಶ್ಟನ್ನು ಮಾತ್ರ ಕಂಪ್ಯೂಟರಿನ ಜಾಗವನ್ನು ತೆಗೆದುಕೊಳ್ಳುತ್ತದೆ. ಕನ್ನಡ ಬ್ರಯ್ಲ್ ತಂತ್ರಾಂಶವನ್ನು ಅನುಸ್ತಾಪಿಸಿಕೊಂಡಾಗ   c: ಒಳಗೆ kanbrail ಎಂಬ Folder ಉಂಟಾಗುತ್ತದೆ. ಇದರ ಗಾತ್ರ ೭೪ MB. ಇದರೊಳಗೆ ಪ್ರತೀ ಅಕ್ಶರಗಳನ್ನು ರೆಕಾರ್ಡ್ ಮಾಡಿದ .Wav ೧೪೫೦೦ ಕಡತಗಳು ಇವೆ. ಒಟ್ಟಾರೆ ಅನುಸ್ತಾಪಿತ Espeak TTs ತಂತ್ರಾಂಶದ ಗಾತ್ರ ೨೨ MB ಯೂ ಕೂಡ ಮೀರುವುದಿಲ್ಲ. ಇದೊಂದೇ ಸಾಕು ಇವರು ಅಣಿಗೊಳಿಸಿದ ತಂತ್ರಾಂಶವು ತುಂಬಾ ಹಳೆಯ ವಿದಾನದಿಂದ ಕೂಡಿದೆ ಎಂಬುವುದನ್ನು ತೋರಿಸಲು.
  • ಹೊಸ ಮಾದರಿಯ ವಿದಾನವಿದ್ದರೂ ಬ್ರಯ್ಲ್ ತಂತ್ರಾಂಶಕ್ಕೆ ಹಳೆಯ ವಿದಾನವನ್ನೇ ಯಾತಕ್ಕಾಗಿ ಅವರು ಬಳಸಿದರು? ನೀವು ದಯವಿಟ್ಟು ಅಣಿಗೊಳಿಸಿದವರನ್ನು ಕೇಳುವುದರ ಜೊತೆಗೆ ಈ ತಂತ್ರಾಂಶವನ್ನು ಅಣಿಗೊಳಿಸುವಾಗ ಪ್ರಾಯೋಗಿಕ ದೃಶ್ಟಿಯಲ್ಲಿ ಕುರುಡರಿಗೆ ತಂತ್ರಾಂಶವನ್ನು ಬಳಸಲು ಕೊಟ್ಟಿದ್ದರೆ? ಎಂಬುವುದನ್ನೂ ಕೂಡ ಕೇಳಿ ನೋಡಿ. ಒಂದು ವೇಳೆ ನೀವು ಹೀಗೆ ಕೇಳಿದರೆ ನಿಮಗೆ ಇಲ್ಲಾ! ಎಂಬ ಉತ್ತರ ಬಂದರೂ ಬರಬಹುದೇನೊ!
  • ನೀವು ಬಹುಶಃ ಸಮಿತಿಯಲ್ಲಿ ಕಡಿಮೆ ಪಾತ್ರವನ್ನು ನಿರ್ವಹಿಸಿರಬಹುದು ಇಲ್ಲವೆ ನಿಮಗೆ ಅಶ್ಟಾಗಿ ಈ ಕುರಿತು ಗಮನಿಸಲು ಆಗದಿರಬಹುದು. ಆದರೆ ನಮಗಾಗಿ ಅಣಿಗೊಳಿಸಲಿರುವ ತಂತ್ರಾಂಶದ ಕುರಿತಾದರೂ ನೀವು ಕಾಳಜಿವಹಿಸಿಲ್ಲವೇಕೆ? ಇರಲಿ. ದಯವಿಟ್ಟು ಈ ಮೇಲೆ ಬರೆಯಲಾದ ಕಟೂ ವಾಕ್ಯಗಳ ಹಿಂದಿನ ಬೇಸರವನ್ನು ಅರಿತುಕೊಳ್ಳಲು ಒಮ್ಮೆ ಈ ನಾಲ್ಕೂ ತಂತ್ರಾಂಶಗಳನ್ನು screen-reader ಮೂಲಕ ಬಳಸಿ ನೋಡಿ. ಆಗ ನಿಮಗೂ ಬೇಸರದ ಅನುಬವವಾಗುತ್ತದೆ. 

ಮುಂದಿನ ದಿನಗಳಲ್ಲಿ ಈ ತೆರನ ತಪ್ಪುಗಳು ಆಗದಂತೆ ತಾವು ಸಮಿತಿಯಲ್ಲಿ ಇರುವ ತನಕ ನೋಡಿಕೊಳ್ಳುವಿರೆಂಬ ವಿಶ್ವಾಸ ನನಗಿದೆ.

ವಂದನೆಗಳೊಡನೆ, 
ಶ್ರೀನಿವಾಸಮೂರ್ತಿ

ಇದಲ್ಲದೆ ಶ್ರೀನಿವಾಸಮೂರ್‍ತಿಯವರು ಮಾರುತಿ ತಂತ್ರಾಂಶ ಸಂಸ್ಥೆಗೂ ಪತ್ರ ಬರೆದಿದ್ದು ಅದು ಹೀಗಿದೆ: 

ಮಾನ್ಯರೆ,
ಇತ್ತೀಚೆಗೆ ನೀವು ಬಿಡುಗಡೆಗೊಳಿಸಿರುವ ತಂತ್ರಾಂಶಗಳನ್ನೆಲ್ಲವನ್ನು ಬಳಸಿ ಈ ಕೆಳಗೆ ಬೇಸರದಿಂದಲೇ ಅನಿಸಿಕೆಗಳನ್ನು ಬರೆದಿದ್ದೇನೆ. ತುಸು ಕಹಿಯಾದರೂ ಬರೆದಿರುವ ಅನಿಸಿಕೆಗಳ ಒಳ ಬೇಸರವನ್ನು ತಾವು ಅರಿತುಕೊಳ್ಳಬೇಕೆಂದು ಮನವಿ.
೧. ಬರಹ ತಂತ್ರಾಂಶದಲ್ಲೇ Braille ಲಿಪಿಯ ಹೊತ್ತಗೆಗಳನ್ನು ಅಣಿಗೊಳಿಸುವ ಸವಲತ್ತು ಇರುವಾಗ kannada braille software ಬೇಕೆ ಎಂಬುವುದರ ಕುರಿತು ನೀವು ಯೋಚಿಸಬೇಕಿದೆ. ಬರಹ ತಂತ್ರಾಂಶದಲ್ಲಿ ಡಕ್ಸ್ಬರಿ ತಂತ್ರಾಂಶದಲ್ಲಿರುವ ಸವಲತ್ತನ್ನು ಸೇರಿಸಿದರೆ ಇರುವ ಒಂದು ತೊಡಕು ಇಲ್ಲವಾಗುತ್ತದೆ. ಈಗಾಗಲೇ ಕನ್ನಡ ಪುಸ್ತಕ ಪ್ರಾಧಿಕಾರದವರು Braille ಲಿಪಿಯಲ್ಲೇ ಒಂದಶ್ಟು ಪುಸ್ತಕಗಳನ್ನು ಹೊರತಂದಿದ್ದಾರೆ. ಇದು ಆಗಿದ್ದು ಬರಹ ತಂತ್ರಾಂಶದ ಮೂಲಕ.

೨. ಕುರುಡರು ಕೂಡ kannada android mobile ಗಳನ್ನು touch-screen ಇದ್ದಾಗ್ಯೂ ಬಳಸಬಲ್ಲರೆಂದು ಅರಿತುಕೊಳ್ಳಬೇಕಾಗಿದೆ ಮತ್ತೂ ಅಣಿಗೊಳಿಸಿರುವ ಕನ್ನಡದಲ್ಲೇ ಸಂದೇಶವನ್ನು ಕಳುಹಿಸುವ kannada android mobile ತಂತ್ರಾಂಶವು ಕೂಡ ಕುರುಡರಾದ ನಮ್ಮಂತವರು ಬಳಸುವ Talk-back ಎಂಬ ತಂತ್ರಾಂಶದೊಡನೆ ಕೆಲಸಮಾಡುವಂತೆ ಆಗಬೇಕು. ಅಕ್ಷರಗಳು ಈ ತಂತ್ರಾಂಶದಲ್ಲಿ ಸರಿಯಾಗಿ ಮೂಡುತ್ತಿಲ್ಲ. ಅದನ್ನೂ ಸರಿಪಡಿಸಬೇಕಾಗಿದೆ.

೩. Google ತಂಡವು ಎಲ್ಲಾ ತೆರನ ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ಅಂಗವಿಕಲರೂ ಕೂಡ ಮೆದುಜಾಣ (software) ಗಳನ್ನು ಬಳಸಲಾಗುವಂತೆ ಮಾಡಲು ತೊಡಕು ನಿವಾರಣಾ ತಂಡವನ್ನು ಏರ‍್ಪಾಟು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿಯೂ ನೀವು ತಂತ್ರಾಂಶಗಳನ್ನು ಅಣಿಗೊಳಿಸುವಾಗ ಇವನ್ನೆಲ್ಲಾ ಗಮನಿಸಬೇಕು.

೪. ನಾಲ್ಕೂ ತಂತ್ರಾಂಶಗಳು ಪರದೆ-ಓದುಗ ತಂತ್ರಾಂಶಗಳಿಗೆ ಪೂರಕವಾಗಿಲ್ಲದ ಕಾರಣ ಬಳಸಲು ನಮಗೆ ಆಗದು. ಈ ನಿಟ್ಟಿನಲ್ಲಿ ಹೇಳುವುದಾದರೆ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಕಡೆಗಣನೆಯಾಗಿದೆ ಎಂದು ಕಂಡುಬಂದಿದೆ.

೫. ASCII-unicode ಪರಿವರ್ತಕವೂ ಕೂಡ ಬರಹ ತಂತ್ರಾಂಶದಂತೆ ಸರಳವಾಗಿರಬೇಕು. ತುಂಬಾ ಜಟಿಲ ವಿಧಾನದಿಂದ ಈ ತಂತ್ರಾಂಶ ಕೂಡಿದೆ.

೬. Kshema Kannada Keyboard ಕೂಡ ಬಳಸಲು ಆಗುತ್ತಿಲ್ಲ. ನುಡಿ/ಬರಹದಲ್ಲಿರುವ Ke board ಉತ್ತಮವಾಗಿಯೇ ಇದೆ.

೭. ಒಂದು ವೇಳೆ ಬರಹ ತಂತ್ರಾಂಶವನ್ನು ಸರ್ಕಾರ ಅಳವಡಿಸಿಕೊಂಡರೆ ಕನ್ನಡ ತಂತ್ರಾಂಶಗಳ ಗುಣಮಟ್ಟಕ್ಕೆ ನೀವು ಬೆಂಬಲ ಹಾಗೂ ಉತ್ತೇಜನ ನೀಡಿದಂತೆ ಆಗುತ್ತದೆ. ಇರುವ ತಂತ್ರಾಂಶವನ್ನು ಮತ್ತೊಂದು ರೀತಿಯಲ್ಲಿ ಅಣಿಗೊಳಿಸಿ ನಾವೂ ಮಾಡಿಸಿದ್ದೀವಿ ಎಂದು ತೋರಿಸಿಕೊಳ್ಳುವುದಕ್ಕಿಂತಲೂ ಇಲ್ಲದ ತಂತ್ರಾಂಶಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ನನ್ನ ಸಲಹೆ.

೮. ಈ ಹಿಂದೆ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು braille software ಯನ್ನು ಅಣಿಗೊಳಿಸುವಾಗ ಬೆಂಗಳೂರಿನ ಜೀವನ್ಭೀಮಾ ನಗರದಲ್ಲಿರುವ NAB ಸಂಸ್ಥೆಗೆ ಬಂದಿದ್ದರು. ಆಗಿನಿಂದ ಇಲ್ಲಿಯ ತನಕ ಅವರನ್ನು ಈ software ಬಗೆಗೆ ಕೇಳುತ್ತಲೇ ಇದ್ದೆ. ಮಂಜಾಚಾರ್ ರವರಲ್ಲಿ ಪ್ರಾಯೋಗಿಕವಾಗಿಯಾದರೂ ತಂತ್ರಾಂಶವನ್ನು ನೀಡುವಂತೆ ವಿನಂತಿಸಿಕೊಂಡಿದ್ದೆ. ಆದರೆ ಅವರು ತಂತ್ರಾಂಶವನ್ನು ನೀಡಲಿಲ್ಲ. ಒಂದು ವೇಳೆ ಈ ಹಿಂದೆ ಅವರು ತಂತ್ರಾಂಶವನ್ನು ನೀಡಿದ್ದಲ್ಲಿ ಇಶ್ಟು ತೊಡಕಿನಿಂದ ಕೂಡಿದ ತಂತ್ರಾಂಶವೊಂತೂ ನಮಗೆ ದೊರಕುತ್ತಿರಲಿಲ್ಲವೇನೋ ಅನಿಸುತ್ತದೆ.
—-
ನನ್ನ ಬಗ್ಗೆ
ಹೆಸರು: ಶ್ರೀನಿವಾಸಮೂರ‍್ತಿ ಬಿ.ಜಿ.
ಹುಟ್ಟೂರು: ಬೆಂಗಳೂರು.
ಕೆಲಸ ಮಾಡುತ್ತಿರೋದು: ಹಿರಿಯ ಸಿವಿಲ್ ತೀರ‍್ಪುಗಾರರ ತೀರ‍್ಪುಮನೆ, ಮದ್ದೂರು, ಮಂಡ್ಯ-ಇಲ್ಲಿ ೨ನೆ ನೆರವಿಗ (SDA).

Leave a Reply

Theme by Anders Norén