ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

ಬ್ಯಾಲಾಳು ಮತ್ತು ಬಿಳಲು

 

ಎಲ್ಲದಕ್ಕೂ ಒಂದು ಕೊನೆ ಇರಲೇಬೇಕು ಅಲ್ವೆ? ಕಲಿ-ಯುಗ ಅಂಕಣಕ್ಕೂ ಇಂದೇ ಕೊನೆ! ’ಉದಯವಾಣಿ’ಯಲ್ಲಿ ಕಳೆದ ಒಂದೂಕಾಲು ವರ್ಷದಿಂದ ಮೂಡಿದ ಕಲಿ-ಯುಗ ಅಂಕಣವನ್ನು ಖುಷಿಯಿಂದಲೇ ನಿಲ್ಲಿಸುತ್ತಿದ್ದೇನೆ. ಕೆಲಸ ಬಿಡುವಾಗ ಖುಷಿಪಡಿ ಎಂದ ನಾನು ನನ್ನ ಅಂಕಣ ನಿಲ್ಲಿಸುವಾಗ ಬೇಜಾರಾಗೋದು ಪಾಸಿಟಿವ್ ಬದುಕಿನ ಲಕ್ಷಣವಲ್ಲ ಅಲ್ವೆ? 

ಉದಯವಾಣಿಯಲ್ಲಿ ಬಂದ ನನ್ನ ಲೇಖನಗಳನ್ನು ಓದಿದ ಹಲವರು ನನ್ನನ್ನು ಈಗಲೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಪರ್ಕಿಸುತ್ತಿದ್ದಾರೆ; ಮಾಹಿತಿ ಕೇಳುತ್ತಿದ್ದಾರೆ. ಎರಡು ವಾರದ ಹಿಂದೆ ಬಂದ ನಡಹಳ್ಳಿ ಅನಂತಜ್ಜನ ಬಹುಮುಖ ಪ್ರತಿಭೆಯ ಲೇಖನವನ್ನು ಓದಿದ ಅವರ ಮಗನೇ ನನಗೆ ಫೋನ್ ಮಾಡಿ ಖುಷಿಪಟ್ಟಿದ್ದಾರೆ (ಸದ್ಯ ತಪ್ಪೇನೂ ಬರೆದಿಲ್ಲವಲ್ಲ ಎಂದು ನನಗೂ ಸಮಾಧಾನವಾಯ್ತು!). ನನ್ನ ಕಂಪ್ಯೂಟರ್ ಕಡತ ಹಂಚಿಕೆ (ಪಿ೨ಪಿ) ಲೇಖನವಂತೂ ಹಲವರಿಗೆ ಮಾಹಿತಿಯ ಹೆದ್ದಾರಿಯನ್ನೇ ತೋರಿಸಿದೆ. ತದಡಿ ಯೋಜನೆ ವಿರುದ್ಧ ಬರೆದ ಎರಡೂ ಲೇಖನಗಳನ್ನು ಹಲವು ಪತ್ರಕರ್ತರಿಗೆ, ಮಿತ್ರರಿಗೆ ಕಳಿಸಿಕೊಟ್ಟಾಗ ಎಲ್ಲರೂ ಯೋಜನೆಯನ್ನು ವಿರೋಧಿಸುವ ಹೋರಾಟ ಸರಿ ಎಂದು ತಮ್ಮ ಬೆಂಬಲ ಘೋಷಿಸಿದ್ದಾರೆ. ಈ ತಿಂಗಳಷ್ಟೇ ಬೆಂಗಳೂರಿಗೆ ಬಂದು ಕೆಲಸ ಸೇರಿದ ನನ್ನ ಫ್ಯಾನ್ ಈಗಷ್ಟೇ ಈ ಮೈಲ್ ಕಳಿಸಿ ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಅದಿರಲಿ, ನನ್ನ ಕೆಲಸ ಬಿಡುವ ಲೇಖನವನ್ನು ಓದಿದ ಒಬ್ಬ ಯುವಕ ’ನನ್ನ ಜೀವ ಉಳಿಸಿದ್ರಿ ಸಾರ್’ ಎಂದು ಥ್ಯಾಂಕ್ಸ್ ಹೇಳಿದ್ದನ್ನು ನಾನು ಮರೆಯೋದು ಸಾಧ್ಯವೆ? 

 
32 m diameter antenna in its final stages of fabrication for IDSN

32 m diameter antenna in its final stages of fabrication for IDSN

ಈಗ ಅಂಕಣವಷ್ಟೇ ನಿಂತಿದೆಯೇ ಹೊರತು ಕಲಿಯುವ ತವಕಕ್ಕೆ ಕೊನೆಯಾಗಿಲ್ಲ! ನಾನಾಗಲೀ, ನೀವಾಗಲೀ, ಕಲಿಯುವುದನ್ನು ನಿಲ್ಲಿಸಿದ ಕ್ಷಣದಲ್ಲಿ ಎಲ್ಲೋ ಏಕತಾನತೆ ಇದೆಯಲ್ಲ ಎಂಬ ಬೇಜಾರಿಗೆ ಸಿಲುಕುತ್ತೇವೆ. ನೋಡಿ, ಕಲಿಯುಗ ಅಂಕಣ ಚಿರಂತನವಾಗಿ ಬರುವುದೂ ಏಕತಾನತೆಯೇ! ಎಂಥ ಪ್ಯಾರಾಡಾಕ್ಸ್ ಅಲ್ಲವೆ?

ಇಷ್ಟು ದಿನ ಈ ಅಂಕಣ ಓದಿದ ನೀವು ಕೆಲವೊಮ್ಮೆ ಮೌನವಾಗಿಯೋ, ಕೆಲವೊಮ್ಮೆ ಈ ಮೈಲ್ ಮೂಲಕವೋ ಮಾತಾಡಿದ್ದೀರಿ. ನಾನು ಸಾಮಾನ್ಯವಾಗಿ ಬಂದೆಲ್ಲ ಪತ್ರಗಳಿಗೂ ಉತ್ತರಿಸಿದ್ದೇನೆ. ಒಬ್ಬರಿಗೆ ಒಂದಷ್ಟು ಮಕ್ಕಳ ಸಿನೆಮಾ ಕಳಿಸ್ತೀನಿ ಎಂದಿದ್ದೆ. ಖಂಡಿತ ಅವರು ಕಾಯಬಹುದು! 

ಸಂಗೀತದಿಂದ ಹಿಡಿದು ವಿಜ್ಞಾನದವರೆಗೆ, ಸಾಹಿತ್ಯದಿಂದ ಹಿಡಿದು ಬದುಕಿನ ಕಲಿಕೆಯ ಸಾಧನಗಳವರೆಗೆ, ಮಾಹಿತಿಯಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ ಒಂದಷ್ಟು ಬರೆದು ನಿಮ್ಮ ಬದುಕಿನಲ್ಲಿ ಕೊಂಚ ಬದಲಾವಣೆ ಮಾಡಲು ಯತ್ನಿಸಿದ್ದೇನೆ. ಈ ಬದಲಾವಣೆಯ ಯತ್ನದಲ್ಲಿ ನಾನೂ ನಿಮ್ಮಂತೆಯೇ ಬದಲಾಗಿದ್ದೇನೆ. ಕಲಿ-ಯುಗದಲ್ಲಿ ಬದಲಾವಣೆ ನಿರಂತರ; ಚಿರಂತನ. 

ಹಾಗೆ ನೋಡಿದರೆ ಕಪ್ಪೆಗಳೂ ನಾಗರಿಕತೆಯ ದಟ್ಟ ಬದುಕು ಆವರಿಸಿಕೊಂಡು ಮರಗಳು ಕಡಿಮೆಯಾದಂತೆ ತಮ್ಮ ಕೈಗವಚಗಳನ್ನೇ ಬದಲಾಯಿಸಿಕೊಂಡ ಉದಾಹರಣೆಯನ್ನು ನಮ್ಮ ಜೀವವಿಜ್ಞಾನಿಗಳು ಕೊಡುತ್ತಾರೆ. ನಾವೇನು ಮಹಾ… 

ನಾನು ಈ ಅಂಕಣದಿಂದ ಹೀಗೆ ವಿರಮಿಸಿದ ಮೇಲೆ ಸುಮ್ಮನೆ ಕೂಡುವ ಪೈಕಿ ಅಲ್ಲ! ನನ್ನ ಜಾಲತಾಣ ಈಗ ಸಜ್ಜಾಗ್ತಾ ಇದೆ. ಅದನ್ನು ನಾನು ಇನ್ನಷ್ಟು ಸುಂದರಗೊಳಿಸುವ, ಸಮೃದ್ಧಗೊಳಿಸುವ ಯತ್ನದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವೆ. ಯಾಕೆಂದರೆ ನಾನು ಅಲ್ಲಿ ಬೇಕೆಂದಾಗ ಬರೆಯಬಹುದು; ಬರೆದ ಕ್ಷಣವೇ ಪ್ರಕಟಿಸಿಬಹುದು! ಮುದ್ರಣ ಮಾಧ್ಯಮದಲ್ಲಿ ಸಿಗುವ ಶ್ರೀಸಾಮಾನ್ಯರು ಅಲ್ಲಿ ಹೆಚ್ಚಾಗಿ ಸಿಗುವುದಿಲ್ಲ ಎಂಬುದೇನೋ ನಿಜ. 

 

Doda Alada Mara (Giant Banyan Tree) in Ramohalli near Bangalore, Karnataka, India taken by User:BostonMA in August 2003

Doda Alada Mara (Giant Banyan Tree) in Ramohalli near Bangalore, Karnataka, India taken by User:BostonMA in August 2003

 
 

ಬದುಕಿನಲ್ಲಿ ಕಲ್ಪನೆಗಿಂತ ವಾಸ್ತವವೇ ಭೀಕರ ಎಂಬ ಮಾತು ನನ್ನದು. ಮುಂಬಯಿಯಲ್ಲಿ ಉಗ್ರರ ಅಟ್ಟಹಾಸ ಇದಕ್ಕೊಂದು ತಾಜಾ ನಿದರ್ಶನ. ನನ್ನ ಭ್ರಮಾಧೀನ ಜಗತ್ತಿನ ಅನುಭವವೂ ಇದನ್ನೇ ಹೇಳುತ್ತದೆ. ಭೌತಿಕ ಬದುಕಿನಲ್ಲಿ ಎದುರಾಗುವ ಆತಂಕಗಳನ್ನು ನೀವು ಕಲ್ಪನೆ ಮಾಡುವುದಕ್ಕೂ ಸಾಧ್ಯವಿಲ್ಲ. ಕ್ಯಾಂಬೋಡಿಯಾದಲ್ಲಿ ಕ್ಮೆರೂ ನಡೆಸಿದ ನರಮೇಧವನ್ನು, ಚೀನಾದಲ್ಲಿ ಮಾವೋ ಏಳು ಕೋಟಿ ಜನರನ್ನು ಐದಾರು ದಶಕಗಳ ಕಾಲ ನಿರಂತರವಾಗಿ ಕೊಂದಿದ್ದನ್ನು, ಸುಡಾನಿನಲ್ಲಿ ಈಗಲೂ ನಡೆಯುತ್ತಿರೋ ಮಾರಣಹೋಮವನ್ನು, ಗ್ವಾಂಟೆನಾಮೋ ಬಂದೀಖಾನೆಯಲ್ಲಿ ಈಗಲೂ ಹೂತುಹೋಗಿರುವ ಮಾನವ ಹಕ್ಕುಗಳನ್ನು ನಾವು ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ. ಮನುಷ್ಯನೇ ಇಷ್ಟೆಲ್ಲ ಭೀಕರತೆಗೆ ತುತ್ತಾಗಿರುವಾಗ ವಸುಂಧರೆಯ ಜಲಚರಗಳ ಬಗ್ಗೆ ಮಾತನಾಡುವುದಕ್ಕೇ ಭಯವಾಗುತ್ತದೆ! 

ಇಷ್ಟಾಗಿಯೂ ಮೊನ್ನೆ ಅಚಾನಕ್ಕಾಗಿ ಬಂದ  ವಿಚಿತ್ರ ಹುಳವೊಂದನ್ನು ಮೆತ್ತಗೆ ಕಿಟಕಿಯಿಂದ ತಳ್ಳಿ ಸಮಾಧಾನಪಟ್ಟೆ. ಅದರ ಚಿತ್ರಗಳನ್ನು ತೆಗೆಯಲು ಮರೆಯಲಿಲ್ಲ. ಮನೆಯೊಳಗೆ ಬಂದ ಮಂಗಕ್ಕೆ ಕೇವಲ ಬಾಳೆಹಣ್ಣು, ಶೇಂಗಾ ಬೀಜವೇ ಸಿಗುತ್ತದೆ ಎಂದು ಈಗಲೂ ಅಚ್ಚರಿಯಿಂದ ನೋಡುತ್ತೇನೆ. ನಕ್ಷತ್ರದ ಹಾಗೋ, ಜ್ಯಾಮಿತಿಯ ಕರಾರುವಾಕ್ಕಾದ ಗೆರೆಗಳನ್ನು ಯಾರೋ ಕಂಪ್ಯೂಟರಿನಲ್ಲಿ ಬರೆದ ಹಾಗೋ ಅರಳಿದ ಹೂವುಗಳನ್ನು, ಮೇಲೆದ್ದ ಎಲೆಗಳನ್ನು ನೋಡುತ್ತ ಬೆರಗಾಗುತ್ತೇನೆ. ಹಾಗಾದರೆ ಜೇಡ ಕಟ್ಟುವ ಬಲೆಗೆ ಅಳತೆ ಹೇಳಿಕೊಟ್ಟವರಾರು ಎಂದು ನನಗೆ ಈಗಲೂ ಗೊತ್ತಾಗಿಲ್ಲ. ಅನಾನಸಿನ ಮೇಲೆ ಗಣಿತದ ಕ್ಲಿಷ್ಟ ಫಿಬೋನಾಚಿ ಸರಣಿಯಂತೆ ಎಳೆದೆಳೆದ ಚೌಕಗಳು ಕಾಣಿಸಿಕೊಳ್ಳುತ್ತವೆ! ಮಜಾ ಅಂದ್ರೆ ಇಷ್ಟೆಲ್ಲ ಮುಂದುವರಿದ ನಮ್ಮ ಮನುಕುಲಕ್ಕೆ ರಾತ್ರೋರಾತ್ರಿ ಒಂದು ಮೊಳಕೆ ಒಡೆಯುವ ಗುಟ್ಟಿನ ಅನುಕರಣೆಯೂ ಸಾಧ್ಯವಾಗಿಲ್ಲ; ದೊಡ್ಡ ಮರವನ್ನು ನಾವಾಗೇ ಬೆಳೆಸುವುದಂತೂ ದೂರದ ಮಾತು. ಅವೆಲ್ಲ ಅದಾಗೇ ಆಗಬೇಕು. 

 

ದೊಡ್ಡ ಆಲದ ಮರಗಳ ಬಿಳಲುಗಳನ್ನು ದಾಟಿಯೇ ಚಂದ್ರಯಾನದ ನಿಯಂತ್ರಣ ಕೇಂದ್ರ ಬ್ಯಾಲಾಳುವಿಗೆ ಹೋಗಬೇಕು! ಆ ಆಲದ ಮರವನ್ನು ನೋಡಿದರೆ ನಿಮಗೆ ಜೀವಜಾಲದ ಒಂದು ಪುಟ್ಟ ವಿಶ್ವರೂಪ ಕಾಣುತ್ತದೆ. ಚಂದ್ರನನ್ನು ತಿಳಿಯುವ ದಾಪುಗಾಲಿನ ಕೆಳಗೆ ಎಷ್ಟೋ ಪುಟ್ಟ ಪುಟ್ಟ ಬದುಕುಗಳು ಅಡಗಿವೆ. ಮರೆತಿದ್ದೇ ಆದರೆ ನಾವು ಈ ವಸುಂಧರೆಯಿಂದ ಗಂಟು ಮೂಟೆ ಕಟ್ಟಬೇಕಾಗುತ್ತದೆ. ನಮ್ಮ ಬದುಕಿನ ಪರಂಪರೆ, ನಮ್ಮ ದೇಸಿ ಜೀವನಪದ್ಧತಿ, ನಮ್ಮ ಪಾರಂಪರಿಕ ಕಲಿಕೆಯ ಮನಸ್ಸು – ಎಲ್ಲ ಬಿಳಲುಗಳನ್ನೂ ಹರಡಿಕೊಂಡು ಬದುಕುವಲ್ಲಿ ಅರ್ಥವಿದೆ. 

ಕಲಿಯುವ ಹಾದಿಯಲ್ಲಿ ಏನೇನೋ ಇದೆ ಎಂದು ನನಗೆ ಅನ್ನಿಸುತ್ತಲೇ ಇರುತ್ತದೆ; ಅದಕ್ಕೇ ಇಷ್ಟೆಲ್ಲ ಬರೆದೆ. ಇಂಥ ಹಲವು ಅನುಭವಗಳನ್ನು ಹಂಚಿಕೊಳ್ಳಲು ಜೊತೆಗಿದ್ದ ನಿಮಗೆಲ್ಲ ನನ್ನ ವಂದನೆಗಳು. ’ಉದಯವಾಣಿ’ಯ ಸಂಪಾದಕೀಯ ಬಳಗಕ್ಕೆ ನನ್ನ ಅಭಿವಂದನೆಗಳು. 

ಗಮನಿಸಿ: ನೀವು ಮಾಹಿತಿ ಕೋರಿ ಕಾಗದ ಹಾಕಬಹುದು.

1 Comment

  1. Anonymous

    Your articles were very impressive.we miss a lot in Udayavani.Is there any chance to download all the Kaliyuga articles? Please keep writing

Leave a Reply

Theme by Anders Norén