ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ

‘ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಂಕುಚಿತಗೊಂಡ ಇಡೀ ಜಗತ್ತು ಈಗ ಒಂದು ಹಳ್ಳಿಯಂತಾಗುತ್ತಿದೆ. ಹಠಾತ್ ಒಳಸ್ಫೋಟದ ಮೂಲಕ ನಮ್ಮೆಲ್ಲ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಒಂದೆಡೆಗೆ ತರುತ್ತಿರುವ ಈ ವಿದ್ಯುತ್‌ವೇಗವು ಮನುಷ್ಯನ ಹೊಣೆಗಾರಿಕೆಯ ಅರಿವನ್ನು ತೀವ್ರ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದೇ ಈಗ ನೀಗ್ರೋ, ಹದಿಹರೆಯದ ಮತ್ತು ಇತರೆ ಎಲ್ಲ ಗುಂಪುಗಳ ಸನ್ನಿವೇಶಗಳನ್ನು ಬದಲಿಸಲಿದೆ. ಅವರನ್ನೆಲ್ಲ ಮಿತಿಯಲ್ಲಿಡಲು ಖಂಡಿತ ಆಗದು. ಎಲೆಕ್ಟ್ರಾನಿಕ್ ಮಾಧ್ಯಮದ ಕೃಪೆಯಿಂದಾಗಿ ಅವರೂ ನಮ್ಮ ಬದುಕಿನಲ್ಲಿ ಭಾಗಿಯಾಗುತ್ತಾರೆ; ಹಾಗೇ ನಾವೂ ಅವರ ಬದುಕಿನಲ್ಲಿ ಭಾಗಿಯಾಗುತ್ತೇವೆ.’

ಈ ಮಾತನ್ನು ೧೯೬೦ರ ದಶಕದ ಆರಂಭದಲ್ಲಿ ಹೇಳಿದವರು ಮಾರ್ಶಲ್ ಮೆಕ್‌ಲುಹಾನ್ ಎಂಬ ಕೆನಡಿಯನ್ ತತ್ವಶಾಸ್ತ್ರಜ್ಞ. ಅರಬ್ ದೇಶಗಳಲ್ಲಿ ಇತ್ತೀಚೆಗೆ ನಡೆದ ಕ್ರಾಂತಿಯೇ ಮೆಕ್‌ಲುಹಾನ್‌ನ ಈ ಮುನ್ನೋಟದ ಹೇಳಿಕೆಗೆ ತಾಜಾ ಸಮರ್ಥನೆ. ಒಂದು ಫೇಸ್‌ಬುಕ್‌ನಲ್ಲಿ, ಇನ್ನೊಂದು ಟ್ವಿಟರ್‌ನಲ್ಲಿ, ಅಥವಾ ಮತ್ತೊಂದು ಬ್ಲಾಗಿನಲ್ಲಿ ಬರೆದ ಕ್ರಾಂತಿಯ ಘೋಷಣೆಗಳೇ ಹಲವು ದೇಶಗಳ ಸರ್ವಾಧಿಕಾರಿಗಳ ಪತನಕ್ಕೆ ಕಾರಣವಾಗಿದ್ದು ಈಗ ಹೊಸ ಇತಿಹಾಸ.

ಶತಮಾನಗಳ ಹಿಂದೆಯೇ ಭವಿಷ್ಯ ಬರೆದ ಎನ್ನಲಾದ ನಾಸ್ಟ್ರಾಡಾಮಸ್‌ನನ್ನು ನೀವು ನಂಬದೇ ಇರಬಹುದು. ಆದರೆ ಅರ್ಧ ಶತಮಾನದ ಹಿಂದೆಯೇ ವಾಚಾಳಿಯ ಥರ ಕಾಣಿಸಿಕೊಂಡರೂ ಮಾಧ್ಯಮದ ಭವಿಷ್ಯವಾಣಿಗಳನ್ನು ನುಡಿದ ಮೆಕ್‌ಲುಹಾನ್‌ರನ್ನು ನಂಬಲೇಬೇಕು. ಉದಾಹರಣೆಗೆ ವಿಶ್ವಗ್ರಾಮ (ಗ್ಲೋಬಲ್ ವಿಲೇಜ್) ಎಂಬ ಪರಿಕಲ್ಪನೆ ಯನ್ನು ತಂದವರೇ ಮೆಕ್‌ಲುಹಾನ್. ನಾವು ಪುಸ್ತಕಗಳನ್ನು ಓದುವುದು, ವಿಡಿಯೋ ನೋಡುವುದು, ರೇಡಿಯೋ ಕೇಳುವುದು, ಮಾಧ್ಯಮವನ್ನು ಅನುಭವಿಸುವುದು – ಎಲ್ಲವೂ ಬದಲಾಗಲಿದೆ ಎಂದು ಮೆಕ್‌ಲುಹಾನ್ ಹೇಳಿದ್ದರು. ಈಗ ಚಾಲ್ತಿಗೆ ಬರುತ್ತಿರುವ ಪಿಸಿ ಟ್ಯಾಬ್ಲೆಟ್‌ಗಳನ್ನು ನೋಡಿ; ಅಥವಾ ೩ಜಿ, ೪ಜಿ ಮೊಬೈಲ್ ಸಂಪರ್ಕಗಳನ್ನು ಗಮನಿಸಿ. ಮೆಕ್‌ಲುಹಾನ್ ಮಾತುಗಳು ಅದೇ ಸೊಗಡು, ಅದೇ ಸತ್ಯವನ್ನು ತೋರ್ಪಡಿಸಿದ್ದು ಖಚಿತವಾಗುತ್ತದೆ. ನನ್ನದೇ ಸಣ್ಣ ಉದಾಹರಣೆ ತೆಗೆದುಕೊಂಡರೆ… ಟಿಬೆಟಿನ ಯುವಕನೊಬ್ಬ ತನ್ನ ದೇಹಕ್ಕೇಬೆಂಕಿ ಹಚ್ಚಿಕೊಂಡು ಪ್ರತಿಭಟಿಸಿದ ಸುದ್ದಿ ಬಂದ ಈ ಹೊತ್ತಿನಲ್ಲಿ (೨೭ ಮಾರ್ಚ್  ನನ್ನ ಹಳೆಯ ಬ್ಲಾಗ್‌ಸ್ಪಾಟ್ ಬ್ಲಾಗಿನ ಪುಟಗಳನ್ನು ತೆರೆದೆ. ಟಿಬೆಟಿನ ಹೋರಾಟವನ್ನು ಬೆಂಬಲಿಸಿ ೨೦೦೪ರಲ್ಲಿ ನಾನು ಬರೆದ ಬ್ಲಾಗ್, ನನ್ನ ಬದುಕಿನ ಮೊದಲ ಮುಕ್ತ ಅಭಿವ್ಯಕ್ತಿಯಾಗಿತ್ತು. ‘ಬನ್ನಿ, ಟಿಬೆಟನ್ ಹೋರಾಟವನ್ನು ಬೆಂಬಲಿಸೋಣ’ ಎಂದು ಅದರಲ್ಲಿ ಕನವರಿಸಿದ್ದೆ. ಅಂದಿನಿಂದ ಇಂದಿನವರೆಗೆ ಟಿಬೆಟಿನ ಹೋರಾಟವೂ ನಡೆಯುತ್ತಲೇ ಇದೆ. ಬ್ಲಾಗಿಂಗ್ ಬೆಳೆದಿದೆ. ನಾನೇನೋ ೨೦೦೪ರಲ್ಲಿ ಬರೆದೆ. ಇದಕ್ಕಿಂತ ಮುನ್ನವೇ ತಮಗನ್ನಿಸಿದ್ದನ್ನೆಲ್ಲ ಬರೆದವರೂ ಇರಬಹುದು. ಎಲ್ಲರ ಎದೆಯಲ್ಲೂ ಒಂದೇ ತಹತಹವಿತ್ತು: ಬರೆಯಬೇಕು; ಬರೆದಿದ್ದನ್ನು ನಾಲ್ಕು ಜನ ಓದಬೇಕು. ನನ್ನ ಅನಿಸಿಕೆ, ಭಾವ, ನೋವು, ನಲಿವು ಎಲ್ಲವೂ ವಿಶ್ವವ್ಯಾಪಿ ಅಂತರಜಾಲದ ಬ್ಲಾಗ್ ಭಿತ್ತಿಗಳಲ್ಲಿ ಪ್ರಕಟವಾಗಬೇಕು. ಅದೀಗ ಅಸಂಖ್ಯ ಜನರ ಭಾವನೆಯಾಗಿದೆ; ವಾಸ್ತವವೂ ಆಗಿದೆ.

ವಿಶ್ವಗ್ರಾಮವಾದ ಜಗತ್ತು

ನಿಜವಾದ ಅರ್ಥದಲ್ಲಿ ಈಗ ಜಗತ್ತು ವಿಶ್ವಗ್ರಾಮವಾಗಿದೆ. ೬೦ ಸಾವಿರ ವರ್ಷಗಳ ಹಿಂದೆಯೇ ಆಫ್ರಿಕಾದಿಂದ ಹೊರಟ ಮನುಷ್ಯರು ಇಡೀ ವಿಶ್ವವನ್ನೇ ವ್ಯಾಪಿಸಿ ಜಾಗತೀಕರಣಕ್ಕೆ ಕಾರಣವಾದರು. ಈಗ ಮೈಕ್ರೋವೇವ್ ತರಂಗಳ ನೆರವಿನಿಂದ ನಾವು ಕ್ಷಣ ಮಾತ್ರದಲ್ಲಿ ಯಾರನ್ನಾದರೂ ತಲುಪಿ ಮಾತನಾಡುವ ಹಂತಕ್ಕೆ ಬಂದಿದ್ದೇವೆ. ಆಗ ಮನುಕುಲ ವ್ಯಾಪಕವಾಗಿ ಹರಡಿತು. ಈಗ ಮನುಕುಲವು ವಿಶ್ವಗ್ರಾಮದಲ್ಲಿ ಬದುಕಿದೆ. ಅದಕ್ಕೆಂದೇ ಈಗ ಕೋಟ್ಯಂತರ ಜನ ಬ್ಲಾಗಿಂಗ್ ಮಾಡುತ್ತಿದ್ದಾರೆ; ಅದೇ ಕೆಲವರಿಗೆ ಬದುಕು ಕೊಟ್ಟಿದೆ. ಬ್ಲಾಗಿಂಗ್‌ನಿಂದ ಹಲವು ದೇಶಗಳು ತತ್ತರಿಸಿವೆ; ಸಾಮ್ರಾಜ್ಯಗಳು ಮುಳುಗಿವೆ; ಹೊಸ ಉತ್ಪನ್ನಗಳು ತಲೆಯೆತ್ತಿವೆ; ಸಂಬಂಧಗಳು ಹುಟ್ಟಿಕೊಂಡಿವೆ – ಅಳಿದಿವೆ; ಸ್ನೇಹದ ಮಾತು ದ್ವೇಷವಾಗಿದ್ದೂ ಇದೆ; ಸುದ್ದಿಜಗತ್ತು ಕಳೆಗಟ್ಟಿದೆ. ಪತ್ರಿಕೆಗಳು ಬಚ್ಚಿಟ್ಟದ್ದನ್ನು ಜನ ಬಿಚ್ಚಿಟ್ಟಿದ್ದಾರೆ; ಪತ್ರಿಕೆ ಕಾಣದ್ದನ್ನು ಕಂಡ ಜನ ಅವನ್ನೆಲ್ಲ ದಾಖಲಿಸಿ ಪತ್ರಿಕಾರಂಗದ ಚಹರೆಯನ್ನೇ ಬದಲಿಸಿದ್ದಾರೆ; ಆಂದೋಳನಗಳು ಬೆಳೆದಿವೆ; ಸಮುದಾಯದ ಚಿಂತನೆ ವಿಶಾಲವಾಗಿದೆ; ಜೊತೆಗೇ ಬಂಡವಾಳಶಾಹಿಗಳ ಸ್ವಾರ್ಥವೂ ಚಿಗುರಿದೆ.

ಹೌದೆ? ಜಗತ್ತಿನ ಘಟನೆಗಳೆಲ್ಲವೂ ಬ್ಲಾಗಿಂಗ್‌ನ್ನೇ ಆಧರಿಸಿವೆಯೆ? ‘ನನಗೆ ಬ್ಲಾಗಿಂಗ್ ಎಂದರೆ ಗೊತ್ತೇ ಇಲ್ಲವಲ್ಲ? ಆದರೂ ನಾನು ಬ್ಲಾಗಿಂಗ್‌ನ ಪರಿಣಾಮಕ್ಕೆ ಒಳಗಾಗಿದ್ದೇನೆಯೆ? ಬ್ಲಾಗಿಂಗ್ ಎನ್ನುವುದು ಅಂತರಜಾಲ (ಇಂಟರ್‌ನೆಟ್) ಮತ್ತು ಕಂಪ್ಯೂಟರಿಗೆ ಸಂಬಂಧಿಸಿದ್ದಾದರೆ, ಅವರೆಡೂ ಇಲ್ಲದ ಭಾರತದಂಥ ದೇಶಗಳಲ್ಲಿ ಬ್ಲಾಗಿಂಗ್ ಹೇಗೆ ಪರಿಣಾಮ ಬೀರುತ್ತದೆ? ಜಗತ್ತಿನ ವ್ಯವಹಾರಗಳೆಲ್ಲವೂ ಬ್ಲಾಗಿಂಗ್‌ನ್ನೆ ಅವಲಂಬಿಸಿವೆಯೆ? ಭೌತಿಕ ಜಗತ್ತಿನಲ್ಲಿ ನಡೆಯುವ ಎಲ್ಲಾ ಘಟನೆಗಳೂ ಬ್ಲಾಗಿಂಗ್‌ನ ಮಾಯೆಯೊಳಗೇ ಇವೆಯೆ?’ – ಹೀಗೆ ನಿಮ್ಮನ್ನು ಹಲವು ಪ್ರಶ್ನೆಗಳು ಕಾಡುವುದು ಸಹಜ.

ಬ್ಲಾಗಿಂಗ್ ಬೆಳವಣಿಗೆಗೆ ನೆರವಾದ ಘಟನೆಗಳು

೨೦೦೧ರ ಸೆಪ್ಟೆಂಬರ್ ೧೧ರ (ನೈನ್ ಇಲೆವನ್) ಘಟನೆ ನೆನಪಿದೆ ತಾನೆ? ವಿಶ್ವ ವ್ಯಾಪಾರ ಕೇಂದ್ರ ಕಟ್ಟಡಗಳು ಭಯೋತ್ಪಾದಕರಿಗೆ ಆಹುತಿಯಾಗಿದ್ದು? ಬಹುಶಃ ಅಂದಿನಿಂದಲೇ ಬ್ಲಾಗಿಂಗ್ ಕೂಡಾ ಮಾಧ್ಯಮಕ್ಕೆ ಪರ್ಯಾಯ ಆಗಬಹುದು ಎಂಬ ಸಾಧ್ಯತೆಯು ನಿಚ್ಚಳವಾಯಿತು. ‘ನೀವೇ ಮಾಡಿ ನೋಡುವ ಜರ್ನಲಿಸಂ’ ಅಂದು ಮೂಡಿತು. ತಮ್ಮ ಕಣ್ಣೆದುರೇ ನಡೆದ ಘಟನೆಗಳನ್ನು ಜನ ವರದಿ ಮಾಡಿದರು; ಛಾಯಾಚಿತ್ರಗಳನ್ನು ಕಳಿಸಿದರು; ದುರಂತದ ಕಥೆಗಳನ್ನು ಬರೆದರು. ೨೦೦೩ರ ಫೆಬ್ರುವರಿ ೩ರಂದು ಕೊಲಂಬಿಯಾ ಶಟ್ಲ್ (ಬಾಹ್ಯಾಕಾಶ ನೌಕೆಯ) ದುರಂತ ನಡೆದಾಗ ‘ಡಲ್ಲಾಸ್ ಮಾರ್ನಿಂಗ್ ನ್ಯೂಸ್‌ಪೇಪರ್’ ಮತ್ತು ನಾಸಾ ಸಂಸ್ಥೆಗಳು ಸಾರ್ವಜನಿಕರಿಗೆ ಒಂದು ಮನವಿ ಮಾಡಿಕೊಂಡವು: ‘ಕಣ್ಣಿಗೆ ಕಂಡಿದ್ದನ್ನು ವಿವರಿಸಿ, ಛಾಯಾಚಿತ್ರಗಳನ್ನು ಕಳಿಸಿ’ ಎಂದು. ಅದೇ ವರ್ಷದ ಫೆಬ್ರುವರಿ ೧೮ರಂದು ಬಿಬಿಸಿ ಮಾಡಿದ್ದೂ ಇದನ್ನೇ: ಇರಾಕ್ ದೇಶದೊಳಕ್ಕೆ ತನ್ನ ವರದಿಗಾರರನ್ನು ಕಳಿಸಲಾಗದೆಂಬ ಅನಿವಾರ್ಯತೆಯನ್ನು ಮನಗಂಡಿದ್ದ ಅದು ಅಲ್ಲಿನ ಜನರಿಗೆ ಮೊಬೈಲ್ ಮೂಲಕವೇ ಚಿತ್ರ, ವಿಡಿಯೋಗಳನ್ನು ಕಳಿಸಲು ವಿನಂತಿ ಮಾಡಿತು. ಜನರಿಂದ ಬಂದ ಸುದ್ದಿಮೌಲ್ಯ ಇರುವ ವಿಡಿಯೋ ಮತ್ತು ಚಿತ್ರಗಳನ್ನು ಬಿಬಿಸಿಯು ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿತು.

೨೦೦೪ರ ಡಿಸೆಂಬರ್ ಕೊನೆಯ ವಾರದ ಸುನಾಮಿ ದುರಂತ ಯಾರಿಗೆ ಗೊತ್ತಿಲ್ಲ? ಸುನಾಮಿಯ ಅಟ್ಟಹಾಸವನ್ನು ಮಾಧ್ಯಮಗಳ ಮೂಲಕ ಜನರು ನೋಡಿದ್ದಕ್ಕಿಂತ ಜನಸಾಮಾನ್ಯರೇ ತೆಗೆದ ವಿಡಿಯೋಗಳಿಂದ ಕಂಡಿದ್ದೇ ಹೆಚ್ಚು ಪರಿಣಾಮಕಾರಿಯಾಗಿತ್ತು. ಅದರಿಂದಲೇ ಪರಿಹಾರ ಕಾರ್ಯಗಳಿಗೆ ಹೆಚ್ಚು ಹೆಚ್ಚು ನೆರವು ಹರಿಯಿತು.

೨೦೦೫ರ ಜುಲೈ ೭ರಂದು ಲಂಡನ್ನಿನಲ್ಲಿ ಸರಣಿ ಬಾಂಬ್ ಸ್ಫೋಟಗಳಾದವು. ಆಗಲೂ ನಾಗರಿಕ ಪತ್ರಿಕೋದ್ಯಮವೇ ಮೇಲುಗೈ ಪಡೆಯಿತು. ೨೦೦೭ರ ಏಪ್ರಿಲ್ ೧೬ರಂದು ವರ್ಜೀನಿಯಾ ಟೆಕ್ ನರಮೇಧದಲ್ಲಿ ಮನೋವೈಕಲ್ಯದ ವ್ಯಕ್ತಿಯೊಬ್ಬ ೩೨ ಜನರನ್ನು ಗುಂಡಿಕ್ಕಿ ಸಾಯಿಸಿದ. ಸಿಎನ್‌ಎನ್ ಸುದ್ದಿಸಂಸ್ಥೆಗೆ ಈ ಕುರಿತು ಆ ಶಾಲೆಯ ವಿದ್ಯಾರ್ಥಿಯೊಬ್ಬ ತೆಗೆದ ವಿಡಿಯೋಗಳೇ ಆಕರವಾದವು. ಅದೇ ವರ್ಷದ ಬರ್ಮಾದ ಪ್ರತಿಭಟನಾ ಹೋರಾಟಗಳೂ ಜಗತ್ತಿಗೆ ಕೆಲವೇ ಗಂಟೆಗಳಲ್ಲಿ ಗೊತ್ತಾಗಿದ್ದೇ ಇಂಥ ನಾಗರಿಕ ವರದಿಗಾರಿಕೆಯಿಂದ. ೨೦೦೮ರಲ್ಲಿ ಅಮೆರಿಕಾದ ಸೈನಿಕರು ಅಫಘಾನಿಸ್ತಾನದ ಮಕ್ಕಳನ್ನು ವಧಿಸಿದ ಸುದ್ದಿಯನ್ನು ಅಸೋಸಿಯೇಟೆಡ್ ಪ್ರೆಸ್ ಬ್ರೆಕ್ ಮಾಡಿದ್ದೇ ಮೊಬೈಲ್ ಮೂಲಕ ಚಿತ್ರೀಕರಿಸಿದ ದೃಶ್ಯಗಳಿಂದ. ೨೦೦೯ರಲ್ಲಿ ನಡೆದ ಇರಾನಿನ ಚುನಾವಣೆಗಳಿರಬಹುದು, ೨೦೧೧ರಿಂದೀಚೆಗೆ ನಡೆದ ಅರಬ್ ದೇಶಗಳ ಕ್ರಾಂತಿಗಳಿರಬಹುದು – ಎಲ್ಲವೂ ನಾಗರಿಕ ಜಾಗೃತಿ ಮತ್ತು ವರದಿಗಾರಿಕೆಯಿಂದಲೇ ನಡೆದಂಥವು. ಈ ಬಗೆಯ ನಾಗರಿಕ ವರದಿಗಾರಿಕೆ ಮತ್ತು ಕ್ರಿಯಾಶೀಲ ಪ್ರಯೋಗಗಳೇ ದೇಶಗಳ ಒಳಗೆ ಮತ್ತು ಹೊರಗೆ  ತೀವ್ರ ಪರಿಣಾಮ ಬೀರಿದ್ದಂತೂ ನಿಚ್ಚಳ.

೨೦೧೦ರಲ್ಲಿ ಹೈಟಿಯಲ್ಲಿ ಭೂಕಂಪ ಘಟಿಸಿದಾಗ ೨೩ ಲಕ್ಷ ಜನ ಟ್ವೀಟ್ ಮಾಡಿದ ವಾಕ್ಯಗಳಲ್ಲಿ ಹೈಟಿ ಮತ್ತು ರೆಡ್‌ಕ್ರಾಸ್ ಪದಗಳಿದ್ದವು. ಜೊತೆಗೆ ಎರಡು ಲಕ್ಷ ಟ್ವೀಟ್‌ಗಳಲ್ಲಿ ರೆಡ್‌ಕ್ರಾಸ್‌ಗೆ ದೇಣಿಗೆ ನೀಡಲು ಬಯಸುವ ೯೦೯೯೯ ಸಂಖ್ಯೆ ಇತ್ತು. ಇಂಥ ಸಮಾಜತಾಣಗಳಿಂದಲೇ ಹೈಟಿ ನಿರಾಶ್ರಿತರಿಗಾಗಿ ೮೦ ಲಕ್ಷ ಡಾಲರ್ ದೇಣಿಗೆ ಸಂಗ್ರಹವಾಯಿತು ಎಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಈಗ ದಿನಂಪ್ರತಿ ೧೨ ಲಕ್ಷ ಬ್ಲಾಗ್‌ಗಳು ಪ್ರಕಟವಾಗುತ್ತಿವೆ. ನೀವು ವಿಶ್ವದ ಅತ್ಯುತ್ತಮ ವೆಬ್‌ಸೈಟ್‌ಗಳನ್ನು ವಿಷಯಾನುಸಾರ ಪಟ್ಟಿ ಮಾಡಿದರೂ ಸರಿಯೆ, ಅವುಗಳಲ್ಲಿ ಒಂದಲ್ಲ ಒಂದು ನಾಗರಿಕರೇ ಬರೆದ ಬ್ಲಾಗ್ ಇರುತ್ತದೆ. ಕಂಪ್ಯೂಟರ್ ಮುಂದೆ ಕುಳಿತೋ, ಪಿಸಿ ಟ್ಯಾಬ್ಲೆಟ್ ಬಳಸಿಯೋ, ಮೊಬೈಲ್ ಮೂಲಕವೋ, – ಕ್ಷಣಕ್ಷಣಕ್ಕೂ ನಡೆಯುವ ಘಟನೆಗಳು ಚಕಚಕನೆ ಅಂತರಜಾಲದಲ್ಲಿ ಮೂಡುತ್ತವೆ. ಬಿಡುವಿದ್ದಾಗ ಗೂಗಲ್ ನ್ಯೂಸ್ ಪುಟವನ್ನು ಸುಮ್ಮನೇ ಗಮನಿಸಿ: ಒಂದೇ ನಿಮಿಷದ ಹಿಂದೆ ನಡೆದ ಭಾರೀ ಘಟನೆಯೊಂದರ ವಿವರ ಪರದೆಯ ಮೇಲೆ ಫಕ್ಕನೆ ಮೂಡುತ್ತದೆ; ಕೆಲವೊಮ್ಮೆ ಸುದ್ದಿಯ ಪಕ್ಕದಲ್ಲೇ ಘಟನೆ ಕುರಿತ ವಿಡಿಯೋವನ್ನೂ ನೋಡಬಹುದು.

 ಬಿಡುವಿದ್ದಾಗ ಗೂಗಲ್ ನ್ಯೂಸ್ ಪುಟವನ್ನು ಸುಮ್ಮನೇ ಗಮನಿಸಿ: ಒಂದೇ ನಿಮಿಷದ ಹಿಂದೆ ನಡೆದ ಭಾರೀ ಘಟನೆಯೊಂದರ ವಿವರ ಪರದೆಯ ಮೇಲೆ ಫಕ್ಕನೆ ಮೂಡುತ್ತದೆ; ಕೆಲವೊಮ್ಮೆ ಸುದ್ದಿಯ ಪಕ್ಕದಲ್ಲೇ ಆ ಘಟನೆ ಕುರಿತ ವಿಡಿಯೋವನ್ನೂ ನೋಡಬಹುದು.  

ಇಂಥ ನಾಗರಿಕ ಪತ್ರಿಕೋದ್ಯಮದ ಸಾಮಾಜಿಕ ಅಗತ್ಯವನ್ನು ಮನಗಂಡೇ ನೋಕಿಯಾ ಸಂಸ್ಥೆಯು ೨೦೦೭ರಲ್ಲೇ ಎನ್೯೫ ಎಂಬ ‘ವರದಿ ಸ್ನೇಹಿ’ ಮೊಬೈಲನ್ನು ಮಾರುಕಟ್ಟೆಗೆ ತಂದಿತ್ತು. ಅದಕ್ಕೊಂದು ಪುಟ್ಟ ಕೀಲಿಮಣೆ, ವಿಡಿಯೋಗ್ರಫಿ ಮಾಡಲು ಒಂದು ಸಣ್ಣ ಟ್ರೈಪಾಡ್ ಸ್ಟಾಂಡ್, ಸೋಲಾರ್ ಚಾರ್ಜರ್- ಇವಿಷ್ಟಿದ್ದವು. ಕುಗ್ರಾಮ ಗಳಿಂದ, ದೂರದೂರದ ಪ್ರದೇಶಗಳಿಂದ ವರದಿ ಮಾಡಲು ಇನ್ನೇನು ಬೇಕು ಹೇಳಿ!

ನಾಗರಿಕ ಪತ್ರಿಕೋದ್ಯಮ

ಹೀಗೆ ಬ್ಲಾಗಿಂಗ್ ತಂದ ಪತ್ರಿಕೋದ್ಯಮವನ್ನೇ ‘ನಾಗರಿಕ ಪತ್ರಿಕೋದ್ಯಮ’ ಅಥವಾ ಸಿಟಿಝನ್ ಜರ್ನಲಿಸಂ ಎಂದು ಕರೆದಿದ್ದೇವೆ. ಇಲ್ಲಿ ಬಳಕೆದಾರರೇ ಸುದ್ದಿಯನ್ನೂ ರೂಪಿಸುತ್ತಾರೆ. ತಂತ್ರಜ್ಞಾನದ ನೆರವಿನಿಂದ ಎಲ್ಲ ನಾಗರಿಕರೂ ವರದಿಗಾರರೇ ಆಗುತ್ತಾರೆ. ಪತ್ರಿಕೋದ್ಯಮದ ವೈಫಲ್ಯಗಳನ್ನೆಲ್ಲ ಇಲ್ಲಿ ತುಂಬಿಕೊಳ್ಳಬಹುದು.

ದಕ್ಷಿಣ ಕೊರಿಯಾದ ‘ಓಹ್ ಮೈ ನ್ಯೂಸ್’ ಎಂಬ ಜನರೂಪಿತ ಬ್ಲಾಗಿಂಗ್‌ನಲ್ಲಿ ೩೦ ಸಾವಿರಕ್ಕೂ ಹೆಚ್ಚು ನಾಗರಿಕ ವರದಿಗಾರರಿದ್ದಾರೆ. ಅವರೇ ಬರೆಯುವ ಈ ಸುದ್ದಿಗಳನ್ನು ದಿನವೂ ೨೦ ಲಕ್ಷ ಜನ ಓದುತ್ತಾರೆ. ಜಗತ್ತಿನ ಹಲವು ದೇಶಗಳಲ್ಲಿ ಇಂಥ ಸುಪ್ರಸಿದ್ಧ ಜನರೂಪಿತ ಸುದ್ದಿತಾಣಗಳಿವೆ. ಈ ವಿದ್ಯಮಾನವು ಹೀಗೇ ಮುಂದುವರಿದರೆ, ೨೦೨೧ರ ಹೊತ್ತಿಗೆ ಶೇ. ೫೦ರಷ್ಟು ಸುದ್ದಿಯನ್ನು ಜನರೇ ಬರೆಯುತ್ತಿರುತ್ತಾರೆ ಎಂದು ಮಾಧ್ಯಮ ವಿಶ್ಲೇಷಕರು ಲೆಕ್ಕ ಹಾಕಿದ್ದಾರೆ.ಲಂಡನ್ನಿನ `ಡೈಲಿ ಟೆಲಿಗ್ರಾಫ್’ ಪತ್ರಿಕೆಯ ವೆಬ್ ಆವೃತ್ತಿಯ ಶೇ. ೮ರಷ್ಟು ಓದುಗರು ಸಮಾಜತಾಣಗಳಿಂದಲೇ ಬರುತ್ತಾರೆ ಎಂಬುದು ಇದಕ್ಕೆ ಪುರಾವೆ ನೀಡುವ ಪುಟ್ಟ ನಿದರ್ಶನ. ಹಲವು ಬಗೆಯ ಸಾರ್ವಜನಿಕ ನಿಧಿಗಳಿಂದಲೇ ನಡೆಯುವ, ಸ್ವತಂತ್ರ ವೃತ್ತಿಪರ ವರದಿಗಾರಿರುವ ‘ಪ್ರೊಪಬ್ಲಿಕಾ’ ಸುದ್ದಿತಾಣವು ಈಗ ದಿ ಪೋಸ್ಟ್, ದಿ ನ್ಯೂಯಾರ್ಕ್ ಟೈಮ್ಸ್, ಸಿಬಿಎಸ್, ಎನ್‌ಬಿಸಿ ಮತ್ತು ಎಬಿಸಿಯಂಥ ಖ್ಯಾತ ಸುದ್ದಿ ಸಂಸ್ಥೆಗಳಿಗೆ ಅಗ್ರ ತನಿಖಾ ಲೇಖನಗಳನ್ನು ಕೊಡುತ್ತಿದೆ. ಸಮುದಾಯದಿಂದಲೇ ನಡೆಯುವ ಈ ತಾಣವು ಒಮ್ಮೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನೂ ಪಡೆದಿದೆ! ಅಂದಮೇಲೆ ಜನರೂಪಿತ ಪತ್ರಿಕೋದ್ಯಮದ ಶಕ್ತಿಯನ್ನು ಊಹಿಸಿಕೊಳ್ಳಿ! ಅಮೆರಿಕಾ ಸರ್ಕಾರದ ೬೦೦೦ ಯೋಜನೆಗಳ ಪರಾಮರ್ಶೆ ಮಾಡಲು ‘ಹಫಿಂಗ್‌ಟನ್ ಪೋಸ್ಟ್’ ಎಂಬ ವಾರ್ತಾಪತ್ರವು ೫೦೦ಕ್ಕೂ ಹೆಚ್ಚು ಸ್ವಯಂಸೇವಕರನ್ನು ನೇಮಿಸಿತ್ತು.

ಸಮುದಾಯದ ಒಡೆತನವೇ ಸರಿ

ಅದೇನೇ ಇರಲಿ, ಜನರಿಗೆ ದಿನವೂ ಸುದ್ದಿ ಓದುವುದೆಂದರೆ ತುಂಬಾ ಇಷ್ಟ; ಹಲವರಿಗೆ ಅನಿವಾರ್ಯ. ಗೂಗಲ್ ನ್ಯೂಸ್ ತಾಣವು ಸುಪ್ರಸಿದ್ಧವಾಗಿದ್ದೂ ಇದೇ ಕಾರಣಕ್ಕೆ. ಆದರೆ ಮುಂದಿನ ದಿನಗಳಲ್ಲಿ ಎಲ್ಲ ಸುದ್ದಿಗಳೂ ಉಚಿತವಾಗಿ ಸಿಗುವುದಿಲ್ಲ. ಪುಕ್ಕಟೆ ಸುದ್ದಿ ಕೊಟ್ಟರೆ ನಮಗೆ ದಕ್ಕುವುದೇನು ಎಂದು ಮಾಧ್ಯಮ ಸಂಸ್ಥೆಗಳು ಮೂಗು ಮುರಿಯುತ್ತಲೇ ಇವೆ. ಪರಿಹಾರ? ಜನರೂಪಿತ ಪತ್ರಿಕೋದ್ಯಮ; ಅಥವಾ ಸಾಮುದಾಯಿಕ ಒಡೆತನದ ಪತ್ರಿಕೋದ್ಯಮ.

ಯಾವುದೇ ನಿರ್ದಿಷ್ಟ ವಿಷಯದಲ್ಲಿ ಅನುಭವ ಹೊಂದಿರದ ಪತ್ರಕರ್ತರಿಗಿಂತ ಜನರ ನಡುವೆ ಓಡಾಡುತ್ತಲೇ ವಿಷಯ ಪರಿಣತಿ ಪಡೆದ ಜನರ ವರದಿಗಾರಿಕೆಯೇ ಹೆಚ್ಚು ನಿಖರವೂ, ಸ್ಪಷ್ಟವೂ ಆಗಿರುತ್ತದೆ ತಾನೆ? ಮುಖ್ಯವಾಹಿನಿ ಪತ್ರಿಕೆಗಳು ಗಮನಿಸದ ಸಾಮಾಜಿಕ ಬೆಳವಣಿಗೆಗಳು, ಘಟನೆಗಳು, ನಾಗರಿಕ ಸಮಸ್ಯೆಗಳು ಇಲ್ಲಿ ಚರ್ಚೆಗೆ ಬರುತ್ತವೆ. ಮುಖ್ಯವಾಗಿ ಇಲ್ಲಿ ಸುದ್ದಿ ಮಾಡುವ ಕ್ರಿಯೆಗೆ ವಾಣಿಜ್ಯ ಉದ್ದೇಶ ಇರುವುದಿಲ್ಲ. ಆದ್ದರಿಂದ ಸುದ್ದಿರಚನೆಯಲ್ಲಿ ಹೆಚ್ಚು ಸ್ವಾತಂತ್ರ್ಯವೂ ಇದೆ. ಒಂದರ್ಥದಲ್ಲಿ ಪತ್ರಿಕೋದ್ಯಮವನ್ನು ಬಂಡವಾಳಶಾಹಿಗಳಿಂದ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬ್ಲಾಗಿಗರ ಪಾತ್ರ ತುಂಬಾ ಮುಖ್ಯವಾಗುತ್ತಿದೆ. ವರದಿಗಾರಿಕೆಯ ಪ್ರಕ್ರಿಯೆಯನ್ನೇ ಬದಲಿಸುವ ಈ ಮಹಾನ್ ಕ್ರಾಂತಿಗೆ ದಿನ ದೂರವಿಲ್ಲ.

 ಪತ್ರಿಕೋದ್ಯಮವನ್ನು ಬಂಡವಾಳಶಾಹಿಗಳಿಂದ ಬಿಡುಗಡೆ ಗೊಳಿಸುವ ನಿಟ್ಟಿನಲ್ಲಿ ಬ್ಲಾಗಿಗರ ಪಾತ್ರ ತುಂಬಾ ಮುಖ್ಯವಾಗುತ್ತಿದೆ. ವರದಿಗಾರಿಕೆಯ ಪ್ರಕ್ರಿಯೆಯನ್ನೇ ಬದಲಿಸುವ ಈ ಮಹಾನ್ ಕ್ರಾಂತಿಗೆ ದಿನ ದೂರವಿಲ್ಲ. 

 ಫೇಸ್ ಬುಕ್, ಟ್ವಿಟರ್, ಆರ್ಕುಟ್, – ಇವೆಲ್ಲವೂ ನೋಡಲು ಬೇರೆ ಬೇರೆ ಬಗೆಯ ಸೇವೆಗಳಂತೆ ಕಂಡರೂ, ಎಲ್ಲವೂ ಬ್ಲಾಗಿಂಗ್‌ನ ವಿಭಿನ್ನ ಚಹರೆಗಳೇ. ನಿಮ್ಮದೇ ಸ್ವಂತ ಜಾಲತಾಣವಿದ್ದು, ಅದರಲ್ಲಿ ನಿಮ್ಮ ಅಭಿವ್ಯಕ್ತಿಯನ್ನು ದಾಖಲಿಸಿದರೆ ಅದೂ ಬ್ಲಾಗಿಂಗ್ ಆಗುತ್ತದೆ. ಆದ್ದರಿಂದ ಬ್ಲಾಗಿಂಗ್ ಎಂದರೆ ಕೇವಲ ಬ್ಲಾಗ್‌ಸ್ಪಾಟ್, ವರ್ಡ್‌ಪ್ರೆಸ್‌ಗಳಲ್ಲಿ ಬರೆಯುವ ವಿಚಾರ ಎಂಬ ಭಾವನೆ ಬೇಡ. ಬ್ಲಾಗಿಂಗ್ ಎಂದರೆ ಅನುಭವಗಳ, ಅನಿಸಿಕೆಗಳ ದಾಖಲೆಯ ಪ್ರಕ್ರಿಯೆ ಮಾತ್ರ. ಅದಕ್ಕೆ ಇದುವರೆಗೆ ಉಲ್ಲೇಖಿಸಿದ ಯಾವುದೇ ಇಂಟರ್‌ನೆಟ್ ಚಟುವಟಿಕೆಯೂ ವೇದಿಕೆಯಾಗಬಹುದು.

ಹಾಗಾದರೆ ಬ್ಲಾಗಿಂಗ್‌ನಲ್ಲಿ ತಪ್ಪುಗಳೇ ಆಗುವುದಿಲ್ಲವೆ? ಖಂಡಿತ ತಪ್ಪುಗಳಾಗುತ್ತವೆ. ಹಲವು ಅನನುಭವಿಗಳೂ ಕಚ್ಚಾ ಮಾಹಿತಿಯನ್ನು ತುಂಬುತ್ತಿರುವುದು ನಿಜ. ಆದರೆ ಕಾಲಕ್ರಮೇಣ ವಿಶ್ವಾಸಾರ್ಹತೆ ಹೊಂದಿದ ಜಾಲತಾಣಗಳು ಮಾತ್ರ ಉಳಿದುಕೊಳ್ಳುತ್ತವೆ ಎಂಬ ನಿರೀಕ್ಷೆ ಇದೆ.

ಈ ಬಗೆಯ ಭ್ರಮಾಲೋಕವೇ ವಾಸ್ತವ ಜಗತ್ತಿನ ಪ್ರತಿನಿಧಿ ಆಗುವುದು ಸರಿಯೇನಲ್ಲ ಎಂಬ ವಾದವೂ ಇದೆ. ಆನ್‌ಲೈನ್ ಸಮೂಹದ ಹುಚ್ಚು ಚಟುವಟಿಕೆಗಳಿಗಿಂತ ಖಾಸಗಿ ಸೃಜನಶೀಲತೆಯೇ ಹೆಚ್ಚು ಮೌಲಿಕ ಎಂದು ‘ಭ್ರಮಾವಾಸ್ತವ’ದ (ವರ್ಚುಯಲ್ ರಿಯಾಲಿಟಿ) ರೂವಾರಿ ಜೆರೋನ್ ಲೇನಿಯೆರ್ ತನ್ನ ‘ಯೂ ಆರ್ ನಾಟ್ ಎ ಗ್ಯಾಜೆಟ್’ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ. ಜಗತ್ತನ್ನೇ ಆಳುತ್ತಿರುವ ವಿಕಿಪೀಡಿಯಾವು ಖಾಸಗಿ ಧ್ವನಿಗಳನ್ನು ಹತ್ತಿಕ್ಕುತ್ತದೆ; ಫೇಸ್‌ಬುಕ್ ತಾಣವು ಹಲವು ಚಹರೆಗಳಿಗೆ ದಾರಿ ಮಾಡುತ್ತದೆ; ಜನ ಗೂಗಲ್ ಸರ್ಚ್‌ನ ಮೊದಲ ಪುಟದಲ್ಲಿ ಬಂದಿದ್ದನ್ನೇ ನಂಬುವ ಮೋಸದ ಬೆಳವಣಿಗೆ ಕಂಡಿದೆ; – ಇದು ಲೇನಿಯೆರ್ ವಾದ. ಇದೇನು ಹೊಸದಲ್ಲ. ಭೌತಿಕ ಜಗತ್ತಿನಲ್ಲಿ ಇರುವ ಎಲ್ಲ ಲೋಪದೋಷಗಳೂ, ಕ್ಷುದ್ರ ವ್ಯಕ್ತಿತ್ವಗಳೂ, ವ್ಯವಹಾರಗಳೂ ಇಂಟರ್‌ನೆಟ್ ಲೋಕದಲ್ಲೂ ಇರುವುದು ಸಹಜ. ಆದ್ದರಿಂದ ಒಳ್ಳೆಯದನ್ನಷ್ಟೇ ಹುಡುಕುವ ಜಾಯಮಾನ ಬೆಳೆಸಿಕೊಳ್ಳುವುದಷ್ಟೇ ಮುಖ್ಯ!

ಭಾರತ, ಕರ್ನಾಟಕ ಮತ್ತು ಬ್ಲಾಗಿಂಗ್

ಭಾರತದಲ್ಲೂ ಬ್ಲಾಗಿಂಗ್ ಕ್ರಾಂತಿಗೆ ರಭಸವೇನೋ ಬಂದಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಜನ ಬ್ಲಾಗಿಂಗ್ ಮಾಡುತ್ತಿದ್ದಾರೆ. ಆರಂಭದಲ್ಲಿ ಹೆಚ್ಚಾಗಿ ಪತ್ರಕರ್ತರೇ ಬ್ಲಾಗಿಂಗ್ ಪ್ರವೇಶಿಸಿದ್ದರು; ಈಗ ಹಲವು ಬಗೆಯ ವೃತ್ತಿಗಳಲ್ಲಿ ತೊಡಗಿದವರೂ ಬ್ಲಾಗಿಸುತ್ತಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡದ ಬ್ಲಾಗಿಂಗ್ ಸಮುದಾಯವು ಇನ್ನೂ ಮೊದಲ ಹಂತದಲ್ಲೇ ಇದೆ. ‘ಅಸಿಸ್ಟೆಡ್ ಬ್ಲಾಗಿಂಗ್’ ಮೂಲಕ ನಿರಕ್ಷರಿಗಳ ಅಭಿವ್ಯಕ್ತಿಗೂ ನೆರವಾದರೆ, ಇಂಟರ್‌ನೆಟ್‌ಲೋಕದಲ್ಲೂ ಸಮಾನತೆ ಇರುತ್ತದೆ. ಅಕ್ಷರ ಬರದ ಮತದಾರರೂ, ಸಾಕ್ಷರ ಮತದಾರರೂ ಪ್ರಜಾತಂತ್ರದಲ್ಲಿ ಭಾಗವಹಿಸುವುದು ಎಷ್ಟು ಮುಖ್ಯವೋ, ಬ್ಲಾಗಿಂಗ್ ಲೋಕದಲ್ಲೂ ಅಕ್ಷರ ಬರದವರೂ ಕಾಣಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಸಾಮುದಾಯಿಕ ಪ್ರಯತ್ನಗಳಾಗಬೇಕಿದೆ.

ಸುದ್ದಿರಚನೆಯಲ್ಲಿ ಭಾರತೀಯ ಬ್ಲಾಗಿಗರು ತುಂಬಾ ಹಿಂದಿದ್ದಾರೆ ಎಂದರೆ ಅದು ನಿಜ. ಅಲ್ಲಲ್ಲಿ ಕೆಲವು ಪತ್ರಕರ್ತರು ಬರೆಯುವುದು ಬಿಟ್ಟರೆ, ಜನರೂಪಿತ ಪತ್ರಿಕೋದ್ಯಮ ಇನ್ನೂ ಬೆಳೆದಿಲ್ಲ. ಅದಕ್ಕೆ ತುಂಬಾ ಅವಕಾಶಗಳಿವೆ. ಕನ್ನಡದ ‘ವರ್ತಮಾನ’ ವೆಬ್‌ಸೈಟ್ ಈ ನಿಟ್ಟಿನಲ್ಲಿ ಜನರೂಪಿತ ವರದಿಗಾರಿಕೆಯ ಒಳ್ಳೆಯ ಯತ್ನ. ಸಾಮೂಹಿಕ ಬ್ಲಾಗಿಂಗ್‌ಗೆ ‘ಸಂಪದ’ ಹುಟ್ಟಿ ಹಲವು ವರ್ಷಗಳಾದವು. ಆ ಮಟ್ಟಿಗೆ ಕನ್ನಡಿಗರದು ದೊಡ್ಡ ಸಾಧನೆಯೇ. ಸುಮಾರು ಸಾವಿರ ಬ್ಲಾಗುಗಳಿರುವ ಕನ್ನಡ ಬ್ಲಾಗ್‌ಲೋಕದಲ್ಲಿ ನಿರಂತರವಾಗಿ ಬರೆಯುತ್ತಿರುವವರ ಸಂಖ್ಯೆ ಕಡಿಮೆಯೇ.

ದಿನಪತ್ರಿಕೆಗಳು, ಬ್ಲಾಗಿಂಗ್ ಮತ್ತು ಕಾನ್ವರ್ಜೆನ್ಸ್

ಬ್ಲಾಗ್‌ಗಳಲ್ಲಿ ಪ್ರಕಟವಾಗುವ ಲೇಖನಗಳನ್ನು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಸಂಸ್ಕೃತಿ ಈಗಷ್ಟೆ ಆರಂಭವಾಗಿದೆ. ಎಷ್ಟೆಂದರೂ ದಿನಪತ್ರಿಕೆಗಳಲ್ಲಿ ಸೀಮಿತ ಅವಕಾಶ. ಮಾಹಿತಿಸ್ಫೋಟದ ಈ ಯುಗದಲ್ಲೂ ಪತ್ರಿಕೆಗಳು ತಮ್ಮ ವರಮಾನದ ಅಗತ್ಯಕ್ಕೆ ತಕ್ಕಂತೆ ಸುದ್ದಿ, ಲೇಖನಗಳನ್ನು ಪ್ರಕಟಿಸುತ್ತಿವೆಯೇ ವಿನಾ ಮುಕ್ತ ಮತ್ತು ವಿಶಾಲ ಚರ್ಚೆಗೆ ಹೋಗುತ್ತಿಲ್ಲ. ಬ್ಲಾಗ್‌ಲೋಕದಲ್ಲಿ ಬರುತ್ತಿರುವ ಪ್ರಬುದ್ಧ ಬರಹಗಳನ್ನು, ನುಡಿಚಿತ್ರಗಳನ್ನು, ಸುದ್ದಿಯಾಗಬಲ್ಲ ಚಿತ್ರಗಳನ್ನು ದಿನಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಿಸಬೇಕು. ವೀಕ್ಷಕರು ಸೆರೆಹಿಡಿದ ವಿಡಿಯೊಗಳನ್ನು, ಟ್ವೀಟ್ ಮಾಡಿದ ಚುರುಕು ಮಾತುಗಳನ್ನು ಟಿವಿ ಚಾನೆಲ್‌ಗಳು ಪ್ರಸರಾರ ಮಾಡಬೇಕು. ಮಾಧ್ಯಮಗಳ ಇಂಥ ಕೊಡು-ಕೊಳ್ಳುವಿಕೆಯನ್ನೇ ಒಗ್ಗೂಡಿಸಿ ‘ಮೀಡಿಯಾ ಕಾನ್ವರ್ಜೆನ್ಸ್’ ಎಂದು ಕರೆಯುತ್ತಾರೆ.

ಮೊದಲು ಇಂಟರ್‌ನೆಟ್‌ನ್ನು ತನ್ನ ಬದ್ಧವೈರಿಯೇನೋ ಎಂಬಂತೆ ನೋಡಿದ ಮುದ್ರಣ ಮಾಧ್ಯಮವು ಈಗ ತನ್ನೆಲ್ಲಾ ಸುದ್ದಿಗಳನ್ನು ಇಂಟರ್‌ನೆಟ್ ಮೂಲಕವೇ ಸಿಂಗಾರಗೊಳಿಸುತ್ತಿರುವುದು ವಾಸ್ತವ. ಇಂಟರ್‌ನೆಟ್‌ನ ಮಾಹಿತಿಗಳನ್ನು ನೇರಾನೇರ ಎತ್ತುವ ಅಕ್ರಮಗಳಿಗೂ ಇದು ದಾರಿ ಮಾಡಿದೆ. ಇಂಥ ಅನೈತಿಕ ಮಾರ್ಗವನ್ನು ಬಿಟ್ಟು ಇಂಟರ್‌ನೆಟ್ ಆಧಾರಿತ ಸುದ್ದಿಗಳು- ಚಿತ್ರಗಳನ್ನು ಮೂಲ ಉಲ್ಲೇಖಿಸಿ ಪ್ರಕಟಿಸುವ ಸೌಜನ್ಯವನ್ನು ಪತ್ರಿಕೆಗಳು ತೋರಬೇಕಿದೆ. ಜನರೂಪಿತ ಮಾಹಿತಿಯನ್ನು ವರಮಾನ ಉದ್ದೇಶದ ಪತ್ರಿಕೆಯಲ್ಲಿ ಪುಕ್ಕಟೆ, ಅನುಮತಿಯಿಲ್ಲದೆ ಬಳಸಿಕೊಳ್ಳುವುದು ಸರ್ವಥಾ ಸಲ್ಲದು.

ಸಮಾಜತಾಣಗಳಲ್ಲಿ ಬರುವ ಕಾಮೆಂಟ್‌ಗಳನ್ನು ಟಿವಿ ಚಾನೆಲ್‌ಗಳು ಮತ್ತು ದಿನಪತ್ರಿಕೆಗಳು ಎತ್ತಿ ಪ್ರಕಟಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಇಲ್ಲೂ ಖೊಟ್ಟಿ ಮಾಹಿತಿಗಳನ್ನು ತುಂಬುವ, ಕದ್ದಿದ್ದನ್ನು ತನ್ನ ಸ್ವಂತದ್ದೆಂಬಂತೆ ತೋರಿಸುವಹಾಗೂ ನಕಲಿ ಟ್ವೀಟ್‌ಗಳನ್ನು ಪ್ರಕಟಿಸುವ ಸೋಮಾರಿ ಪತ್ರಿಕೋದ್ಯಮ ಕಾಲಿಟ್ಟಿದೆ. ಇಂಥದ್ದನ್ನು ಬ್ಲಾಗಿಗರೇ ಬಯಲುಮಾಡಬೇಕು.

ಬ್ಲಾಗಿಂಗ್ ಭವಿಷ್ಯ

ಹೀಗೆಯೇ ನಡೆಯುತ್ತದೆ ಎಂದು ಕರಾರುವಕ್ಕಾಗಿ ಹೇಳಲಾಗದಿದ್ದರೂ, ಮುಂದಿನ ದಿನಗಳಲ್ಲಿ ಇಂಥ ಬೆಳವಣಿಗೆಗಳನ್ನು ನಿರೀಕ್ಷಿಸುವುದು ತಪ್ಪಲ್ಲ: ಮಾಧ್ಯಮ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳ ಜೊತೆಗೇ ಬ್ಲಾಗ್‌ಗಳನ್ನೂ ಪ್ರಕಟಿಸುವ ಪರಿಪಾಠ ಈಗಲೇ ಇದೆ. ಈ ಪ್ರಯೋಗಗಳು ಎಲ್ಲಾ ಮಾಧ್ಯಮಗಳನ್ನೂ ಆವರಿಸಲಿವೆ. ಮಾಧ್ಯಮ ಸಂಸ್ಥೆಗಳ ವೆಬ್‌ಸೈಟ್‌ಗಳಿಂದ ಹಿಡಿದು ವಾಣಿಜ್ಯ ಉತ್ಪನ್ನದ ವೆಬ್‌ಸೈಟ್‌ಗಳ ವರೆಗೆ ಎಲ್ಲ ಬಗೆಯ ಸೇವೆ ನೀಡುವ ವೆಬ್‌ಸೈಟ್‌ಗಳಲ್ಲಿ ಬ್ಲಾಗಿಂಗ್ ಪುಟಗಳನ್ನು ಕಾಣಬಹುದು.

  • ಬರಲಿದೆ ವೆಬ್ ೩.೦ ಯುಗ : ಹೀಗೆ ಹುಟ್ಟಿಕೊಂಡ ವೈವಿಧ್ಯಮಯ ಸಾಮಾಜಿಕ ಅಭಿವ್ಯಕ್ತಿಯ ಸಾಧನಗಳ ಹೊಸ ಯುಗಕ್ಕೆ (ಇಂಟರ್‌ನೆಟ್ ಜಗತ್ತಿನಲ್ಲಿ ಒಂದೇ ದಶಕದಲ್ಲಿ ಹಲವು ಯುಗಗಳಿರಲು ಸಾಧ್ಯ!) ವೆಬ್ ೨.೦ ಎಂದು ಕರೆದಿದ್ದಾರೆ.
  • ಮುಂದಿನ, ಅಂದರೆ ವೆಬ್ ೩.೦ರ ಯುಗದಲ್ಲಿ ಏನೇನಿರಬಹುದು? ವೆಬ್ ೩.೦ರ ಯುಗದಲ್ಲಿ ಇಂಟರ್‌ನೆಟ್‌ನ ಭ್ರಮಾವಾಸ್ತವ ಮತ್ತು ಭೌತಿಕ ಜಗತ್ತುಗಳ ಸಮ್ಮಿಲನ ವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಟಿವಿ ಗುಣಮಟ್ಟದ ವಿಡಿಯೋಗಳನ್ನು ನೋಡಬಹುದು; ೩ಡಿ ಅಂದರೆ ಮೂರು ಆಯಾಮದ ಚಿತ್ರಗಳನ್ನು ಅನುಭವಿಸ ಬಹುದು (ಈಗಾಗಲೇ ನಿಮ್ಮ ಬಳಿ ೩ಡಿ ಕನ್ನಡಕವಿದ್ದರೆ ೩ಡಿ ಸಿನೆಮಾಗಳನ್ನು ನೋಡುವ ಅವಕಾಶ ಈಗಲೇ ದಕ್ಕಿದೆ); ವೈರ್‌ಲೆಸ್ – ಬ್ರಾಡ್‌ಬ್ಯಾಂಡುಗಳ ಅಸೀಮ ಲೋಕವೊಂದು ತೆರೆದುಕೊಳ್ಳಬಹುದು; ‘ಮೆಟಾವರ್ಸ್’ ಎಂಬ ಹೊಸ ಹೆಸರನ್ನೇ ಪಡೆದ ಈ ಲೋಕದಲ್ಲಿ ಗಣಕಯಂತ್ರಗಳೇ ಮನುಷ್ಯರಿಗಿಂತ ಹೆಚ್ಚು ಮಾಹಿತಿಗಳನ್ನು ಹೆಕ್ಕಿ ತೆಗೆಯಲೂಬಹುದು! ಉದಾಹರಣೆಗೆ, ನಿಮ್ಮ ಭಾಷೆ, ಅಭಿರುಚಿ, ಸಂಸ್ಕೃತಿ, ಸಮುದಾಯ, ಚಿಂತನೆಗಳ ಬಗ್ಗೆ ತಿಳಿದುಕೊಂಡ ಕಂಪ್ಯೂಟರ್‌ಗೆ, ನಿಮಗೆ ಬೇಕಾದ ಮಾಹಿತಿಗಳನ್ನಷ್ಟೇ ಆಯ್ದು ಕೊಡುವ ಸರ್ಚ್ ಇಂಜಿನ್ ಜೋಡಣೆಯಾಗಿರುತ್ತದೆ. ಇಂಥ ಯುಗದ ಅನಾವರಣಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆದಿವೆ. ಎಲ್ಲ ಬಗೆಯ ಮಾಹಿತಿಗಳನ್ನು (ಡಾಟಾ, ದತ್ತಾಂಶ) ಒಂದೇ ರೂಪದಲ್ಲಿ ಪಡೆದು ಬಳಸುವ ಅನುಕೂಲತೆಗಳನ್ನು ರೂಪಿಸಲು ಇಂಟರ್‌ನೆಟ್ ಸಮುದಾಯವು ಈಗ ‘ಸೆಮಾಂಟಿಕ್ ವೆಬ್’ ಎಂಬ ಚಳವಳಿಯನ್ನೇ ಆರಂಭಿಸಿದೆ.
  • ಇಲ್ಲೂ ಮಾರ್ಶಲ್ ಮೆಕ್‌ಲುಹಾನ್ ಮಾತುಗಳೇ ನಿಜವಾದಂತಿದೆ. ಅವರು ಹೇಳಿದ್ದರು: ‘ಈಗ ಜಗವೇ ಗ್ರಾಮವಾಗಿದೆ. ಮುಂದೆ ಜಗವೇ ನಾಟಕರಂಗವಾಲಿದೆ’. ವೆಬ್ ೩.೦ರ ಕ್ರಾಂತಿಯನ್ನು ಮೆಕ್‌ಲುಹಾನ್‌ಗಿಂತ ಚೆನ್ನಾಗಿ ವಿವರಿಸಲು ಸಾಧ್ಯವೆ?!
  • ಹಾಗಾದರೆ ದಿನಪತ್ರಿಕೆಗಳ ಗತಿಯೇನು? ೨೦೮೪ರಲ್ಲೂ ದಿನಪತ್ರಿಕೆಗಳು ಮುದ್ರಣ ರೂಪದಲ್ಲೇ ಇರುತ್ತವೆ ಎಂದು ಅಮೆರಿಕಾದ ಸಮಾಜವಿಜ್ಞಾನಿ ಡಾ. ಲಿಯೋ ಬೋಗಾರ್ಟ್ ೧೯೮೪ರಲ್ಲೇ ಅಂದಾಜು ಮಾಡಿದ್ದಾರೆ. ಆದರೆ ಕಾಗದದ ಬದಲಿಗೆ ಬೇರೆ ವಸ್ತುಗಳ ಮೇಲೆ ಪತ್ರಿಕೆಗಳು ಮುದ್ರಣವಾಗುತ್ತವಂತೆ. ನನ್ನ ಅಂದಾಜಿನಲ್ಲಿ ಆಗ ಪತ್ರಿಕೆಗಳಲ್ಲೇ ಇಂಟರ್‌ನೆಟ್ ಇರುತ್ತದೆ. ಆ ಪತ್ರಿಕೆ ಮುದ್ರಣಕ್ಕೆ ಬಳಸಿದ್ದು ಬಯೋಡಿಗ್ರೇಡಬಲ್ ಕಾಗದವೂ ಆಗಿರಬಹುದು, ಅಥವಾ ಗ್ರಾಫೈಟ್ ಆಧಾರಿತ ಕಾಗದವೂ ಆಗಿರಬಹುದು. ಅದನ್ನು ನೀವು ತೆರೆದರೆ, ಆಯಾ ಪುಟಗಳಲ್ಲಿ ಸುದ್ದಿಗಳೇನೋ ಇರುತ್ತವೆ; ಆದರೆ ಅವೆಲ್ಲವೂ ಕಾಲಕ್ಕೆ ತಕ್ಕಂತೆ, ಕ್ಷಣಕ್ಷಣವೂ ಅಪ್‌ಡೇಟ್ ಆಗುತ್ತವೆ. ಅಲ್ಲೇ ನೀವು ಸುದ್ದಿಯ ಬಗ್ಗೆ ಬಂದ ಕಾಮೆಂಟ್‌ಗಳನೂ  ನೋಡಬಹುದು. ಕಾಗದದಲ್ಲೇ ಓದುವ ಖುಷಿ ಮತ್ತು ಹೊಸ ಮಾಧ್ಯಮದ ಸಾಧ್ಯತೆಗಳು – ಇವೆರಡೂ ಒಗ್ಗೂಡುತ್ತವೆ. (ಈಗ ಗೂಗಲ್ ನ್ಯೂಸ್ ಪುಟದಲ್ಲಿ ಸುದ್ದಿಗಳು ಬದಲಾಗುತ್ತ ಹೋಗುವುದಿಲ್ಲವೇ? ಹಾಗೆ)
  • ಸುದ್ದಿಗಳಿಗಿಂತ ಸುದ್ದಿಗಳ ಬಗ್ಗೆ ಬರುವ ಕಾಮೆಂಟ್‌ಗಳೇ ಹೆಚ್ಚು ಜನಪ್ರಿಯವಾಗ ಬಹುದು. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲು ಕಾಮೆಂಟ್‌ಗಳೇ ಸೂಕ್ತ. ಸಮಾಜತಾಣಗಳಿಗಿಂತ ಇಲ್ಲಿ ಒಂದು ನಿರ್ದಿಷ್ಟ ಮಾಹಿತಿಯ ಮೇಲೆಯೇ ಚರ್ಚೆ ನಡೆಯುವುದರಿಂದ ಈ ಕಾಮೆಂಟ್‌ಗಳ ಮೌಲ್ಯ ಹೆಚ್ಚು. ಬ್ಲಾಗಿಂಗ್‌ನಲ್ಲಿ ನೀಡುವ ಕಾಮೆಂಟ್ ಅವಕಾಶಗಳನ್ನೇ ಈಗಿನ ಎಲ್ಲ ಪತ್ರಿಕೆಗಳೂ ತಮ್ಮ ವೆಬ್‌ಸೈಟ್‌ಗಳಲ್ಲಿ ನೀಡುತ್ತಿರುವುದನ್ನು ಗಮನಿಸಿ.
  • ರೇಡಿಯೋ ತರಂಗಗಳ ಹಾಗೆ ಇಂಟರ್‌ನೆಟ್ ಕೂಡಾ ‘ಫ್ರೀ ಟು ಏರ್’ (ಮುಕ್ತ ಮತ್ತು ಅನಿರ್ಬಂಧಿತ ಉಚಿತ ಬಳಕೆ) ಆಗುವುದನ್ನು ತಪ್ಪಿಸಲಾಗದು. ಭಾರತ ಸರ್ಕಾರವೇ ವಿದ್ಯಾರ್ಥಿಗಳಿಗೆ ಪಿಸಿ ಟ್ಯಾಬ್ಲೆಟ್‌ಗಳನ್ನು ಅಗ್ಗದ ದರದಲ್ಲಿ ನೀಡಿದ ಮೇಲೆ ಅವುಗಳ  ಮೂಲಕ ಪಾಠ ಹೇಳಲು ಉಚಿತ ಇಂಟರ್‌ನೆಟ್ ಸಂಪರ್ಕ ನೀಡುವುದು ತಾರ್ಕಿಕವಾಗಿ ಅನಿವಾರ್ಯ. ಇದೇ ಮಾತನ್ನು ಗ್ರಾಮ ಪಂಚಾಯತ್‌ಗಳಿಗೆ, ಶಾಲೆಗಳಿಗೆ, ಸಾರ್ವಜನಿಕ ಕಚೇರಿಗಳ ಮಾಹಿತಿಗಳಿಗೆ ಅನ್ವಯಿಸಬಹುದು. ಮುಂದಿನ ದಿನಗಳಲ್ಲಿ ೪ಜಿ ಮತ್ತು ನಂತರದ ತರಂಗಶ್ರೇಣಿಗಳು ಕೇವಲ ಇಂಟರ್‌ನೆಟ್‌ಗೇ ಬಳಕೆಯಾಗುವ ಸಾಧ್ಯತೆ ಕನಸೇನಲ್ಲ! ಇಸ್ರೋದ ನಿಯಂತ್ರಣದಲ್ಲಿರುವ ಎಸ್-ಬ್ಯಾಂಡ್ ತರಂಗ ಶ್ರೇಣಿಗಳೂ ಸಾಮುದಾಯಿಕ ಇಂಟರ್‌ನೆಟ್ ಬಳಕೆಗೆ ಸೂಕ್ತವೇ.
  • ಗ್ರಾಮೀಣ ಪ್ರದೇಶದಲ್ಲಿ ಅವರವರ ಭಾಷೆಯಲ್ಲಿ ಮಾತನಾಡಿದ್ದೇ ಸ್ಥಳೀಯ ಕರೆಗಳ ಮೂಲಕ ಪಾಡ್‌ಕಾಸ್ಟ್ ಮಾಡುವ ಪ್ರಯೋಗಗಳು ನಡೆದಿವೆ(ಬಾಕ್ಸ್ ನೋಡಿ). ಇದೇ ಮುಂದುವರೆದು, ಅನಕ್ಷರಸ್ಥರೂ ಬ್ಲಾಗಿಂಗ್‌ನಲ್ಲಿ ನೇರವಾಗಿ ಭಾಗಿಯಾಗುವ ದಿನಗಳು ದೂರವಿಲ್ಲ. ಭಾರತದ ಒಂದೇ ತೊಡಕೆಂದರೆ, ಭಾಷಾ ವೈವಿಧ್ಯ ಮತ್ತು ಉಚ್ಚಾರಣಾ ವೈವಿಧ್ಯ. ನೂರಾರು ಭಾಷೆಗಳ ಸಾವಿರಾರು ಶೈಲಿಗಳನ್ನು ಧ್ವನಿ – ಪಠ್ಯ ಪರಿವರ್ತನೆಗೆ ಒಳಪಡಿಸುವ ವಿಚಾರ ಕಷ್ಟಸಾಧ್ಯ. ಇತ್ತೀಚೆಗಷ್ಟೆ ಮೈಕ್ರೋಸಾಫ್ಟ್ ಸಂಸ್ಥೆಯು ೨೬ ಭಾಷೆಗಳನ್ನು ಪರಸ್ಪರ ಅನುವಾದಿಸಿ ಮೂಲ ಧ್ವನಿಯಲ್ಲಿ ಕೇಳಿಸುವ ತಂತ್ರಾಂಶವನ್ನು ರೂಪಿಸಿದೆ. ಸಮುದಾಯದ ಜ್ಞಾನಪ್ರವಾಹಗಳನ್ನು ಬ್ಲಾಗಿಂಗ್‌ಗೆ ತರುವುದು ಊಹೆಗೆ ನಿಲುಕುವ ಇನ್ನೊಂದು ಸಾಧ್ಯತೆ.

ಈ ಲೇಖನ ಮುಗಿಸುವ ಹೊತ್ತಿಗೆ ಹೆಸರಾಂತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರಾನ್ ಭೂಮಿಯ ಅತಿಯಾಳದ ಪ್ರದೇಶಕ್ಕೆ ಹೋಗಿ ಬಂದಿದ್ದಾರೆ. ಅವರು ೧೧ಕಿಲೋಮೀಟರ್ ಆಳದ ಆ ಗುಂಡಿಗೆ ತಲುಪಿದ ಕೂಡಲೇ ಕಳಿಸಿದ ಟ್ವೀಟ್ ಹೀಗಿದೆ: ‘ಈಗಷ್ಟೇ ಸಮುದ್ರದ ಆಳಗುಂಡಿ ತಲುಪಿದ್ದೇನೆ. ಭೂಮಿಯ ಬುಡವನ್ನೇ ತಟ್ಟಿದಾಗ ಆದ ಖುಷಿ ಹೇಳಲಸಾಧ್ಯ. ನಾನೇನು ನೋಡಿದೆ ಎಂದು ನಿಮಗೆ ಹೇಳುವ ತವಕವಿದೆ; ನಾನಿನ್ನು ಕಾಯಲಾರೆ!’. ಪತ್ರಿಕೋದ್ಯಮದ ಮೇಲೆ ಬ್ಲಾಗಿಂಗ್ ಪ್ರಭಾವವೇನು ಬಂತು, ಬ್ಲಾಗಿಂಗ್ ಇದ್ದರೇ ಪತ್ರಿಕೋದ್ಯಮ ಎನ್ನುವುದಕ್ಕೆ ಕ್ಯಾಮೆರೂನ್‌ರ ಟ್ವೀಟ್ ತಿಳಿಸಿದೆ. ಕಲಿಯುವುದು, ಬಿಡುವುದು ಪತ್ರಿಕೋದ್ಯಮಕ್ಕೆ ಬಿಟ್ಟಿದ್ದು!  ಸಮುದಾಯದ ಒಳಿತಿಗೆ ಸಮುದಾಯವೇ ಪ್ರಯತ್ನಿಸುವುದಕ್ಕಿಂತ ಒಳ್ಳೆಯ ಪರಿಹಾರ ಖಂಡಿತ ಇಲ್ಲ. ಸಹಕಾರ ಚಳವಳಿಯ ತತ್ವದಲ್ಲೇ ಸಮುದಾಯ ಪತ್ರಿಕೋದ್ಯಮವೂ ಬೆಳೆದರೆ, ಬ್ಲಾಗಿಂಗ್ ಮಾಡುವುದೇ ನೈಜ ಪತ್ರಿಕೋದ್ಯಮವಾಗುತ್ತದೆ. ಆಗ ಹೂಡಿಕೆದಾರರ ಪತ್ರಿಕೋದ್ಯಮಕ್ಕೆ ಪ್ರಬಲ ಸ್ಪರ್ಧೆ ನೀಡಬಹುದು; ಹಿತಾಸಕ್ತ ಪತ್ರಿಕೋದ್ಯಮದಿಂದ ಸಮಾಜಮುಖಿ ಪತ್ರಿಕೋದ್ಯಮಕ್ಕೆ ಹೊರಳಬಹುದು. ಅದೇ ನೈಜ ಪ್ರಜಾತಂತ್ರ. ಜನರ ಬದುಕನ್ನು ನೇರವಾಗಿ ಜನರ ಹೃದಯಕ್ಕೆ ಮುಟ್ಟಿಸುವ ಸೂತ್ರ.

ನಿರಕ್ಷರಿಗಳ ಬ್ಲಾಗಿಂಗ್

೨೦೧೧ರ ನವೆಂಬರ್ ೧೯. ಛತ್ತೀಸ್‌ಗಢದ ಭೋಪಾಲ್‌ಪಟ್ನಂನ ಅಫಜಲ್ ಖಾನ್ ವರದಿ ಮಾಡಿದಂತೆ ಅಲ್ಲಿನ ಬುಡಕಟ್ಟು ಜನರಿಗೆ ಸ್ಟೇಟ್  ಬ್ಯಾಂಕು ಸಾಲ ನೀಡುತ್ತಿರಲಿಲ್ಲ. ಕಾರಣ ಇಷ್ಟೆ: ಈ ಕುಟುಂಬಗಳ ಹಿರಿಯರು ಹಿಂದೆ ಸಾಲ ಮಾಡಿ ವಾಪಸು ಮಾಡಿರಲಿಲ್ಲವಂತೆ. ಈಗ ‘ಸ್ವರ’ ವರದಿ ‘ಪ್ರಕಟವಾದ’ ಮೇಲೆ ಇಂಥ ನೆಪವನ್ನೇನೂ ಹೇಳದೇ ಬ್ಯಾಂಕು ಸಾಲ ನೀಡುತ್ತಿದೆ.

ಈ ಘಟನೆಗಿಂತ ಮೂರು ವಾರ ಮೊದಲು ಒರಿಸ್ಸಾದ ನವೊಪಾಡಾ ಜಿಲ್ಲೆಯಲ್ಲಿ ಒಂದು ಶಾಲೆಯು ಏಳು ತಿಂಗಳಿನಿಂದ ಮುಚ್ಚಿಹೋಗಿತ್ತು. ತಪನ್‌ದಾಸ್ ಎಂಬ ‘ನಾಗರಿಕ ವರದಿಗಾರ’ ಇದನ್ನು ‘ಸ್ವರ’ದಲ್ಲಿ ವರದಿ ಮಾಡಿದ ಮೇಲೆ ಜಿಲ್ಲಾ ಆಡಳಿತವು ಎಚ್ಚೆತ್ತು ಶಾಲೆಗೆ ಶಿಕ್ಷಕನನ್ನು ಕಳಿಸಿತು.

‘ಸ್ವರ’ – ಇದು ಒಂದು ಹೊಸಬಗೆಯ ವರದಿಗಾರಿಕೆಯ ಯೋಜನೆ. ಕೇಂದ್ರ ಗೊಂಡ್ವಾನಾ ಪ್ರದೇಶದ ಜನರ ಅಭ್ಯುದಯಕ್ಕಾಗಿ ಆರಂಭವಾದ ಈ ಯೋಜನೆಯಲ್ಲಿ ಹಳ್ಳಿಯ ಜನರೇ ‘ನಾಗರಿಕ ವರದಿಗಾರರು’ ಅರ್ಥಾತ್ ಸಿಟಿಜನ್ ಜರ್ನಲಿಸ್ಟ್‌ಗಳು. ಇಲ್ಲಿ ಫೋನ್ ಮೂಲಕವೇ ವರದಿಗಾರರು ತಮ್ಮ ವರದಿಯನ್ನು ಕಳಿಸುತ್ತಾರೆ. ಜನರೂ ಫೋನ್ ಮೂಲಕವೇ ಈ ವರದಿಗಳನ್ನು ಕೇಳುತ್ತಾರೆ. ಅಕ್ಷರದ ಹಂಗಿಲ್ಲ. ತಳಮಟ್ಟದವರೆಗೂ ಹಬ್ಬಿದ ಮೊಬೈಲ್ ಕ್ರಾಂತಿಯು ಗೊಂಡ್ವಾನಾದ ಮೂಲೆ ಮೂಲೆಗಳ ಸಮಸ್ಯೆಗಳನ್ನು ಪ್ರಕಟಿಸುವ ಹೊಸ ಮಾಧ್ಯಮವಾಗಿದೆ. ಹೀಗೆ ಫೋನಿನಲ್ಲಿ ಬಂದ ಸುದ್ದಿಗಳನ್ನು ನೀವು ‘ಸ್ವರ’ದ ವೆಬ್‌ಸೈಟಿನಲ್ಲೂ ಕೇಳಬಹುದು.

ಮಾತು ಬಂದೂ ಸಾಕು; ತಂತ್ರಜ್ಞರ ನೆರವಿನಿಂದ ಬ್ಲಾಗ್ ಮಾಡಬಹುದು ಎನ್ನುವುದಕ್ಕೆ ‘ಸ್ವರ’ ಯೋಜನೆಯು ಒಂದು ಪುಟ್ಟ ಉದಾಹರಣೆ. ಬಿಬಿಸಿ ಸುದ್ದಿಸಂಸ್ಥೆಯ ಮಾಜಿ ವರದಿಗಾರ ಶುಭ್ರಾಂಶು ಚೌಧರಿಯವರ ಈ ಪ್ರಯೋಗ ಈಗಲೂ ಚಾಲ್ತಿಯಲ್ಲಿದೆ. ಅಕ್ಷರ ಬಲ್ಲವರಿಗೆ, ಕಾರ್ಪೋರೇಟೀಕರಣಗೊಂಡ ಸುದ್ದಿಗಳನ್ನು ಕಟ್ಟಿಕೊಡುವ ಯಜಮಾನಿಕೆ ಪತ್ರಿಕೋದ್ಯಮದ ಹಂಗು ತೊರೆದ ನಿಜ ನಾಗರಿಕ ಪತ್ರಿಕೋದ್ಯಮದ ಮೊದಲ ಹೆಜ್ಜೆ ಇದು.

ಈ ಪ್ರಯೋಗದ ಜಾಲತಾಣ: www.cgnetswara.org

ದಿಢೀರ್ ಗುಂಪುಗಳ ಕ್ಷಿಪ್ರ ನರ್ತನ

೨೦೦೩ರ ಒಂದು ದಿನ ಒಂದು ಡಿಪಾರ್ಟ್‌ಮೆಂಟಲ್ ಅಂಗಡಿಗೆ ಹಠಾತ್ತನೆ ಬಂದ ಹಲವರು ಒಂದೇ ಕಂಬಳಿಯನ್ನು ದಿಟ್ಟಿಸಿ ನೋಡಿದರು. ‘ವೈರ್‍ಡ್’ ಪತ್ರಿಕೆಯ ಹಿರಿಯ ಪತ್ರಕರ್ತ ಬಿಲ್ ವಾಸಿಕ್ ಕಳಿಸಿದ ಅನಾಮಿಕ ಈ ಮೈಲ್ ಕರೆಗೆ ಓಗೊಟ್ಟು ಬಂದವರು ಹೀಗೆ `ದಿಢೀರ್ ಗುಂಪು’ (ಫ್ಲಾಶ್ ಮಾಬ್) ರೂಪಿಸಿದರು.

ಮುಂಬಯಿ ದುರಂತದ ಸ್ಮರಣೆಗಾಗಿ ವಿ.ಟಿ. ರೈಲು ನಿಲ್ದಾಣದಲ್ಲೂ ಇಂಥದ್ದೇ ಪಡ್ಡೆ ಹುಡುಗ – ಹುಡುಗಿಯರ ಗುಂಪು ಬಂದು ನರ್ತನ ಮಾಡಿ ಶಾಂತಿಯ ಸಂದೇಶ ಬೀರಿತ್ತು. ಇಂಥ ಘಟನೆಗಳು ಈಗ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ನಡೆಯುತ್ತಿವೆ. ಧರಣಿ ಪ್ರತಿಭಟನೆ, ಸತ್ಯಾಗ್ರಹ – ಎಲ್ಲವೂ ಈ ದಿಢೀರ್ ಗುಂಪಿನಿಂದ ನಡೆಯುತ್ತದೆ. ಇಂಥ ಹಠಾತ್ ಸಭೆಗಳನ್ನು ಸಂಘಟಿಸುವ ಅನುಭವಿಗಳೇ ರೂಪುಗೊಳ್ಳುತ್ತಿದ್ದಾರೆ. ಇಂಥ ಕೆಲಸವು ರೇಡಿಯೋ, ಟಿವಿ ಚಾನೆಲ್ ಅಥವಾ ಮುದ್ರಣ ಮಾಧ್ಯಮಗಳಿಂದ ನಡೆಯಲಿಲ್ಲ ಎಂಬುದು ಚಿಂತನೆಯ ವಿಷಯವೇ. ‘ಸಮೂಹದ ತಿಳಿವಳಿಕೆ’ ಎಂದೇ ಕರೆಯುವ ಈ ಚಟುವಟಿಕೆಗಳನ್ನು ಬ್ಲಾಗುಗಳು, ಸಮಾಜತಾಣಗಳು, ಟ್ವಿಟರ್‌ಗಳು ಮತ್ತು ವಿವಿಧ ಬಗೆಯ ಸಾಮುದಾಯಿಕ ವೆಬ್‌ಸೈಟ್‌ಗಳ ಮೂಲಕ ರೂಪಿಸಲಾಗುತ್ತಿದೆ.

ಬ್ಲಾಗಿಂಗ್ ನೀತಿಸಂಹಿತೆ ಬೇಕು

ಬ್ಲಾಗಿಂಗ್ ಎಂದಕೂಡಲೇ ಮನಸ್ಸಿಗೆ ಬಂದಿದ್ದಷ್ಟೇ ಅಲ್ಲ, ಬಾಯಿಗೆ ಬಂದಂತೆ ಬರೆಯುವುದು ಎಂಬ ಅಭಿಪ್ರಾಯ ಕೆಲವರಲ್ಲಿದೆ. ಕಂಪ್ಯೂಟರಿನ ಮುಂದೆ ಕೂತು, ಬ್ಲಾಗ್ ಪುಟವನ್ನು ತೆರೆದು, ಒಂದು ವಾಕ್ಯವನ್ನು ಕೀಲಿಮಣೆಯಲ್ಲಿ ಕುಟ್ಟಿದ ಕೂಡಲೇ ನಾನೂ ಪತ್ರಕರ್ತನಾದೆ ಎಂದು ಅರಚುವವರೂ ಇದ್ದಾರೆ. ವೈಯಕ್ತಿಕ ನಿಂದನೆಯ ದಾಳಿ ನಡೆಸಿ, ಸಾಕ್ಷಿಯೇ ಇಲ್ಲದ ಮಾಹಿತಿಗಳನ್ನು ಸತ್ಯ ಎಂದು ವಾದಿಸುವ ವಿಕೃತಿಯನ್ನೂ ಬ್ಲಾಗಿಂಗ್ ಲೋಕ ಅನುಭವಿಸುತ್ತಿದೆ. ಇದು ಸರ್ವಥಾ ತಪ್ಪು. ವೈಯಕ್ತಿಕ ಅಭಿವ್ಯಕ್ತಿಯೇ ಆದರೂ, ಅದು ಸಾರ್ವಜನಿಕ ವೇದಿಕೆಗೆ ಬರುವುದರಿಂದ ಬ್ಲಾಗಿಗರು ಕೆಲವು ಸ್ವನಿಯಂತ್ರಣದ ಸೂತ್ರಗಳನ್ನು ಪಾಲಿಸುವುದು ಸಮಾಜದ ಹಿತದೃಷ್ಟಿಯಿಂದಲೇ ಒಳ್ಳೆಯದು.

೧.           ಬ್ಲಾಗಿಂಗ್ ಮಾಡುವಾಗ, ನಿಮಗೆ ಹೇಳಲೇಬೇಕು ಎಂದೆನ್ನಿಸಿದ ಮಾತುಗಳನ್ನು ಮಾತ್ರವೇ ಬರೆಯಿರಿ. ಇದು ಜೆರೋನ್ ಲೇನಿಯೆರ್‌ನ ಮುಖ್ಯ ಸೂತ್ರ. ಬರೆಯಲೇಬೇಕು ಎಂದು ಬ್ಲಾಗ್ ಮಾಡಿದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲ. ವಾಸ್ತವದಲ್ಲಿ ಹಾನಿಯೇ ಹೆಚ್ಚು. ಬ್ಲಾಗಿಂಗ್ ಒಂದು ಮಾಧ್ಯಮ ಸಿದ್ಧಾಂತವೇ ಹೊರತು ತಂತ್ರಜ್ಞಾನವಲ್ಲ.

೨.           ಮೊಬೈಲ್, ಟ್ಯಾಬ್ಲೆಟ್‌ನಿಂದ ತಕ್ಷಣದಲ್ಲೇ ಬ್ಲಾಗ್ ಮಾಡಬೇಕು ಎಂಬ ಅವಸರ ಬೇಡ. ಮನೆಯಲ್ಲಿ ಕುಳಿತು ಸಾವಧಾನವಾಗಿ ಬರೆಯಿರಿ. ತಡವಾದರೂ ಪರವಾಗಿಲ್ಲ; ಅವಸರದ ಸರಕು ಬೇಡ.

೩.           ಬ್ಲಾಗ್ ಮಾಡುವಾಗ ಈ ದೇಶದ ಕಾನೂನು, ಬ್ಲಾಗ್‌ಗೆ ಅವಕಾಶ ಕೊಟ್ಟ ಜಾಲತಾಣದ ಷರತ್ತುಗಳನ್ನು ಪಾಲಿಸಿ. ಚಾರಿತ್ರ್ಯವಧೆ – ಮಾನಹಾನಿ – ನಿಂದನೆ – ವಿದ್ವೇಷ – ಮತೀಯ ವಾದ – ಹಿಂಸೆ – ಇವೇ ಮುಂತಾದ ಸಮಾಜವಿರೋಧಿ ಅಂಶಗಳು ನಿಮ್ಮ ಬ್ಲಾಗಿನಲ್ಲಿ ಇಲ್ಲದಂತೆ ನೋಡಿಕೊಳ್ಳಿ.

೪.           ಡಿಜಿಟಲ್ ಲೋಕದ ಹಕ್ಕುಸ್ವಾಮ್ಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ನಿಮ್ಮ ವಾದವನ್ನು ಸಮರ್ಥಿಸಲು ಬರೆದ ವಾಕ್ಯಗಳಿಗೆ ಬೆಂಬಲವಾಗಿ ಹೈಪರ್‌ಲಿಂಕ್ ಗಳನ್ನು ನೀಡುವುದಕ್ಕೆ ಹಿಂಜರಿಕೆ ಬೇಡ. ಛಾಯಾಚಿತ್ರಗಳಿಗೆ, ವಿಡಿಯೋ  ಆಡಿಯೋ ಕಡತಗಳಿಗೆ ಸೂಕ್ತ ಋಣ ಉಲ್ಲೇಖಿಸಿ. ನೇರವಾಗಿ ಬಳಸಲೇ ಬೇಕಾದ ಚಿತ್ರಗಳ ಒಡೆಯರಿಂದ ಈಮೈಲ್ ಮೂಲಕ ಅನುಮತಿ ಪಡೆಯುವುದು ಕಷ್ಟವೇನಲ್ಲ.

೫.           ಬ್ಲಾಗ್ ಮಾಡುವಾಗ ಕೃತಿಚೌರ್ಯ ಮಾಡಿದರೆ ಬಹುಬೇಗ ಗೊತ್ತಾಗುತ್ತದೆ! ಆದ್ದರಿಂದ ಬ್ಲಾಗಿಂಗ್ ನಿಜವಾಗಿಯೂ ಮುದ್ರಣ ಮಾಧ್ಯಮಕ್ಕಿಂತ ಹೆಚ್ಚು ಸುರಕ್ಷಿತ. ಇದರಿಂದ ಸ್ವನಿಯಂತ್ರಣ ಸಾಧ್ಯ. ಆದಷ್ಟೂ ನಿಮ್ಮ ಸ್ವಂತದ ವಾಕ್ಯಗಳನ್ನೇ ರಚಿಸಿ; ನಿಮ್ಮ ಚಿಂತನೆಯನ್ನೇ ಹರಿಬಿಡಿ. ಇದರಿಂದ ವರ್ಚುಯಲ್ ಲೋಕದಲ್ಲಿ ಹೊಸ ಮಾಹಿತಿ ಸೃಷ್ಟಿಸಿದಂತಾಗುತ್ತದೆ.

೬.           ಬ್ಲಾಗ್ ಲೋಕದಲ್ಲಿ ಕಾಮೆಂಟ್‌ಗಳನ್ನು ಸ್ವೀಕರಿಸುವಾಗ, ಕಾಮೆಂಟ್‌ಮಾಡುವಾಗ ಪ್ರಜಾತಾಂತ್ರಿಕ ಸ್ವಾತಂತ್ರ್ಯದ ಎಲ್ಲೆ ಮೀರದಿರಿ. ನಿಮ್ಮ ಐಡೆಂಟಿಟಿಯಲ್ಲೇ ಕಾಮೆಂಟ್ ಮಾಡುವುದು ನಿಮ್ಮ ಮಾನಸಿಕ ಸ್ವಾಸ್ಥ್ಯಕ್ಕೇ ಒಳ್ಳೆಯದು. ಭಾರತದಲ್ಲಿ ಅನಾಮಿಕ ಬ್ಲಾಗಿಂಗ್ ಮಾಡುವಾಗ ವಹಿಸಬೇಕಾದ ಎಚ್ಚರಿಕೆ ಮತ್ತು ಸಾಮುದಾಯಿಕ ಪ್ರಜ್ಞೆ ಇನ್ನೂ ಮೂಡಿಲ್ಲ. ಆದ್ದರಿಂದ ಅನಾಮಿಕ ಬ್ಲಾಗಿಂಗ್ ಬೇಡ. ಅನಾಮಿಕ ಕಾಮೆಂಟ್ ಕೂಡಾ ಬೇಡ. ಬ್ಲಾಗ್, ಫೇಸ್‌ಬುಕ್, ಟ್ವಿಟರ್, ಈ ಮೈಲ್  ಎಲ್ಲೆಲ್ಲೂ ಒಂದೇ ಚಹರೆ (ಐಡೆಂಟಿಟಿ) ಇಟ್ಟುಕೊಳ್ಳುವುದರಿಂದ ಸ್ಪ್ಲಿಟ್ ಪರ್ಸನಾಲಿಟಿ ಸಿಂಡ್ರೋಮ್‌ನಿಂದ ರಕ್ಷಣೆ ಸಿಗುತ್ತದೆ. ಮುಕ್ತ ಅಭಿವ್ಯಕ್ತಿಯೇ ಮೂಲ ಉದ್ದೇಶವಾದಮೇಲೆ ಅನಾಮಿಕತೆ ಏಕೆ?

(ಉದಯಭಾನು ಕಲಾಸಂಘವು ಇತ್ತೀಚೆಗೆ ಪ್ರಕಟಿಸಿದ ಮಾಧ್ಯಮ ಕರ್ನಾಟಕ ಪುಸ್ತಕದಲ್ಲಿ ಪ್ರಕಟವಾದ ನನ್ನ ಲೇಖನ. ಪುಸ್ತಕದಲ್ಲಿ ಶೀರ್ಷಿಕೆ ‘ಬ್ಲಾಗಿನ ಭಾಗಾಕಾರ’) 

Leave a Reply

Theme by Anders Norén