ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?

maski-iskiನಾನೇನು ಈ ಟೈಟಲ್ ನಂದು ಅಂತ ರಚ್ಚೆ ಹಿಡಿಯಲ್ಲ; ಯಾಕಂದ್ರೆ ಮಸ್ಕಿ ಅಂದಕೂಡ್ಲೇ ತುಂಬಾ ಜನ ಅರೆ ಇಸ್ಕಿ ಅಂತ ಹೇಳೋದು ಗ್ಯಾರಂಟಿ! ನಾನು ಈ ವೆಬ್‌ಸೈಟಿನಲ್ಲಿ ಬರೆಯೋದನ್ನೇ ನಿಲ್ಲಿಸಿ ತಿಂಗಳೂ ಕಳೆದಿಲ್ಲ, ಅಷ್ಟು ಹೊತ್ತಿಗೆ ಎರಡು ರಗಳೆ ಮಾಡಿಕೊಂಡ ಮನೋಹರ ಮಸ್ಕಿ… ಅರೆರೆರೆರೆರೆ ಇಸ್ಕಿ……….

ಒಂದು: ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನೇ ಬದಲಿಸಿದ್ದು. ಇನ್ನೊಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರ ಬಗ್ಗೆ ಲೂಸ್ ಥರ ಮಾತನಾಡಿದರು ಎಂಭ ಆರೋಪ ಎದುರಿಸಿ ನಾನ್‌ಬೈಲಬಲ್ ಕೇಸಿನಲ್ಲಿದ್ದೂ ಬಂಧನದಿಂದ ಬಿಡುಗಡೆಯಾಗಿದ್ದು.

Ambedkarಇದೆಲ್ಲಕ್ಕಿಂತ ಮುಖ್ಯ ಇನ್ನೊಂದು ವಿಚಾರ ಸ್ಪಷ್ಟ ಪಡಿಸ್ತೀನಿ: ಅಲ್ಲಯ್ಯಾ, ನೀನು ಬಿಜೆಪಿಯನ್ನು ಇಷ್ಟೆಲ್ಲಾ ಬೈತೀಯ, ಆದ್ರೂ ಯಾಕೆ ಬಿಜೆಪಿ ನಾಯಕರ ಪರವಾಗಿ ಕೆಲಸ ಮಾಡ್ತೀಯ ಅಂತ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ನನ್ನನ್ನ ಸೌಮ್ಯವಾಗಿ ಗದರಿದಾರೆ. ಅವರಿಗೆ ಹೇಳಿದ್ದಿಷ್ಟೆ: ಧ್ಯೇಯ, ಆದರ್ಶ ಎಲ್ಲ ಬಿಟ್ಟ ಮೇಲೆ, ಬೈತಿರೋ ಪಕ್ಷದಲ್ಲಿದ್ರೆ ಅದು ಸರಿಯಾದ ಕ್ರಮವೇ ಅಲ್ವೆ ಸ್ವಾಮಿ? ಹೇಳೋದೊಂದು, ಮಾಡೋದೊಂದು ಇದ್ದರೇನೇ ಅದಕ್ಕೆ ಎಲ್ಲ ಬಿಟ್ಟವನು ಅಂತ ಕರೀತಾರೆ. ನಾನೂ ಈಗ ಎಲ್ಲ ಬಿಟ್ಟು, ಬೈತಿರೋ ಪಕ್ಷದಲ್ಲೇ ಕೆಲಸ ಮಾಡಿಕೊಂಡಿದೀನಿ ಅಂತ ನೀವೆಲ್ರೂ ಅಂದ್ಕೊಂಡುಬಿಟ್ರೆ…. ನನ್ನ ಮಸ್ಕಿ ಮತ್ತು ಇಸ್ಕಿ ಪುರಾಣಾನ ಮುಂದುವರಿಸ್ತೀನಿ.

ರಾಯಚೂರಿನಲ್ಲಿ ತಾನೇನು ಮಾಡಿದ್ರೂ ನಡೆಯುತ್ತೆ ಅಂದ್ಕೊಂಡಿದ್ದ ಮಸ್ಕಿಗೆ ಬಿಜೆಪಿ ಅಭ್ಯರ್ಥಿ ವಿಚಾರದಲ್ಲಿ ರಾಜಕೀಯವಾಗಿ ಮುನ್ನಡೆ ಸಿಕ್ಕಿದೆ. ಆದ್ದರಿಂದಲೇ ಆಸಾಮಿ ನಗುನಗುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದಾನೆ. ಅವನ ಈ ಕೆಲಸದ ಹಿಂದೆ ಯಾವ ಅಂಶಗಳು ಕೆಲಸ ಮಾಡಿವೆ ಅನ್ನೋದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಈ ವಿಚಾರದಲ್ಲಿ ನಾನು ಅಮಾಯಕ!

ಇನ್ನು ಯಾದಗೀರ ಬಿಜೆಪಿ ಸಭೆಯಲ್ಲಿ ಭೀಷಣ ಭಾಷಣ ಬಿಗೀತಾ ಇದ್ದಾಗ ಅಂಬೇಡ್ಕರ್ ಸ್ವತಃ ಸಂವಿಧಾನ ಬರೆದಿಲ್ಲ, ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು ಅಷ್ಟೆ ಅಂತ ಈ ಮಸ್ಕಿ ಅಣಿಮುತ್ತುಗಳನ್ನು ಉದುರಿಸಿದನಂತೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನನಗೆ ಈ ಸುದ್ದಿ ಗೊತ್ತಾಗೋ ಹೊತ್ತಿಗೆ ಮಸ್ಕಿ ಯಾರದ್ದೋ ಕಾರಿನಲ್ಲಿ ಸುರಪುರಕ್ಕೆ ಹೋಗಿ ಪೊಲೀಸರಿಗೆ ಶರಣಾಗಿ ಕೂಡಲೇ ಮಿಂಚಿನಂತೆ ಬಿಡುಗಡೆಯಾಗಿ ಬಂದಿದಾನೆ. ೧೫೩ (ಎ) ಕಾಯ್ದೆಯಲ್ಲಿ ಹೀಗೆ ಆರೋಪಿಯ ವಿರುದ್ಧ ಸಾಕ್ಷ್ಯ ತಕ್ಷಣ ಸಿಕ್ಕಿಲ್ಲ ಅಂದ್ರೆ ಹಾಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಂತೆ. ಈ ವಿಚಾರದ ಬಗ್ಗೆ ನೀವೇನಾದ್ರೂ ಕಾನೂನು ತಜ್ಞರಾಗಿದ್ರೆ ಹೆಚ್ಚಿನ ಬೆಳಕು ಚೆಲ್ಲಬಹುದು.

ಈ ಸುದ್ದಿ ಗೊತ್ತಾಗುತ್ಲೂ ನಾನು ನನ್ನ ಮಿತ್ರರಿಗೆ ಹೇಳಿದೆ: ಬಹುಶಃ ಈತ ಹಿಂಗೇ ಹೇಳಿರ್‍ತಾನೆ (ಕರಡು ಸಮಿತಿ ಇತ್ಯಾದಿ) ಅಂತ ಊಹಿಸಿದ್ದೆ. ಹಾಗೇ ವರದಿಯೂ ಆಗಿದೆ. ಈ ವಿಚಾರ ಈಗ ಕೇಸ್ ಆಗಿಹೋಗಿದೆ. ದಲಿತ ಸಂಘಟನೆಗಳು ಪ್ರತಿಭಟನೆ ಮಾಡಿವೆ. ಎಲ್ಲಕ್ಕಿಂತ ಮುಖ್ಯ ಅಂಬೇಡ್ಕರ್‌ರನ್ನು ವಿವಾದಕ್ಕೆ ತಂದು ಮತ್ತೆ ಬಿಜೆಪಿಗೆ ಮೇಲ್ವರ್ಗದ ಪಕ್ಷ ಅನ್ನೋ ಬ್ರಾಂಡನ್ನು ಚಾಲ್ತಿಗೆ ತಂದ ಮಸ್ಕಿಗೆ ಏನೆನ್ನೋಣ? ಒಂದು ಫೋಟೋ ತೆಗೆದು ಹಾಕಿದ್ರು ಅನ್ನೋ ಆರೋಪ ಹೊತ್ತು ಮುಖ್ಯಮಂತ್ರಿ ಯಡ್ಯೂರಪ್ಪನವರು ಅಂದು ಪಟ್ಟ ಶ್ರಮ ಈ ಮಸ್ಕಿಗೆ ಗೊತ್ತಿದ್ದೇ ಇದೆ. ಹಾಗಂತ ಈ ಮಸ್ಕೀನೇ ನನ್ನ ಹತ್ರ ಎಷ್ಟೋ ಸಲ ಹೇಳಿಕೊಂಡು ಯಡ್ಯೂರಪ್ಪನವರನ್ನು ಹೀಯಾಳಿಸಿದ್ದ. `ನೋಡಪ್ಪಾ, ಅಂಬೇಡ್ಕರ್‌ನ್ನ ತಗಲಿಹಾಕ್ಕಂಡ್ರೆ ಯಡ್ಯೂರಪ್ಪಂಗೆ ಹಿಂಗೇ ಆಗೋದು’ ಎಂದು ತನ್ನ ಸೌಹಾದರ ಚೇಂಬರಿನಲ್ಲಿ ಕೂತು ಮೀಸೆ ತಿರುವಿದ್ದ. ಈಗ ಸುರಪುರ ಸ್ಟೇಶನ್ನಿನಲ್ಲಿ ಕುಂತಾಗ ಅವನಿಗೆ ಇದೆಲ್ಲ ನೆನಪಾಯ್ತೋ ಇಲ್ಲವೋ ಗೊತ್ತಿಲ್ಲ.

ಅದಕ್ಕಿಂತ ಮುಖ್ಯವಾದ ವಿಷಯ ಅಂದ್ರೆ ಈ ಮಸ್ಕಿ, ನಾನು, ಎಲ್ರೂ ಹಿಂದೆ ಒಳ್ಳೆಯವರಾಗಿದ್ದಾಗ (ಹಾಗಂತ ನಾನು ಅಂದ್ಕೊಂಡಿದೀನಿ) ಎಬಿವಿಪಿಯಲ್ಲಿ ಇದ್ದಾಗ…. ನಾನು ವಿಕ್ರಮ ಪತ್ರಿಕೆಯ ಸಂಪಾದಕನಾಗಿದ್ದಾಗ,ಅರುಣ್ ಶೌರಿ ಅಂಬೇಡ್ಕರ್ ವಿರುದ್ಧ `ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್’ ಪುಸ್ತಕ ಬರೆದು ವಿವಾದಕ್ಕೆ ಒಳಗಾಗಿದ್ರು. (ಅರೆ ಇಸ್ಕಿ… ಈ ಮಸ್ಕಿ ಏನಾದ್ರೂ ಶೌರಿ ಪುಸ್ತಕ ಓದಿ ಹೀಗೆ ಗಳಹಿರಬಹುದೆ?). ಆಗ ನಮ್ಮ ಇನ್ನೊಬ್ಬ ಎ ಬಿ ವಿ ಪಿ ಪ್ರಚಾರಕ (ಈಗಲೂ ಅವರು ಸಂಘ ಪರಿವಾರದ ಪ್ರಚಾರಕರೇ) ಜಿ ಆರ್ ಜಗದೀಶ (ಗುರುಜ) ಕೂಡಲೇ ಮಹಾರಾಷ್ಟ್ರದ ದಲಿತ ಪತ್ರಕರ್ತ ರಮೇಶ ಪತಂಗೆ ಬರೆದ ಪ್ರತಿಕ್ರಿಯೇನ ತಗಂಡು ಬಂದು `ವಿಕ್ರಮ’ದಲ್ಲಿ ಪ್ರಕಟಿಸಿದ್ರು. ನಾನೂ ಖುಷಿಪಟ್ಟೆ. ಆಮೇಲೆ ನನ್ನತ್ರ ಒಂದು ಬುಕ್‌ಲೆಟ್ ವಿನ್ಯಾಸ ಮಾಡಿಸಿಕೊಂಡು ಮುದ್ರಿಸಿ ಅದನ್ನು ಹತ್ತಾರು ಜನರಿಗೆ ಹಂಚಿದರು. ಈ ಪುಸ್ತಿಕೆಯ ಶೀರ್ಷಿಕೆ: ಬಾಬಾ ಸಾಹೇಬ ಅಂಬೇಡ್ಕರ್ : ಶೌರಿ ಆರೋಪ: ಪತಂಗೆ ಉತ್ತರ. ಈ ಪುಸ್ತಕದ ಮುಖಪುಟವನ್ನು ನಾನೇ ವಿನ್ಯಾಸ ಮಾಡಿದ್ದು. ಕಳೆದ ವಾರವಷ್ಟೇ ನಿದ್ದೆಗಣ್ಣಿನಲ್ಲಿ ಈ ಪುಸ್ತಕವನ್ನು ಕೈಗೆ ತೆಗೆದುಕೊಂಡು ಹಾಗೇ ಇಟ್ಟಿದ್ದೆ. ಇಷ್ಟು ಬೇಗ ಈ ಪುಸ್ತಕಕ್ಕೆ ಪ್ರಸ್ತುತತೆ ಬರುತ್ತೆ ಅಂತ ಕನಸೂ ಕಂಡಿರಲಿಲ್ಲ; ಹಾಗೆ ಕನಸು ಕಾಣೋದಕ್ಕೆ ನಾನು ಈ ತಿಂಗಳು ಜಾಸ್ತಿ ನಿದ್ದೇನೂ ಮಾಡ್ಲಿಲ್ಲ ಬಿಡಿ!

ಈ ಪತಂಗೆ ಯಾರು? ಇದೂ ಮುಖ್ಯ. ಅವರು ನಾನು ವಿಕ್ರಮದ ಸಂಪಾದಕನಾಗಿದ್ದ ಹೊತ್ತಿನಲ್ಲೇ ಮರಾಠಿಯಲ್ಲಿದ್ದ ವಿಕ್ರಮದಂಥದೇ ಪತ್ರಿಕೆ `ವಿವೇಕ’ದ ಸಂಪಾದಕರಾಗಿದ್ದರು. ಅವರ `ನಾನು, ಮನು ಮತ್ತು ಸಂಘ’ ಪುಸ್ತಕ ಭಾರತೀಯ ದಲಿತ ಸಾಹಿತ್ಯದ ಒಂದು ಉತ್ಕೃಷ್ಟ ಗ್ರಂಥ. ಅವರು ಶೌರಿಯವರ ಪುಸ್ತಕವನ್ನು ಓದಿ ಬರೆದ ಪ್ರತಿಕ್ರಿಯೆಯನ್ನು ಶ್ರೀಮತಿ ಶುಭಾ ಧೋಟಿಹಾಳ್ ಕನ್ನಡಕ್ಕೆ ಅನುವಾದಿಸಿದ್ದರು. ೧೯೯೭ರ ನವೆಂಬರ್ ೨೪ರಂದು ಪ್ರಕಟವಾದ ಈ ಪುಸ್ತಕದಲ್ಲಿ ಇರುವ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಯಾಕೆಂದರೆ, ಅರುಣ್ ಶೌರಿ ಕೂಡಾ ತಮ್ಮ ಪುಸ್ತಕದಲ್ಲಿ ` ಅಂಬೇಡ್ಕರ್ ಸಂವಿಧಾನದ ಕರ್ತೃವಲ್ಲ’ ಎಂದು ಹೀಗಳೆದಿದ್ದಾರೆ. ಶೌರೀನೂ ಬಿಜೆಪಿಯ ರಾಜ್ಯಸಭಾ ಸದಸ್ಯರು. ಈ ಪುಸ್ತಕ ಬರೆದ ಮೇಲೆ ಅವರು ಕೇಂದ್ರದಲ್ಲಿ ಬಿಜೆಪಿ ಸಚಿವರೂ ಆಗಿದ್ದರು. ಮಸ್ಕೀನೂ ಬಿಜೆಪಿ ಎಂ ಎಲ್ ಸಿ. ರಮೇಶ್ ಪತಂಗೆ, ನಾನು, ಜಿ ಆರ್. ಜಗದೀಶ್ ಎಲ್ಲರೂ ರಾ.ಸ್ವ. ಸಂಘದವರೇ!

ಈಗ ಪತಂಗೆ ಲೇಖನದ ಕೆಲವು ಭಾಗಗಳನ್ನು ನಿಮಗಾಗಿ ಸೀದಾ ಎತ್ತಿಕೊಡುತ್ತಿದ್ದೇನೆ. ನಾನೂ ಕೊಂಚ ಗಂಭೀರವಾಗಿ ಉಲ್ಲೇಖ ಮಾಡಬಲ್ಲೆ ಎಂದು ನಿಮಗನ್ನಿಸಿದರೆ ಈ ಲೇಖನ ಸಾರ್ಥಕ!
`ಶ್ರೀ ಅರುಣ ಶೌರಿಯವರು ಸಂವಿಧಾನವು ಬಾಬಾ ಸಾಹೇಬರ ನಿರ್ಮಿತಿ ಅಲ್ಲ’ ಎಂದು ಅತೀ ಒತ್ತುಕೊಟ್ಟು ಹೇಳಿದ್ದಾರೆ. ಸಂವಿದಾನದಲ್ಲಿಯ ಮೂಲಭೂತ ಹಕ್ಕುಗಳು, ಆಸ್ತಿ ಹಕ್ಕು ಮುಂತಾದ ಮಹತ್ವದ ಕಲಂಗಳ ಕುರಿತು ಸಂವಿಧಾನ ರಚನೆಯ ಪೂರ್ವದಲ್ಲಿ ನಡೆದ ವಿಚಾರ ವಿಮರ್ಶೆಯ ಬಗ್ಗೆ ಶೌರಿಯವರು ಚರ್ಚಿಸಿದ್ದಾರೆ.

`ನಾನೇ ಸಂವಿಧಾನ ಬರೆದೆ’ ಎಂದು ಬಾಬಾ ಸಾಹೇಬರು ಎಂದಿಗೂ, ಎಲ್ಲಿಯೂ ಹೇಳಿಲ್ಲ. ಸಂವಿಧಾನ ರಚನೆಗಾಗಿ `ಸಂವಿಧಾನ ರಚನಾ ಸಮಿತಿ’ ಮತ್ತು ಅದರ ಅಂಗವಾಗಿ `ಸಂವಿಧಾನದ ಕರಡು ಸಮಿತಿ’ ರಚಿಸಲಾಗಿತ್ತಷ್ಟೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಬಾಬಾ ಸಾಹೇಬರನ್ನು ಆಯ್ಕೆ ಮಾಡಲಾಗಿತ್ತು. ಮೂಲಭೂತ ಹಕ್ಕುಗಳ ಕಲ್ಪನೆಯಾಗಲೀ, ಅಥವಾ ಮಾರ್ಗದರ್ಶಕ ತತ್ವಗಳ ಕಲ್ಪನೆಯಾಗಲೀ ತನ್ನದೆಂದು ಕೂಡ ಬಾಬಾಸಾಹೇಬರು ಹೇಳಿಕೊಂಡಿಲ್ಲ. ಸಂವಿಧಾನದ ವಿವಿಧ ಕಲಂಗಳ ಕುರಿತಾಗಿ ಸತತವಾಗಿ ೩ ವರ್ಷಗಳ ಕಾಲದ ಸುದೀರ್ಘ ಚರ್ಚೆ ನಡೆದದ್ದುಂಟು. ಸೂಚನೆ – ಉಪಸೂಚನೆಗಳನ್ನು ಮಂಡಿಸಲಾಯಿತು. ಯಾವುದೇ ಒಂದು ಕಲಂ ರಚಿಸುವಲ್ಲಿಯ ಮೂಲ ಆಶಯ / ಉದ್ದೇಶವೇನಾಗಿರಬೇಕೆಂಬ ಬಗೆಗೂ ಸಾಕಷ್ಟು ಮಾತುಕತೆ ನಡೆಯಿತು. ಕರಡು ಸಮಿತಿಯು ಇಂಥ ಎಲ್ಲ ಚಿಂತನ – ಮಂಥನಗಳ ನಂತರ ಪ್ರತಿಯೊಂದು ಕಲಂ ಬರೆದದ್ದುಂಟು. ಇಂಥ ಗುರುತರವಾದ, ತಲೆ ಚಿಟ್ಟೆನಿಸುವ, ಆರೋಗ್ಯವನ್ನು ಹಾಳು ಮಾಡುವ ಕಾರ್ಯವನ್ನು ಬಾಬಾ ಸಾಹೇಬರು ತುಂಬಾ ಧೈರ್ಯದಿಂದ ಸ್ವೀಕರಿಸಿದ್ದೇ ಅಲ್ಲದೆ ಯಶಸ್ವಿಯಾಗಿ ನಿಭಾಯಿಸಿದರು.

ಲೇಖನ ಸಮಿತಿಯ ಸಭಾಸದರಾದ ಟಿ.ಟಿ. ಕೃಷ್ಣಮಾಚಾರಿಯವರು ೧೯೪೮ರ ನವೆಂಬರ್ ೫ರಂದು ಸಂವಿಧಾನ ರಚನಾ ಸಮಿತಿಯೆದುರು ಮಾಡಿದ ಭಾಷಣದಲ್ಲಿ `ಸಭೆಗೆ ತಿಳಿದಿರುವಂತೆ ನಾವು ಆಯ್ದ ೭ ಜನ ಸಭಾಸದರಲ್ಲಿ ಒಬ್ಬರು ರಆಜೀನಾಮೆ ನೀಡಿದ್ದಾರೆ. ಆ ಸ್ಥಳವಿನ್ನೂ ಖಾಲಿಯೇ ಇದೆ. ಇನ್ನೊಬ್ಬ ಸಭಾಸದರು ದೇವಾಧೀನರಾದರು. ಆ ಸ್ಥಳವೂ ಖಾಲಿಯೇ ಇದೆ. ಮೂರನೆಯವರೊಬ್ಬರು ಅಮೇರಿಕಾಗೆ ತೆರಳಿರುವರು. ಅವರ ಸ್ಥಳವಿನ್ನೂ ತುಂಬಲಾಗಿಲ್ಲ. ನಾಲ್ಕನೆಯವರು ತಮ್ಮ ಸಂಸ್ಥಾನದ ಬರವಣಿಗೆ / ಲೇಖನ ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಇದ್ದೂ ಇಲ್ಲದಂತಿರುವವರು. ಒಬ್ಬಿಬ್ಬ ಸಭಾಸದರು ದಿಲ್ಲಿಯಿಂದ ದೂರದಲ್ಲಿದ್ದಾರೆ. ಅವರು ತಮ್ಮ ಅನಾರೋಗ್ಯದ ಕಾರಣದಿಂದಾಗಿ ಉಪಸ್ಥಿತರಾಗಿಲ್ಲ. ಕೊನೆಯಲ್ಲಿ ಸಂವಿಧಾನದ ಕರಡು ತಯಾರಿಸುವ ಸಂಪೂರ್ಣ ಜವಾಬ್ದಾರಿಯು ಡಾ. ಬಾಬಾ ಸಾಹೇಬರೊಬ್ಬರ ಮೇಲೇ ಬಂದಿತು. ಇಂಥ ಸಂದರ್ಭದಲ್ಲಿ ಅವರು ನಿಭಾಯಿಸಿದ ಹೊಣೆಯಿಂದಾಗಿ ಅವರು ಆದರಣೀಯರಾಗಿರುವರು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಅವರು ವಿಚಲಿತರಾಗದೇ ತಮ್ಮ ಕಾರ್ಯವನ್ನು ಪೂರೈಸಿದ್ದರಿಂದ ನಾವೆಲ್ಲ ಅವರಿಗೆ ಋಣಿಯಾಗಿರಬೇಕಾಗಿದೆ’ ಎಂದು ಉದ್ಗರಿಸಿದರು. ಕರಡು ಸಮಿತಿಯ ಒಬ್ಬ ಸಭಾಸದನ ಈ ಅಭಿಪ್ರಾಯವನ್ನು ಶೌರಿಯವರು ಗಮನಕ್ಕೆ ತೆಗೆದುಕೊಳ್ಳಬೇಕಾಗಿತ್ತು.
`ಸಂವಿಧಾನ ಸಮಿತಿಯ ಕಾರ್ಯವನ್ನು ನಾನು ಗಮನಿಸುತ್ತಲೇ ಇರುವೆ. ಕರಡು ಸಮಿತಿಯ ಸಭಾಸದರು ತಮ್ಮ ಕಾರ್ಯದಲ್ಲಿ ವಹಿಸಿದ ಉತ್ಸಾಹವನ್ನು, ಅವರ ಚಟುವಟಿಕೆಯನ್ನು ನನ್ನಷ್ಟು ಹತ್ತಿರದಿಂದ ಕಂಡವರಿಲ್ಲ. ಮುಖ್ಯವಾಗಿ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಅಂಬೇಡ್ಕರರು ತಮ್ಮ ಆರೋಗ್ಯವನ್ನೂ ಲಕ್ಷಿಸದೇ ಈ ಕಾರ್ಯವನ್ನು ದಡ ಮುಟ್ಟಿಸಿದ್ದಾರೆ. ಸಂವಿಧಾನ ಸಮಿತಿಯ ಮತ್ತು ಕರಡು ಸಮಿತಿಯ ಸದಸ್ಯರನ್ನಾಗಿಯೂ, ಅಧ್ಯಕ್ಷರನ್ನಾಗಿಯೂ ಡಾ. ಅಂಬೇಡ್ಕರರನ್ನು ಆಯ್ಕೆ ಮಾಡಿದ್ದು ಸಮುಚಿತವಾದ ಆಯ್ಕೆಯಾಗಿದೆ. ಅವರಿಂದ ಈ ಕಾರ್ಯಕ್ಕೆ ಕಳೆ ಏರಿದೆ’ ಎಂದು ೧೯೪೯ರ ನವೆಂಬರ್ ೨೬ರಂದು ಡಾ. ರಾಜೇಂದ್ರ ಪ್ರಸಾದರು ತಮ್ಮ ಭಾಷಣದಲ್ಲಿ ಡಾ. ಅಂಬೇಡ್ಕರರ ಕುರಿತು ಉದ್ಗರಿಸಿರುವರು. ಇತಿಹಾಸವು ಕರಡು ಸಮಿತಿಯ ಸಭಾಸದರ ಮತುತ ಸಮಕಾಲೀನ ಹಿರಿಯ ಉದ್ಗಾರಾಭಿಪ್ರಾಯಗಳನ್ನು ನಂಬುತ್ತದೆಯೇ ಹೊರತು ಶೌರಿಯವರ ಅಭಿಮತವನ್ನಲ್ಲ.

ಘಟನಾ ಸಮಿತಿಯ ಐತಿಹಾಸಿಕ ಹೊಣೆ

ಸಂವಿಧಾನ ಸಮಿತಿ ಎಂದರೆ ನಮ್ಮ ರಾಷ್ಟ್ರವು ಬಾಬಾಸಾಹೇಬರಿಗೆ ಒಂದು ಐತಿಹಾಸಿಕವಾದ ಹೊಣೆಗಾರಿಕೆಯನ್ನು ವಹಿಸಿತ್ತು. ಶೌರಿಯವರು ಪ್ರತಿಪಾದಿಸಿದಂತೆ ಒಂದು ವೇಳೆ ಬಾಬಾಸಾಹೇಬರು ದೇಶಭಕ್ತರಾಗಿಲ್ಲದಿದ್ದರೆ , ಸಂವಿಧಾನ ಸಮಿತಿಯ ಅವಶ್ಯಕತೆಯು ದೇಶಕ್ಕಿಲ್ಲ ಎಂದುಕೊಂಡಿದ್ದರೆ, ಸಂವಿಧಾನ ಸಮಿತಿಯ ಹೊಣೆಗಾರಿಕೆಯನ್ನು ಸ್ವೀಕರಿಸುತ್ತಲೇ ಇರಲಿಲ್ಲ ಅಲ್ಲವೆ? ಆದರೆ ಬಾಬಾಸಾಹೇಬರು ದ್ರಷ್ಟಾರರಾಗಿದ್ದರು. ಅವರೊಬ್ಬ ಮಹಾಪುರುಷರಾಗಿದ್ದರು. ಬದಲಾಗುತ್ತಿರುವ ಪರಿಸ್ಥಿತಿಯ ಅರಿವು ಮಾಡಿಕೊಳ್ಳುವ ಆಂತರಿಕ ಶಕ್ತಿಯನ್ನು ಹೊಂದಿದವರಾಗಿದ್ದರು. ಅವರಲ್ಲಿ ರಾಷ್ಟ್ರಭಕ್ತಿ ತುಂಬಿ ತುಳುಕುತ್ತಿದ್ದರಿಂದಲೇ ಅವರು ಸಮಯಾನುಸಾರವಾಗಿ ತಾನು ಮಾಡಬೇಕಾದ ಕಾರ್ಯದ ಕುರಿತು ನಿರ್ಣಯಿಸಬಲ್ಲವರಾಗಿದ್ದರು. ಇದರಿಂದಾಗಿಯೇ ಅವರು ರಾಷ್ಟ್ರವು ತನಗೆ ವಹಿಸಿದ ಜವಾಬ್ದಾರಿಯನ್ನು ಸ್ವೀಕರಿಸಿದರು. ಅವರ ವಿಷಯದಲ್ಲಿ ರಾಷ್ಟ್ರವು ಕೃತಜ್ಞವಾಗಿರಬೇಕು. ಈ ಮಾತು ಅರುಣ ಶೌರಿಯವರಿಗೆ ಒಪ್ಪಿಗೆಯಾಗದಿದ್ದಲ್ಲಿ ಅವರು ವಿಭಿನ್ನ ರೀತಿಯಲ್ಲಿ ಚ ಇಂತಿಸಲು, ನಿರ್ಣಯಿಸಲು ಸ್ವತಂತ್ರರಾಗಿದ್ದಾರೆ. ಹಾಗೆಯೇ ಅವರ ಈ ರೀತಿಯ ವ್ಯತಿರಿಕ್ತ ವಿಚಾರ – ನಿರ್ಣಯದಿಂದಾಗಿ ಅವರನ್ನು (ಶೌರಿಯವರನ್ನು) ಕೃತಜ್ಞ ಎನ್ನಲು ಇತರರೂ ಸ್ವತಂತ್ರರಾಗಿದ್ದಾರೆ. ಇದರಿಂದಾಗಿ ಅವರು ಕೋಪಿಸಿಕೊಳ್ಳುವ ಅಗತ್ಯವಿಲ್ಲ.
`ಶೌರಿಯವರ ಅಂಬೇಡ್ಕರ್ ಮತ್ತು ದೇಶದ ಅಂಬೇಡ್ಕರ್’ ಎಂಬ ಶೀರ್ಷಿಕೆ ಹೊತ್ತ ಈ ಲೇಖನದ ಮೇಲಿನ ಭಾಗವನ್ನು ಓದಿದ ಮೇಲೆ ನಿಮಗೆ ಈ ಪ್ರಕರಣದ ಇತಿಹಾಸ, ವರ್ತಮಾನ ಮತ್ತು ಭವಿಷ್ಯ ಗೊತ್ತಾಗುತ್ತದೆ ಎಂದುಕೊಂಡಿದ್ದೇನೆ.

ಈಗ ಮತ್ತ ನನ್ನ ಬ್ಲಾಗ್ ವಿಚಾರಕ್ಕೆ ಬರುತ್ತೇನೆ: ನಾನೊಬ್ಬ ವೃತ್ತಿ ಬಿಟ್ಟ ಪತ್ರಕರ್ತ. ಆದರೆ ಬರೆಯುವ ವಿಷಯದ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಇರಬೇಕು ಎಂಬ ಪ್ರಾಥಮಿಕ ತಿಳಿವಳಿಕೆ ನನಗಿದೆ. ಮಸ್ಕಿ ಖಂಡಿತವಾಗಿಯೂ ಅಂಬೇಡ್ಕರರನ್ನು ಹೀಗಳೆದಿರಬಹುದು ಎಂದು ನನಗೆ ಬಲವಾಗಿ ಅನ್ನಿಸಿದೆ. ಅವನ ಹತ್ತಿರ ಸರಿಸುಮಾರು ೨೦ ವರ್ಷ ಕಳೆದ ನನಗೆ ಅವನ ಈ ಕಳಪೆ ವಿಚಾರಗಳೆಲ್ಲ ಗೊತ್ತು. ಮೊದಲು ಅವುಗಳಲ್ಲಿ ಸ್ಟಫ್ ಇದೆ ಎಂದುಕೊಂಡಿದ್ದೆ. ಈಗ ಗೊತ್ತಾಗಿದೆ: ಅವನ ತಲೆಯಲ್ಲಿ ಇರೋದು ಇಷ್ಟೆ: ಬುದ್ಧಿವಂತಿಕೆಯ ಮಾತುಗಳನ್ನು ಆಡಿಕೊಂಡು ಹೇಗೆ ದುಡ್ಡು ಕಾಸು ಮಾಡಿಕೊಂಡು ಬದುಕಬೇಕು.
೧೯೮೪ರ ಜೂನ್ ತಿಂಗಳ ಎರಡನೇ ವಾರ ನಾನು, ಮಸ್ಕಿ, ಜಗದೀಶ್ ಎಲ್ಲರೂ ಶಿವಮೊಗ್ಗದಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಅಭ್ಯಾಸವರ್ಗದಲ್ಲಿ ಭಾಗವಹಿಸಿದ್ದೆವು. ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಈ ಕಾರ್ಯಾಗಾರದಲ್ಲಿಯೇ ಮಸ್ಕಿಯು ಪೂರ್ಣಾವಧಿ ಕಾರ್ಯಕರ್ತನಾಗಿ ವಿದ್ಯಾರ್ಥಿ ಪರಿಷತ್ತಿನ ಶಿವಮೊಗ್ಗ ಸಂಘಟನಾ ಕಾರ್ಯದರ್ಶಿಯಾಗಿದ್ದು. ಅದಾಗಲೇ ಜಗದೀಶ್‌ಜಿ ಕೂಡಾ ಪೂರ್ಣಾವಧಿ ಬಂದಿದ್ದರು. ಈ ಮಸ್ಕಿ ಮಾಡುತ್ತಿದ್ದ ಕಾಗೆ ಕಾಲಿನ ಅಕ್ಷರದ ಗೋಡೆ ಪತ್ರಿಕೆಗೆ ನಾನು ಮತ್ತು ಸಾಗರದ ನಾಗೇಂದ್ರ ನಿದ್ದೆಗೆಟ್ಟು ರೂಪ ಕೊಡುತ್ತಿದ್ದೆವು.

ಈಗ ಈ ಮಸ್ಕಿ ಎಲ್ಲವನ್ನೂ ಬಿಟ್ಟ ಹಾಗೆ ಕಾಣಿಸುತ್ತಿದ್ದಾನೆ. ನಾನು ಈತನ ಬಗ್ಗೆ ಕಳೆದ ಸೆಪ್ಟೆಂಬರಿನಿಂದ ಅಭಿಯಾನ ಆರಂಭಿಸಿದಾಗ, ಇದೆಲ್ಲ ನನ್ನ ವೈಯಕ್ತಿಕ ತೆವಲೇ ಎಂದು ಪ್ರಶ್ನಿಸಿಕೊಂಡಿದ್ದೆ. ನನ್ನ ಗೆಳೆಯರೂ `ಇದೆಲ್ಲ ಯಾಕೆ ಉಸಾಬರಿ’ ಎಂದಿದ್ದರು. ಆದರೆ ಈಗ ನನಗೆ ಮತ್ತೆ ಮತ್ತೆ ಖಚಿತವಾಗುತ್ತಿದೆ : ಈ ಮಸ್ಕಿಯ ಬಗ್ಗೆ ಜನರಿಗೆ ಕೊಂಚವಾದರೂ ಗೊತ್ತಾಗಿರೆಬಹುದು.

ಏಪ್ರಿಲ್ ೨೬ರ ನಂತರವೇ `ಮಸ್ಕಿ ಅರೆ ಇಸ್ಕಿ’ ಕಾಲಂ ಶುರು ಮಾಡಬೇಕು ಅಂದುಕೊಂಡಿದ್ದವನಿಗೆ ಈಗ ಅಂಬೇಡ್ಕರ್ ಅವಹೇಳನದ ಘಟನೆ ಬಂದಾಗಿನಿಂದ ಅನ್ನಿಸಿದ್ದಿಷ್ಟೆ: ನಾನಂತೂ ಬರೆಯುತ್ತಿದ್ದೇನೆ. ಈ ಸಂಘಟನೆಯಲ್ಲಿ, ಸೋ ಕಾಲ್ಡ್ ಸಂಘ ಪರಿವಾರದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುವವರು ಬೇರೆ ಯಾರಾದರೂ ಇದ್ದಾರೆಯೆ? ಅವನಿಗೆ ಫೋನ್ ಮಾಡಿ `ಎಲ್ಲಯ್ಯಾ ೪೦ ಲಕ್ಷ ಇನ್ನೂ ಬಂದಿಲ್ವಲ್ಲ?’ ಎಂದು ಯಾರಾದರೂ ಹಿರಿಯರು ಉಗಿದಿದ್ದಾರೆಯೆ? `ಸಹಕಾರ ಭಾರತಿ’ಯ ಪ್ರತಿಷ್ಠೆಯ ಬಗ್ಗೆಯೇ ಸದಾ ಕಾಳಜಿ ವಹಿಸುವ ನಮ್ಮ ಹಿರೀಕ ಕೊಂಕೋಡಿ ಪದ್ಮನಾಭರು ನಾನು ಬೈಂಡ್ ಮಾಡಿಸಿಕೊಟ್ಟ ಮಸ್ಕಿಯ ೮೦ ಲಕ್ಷ ಹಗರಣದ ಫೈಲನ್ನು ಮಂಗಳೂರಿನ ಸಹಕಾರ ಭಾರತಿಯ ಕಚೇರಿಯಲ್ಲೇ ಎಸೆದಿದ್ದಾರೋ?

ವಿಚಾರ ಮಾಡಬೇಕಿದೆ.

ಈ ಉದ್ದ ಬ್ಲಾಗನ್ನು ಓದಿದ ನಿಮ್ಮ ಕರ್ಮಕ್ಕೆ ನನ್ನ ವಂದನೆಗಳು.

Leave a Reply

Theme by Anders Norén