ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ. 

ನನ್ನ ಮತ್ತು ನನ್ನ ಮನೆಯ ಉಳಿದಿಬ್ಬರ ಮತದಾರ ಗುರುತು ಚೀಟಿಯಲ್ಲಿ ಹೋಲೋಗ್ರಾಮ್‌ ಒಂದನ್ನು ಬಿಟ್ಟರೆ ಎಲ್ಲವೂ ತಪ್ಪು ತಪ್ಪಾಗಿ ಮುದ್ರಿತವಾಗಿದ್ದವು! ಹೆಸರು ತಪ್ಪು, ವಿಳಾಸಗಳೆಲ್ಲ ಬೇರೆ ಬೇರೆ, ಮತದಾನದ ಬೂತ್‌ಗಳೂ ಬೇರೆ ಬೇರೆ, ಹುಟ್ಟಿದ ದಿನದ ಬದಲು ಖಾಲಿ ಜಾಗ…… ಹೀಗೆ. ಒಂದೂ ತಪ್ಪಿಲ್ಲದ ಮತದಾರ ಗುರುತು ಚೀಟಿ ಪಡೆಯುವುದು ಹೇಗೆ ಎಂದು ಚಿಂತಿಸಿದೆ; ಪರಿಹಾರ ಪಡೆದೆ! ಅದು ಹೀಗಿದೆ: 

  • ಮೊದಲು ನಾನು ಆನ್‌ಲೈನ್‌ನಲ್ಲಿ ದೂರು ಸಲ್ಲಿಸುವ ಅವಕಾಶ ಇದೆಯೇ ಎಂದು ನೋಡಿದೆ. ಅರ್ಜಿದಾರರು ಮೊದಲು ಚುನಾವಣಾ ಆಯೋಗದ ವೆಬ್‌ಸೈಟಿನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಅದನ್ನು ನಾನು ಮೊದಲ ಹೆಜ್ಜೆಯಾಗಿ ಮಾಡಿದೆ. ಅದರ ಕೊಂಡಿ ಇಲ್ಲಿದೆ: http://www.eci-citizenservicesforofficers.nic.in/cservices/default.aspxregn-page

EPIC inside

 

  • ಆಮೇಲೆ ನಾನು ದೂರು ಸಲ್ಲಿಸುವ ವಿಭಾಗಕ್ಕೆ ಹೋಗಿ ನನ್ನ ದೂರುಗಳನ್ನು ಸಲ್ಲಿಸಿದೆ. ನಾವು ಮೂವರ (ನಾನು, ನನ್ನ ಪತ್ನಿ ಮತ್ತು ಮಗ) ಎಪಿಕ್‌ ಸಂಖ್ಯೆಯನ್ನು ನಮೂದಿಸಿ, ಇವುಗಳಲ್ಲಿ ತಪ್ಪುಗಳೇ ತುಂಬಿವೆ ಎಂಬ ಮಾಹಿತಿಗಳನ್ನು ಸೂಕ್ತವಾಗಿ ಬರೆದೆ. ಈ ದೂರಿನ ಪಠ್ಯವನ್ನು ನಾನು ನನ್ನ ಜಿಮೈಲ್‌ನಲ್ಲಿ ಉಳಿಸಿಟ್ಟುಕೊಂಡೆ.
  • ನನ್ನ ದೂರನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿದ ಚುನಾವಣಾ ಆಯೋಗವು ನನಗೆ ಈಮೈಲ್‌ ಮಾಡಿದ ಮತ್ತು ಎಸ್‌ ಎಂ‌ ಎಸ್‌ ಮಾಡಿದ ಸಂದೇಶಗಳನ್ನೂ, ನನ್ನ ದೂರಿನ ಉಲ್ಲೇಖ ಸಂಖ್ಯೆಯನ್ನೂ ಜಿಮೈಲ್ ಡ್ರಾಫ್ಟಿನಲ್ಲಿ ಉಳಿಸಿಟ್ಟುಕೊಂಡೆ. ಆಯೋಗದ ಸಂದೇಶದ ಪ್ರಕಾರ  ಒಂದೇ ವಾರದೊಳಗೆ ನನಗೆ ಉತ್ತರ / ಪರಿಹಾರ ಬರುವುದಿತ್ತು.  ನನಗೆ ಬಂದ ಎಸ್‌ಎಂಸ್‌ನ ಪಠ್ಯ ಹೀಗಿದೆ:  ​Your Complaint has been Registered. COMPLAINT ID:KT/…………………….. DATE:25-6-2014 08:31:42 SUBJ.:EPIC AND ELECTORAL ROLL RESPONSE TIME:7 Day(s)  URL: http://eci-citizenservices.nic.in/
  • ಆನ್‌ಲೈನ್‌ ದೂರುಗಳ ವ್ಯವಸ್ಥೆಯು ಕೆಲಸ ಮಾಡುವುದಿಲ್ಲ ಎಂಬ ಖಚಿತ ಭರವಸೆ ನನಗಿತ್ತು. ಅದು ನಿಜವೂ ಆಯಿತು! ಒಂದು ವಾರ ಕಳೆದ ಮೇಲೆ ನಾನು ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಪ್ರಕಾರ ಥರ್ಡ್‌ ಪಾರ್ಟಿ ಮಾಹಿತಿ ಕೇಳುವ ಪ್ರಾವಧಾನವನ್ನು ಬಳಸಿದೆ. ಇದರ ಬಗ್ಗೆ ನಿಮಗೆ ಮಾಹಿತಿ ಇರಬೇಕು: ಮಾಹಿತಿ ಪಡೆಯುವ ಹಕ್ಕಿನ ಪ್ರಕಾರ ನೀವು ಮೂರನೇ ವ್ಯಕ್ತಿ ಬಗ್ಗೆ / ಸಾರ್ವಜನಿಕವಲ್ಲದ ಸಂಗತಿಗಳ ಬಗ್ಗೆ ಮಾಹಿತಿ ಕೇಳುವಂತಿಲ್ಲ. ಆದರೆ ನೀವೇ, ನಿಮ್ಮ ಅರ್ಜಿಯ ಬಗ್ಗೆ ಮಾಹಿತಿ ಕೇಳಬಹುದು. ನೀವು ಸಲ್ಲಿಸಿದ ಮಾಹಿತಿ ಪಡೆಯುವ ಹಕ್ಕಿನ ಅರ್ಜಿಯಲ್ಲಿ ಹೆಸರಿಸಿದ ಮೂರನೇ ವ್ಯಕ್ತಿಯೂ ನೀವೇ ಆಗಿದ್ದರೆ ಅದನ್ನು ಅರ್ಜಿ ಪಡೆದ ಸಂಸ್ಥೆಯು ಸ್ವೀಕರಿಸಲೇಬೇಕು. ನಾನು ಕೇಳಿದ್ದಿಷ್ಟೆ: ”ಈ ಅರ್ಜಿದಾರರು ಸಂಸ್ಥೆಗೆ ಸಲ್ಲಿಸಿದ ದೂರಿನ ಪರಿಹಾರದಲ್ಲಿ ವಿಳಂಬವಾದರೆ ಅದಕ್ಕೆ ಹೊಣೆ ಯಾರು? ಹೊಣೆಗಾರಿಕೆ ತಪ್ಪಿಸಿಕೊಂಡರೆ ಅದಕ್ಕೇನು ಶಿಕ್ಷೆ? ಈ ಮಾಹಿತಿ ಕೊಡಿ.” ನಾನು ಎಲ್ಲಿಯೂ ನನಗೆ ಸರಿಯಾದ ಮತದಾರರ ಗುರುತು ಚೀಟಿ ಬೇಕು ಎಂದು ಕೇಳಲೇ ಇಲ್ಲ.
  • ಈ ಅರ್ಜಿಯನ್ನು ನಾನು ೧೦ ರೂ.ಗಳ ಪೋಸ್ಟಲ್‌ ಆರ್ಡರ್‌ನೊಂದಿಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಕಳಿಸಿದೆ. (ವಿಳಾಸ: ಸಾರ್ವಜನಿಕ ಮಾಹಿತಿ ಅಧಿಕಾರಿ, ಮುಖ್ಯ ಚುನಾವಣಾ ಆಯುಕ್ತರ ಕಚೇರಿ, ಕರ್ನಾಟಕ ರಾಜ್ಯ , ಕಬ್ಬನ್ ಪಾರ್ಕ್
    ಬೆಂಗಳೂರು ೫೬೦೦೦೧ )
  • ಅದಾದ ಕೂಡಲೇ ಆಯುಕ್ತರ ಕಚೇರಿಯಿದ ನನಗೆ ಪತ್ರ ಬಂತು. ನನ್ನ ದೂರನ್ನು ಬಿಬಿಎಂಪಿಯ ಸಂಬಂಧಿತ ಕಚೇರಿಗೆ ವರ್ಗಾಯಿಸಿರುವುದಾಗಿಯೂ, ನನ್ನ ಶುಲ್ಕವನ್ನು ಜಮಾ ಮಾಡಿಕೊಂಡಿರುವುದಾಗಿಯೂ ಆಯೋಗದ ಪತ್ರ ತಿಳಿಸಿತು.
  • ಅದಾಗ ಒಂದೇ ವಾರದಲ್ಲಿ ನನಗೆ ಬಿಬಿಎಂಪಿ ಕಚೇರಿಯಿಂದ ಕರೆ ಬಂತು. ಗುರುತುಚೀಟಿಯಲ್ಲಿ ಇರುವ ತಪ್ಪುಗಳಿಗೆ ಕ್ಷಮೆ ಯಾಚಿಸಿದ ಆ ಅಧಿಕಾರಿಯು ನನಗೆ ಹಳೆಯ ಗುರುತುಚೀಟಿ ರದ್ದು ಮಾಡಲು ಕೋರಿದ ಅರ್ಜಿಗಳನ್ನು ಮತ್ತು ಹೊಸ ಗುರುತುಚೀಟಿಗೆ ಕೋರಿದ ಅರ್ಜಿಗಳನ್ನು ಛಾಯಾಚಿತ್ರ ಹಾಗೂ ವಿಳಾಸದ ದಾಖಲೆಯೊಂದಿಗೆ ಸಲ್ಲಿಸಲು ವಿನಂತಿಸಿದರು. ನಾನು ಬಿಬಿಎಂಪಿ ಕಚೇರಿಗೆ ಹೋಗಿ ಈ ಎರಡೂ ಜೊತೆಯ (ರದ್ದತಿ ಕೋರಿ ಮೂರು ಮತ್ತು ಹೊಸ ಚೀಟಿ ಕೋರಿ ಮೂರು) ಅರ್ಜಿಗಳನ್ನು ಸಲ್ಲಿಸಿದೆ.
  • ಅದಾಗಿ ಹದಿನೈದು ದಿನಗಳಲ್ಲಿ ನನಗೆ ಯಾವುದೇ ತಪ್ಪಿಲ್ಲದ (ಆದರೆ ಇಂಗ್ಲಿಶಿನಿಂದ ಕನ್ನಡಕ್ಕೆ ಆಟೋ ಟ್ರಾನ್ಸ್‌ಲಿಟರೇಟ್‌ ಆದ್ದರಿಂದ ಬೇಳೂರು ಬದಲು ಬೆಲೂರು ಎಂದು ಮುದ್ರಿತವಾಗಿತ್ತು)  ಮೂರು ಗುರುತುಚೀಟಿಗಳನ್ನು ಬಿಬಿಎಂಪಿ ಅಧಿಕಾರಿಯು ಕೊಟ್ಟರು. ಜೊತೆಗೇ ಈ ಪ್ರಕರಣ ಮುಕ್ತಾಯವಾಗಿದೆ ಎಂದು ನನಗೆ (ಮಾಹಿತಿ ಪಡೆಯುವ ಹಕ್ಕಿನ ಕಾಯ್ದೆ ಪ್ರಕಾರ) ಉತ್ತರ ನೀಡಿದ ಪತ್ರವನ್ನೂ ಕೊಟ್ಟು ದ್ವಿಪ್ರತಿಗೆ ಸಹಿ ಹಾಕಿಸಿಕೊಂಡರು.

ನಿಮ್ಮ ಗುರುತು ಚೀಟಿಯಲ್ಲಿ ಸಮಸ್ಯೆ ಇದ್ದರೆ, ಚುನಾವಣಾ ಸೀಸನ್‌ ಇಲ್ಲದೆಯೂ ಸರಿಪಡಿಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಅನುಭವದ ಉದಾಹರಣೆ. 

ಗ್ರಾಹಕರೇ ಜಾಗೃತರಾಗಿ….. ನಿಮ್ಮ ಹಕ್ಕುಗಳನ್ನು ನೀವೇ  ರಕ್ಷಿಸಿಕೊಳ್ಳಿ.

 

Leave a Reply

Theme by Anders Norén