ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು, ಸುದ್ದಿ

ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !

೨೦೧೦ರಲ್ಲಿ ಪಶ್ಚಿಮಘಟ್ಟ ಪ್ರದೇಶವನ್ನು ‘ಯುನೆಸ್ಕೋ’ ಸಂಸ್ಥೆಯು ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಎಂದು ಘೋಷಿಸುವ ಎಲ್ಲ ಸಾಧ್ಯತೆಗಳೂ ಇರುವುದರಿಂದ ಪಶ್ಚಿಮಘಟ್ಟದಲ್ಲಿ ಯಾವುದೇ ಬೃಹತ್ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡುವುದು ಸರ್ವಥಾ ‘ಜಾಗತಿಕ ಅಪರಾಧ’ವಾಗಲಿದೆ.

beluru-pravasa001-for-web

 

ಏಟ್ರೀ ಎಂಬ ಸರ್ಕಾರೇತರ ಸಂಸ್ಥೆಯು (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಫಾರ್ ಎಕಾಲಜಿ ಎಂಡ್ ಎನ್‌ವಿರಾನ್‌ಮೆಂಟ್) ಪಶ್ಚಿಮಘಟ್ಟ ಪ್ರದೇಶದ ಬಗ್ಗೆ ಹಲವು ಆಳ ಅಧ್ಯಯನಗಳನ್ನು ನಡೆಸಿ,  ವರದಿಗಳನ್ನು ತಯಾರಿಸಿ ಯುನೆಸ್ಕೋಗೆ ಸಲ್ಲಿಸಿದೆ. ಈಗ ರಾಜ್ಯಸರ್ಕಾರಗಳಿಗೆ ಯುನೆಸ್ಕೋವು ಪತ್ರ ಬರೆದು ಪಶ್ಚಿಮಘಟ್ಟದ ವಿವಿಧ ತಾಣಗಳ ಬಗ್ಗೆ ವರದಿಗಳನ್ನು ಕೇಳಿದೆ.

ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ಉದ್ದಕ್ಕೂ ಹಬ್ಬಿರುವ ಪಶ್ಚಿಮಘಟ್ಟದ ಬೆಟ್ಟಸಾಲಿನೊಳಗೆ ಇರುವ ೩೯ ಜೀವವೈವಿಧ್ಯ ತಾಣಗಳ ಬಗ್ಗೆ ಡೆಹ್ರಾಡೂನ್‌ನಲ್ಲಿ ಇರುವ ವರ್ಲ್ಡ್ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ವಿಶ್ವ ಪರಂಪರೆ ತಾಣ ನಾಮಕರಣಕ್ಕಾಗಿ ಅಧ್ಯಯನಪೂರ್ಣ ವರದಿಗಳನ್ನು ಸಲ್ಲಿಸಿದೆ. ಸದ್ಯದಲ್ಲೇ ಯುನೆಸ್ಕೋದ ಒಂದು ತಜ್ಞರ ತಂಡವು ಪಶ್ಚಿಮಘಟ್ಟಕ್ಕೆ ಭೇಟಿ ನೀಡಿ ಪಶ್ಚಿಮಘಟ್ಟವನ್ನು ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸುವ ಘೋಷಣೆಯನ್ನು ಅಂತಿಮಗೊಳಿಸಲಿದೆ. ವಿಶ್ವ ಪರಂಪರೆ ಸಮಾವೇಶಕ್ಕೆ (ವರ್ಲ್ಡ್ ಹೆರಿಟೇಜ್ ಕನ್ವೆನ್‌ಶನ್) ಭಾರತವೂ ಸಹಿ ಹಾಕಿದೆ.

ಈಗಾಗಲೇ ಪಶ್ಚಿಮ ಘಟ್ಟ ಪ್ರದೇಶವು ಜಗತ್ತಿನ ೩೪ ಪಾರಿಸರಿಕ ಹಾಟ್‌ಸ್ಪಾಟ್‌ಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ೨೦೦೬ರ ಮಾಚ್ ೧೫ರಂದು ಈ ಬಗ್ಗೆ ಏಟ್ರೀ ಸಂಸ್ಥೆ ಮತ್ತು ನೇಚರ್ ಕನ್ಸರ್ವೇಶನ್ ಫೌಂಡೇಶನ್ ಸಂಸ್ಥೆಗಳು ಜಂಟಿಯಾಗಿ ಅರ್ಜಿ ಸಲ್ಲಿಸುವುದರೊಂದಿಗೆ ಈ ಪ್ರಕ್ರಿಯೆಯು ಆರಂಭವಾಗಿದೆ. ಅಗಸ್ತ್ಯಮಲೈ ಸಬ್ ಕ್ಲಸ್ಟರ್, ಪೆರಿಯಾರ್ ಸಬ್ ಕ್ಲಸ್ಟರ್, ಅಣ್ಣಾಮಲೈ ಸಬ್ ಕ್ಲಸ್ಟರ್, ನೀಲಗಿರಿ ಸಬ್ ಕ್ಲಸ್ಟರ್, ತಲಕಾವೇರಿ ಸಬ್ ಕ್ಲಸ್ಟರ್, ಕುದುರೆಮುಖ ಸಬ್ ಕ್ಲಸ್ಟರ್, ಸಹ್ಯಾದ್ರಿ ಸಬ್ ಕ್ಲಸ್ಟರ್, – ಹೀಗೆ ಪ್ರಮುಖ ಬೆಟ್ಟಸಾಲುಗಳನ್ನು ವಿಶ್ವ ಪರಂಪರೆಗೆ ಸೇರಿಸುವ ಯತ್ನ ಈಗ ಅಂತಿಮ ಹಂತ ತಲುಪಿದೆ. ಅಂದಮೇಲೆ ಈ ಬೆಟ್ಟಸಾಲು ಘಟ್ಟ ಪ್ರದೇಶಗಳು ಮತ್ತು ಅವುಗಳ ಸುತ್ತಮುತ್ತ ಯಾವುದೇ ಬೃಹತ್ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ.

ತದಡಿಯೂ ಬೇಡ, ಗುಂಡ್ಯಾವೂ ಬೇಡ

 

beluru-pravasa-3044-for-web

 

ಉದಾಹರಣೆಗೆ ತದಡಿಯಲ್ಲಿ ನೈಸರ್ಗಿಕ ಅನಿಲ ಆಧಾರಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನೇ ತೆಗೆದುಕೊಳ್ಳಿ. ಇದು ನೇರವಾಗಿ ಪಶ್ಚಿಮಘಟ್ಟದ ಬುಡದಲ್ಲೇ ಸ್ಥಾಪನೆಯಾಗಲಿದೆ. ಆದ್ದರಿಂದ ಈ ಯೋಜನೆಯನ್ನು ಜಾರಿಗೊಳಿಸುವುದು ವಿಶ್ವ ಪರಂಪರೆ ತಾಣದ ನಿಯಮಗಳ ಉಲ್ಲಂಘನೆಯಾಗುತ್ತದೆ. ಹಾಗೆಯೇ ಗುಂಡ್ಯಾ ಜಲವಿದ್ಯುತ್ ಯೋಜನೆಯೂ ಇದೇ ವ್ಯಾಪ್ತಿಗೆ ಬರುತ್ತದೆ.

ಯುನೆಸ್ಕೋ ಪ್ರಕಟಣೆಯ ಹಂತಗಳು

ಯುನೆಸ್ಕೋದ ವಿಶ್ವ ಪರಂಪರೆ ತಾಣಪಟ್ಟಿಯ ತಾತ್ಕಾಲಿಕ ಪಟ್ಟಿಯಲ್ಲಿ ಪಶ್ಚಿಮಘಟ್ಟವು ಈಗಾಗಲೇ ಸೇರಿಕೊಂಡಿರುವುದರಿಂದ ಅದು ಖಾಯಮ್ಮಾಗುವುದು ಒಂದು ಔಪಚಾರಿಕ ಕ್ರಮವಷ್ಟೆ. ಈ ತಾತ್ಕಾಲಿಕ ಪಟ್ಟಿಯಿಂದ ನಾಮಿನೇಶನ್ ಕಡತಕ್ಕೆ ಸೇರಿಕೊಳ್ಳುವುದು ಎರಡನೇ ಹಂತ. ಈ ಹಂತದಲ್ಲಿ ದಾಖಲೀಕರಣಕ್ಕೆ ಬೇಕಾದ ಸಹಾಯವನ್ನು ಯುನೆಸ್ಕೋವೇ ಒದಗಿಸಿ ಆಯಾ ರಾಜ್ಯಕ್ಕೆ / ಆಡಳಿತಕ್ಕೆ ನೆರವು ನೀಡುತ್ತದೆ. ಈ ನಾಮಕರಣ ಅರ್ಜಿಯನ್ನು ಸರ್ಕಾರವು ಸಲ್ಲಿಸಿದ ನಂತರ ವಿಶ್ವ ಪರಂಪರೆ ಕೇಂದ್ರವು ಸ್ತಳಕ್ಕೆ ಒಂದು ಮೌಲ್ಯಮಾಪನ ತಂಡವನ್ನು ಕಳಿಸಿಕೊಡುತ್ತದೆ.

ಮೂರನೇ ಹಂತದಲ್ಲಿ ಎರಡು ಸಲಹಾ ತಂಡಗಳು ಪ್ರತ್ಯೇಕವಾಗಿ ಈ ತಾಣದ ಮೌಲ್ಯಮಾಪನ ನಡೆಸುತ್ತವೆ. ಒಂದು: ದಿ ಇಂಟರ್‌ನ್ಯಾಶನ್ಲ್ ಕೌನ್ಸಿಲ್ ಆನ್ ಮಾನ್ಯುಮೆಂಟ್ಸ್ ಎಂಡ್ ಸೈಟ್ಸ್. ಎರಡು: ವರ್ಲ್ಡ್ ಕನ್ಸವೇರ್ಶಶನ್ ಯೂನಿಯನ್. ಇದಾದಮೇಲೆ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ದಿ ಸ್ಟಡಿ ಆಫ್ ದಿ ಪ್ರಿಸರ್ವೇಶನ್ ಎಂಡ್ ರೆಸ್ಟೋರೇಶನ್ ಆಫ್ ಕಲ್ಚರಲ್ ಪ್ರಾಪರ್ಟಿ ಎಂಬ ಸಂಸ್ಥೆಯು ವಿಶ್ವ ಪರಂಪರೆ ಸಮಿತಿಗೆ ತಾಣದ ಸಂರಕ್ಷಣೆಯ ಬಗ್ಗೆ ಸಲಹೆಗಳನ್ನು ನೀಡುತ್ತದೆಯಲ್ಲದೆ ತರಬೇತಿ ಕ್ರಮಗಳ ಬಗ್ಗೆಯೂ ಮಾಹಿತಿ ನೀಡುತ್ತದೆ.

ಈ ಮೌಲ್ಯಮಾಪನವು ನಡೆದ ಮೇಲೆ ಅಂತಿಮ ನಿರ್ಣಯ ಕೈಗೊಳ್ಳುವುದು ವಿಶ್ವ ಪರಂಪರೆ ಸಮಿತಿಗೆ ಸೇರಿದ್ದು. ಈ ಸಮಿತಿಯು ವರ್ಷಕ್ಕೊಮ್ಮೆ ಸಭೆ ಸೇರಿ ವಿಶ್ವ ಪರಂಪರೆ ತಾಣವನ್ನು ಪ್ರಕಟಿಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತದೆ.

ಲಾಭವೇನು?

beluru-pravasa-3131-for-web

 

ಅಭಿವೃದ್ಧಿಶೀಲ ದೇಶವಾದ ಭಾರತದಲ್ಲಿ ಪಶ್ಚಿಮಘಟ್ಟವನ್ನು ವಿಶ್ವಪರಂಪರೆಗೆ ಸೇರಿಸಿದಾಗ ತಾಣದ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ೪೦ ಲಕ್ಷ ಅಮೆರಿಕನ್ ಡಾಲರ್ ನೆರವು ಸಿಗುತ್ತದೆ. ಅಲ್ಲದೆ ಮಾನವನಿರ್ಮಿತ ಅಥವಾ ನೈಸರ್ಗಿಕ ವಿಕೋಪಗಳಿಗೆ ಸಹಾ ತುರ್ತು  ನೆರವು ದೊರಕುತ್ತದೆ. ವಿಶ್ವಪರಂಪರೆಯ ತಾಣ ಎಂದು ಘೋಷಿತವಾದರೆ ಈ ಪ್ರದೇಶದ ಬಗ್ಗೆ ಜನಜಾಗೃತಿ ಹೆಚ್ಚುತ್ತದೆ. ಪ್ರವಾಸಿಗರು ಈ ಸದುದ್ದೇಶದಿಂದ ಭೇಟಿ ನೀಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪಶ್ಚಿಮಘಟ್ಟವು ವಿಶ್ವಪರಂಪರೆಯ ತಾಣವಾದಾಗ ಅದರ ಬಗ್ಗೆ ನಮ್ಮ ಯುವಜನಾಂಗವು ಹೆಚ್ಚು ಪ್ರೀತಿ ತಾಳುತ್ತದೆ.  ಅಲ್ಲದೆ ಈ ಪ್ರದೇಶವನ್ನು ಸಂರಕ್ಷಿಸುವುದು ಸರ್ಕಾರದ, ಜನರ ಮತ್ತು ಎಲ್ಲ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳ ಆದ್ಯ ಕರ್ತವ್ಯವಾಗುತ್ತದೆ.

ಈ ಎಲ್ಲ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಮಡಿಲಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಎಲ್ಲಾ ಬೃಹತ್ ಯೋಜನೆಗಳನ್ನೂ ರಾಜ್ಯಸರ್ಕಾರವು ಸ್ಥಗಿತಗೊಳಿಸುವುದು ಹೊಣೆಗಾರಿಕೆಯ ಮತ್ತು ವಿವೇಚನೆಯ ಕ್ರಮವಾಗುತ್ತದೆ. ಅದಿಲ್ಲದೆ, ಯಾವಾಗಲೋ ವಶಪಡಿಸಿಕೊಂಡ ಜಾಗವನ್ನು ಹೇಗಾದರೂ ಮಾಡಿ ಬೃಹತ್ ಉದ್ಯಮಗಳಿಗೆ ಅಡ ಇಡುವ ತರಾತುರಿಯನ್ನೇ ಪ್ರಕಟಿಸಿದರೆ ಸರ್ಕಾರವು ಮುಂದಿನ ಜನಾಂಗದ ಶಾಪಕ್ಕೆ ಗುರಿಯಾಗುವುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಪರಿಸರ ರಕ್ಷಣೆ ಮಾಡುವುದು ನಮ್ಮ ಮುಂದಿನ ಪೀಳಿಗೆಗೆ ಸಲ್ಲಿಸಬಹುದಾದ ಒಂದೇ ಒಂದು ಪಶ್ಚಾತ್ತಾಪದ ಕಾರ್ಯ. ಅದನ್ನೂ ಮಾಡುವುದಕ್ಕೆ ನಮಗೆ ಹಿಂಜರಿಕೆ ಏಕೆ?

ಹೆಚ್ಚಿನ ಮಾಹಿತಿಗೆ

 

 

 

Leave a Reply

Theme by Anders Norén