ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?

(ಬಿಟಿ ಬದನೆ ಬಗ್ಗೆ ಡಾ. ಎಸ್. ಶಾಂತಾರಾಂ ವಿಜಯಕರ್ನಾಟಕದಲ್ಲಿ ಕೊಟ್ಟ ಸಂದರ್ಶನ ಮತ್ತು ಅದಕ್ಕೆ ನಾನು ನೀಡಿದ ಪ್ರತಿಕ್ರಿಯೆಯನ್ನು ಮಿತ್ರಮಾಧ್ಯಮದಲ್ಲಿ ಓದಿದ್ದೀರಷ್ಟೆ? ಸದರಿ ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಕಳಿಸಿದ್ದ, ಆದರೆ ಪ್ರಕಟವಾಗದೇ ಹೋದ ಇನ್ನೆರಡು ಪ್ರತಿಕ್ರಿಯೆಗಳನ್ನು ಆಯಾ ಲೇಖಕರು ನನಗೆ ಕಳಿಸಿಕೊಟ್ಟಿದ್ದಾರೆ. ಅವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನ  ಶ್ರೀ ಸಂತೋಷ ಕೌಲಗಿಯವರದು . ಇನ್ನೊಂದು ಲೇಖನ ಶ್ರೀ ಆನೆಕಟ್ಟೆ ವಿಶ್ವನಾಥರದು. ಓದಿ ಪ್ರತಿಕ್ರಿಯಿಸಿ. )

ಶಾಂತಾರಾಂ ಯಾರು?

ಶಾಂತಾರಾಂ ಅವರೊಂದಿಗಿನ ಸಂದರ್ಶನವನ್ನು ವಿಜಯಕರ್ನಾಟಕದ ಕೆಲವು ಓದುಗರಾದರೂ ಮೆಚ್ಚಿದ್ದರೆ ಅಂತಹವರು ಶಾಂತಾರಾಂ ಅವರ ಜಾತಕವನ್ನು ಒಂದಿಷ್ಟು ಪರಿಚಯ ಮಾಡಿಕೊಳ್ಳುವುದು ಒಳ್ಳೆಯದು. ಸಂದರ್ಶಕರೇ ಹೇಳಿರುವಂತೆ ಕಳೆದ ಮೂವತ್ತೈದು ವರ್ಷಗಳಿಂದ ಶಂತನು ಶಾಂತಾರಾಂ ಅವರು ಅಮೇರಿಕೆಯಲ್ಲಿರುತ್ತಾರೆ. ಅವರು ಸೇವೆ ಸಲ್ಲಿಸಿದ್ದು ಯು.ಎಸ್.ಡಿ.ಎ. ಅಂದರೆ ಅಮೇರಿಕೆಯ ಕೃಷಿ ಇಲಾಖೆ. ಇದು ಅಮೇರಿಕಾ ಸರ್ಕಾರದ ದೊಡ್ಡ ಇಲಾಖೆಯಾಗಿದ್ದು ಅದು ಯು.ಎಸ್. ಏಡ್ ಮೂಲಕ ಕುಲಾಂತರ ತಳಿ ಆಹಾರವನ್ನು ಬಲಾತ್ಕಾರವಾಗಿ ಇತರ ದೇಶಗಳಿಗೆ ದಬ್ಬುವ ಕೆಲಸ ಮಾಡುತ್ತಾಬಂದಿದೆ. ನಿವೃತ್ತರಾದ ಮೇಲೆ ಶಾಂತಾರಾಂ ಅವರು ಕೆಲಸಮಾಡಿದ / ಮಾಡುತ್ತಿರುವ ಸೆಂಜೆಂಟಾ ಬಹುರಾಷ್ಟ್ರೀಯ ಕಂಪನಿ ಪ್ರಪಂಚದಲ್ಲೇ ಬಹುದೊಡ್ಡ ಕುಲಾಂತರಿ ಬೀಜ ಹಾಗೂ ರಾಸಾಯನಿಕಗಳ ಉತ್ಪತ್ತಿಯಲ್ಲಿ ತೊಡಗಿಕೊಂಡಿರುವ ಕಂಪನಿ. ಹಾಗಾಗಿ ಶಾಂತಾರಾಂ ಅವರದು ಒಬ್ಬ ಸೇಲ್ಸ್‌ಮನ್ ಕೆಲಸ. ಹಣ ಪಡಿಯುತ್ತಿರುವ ಕಂಪನಿಗಳಿಗೆ ಇರುವ ಅವರ ನಿಷ್ಠೆ ಪ್ರಶ್ನಾತೀತ. ಯುಸ್.ಡಿ.ಎ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಅವರ ಸೇವೆಯನ್ನು ಪಡೆಯುತ್ತಿರುವುದು ಅವರಿಗಿರುವ ಬಿ.ಟಿ.ಜ್ಞಾನಕ್ಕಿಂತ ಹೆಚ್ಚಾಗಿ ಅವರಿಗಿರುವ ಬಾಯಿಬಡಕುತನಕ್ಕಾಗಿ. ಆ ಕಂಪನಿಗಳು ಅವರನ್ನು ಕೆಲಸಕ್ಕೆ ಇಟ್ಟುಕೊಂಡಿರುವುದೇ ಬೆರ್ಚಪ್ಪನ ಕೆಲಸಮಾಡುವುದಕ್ಕಾಗಿ. ಬಿ.ಟಿ.ತಂತ್ರಜ್ಞಾನದ ಮೇಲೆ ಮಾಡಿರುವ ಅವರ ಸಂಶೋಧನೆ ಅತ್ಯಲ್ಪ, ತುತ್ತೂರಿ ಊದುವ ಕೆಲಸವೆ ಹೆಚ್ಚು. ಬಿ.ಟಿ. ವಲಯದಲ್ಲಿ ಅವರ ಬಾಯಿಬಡುಕತನ ಸುಪರಿಚಿತ.
 
ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?

ಶಾಂತಾರಾಂ ಅವರು ಬಿ.ಟಿ.ವಿರೋಧಿಗಳ ಬಾಯಿ ಮುಚ್ಚಿಸಲು ಮಾಡಿರುವ ಹೊಸ ಉಪಾಯವೆಂದರೆ ವಿಜ್ಞಾನಿಗಳಲ್ಲದವರು ಸಂಶೋಧನೆಗಳ ಬಗ್ಗೆ ಮಾತನಾಡಬಾರದು ಎಂಬ ಬಹುದೊಡ್ಡ ತಾತ್ವಿಕ ನೆಲೆಗಟ್ಟನ್ನು! ಅಂದರೆ ಚಪ್ಪಲಿ ಹೊಲೆದುಕೊಟ್ಟವನು ಹೇಗೇ ಹೊಲಿದಿದ್ದರೂ ಅದು ಎಲ್ಲಿ ಚುಚ್ಚುತ್ತಿದ್ದರೂ ಧರಿಸುವವನು ಅದರ ಬಗ್ಗೆ ಚಕಾರವೆತ್ತಬಾರದು. ಸಮಾಜದ ಹಿತಕ್ಕೆ ಧಕ್ಕೆ ತರುವಂಥಹ ಯಾವುದೇ ವಿಚಾರ ಬಂದರೂ ಅದರ ಬಗ್ಗೆ ಮಾತನಾಡುವ ಹಕ್ಕು ಸಮಾಜದ ಎಲ್ಲ ಜನರಿಗೂ ಇದೆ. ಬೆರಳೆಣಿಕೆಯಷ್ಟು ವಿಜ್ಞಾನಿಗಳು ತಮ್ಮ ಸೀಮಿತ ದೃಷ್ಟಿಕೋನದಿಂದ ಬಹುರಾಷ್ಟ್ರೀಯ ಕಂಪನಿಗಳ ಆಮಿಷಕ್ಕೆ ಒಳಗಾಗಿ ಮಾಡಿದ ಸಂಶೋಧನೆಗಳನ್ನು ಕೋಟ್ಯಾಂತರ ರೈತರು ಒಪ್ಪಿಕೊಂಡು ಬಿಡಬೇಕು ಎಂಬುದು ಶಾಂತಾರಾಂ ಅವರ ವಾದ. ವಿಜ್ಞಾನಿಗಳು ಎಂಬ ಸಮಗ್ರ ದೃಷ್ಟಿಯಿಲ್ಲದ ಒಂದು ವರ್ಗ ಹೇಳಿದ್ದೇ ಸರಿ, ಮಿಕ್ಕವರೆಲ್ಲರೂ ದಡ್ಡರು ಎಂಬ ಶಾಂತಾರಾಂ ಅವರ ಮಾತು ಅವರ ದುರಹಂಕಾರಕ್ಕೆ ಒಂದು ಉದಾಹರಣೆ.

ತಪ್ಪಿಸಿಕೊಂಡು ಓಡಾಡುತ್ತಿರುವವರು ಯಾರು?

ಬಿ.ಟಿ.ಯ ಬಗ್ಗೆ ವಿಷಯಾಧಾರಿತ ಚರ್ಚೆಯಾಗಬೇಕು ಎನ್ನುವ ಶಾಂತಾರಾಂ ಅವರ ಮಾತನ್ನು ನಾನು ಒಪ್ಪುತ್ತೇನೆ. ಕಳೆದ ಆರೇಳು ವರ್ಷಗಳಲ್ಲಿ ಬಿ.ಟಿ.ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ತುಂಬ ಅನೇಕ ಸಾರ್ವಜನಿಕ ಚರ್ಚೆಗಳಾಗಿವೆ. ಸಾರ್ವಜನಿಕರ ಮುಂದೆ ಪರವಿರೋಧಗಳ ಚರ್ಚೆಗಳನ್ನು ಏರ್ಪಡಿಸಲು ಪ್ರಯತ್ನಮಾಡಲಾಗಿದೆ. ಎಲ್ಲ ಸಭೆಗಳಲ್ಲೂ ಬಿ.ಟಿ.ವಿರೋಧಿಗಳು ಧೈರ್ಯವಾಗಿ ಭಾಗವಹಿಸಿ ತಮ್ಮ ವಿಚಾರವನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ. ಆದರೆ ಪ್ರತಿಸಭೆಯ ಸಂದಂರ್ಭದಲ್ಲೂ ಬಿ.ಟಿ. ಪರ ಇರುವವರು ವಿಜ್ಞಾನಿಗಳು ಏನೋ ಕಾರಣ ಹೇಳಿ ತಪ್ಪಸಿಕೊಂಡಿದ್ದಾರೆ. ಅದರಲ್ಲೂ ಕಂಪನಿಗಳ ವಿಜ್ಞಾನಿಗಳು ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಕಣ್ಣಿಗೇ ಕಾಣಿಸುವುದಿಲ್ಲ. ಅವರಿಗೆ ನಿಜಕ್ಕೂ ತಮ್ಮ ಲಾಭಕ್ಕಿಂತ ರೈತಹಿತ, ಜನಹಿತ, ದೇಶಹಿತ ಮುಖ್ಯವಾಗಿದ್ದರೆ ಸಾರ್ವಜನಿಕರ ಮುಂದೆ ತಮ್ಮ ವಿಚಾರ ಮಂಡಿಸಿ ಸಮಾಜದ ಒಪ್ಪಿಗೆ ಪಡೆಯಬೇಕಿತ್ತು. ಅಷ್ಟೊಂದು ಕಷ್ಟವನ್ನು ಅವರೇಕೆ ಅನುಭವಿಸಬೇಕು ಹೇಳಿ. ಅವರಿಗೆ ಬಿ.ಟಿ.ತಂತ್ರಜ್ಞಾನವನ್ನು ದೇಶದೊಳಗೆ ತಳ್ಳಲು ಎಲ್ಲಿ ವಶೀಲಿ ಹಚ್ಚಬೇಕು, ಎಲ್ಲಿ ಹಣ ಚೆಲ್ಲಬೇಕು, ಯಾರನ್ನು ಹಿಡಿಯಬೇಕು ಎಂಬುದು ಚೆನ್ನಾಗಿಗೊತ್ತಿದೆ.

ಸಮಗ್ರತೆಯ ಕೊರತೆ

ಶಾಂತಾರಾಂ ಅಂತಹ ಅಲ್ಪಜ್ಞಾನದ ವಿಜ್ಞಾನಿಗಳಿಗೆ ಒಂದು ಸಮಗ್ರವಾದ ದೃಷ್ಟಿಕೋನವಿಲ್ಲವೆಂಬುದು ಅವರ ಸಂದರ್ಶನವನ್ನು ನೋಡಿದರೆ ಸಾಮಾನ್ಯ ತಿಳುವಳಿಕೆಯುಳ್ಳ ಯಾರಿಗಾದರೂ ಅರ್ಥವಾಗುತ್ತದೆ. ಇಂದಿನ ಆಧುನಿಕತೆಯ ಎಲ್ಲ ಅವಘಡಗಳಿಗೂ ಸೀಮಿತ ದೃಷ್ಟಿಕೋನದ, ಸಮೀಪದೃಷ್ಟಿಯ ವಿಜ್ಞಾನಿಗಳು, ತಂತ್ರಜ್ಞರುಗಳೇ ಕಾರಣ. ಸಮಸ್ಯೆಯನ್ನು ಉಂಟುಮಾಡುವವರೂ ಅವರೇ, ಅದಕ್ಕೆ ಉತ್ತರ ಹುಡುಕುವವರೂ ಅವರೇ, ಅವರ ಬೆನ್ನುತಟ್ಟಿಕೊಳ್ಳುವವರೂ ಅವರೇ. ಬಿ.ಟಿ.ಸೇರಿಸಿ ಕೀಟಗಳನ್ನು ಎದುರಿಸಿಬಿಡುವ ಶಕ್ತಿಯನ್ನು ಸಸ್ಯಗಳಿಗೆ ಕೊಟ್ಟುಬಿಟ್ಟರೆ ಎಲ್ಲ ಸಮಸ್ಯೆಗಳೂ ಬಗೆಹರಿದು ಹೋಗುತ್ತವೆ ಎಂದು ಕೊಂಡಿರುವ ಶಾಂತಾರಾಂ ಅಂತಹವರಿಗೆ ಏನು ಹೇಳೋಣ? ಪ್ರತಿಯೊಂದು ಸಸ್ಯಕ್ಕೂ, ಬೀಜಕ್ಕೂ ಇಳುವರಿಯೊಂದಿಗೆ ಪರಿಸರ, ಸಮಾಜಿಕ, ಆರ್ಥಿಕ ಆಯಾಮಗಳು ಇವೆ ಎಂಬ ವಿಚಾರವನ್ನು ಇವರ ತಲೆಗೆ ಸೇರಿಸುವುದು ಹೇಗೆ?

ಬಿ.ಟಿ.ತಂತ್ರಜ್ಞಾನವನ್ನು ವಿರೋಧಿಸುತ್ತಿರುವ ಜನರಿಗೆ ತಂತ್ರಜ್ಞಾನದ ಬಗೆಗಿನ ಆತಂಕದೊಂದಿಗೆ ಈ ತಂತ್ರಜ್ಞಾನ ದೇಶದ ಮೇಲೆ, ದೇಶದ ಬಡರೈತರ ಮೇಲೆ, ದೇಶದ ಪ್ರಕೃತಿ ಸಂಪತ್ತಿನ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಆತಂಕವಿದೆ. ಆದರೆ ಬಿ.ಟಿ.ಜನರಿಗೆ ಬೀಜ ಹಂಚಿ ದುಡ್ಡು ಮಾಡುವ ಹವಣಿಕೆ ಮಾತ್ರವಿದೆ.

ಬಾಣಲೆಯಿಂದ ಬೆಂಕಿಗೆ

ಶಾಂತಾರಾಂ ಅವರೇ ಹೇಳಿರುವಂತೆ ಹತ್ತು ಸಾವಿರ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಆಗದಿದ್ದ ಬದಲಾವಣೆ ಕಳೆದ ಐವತ್ತು ವರ್ಷಗಳಲ್ಲಿ ಆಗಿದೆ. ಕೃಷಿಕ್ಷೇತ್ರ ಸದಾಕಾಲ ಪ್ರಕೃತಿಹಾಕಿಕೊಟ್ಟಿರುವ ಚೌಕಟ್ಟಿನಲ್ಲಿ ಕೆಲಸಮಾಡುವಂತಹದು. ಪ್ರಕೃತಿಗೆ ಮನುಷ್ಯ ಬಯಸುವಷ್ಟು ವೇಗವಿಲ್ಲ. ಅದಕ್ಕೆ ತನ್ನದೇ ಆದ ವೇಗವಿದೆ. ಪ್ರಕೃತಿ ತನ್ನಲ್ಲಿ ಸಣ್ಣದೊಂದು ಬದಲಾವಣೆ ಮಾಡಿಕೊಳ್ಳಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇಪ್ಪತ್ತನೇ ಶತಮಾನದ ಆಧುನಿಕ ಮನುಷ್ಯನ ಹುಟ್ಟುಗುಣ ಆತುರ ಮತ್ತು ವೇಗ. ಆತುರದ ಮನುಷ್ಯನ ಕೈಗೆ ಇಪ್ಪತ್ತನೇ ಶತಮಾನದ ಕೃಷಿ ಸಿಕ್ಕಿಬಿದ್ದಿತು. ಹತ್ತು ಸಾವಿರ ವರ್ಷಗಳಲ್ಲಿ ಆಗದಿದ್ದ ಅನಾಹುತಗಳು ಐವತ್ತು ವರ್ಷಗಳಲ್ಲಿ ಆಯಿತು. ಆಧುನಿಕ ಮನುಷ್ಯ ಪ್ರಕೃತಿಯನ್ನು ನಾಶಮಾಡಿದ, ಮೇಲ್ಮಣ್ಣನ್ನು ತೂರಿಬಿಟ್ಟ, ಇತರೆ ಜೀವಜಂತುಗಳು ಭೂಮಿಯ ಮೇಲೆ ಉಳಿಯದಂತೆ ಮಾಡಿಬಿಟ್ಟ. ಕಡೆಗೆ ಕೃಷಿಯಲ್ಲಿ ಸೋತು ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯನ್ನೂ ನಿರ್ಮಾಣ ಮಾಡಿದ. ಇಷ್ಟು ಸಾಲದೇ ನಮ್ಮ ಸಾಧನೆಗೆ?

ಹಸಿರುಕ್ರಾಂತಿ ಎಂಬ ಮಾಯೆ

ನಾರ್ಮನ್ ಬೋರ್ಲಾಗ್ ಅವರ ಸಂಶೋಧನೆಗಳನ್ನಾಧರಿಸಿ ಹಸಿರುಕ್ರಾಂತಿ ಮಾಡಿ ಒಂದೆರಡು ದಶಕಗಳ ಕಾಲ ಆಹಾರ ಉತ್ಪತ್ತಿ ಹೆಚ್ಚು ಮಾಡಿದ್ದು ನಿಜ. ಹಸಿರುಕ್ರಾಂತಿಯಿಂದ ಆಹಾರ ಉತ್ಪಾದನೆಯಲ್ಲಿ ಆದ ಹೆಚ್ಚಳ ನಾಲ್ಕು ಪಟ್ಟು; ಅದೇ ಸಮಯದಲ್ಲಿ ರಾಸಾಯನಿಕಗಳ ಮೇಲಿನ ನಮ್ಮ ಅವಲಂಬನೆ ಹೆಚ್ಚಿದ್ದು ಮುನ್ನೂರು ಪಟ್ಟು. ಆಹಾರ ಉತ್ಪಾದನೆಯನ್ನು ಹೆಚ್ಚಿಸಿದ್ದೇವೆ ಎನ್ನುವ ವಿಜ್ಞಾನಿಗಳು ಈ ಅಂಶವನ್ನೇಕೆ ಮುಚ್ಚಿಡುತ್ತಾರೆ. ಹಸಿರು ಕ್ರಾಂತಿಯನ್ನು ನಮಗೆ ತಗುಲಿಹಾಕಲು ಅಮೇರಿಕಾ ನಡೆಸಿದ ಹುನ್ನಾರದ್ದೇ ದೊಡ್ಡ ಕಥೆಯಿದೆ. ಸರ್ಕಾರ ಕಳೆದ ವರ್ಷ ರಾಸಾಯನಿಕ ಗೊಬ್ಬರಗಳ ಹೆಸರಿನಲ್ಲಿ ಗೊಬ್ಬರದ ಕಂಪನಿಗಳಿಗೆ ನೀಡಿದ ಸಬ್ಸಿಡಿ ಹಣ ೪೯ಸಾವಿರ ಕೋಟಿ. ಈ ವರ್ಷ ಅದು ೧ ಲಕ್ಷದ ೨೦ಸಾವಿರ ಕೋಟಿ ರುಪಾಯಿ. ಅಂದರೆ ದೇಶದ ಪ್ರತಿ ಹೆಕ್ಟೇರ್ ಕೃಷಿಭೂಮಿಗೆ ಕೊಟ್ಟ ಸಬ್ಸಿಡಿ ರೂ ೮೫೦೦. ಈಗಾಗಲೇ ಗೊಬ್ಬರ ಕೊಡಲಾಗದೆ ಪರದಾಡುತ್ತಿರುವ ಸರ್ಕಾರಗಳು ಇಡೀ ದೇಶ ರಾಸಾಯನಿಕ ಕೃಷಿಯನ್ನು ಅವಲಂಬಿಸಿದರೆ ಎಲ್ಲಿಗೆ ಹೋಗುತ್ತವೆ. ವಾಸ್ತವದಲ್ಲಿ ರಾಸಾಯನಿಕ ಕೃಷಿ ಕಿಚನ್‌ಗಾರ್ಡನ್ ಕೃಷಿ. ರಾಸಾಯನಿಕ ಮುಕ್ತ ಕೃಷಿಯೇ ದೇಶದ ಕೃಷಿ. ಹಸಿರುಕ್ರಾಂತಿ ಮಾಡಿದ್ದು ಇದನ್ನೇ. ಇಂದಿನ ರೈತರು ಕಳೆದ ಐವತ್ತು ವರ್ಷಗಳಲ್ಲಿ ತಮ್ಮ ಸ್ವತಂತ್ರವನ್ನು ಸಂಪೂರ್ಣವಾಗಿ ಕಳೆದುಕೊಂಡು ಮಳೆಬಂದಾಗ ಉಳುಮೆಮಾಡದೆ, ಟ್ರಾಕ್ಟರ್ ಮಾಲೀಕರ ಹಿಂದೆ, ಬೀಜ ಗೊಬ್ಬರಗಳ ಅಂಗಡಿಗಳ ಮುಂದೆ ನಾಯಿಗಳಂತೆ ಸುತ್ತುತ್ತಾ ಪೋಲೀಸರ ಗುಂಡಿಗೆ ಬಲಿಯಾಗುವಂತೆ ಮಾಡಿದರು ಯಾರು?

ಕುಲಾಂತರೀ ತಳಿ – ಪ್ರಕೃತಿ ವಿರೋಧಿ

ಕುಲಾಂತರೀ ತಳಿಗಳ ಬಗ್ಗೆ ಮಾತನಾಡುತ್ತಿರುವ ಜನ ತಾವೇ ಆಧುನಿಕ ಬ್ರಹ್ಮರಾಗಲು ಹೊರಟಿದ್ದಾರೆ. ಪ್ರಕೃತಿ ತಾನು ಹುಟ್ಟುಹಾಕಿದ ಬದನೆಗಿಡಕ್ಕೆ ರೋಗಬರಬಾರದು ಎಂದು ತೀರ್ಮಾನಿಸಿದ್ದರೆ ಬದನೆ ಗಿಡಕ್ಕೆ ಬಿ.ಟಿ.ಗುಣಗಳನ್ನು ಸೇರಿಸಿಬಿಡುವ ವಿವೇಕ ಅದಕ್ಕಿರುತ್ತಿರಲಿಲ್ಲವೇ? ಪ್ರಕೃತಿ ಬದನೆಗಿಡವನ್ನು ಇಟ್ಟಿದೆ, ಬಿ.ಟಿ.ಯನ್ನು ಇಟ್ಟಿದೆ, ಲೆಪಿಡೊಪ್ಟೆರಾ ಗುಂಪಿನ ಕೀಟಗಳನ್ನೂ ಇಟ್ಟಿದೆ. ದೀರ್ಘದೃಷ್ಟಿಕೋನದ ಪ್ರಕೃತಿಗೆ ಈ ಮೂರರ ಮಹತ್ವವೂ ಇತಿಮಿತಿಯ ಅರಿವೂ ಇದೆ. ಹಾಗಾಗಿ ಅದು ಎಲ್ಲವನ್ನೂ ಕಾಪಾಡಿಕೊಂಡು ಬಂದಿದೆ. ಇಷ್ಟು ವರ್ಷಗಳ ಕಾಲ ನಡೆದೆ ಕೃಷಿ ಸಂಶೋಧನೆಗೂ, ಬಿ.ಟಿ.ಸಂಶೋಧನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇಷ್ಟು ವರ್ಷಗಳಲ್ಲಿ ಯಾವುದೇ ಸಸ್ಯದ ವಂಶವಾಹಿನಿಯನ್ನು ಬದಲಾಯಿಸಿ ಅದು ರಕ್ತಗತವಾಗಿ ಪಡೆದ ಒಳ್ಳೆಯ ಮತ್ತು ಕೆಟ್ಟ (ಮನುಷ್ಯನ ದೃಷ್ಟಿಯಿಂದ) ಗುಣಗಳನ್ನು ತಿರುಚುವ ಕೆಲಸವನ್ನು ಇದುವರೆಗೆ ಮಾಡಿಲ್ಲ. ಆ ಕೆಲಸವನ್ನು ಪ್ರಕೃತಿಗೇ ಬಿಡಲಾಗಿತ್ತು. ಇಂದು ವಿಜ್ಞಾನಿಗಳು ಪ್ರಕೃತಿ ಮಾಡುವ ಕೆಲಸವನ್ನು ತಾವು ಮಾಡಲು ಹೊರಟಿದ್ದಾರೆ. ತಮಗೆ ಗೊತ್ತುಪಡಿಸಿದ ಗಡಿಯನ್ನು, ಕಟ್ಟುಪಾಡುಗಳನ್ನು ಮೀರಿ ಅಹಂಕಾರ ಮೆರೆಯುತ್ತಿದ್ದಾರೆ, ತಮ್ಮೆಲ್ಲ ನೈತಿಕತೆಯನ್ನು ತೂರಿಬಿಟ್ಟಿದ್ದಾರೆ. ಆ ಪಾಪದ ಶಿಶು ಬಿ.ಟಿ.ಬದನೆ.

ಬಿ.ಟಿ.ಬಗೆಗಿನ ಸತ್ಯಾಂಶ

ಬಿ.ಟಿ. ಇಂದ ನಾಟಿ ತಳಿಗಳು ನಶಿಸಿಹೋಗುವುದಿಲ್ಲ ಎಂಬ ಶಾಂತಾರಾಂ ಅವರ ಮಾತು ಸತ್ಯಕ್ಕೆ ದೂರವಾದುದು. ಮೆಕ್ಸಿಕೊ ದೇಶದಲ್ಲಿ ಅಮೇರಿಕಾ ನೀಡಿದ ಬಿ.ಟಿ.ಮುಸುಕಿನಜೋಳದೊಂದಿಗಿನ ಪರಾಗಸ್ಪರ್ಶದಿಂದಾಗಿ ನಾಟಿ ತಳಿಗಳು ತಮ್ಮ ನಿಜಗುಣಧರ್ಮಗಳಿಂದ ವಂಚಿತವಾಗುತ್ತಿರುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಬಿ.ಟಿ.ತಳಿಯಿಂದ ಬೇರೆ ತಳಿಗಳು ಮಲಿನಗೊಂಡಿವೆ ಎಂದು ಪರೀಕ್ಷಿಸಲು ತಮ್ಮಲ್ಲಿ ತಂತ್ರಜ್ಞಾನವಿದೆಯೆಂದು ಹಾಗಾದಲ್ಲಿ ಅದನ್ನು ನಿಯಂತ್ರಿಸುವ ತಂತ್ರಜ್ಞಾನವೂ ತಮ್ಮಲ್ಲಿದೆಯೆಂದು ಸಿಂಜೆಂಟಾ ಕಂಪನಿ ಹೇಳಿದೆ. ಅಂದರೆ ಬಿ.ಟಿ.ತಳಿಯಿಂದ ನಾಟಿತಳಿಗಳಿಗೆ ಕುತ್ತುಯಿದೆ ಎಂದೇ ಅರ್ಥ. ಇನ್ನು ಆಹಾರ ಭದ್ರತೆಗೆ ಸಂಬಂಧಿಸಿದಂತೆ ಶೇ.೬೫ಭಾಗ ಕುಲಾಂತರೀ ಬೀಜಗಳನ್ನು ಬಳಸುವ ಅರ್ಜೈಂಟೈನಾ ಮತ್ತು ಪೆರುಗ್ವೆ ದೇಶಗಳಲ್ಲಿ ಆಹಾರ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಇಳಿಮುಖಗೊಳ್ಳುತ್ತಿರುವುದು ಗಮನಿಸಬೇಕಾದ ಅಂಶ. ಇನ್ನು ನಮ್ಮ ದೇಶದಲ್ಲಿ ಹತ್ತಿ ಬೆಳೆಗಾರರು ಬಿ.ಟಿ.ಯನ್ನು ಬೆಳೆದು ಸಂತೋಷದಿಂದ ಇದ್ದಾರೆ ಎಂಬ ಶಾಂತಾರಾಂ ಅವರ ಮಾತು ಅಪ್ಪಟ ಸುಳ್ಳು. ಹತ್ತಿ ಬಿತ್ತನೆ ಬೀಜ ತಯಾರಿಸುವ ಕಂಪನಿಗಳು ಇಡೀ ಮಾರುಕಟ್ಟೆಯಲ್ಲಿ ಬಿ.ಟಿ.ಹತ್ತಿಬೀಜ ಬಿಟ್ಟು ಬೇರೆ ಬೀಜ ಸಿಗದಂತೆ ಮಾಡಿ ರೈತರ ಮೂಗು ಹಿಡಿದು ಬಾಯಿ ತೆಗೆಸಿ ಎಲ್ಲರೂ ಬಿ.ಟಿ.ಬೀಜ ಬಳಸುತ್ತಿದ್ದಾರೆ ಎಂದರೆ ಏನು ಮಾಡೋಣ? ಸಾಮಾನ್ಯ ತಳಿಗಳ ಹತ್ತಿಬೀಜಗಳು ಸಿಗದಂತೆ ಮಾಡಿದ್ದು ಕಂಪನಿಗಳು ಸಂಘಟಿತರಾಗಿ ಮಾಡಿದ ಒಂದು ಹುನ್ನಾರ.

ಬಿ.ಟಿ.ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಬೇರೆ ರೀತಿಯ ಮಣ್ಣಿನ ಮೂಲಕ ಬರುವ ರೋಗಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಬಿ.ಟಿ.ಹತ್ತಿ ತಿಂದ ಕುರಿಗಳು ಸಾಯುವುದು ಸಾಮಾನ್ಯವಾಗಿದೆ. ಹತ್ತಿ ಬಿಡಿಸುವ ಕೃಷಿ ಕಾರ್ಮಿಕರಲ್ಲಿ ಚರ್ಮರೋಗ, ಉಬ್ಬಸ ಮುಂತಾದ ಕಾಯಿಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಬಿ.ಟಿ.ಬೀಜಗಳು ಸಂಪೂರ್ಣವಾಗಿ ಬಹುರಾಷ್ಟ್ರೀಯ ಕಂಪನಿಯ ಹಿಡಿತದಲ್ಲಿರುತ್ತದೆ. ಭಾರತದ ರೈತನ ಬತ್ತಳಿಕೆಯೊಳಗಿದ್ದ ಪ್ರಮುಖ ಅಸ್ತ್ರ ಬಿತ್ತನೆ ಬೀಜ. ಆ ಅಸ್ತ್ರವನ್ನು ಕಂಪನಿಗಳು ಕಿತ್ತುಕೊಂಡು ಬಿಟ್ಟರೆ ಇಡೀ ದೇಶದ ಕೃಷಿ ವ್ಯವಸ್ಥೆ, ಬೆಳೆ ಆದ್ಯತೆ ಎಲ್ಲವೂ ಅವರ ಪಾಲಾಗಿಹೋಗುತ್ತದೆ. ರೈತನ ಸಾರ್ವಭೌಮತ್ವ ನಾಶವಾಗುತ್ತದೆ. ಕಡೆಗೆ ದೇಶದ ಸಾರ್ವಭೌಮತ್ವವೇ ಕಂಪನಿಗಳ ಕೈಕೆಳಗೆ ಸಿಲುಕುತ್ತದೆ.

ಸಾವಯವ ಕೃಷಿ ಕಿಚನ್‌ಗಾರ್ಡನ್ ಕೃಷಿ ಅಲ್ಲ

ಶಾಂತಾರಾಂ ಅವರು ಸಾವಯವ ಕೃಷಿಯನ್ನು ಕೈತೊಟದ ಕೃಷಿ ಎಂದಿರುವುದು ಹಾಸ್ಯಾಸ್ಪದವಾಗಿದೆ. ಅವರಿಗೆ ಅದರ ಬಗೆಗಿನ ಜ್ಞಾನ ಎಷ್ಟೆಂಬುದು ತಿಳಿಯುತ್ತದೆ. ಅದಕ್ಕೆ ಕೆಳಗಿನ ಅಂಕಿಅಂಶಗಳೇ ಸಾಕ್ಷಿ.

೧. ೨೦೧೦ರ ಹೊತ್ತಿಗೆ ಜಾಗತಿಕ ಮಟ್ಟದಲ್ಲಿ ಸಾವಯವ ಆಹಾರ ಮಾರುಕಟ್ಟೆ ೭೦.೨ ಬಿಲಿಯನ್ ಯು.ಎಸ್.ಡಾಲರ್

೨. ಕುಲಾಂತರೀ ತಳಿಗಳ ತವರಾದ ಅಮೇರಿಕಾದಲ್ಲಿ ಸಾವಯವ ಪದಾರ್ಥಗಳ ಮಾರುಕಟ್ಟೆ ಹತ್ತು ವರ್ಷಗಳಲ್ಲಿ ೧ ಬಿಲಿಯನ್ ಡಾಲರ್‌ನಿಂದ ೨೩ ಬಿಲಿಯನ್ ಡಾಲರ್‌ಗೆ ಏರಿದೆ. ೨೦೦೭ರಿಂದ ೨೦೧೦ರ ಹೊತ್ತಿಗೆ ಶೇ.೧೮ ಆರ್ಥಿಕ ಬೆಳವಣಿಗೆಯನ್ನು ಕಾಣಲಿದೆ.

೩. ೨೦೦೬ರ ಅಂಕಿಅಂಶಗಳ ಪ್ರಕಾರ ೧೩೮ ದೇಶಗಳಲ್ಲಿ ೭೦೦ ಸಾವಿರ ಕೃಷಿಕ್ಷೇತ್ರಗಳು ಒಟ್ಟು ೩೦.೪ ಮಿಲಿಯನ್ ಹೆಕ್ಟೇರ್ ಭೂಮಿಯಲ್ಲಿ ಹರಡಿಕೊಂಡಿದೆ.

೪. ಸಾವಯವ ಉತ್ಪನ್ನಗಳಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯೂರೋಪ್, ಅಮೇರಿಕಾ ಮತ್ತು ಜಪಾನ್ ಸಾವಯವ ಉತ್ಪನ್ನಗಳನ್ನು ಆಮದುಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳು.

೫. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸೂಪರ್ ಮಾರ್ಕೆಟ್‌ಗಳಾದ ಸೈನ್‌ಬರಿ, ಐಲ್ಯಾಂಡ್ ಮತ್ತು ಟೆಸ್ಕೊ ನಂತಹ ಕಂಪನಿಗಳು ಹೆಮ್ಮೆಯಿಂದ “ನಾವು ಕುಲಾಂತರೀ ಉತ್ಪನ್ನಗಳನ್ನು ಮಾರುವುದಿಲ್ಲ” ಎಂಬ ಫಲಕಗಳನ್ನು ಹಾಕಿವೆ.

ಇನ್ನೊಂದು ವಿಷಯ ನೋಡಿ ವಿಶ್ವಬ್ಯಾಂಕ್ ವಿಶ್ವಸಂಸ್ಥೆ ಮತ್ತು ವಿಶ್ವ ಆಹಾರ ಸಂಸ್ಥೆಯ ಪ್ರಾಯೋಜಿತ ‘ಇಂಟರ್‌ನ್ಯಾಷನಲ್ ಅಸೆಸ್‌ಮೆಂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ಅಂಡ್ ಟೆಕ್ನಾಲಜಿ ಫಾರ್ ಡವೆಲಪ್‌ಮೆಂಟ್’ ಪ್ರಪಂಚದಾದ್ಯಂತ ವಿಶ್ವದರ್ಜೆಯ ನಾನೂರು ವಿಜ್ಞಾನಿಗಳನ್ನು ತೊಡಗಿಸಿಕೊಂಡು ನಾಲ್ಕುವರ್ಷಗಳ ಕಾಲ ನಡೆಸಿದ ಅಧ್ಯಯನದ ವರದಿಯಲ್ಲಿ ಹೀಗಿದೆ.

– ಕುಲಾಂತರೀ ತಳಿಯ ಮುಸುಕಿನ ಜೋಳ, ಹತ್ತಿ, ಸೊಯಾಬೀನ್, ಎಣ್ಣೆಕಾಳುಗಳ ಇಳುವರಿ ಸ್ಥಿರವಾಗಿಲ್ಲ, ಇಲ್ಲವೆ ಅವುಗಳ ಇಳುವರಿ ಸತತವಾಗಿ ಏರುಮುಖವಾಗಿರುವುದು ಅಧ್ಯಯನಗಳಿಂದ ಕಂಡುಬಂದಿಲ್ಲ. ಬದಲಿಗೆ ಕುಲಾಂತರೀ ತಳಿಗಳ ಇಳುವರಿ ಗರಿಷ್ಠಮಟ್ಟಕ್ಕೆ ತಲುಪಿ ಇಳಿಮುಖಗೊಳ್ಳುತ್ತಿರುವ ಚಿನ್ಹೆಗಳು ಗಾಢವಾಗಿ ಕಾಣುತ್ತಿವೆ.
– ಬದಲಿಗೆ ಸಾವಯವ ಕೃಷಿಹೊಲಗಳ ಇಳುವರಿ ಹೆಚ್ಚುವ ಸಾಧ್ಯತೆಗಳು ಕಂಡಿವೆ, ಹಲವು ಸಂದರ್ಭಗಳಲ್ಲಿ ಇಳುವರಿ ದುಪ್ಪಟ್ಟುಗೊಂಡಿರುವುದನ್ನು ಗಮನಿಸಿದ್ದೇವೆ, ಒಂದು ಪ್ರದೇಶದ ಆಹಾರದ ಪದ್ಧತಿಗೆ ಸಾವಯವ ಕೃಷಿಯ ಪಾತ್ರ ಮುಖ್ಯವಾದದ್ದು.

ಕಾಳು ಬದಲು ಹಿಟ್ಟು ಕೊಡಿ

ಶಾಂತಾರಾಂ ಅವರು ತಮ್ಮ ಸಂದರ್ಶನದಲ್ಲಿ ಜಾಂಬಿಯಾ ದೇಶವನ್ನು ಉಲ್ಲೇಖಿಸಿದ್ದಾರೆ. ಅದರ ನಿಜವಾದ ಕಥೆ ನಿಮಗೆ ತಿಳಿಯಬೇಕು.

೨೦೦೨ರಲ್ಲಿ ಜಾಂಬಿಯಾ ದೇಶದಲ್ಲಿ ದೊಡ್ಡ ಬರಗಾಲ. ಯಥಾಪ್ರಕಾರ ದೊಡ್ಡಣ್ಣ ಅಮೇರಿಕಾ ನೆರವಿಗೆ ಬಂತು. ಜೋಳ ಮತ್ತು ಗೋಧಿಯನ್ನು ಕೊಡುವುದಾಗಿ ಹೇಳಿತು. ಜಾಂಬಿಯಾ ಸರ್ಕಾರಕ್ಕೆ ಕುಲಾಂತರೀ ತಳಿಗಳ ಅಪಾಯ ಗೊತ್ತಿದ್ದರಿಂದ ಕಾಳುಗಳ ರೂಪದಲ್ಲಿ ಬಂದ ನೆರವು ದೇಸೀ ಬಿತ್ತನೆಯೊಂದಿಗೆ ಬೆರೆತುಹೋಗುವ ಅಪಾಯವಿರುವುದರಿಂದ, ದಯಮಾಡಿ ಕಾಳು ಬೇಡ, ಕಾಳನ್ನು ಹಿಟ್ಟು ಮಾಡಿಕೊಡಿ ಎಂದು ಅಮೇರಿಕಾವನ್ನು ಕೇಳಿಕೊಂಡಿತು. ಆದರೆ ಅಮೇರಿಕಾಕ್ಕೆ ಬರಗಾಲಕ್ಕೆ ನೆರವಾಗುವ ನೆಪದಲ್ಲಿ ಆಫ್ರಿಕಾದೇಶಗಳಿಗೆ ಕುಲಾಂತರೀ ತಳಿಗಳನ್ನು ತೂರಿಸುವ ಉದ್ದೇಶವಿತ್ತು. ಹಾಗಾಗಿ ಅಮೇರಿಕಾ ಕೊಟ್ಟರೆ ಕಾಳನ್ನೇ ಕೊಡುತ್ತೇವೆ ಹಿಟ್ಟನಲ್ಲ ಎಂದಿತು. ಕಡೆಗೂ ಜಾಂಬಿಯಾದ ಬರಗಾಲಕ್ಕೆ ಅಮೇರಿಕಾ ನೆರವಾಗಲಿಲ್ಲ. ಕಾಳುಕೊಡಲು ಸಿದ್ಧರಿರುವವರಿಗೆ ಹಿಟ್ಟುಕೊಡಲು ಏನು ಕಷ್ಟ? ಹಿಟ್ಟನ್ನು ಬಿತ್ತಲು ಸಾಧ್ಯವಿಲ್ಲ. ದೇಸೀ ತಳಿಗಳನ್ನು ಹಾಳುಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅಮೇರಿಕಾ ಹಿಟ್ಟನ್ನು ಕೊಡಲಿಲ್ಲ. ಈ ಬಿ.ಟಿ.ಯುದ್ಧದಲ್ಲಿ ಜಾಂಬಿಯಾ ದೇಶ ದೊಡ್ಡ ಹೀರೋ ಆಗಿ ಹೊರಹೊಮ್ಮಿತು. ಈ ಇಡೀ ರಾಜಕೀಯದಲ್ಲಿ ಜಾಂಬಿಯಾ ದೇಶದ ಪರವಾಗಿ ಯೂರೋಪಿಯನ್ ಯೂನಿಯನ್ ನಿಂತಿತು. ಯಾವುದೇ ಕಾರಣಕ್ಕೂ ಅಮೇರಿಕಾದಿಂದ ಕಾಳುಗಳನ್ನು ಜಾಂಬಿಯಾ ಪಡೆಯದಂತೆ ಧೈರ್ಯತುಂಬಿತು. ಈ ಕಥೆಗೆ ಶಾಂತಾರಾಂ ಬೇರೆ ಬಣ್ಣ ಕಟ್ಟಿದ್ದಾರಷ್ಟೆ.

ಕಡೆಯ ಮಾತು

ಶಾಂತಾರಾಂ ತಮ್ಮ ಲೇಖನದಲ್ಲಿ ಅನಂತಮೂರ್ತಿ, ಕೋಡಿಹಳ್ಳಿ ಚಂದ್ರಶೇಖರ್ ಅಂತಹವರನ್ನು ಎಳೆದುತಂದಿದ್ದಾರೆ. ಅನಂತಮೂರ್ತಿಯಂಥವರಿಗೆ ಬಿ.ಟಿ.ಬದನೆಗೂ, ಬಡರೈತನ ನೋವಿಗೂ ಇರುವ ಸಂಬಂಧದ ಅರಿವಿದೆ. ಬಿ.ಟಿ.-ಸಂಸ್ಕೃತಿ-ಜಾಗತೀಕರಣ-ಭಾಷೆ-ಶಿಕ್ಷಣ ಮಾಧ್ಯಮ-ಗಣಿಗಾರಿಕೆ ಎಲ್ಲದಕ್ಕು ಒಂದಕ್ಕೊಂದು ಬಿಡಿಸಲಾರದಷ್ಟು ಸಂಬಂಧವಿದೆ. ಇದು ಅರ್ಥವಾಗುತ್ತಿರುವವರಿಗೆ ಅನಂತಮೂರ್ತಿಯವರು ಹೇಳುತ್ತಿರುವುದು ಏನೆಂದು ಅರ್ಥವಾಗುತ್ತದೆ. ಕುದುರೆ ಕಣ್ಣಿನ ಪಟ್ಟಿಕಟ್ಟಿಕೊಂಡಿರುವ ಶಂತನು ಶಾಂತಾರಾಂ ಅಂತಹವರಿಗೆ ಬರೀ ಬಿ.ಟಿ.ಬದನೆ, ಬಿ.ಟಿ.ಹತ್ತಿ, ಬಿ.ಟಿ.ಜೋಳದ ಸಾಲುಗಳು ಕಾಣುತ್ತವೆ. ನಂತರ ಅದರ ಹಿಂದಿನ ಲಾಭ ಮತ್ತು ದುಡ್ಡಿನ ಚೀಲ ಕಾಣುತ್ತದೆ. ಏನು ಮಾಡೋಣ ಹೇಳಿ?

ಸಂತೋಷ್ ಕೌಲಗಿ, ಮೇಲುಕೋಟೆ

1 Comment

  1. subrahmanya.c.horabailu

    raitara baggeye 1 blog horabandirodu santasada sangati. idu nirantaravirali.

Leave a Reply

Theme by Anders Norén