ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….

ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರಾಂತದ ಪಾರ್ಕಿಸ್‌ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್‌ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ ಟೆಲಿಸ್ಕೋಪೇ ಸ್ವತಃ  ಆಕಾಶವನ್ನು ನೋಡುತ್ತ ಅದೆಷ್ಟೋ ಸಾವಿರ  ಗಂಟೆಗಳನ್ನು ಕಳೆದಿದೆ. ನಮಗೆ ರಾತ್ರಿ ಹಗಲು ಇದ್ದರೂ, ಈ ಟೆಲಿಸ್ಕೋಪಿಗೆ ಅಂಥ ಲೆಕ್ಕವಿಲ್ಲ. ಯಾಕೆಂದರೆ ಅದಕ್ಕೆ ನಮ್ಮ ಸೂರ್ಯ ಯಾವ ಲೆಕ್ಕವೂ ಅಲ್ಲ! ನಾವೂ (ಏನಿದು ನಾವು? ಸೂರ್ಯನೇ ಈ ಆಕಾಶಗಂಗೆಯ ಒಂದು ಚಿಕ್ಕ ನಗಣ್ಯ ಬಿಂದು; ಅದರೊಳಗೆ ನಾವು ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಸದ್ಯಕ್ಕೆ ನಮ್ಮ ಜಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳೋಣ). ಒಳಗೊಂಡ ಈ ಬ್ರಹ್ಮಾಂಡದಲ್ಲಿ ಇರುವ ವ್ಯೋಮಕಾಯಗಳನ್ನು ನಿರುಕಿಸುತ್ತ ಅವುಗಳ ಒಳಹೊರಗನ್ನು ವಿಶ್ಲೇಷಿಸುತ್ತ, ಅವುಗಳಿಂದ ಬಂದ ರೇಡಿಯೋ ಸಂಕೇತಗಳನ್ನು ದಾಖಲಿಸುವುದಕ್ಕೇ ಈ ಪಾರ್ಕಿಸ್‌ ಟೆಲಿಸ್ಕೋಪ್‌ ತನ್ನೆಲ್ಲ ಶ್ರಮವನ್ನು ಹಾಕಿದೆ.

ಹೀಗೆ ನೋಡುತ್ತಲೇ ಈವರೆಗೆ ಮನುಕುಲವು ಹುಡುಕಿದ ೧೭೦೦ ಪಲ್ಸಾರುಗಳ ಪೈಕಿ ಸಾವಿರಕ್ಕೂ ಹೆಚ್ಚು ಪಲ್ಸಾರುಗಳನ್ನು ಹುಡುಕಿದ ಕೀರ್ತಿ ಈ ಪಾರ್ಕಿಸ್‌ ಟೆಲಿಸ್ಕೋಪಿಗೆ ಸಲ್ಲುತ್ತದೆ. ಹದಿನೆಂಟು ತಿಂಗಳುಗಳ ಹಿಂದೆ ಕಂಡ ಪಲ್ಸಾರ್‌ ಮತ್ತು ಅದರ ಸುತ್ತ ಗಿರಕಿ ಹೊಡೆಯುತ್ತಿದ್ದ  ಅತಿತೂಕದ ಗ್ರಹದ ಬಗ್ಗೆ ಮೊದಲ ಮಾಹಿತಿ ದಾಖಲಿಸಿದ ಸಾಧನೆಯೂ ಈ ಟೆಲಿಸ್ಕೋಪಿನದೇ. ಹೀಗೆ ಕಂಡು ಬಂದ ಅತಿತೂಕದ ಗ್ರಹವು ವಜ್ರಕಾಯದ್ದು ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.

ವಜ್ರಕಾಯದ ಗ್ರಹ

The pulsar at the centre of the below image is orbited by an object that is about the mass of Jupiter and composed primarily of carbon; effectively a massive diamond. The orbit, represented by the dashed line, would easily fit inside our Sun, represented by the yellow surface. The blue lines represent the radio signal from the pulsar, which spins around 175 times every second.

ಹೌದು, ವಜ್ರಕಾಯದ ಗ್ರಹ! ಗ್ರಹವಿಡೀ ವಜ್ರ! ನಮ್ಮ ಗುರುಗ್ರಹದಷ್ಟೇ ಭಾರವಾದ ಈ ಗ್ರಹ ನಮ್ಮ ಭೂಮಿಗಿಂತ ತ್ರಿಜ್ಯದಲ್ಲಿ ಐದು ಪಟ್ಟು  ದೊಡ್ಡದು. ನಮ್ಮಿಂದ ಕೇವಲ ನಾಲ್ಕು ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿರುವ ಜೆ೧೭೧೯-೧೪೩೮ ಎಂಬ ಪಲ್ಸಾರ್‌ ಸುತ್ತ ಈ ವಜ್ರಕಾಯದ ಗ್ರಹವು ತಿರುಗುತ್ತಿದೆ. ಸರ್ಪೆನ್ಸ್‌ ನಕ್ಷತ್ರಪುಂಜದಲ್ಲಿ ಕಾಣುವ ಈ ಪಲ್ಸಾರ್‌ ಎಷ್ಟು ದೊಡ್ಡದು ಎಂದುಕೊಂಡಿದ್ದೀರಿ? ಬರೀ ೨೦ ಕಿಲೋಮೀಟರ್‌ ವ್ಯಾಸದ್ದು! ಹೌದೆ? ಹಾಗಾದರೆ ಅದರ ಸುತ್ತ ಗುರುಗ್ರಹದಷ್ಟು ಭಾರವಿರುವ ಗ್ರಹ ತಿರುಗಲು ಹೇಗೆ ಸಾಧ್ಯ ಎಂದು ನೀವು ಪ್ರಶ್ನಿಸುತ್ತೀರಿ ಅಲ್ಲವೆ?

ಇಲ್ಲಿ ಈ ಪುಟಾಣಿ ಕಾಯವನ್ನು ಪಲ್ಸಾರ್‍ ಎಂದೆನೇ ಹೊರತು ನಕ್ಷತ್ರ ಎನ್ನಲಿಲ್ಲ. ಈ ಪಲ್ಸಾರ್‌ನ ತೂಕ ಗೊತ್ತೆ? ನಮ್ಮ ಸೂರ್ಯನಿಗಿಂತ ೧.೪ರಷ್ಟು ಭಾರ! ೨೦ ಕಿಮೀ ಗಾತ್ರದ, ಸೂರ್ಯನಿಗಿಂತ ಒಂದೂವರೆ ಪಟ್ಟು ಭಾರದ… ಅಬ್ಬಬ್ಬ…. ಇದೇನು ವಿಚಿತ್ರ ಎಂದು ಹುಬ್ಬೇರಿಸಬೇಡಿ. ಈ ಪುಟಾಣಿ ಕಾಯದ ಬಗ್ಗೆ ಹೇಳಬೇಕಾದ್ದು ಇನ್ನೂ  ಇದೆ. ಇದು ಸೆಕೆಂಡಿಗೆ ೧೭೫ ಸಲ ತನ್ನ   ಸುತ್ತಲೇ ತಿರುಗುತ್ತದೆ. ನಿಮಿಷಕ್ಕೆ ೧೦ ಸಾವಿರ ಸಲ ಅನ್ನಿ. ಅಥವಾ ವರ್ಷಕ್ಕೆ…. ಲೆಕ್ಕ ಹಾಕಿ.

ಹೌದು, ಪಲ್ಸಾರುಗಳೇ ಹೀಗೆ. ಇವನ್ನು ಕನ್ನಡದಲ್ಲಿ ಕುಬ್ಜ ನಕ್ಷತ್ರಗಳು ಎಂದು ಕರೆಯುತ್ತಾರೆ. ನಕ್ಷತ್ರಗಳು ಒಮ್ಮೆ ಸೂಪರ್‌ನೋವಾ ಆಗಿ ವಿಸ್ತಾರವಾಗಿ ಛಿದ್ರಗೊಂಡು ಚದುರಿದ ಮೇಲೆ ಮತ್ತೆ ಒಳಗೊಳಗೇ, ಒಂದು ಕೇಂದ್ರಬಿಂದುವಿನತ್ತ  ಕುಸಿದು ಕುಬ್ಜವಾಗತೊಡಗುತ್ತವೆ. ಮುಂದೊಮ್ಮೆ ಕಪ್ಪುರಂಧ್ರವಾಗುವ (ಬ್ಲಾಕ್‌ಹೋಲ್‌) ಈ ಕುಬ್ಜ ನಕ್ಷತ್ರಗಳು ತಮ್ಮ ಗಿರಿಗಿಟ್ಟೆತನದಿಂದಲೇ ವಿಜ್ಞಾನಿಗಳನ್ನು ತಬ್ಬಿಬ್ಬುಗೊಳಿಸಿದ್ದವು. ಕಾಲಕ್ರಮೇಣ ಸುಧಾರಿಸಿಕೊಂಡ ವಿಜ್ಞಾನಿಗಳು `ಇವು ಪಲ್ಸಾರುಗಳು’ ಎಂದು ನಿರ್ಣಯಿಸಿ ಸಮಾಧಾನ ಮಾಡಿಕೊಂಡರು.

ಸಾಮಾನ್ಯವಾಗಿ ಪಲ್ಸಾರುಗಳ ಸುತ್ತ ಗ್ರಹಗಳು ಇರುತ್ತವೆ ಎಂವ ಪುರಾವೆ ಇದುವರೆಗೂ ಸಿಕ್ಕಿಲ್ಲ. ಈ ಪಲ್ಸಾರಿನಿಂದಾಗಿ ಅವುಗಳಿಗೂ ಇಂಥ ಗ್ರಹಗಳು ಇರಬಹುದು ಎಂಬುದು ಗೊತ್ತಾಗಿದೆ.

ವಜ್ರಕಾಯ ಗ್ರಹದ ಬಗ್ಗೆ ಹೇಳುತ್ತ ವಿಷಯಾಂತರ ಆಯಿತು ಎನ್ನುತ್ತೀರ? ಖಗೋಳ ಸಂಬಂಧಿ ಲೇಖನ ಬರೆಯುವಾಗೆಲ್ಲ ವಿವರಣೆ ಕೊಡುತ್ತ ಹೋಗದಿದ್ದರೆ ಕಷ್ಟ. ಹೋದರೂ ಕಷ್ಟ!

ವಜ್ರಕಾಯ ಗ್ರಹ ಮತ್ತು ಪುಟಾಣಿ-ದೈತ್ಯಭಾರದ ಪಲ್ಸಾರ್‌ – ಎರಡೂ ಸೇರಿದರೆ ಕಾಣುವ ವ್ಯಾಸವು ನಮ್ಮ ಸೂರ್ಯನಿಗಿಂತಲೂ ಕಡಿಮೆ ಎಂಬ ಮಾಹಿತಿ ನಿಮಗೆ ಹೇಗನ್ನಿಸುತ್ತದೆ? ಸಾಸಿವೆಯ ಕಾಳೊಂದು ಹೇಗ್‌ನಲ್ಲಿರುವ ಆಮ್ನಿವರ್ಸಮ್‌ ಎಂಬ ೩೦ ಮೀಟರ್‌ ಗೋಳಾಕಾರದ ವೀಕ್ಷಣಾಲಯವನ್ನು, ಅದರೊಳಗಿನ ಪ್ರಾಜೆಕ್ಟರ್‌, ವೀಕ್ಷಕರು – ಎಲ್ಲರನ್ನೂ ಸೇರಿಸಿಕೊಂಡು ಗಿರಿಗಿರಿ ತಿರುಗಿಸಿದ ಹಾಗೆ ಎಂದೂ ಊಹಿಸಿಕೊಳ್ಳಿ. ಈ ಸಾಸಿವೆ ಕಾಳು ಮತ್ತು ವೀಕ್ಷಣಾಲಯ ಎರಡೂ ಅಕ್ಕಪಕ್ಕದಲ್ಲಿದ್ದರೆ ಎಂದೂ ಊಹಿಸಿಕೊಳ್ಳಿ. ಇನ್ನೇನು ಸಾಸಿವೆ ಕಾಳಿಗೆ ಈ ವೀಕ್ಷಣಾಲಯ ಡಿಕ್ಕಿ ಹೊಡೆಯುತ್ತದೆ ಎಂಬಷ್ಟು ನಿಕಟ. ಸೂರ್ಯನ ಹೊಟ್ಟೆಯಲ್ಲೇ ಈ ಪಲ್ಸಾರ್‌ ಮತ್ತು ಈ ವಜ್ರಕಾಯದ ಗ್ರಹ ಎರಡೂ ಇದ್ದ ಹಾಗೆ…. (ಚಿತ್ರ ನೋಡಿ).

ಪತ್ತೆಯಾಗಿದ್ದಾದರೂ ಹ್ಯಾಗೆ?

ಅದಿರಲಿ, ಈ ಗ್ರಹವು ವಜ್ರದಿಂದಲೇ ತುಂಬಿದೆ ಎಂದು ಹೇಗೆ ಪತ್ತೆ ಹಚ್ಚಿದರು?

`ಹದಿನೆಂಟು ತಿಂಗಳುಗಳ ಹಿಂದೆ ನಮ್ಮ ಪಾರ್ಕಿಸ್‌ ಟೆಲಿಸ್ಕೋಪಿನ ಮೂಲಕ ಈ ಪಲ್ಸಾರಿನ ತರಂಗಗಳಲ್ಲಿ ನಿಯಮಿತವಾಗಿ ಏರಿಳಿತ ಆಗುತ್ತಿದೆ ಎಂಬ ಮಾಹಿತಿ ಸಿಕ್ಕಿತು. ಇದನ್ನು ನಾವು ಇಂಗ್ಲೆಂಡಿನ ಲೋವೆಲ್‌ ಟೆಲಿಸ್ಕೋಪಿನ ನೆರವು ಪಡೆದು ಖಚಿತಪಡಿಸಿಕೊಂಡೆವು. ಹಾಗಾದರೆ ಈ ಪಲ್ಸಾರಿಗೆ ಒಂದು ಗ್ರಹ ಇದ್ದಿರಬಹುದು ಎಂದು ಲೆಕ್ಕಾಚಾರಗಳ ಮೂಲಕ ನಿರ್ಣಯಿಸಿದೆವು. ಹಲವು ತಿಂಗಳುಗಳ ತನಿಖೆ ಮತ್ತು ವಿಶ್ಲೇಷಣೆಗಳ ತರುವಾಯ ಈ ಗ್ರಹದಲ್ಲಿ ಇರುವುದೆಲ್ಲ ಬರೀ ಇಂಗಾಲ ಎಂಬ ನಿರ್ಧಾರ ತಳೆದೆವು’ ಎಂದು ಈ ಲೇಖನಕ್ಕಾಗಿಯೇ ಈ ಮೈಲಿನಲ್ಲಿ ಮಿತ್ರಮಾಧ್ಯಮಕ್ಕೆ ಸಂದರ್ಶನ ನೀಡಿದ ವಜ್ರಕಾಯ ಗ್ರಹಶೋಧ ತಂಡದ ಸದಸ್ಯ ಡಾ| ರಮೇಶ್‌ ಭಟ್‌ ಹೇಳುತ್ತಾರೆ. ಈ ಬೃಹತ್‌ ಅಂಕಿ-ಅಂಶ ಸಂಗ್ರಹ ಮತ್ತು ವಿಶ್ಲೇಷಣೆಯಲ್ಲಿ ಇಟೆಲಿ, ಜರ್ಮನಿ, ಅಮೆರಿಕಾದ ವಿಜ್ಞಾನಿಗಳೂ ಸೇರಿದ್ದಾರೆ.

(ಪುಣೆಯ ರೇಡಿಯೋ ಖಗೋಳಶಾಸ್ತ್ರ ಕೇಂದ್ರದಲ್ಲಿ ಪದವಿ ಮಾಡಿ, ಭಾರತದಲ್ಲೇ ಪಿ ಎಚ್‌ ಡಿ ಮಾಡಿದ ರಮೇಶ್‌ ಭಟ್‌ ಊಟಿಯಲ್ಲಿರುವ ಖಗೋಳ ವೀಕ್ಷಣಾಲಯದಲ್ಲಿ ಮೂರು ವರ್ಷ ಕಳೆದಿದ್ದಾರೆ. ಅವರ ಅತ್ತೆ ಕನ್ನಡತಿಯಂತೆ!)

`ಈ ಗ್ರಹದ ಬಗ್ಗೆ ಸಂಶಯ ಬರುತ್ತಲೇ ನಾವು ಪಾರ್ಕಿಸ್‌ ವೀಕ್ಷಣಾಲಯದಲ್ಲಿ ಠಿಕಾಣಿ ಹೂಡಿದೆವು. ನಾನಂತೂ ಎಷ್ಟೋ ವಾರಗಳ ಕಾಲ ಇಲ್ಲಿ ಕೂತು ದತ್ತಾಂಶ ಸಂಗ್ರಹದಲ್ಲೇ ಮುಳುಗಿದೆ’ ಎಂದು ರಮೇಶ್‌ ಭಟ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Inside view of Parkes Telescope

ಹಾಗಾದರೆ ಈ ಪಲ್ಸಾರನ್ನು, ಅದನ್ನು ಸುತ್ತುತ್ತಿರುವ ಗ್ರಹವನ್ನು ಕಲ್ಪಿಸಿಕೊಂಡಿದ್ದಾದರೂ ಹೇಗೆ? `ನಾವು ರೇಡಿಯೋ ಸಂಕೇತಗಳನ್ನು ಆಧರಿಸಿಯೇ ಹೀಗಿರಬಹುದು ಎಂದು ಕಲ್ಪಿಸುತ್ತೇವೆ. ಇದಕ್ಕೆ ಬೃಹತ್‌ ಗಾತ್ರದ ಅಂಕಿ ಅಂಶಗಳನ್ನು ವಿಶ್ಲೇಷಿಸುವ ಸೂಪರ್‌ ಕಂಪ್ಯೂಟರುಗಳು ಬೇಕಾಗುತ್ತವೆ; ಎಲ್ಲಕ್ಕಿಂತ ಮುಖ್ಯ ನಮಗೆ ಪಾರ್ಕಿಸ್‌ನಲ್ಲಿ ಇರುವಂಥ ಪ್ರಬಲ ಟೆಲಿಸ್ಕೋಪ್‌ ಬೇಕು’ ಎಂದು ರಮೇಶ್‌ ಮಿತ್ರಮಾಧ್ಯಮಕ್ಕೆ ತಿಳಿಸಿದ್ದಾರೆ.  ಸುಮಾರು ಎರಡು ಲಕ್ಷ ಗಿಗಾಬೈಟ್‌ಗಳಷ್ಟು (೨೦೦೦೦೦ ಜಿಬಿ) ಗಾತ್ರದ ಈ ಮಾಹಿತಿ ಅದರ  ಮಾಹಿತಿಯನ್ನು ಸಂಸ್ಕರಿಸಿ ಈ ನಿರ್ಣಯಕ್ಕೆ ಬರಲಾಗಿದೆ ಎಂದರೆ, ಸಂಶೋಧನೆಯ ಕಷ್ಟವನ್ನು ನೀವೇ ಊಹಿಸಿ.

`ಹಾಗೆ ನೋಡಿದರೆ ಇಂಥ ಸೂಕ್ಷ್ಮ ಸಮೀಕ್ಷೆಯನ್ನು ನಾವು ಕೈಗೊಂಡಿದ್ದು ಇದೇ ಮೊದಲು’ ಎನ್ನುತ್ತಾರೆ ಜರ್ಮನಿಯ ಮ್ಯಾಕ್ಸ್‌-ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ರೇಡಿಯೋ ಆಸ್ಟ್ರಾನಮಿಯ ನಿರ್ದೇಶಕ ಪ್ರೊ| ಮೈಕೇಲ್‌ ಕ್ರೇಮರ್‌.

ಸಂಶೋಧನಾ ನಾಯಕನ ನೇರ ನುಡಿ

ಈ ಸಂಶೋಧನೆಗೆ ಕಾರಣವಾದ ವಿಜ್ಞಾನಿಗಳ ತಂಡದ ಮುಖ್ಯಸ್ಥ ಮ್ಯಾಥ್ಯೂ ಬೇಲ್ಸ್‌ ಹೇಳುವಂತೆ ಇದೇನೂ ಅಚ್ಚರಿಗೆ ಕಾರಣವಾಗಬೇಕಾದ ಮಾಹಿತಿಯೇನಲ್ಲ. `ಇದು ಬ್ರಹ್ಮಾಂಡದ ಬಗ್ಗೆ ನಾವು ವಿಸ್ತರಿಸಿಕೊಂಡ ತಿಳಿವಳಿಕೆಯ ಭಾಗವಾಗಿದೆ, ಅಷ್ಟೆ. ಸಾಧನ – ಸಲಕರಣೆಗಳ ಭಾರೀ ಕ್ರಾಂತಿ ಮತ್ತು ಟೆಲಿಸ್ಕೋಪ್‌ ತಂತ್ರಜ್ಞಾನದಲ್ಲಿನ ದಾಪುಗಾಲು – ಇವುಗಳಿಂದ ಇದು ಸಾಧ್ಯವಾಯಿತು’ ಎಂದು ಬೇಲ್ಸ್‌ ತಮ್ಮ ಇತ್ತೀಚೆಗಿನ ಲೇಖನದಲ್ಲಿ ವಿನಮ್ರವಾಗಿ ಹೇಳಿದ್ದಾರೆ.

`ನಾವು ವೀಕ್ಷಣೆ ಮಾಡುತ್ತೇವೆ; ಅದನ್ನು ಪ್ರಯೋಗಕ್ಕೆ ಒಳಪಡಿಸುತ್ತೇವೆ; ಸೂತ್ರಗಳನ್ನು ಹೆಣೆಯುತ್ತೇವೆ; ತಜ್ಞರ ಪರಾಮರ್ಶೆಗೆ (ಪೀರ್‌ ರಿವ್ಯೂ) ಒಳಗಾಗುತ್ತೇವೆ’ ಎಂದು ಬೇಲ್ಸ್‌ ಸಂಶೋಧನೆಯ ವಿಧಿವಿಧಾನಗಳನ್ನು ಸರಳವಾಗಿ ತಿಳಿಸುತ್ತಾರೆ.

`ಆದರೆ ಈ ಸಂಶೋಧನೆಯ ಮಹತ್ವವೇನು ಎಂದು ಹಲವು ಪತ್ರಕರ್ತರು ಕೇಳುತ್ತಿದ್ದಾರೆ.  ನಿಜ, ಈ ಸಂಶೋಧನೆಯಿಂದ ನಿಜಕ್ಕೂ ರೋಮಾಂಚನಗೊಳ್ಳುವವರು ಈ ಜಗತ್ತಿನ ೬ರಿಂದ ೧೨ರಷ್ಟಿರುವ ಖಭೌತಶಾಸ್ತ್ರಜ್ಞರು ಮಾತ್ರ. ಅವರ ರೋಮಾಂಚನಕ್ಕೂ ಕಾರಣವಿದೆ: ವಜ್ರಕಾಯದ ಗ್ರಹದ ಸಿದ್ಧಾಂತವು ಬೈನರಿ ಪಲ್ಸಾರ್‌ ಸಿದ್ಧಾಂತದಲ್ಲಿರುವ ಮಾಹಿತಿ ಕಂದರವನ್ನು ತುಂಬುತ್ತದೆ. ಈ ದೃಷ್ಟಿಯಲ್ಲಿ ಇದು ನಮ್ಮ ತಂಡದ ಜೀವಿತದ ಮಹತ್ವದ ಸಂಶೋಧನೆ’ ಎಂದು ಬೇಲ್ಸ್‌ ಬರೆದಿದ್ದಾರೆ.

`ಇಷ್ಟಾಗಿಯೂ ಅಕಸ್ಮಾತ್‌ ನಾವೇನಾದರೂ ಹಸಿರುಮನೆ ಪರಿಣಾಮದ ಬಗ್ಗೆ ಸಂಶೋಧನೆ ಮಾಡಿ, ಪರಾಮರ್ಶೆಗೆ ಒಳಪಡಿಸಿ ಪ್ರಕಟಿಸಿದ್ದರೆ ಇದೇ ಪತ್ರಕರ್ತರು ಹತ್ತಾರು ಅನುಮಾನಗಳನ್ನು ವ್ಯಕ್ತಿಪಡಿಸುತ್ತಿದ್ದರು. ಅದೃಷ್ಟವಶಾತ್‌ ನಾವು ಹವಾಮಾನ ವಿಜ್ಞಾನಿಗಳಾಗಿಲ್ಲ’ ಎಂದು ಬೇಲ್ಸ್‌ ಮಾಧ್ಯಮಗಳನ್ನು ಮೆದುವಾಗಿ ಚುಚ್ಚಿದ್ದಾರೆ. ಅವರ ನೋವಿಗೆ ಕಾರಣವಿಷ್ಟೆ: ಸಾವಿರಾರು ಜ್ಯೋತಿರ್ವರ್ಷಗಳ ದೂರದಲ್ಲಿರುವ ಪಲ್ಸಾರ್‌, ಅದರ ಸುತ್ತ ಸುತ್ತುತ್ತಿರುವ ಗ್ರಹದ ಬಗ್ಗೆ ಹೇಳಿದರೆ ತುಟಿಪಿಟಕ್ಕೆನ್ನದೆ ಒಪ್ಪಿಕೊಳ್ಳುವ ಪತ್ರಕರ್ತರು, ಗಟ್ಟಿಯಾದ ಅಂಕಿ ಅಂಶಗಳಿರುವ ಪಾರಿಸರಿಕ ಪರಿಣಾಮ – ದುಷ್ಪರಿಣಾಮದ ಕುರಿತ ಸಂಶೋಧನೆಗಳನ್ನು ಯಾಕೆ ತೀವ್ರ ಅನುಮಾನದಿಂದ ಕಾಣುತ್ತಾರೆ? – ಬೇಲ್ಸ್‌ ಕೇಳುವ ಈ ಪ್ರಶ್ನೆ ಭಾರತೀಯ ಸನ್ನಿವೇಶಕ್ಕೂ ಅನ್ವಯವಾಗುತ್ತದೆ.

ಆಕಾಶದ ತುಂಬೆಲ್ಲ ವಜ್ರವೇ ಇದೆಯಂತೆ!

ಏನೇ ಇರಲಿ, ವ್ಯೋಮಾಕಾಶದಲ್ಲಿ ವಜ್ರಗಳಿವೆಯೇ ಎಂಬ ಹುಡುಕಾಟ ಶುರುವಾಗಿದ್ದೇ ೮೦ರ ದಶಕದಲ್ಲಿ. ಭೂಮಿಗೆ ಅಪ್ಪಳಿಸುತ್ತಿದ್ದ ಧೂಮಕೇತುಗಳಲ್ಲಿ ನ್ಯಾನೋಮೀಟರ್‌ ಗಾತ್ರದ ವಜ್ರದ ಕಣಗಳನ್ನು ಕಂಡ ವಿಜ್ಞಾನಿಗಳು ಬ್ರಹ್ಮಾಂಡದ ಎಲ್ಲೆಲ್ಲೂ ವಜ್ರವೇ ಇದೆಯೇನೋ ಎಂದು ಅನುಮಾನಿಸಿದರು. ಹಲವಾರು ನಕ್ಷತ್ರಗಳ ನಡುವೆ ಈ ವಜ್ರದ ಕಣಗಳು ಇವೆ ಎಂಬ ಅಂಶವನ್ನು ಅಮೆಸ್‌ ಸಂಶೋಧನಾ ಕೇಂದ್ರದ ಚಾರ್ಲ್ಸ್‌ ಬಾಶ್ಲಿಶರ್‌ ಕಂಡುಕೊಂಡರು.

೨೦೦೪ರಲ್ಲಿ ಕ್ಷುಲ್ಲಕ ೫೦ ಜ್ಯೋತಿರ್ವರ್ಷಗಳ ದೂರದಲ್ಲಿ ೧ರ ಮುಂದೆ ೩೪ ಸೊನ್ನೆಗಳನ್ನು ಹಾಕಿದಷ್ಟು ಕ್ಯಾರೆಟ್‌ ಭಾರದ ಇಂಗಾಲದ ಬಿಲ್ಲೆಯನ್ನು ವಿಜ್ಞಾನಿಗಳು ಕಂಡರು. ಬಿಪಿಎಂ ೩೭೦೯೩ ಎಂದು ಕರೆಯುವ ಈ ಕಾಯ ವಾಸ್ತವವಾಗಿ ಹರಳುಗಟ್ಟಿದ ಒಂದು ಬಿಳಿ ಕುಬ್ಜ ನಕ್ಷತ್ರವಂತೆ. ತೆಳುವಾದ ಜಲಜನಕ ಮತ್ತು ಹೀಲಿಯಂ ಅನಿಲದ ಪೊರೆ ಇರುವ ಈ ಕಾಯದ ಒಳಗೆಲ್ಲ ಬರೀ ಇಂಗಾಲ. ಮೆಟ್‌ಕಾಫ್‌, ಮಾಂಟ್‌ಗೊಮೆರಿ, ಆಂಟೋನಿಯೋ ಕನಾನ್‌ – ಈ ಸಂಶೋಧನಾ ಕೇಂದ್ರಗಳಲ್ಲಿ ಈ ಕಾಯದ ಬಗ್ಗೆ ಅಪಾರ ಶೋಧ ನಡೆಯಿತು. ಗಗನದಲ್ಲಿನ ದೊಡ್ಡ ಘಂಟೆಯಂತೆ ಇದು ತರಂಗ ನಿನಾದವನ್ನು ಹೊಮ್ಮಿಸುತ್ತದೆಯಂತೆ.

ಇನ್ನು ಕೇವಲ ೫೦೦ ಕೋಟಿ ವರ್ಷಗಳಲ್ಲಿ ನಮ್ಮ ಸೂರ್ಯನೂ ಹೀಗೆಯೇ ಬಿಳಿ ಕುಬ್ಜ ನಕ್ಷತ್ರವಾಗುತ್ತಾನೆ; ಆಗ ಸೂರ್ಯನೂ ವಜ್ರಕಾಯವಾಗುತ್ತಾನೆ!

ಕಾರ್ಬನಾಡೋ ವಜ್ರಗಳು ಎಂದೇ ಖ್ಯಾತವಾದ ವಿಶಿಷ್ಟ ಕಪ್ಪು ವಜ್ರಗಳು ಆಕಾಶದಿಂದ ಬಿದ್ದ ಕಾಯಗಳಿಂದ ಆಗಿದ್ದು ಎಂದು ೨೦೦೬ರಲ್ಲಿ ಫ್ಲೋರಿಡಾ ಇಂಟರ್‌ನ್ಯಾಶನಲ್‌ ಯೂನಿವರ್ಸಿಟಿಯ ಜೋಸೆಫ್‌ ಗರಾಯ್‌ ಮತ್ತು ಸ್ಟೀಫನ್‌ ಹ್ಯಗಾರ್ಟಿ ಪ್ರಬಂಧ ಬರೆದಿದ್ದಾರೆ. ಬ್ರೆಝಿಲ್‌ ಮತ್ತು ಕೇಂದ್ರ ಆಫ್ರಿಕಾ ಗಣರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುವ ಈ ಕಪ್ಪು ವಜ್ರಗಳು ಭೂಮಿಗೆ ಅಪ್ಪಳಿಸಿದ ಧೂಮಕೇತುಗಳಿಂದಲೇ ಉಂಟಾಗಿದ್ದು ಎಂದು ಅವರು ಹೇಳುತ್ತಾರೆ.

ನಿರಭ್ರ, ನೀರವ ಆಕಾಶದಲ್ಲಿ (ಅದರಲ್ಲೂ ಹಳ್ಳಿಗಳ ಅಮವಾಸ್ಯೆ ರಾತ್ರಿಗಳಲ್ಲಿ ಕಾಣುವ ಆಕಾಶದಲ್ಲಿ) ವಜ್ರಗಳಂತೆ ಮಿನುಗುವ ನಕ್ಷತ್ರಗಳು ಕವಿಗಳಿಗೂ ವಜ್ರದ ಹಾಗೇ ಕಾಣಿಸಿರಬಹುದು. ಆದರೆ ಇವುಗಳಲ್ಲಿ ಖಚಿತವಾಗಿಯೂ ವಜ್ರಖಚಿತ ಗ್ರಹಗಳು, ವಿವಿಧಕಾಯಗಳು ಇವೆ ಎಂದು ವಿಜ್ಞಾನಿಗಳು ಕಂಡುಹಿಡಿಯಲು ಸಾಕಷ್ಟು ರಾತ್ರಿ ನಿದ್ದೆಗೆಟ್ಟಿದ್ದಾರೆ. ಕವಿಗಳ ಮಾತನ್ನು ನಂಬದೆ ಟೆಲಿಸ್ಕೋಪಿಗೆ ಕಣ್ಣುಹಚ್ಚಿ ಕೂತ ಈ ವಿಜ್ಞಾನಿಗಳ ಪ್ರಾಮಾಣಿಕ ಹಟಕ್ಕೆ ನಮಿಸೋಣ!

ರಕ್ಕಸತೂಕದ ಪಲ್ಸಾರಿನಿಂದ ಹಿಡಿದು, ವಜ್ರಕಾಯ ಗ್ರಹದವರೆಗೆ ಎಳೆತಂದ ಈ ಚರ್ಚೆಯನ್ನು ಸದ್ಯಕ್ಕೆ ಇಲ್ಲಿಗೇ ನಿಲ್ಲಿಸೋಣ. ನಕ್ಷತ್ರಗಳ ಮಿಲಿಯಗಟ್ಟಳೆ ವರ್ಷಗಳ ಲೆಕ್ಕವೆಲ್ಲಿ? ಹೆಚ್ಚೆಂದರೆ ನೂರು  ದಾಟಲಾಗದ ನಾವೆಲ್ಲಿ? ಚಿರಂತನವಾದ ಬ್ರಹ್ಮಾಂಡದ ಆದಿ ಅಂತ್ಯವೆಲ್ಲಿ?

ಈ ಬಗ್ಗೆ ನಾನು ಓದುತ್ತಿರುವ ಇನ್ನೊಂದು ಪುಸ್ತಕದ ಪರಿಚಯವನ್ನು ಮಾಡಿಕೊಡುವ ಹುರುಪು ಬಂದಿದೆ!

A-planet-made-of-diamond-video.flv

(ವಜ್ರವೂ ಇಂಗಾಲ ಎಂಬ ಮಾಹಿತಿ ನಿಮಗೆ ಗೊತ್ತಿದೆ ಎಂದೇ ಹೆಚ್ಚು ವಿವರಿಸಿಲ್ಲ!)

1 Comment

  1. ಲೇಖನ ಚೆನ್ನಾಗಿದೆ. ಕುತೂಹಲ, ಮಾಹಿತಿ ಎರಡನ್ನೂ ನೀಡುವ ನಿಮ್ಮ ಬರವಣಿಗೆ ಮೆಚ್ಚುವಂತದು. ಹೀಗೆ ಬರೆದರೆ ಕನ್ನಡದಲ್ಲಿ ವಿಜ್ಞಾನ ಖಂಡಿತ ಜನರನ್ನು ಮುಟ್ಟುತ್ತದೆ. ಈ ಮುಂಚೆ ಈ ಪುಟ ತರೆದುಕೊಳ್ಳದೆ ಹೋದುದರಿಂದ ಕಾಮೆಂಟು ಮಾಡಲಾಗಿರಲಿಲ್ಲ. ಧನ್ಯವಾದಗಳು.
    ನಕ್ಷತ್ರ ವಿಕಾಸದಲ್ಲಿ ಈ ಪಲ್ಸಾರ್ ಹಂತವೂ ಒಂದು. ನಕ್ಷತ್ರದ ದ್ರವ್ಯವೆಲ್ಲವೂ ಘನೀಕರಿಸತೊಡಗಿದಾಗ( ಗ್ರ್ಯಾವಿಟಿ ಪರಿಣಾಮ) ಪರಮಾಣುಗಳು ಕೂಡಿ ದೊಡ್ಡ ಪರಮಾಣು ಆಗುತ್ತದೆ. ಆಗ ಜಲಜನಕ, ಹೀಲಿಯಂ ಇತ್ಯಾದಿಗಳು ಇಂಗಾಲ,……. ಕಬ್ಬಿಣ, ….ಹೀಗೇ ಆಗಿ ಕೊನೆಗೆ ಎಲ್ಲಾ ಅರೆದುಕೊಂಡು ನ್ಯೂಟ್ರಾನುಗಳಾಗಿ ಬಿಡುತ್ತದೆ, ಅಂದರೆ ನ್ಯೂಟ್ರಾನು ನಕ್ಷತ್ರವಾಗುತ್ತದೆ. ಮುಂದೆ ಕಾಳರಂದ್ರ ವಾಗುತ್ತದೆ. ಆದರೆ ನಕ್ಷತ್ರದ ಭಾರ ಚಂದ್ರಶೇಖರ್ ಲಿಮಿಟ್ ದಾಟಿರಬೇಕು.
    ಇಂತಹ ಸಂಶೋಧನೆಗಳು ಖಂಡಿತವಾಗಿ ಖಭೌತ ವಿಜ್ಞಾನಿಗಳಿಗೆ ಮತ್ತು ಅದರ ಬಗ್ಗೆ ಒಲವಿರುವ ನಮ್ಮ ನಿಮ್ಮಂತಹವರಿಗೆ ಆನಂದ ತರುತ್ತದೆ. ಝಗತ್ತಿನಲ್ಲಿ ಕೇವಲ ಆರೆಂಟು ಖಭೌತ ವಿಜ್ಞಾನಿಗಳಲ್ಲ ಸಾವಿರಾರು ಇದ್ದಾರೆ! ಿಂತಹ ಸಂಶೋಧನೆಯಲ್ಲಿ ಭಾಗಿಯಾದ ರಮೇಶ್ ಭಟ್ ಅವರು ಭಾಗ್ಯಶಾಲಿಗಳು. ಅವರ ಻ತ್ತೆ ಕನ್ನಡಿಗರು ಎಂದಿದ್ದೀರಿ. ಭಟ್ ಅವರೂ ಕನ್ನಡಿಗರೇ ಅಲ್ಲವೇ?
    ಒಟ್ಟಾರೆ ನಿಮಗೆ ಈ ಲೇಖನ ಬರೆದು ನಮ್ಮೆಲ್ಲರ ಗಮನಕ್ಕೆ ತಂದುದಕ್ಕೆ ವಂದನೆಗಳು , ಅಭಿನಂದನೆಗಳು.
    ಸಂಪಿಗೆ ತೋಂಟದಾರ್ಯ

Leave a Reply

Theme by Anders Norén