ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ

೨೧ನೇ ಶತಮಾನದ ಮೊದಲ ದಶಕದಲ್ಲಿ ಈ ಭೂಮಿಯ ಮೇಲೆ….

ಯಾರ ಬಳಿ ೧೦೦ ಆಮದಿತ ಲಿಮೋಸಿನ್ ಕಾರುಗಳು, ಏಲು ಸಾವಿರ ಮರ್ಸಿಡಿಜ್ ಬೆಂಝ್ ಕಾರುಗಳು ಇವೆ?

ಎರಡು ಸಾವಿರ ವೈದ್ಯರು, ದಾದಿಗಳು, ಬಾಣಸಿಗರು, ಸೇವಕಿಯರು, ಮಾಲಿಗಳು, ಮಸಾಜ್ ಮಾಡುವವರು, ನರ್ತಕಿಯರು, ಅಂಗರಕ್ಷಕರು ಯಾರ ಸೇವೆಗಾಗಿ ಹಗಲಿರುಳೂ ಜಾಗೃತರಾಗಿರುತ್ತಾರೆ? ಇವರೆಲ್ಲರೂ ಏಕಕಾಲದಲ್ಲಿ ಸಂಚರಿಸುವ ರಸ್ತೆಗಳು ಎಲ್ಲಿವೆ?

ಯಾರು ತನ್ನ ಎಂಟು ಭವ್ಯ ಅರಮನೆಗಳಲ್ಲೂ  ಸದಾ ಚಟುವಟಿಕೆ ಇರುವಂತೆ ನೋಡಿಕೊಂಡು ಗೂಢಚರ್ಯೆ ಮಾಡುವವರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸುತ್ತಿದ್ದಾರೆ?

ಯಾರ ಇಂಥ ಪ್ರತಿಯೊಂದೂ ಅರಮನೆಯಲ್ಲಿ ಗಾಲ್ಫ್ ಕೋರ್ಸ್, ಉಕ್ರೇನ್ ಮತ್ತು ಪೋಲ್ಯಾಂಡ್‌ನಿಂದ ತಂದ ಕುದುರೆಗಳ ಲಾಯ, ನೂರಾರು ಮೋಟಾರ್ ಬೈಕ್‌ಗಳು, ಗ್ಯಾರೇಜುಗಳು, ಸಿನೆಮಾ ಥಿಯೇಟರ್‌ಗಳು, ಫನ್‌ಫೇರ್ ಪಾರ್ಕ್‌ಗಳು, ಲಕ್ಷುರಿ ಕಾರುಗಳು, ಶೂಟಿಂಗ್ ಮೈದಾನಗಳು, ವಾಟರ್‌ಜೆಟ್ ಬೈಕ್‌ಗಳು, ಬೇಟೆಯಾಡಲೆಂದೇ ಜಿಂಕೆ ಬಾತುಕೋಳಿಗಳನ್ನು ತುಂಬಿರುವ ಕಾಡುಪ್ರದೇಶಗಳು ಇವೆ?

ಯಾರ ಬಳಿ ವಿದೇಶಿ ಮತ್ತು ಅತಿ ದುಬಾರಿ ವಾಚುಗಳು, ಸದಾ ತಾಜಾ ಆಗಿರೋ ಆಹಾರ ಮತ್ತು ಪೇಯಗಳು ದಾಸ್ತಾನಾಗಿವೆ?

ಯಾರ ಬಾಡಿಗೆಗೆಂದು ಖಾಯಮ್ಮಾಗಿ ನೂರಾರು ವಿದೇಶಿ ಸೂಳೆಯರು, ಬಟ್ಟೆ ಬಿಚ್ಚಿ ನರ್ತಿಸುವವರು, ರಶ್ಯನ್ ಪಾಪ್ ಗಾಯಕಿಯರು, ಸ್ವೀಡಿಶ್ ಮೈ ಮಸಾಜ್ ಮಾಡುವವರು, ಅಮೆರಿಕಾದ ವೃತ್ತಿಪರ ಕುಸ್ತಿಪಟುಗಳು, ರೋಮೇನಿಯಾದ ಚಾಕು (- ಚಕ್ಯತೆಯ) ಎಸೆತದ ಪ್ರವೀಣರು ಇದ್ದಾರೆ?

ಈ ಪ್ರಶ್ನೆಗಳಿಗೆಲ್ಲ ನೀವು ಅಮೆರಿಕಾದ ಅಥವಾ ಅರಬ್ ದೇಶದ ಯಾವುದೋ ದೊರೆಯಂಥ ವ್ಯಕ್ತಿಯನ್ನು  ಹುಡುಕುತ್ತಿರಬಹುದು. ಆದರೆ ಈ ಎಲ್ಲ ಸಿರಿವಂತಿಕೆಯನ್ನು ಅನುಭವಿಸುತ್ತಿರೋ ವ್ಯಕ್ತಿ ಈ ಜಗತ್ತಿನ ಅತಿ ಬಲಾಢ್ಯ ಪರಮಾಣು ಶಕ್ತ ‘ಉತ್ತರ ಕೊರಿಯಾ’ ಎಂಬ ಬಡವರ ಮತ್ತು ಹಸಿದವರೇ ತುಂಬಿರುವ ಕಮ್ಯುನಿಸ್ಟ್ ಪಾರ್ಟಿ ಅಧೀನ ದೇಶದ ನಾಯಕ! ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಅತೀ ಗೌರವ ಇಟ್ಟುಕೊಂಡವರೂ ತಲೆ ತಗ್ಗಿಸುವಂಥ ಈ ವ್ಯಕ್ತಿಯ ಹೆಸರು ಕಿಮ್ ಜೊಂಗ್ ಇಲ್.

ಇನ್ನೇನು ಈತ ಉತ್ತರ ಕೊರಿಯಾದ ಅಧ್ಯಕ್ಷ ಸ್ಥಾನವನ್ನು ಬಿಟ್ಟುಬಿಡುತ್ತಾನೆ ಎಂಬ ಸುದ್ದಿ ಈಗ ಎಲ್ಲೆಡೆ ಹರಡಿದೆ. ಅವನ ಯಾವುದೋ ಮಗ (ಅವನಿಗೆ ಒಬ್ಬರಲ್ಲ, ಹಲವರು ಪುತ್ರರತ್ನರಿದ್ದಾರೆ) ಉತ್ತರಾಧಿಕಾರಿ ಎಂದು ಬಣ್ಣಿಸಲಾಗಿದೆ. ಇಡೀ ದೇಶವನ್ನು ಪರಮಾಣು ತಲೆಸಿಡಿಗಳಿಂದ ತುಂಬಿಸಿ, ಬಂಕರುಗಳನ್ನು ಕಟ್ಟಿಸಿ, ದೇಶದ ಜನರೆಲ್ಲ ಹಿಸ್ಟೀರಿಯಾ ಹಿಡಿದವರಂತೆ ತನ್ನೊಬ್ಬನ ಹೆಸರನ್ನೇ ಜಪಿಸುವಂತೆ ಮಆಡಿರುವ ಈ ಕಿಮ್ ಸದ್ಯ ಅಮೆರಿಕಾದ ಅತಿದೊಡ್ಡ ತಲೆನೋವು. ಅದೇನೇ ಇರಲಿ, ಕಮ್ಯುನಿಸ್ಟ್ ಸಿದ್ಧಾಂತದ ಹೆಸರಿನಲ್ಲಿ ತನ್ನ ತಂದೆಯಿಂದ ಬಂದ ಸರ್ವಾಧಿಕಾರ ಮತ್ತು ಸ್ವೇಚ್ಛಾಚಾರದ ಬದುಕನ್ನು ತನ್ನ ಮಗನಿಗೆ ಬಳುವಳಿಯಾಗಿ ಕೊಟ್ಟು ಇಡೀ ದೇಶದ ಜನರೆಲ್ಲ ತನ್ನ ಐಸಿರಿಗಾಗಿ ಮಗ್ಗುಲು ಮುರಿಯುಂತೆ ಮಾಡಿರುವ ಈತ ಕಥೆ, ಉತ್ತರ ಕೊರಿಯಾ ಎಂಬ ದೇಶದ ಹಸಿವಿನ ಗಾಥೆ,  – ಎಲ್ಲವೂ ಹೆಚ್ಚು ಗೊತ್ತಿಲ್ಲದ ವಿಚಾರ.

ಬದುಕಿರುವ ಮೀನಿನಿಂದ ಕೆತ್ತಿ ತೆಗೆದ ಸಶಿಮಿಯನ್ನೇ ತಿನ್ನಬಯಸುವ ಕಿಮ್‌ಗೆ ತಿನ್ನುವ ಅನ್ನದ ಅಗುಳೆಲ್ಲವೂ ಒಂದೇ ಬಣ್ಣದ್ದೂ, ಒಂದೇ ಗಾತ್ರದ್ದೂ ಆಗಿರಬೇಕು. ಆದರೆ ಅವನ ಕೋಟಿಗಟ್ಟಳೆ ಪ್ರಜೆಗಳು ವಸ್ತುಶಃ ದಶಕಗಳಿಂದ ಅನ್ನದ ಅಗುಳನ್ನೇ ಕಂಡಿಲ್ಲ. ಅವನ ಮತ್ತು ಅವನ ತಂದೆಯ ಜನ್ಮದಿನದಂದು ಮಾಂಸ ಕೊಟ್ಟರೂ ತಿನ್ನಲಾಗದಂತೆ ಅವನ ಸೈನಿಕರ ಹೊಟ್ಟೆ ಬೆನ್ನನ್ನು ಮೆತ್ತಿಕೊಂಡಿರುತ್ತದೆ.

ಪಿಜ್ಜಾ ಮಾಡಿಸಲು ಈ ಕಿಮ್ ವಿದೇಶಿ ಬಾಣಸಿಗರನ್ನೇ ಕರೆಸುತ್ತಾನೆ. ಒಮ್ಮೆ ಇಟಲಿಯಿಂದ ಪ್ರಖ್ಯಾತ ಬಾಣಸಿಗ ಎರ್ಮಾನೋ ಫರ್ಲಾನಿಸ್ ಹೋಗಿ ಪಿಜ್ಜಾ ಮಾಡಿದ್ದನಂತೆ. ಆತ ಕಿಮ್‌ನ ಅರಮನೆಯ ಅಡುಗೆ ಮನೆಯನ್ನು ನೋಡಿದರೆ….. ಅದೊಂದು ಶಸ್ತ್ರಚಿಕಿತ್ಸಾ ಕೇಂದ್ರದಂತೆ ಸ್ವಚ್ಛವಾಗಿತ್ತಂತೆ; ಹಾಗೇ ಅತಿ ಭಕ್ತಿ ತುಂಬಿದ ಚರ್ಚಿನಂತೆ ಮೌನದಿಂದ ಕೂಡಿತ್ತಂತೆ. ಫೆಡೆರಿಕೋ ಫಿಲಿನಿ (ಇಟಲಿಯ ಜಗತ್ಪ್ರಸಿದ್ಧ ಸಿನೆಮಾ ನಿರ್ದೇಶಕ) ಕೂಡಾ ಇಂಥದ್ದೊಂದು ಅಡುಗೆಮನೆಯನ್ನು ಕಲ್ಪಿಸಿಕೊಳ್ಳಲಾರ ಎಂದು ಫರ್ಲಾನಿಸ್ ಬರೆಯುತ್ತಾನೆ. 

ಆ ಹೊತ್ತಿನಲ್ಲೂ ಅವನ ಪ್ರಜೆಗಳು ಬಂಜರು ಪ್ರದೇಶದಲ್ಲಿ ತಿನ್ನಲು ಏನಾದರೂ ಸಿಗುತ್ತ ಎಂದು ಹುಡುಕುತ್ತಿದ್ದರು. ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆತ ೨೦೦ ಜನ ವೃತ್ತಿಪರ ಆರೋಗ್ಯ – ಪೌಷ್ಟಿಕತೆ ಪಂಡಿತರನ್ನು ಪೂರ್ಣಾವಧಿ ನೇಮಿಸಿಕೊಂಡಿದ್ದಾನೆ.

ಕಿಮ್‌ನ ಬಾಣಸಿಗ ಫುಜಿಮಾತೋ ಹೇಳ್ತಾನೆ: ಕಿಮ್‌ಗೆ ಕ್ಯಾವಿಯರ್ ಖರೀದಿಸಲು ಇರಾನ್ – ಉಝಬೆಕಿಸ್ತಾನಕ್ಕೂ, ಹಂದಿ ಮಾಂಸ ತರಲು ಡೆನ್ಮಾರ್ಕಿಗೂ, ದ್ರಾಕ್ಷಿ ಗೊಂಚಲಿಗಾಗಿ ಪಶ್ಚಿಮ ಚೀನಾಗೂ, ಪಪಾಯಿ ಮತ್ತು ಮಾವು ತರಲೆಂದು ಥೈಲ್ಯಾಂಡ್‌ಗೂ ಈ ಬಾಣಸಿಗ ಹೋಗಿ ಬಂದನಂತೆ. ಇನ್ನೊಂದು ಸಲ ಜಪಾನಿನಿಂದ ತಲಾ ೧೨೦ ಡಾಲರ್ ಬೆಲೆಯ ವಿಶಿಷ್ಟ ಸಸ್ಯದ ವಾಸನೆಯುಳ್ಳ ಅಕ್ಕಿಯ ಕೇಕ್ ತಂದನಂತೆ. ಒಂಟೆಯ ಕಾಲು ತಿನ್ನಲು ಅರಬ್ ದೇಶಕ್ಕೂ ಕಿಮ್ ಜನರನ್ನು ಕಳಿಸಿದ್ದನೆಂದು ಉತ್ತರ ಕೊರಿಯಾದ ಅಧಿಕಾರಿಗಳೇ ಬಾಯಿಬಿಟ್ಟಿದ್ದಾರೆ. ಹಾಗೆಯೇ ಅಂಗೋಲಾದಿಂದ ನೀಲಿ ಶಾರ್ಕ್ ಮೀನಿನ ಲಿವರ್‌ನ್ನೂ ತರಿಸಿದ್ದ. ತಾಂಜಾನಿಯಾದಿಂದ ಸಿಂಹದ ದೇಹದಿಂದ ತೆಗೆದ ದ್ರವ್ಯವನ್ನೂ ಖರೀದಿಸಿದ್ದ. ಕಿಮ್‌ನ ಸಂಗ್ರಹಕ್ಕಾಗಿ ೬.೫೦ ಲಕ್ಷ ಡಾಲರ್ ಮೌಲ್ಯದ ಹೆನ್ನೆಸೇ ಕೋಗ್ನಾಕ್‌ನ್ನು (ಬ್ರಾಂಡಿ) ಖರೀದಿಸಲಾಗುತ್ತದೆ. ೨೦೦೧ರಲ್ಲಿ ಈತ ರಶ್ಯಾದಿಂದ ಸಜೀವ ಏಡಿಗಳನ್ನು ಮತ್ತು ದುಬಾರಿ ಫ್ರೆಂಚ್ ವೈನನ್ನು ತರಿಸಿದ್ದ.

ಈ ಅಡುಗೆಗಾಗಿ ಚೀನೀ ಗಡಿಯಲ್ಲಿರುವ, ಈತನ ಕುಟುಂಬವೆಲ್ಲ ಜನಿಸಿದ ಸ್ಥಳ ಎಂದೇ ಬಿಂಬಿತವಾಗಿರೋ ಪೀಕ್‌ತು ಪರ್ವತದಿಂದ ಆಯ್ದು ತಂದ ಮರದ ತುಂಡುಗಳನ್ನೇ ಬಳಸಬೇಕಂತೆ.

ಒಮ್ಮೆ ಕಿಮ್ ಅಪಹರಿಸಿ ತಂದಿಟ್ಟಿದ್ದ (ಹೌದು, ಕಿಮ್‌ಗೆ ಈ ಅಪಹರಣ ಎಂದರೆ ತುಂಬಾ ಥ್ರಿಲ್… ಈ ಬಗ್ಗೆ ಮುಂದೆ ಇನ್ನಷ್ಟು ಕಥೆ ಕೇಳಬಹುದು) ದಕ್ಷಿಣ ಕೊರಿಯಾದ ನಟಿ ಚೌ ಎನ್ ಹೀ ಎಂಬಾಕೆಗೆ ಕಿಮ್ ಮಾದಕ ಪೇಯವಿದ್ದ ಒಂದು ಬಾಟಲಿಯನ್ನು ಕೊಟ್ಟ. ನೋಡಿದರೆ ಅದರೊಳಗೆ ಒಂದು ಹಾವು ಮಿಡುಕಾಡುತ್ತಿದೆ!  ಹಾಗಂತ ಚೌ ತನ್ನ ಜೀವಚರಿತ್ರೆಯಲ್ಲಿ ಬರೆದಿದ್ದಾಳೆ.

ಇದು ಕಿಮ್ ಜೊಂಗ್ ಇಲ್ ಎಂಬ ಜಂಗುಹಿಡಿದ ಕಮ್ಯುನಿಸ್ಟ್ ನಾಯಕನ ವೃತ್ತಾಂತದ ಒಂದು ಬದಿ. ಅವನಿಗಿರೋ ಬದಿಗಳೆಷ್ಟು, ಆತನ ಪರಮಾಣು ಬಲಾಢ್ಯತನಕ್ಕೆ ಅಮೆರಿಕಾ ಯಾಕೆ ಇನ್ನೂ ಕಕಮಕವಾಗಿದೆ, ಅವನ ದೇಶದ ಪ್ರಜೆಗಳು, ಸೈನಿಕರು, ಅಧಿಕಾರಿಗಳು, ಹೇಗೆ ಬದುಕಿದ್ದಾರೆ…… ಅವನಿಗೂ ನಮ್ಮ ಶಾಂತಿ ಮಂತ್ರಕ್ಕೂ ಯಾವ ಸಂಬಂಧವಿದೆ – ಮುಂದಿನ ಕಂತುಗಳಲ್ಲಿ ಓದಿ.

ಒಂದು ದೇಶದಲ್ಲಿ ರಾಜಕೀಯ ಮೌಢ್ಯ ಮತ್ತು ಅಸೀಮ ಸರ್ವಾಧಿಕಾರದ ಹಕ್ಕುಗಳು ಸಿಕ್ಕಿದರೆ ಆ ಸರ್ವಾಧಿಕಾರಿ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಉತ್ತರ ಕೊರಿಯಾವೊಂದೇ ಉದಾಹರಣೆ.  ಈ ದೇಶಕ್ಕೆ ಚೀನಾ ದೇಶದ ಸಂಪೂರ್ಣ ಬೆಂಬಲವಿದೆ. ಅದಕ್ಕೇ ಸದ್ಯ ಕಿಮ್ ತನ್ನ ವಿಶೇಷ ರೈಲಿನಲ್ಲಿ ಚೀನಾಗೆ ಬಂದು ಉತ್ತರಾಧಿಕಾರಿಯ ಮಾತುಕತೆ ನಡೆಸಿದ್ದಾನಂತೆ. ಅತ್ತ ಉತ್ತರ ಕೊರಿಯಾದ ರಾಜಧಾನಿ ಪ್ಯೋಂಗ್‌ಯಾಂಗ್ ನಲ್ಲಿ ಕಿಮ್ ಕರೆದ ಸಭೆಗೆ ಬಂದವರು ಅಲ್ಲೇ ಕೂತಿದ್ದಾರೆ. ಅವರು ಕದಲಿದರೂ ಶಿಕ್ಷೆ.

ಕಳೆದ ಒಂದು ತಿಂಗಳಿಂದ ಉತ್ತರ ಕೊರಿಯಾ ಬಗ್ಗೆ ಹಲವು ಪುಸ್ತಕಗಳನ್ನು ಓದಿ, ಡಾಕ್ಯುಮೆಂಟರಿಗಳನ್ನು ನೋಡಿ, ಅಂತರಜಾಲದಲ್ಲಿ ಹುಡುಕಾಡಿ ಈ ಲೇಖನಸರಣಿಯನ್ನು ಆರಂಭಿಸಿದ್ದೇನೆ.

ಉತ್ತರ ಕೊರಿಯಾದ ಕಥೆಯನ್ನು ಓದುತ್ತಿದ್ದಂತೆ ನೆನಪಾಗಿದ್ದು ದಲಿತಕವಿ ಸಿದ್ದಲಿಂಗಯ್ಯನವರು ಬರೆದ ಕವನದ ಈ ಸಾಲುಗಳು :

‘ದೊಡ್ಡಗೌಡರ ಬಾಗಿಲೀಗೆ ನಮ್ಮ ಮೂಳೆಯ ತ್ವಾರಣ.’

ಇಷ್ಟಾಗಿಯೂ ಉತ್ತರ ಕೊರಿಯಾಗೆ ಚಂದ್ರನನ್ನೇ ತಂದಿಡುತ್ತೇನೆ ಎನ್ನುವ ಕಿಮ್ ಜೊಂಗ್ ಇಲ್‌ನ ತಿಕ್ಕಲುತನದ ಒಂದು ವಿಡಿಯೋ ನೋಡಿದರೆ ಸಾಕು… ಅವನ ಮೆಗಾಲೋಮ್ಯಾನಿಯಾ ಎಷ್ಟು ತಾರಕಕ್ಕೇರಿದೆ ಎಂಬುದು ಗೊತ್ತಾಗುತ್ತದೆ. ಯೂಟ್ಯೂಬ್‌ನಲ್ಲಿ ಇಂಥ ನೂರಾರು ವಿಡಿಯೋಗಳಿವೆ.

Leave a Reply

Theme by Anders Norén