ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !

ಯುಜಿ೯೯ ಎಂಬ ಕಾಂಡಕೊರಕ ಫಂಗಸ್ (ಸ್ಟೆಮ್ ರಸ್ಟ್)  ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಅನಾಹುತ ನೋಡಿ: ಮೊದಲು ಉಗಾಂಡದಲ್ಲಿನ ಗೋಧಿಯನ್ನು ಸಂಪೂರ್ಣ ತಿಂದುಹಾಕಿದ ಈ ಫಂಗಸ್ ಕೀನ್ಯಾ, ಸುಡಾನ್, ಯೆಮೆನ್, ದಾಟಿ, ಇರಾನ್‌ನ್ನೂ ತಲುಪಿದೆ. ಮುಂದೆ ಇದು ಅಫಘಾನಿಸ್ತಾನವನ್ನು ಹಾಯ್ದು, ಪಾಕಿಸ್ತಾನದ ಗೋಧಿ ಬೆಳೆಯನ್ನೆಲ್ಲ ಕಬಳಿಸಿ ಭಾರತಕ್ಕೆ ವಕ್ಕರಿಸಲಿದೆ.  ಆಮೇಲೆ ರಶ್ಯಾ, ಚೀನಾ, ಅಲ್ಲಿಂದ ಸಾಗರೋತ್ತರ ಪಯಣ ಮಾಡಿ ಉತ್ತರ ಅಮೆರಿಕಾ. ವಸುಂಧರೆಗೇ ಸರ್ಪಸುತ್ತು. 


Stem_rust_close_up

ಕಾಂಡ ಕೊರಕ ಫಂಗಸ್‌

ಈ ಥರದ ಕಾಂಡ ಕೊರಕ ಫಂಗಸ್‌ಗಳನ್ನು ಅಮೆರಿಕಾ ಸರ್ಕಾರವು ಕೃಷಿ ವಿರೋಧಿ ಜೈವಿಕ ಅಸ್ತ್ರವೆಂದು ಬೆಳೆಸಿ ಒಣಗಿಸಿ ದಾಸ್ತಾನಿಟ್ಟಿದೆ. ಈ ಕೆಲಸ ೧೯೫೧ರಿಂದಲೇ ನಡೆದಿದೆ. ಈ ಫಂಗಸ್‌ನ್ನು ಭೂಮಿಯ ಮೇಲೆ ರಾಚುವ ಕ್ಲಸ್ಟರ್ ಬಾಂಬಿಗೆ ಎಂ ೧೧೫ ಎಂದು ಹೆಸರು. ಇದನ್ನು ಫೆದರ್ ಬಾಂಬ್ ಎಂದೂ ಇ೭೩ ಬಾಂಬ್ ಕರೆಯುತ್ತಾರೆ. ಇಂಥ ೫೦೦ ಪೌಂಡ್ ತೂಕದ ಬಾಂಬ್ ಬಿದ್ದರೆ ೫೦ ಚದರ ಮೈಲು ಪ್ರದೇಶದಲ್ಲಿ ಒಂದು ಲಕ್ಷ ಸಸಿಗಳು ಸಾಂಕ್ರಾಮಿಕತೆಗೆ ಪಕ್ಕಾಗುತ್ತವೆ.

ಈಗ ಗೋಧಿಬಾಕವಾಗಿರುವ ಯುಜಿ೯೯ ಫಂಗಸ್ ಕೂಡಾ ಇಂಥದ್ದೇ. ಅಂದರೆ ಜೈವಿಕ ಅಸ್ತ್ರವೊಂದು ಅಲ್‌ಖೈದಾ, ತಾಲಿಬಾನ್‌ಗಳ ಕ್ರೌರ್ಯವನ್ನೂ ನಾಚಿಸುವಂತೆ ಜಗತ್ತಿನಾದ್ಯಂತ ಬೀಸಲಿದೆ. ಇದರ ವಿಧ್ವಂಸಕ ಶಕ್ತಿಯ ಮುಂದೆ ಅಮೆರಿಕಾದ ಮಿಲಿಟರಿ ಜುಜುಬಿ.

ಟೈಂ ಬಾಂಬ್

`ಇದೊಂದು ಟೈಂ ಬಾಂಬ್. ಇದು ಗಾಳಿಯಲ್ಲಿ ಸಂಚರಿಸುತ್ತದೆ. ವಿಮಾನ ಪ್ರಯಾಣಿಕರ ಬಟ್ಟೆಯಲ್ಲೂ ಇದು ಅಂಟಿರುತ್ತದೆ’ ಎನ್ನುತ್ತಾರೆ ಓರೆಗಾನ್ ರಾಜ್ಯ ವಿಶ್ವವಿದ್ಯಾಲಯದ ಗೋಧಿ ತಜ್ಞ ಫ್ರೊಫೆಸರ್  ಜಿಮ್ ಪೀಟರ್‌ಸನ್.

ಸದ್ಯಕ್ಕಂತೂ ಜಗತ್ತಿನ ಗೋಧಿ ಬೆಳೆಯ ಶೇ. ೧೯ರಷ್ಟು ನಾಶವಾಗಲಿದೆ. ಅಂದರೆ ಏಶ್ಯಾ, ಆಫ್ರಿಕಾದ ನೂರು ಕೋಟಿ ಜನರ ಹೊಟ್ಟೆಗೆ ಹಿಟ್ಟಿಲ್ಲ.

‘ಒಂದು ಮಹತ್ವದ ಮಾನವೀಯ ಸಂಕಷ್ಟ ಅನಿವಾರ್ಯ ಎನ್ನುತ್ತಾರೆ ಕಾರ್ನೆಲ್ ವಿಶ್ವವಿದ್ಯಾಲಯದ ರಸ್ಟ್ ಪ್ರತಿರೋಧಿ ಸಂಶೋಧನೆಯ ಸಂಯೋಜಕ ರಿಕ್ ವಾರ್ಡ್. ಯುಜಿ೯೯ ಪ್ರತಿರೋಧಕ ತಳಿಯನ್ನು ಕಂಡುಹಿಡಿಯುವುದೇ ಇದಕ್ಕೆ ಪರಿಹಾರವಂತೆ.

ಹಾಗಂತ ಈ ಯುಜಿ೯೯  ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಲಕ್ಷಗಟ್ಟಳೆ ವರ್ಷದಿಂದಲೇ ಇತ್ತು. ಪ್ರತೀ ಸಲವೂ ಇದು ಮನುಷ್ಯನ ಉಪಾಯಗಳಿಗೆ ಬಗ್ಗದಂತೆ ಮ್ಯುಟೇಶನ್ ಆಗುತ್ತಲೇ ಬಂದಿದೆ. (ಮ್ಯುಟೇಶನ್ ಎಂದರೆ ವಿಕೃತ ರೂಪಾಂತರ). ೧೯೧೭ – ೩೫ರಲ್ಲಿ ಅಮೆರಿಕಾದ ಶೇ. ೨೦ರಷ್ಟು ಗೋಧಿ ನಾಶಮಾಡಿದ ಈ ಫಂಗಸ್ ೧೯೬೨ರಲ್ಲೂ ಅನಾಹುತ ಎಸಗಿತ್ತು.  ೨೦೦೬ರಲ್ಲೇ ಅದು ಎಸ್ ಆರ್ ೨೪ ಎಂಬ ಅಧಿಕ ಇಳುವರಿಯ ಗೋಧಿಯನ್ನೂ ತಿನ್ನತೊಡಗಿತ್ತು.

`ನಾವು ತಡ ಮಾಡಿದೆವು. ಈ ವಿದ್ಯಮಾನವು ಮನುಕುಲಕ್ಕೆ, ಸಮಾಜಕ್ಕೆ ಭಾರೀ ದುರಂತ ತಂದೊಡ್ಡಬಹುದು’ ಎಂದು ಈ ಫಂಗಸ್‌ನ ಅವಾಂತರದ ಬಗ್ಗೆ ಇತ್ತೀಚೆಗಷ್ಟೆ ಜಗತ್ತನ್ನು ಎಚ್ಚರಿಸಿದವರು ಬೇರಾರೂ ಅಲ್ಲ, ಕಳೆದ ವಾರ ತೀರಿಕೊಂಡ ಹಸಿರು ಕ್ರಾಂತಿಯ ಪಿತಾಮಹ ನಾರ್ಮನ್ ಬೋರ್ಲಾಗ್ !

ಅಚ್ಚರಿ ಯಾಕೆಂದರೆ, ಈ ಫಂಗಸ್ ತಿನ್ನುತ್ತಿದ್ದುದು ಈ ಬೋರ್ಲಾಗ್ ಕಂಡುಹಿಡಿದ / ಅವನ ಹಾದಿಯಲ್ಲೇ ರೂಪುಗೊಂಡ ಅಧಿಕ ಇಳುವರಿಯ ತಳಿಯ ಗೋಧಿ ಸಸಿಗಳನ್ನು!

 

ಡಾ. ವಂದನಾ ಶಿವ ಹೇಳಿದ್ದೇನು?

the violence of green revolution

ಬೋರ್ಲಾಗ್ ಸ್ಮರಣಾರ್ಥ ಪತ್ರಿಕೆಗಳಲ್ಲಿ ಯದ್ವಾತದ್ವಾ ಹೊಗಳುವ ಲೇಖನಗಳು ಬಂದವು (ಕನ್ನಡ ಪತ್ರಿಕೆಗಳನ್ನೂ ಸೇರಿಸಿಕೊಂಡು). ಹಸಿರು ಕ್ರಾಂತಿಯ ಬಗ್ಗೆ ನಾನೂ ಕೆಲವು ವರ್ಷಗಳ ಹಿಂದೆ ಭ್ರಮಿತನಾಗಿದ್ದೆ. ಕೊನೆಗೆ ಡಾ. ವಂದನಾ ಶಿವ ಅವರ `ದಿ ವಯಲೆನ್ಸ್ ಆಫ್ ಗ್ರೀನ್ ರೆವೊಲುಶನ್’ ಓದಿದ ಮೇಲೆ ನನ್ನ ಎಲ್ಲ ಭ್ರಮೆಗಳೂ ಕೊನೆಗೊಂಡವು. ಹಸಿರಿನ ಕಥೆಗಳು ಭಯ ಹುಟ್ಟಿಸಿದವು. ಈಗ, ನಾರ್ಮನ್ ಬೋರ್ಲಾಗ್‌ನನ್ನು ವಾಚಾಮಗೋಚರ ಹೊಗಳಿದ ಲೇಖನಗಳು ಬಂದಮೇಲೆ ನನಗೆ ಮತ್ತೆ ಆ ಪುಸ್ತಕ ನೆನಪಾಯಿತು. ಪುಸ್ತಕದಲ್ಲಿ ವಂದನಾ ಶಿವ ಹೇಳಿದ ಅಂಶಗಳನ್ನು ಸಾರಾಂಶ ರೂಪದಲ್ಲಿ ಕೊಡುತ್ತಿದ್ದೇನೆ.

 • ಹಸಿರು ಕ್ರಾಂತಿ ಒಂದು ದೊಡ್ಡ ವೈಫಲ್ಯ. ಅದರಿಂದಾಗಿ ವಂಶವಾಹಿಗಳ ವೈವಿಧ್ಯ ಹೆಚ್ಚಾಗಿದೆ. ಕೀಡೆಗಳ ಹಾವಳಿ ವಿಪರೀತವಾಗಿದೆ; ಭೂ ಸವಕಳಿ ಹೆಚ್ಚಿದೆ; ನೀರಿನ ಕೊರತೆ ಉಂಟಾಗಿದೆ.  ಭೂಮಿಯ ಫಲವತ್ತತೆ ಕುಸಿದಿದೆ. ಮೈಕ್ರೋನ್ಯೂಟ್ರಿಯೆಂಟ್‌ಗಳು ನಾಶವಾಗಿವೆ.
 • ಹಸಿರು ಕ್ರಾಂತಿಯಿಂದಾಗಿ ಸ್ಥಳೀಯ ಜನತೆಗೆ ಪೌಷ್ಟಿಕ ಆಹಾರ ಧಾನ್ಯಗಳು ಸಿಗುತ್ತಿಲ್ಲ; ಗ್ರಾಮಿಣ ಹಸಿವು ಹೆಚ್ಚಿದೆ. ಉದ್ವಿಗ್ನತೆ ಮತ್ತು ಸಂಘರ್ಷಗಳಿಗೆ ಹಸಿರು ಕ್ರಾಂತಿ ಕಾರಣವಾಗಿದೆ.
 • ಹಸಿರು ಕ್ರಾಂತಿಯ ಲಾಭ ಪಡೆದವರು ಇವರು ಮಾತ್ರ: ಆಗ್ರೋಕೆಮಿಕಲ್ ಉದ್ಯಮಿಗಳು, ದೊಡ್ಡ ಪೆಟ್ರೋಕೆಮಿಕಲ್ ಕಂಪೆನಿಗಳು, ಕೃಷಿ ಸಲಕರಣೆಗಳನ್ನು ತಯಾರಿಸುವವರು, ಅಣೆಕಟ್ಟುಗಳನ್ನು ಕಟ್ಟುವವರು ಮತ್ತು ದೊಡ್ಡ ಹಿಡುವಳಿದಾರರು.
 • ಗೋಧಿಯ ಅಧಿಕ ಇಳುವರಿ ತಳಿಯನ್ನು ಕಂಡುಹಿಡಿದ ನಾರ್ಮನ್ ಬೋರ್ಲಾಗ್‌ಗೆ ೧೯೭೦ರಲ್ಲಿ ನೋಬೆಲ್ ಪ್ರಶಸ್ತಿ ಬಂತು. ಭಾರತವನ್ನು `ಭಿಕ್ಷೆಯ ಬೋಗುಣಿಯಿಂದ ಬ್ರೆಡ್ ಬ್ಯಾಸ್ಕೆಟ್’ ಮಾಡಿದ ಕೀರ್ತಿ ಬೋರ್ಲಾಗ್‌ರದು ಎಂದು ಎಲ್ಲರೂ ಶ್ಲಾಘಿಸಿದರು. ಪಂಜಾಬ್ ಎಂದರೆ ಹಸಿರು ಕ್ರಾಂತಿಯ ಅತ್ಯಂತ ಯಶಸ್ಸಿನ ರಾಜ್ಯ ಎಂದು ಬಣ್ಣಿಸಲಾಯಿತು. ಆದರೆ, ಈ ರಾಜ್ಯದಲ್ಲಿ ಸಮೃದ್ಧಿ ತರಬೇಕಾದ ಹಸಿರು ಕ್ರಾಂತಿಯು ತಂದಿದ್ದು ಮಾತ್ರ ಎರಡು ದಶಕಗಳ ಹಿಂಸಾಚಾರದ ಕರಾಳಯುಗವನ್ನು! ಸಮೃದ್ಧಿಯ ಬದಲು ಪಂಜಾಬಿನಲ್ಲಿ ಕಾಣಿಸಿಕೊಂಡಿದ್ದು ಕಾಯಿಲೆಯುಕ್ತ ನೆಲ, ಪೀಡೆಯುಕ್ತ ಬೆಳೆ, ಜವಲಾದ ಮರುಭೂಮಿ ಮತ್ತು ಅತೃಪ್ತ ರೈತಸಮುದಾಯ.
 • ಭಾರತದಲ್ಲಿ ೧೯೬೦ರ ದಶಕದ ಮಧ್ಯಭಾಗದಿಂದಲೇ ಬೋರ್ಲಾಗ್ ಕಂಡುಹಿಡಿದ ಪವಾಡಸದೃಶ ಬೀಜಗಳ ಬಿತ್ತನೆ ಆರಂಭವಾಯಿತು. ಇದನ್ನು `ಹೊಸ ಕೃಷಿ ಕಾರ್ಯತಂತ್ರ’ ಎಂದು ಕರೆದರು. ೧೯೬೮ರ ಹೊತ್ತಿಗೆ ಇಡೀ ಪಂಜಾಬಿನಲ್ಲಿ ಅರ್ಧಕ್ಕರ್ಧ ಹೊಲಗಳಲ್ಲಿ ಬೋರ್ಲಾಗ್‌ರ ಕುಬ್ಜ ತಳಿಯನ್ನೇ ಬೆಳೆಯಲಾಗುತ್ತಿತ್ತು.
 • `ಅಧಿಕ ಇಳುವರಿ’ ಎಂಬುದೇ ಇಲ್ಲಿನ ಒಂದು ದೊಡ್ಡ ಮೂಢನಂಬಿಕೆ. ಈ ತಳಿಗಳೇ ತುಂಬಾ ಫಸಲು ಕಒಡುತ್ತವೆ ಎಂಬ ನಂಬಿಕೆಯೇ ತಪ್ಪು. ಈ ತಳಿಗಳು ಒಳ್ಳೆಯ ಫಸಲು ಕೊಡುತ್ತಿದ್ದುದು ಭಾರೀ ರಸಗೊಬ್ಬರಕ್ಕೆ ಮತ್ತು ನೀರಿಗೆ. ಆದ್ದರಿಂದ ಇವನ್ನು `ಅಧಿಕ ಸ್ಪಂದಿಸುವ ತಳಿಗಳು’ ಎಂದು ಕರೆಯುವುದೇ ಸೂಕ್ತ. ಇವುಗಳಿಗೆ ರಸಗೊಬ್ಬರ ಮತ್ತು ನೀರನ್ನು ಕೊಡದಿದ್ದರೆ ಇವು ಸ್ಥಳೀಯ ತಳಿಗಳಿಗಿಂತ ಕಳಪೆ ಫಸಲು ಕೊಡುತ್ತವೆ! ಆದ್ದರಿಂದ ಇಲ್ಲಿ ಹೊರಸುರಿಗಿಂತ (ಫಸಲು) ಒಳಸುರಿಗಳ (ರಸಗೊಬ್ಬರ, ನೀರು) ವೆಚ್ಚವೇ ಹೆಚ್ಚು.
 • ಭಾರತದಲ್ಲಿ ಇಳುವರಿಯ ಜೊತೆಗೇ ರಾಸುಗಳಿಗೂ ಮೇವು ಉತ್ಪಾದನೆಯಾಗುವುದು ಶತಮಾನಗಳಿಂದ ನಡೆದುಕೊಂಡು ಬಂದ ಕೃಷಿವ್ಯವಸ್ಥೆ. ಈ ಜೈವಿಕ ಆಹಾರವು ಕುಬ್ಜ ತಳಿಗಳಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಕುಗ್ಗಿತು. ರಸಗೊಬ್ಬರಗಳನ್ನು ಅತಿಯಾಗಿ ನುಂಗಬೇಕಿದ್ದರಿಂದ ಈ ಸಸಿಗಳು ಹೆಚ್ಚು ಪ್ರಮಾಣದಲ್ಲಿ ನೀರನ್ನೂ ಕುಡಿದವು.
 • ಭಾರತವು ಅಕ್ಕಿಯಲ್ಲಿ ವಂಶವಾಹಿ ವೈವಿಧ್ಯವನ್ನು ಹೊಂದಿರುವ ದೇಶ. ಕಾರ್ಮಿಕ ಶ್ರಮ ಮತ್ತು ಶಕ್ತಿ ಒಳಸುರಿಯನ್ನು ಗಮನಿಸಿದರೆ ಸ್ಥಳೀಯ ವಿಧಾನಗಳೇ ಹೆಚ್ಚು ದಕ್ಷ ಎಂಬುದನ್ನು ೨೨ ಭತ್ತ ಬೆಳೆಯುವ ವ್ಯವಸ್ಥೆಗಳನ್ನು ತುಲನೆ ಮಾಡಿದ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.
 • ಪಂಜಾಬ್ ಸೇರಿದಂತೆ ಭಾರತದಲ್ಲಿ ವೈವಿಧ್ಯತೆಯೇ ಸಾಂಪ್ರದಾಯಿಕ ಕೃಷಿಯ ಕೇಂದ್ರ ನೀತಿ. ವೈವಿಧ್ಯ ಕಡಿಮೆಯಾದಷ್ಟೂ ಜೀವಿಪರಿಸ್ಥಿತಿಯು ಹೆಚ್ಚು ಹೆಚ್ಚು ಕೀಟಗಳಿಗೆ, ಕಾಯಿಲೆಗಳಿಗೆ ತುತ್ತಾಗುತ್ತದೆ.
  ಹಸಿರು ಕ್ರಾಂತಿಯಿಂದಾಗಿ ಬಹುಬೆಳೆಯ ವ್ಯವಸ್ಥೆ (ಗೋಧಿ, ಮೆಕ್ಕೆಜೋಳ, ರಾಗಿ, ದ್ವಿದಳ ಧಾನ್ಯ, ಎಣ್ಣೆಬೀಜಗಳು)ಯ ಬದಲಿಗೆ ಗೋಧಿ ಮತ್ತು ಅಕ್ಕಿಯ ಮೋನೋಕಲ್ಚರ್ ಬಂತು.
 • `ಹಸಿರು ಕ್ರಾಂತಿಗೆ ಬಳಸಿದ ತಳಿಗಳು ಅಧಿಕ ಕೀಟಬಾಧೆಗೆ ತುತ್ತಾಗುತ್ತವೆ; ಅದರಲ್ಲೂ ಗಾಲ್ ಮಿಡ್ಜ್, ಕಂದು ಮಿಡತೆ, ಎಲೆ ಮುರುಟುವ ಕೀಟ, ವೋರ್ ಮ್ಯಾಗೊಟ್ ಮುಂತಾದ ಕೀಟಬಾಧೆಯಿಂದಾಗಿ ಶೇ. ೩೦ರಿಂದ ೧೦೦ರಷ್ಟು ಬೆಳೆನಾಶ ಆಗುತ್ತದೆ’ ಎಂದು ಕಟಕ್‌ನಲ್ಲಿರುವ ಕೇಂದ್ರ ಅಕ್ಕಿ ಸಂಶೋಧನಾ ಸಂಸ್ಥೆಯು ಪ್ರಕಟಿಸಿತು. ಪ್ರತೀ ಕೆಲವು ವರ್ಷಗಳಿಗೊಮ್ಮೆ ತಳಿಯನ್ನೇ ಬದಲಿಸುವ ಅನಿವಾರ್ಯತೆಯೂ ಉಂಟಾಯಿತು.
 • ಏಕ ತಳಿಯ ಬೆಳೆಯಿಂದಾಗಿ ಒಂದೇ ಬಗೆಯ ರಾಸಾಯನಿಕಗಳನ್ನು ಕೀಟನಾಶಕಗಳಾಗಿ ಬಳಸುವ ಪ್ರಕ್ರಿಯೆಯೂ ಹೆಚ್ಚಾಯಿತು.
 • ಪಂಜಾಬಿನಲ್ಲಿ ಕೃಷಿ ವಿಸ್ತರಣೆಗಾಗಿ ಕಾಡನ್ನೂ ಹೊಲಗಳನ್ನಾಗಿ ಪರಿವರ್ತಿಸಲಾಯಿತು. ಪಂಜಾಬಿನಲ್ಲೀಗ ಶೇ. ೮೪ರಷ್ಟು ಪ್ರದೇಶದಲ್ಲಿ ಕೃಷಿ ನಡೆದಿದೆ. ಭಾರತದ ಸರಾಸರಿ ಕೃಷಿಭೂಮಿಯೇ ಶೆ. ೪೨. ಪಂಜಾಬಿನಲ್ಲಿರುವ ಕಾಡಿನ ಪ್ರಮಾಣ ಒಟ್ಟು ಭೂಮಿಯ ಕೇವಲ ಶೇ. ೪ರಷ್ಟು. ಅದೂ ಹೆಚ್ಚಾಗಿ ನೀಲಗಿರಿ ತೋಪುಗಳಿಗೇ ಮೀಸಲಾಗಿದೆ.
 • ಈ ಅಧಿಕ ಇಳುವರಿ ತಳಿಗಳು ಭೂಮಿಯ ಮೈಕ್ರೋನ್ಯೂಟ್ರಿಯೆಂಟ್‌ಗಳ ಪ್ರಮಾಣವನ್ನು ಶರವೇಗದಲ್ಲಿ ಕುಗ್ಗಿಸಿವೆ. ಝಿಂಕ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್, ಮ್ಯಾಗ್ನೀಶಿಯಮ್, ಮಾಲಿಬ್ಡಿನಮ್, ಬೋರಾನ್‌ಗಳ ಕೊರತೆ ಈಗ ಸಾಮಾನ್ಯವಾಗಿದೆ.  ಇದರಿಂದಾಗಿ ರಸಗೊಬ್ಬರದ ಪ್ರಮಾಣ ಹೆಚ್ಚಿದರೂ ಇಳುವರಿಯಲ್ಲಿ ಕುಸಿತ ಕಂಡುಬಂದಿದೆ.
 • ಅಧಿಕ ಇಳುವರಿ ತಳಿಗಳು ಶೇ. ೪೦ರಷ್ಟು ಹೆಚ್ಚು ಫಸಲನ್ನು ನೀಡುತ್ತವೆ; ಆದರೆ ಅವು ಸಾಂಪ್ರದಾಯಿಕ ತಳಿಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಕುಡಿಯುತ್ತವೆ! ಆದ್ದರಿಂದ ಅವುಗಳ ಇಳುವರಿ ಸಾಂಪ್ರದಾಯಿಕ ಇಳುವರಿಗಿಂತ ಶೇ. ೫೦ರಷ್ಟು ಕಡಿಮೆ ಎಂದೇ ಹೇಳಬೇಕು.
 • ಹಸಿರು ಕ್ರಾಂತಿಯ ನಂತರ, ಅಂದರೆ ೧೯೭೮-೭೯ರ ನಂತರ ಪಂಜಾಬಿನ ರೈತರ ಹೆಕ್ಟೇರುವಾರು ಆದಾಯದಲ್ಲಿ ಇಳಿಮುಖ ಕಂಡುಬಂದಿದೆ. ಅದರಲ್ಲೂ ಈ ರಾಜ್ಯದಲ್ಲಿ ಅರ್ಧದಷ್ಟಿರುವ ಸಣ್ಣ ರೈತರ ಆದಾಯದಲ್ಲಿ ವಾರ್ಷಿಕ ೧೫೦೦ ರೂ.ಗಳ ಕೊರತೆ ಕಂಡುಬಂದಿತ್ತು.
 • ರಾಷ್ಟ್ರೀಯ ಬೀಜ ಯೋಜನೆಗೆ ವಿಶ್ವ ಬ್ಯಾಂಕ್ ನೀಡಿದ ನಾಲ್ಕನೇ ಕಂತಿನ ಸಾಲವು ಕೇವಲ ಖಾಸಗಿ ರಂಗವನ್ನು ಬೆಂಬಲಿಸುವುದೇ ಆಗಿತ್ತು.
 • ಹಸಿರು ಕ್ರಾಂತಿಯಿಂದಾಗಿ ಹೆಚ್ಚಿದ ನೀರಿನ ಬೇಡಿಕೆಯು ಹಲವು ಅಂತಾರಾಜ್ಯ ಜಲವಿವಾದಗಳಿಗೆ ಕಾರಣವಾಯಿತು. ೧೯೮೮ರಲ್ಲಿ ಒಂದು ಕಾಲುವೆ ನಿರ್ಮಾಣ ಸ್ಥಳದಲ್ಲಿ ೩೦ ಜನ ಕಾರ್ಮಿಕರನ್ನು ಕೊಲೆ ಮಾಡಿದ ಘಟನೆ ಒಂದು ನಿದರ್ಶನವಷ್ಟೆ.
 • ಇಡೀ ಪಂಜಾಬನ್ನು ಭಾರತಕ್ಕೆ ಅಗ್ಗದ ದರದಲ್ಲಿ ಆಹಾರ ಒದಗಿಸುವ ಗುಲಾಮೀ ರಾಜ್ಯವನ್ನಾಗಿ ಮಾಡಿದ ಬಗ್ಗೆ ಆಕ್ರೋಶವೂ ಕೇಳಿಬಂತು. ಆದ್ದರಿಂದಲೇ ೧೯೮೪ರಲ್ಲಿ ಪಂಜಾಬ್ ಫಾರ್ಮಿಂಗ್ ಆರ್ಗನ್ ಎಂಬ ಸಂಸ್ಥೆಯು ಈ ನೀತಿಯ ವಿರುದ್ಧ ಹೋರಾಡುವುದಾಗಿ ಪ್ರಕಟಿಸಿತು.

ಇವಿಷ್ಟು ವಂದನಾ ಶಿವರವರ ಪುಸ್ತಕದ ಸಂಕ್ಷಿಪ್ತ ರೂಪ.

ಈಗ…… ಹಸಿರು ಕ್ರಾಂತಿ ಕೊನೆಯುಸಿರೆಳೆಯಿತೆ?

ಬಿ ಬಿ ಸಿ ಸುದ್ದಿ ಕಥೆ ಕೇಳಿ (ಇದು ಪ್ರಕಟವಾಗಿದ್ದು ೨೦೦೬ರ ಮೇ ೨೯ರಂದು) 

೪೦ ವರ್ಷಗಳ ನಂತರ ಹಸಿರು ಕ್ರಾಂತಿ ನಿಜಕ್ಕೂ ಭಾರತಕ್ಕೆ ಕೊಟ್ಟ ಕೊಡುಗೆಯೇನು? ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವುದೇ ಹಸಿರು ಕ್ರಾಂತಿಯ ಗುರಿಯಾಗಿತ್ತು. ಈಗ ಹಸಿರು ಕ್ರಾಂತಿಯ ತರುವಾಯದ ಬೃಹತ್ ಕೃಷಿ ಬಿಕ್ಕಟ್ಟಿಗೆ ಭಾರತ ಸಿಲುಕಿದೆ ಎಂದು ಪತ್ರಕರ್ತ ಪಿ. ಸಾಯಿನಾಥ್ ಹೇಳುತ್ತಾರೆ. ಜನಸಂಖ್ಯಾ ಸ್ಫೋಟದ ಗತಿಯು ಕೃಷಿ ಉತ್ಪನ್ನದ ಗತಿಯನ್ನೂ ಮೀರಿ ಬೆಳೆಯುತ್ತಿದೆ.

ಇದೆಲ್ಲವೂ ನೀತಿಲೋಪಗಳಿಂದಳೇ ಆಗಿದ್ದೇ ಹೊರತು ಬರ ಮತ್ತು ನಿಸರ್ಗದತ್ತ ದುರಂತಗಳಲ್ಲ ಎಂದು ಸಾಯಿನಾಥ್ ಹೇಳುತ್ತಾರೆ.

ಈ ವಾರವಷ್ಟೇ ಆಸ್ಟ್ರೇಲಿಯಾದಿಂದ ಐದು ಲಕ್ಷ ಟನ್ ಗೋಧಿಯನ್ನು ಹೊತ್ತ ಫರ್ನೇಸ್ ಆಸ್ಟ್ರೇಲಿಯಾ ಹಡಗು  ಚೆನ್ನೈಗೆ ಬಂದಿದೆ. ಈ ವರ್ಷ ಭಾರತವು ಇನ್ನೂ ಮೂವತ್ತೈದು ಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಳ್ಳಲಿದೆ.

ಈಘ ಭಾರತದ ಕೃಷಿಕರು ಕಾಫಿ, ಹತ್ತಿಯಂಥ ವಾಣಿಜ್ಯ ಬೆಳೆಗಳನ್ನೇ ಹೆಚ್ಚು ಬೆಳೆಯುತ್ತಿದ್ದಾರೆ. ಭಾರತದ ಶೇ. ೬೦ರಷ್ಟು ಗೋಧಿ ಉತ್ಪಾದನೆಗೆ ಕಾರಣವಾಗಿರುವ ಪಂಜಾಬ್ ಮತ್ತು ಹರ್‍ಯಾನಾ ರಾಜ್ಯಗಳಲ್ಲಿ ಕೇವಲ ಗೋಧಿಯಿಂದಲೇ ಬದುಕುವುದು ದುಸ್ತರವಾಗಿದೆ. ‘ಒಂದು ಎಕರೆ ಅಣಬೆ ಬೆಳೆದರೆ ಅದು ಹತ್ತು ಎಕರೆ ಗೋಧಿ ಬೆಳೆಯುವುದಕ್ಕೆ ಸಮ’ ಎಂದು ರೈತರು ಈಗ ಹೇಳುತ್ತಿದ್ದಾರೆ.

`ಈಗ ನೀರೇ ಸಿಗುತ್ತಿಲ್ಲ. ಇದೆಲ್ಲ ಮರುಭೂಮಿಯಾಗುತ್ತಿದೆ. ಭತ್ತದ ಫಸಲೂ ಗುಣಮಟ್ಟದ್ದಲ್ಲ’ ಎನ್ನುತ್ತಾನೆ ರೈತ ತೇಜಪಾಲ್ ಚೌಹಾಣ್.

ಮಾರ್ಕ್ ಡೋವೀ ಸಿದ್ಧಾಂತ

ಮಾರ್ಕ್ ಡೋವೀ ಎಂಬ ಪತ್ರಕರ್ತನ ಕಣ್ಣಿಗೆ ಹಸಿರು ಕ್ರಾಂತಿ ಕಂಡಿದ್ದು ಹೀಗೆ:

೫೦ ವರ್ಷಗಳ ಹಸಿರು ಕ್ರಾಂತಿಯನ್ನು ವಿಶ್ವದ ಮಹಾನ್ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಆಹಾರದ ಉತ್ಪಾದನೆ ಹೆಚ್ಚಾಗಿದ್ದೇನೋ ನಿಜ. ಆದರೆ ಸಾಮಾಜಿಕ, ಆರ್ಥಿಕ ಮತ್ತು ಪಾರಿಸರಿಕ ಪರಿಣಾಮಗಳು ಮಾತ್ರ ಭೀಕರ. ರಾಕ್‌ಫೆಲ್ಲರ್ ಮತ್ತು ಫೋರ್ಡ್ ಫೌಂಡೇಶನ್ ಬೆಂಬಲಿತ ಈ ಮಿತಿಯಿಲ್ಲದ ವೈಜ್ಞಾನಿಕ ಪ್ರಯೋಗಗಳಿಂದಾಗಿ ಸಿರಿವಂತರು ಇನ್ನೂ ಸಿರಿವಂತರಾದರು; ಬಡವರು ಮತ್ತಷ್ಟು ಬಡವರಾದರು. ಈಗಲೂ ಜಗತ್ತಿನಲ್ಲಿ ೮೦ ಕೋಟಿ ಜನ ಹಸಿವಿನಿಂದ ಬಳಲುತ್ತಿದ್ದಾರಲ್ಲ, ಯಾಕೆ?

ಹಸಿರು ಕ್ರಾಂತಿಯ ಹಿಂದೆ ಭಾರೀ ರಾಜಕಾರಣವೂ ಇದೆ ಎಂಬುದು ಮಾರ್ಕ್ ಅಭಿಮತ. ಹಲವು ದೇಶಗಳಲ್ಲಿ ನಡೆಯುತ್ತಿದ್ದ ಸಮಾಜವಾದಿ ಚಳವಳಿಗಳು ಈ `ಕ್ರಾಂತಿ’ಯಿಂದಾಗಿ ದುರ್ಬಲವಾದವು. ಭಾರತ, ಮೆಕ್ಸಿಕೋ, ಫಿಲಿಪೈನ್ಸ್‌ಗಳಲ್ಲಿ ಕೃಷಿ ಸುಧಾರಣೆಗಳ ಬದಲಿಗೆ ತಾಂತ್ರಿಕ ಪರಿಹಾರಗಳನ್ನು ತಂದಿದ್ದೂ ಇದೇ ಕಾರಣಕ್ಕೆಂತೆ: ಕೃಷಿ ಸುಧಾರಣೆ ಎಂದರೆ ಸಮಾಜವಾದಿ ರಾಜಕಾರಣ. (ನೆನಪಿಡಿ: ಜವಹರಲಾಲ್ ನೆಹರು ಒಬ್ಬ ಸಮಾಜವಾದಿ ಕಾಂಗ್ರೆಸಿಗ ಎಂದೇ ಪ್ರಸಿದ್ಧರಾಗಿದ್ದರು)

ಮಾರ್ಕ್ ಡೋವೀ ಹೇಳೋದಿರಲಿ, ಚಂಡೀಗಢದಲ್ಲಿರುವ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಎಂಡ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ನಡೆಸಿದ ಸಮಗ್ರ ಅಧ್ಯಯನದ ಫಲಿತಾಂಶ ಇದು: ಪಂಜಾಬಿನಲ್ಲಿ ಎರ್ರಾಬಿರ್ರಿಯಾಗಿ ಕೀಟನಾಶಕಗಳನ್ನು ಸಿಂಪಡಿಸಿದ್ದಕ್ಕೂ ಅಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಿರುವುದಕ್ಕೂ ನೇರ ಸಂಬಂಧವಿದೆ.

ಅದಿರಲಿ, ಹಸಿರು ಕ್ರಾಂತಿಯ ಹರಿಕಾರ ಎಂದು ಬೋರ್ಲಾಗ್‌ನನ್ನು ಹೊಗಳುತ್ತಿರುವವರು ಸಾವಯವ ಕೃಷಿಯನ್ನು ಏನೆಂದು ಬಗೆಯುತ್ತಾರೆ? ಸಾವಯವ ಕೃಷಿಯಲ್ಲಿ ಸ್ಥಳೀಯ ತಳಿಗಳಿಗೇ ಮಣೆ; ರಾಸಾಯನಿಕಗಳಿಗೆ ನಿಷೇಧ; ನೀರಿನ ಮಿತ ಬಳಕೆ. ಇಂದು ಕರ್ನಾಟಕ ಸರ್ಕಾರವು ಸಾವಯವ ಕೃಷಿ ಮಿಶನ್‌ನ್ನೇ ಅಧಿಕೃತವಾಗಿ ಸ್ಥಾಪನೆ ಮಾಡಿರುವಾಗ (ಇದೇನು ಬಿಜೆಪಿ ಸರ್ಕಾರದ ವೈಶಿಷ್ಟ್ಯವಲ್ಲ, ಹಿಂದೆ ಕೃಷಿ ಸಚಿವರಾಗಿದ್ದ ಎಚ್ ಕೆ ಪಾಟೀಲರೇ ಸಾವಯವ ಕೃಷಿನೀತಿಯನ್ನು ಮೊದಲಬಾರಿಗೆ ರೂಪಿಸಿದ್ದರು) ಹಸಿರು ಕ್ರಾಂತಿಯ ಪಾಡೇನು?

ಇತ್ತೀಚೆಗೆ ಆಫ್ರಿಕಾದ ಎರಡು ಕೋಟಿ ಜನರ ಹಸಿವನ್ನು ನೀಗಿಸುವುದಕ್ಕೆ ಒಂದು ಹೊಸ ಉಪಕ್ರಮವನ್ನು ಗೇಟ್ಸ್ ಮತ್ತು ರಾಕ್‌ಫೆಲ್ಲರ್ ಪ್ರತಿಷ್ಠಾನಗಳು ಜಂಟಿಯಾಗಿ ಘೋಷಿಸಿವೆ. ಇದರಿಂದ ಆಗೋದಿಷ್ಟೆ: ದೇಸಿ ತಿಳಿವಳಿಕೆ ಮತ್ತು ದೇಸಿ ಸಸ್ಯಗಳ ಕಳವು, ಸಸ್ಯಗಳ ಪೇಟೆಂಟ್ (ಹಕ್ಕುಸ್ವಾಮ್ಯ) ಮತ್ತು ಖಾಸಗೀಕರಣ,  ಸಂಶೋಧನೆಯಲ್ಲೂ ಖಾಸಗೀಕರಣ. ಆಫ್ರಿಕಾದಲ್ಲಿ ಈಗ ಎರಡು ಸಾವಿರಕ್ಕೂ ಹೆಚ್ಚು ಬಗೆಯ ತಳಿಗಳನ್ನು ಆಹಾರಧಾನ್ಯವಾಗಿ ಬೆಳೆಯಲಾಗುತ್ತಿದೆ. ಅಮೆರಿಕಾದಲ್ಲಿ ಇರೋದು ಕೇವಲ ೧೨ ತಳಿಗಳು. 

ಹಸಿರು ಕ್ರಾಂತಿಯ ಭ್ರಮೆ ಬೇಡ

VikrantaKarnataka_09_25_09-1

ಅಂದಿನ ಕಾಲದಲ್ಲಿ ಹಸಿರು ಕ್ರಾಂತಿಯು ಭಾರತದಂಥ ದೇಶಗಳನ್ನು ಸಮಾಜವಾದದಿಂದ ತಪ್ಪಿಸಿ ಬಂಡವಾಳಶಾಹಿ ಬಲೆಗೆ ಹಾಕಿಕೊಳ್ಳಲು ಅಮೆರಿಕಾದ ಪ್ರಬಲ ಅಸ್ತ್ರವಾಗಿತ್ತು. ಕೇವಲ ಆಹಾರ ಉತ್ಪಾದನೆ ಹೆಚ್ಚಿದ ಮಾತ್ರಕ್ಕೆ ಅಭ್ಯುದಯವಾಗುವುದಿಲ್ಲ. ಅದು ಕೇವಲ ತೋರಿಕೆಯ ಅಭಿವೃದ್ಧಿ. (ಉದಾಹರಣೆಗೆ ಸೇತುವೆ ಕಟ್ಟಿದ ಕೂಡಲೇ ಒಂದು ಹಳ್ಳಿ ಉದ್ಧಾರವಾಗುವುದಿಲ್ಲ. ಅದೇ ಸೇತುವೆಯು ಮರಗಳ್ಳರಿಗೆ ಬಳಕೆಯಾದರೆ ಅಭ್ಯುದಯ ಎನ್ನಲಾದೀತೆ?) ಮೊದಲು ನಾವು ಅಭಿವೃದ್ಧಿಗೂ (ಹೇರಳ ಉತ್ಪಾದನೆ), ಅಭ್ಯುದಯಕ್ಕೂ (ಸಂತೃಪ್ತಿಯ ಬದುಕು)  ಒರುವ ಅಂತರವನ್ನು ಅರ್ಥಮಾಡಿಕೊಳ್ಳಬೇಕು. ಹಣ, ಆಹಾರ ಇದ್ದ ಮಾತ್ರಕ್ಕೆ ಸಂತೃಪ್ತಿ ಸಿಗುವುದಿಲ್ಲ.

ಮಾತೆತ್ತಿದರೆ ಪರಿಸರವಾದಿಗಳು ಒಂಥರದ ಪೀಡೆಗಳು ಎಂದು ಭಾವಿಸುವ ಹಸಿರುಕ್ರಾಂತಿವಾದಿಗಳು ಭೂಮಿಯನ್ನೇ ರೇಪ್ ಮಾಡಿರುವ ಹಸಿರುಕ್ರಾಂತಿಯ ಅಪಾಯವನ್ನು ಅರ್ಥ ಮಾಡಿಕೊಳ್ಳಲಿ. ಈ ಹಸಿರು ಕ್ರಾಂತಿಯ ಫಲಿತಾಂಶವು ಭಾರತದಾದ್ಯಂತ ಮುಗ್ಗುಲು ವಾಸನೆ ಹೊಡೆಯುತ್ತಿದೆ. ಎಲ್ಲೆಡೆಯೂ ಕೀಟನಾಶಕಗಳ ವಿರುದ್ಧ ಧ್ವನಿ ಎದ್ದಿದೆ. ನೀರಿನ ಮಿತಬಳಕೆಯೇ ಇಂದಿನ ಮಂತ್ರವಾಗಿದೆ. ರಕ್ಕಸ ಅಣೆಕಟ್ಟುಗಳನ್ನು ಬೇಡುವ ಹಸಿರು ಕ್ರಾಂತಿ, ರಸಗೊಬ್ಬರ ಮಾಫಿಯಾಗಳಿಗೆ ಥೈಲಿಯಾಗಿರುವ ಹಸಿರು ಕ್ರಾಂತಿ, ರೈತರ ಹೊಲಗಳನ್ನು ರಾಸಾಯನಿಕಗಳ ಸುರಿಹೊಂಡ ಮಾಡುವ ಹಸಿರು ಕ್ರಾಂತಿ ನಮಗೆ ಬೇಕೆ?

ಬೋರ್ಲಾಗ್‌ನ ಉದ್ದೇಶ ಒಳ್ಳೆಯದೇ ಇದ್ದಿರಬಹುದು. ಆದರೆ ಅದು ತಂದಿಟ್ಟ ಬಿಕ್ಕಟ್ಟು ಈಗಾಗಲೇ ಕೆಡುಕಿಗೆ ದಾರಿ ಮಾಡಿದೆ. ಈಗ, ಬೋರ್ಲಾಗ್ ಸತ್ತಿದ್ದೇ ನೆಪವಾಗಿ ಮತ್ತೊಂದು ಹಸಿರು ಕ್ರಾಂತಿ ಭಾರತವನ್ನು ಕಾಡದಿದ್ದರೆ ಸಾಕು !

 

ಹೆಚ್ಚಿನ ಮಾಹಿತಿಗೆ

Leave a Reply

Theme by Anders Norén