೨೦೧೩. ಜಯನಗರದ ದೊಡ್ಡ ಹೋಟೆಲಿನಲ್ಲಿ ಕುಳಿತಿದ್ದೇನೆ. ಒಂದು ಪಾರ್ಟಿಗಾಗಿ ನನ್ನನ್ನ ಕರೆದಿದ್ದಾರೆ. ಮೊದಲು ಸ್ಟಾರ್ಟರ್; ತಿಳಿಹಳದಿ ಹೋಳುಗಳ ಒಂದು ರಾಶಿ ಹೊತ್ತ ಪ್ಲೇಟು ನನ್ನ ಮುಂದಿದೆ. ಇದೇನು ಎಂದು ಕೇಳುತ್ತೇನೆ. ಪಪಾಯ ಕಾಯಿಯಿಂದ ಮಾಡಿದ ಸ್ಟಾರ್ಟರ್, ತುಂಬಾ ಫೇಮಸ್ ಎಂಬ ಉತ್ತರ ಸಿಗುತ್ತದೆ. ನಾನು ಅದರ ರುಚಿ ನೋಡುತ್ತೇನೆ. ಹುಳಿನೀರಲ್ಲಿ ತೋಯಿಸಿದ ಆ ಪಪಾಯಿ ಚೂರುಗಳು ರಬ್ಬರ್ ತುಂಡುಗಳಂತೆ ಕಾಣಿಸುತ್ತವೆ.
ಮೈನ್ ಕೋರ್ಸ್ ಬರುವ ಮುನ್ನ ನನ್ನ ಮನಸ್ಸು ೪೧ ವರ್ಷಗಳ ಹಿಂದಕ್ಕೆ ಓಡುತ್ತದೆ. ನನ್ನ ಅಕ್ಕಪಕ್ಕದವರು ಅದನ್ನೆಲ್ಲ ಮರೆತಿರಬಹುದು ಎಂಬುದು ಅವರ ಮಾತಿನಿಂದಲೇ ಖಚಿತವಾಗುತ್ತಿದೆ. ನೆನಪಿರಬಹುದಾದ ಒಬ್ಬಳೇ ಅಕ್ಕ, ಅವಳು ಈಗಿಲ್ಲ. ಪಪಾಯಿ ಕಾಯಿಯ ಕಥೆ ನನಗಿಂತ ಅವಳಿಗೇ ಚೆನ್ನಾಗಿ ಗೊತ್ತು. ಪಪಾಯಿಯು ತೂಕ ಕಳೆದುಕೊಳ್ಳಲು ಅತ್ಯುತ್ತಮ, ಕ್ಯಾನ್ಸರ್ ನಿರೋಧಕ, ಎ ಮತ್ತು ಸಿ ಅನ್ನಾಂಗಗಳಿರುವ ಆಹಾರ ಎಂದೆಲ್ಲ ಈಗ ಓದಿ ತಿಳಿದಿದ್ದೇನೆ. ಆದರೆ ತೂಕ ಉಳಿಸಿಕೊಳ್ಳಲೆಂದೇ ಒಂದು ವಾರ ಅದನ್ನೇ ತಿಂದು ಜೀವಿಸಿದ್ದನ್ನು ಮರೆಯಲಾರೆ.
ಪಪಾಯಿ ಕಾಯಿ ಸಪ್ತಾಹ
೧೯೭೩ರಲ್ಲಿ ನಾನು `ನಗರ’ದಲ್ಲಿದ್ದೆ. ಅದನ್ನು ಹಳೆನಗರ, ಬಿದನೂರು ಎಂದೂ ಕರೆಯುತ್ತಾರೆ. ಹೊಸನಗರ ತಾಲೂಕಿನಲ್ಲಿರುವ ಊರು; ಒಂದೊಮ್ಮೆ ಕೆಳದಿ ಶಿವಪ್ಪನಾಯಕನ ರಾಜಧಾನಿ. ನಾನಾಗ ೩ನೇ ಕ್ಲಾಸು. ನನ್ನ ಶಾಲೆಯ ರಸ್ತೆಯ ಕೊನೆಯಲ್ಲೇ ನನ್ನ ಮನೆಯೂ ಇತ್ತು. ಮೂರು ರೂಮುಗಳು ಬಿಡಿಬಿಡಿಯಾಗಿದ್ದವು. ಹೊರಗೆ ಬಂದೇ ಒಳಗೆ ಹೋಗಬೇಕು. ಹಾಗೇ ಅಡುಗೆಮನೆಗೂ ಪ್ರತ್ಯೇಕ ಪ್ರವೇಶ. ಮಣ್ಣಿನ ನೆಲದಲ್ಲಿ ದಿನಾ ಗೆದ್ದಲು ಏಳುತ್ತಿತ್ತು. ಕಟ್ಟಿರುವೆಗಳ ಕಾಟ ತಪ್ಪಿಸಿಕೊಳ್ಳಲು ಹಾಸಿಗೆ ಸುತ್ತ ಸೀಮೆಎಣ್ಣೆಯನ್ನು ಸಿಂಪಡಿಸಿಕೊಂಡು ಹಾಯಾಗಿ ನಿದ್ದೆ ಜಾರುತ್ತಿದ್ದೆವು.
ಆಗ ನಮ್ಮ ಮನೆಗೆ ಆದಾಯವೇ ಇರಲಿಲ್ಲ. ಅವರಿವರ ನೆರವೇ ಮುಖ್ಯವಾಗಿತ್ತು. ಪದೇ ಪದೇ ಊರು ಬಿಟ್ಟು ಹೋಗುತ್ತಿದ್ದ ಮನೆಯ ಯಜಮಾನನಿಂದ ಹೆಚ್ಚಿನ ನೆರವು ಅಸಾಧ್ಯವಾಗಿತ್ತು. ಒಮ್ಮೆ ಪರಿಸ್ಥಿತಿ ಎಷ್ಟು ವಿಪರೀತಕ್ಕೆ ಇಟ್ಟುಕೊಂಡಿತು ಎಂದರೆ ಅಕ್ಕಿಯೂ ಮುಗಿಯಿತು. ತರಕಾರಿಯಂತೂ ಇರಲೇ ಇಲ್ಲ. ಹಿತ್ತಿಲಿನಲ್ಲಿ ಪಪಾಯ ಕಾಯಿಗಳು ಎಳೆಯ ಹಂತ ದಾಟುತ್ತಿದ್ದವಷ್ಟೆ. ತೀರಾ ಎಳೆಗಾಯಿ ತುಂಬಾ ಕಹಿಯಾಗಬಹುದು ಎಂದು ಒಂದು ದಿನ ಕಾದೆವು. ಆಮೇಲೆ ಅದನ್ನೇ ಕಿತ್ತು ಬೇಯಿಸಿದೆವು. ಉಪ್ಪು ಹಾಕಿಕೊಂಡು ತಿಂದೆವು. ಸುಮಾರು ಒಂದು ವಾರದ ಕಾಲ ಪಪಾಯಿ ಪಲ್ಯವೇ ನಮ್ಮ ಆಹಾರವಾಗಿತ್ತು.
ಅದಾಗಿ ಒಂದು ವಾರದ ಮೇಲೆ ಇರಬೇಕು, ನನ್ನ `ಔಟ್‌ಪುಟ್’ ನಿಂತೇ ಹೋಯಿತು. ಕನಿಷ್ಠ ಒಂದು ವಾರದ ಕಾಲ ನಾನು ಪಟ್ಟ ಯಾತನೆ, ಅವಮಾನ ಅಷ್ಟಿಷ್ಟಲ್ಲ. ಏನು ಮಾಡಿದರೂ, ಉಹು. ನನ್ನ ಅಕ್ಕ ನಗುನಗುತ್ತಲೇ ನನ್ನನ್ನು `ಧರೆ’ಗೆ ಕರೆದುಕೊಂಡು ಹೋಗುತ್ತಿದ್ದಳು; ಬೆನ್ನು ಒತ್ತಿ ಯತ್ನಿಸಿದಳು; ಪರಿಣಾಮ ಸೊನ್ನೆ. ಅಂತೂ ಒಂದು ವಾರದ ಮೇಲೆ ಹೇಗೋ, ಎಲ್ಲ ಸರಿಯಾಯಿತು. ನಾನು ಕ್ಲಾಸಿಗೆ ಹೋಗತೊಡಗಿದೆ.
ಅದೇ ಊರಿನಲ್ಲಿ ಹಸಿವಿನ ಬಾಧೆ ತೀರಿಸಿಕೊಳ್ಳಲು ಸಿಕ್ಕಿದ ಅಕ್ಕಿಯನ್ನೇ ಬೇಯಿಸಿ, ಹಿತ್ತಲಿನಲ್ಲಿ ಅನಾಯಾಸವಾಗಿ ಬೆಳೆದಿದ್ದ ಸೋರಲೆ ಸೊಪ್ಪಿನ ತಂಬಳಿಯನ್ನೇ ತಿಂಗಳುಗಟ್ಟಳೆ ಸವಿದಿದ್ದೂ ನೆನಪಿದೆ.
ರುಪಾಯಿಗೆ ನಾಕ್ ಬಾಳೆಹಣ್ಣು
೧೯೮೩ರಲ್ಲಿ ನಾನು ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದೆ. ಆಗ ನನಗೆ ಹಣದ ತೊಡಕಾಯಿತು. ಅಲ್ಲಿ ಇಲ್ಲಿ ಬೇಡಿ ತಂದ ಹಣ ಸಾಕಾಗುತ್ತಿರಲಿಲ್ಲ. ಕೊನೆಗೆ ಹಣ ಉಳಿಸಲು ದಾವಣಗೆರೆ ಬಸ್ ಸ್ಟಾಂಡಿಗೆ ಬಂದು ಗಾಡಿ ಅಂಗಡಿಯ ಡಬಲ್ ಆಮ್ಲೆಟ್ ತಿನ್ನಲು ಶುರು ಮಾಡಿದೆ. ಅದಿಲ್ಲವಾದರೆ ಅಜ್ಜನ ಗಾಡಿಯ ಬಾಳೆ ಹಣ್ಣುಗಳು. ರೂಪಾಯಿಗೆ ನಾಕ್ ನಾಕ್ ಎಂದು ಕೂಗುತ್ತಿದ್ದ ಆ ಅಜ್ಜ ನನಗೆ ಎಷ್ಟೋ ಸಲ ಐದು, ಆರು ಹಣ್ಣುಗಳನ್ನು ಕೊಟ್ಟಿದ್ದೂ ಇದೆ.
ಸಾಲಕ್ಕೆ ಕೊಟ್ಟ ಪಲಾವ್
೧೯೮೭ರಲ್ಲಿ ದಾವಣಗೆರೆಯಿಂದ ಓಡಿ ಬೆಂಗಳೂರಿಗೆ ಬಂದ ನಾನು ಎಲ್ಲೆಲ್ಲೋ ಕೆಲಸ ಮಾಡುತ್ತಿದ್ದೆ. ಆಗ ಕಾಟನ್‌ಪೇಟೆಯ ಕಾರ್ನರ್‌ನಲ್ಲಿ ಒಂದು ಪಲಾವ್ ಅಂಗಡಿ ಇತ್ತು. ಅದೀಗ ಮೊಬೈಲ್ ಅಂಗಡಿ ಆಗಿದೆ. ಆ ಕ್ಯಾಂಟೀನಿನ ಯಜಮಾನ ನನಗೆ ಎಷ್ಟೋ ಸಲ ಸಾಲದ ಮೇಲೆ ಪಲಾವ್ ಕೊಟ್ಟಿದ್ದಾನೆ. ಅವನ ಅಂಗಡಿಯಲ್ಲಿ ತಿಂದ ಪಲಾವಿನ ರುಚಿಯನ್ನು ನಾನು ಬೇರೆಲ್ಲೂ ಕಂಡಿಲ್ಲ.
ಮೇಲಿನ ಮೂರು ಘಟನೆಗಳು ನನ್ನನ್ನು ಸದಾ ಕೊರೆಯುತ್ತವೆ. ೨೦೦೯ರಲ್ಲಿ ನಾನು ನಗರಕ್ಕೆ ಹೋಗಿ ನನ್ನ ಆ ಹಳೆ ಮನೆ ನೋಡಿ ಬಂದೆ. ಮೊನ್ನೆ ಏಪ್ರಿಲ್ ೨೫ರಂದು ಮತ್ತೊಮ್ಮೆ ಹೋಗಿ ನಗರದ ಬಸ್ ನಿಲ್ದಾಣದಲ್ಲಿ ನನ್ನನ್ನೇ ನಾನು ನೆನಪಿಸಿಕೊಂಡೆ. ನಾನು ಕಾಟನ್‌ಪೇಟೆ ರಸ್ತೆಯಲ್ಲಿ ಕಾರಿನಲ್ಲಿ ಬರುವಾಗ ಪಲಾವ್ ಕ್ಯಾಂಟೀನಿನ ಯಜಮಾನನ ಎಂಪಿ ಶಂಕರ್ ರೂಪದ ಮುಖ ನೆನಪಾಗುತ್ತದೆ. ದಾವಣಗೆರೆಗೆ ಹೋದಾಗ ಆರ್ ಎಚ್ ಛತ್ರದ ಬಳಿ ಗಾಡಿ ಅಂಗಡಿಗಳು ಇವೆಯೇ ಎಂದು ಕಣ್ಣಾಡಿಸುತ್ತೇನೆ. ಯಾರೂ ಕಾಣಿಸುವುದಿಲ್ಲ.
ಹಸಿವನ್ನು ಇಂಗಿಸುವವರು ನಿಜಕ್ಕೂ ದೇವರೇ. ಅವರೆಲ್ಲ ಚೆನ್ನಾಗಿದ್ದಾರೆ ಎಂದೇ ನಾನು ಭಾವಿಸುತ್ತೇನೆ. ಅವರೆಲ್ಲ ನನ್ನನ್ನು ಬದುಕಿಸಿದ್ದಾರೆ. ಆ ಪಪಾಯಿ, ಆ ಅಜ್ಜ, ಯಜಮಾನ – ಎಲ್ಲರೂ ದೈವಸ್ವರೂಪಿಗಳು. ಅವರಿಗೆಲ್ಲ ನನ್ನ ವಂದನೆಗಳು.
ಹಸಿವನ್ನು ಅರಗಿಸಿಕೊಂಡಿದ್ದೇವೆ ಎಂದು ಹಲವರು ಹೇಳುತ್ತಾರೆ. ಇರಬಹುದು. ನನ್ನ ಬದುಕಿನಲ್ಲಿ ಎಷ್ಟೋ ಸಲ ಬಂದು ಹೋದ ಹಸಿವು ನನ್ನ ನಾಚಿಕೆಯನ್ನು ಹೊರಗಟ್ಟಿದೆ. ೧೯೮೮ರ ಹೊತ್ತಿನಲ್ಲೂ ನಾನು ಹತ್ತು ರುಪಾಯಿ ಸಾಲ ಪಡೆದು ಮೆಜೆಸ್ಟಿಕ್ಕಿನ ಸುಬ್ರಹ್ಮಣ್ಯ ಹೋಟೆಲಿನಲ್ಲಿ ಫುಲ್ ಮೀಲ್ಸ್‌ಗೆ ಹೊರಡುತ್ತಿದ್ದೆ. `ಸುದರ್ಶನ, ಹೀಗೆಲ್ಲ ದುಡ್ಡು ಕೇಳಬಾರದು’ ಎಂದು ಹಿರಿಯ ಮಿತ್ರರು ಒಮ್ಮೆ ಅತ್ಯಂತ ಪ್ರೀತಿಯಿಂದ ಹೇಳಿದರು. ನಾನು ಅಂದು ವಿಷಣ್ಣನಾಗಿ ನಗು ಬೀರಿದ್ದೆ.
ಹೀಗೆಲ್ಲ ಬರೆಯುವುದು ಖಾಸ್‌ಬಾತ್ ಎಂಬುದು ನಿಜ. ಆದರೆ ಈಗಿನ ಯುವಸಮುದಾಯಕ್ಕೆ ಹಸಿವಿನ ಕಥೆ ಗೊತ್ತಾಗಬೇಕು; ಅವರೆಲ್ಲರೂ ಕನ್ನಡದಲ್ಲೇ ನಮ್ಮ ಆಗಿನ ಹಸಿವಿನ ಕಥೆಯನ್ನು ಓದಬೇಕು ಎನ್ನಿಸಿದ್ದಕ್ಕೇ ಇಷ್ಟು ಬರೆದೆ. ಎಷ್ಟೋ ಸಲ ನಮಗೆ ನಮ್ಮ ಭೂತಕಾಲವನ್ನು ಸ್ಮರಿಸಿಕೊಳ್ಳುವ ಅಗತ್ಯ ಕಾಣುವುದಿಲ್ಲ; ಅದೆಲ್ಲ ಈಗೇಕೆ, ಆರಾಮಾಗಿದ್ದೇವಲ್ಲ ಎಂಬ ವಾದ ಮುಂದಾಗುತ್ತದೆ. ೪೧ ವರ್ಷಗಳ ಹಿಂದೆ ನಾನಿದ್ದ ಸ್ಥಿತಿಯಲ್ಲೇ ಇನ್ನೂ ಹಲವರು ಇರಬಹುದು; ಕಡಿಮೆ ಸಂಬಳದಲ್ಲಿ ಕಷ್ಟ ಪಡುತ್ತಿರಬಹುದು. ಅವರಿಗೆಲ್ಲ ನನ್ನ ಆಗಿನ ಅನುಭವ ಏನನ್ನಾದರೂ ತಿಳಿಸಬಹುದು ಎಂಬ ಭಾವನೆ ನನ್ನದು. ನಾನೇನೂ ಈಗಲೂ ಸಾಮಾನ್ಯ ಪದಗಳಲ್ಲಿ ವ್ಯಾಖ್ಯಾನಿಸುವಂತೆ `ಸ್ಥಿತಿವಂತ’ನಲ್ಲ; ಆದರೆ ಸ್ವಾವಲಂಬಿಯಾಗಿ ಮತ್ತು ನನ್ನದೇ ಸುಖದ ವ್ಯಾಖ್ಯೆಗೆ ತಕ್ಕಂತೆ ಬದುಕುತ್ತಿದ್ದೇನೆ.
ನನ್ನಂತೆ ಬಾಲ್ಯದಲ್ಲಿ ಹಸಿವಿನಿಂದ ಕಂಗೆಟ್ಟಿದ್ದರೂ ಕೊನೆಗೆ ಮೇಲೆ ಬಂದ ಹಲವರ ಕಥೆಗಳನ್ನು ನಾನು ಕಂಡಿದ್ದೇನೆ. ಏಳೇ ವರ್ಷಗಳ ಹಿಂದೆ ಐಷಾರಾಮಿ ಬದುಕು ನಡೆಸುತ್ತಿದ್ದ ಒಬ್ಬನ ಸಂಸಾರವು ಗಣಿ ರಂಪದ ಗಾಣಕ್ಕೆ ಸಿಲುಕಿ ಹೈರಾಣಾಗಿರುವುದನ್ನು ಮೊನ್ನೆಯಷ್ಟೇ ಕಂಡಿದ್ದೇನೆ. ಬದುಕಿನ ಏರಿಳಿತಗಳ ವಿಪ್ಲವವನ್ನು ಬಣ್ಣಿಸಲಾಗದು. ಆದರೆ ಇಂಥ ವಿಫಲತೆ – ಸಫಲತೆಗಳು ನಮ್ಮನ್ನು ಮಾರಿಕೊಳ್ಳುವ ಸರಕಾಗಬಾರದು. ಈ ಎಚ್ಚರಿಕೆ ಇದ್ದರೆ ಸಾಕು. ಅಂದಂದಿನ ಆಹಾರವನ್ನು ಅಂದಂದೇ ಹುಡುಕುವ ಫಿಲಾಸಫಿಯನ್ನು ಅಳವಡಿಸಿಕೊಂಡಿರುವ ನನಗೆ ಬದುಕಿನ ಆರ್ಥಿಕತೆಯನ್ನು ನಿಭಾಯಿಸುವ ಅನುಭವ ಸುಮಾರಾಗಿ ದಕ್ಕಿದೆ. ಹಸಿವೇ ನಮ್ಮನ್ನು ಬದುಕಿಗೆ ತಳ್ಳುತ್ತದೆ; ಆದರೆ ಆ ಬದುಕು ಸಮಾಜಕ್ಕೆ ಘಾತಕವಾಗದಂತೆ, ಹೊರೆಯಾಗದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಹೊಣೆಗಾರಿಕೆ. ಉಳಿದವರ ಹೊಟ್ಟೆ ಹೊಡೆಯಬೇಕಿಲ್ಲ; ಸೈಟಿಗಾಗಿ ಭಿಕ್ಷೆ ಬೇಡಬೇಕಿಲ್ಲ; ಕಳ್ಳರಾಗಬೇಕಿಲ್ಲ.
ಈ ವಸುಂಧರೆಯ ಒಡಲಿನಲ್ಲಿ ಈಗಲೂ ತುತ್ತು ಕೂಳಿಗೆ ಒದ್ದಾಡುವ ಜನರಿಗೆ ಸಮಾಜವು ನೆರವಾಗಲಿ, ಎಂದು ಬೇಡಿಕೊಳ್ಳುತ್ತ ಈ ಬ್ಲಾಗನ್ನು ಕೊನೆಗೊಳಿಸುತ್ತಿದ್ದೇನೆ.
Leave a Reply
You must be logged in to post a comment.