ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಸುದ್ದಿ

ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ

ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು  ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆನೆ ಕುರಿತ ಕಾರ್ಯಪಡೆಯ ವರದಿಯನ್ನು ಬಿಡುಗಡೆ ಮಾಡಿ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಕೊನೆಗೂ ಆನೆಗೂ ಕೊಂಚ ಹೆಚ್ಚಿನ ಸ್ಥಾನ – ಮಾನ – ಸಂರಕ್ಷಣೆ ಸಿಗೋ ಲಕ್ಷಣಗಳು ಕಾಣುತ್ತಿವೆ.


ತೀವ್ರ ಗಣಿಗಾರಿಕೆ, ವಿದ್ಯುತ್ ಮತ್ತು ನೀರಾವರಿ ಯೋಜನೆಗಳ ಹಿನ್ನೆಲೆಯಲ್ಲಿ ಆನೆಗಳ ರಕ್ಷಣೆಯ ಬಗ್ಗೆ ಕಾರ್ಯಪಡೆಯು ತನ್ನ ವರದಿಯಲ್ಲಿ ವಿವರವಾಗಿ ಚರ್ಚಿಸಿರೋದನ್ನು ಜೈರಾಂ ರಮೇಶ್ ಶ್ಲಾಘಿಸಿದ್ದಾರೆ. ೨೦೧೧ರಲ್ಲಿ ಅಂತಾರಾಷ್ಟ್ರೀಯ ಆನೆ ಸಮ್ಮೇಳನ (ಆನೆಗಳದ್ದಲ್ಲ, ಆನೆ ಕುರಿತು ಮಾನವರದ್ದು) ನಡೆಸುವ ಸಲಹೆಯನ್ನೂ ಅವರು ಸ್ವಾಗತಿಸಿದ್ದಾರೆ. ಆನೆಗಳ ಪ್ರಾಣಕ್ಕೆ ಸಂಚಕಾರ ತರುತ್ತಿರೋ ರೈಲ್ವೆ ಮತ್ತು ಪವರ್‌ಗ್ರಿಡ್ ನಿಗಮ – ಇವುಗಳ ಪಾತ್ರವು ಆನೆ ರಕ್ಷಣೆಯಲ್ಲಿ ತುಂಬಾ ಮುಖ್ಯ ಎಂದು ಸಮಿತಿಯು ಗುರುತಿಸಿರೋದನ್ನು ರಮೇಶ್ ಸಹಾ ಒತ್ತಿಹೇಳಿದ್ದಾರೆ.

ಡಾ. ಮಹೇಶ್ ರಂಗರಾಜನ್ ಅಧ್ಯಕ್ಷತೆಯ ಈ ಕಾರ್ಯಪಡೆಯಲ್ಲಿ ಅಜಯ್ ದೇಸಾಯಿ, ಡಾ. ಆರ್ ಸುಕುಮಾರ್, ಡಾ. ಪಿ ಎಸ್ ಈಸಾ, ವಿವೇಕ್ ಮೆನನ್, ಡಾ. ಎಸ್ ವಿನ್ಸೆಂಟ್, ಸುಪರ್ಣಾ ಗಂಗೂಲಿ, ಡಾ. ಬಿ ಕೆ ತಾಲೂಕ್‌ದಾರ್, ಬ್ರಿಜೇಂದ್ರ ಸಿಂಗ್, ಡಾ. ದಿವ್ಯಾ ಮುದ್ದಪ್ಪ, ಡಾ. ಸುಶಾಂತ್ ಚೌಧರಿ ಮತ್ತು ಎ ಎನ್ ಪ್ರಸಾದ್ ಸದಸ್ಯರಾಗಿದ್ದರು. ಈ ಕಾರ್ಯಪಡೆಯು ಇಂದು (೧.೯.೨೦೧೦) ತನ್ನ ೧೮೭ ಪುಟಗಳ ವರದಿಯನ್ನು ಸಚಿವರ ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. ಈ ವರದಿಯನ್ನು ಸಾರ್ವಜನಿಕರು ಇಲ್ಲಿ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾರಾಂಶ ಬೇಕಾದವರು ಈ ಬ್ಲಾಗ್ ಓದುವುದನ್ನು ಮುಂದುವರೆಸಿರಿ!

ಈ ಕಾರ್ಯಪಡೆ ವರದಿಯ ಮುಖ್ಯಾಂಶಗಳು ಹೀಗಿವೆ:

 • ಭಾರತದ ಆನೆಯ ಸಂರಕ್ಷಣೆ, ಆರೈಕೆ – ಇದು ದೊಡ್ಡ ಸವಾಲು. ಈ ಕಾರ್ಯಸಾಧನೆಗೆ ನಮ್ಮೆಲ್ಲ ಸಮುದಾಯಗಳ ಅನುಭವ ಮತ್ತು ಆಡಳಿತ ದಕ್ಷತೆಯನ್ನು ತೋರಬೇಕಿದೆ. ಭಾರತವು ಖಂಡಿತವಾಗಿಯೂ ‘ಗಜ’ಭವಿಷ್ಯವನ್ನು ರಕ್ಷಿಸಬಹುದಾಗಿದೆ; ಅದರ ಕಾಡು ಮನೆಯನ್ನು ಉಳಿಸಿಕೊಳ್ಳಬಹುದು.
 • ಆನೆಯನ್ನು ರಾಷ್ಟ್ರೀಯ ಪರಂಪರೆಯ ವನ್ಯಜೀವಿ ಎಂದು ಘೋಷಿಸಬೇಕು. ಆನೆಗಳ ಬಗ್ಗೆ ಜಾಗೃತಿಗಾಗಿ ‘ಹಾಥಿ ಮೇರೆ ಸಾಥಿ’ ಎಂಬ ವಿನೂತನ ಕಾರ್ಯಕ್ರಮವನ್ನು ದೇಶದ ಶಾಲಾ ಕಾಲೇಜುಗಳಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಹಮ್ಮಿಕೊಳ್ಳಬೇಕು. ಪ್ರಾದೇಶಿಕ ಗಜಕೇಂದ್ರಗಳನ್ನು ಸ್ಥಾಪಿಸಬೇಕು.
 • ನಮ್ಮ ದೇಶದಲ್ಲಿ ರಾಷ್ಟ್ರೀಯ ಗಜ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಜೊತೆಗೇ ಕನ್ಸಾರ್ಶಿಯಂ ಆರ್ಫ ಎಲೆಫಂಟ್ ರಿಸರ್ಚ್ ಎಂಡ್ ಎಸ್ಟಿಮೇಶನ್ ಸಂಸ್ಥೆಯನ್ನೂ ಸ್ಥಾಪಿಸಬೇಕು.
  ಇನ್ನು ಮುಂದೆ ರಾಜ್ಯಗಳಲ್ಲಿರುವ ಆನೆ ವಲಯಗಳನ್ನು ಪುನಾರಚಿಸುವುದಲ್ಲದೆ, ಆನೆ ಭೂಪ್ರದೇಶ ಎಂದು ಹತ್ತು ಪ್ರದೇಶಗಳನ್ನು ಗುರುತಿಸಲಾಗುವುದು. ಅಲ್ಲದೆ ೩೨ ಆನೆ ಮೀಸಲು ಪ್ರದೇಶಗಳನ್ನು ಪ್ರಸ್ತಾಪಿಸಲಾಗಿದೆ. ಈಗ ಇರುವ ಆನೆ ಮೀಸಲು ಪ್ರದೇಶಗಳ ಶೇ. ೪೦ ಭಾಗವು ಸಂರಕ್ಷಿತ ಅಥವಾ ಸರ್ಕಾರಿ ಅರಣ್ಯದ ವ್ಯಾಪ್ತಿಯಲ್ಲಿ ಇಲ್ಲ.
 • ಪಾರಿಸರಿಕವಾಗಿ ಋಣಾತ್ಮಕ ಪರಿಣಾಮ ಬೀರುವ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಪ್ರದೇಶಗಳಿಗೆ ಪಾರಿಸರಿಕ ಸೂಕ್ಷ್ಮ ಪ್ರದೇಶ ಎಂಬ ಸ್ಥಾನಮಾನವನ್ನು ನೀಡಬಹುದು.
  ಆನೆಗಳ ಸಂರಕ್ಷಣೆಗೆ ಆನೆ ಮೀಸಲು ಸಮಿತಿಗಳನ್ನು ರಚಿಸಬೇಕು. ಇದರಲ್ಲಿ ಸ್ಥಳೀಯರನ್ನು ಸೇರಿಸಿಕೊಳ್ಳಬೇಕು. ಅಲ್ಲದೆ ನಾಗರಿಕರ ಆನೆ ಕಲ್ಯಾಣ ಸಮಿತಿಗಳನ್ನೂ ರಚಿಸಬೇಕು. ಆನೆಗಳ ಕುರಿತ ಸಂಶೋಧನೆಗೆ, ನಿಗಾ ಕಾರ್ಯಾಚರಣೆಗೆ ೫೦ ಕೋಟಿ ರೂ.ಗಳನ್ನು ಮೀಸಲಿಡಬೇಕು.
 • ವನ್ಯಜೀವಿ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಲೋಪದೋಷಗಳನ್ನು ಸರಿಪಡಿಸಬೇಕು.
 • ಆನೆ ದಂತ ಕಳವು ತಪ್ಪಿಸಲು ಉತ್ಸಾಹಿ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಬೇಕು. ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಿ ವನ್ಯಜೀವಿ ವಿರೋಧಿ ಅಪರಾಧ ಪತ್ತೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಮತ್ತು ಅಂತಾರಾಷ್ಟ್ರೀಯ ದಂತ ಮಾರುಕಟ್ಟೆಗಳನ್ನು ಮುಚ್ಚಬೇಕು.
 • ಸೆರೆಯಲ್ಲಿರುವ / ಅಧೀನದಲ್ಲಿರುವ ೩೫೦೦ ಆನೆಗಳ ಕಲ್ಯಾಣ ಮಾನದಂಡಗಳನ್ನು ನಿಗದಿಪಡಿಸಬೇಕು. ಮಾವುತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಆನೆಗಳಿಗಾಗಿ ಆಜೀವ ನಿಗಾ ಕೇಂದ್ರಗಳನ್ನು ಸ್ಥಾಪಿಸಬೇಕು.

ಗಜ ಮತ್ತು ಪ್ರಜಾ
ಗಜ ಮತ್ತು ಪ್ರಜಾ – ಇಬ್ಬರೂ ಜೊತೆಜೊತೆಯಾಗಿ ಹೆಜ್ಜೆ ಇಡಬೇಕು ಎಂಬುದು ಈ ಕಾರ್ಯಪಡೆಯ ಒಂದು ಘೋಷವಾಕ್ಯ. ಆನೆಗಳಿಂದ ಪ್ರತಿವರ್ಷ ೪೦೦ ಜನ ಸತ್ತರೆ, ಮನುಷ್ಯರಿಂದ ಪ್ರತಿವರ್ಷ ೧೦೦ ಆನೆಗಳು ಸಾಯುತ್ತವೆ.

ಹೊಸ ಗಜಪ್ರದೇಶಗಳು (ಎಲೆಫಂಟ್ ಲ್ಯಾಂಡ್‌ಸ್ಕೇಪ್‌ಗಳು) ಯಾವುವು?

 1. ಕಾಝಿರಂಗ – ಕಾರ್ಬಿ ಆಂಗ್‌ಲಾಂಗ್ – ಇಂತಾಂಕಿ
 2. ಕಾಮೆಂಗ್ – ಸೋನಿತ್‌ಪುರ್
 3. ಪೂರ್ವ – ಮಧ್ಯ
 4. ಉತ್ತರ – ಪಶ್ಚಿಮ
 5. ಬ್ರಹ್ಮಗಿರಿ – ನೀಲಗಿರಿ – ಪಶ್ಚಿಮ ಘಟ್ಟಗಳು
 6. ನೈಋತ್ಯ ತಟಾಕ
 7. ಉತ್ತರ ಬಂಗಾಳ – ಬೃಹತ್ ಮಾನಸ
 8. ಮೇಘಾಲಯ
 9. ಅಣ್ಣಾಮಲೈ – ನೆಲ್ಲಿಂಪಾಥಿ- ಉನ್ನತ ಶ್ರೇಣಿ
 10. ಪೆರಿಯಾರ್ – ಅಗಸ್ತ್ಯಮಲೈ

ಆನೆ ರಕ್ಷಣೆ, ಗಣಿಗಾರಿಕೆ ಇತ್ಯಾದಿ

೧೯೯೩ರಲ್ಲಿ ೨೫೬೦೪ ಆನೆಗಳಿದ್ದವು; ಆಮೇಲೆ ಈ ಸಂಖ್ಯೆ ೧೯೯೭ರಲ್ಲಿ ೨೫೮೭೭ಕ್ಕೆ ಇಳಿದು, ೨೦೦೨ರಲ್ಲಿ ೨೬೪೧೩ಕ್ಕೆ ಹೆಚ್ಚಿತು; ೨೦೦೭-೦೮ರಲ್ಲಿ ಈ ಸಂಖ್ಯೆ ೨೭೬೯೪ಕ್ಕೆ ಹೆಚ್ಚಿದೆ ಎಂದು ಗಣತಿ ಹೇಳಿದೆ.

ಭಾರತದಲ್ಲಿ ೧೯೮೦ರಿಂದ ೨೦೦೫ರ ಹದಿನೈದು ವರ್ಷಗಳ ಅವಧಿಯಲ್ಲಿ ೯೫ ಸಾವಿರ ಹೆಕ್ಟೇರುಗಳಷ್ಟು ಅರಣ್ಯವನ್ನು ಗಣಿಗಾರಿಕೆಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯನ್ನು ಕಾರ್ಯಪಡೆಯ ವರದಿ ಹೇಳುತ್ತದೆ. ಗಣಿಗಾರಿಕೆಯು ಅರಣ್ಯೇತರ ಚಟುವಟಿಕೆ ಎಂದು ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆ ಹೇಳುತ್ತದೆ. ಆದ್ದರಿಂದ ಹೀಗೆ ಕಾಡನ್ನು ಗಣಿಗಾರಿಕೆಗೆ ಕೊಡುವಾಗ ಪರಿಸರದ ಮೇಲೆ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಇರುವ ಹಲವು ಕಾನೂನು ಪರಿಚ್ಛೇದಗಳನ್ನು ಪಟ್ಟಿ ಮಾಡಿರುವ ಕಾರ್ಯಪಡೆಯು ಕೊನೆಗೆ ಹೇಳಿದ್ದು ಹೀಗೆ:

 • ಗಣಿಗಾರಿಕೆ ಮಾಡುವಾಗ ಪಾರಿಸರಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟಿಲ್ಲ.
 • ಹಲವು ಪ್ರಕರಣಗಳಲ್ಲಿ ಪಾರಿಸರಿಕ ಪರಿಣಾಮ ವರದಿಗಳನ್ನು (ಇಐಎ)ಪ್ರಾಣಿಗಳ ವಲಸೆ ಮತ್ತಿತರ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೆಯೇ ರೂಪಿಸಲಾಗುತ್ತದೆ. ಅಲ್ಲದೆ ಇಐಎ ವರದಿ ತಯಾರಿಸುವ ಸಂಸ್ಥೆಗಳ ಗುಣಮಟ್ಟ, ಪ್ರಾಮಾಣಿಕತೆಯನ್ನು ಅಳೆದು ಪರವಾನಗಿ ನೀಡುವ ವ್ಯವಸ್ಥೆಯೇ ಇಲ್ಲ; ಇಐಎ ವರದಿ ತಯಾರಿಸುವ ಸಂಸ್ಥೆಗಳ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ ಎಂದು ಕಾರ್ಯಪಡೆ ವಿಷಾದಿಸಿದೆ.
  ಇನ್ನುಮುಂದೆ ಆನೆ ಮೀಸಲು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮುನ್ನ ರಾಷ್ಟ್ರೀಯ ಗಜ ಸಂರಕ್ಷಣಾ ಪ್ರಾಧಿಕಾರದ (ಅದನ್ನು ಸ್ಥಾಪಿಸಬೇಕಿದೆ) ಅನುಮತಿ ಕಡ್ಡಾಯ ಮಾಡಬೇಕು.
 • ಈಗಾಗಲೇ ಆನೆ ಮೀಸಲು ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳನ್ನು ಅಭ್ಯಸಿಸಿ ಅಗತ್ಯ ಬಿದ್ದರೆ ಅವುಗಳನ್ನು  ನಿಲ್ಲಿಸಬೇಕು. ಐದು ಹೆಕ್ಟೇರಿಗಿಂತ ಕಡಿಮೆ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿ ಉದ್ಯಮ ನಡೆಸುವುದು ಈಗ ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆಯ ಅಡಿಯಲ್ಲಿ ಬರುತ್ತಿಲ್ಲ. ಆದರೆ ಇದರಿಂದ ಆನೆಗಳ ಮೇಲೆ ದುಷ್ಪರಿಣಾಮವಾಗುತ್ತಿದೆ.

ಶಿಫಾರಸುಗಳಷ್ಟೆ ಸಾಕೆ?

ಈ ಕಾರ್ಯಪಡೆಯು ಹತ್ತು ಹಲವು ಒಳ್ಳೆಯ ಶಿಫಾರಸುಗಳನ್ನೇನೋ ಮಾಡಿದೆ.  ಆದರೆ ಈ ಶಿಫಾರಸುಗಳು ಜಾರಿಯಾದರೆ ಏನೇನಾಗುತ್ತದೆ? ಹುಲಿ ರಕ್ಷಣೆಯು ಒಂದು ದೊಡ್ಡ ಆಂದೋಳನವಾಗಿದ್ದರೂ ಹಲವು ಲೋಪದೋಷಗಳನ್ನು ಹೊಂದಿದೆ ಎಂಬ ಮಾತು ಕೇಳಿ ಬಂದಿದೆ. ಹುಲಿ ರಕ್ಷಣೆಗಾಗಿ ಹಲವು ಅಂತಾರಾಷ್ಟ್ರೀಯ ನಿಧಿ ನೀಡಿಕೆ ಸಂಸ್ಥೆಗಳೇ ಇವೆ. ಆನೆಗಳ ವಿಷಯದಲ್ಲೂ ಇಂಥ ಅನುಮಾನ ಹುಟ್ಟಲೇಕೂಡದು ಅಲ್ಲವೆ? ಆದ್ದರಿಂದ ಜೈರಾಂ ರಮೇಶ್ ಮುಂದೆ ದೊಡ್ಡ ಸವಾಲೇ ಇದೆ. ಆನೆಗಳ ರಕ್ಷಣೆ ಭಾರತ ಸರ್ಕಾರದ ಹೊಣೆ ಮಾತ್ರವಲ್ಲ; ಸಮಾಜದ್ದೂ ಹೌದು.

ಏನೇ ಇರಲಿ, ಇಂಥ ಒಂದು ವರದಿಯನ್ನು ಸಿದ್ಧಪಡಿಸಲು ಮುಂದಾದ ಜೈರಾಂ ರಮೇಶ್‌ಗೆ ಅಭಿನಂದನೆಗಳು. ಅವರು ಇಂಥ ಘನ ಕಾರ್ಯಗಳನ್ನು ಗಜಗಂಭೀರವಾಗಿ ಮುನ್ನಡೆಸಿಕೊಂಡು ಹೋಗಲಿ. ಗಜಮುಖನು ಅವರಿಗೆ ಎಲ್ಲ ಬಗೆಯ ರಕ್ಷಣೆಯನ್ನೂ ನೀಡಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.

ಆಫ್ರಿಕನ್ ಆನೆ ರಕ್ಷಣೆ ಹೇಗಿದೆ?

ಭಾರತದ ಆನೆಯಂತೇ ಆಫ್ರಿಕಾದ ಆನೆಗಳೂ ತುಂಬಾ ಮಹತ್ವದ ಜೀವಿಗಳು (ಮಕ್ಕಳಿಗೆ ಆಫ್ರಿಕಾದ ಆನೆ ಎಂದು ಕಣ್ಣು ಬಿಟ್ಟು ಚಿತ್ರ ತೋರಿಸಿ ಹೇಳಿದರೆ ಅವು ಹೇಗೆ ಭಯ ಬೀಳುತ್ತವೆ ನೋಡಿ!!). ಆಫ್ರಿಕನ್ ವೈಲ್ಡ್‌ಲೈಫ್ ಫೌಂಡೇಶನ್ ಎಂಬ ಸಂಸ್ಥೆಯು ಆಫ್ರಿಕಾದ ವನ್ಯಜೀವಿ ರಕ್ಷಣೆಯ ಕೆಲಸವನ್ನೇ ಮುಖ್ಯವಾಗಿ ಮಾಡುತ್ತಿದೆ. ಈ ಸಂಸ್ಥೆಯ ಇತಿಹಾಸ ಅಷ್ಟಾಗಿ ತಿಳಿಯುವುದಿಲ್ಲವಾದರೂ ಇದಕ್ಕೆ ಹಲವು ಕಾರ್ಪೋರೇಟ್ ಪ್ರಾಯೋಜಕರು ಇದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ಭಾರತದಲ್ಲಿ ಸರ್ಕಾರಗಳು ಖಾಸಗಿ ಭಾಗಿತ್ವಕ್ಕೆ ಅವಕಾಶ ನೀಡಲೂಬಹುದು; ಆದರೆ ಇದೆಲ್ಲ ಕೇವಲ ಬೂಟಾಟಿಕೆಯ, ಪ್ರಚಾರದ ಸಾಧನಗಳಾಗಬಾರದು. ಈ ಬಗ್ಗೆ ಜೈರಾಂ ರಮೇಶ್ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಹೆಚ್ಚುವರಿ ಮಾಹಿತಿಗೆ ಗೂಗಲ್ ಮಾಡೋ ಮೊದಲು ಸಮಯ ಉಳಿಸಲು ಈ ಕೊಂಡಿಗಳನ್ನು ಓದಿ:

 

Leave a Reply

Theme by Anders Norén