ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

A request to mainstream papers

ಮುಖ್ಯವಾಹಿನಿ ಪತ್ರಿಕೆಗಳಿಗೆ ಸವಿನಯ ವಿನಂತಿ !


ಮುಖ್ಯವಾಹಿನಿ ಪತ್ರಿಕೆಗಳಿಗೆ ಸವಿನಯ ವಿನಂತಿ !
ಇತ್ತೀಚೆಗೆ ಗೆಳೆಯನೊಬ್ಬನಿಗೆ ಇಂಗ್ಲಿಶಿನಿಂದ ಮಲಯಾಳಂ ಭಾಷೆಗೆ ಅನುವಾದ ಮಾಡಬೇಕಿದೆ ಎಂದು ಕೇಳಿಕೊಂಡೆ. ಆತ ಹೇಳಿ ಕೇಳಿ ಕೇರಳದಲ್ಲಿ ಹುಟ್ಟಿ ಬೆಳೆದವ. ಕನ್ನಡ, ಇಂಗ್ಲಿಶ್, ಮಲೆಯಾಳಂ ಭಾಷೆಗಳಲ್ಲಿ ಬರೆಯಬಲ್ಲ, ಮಾತನಾಡಬಲ್ಲ, ಓದಬಲ್ಲ. ಆದರೆ ನನ್ನ ಕೋರಿಕೆಯನ್ನು ಆತ ತೀರಾ ಸ್ಪಷ್ಟವಾಗೇ ನಿರಾಕರಿಸಿದ.
`ಇಲ್ಲ. ಈಗ ಮಲಯಾಳಂ ಟಚ್ ಬಿಟ್ಟುಹೋಗಿದೆ. ಅಲ್ಲದೆ ಮಲಯಾಳ ಭಾಷಿಗರು ತುಂಬಾ ಜಾಣರು. ನಾನೇನಾದರೂ ಹಳೆ ಶೈಲಿಯಲ್ಲಿ ಅನುವಾದ ಮಾಡಿದರೆ ಚೆನ್ನಾಗಿ ವಿಚಾರಿಸ್ಕೋತಾರೆ' ಎಂದ.
ನಾನೇನೂ ಇಲ್ಲಿ ಮಲಯಾಳಂ ಭಾಷಿಗರ ಭಾಷಾಪ್ರೇಮವನ್ನು ವಿವರಿಸುವ ಉಸಾಬರಿಗೆ ಹೋಗುತ್ತಿಲ್ಲ.  ಹಾಗೆ ಹೇಳುವುದೂ ಅನಗತ್ಯ.
ಕನ್ನಡದಲ್ಲೀಗ ಮುಖ್ಯವಾಹಿನಿ ಪತ್ರಿಕೆಗಳದ್ದೇ ದೊಡ್ಡ ಸುದ್ದಿ. ಅವುಗಳ ಬೆಲೆ ಸಮರ, ಅವು ನೀಡುವ ಪುರವಣಿಗಳು, ಅವುಗಳಲ್ಲಿ ಇರಬಹುದಾದ ಉದ್ಯೋಗಾವಕಾಶ – ಈ ಬಗ್ಗೆ ಸಾಮಾನ್ಯವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ. ಬೆಂಗಳೂರಿನ ಮಾಧ್ಯಮ ಬಳಗದಲ್ಲಿ ಇದ್ದುಬಿಟ್ಟರಂತೂ ಬರೀ ಇದೇ ಮಾತು.   ಹಾಗಾದರೆ ನಮ್ಮ ಈ ಮುಖ್ಯವಾಹಿನಿ ಪತ್ರಿಕೆಗಳು ಹೇಗೆ ಕನ್ನಡದ ಕೆಲಸವನ್ನು ಮಾಡುತ್ತಿವೆ? ಅವುಗಳು ಈಗ ನಾಡಿಗೆ ನೀಡುತ್ತಿರುವ ಕೊಡುಗೆಯೇನು ಎಂಬ ಪುಟ್ಟ ಚರ್ಚೆಯನ್ನು ಮಾಡಿದರೆ ತಪ್ಪಿಲ್ಲ ತಾನೆ?
ಕನ್ನಡದ ಮುಖ್ಯವಾಹಿನಿ ಪತ್ರಿಕೆಗಳಿಗೆ ಒಂದು ಸ್ಪರ್ಧಾತ್ಮಕ ಮಾರುಕಟ್ಟೆ ಆರಂಭವಾಗಿದ್ದೇ ಎಂಬತ್ತರ ದಶಕದ ಆರಂಭದಲ್ಲಿ ಎನ್ನಬಹುದು. `ಉದಯವಾಣಿ'ಯೇ ಎಲ್ಲೆಲ್ಲೂ ಸಿಗುತ್ತಿದ್ದ ಕರಾವಳಿಯಲ್ಲಿ `ಮುಂಗಾರು' ಆರಂಭವಾದಾಗ ಒಂದು ಬಗೆಯ ಸ್ಪರ್ಧೆ ಕಾಣಿಸಿಕೊಂಡಿತು. ಈ ಸ್ಪರ್ಧೆಯ ವಾತಾವರಣವು `ಹೊಸದಿಗಂತ'ದ ವಿಸ್ತೃತ ಆವೃತ್ತಿಯಿಂದಾಗಿ ಕರಾವಳಿಯಲ್ಲಿ ಇನ್ನಷ್ಟು ಸ್ಫುಟವಾಯಿತು.
`ಪ್ರಜಾವಾಣಿ' ಪತ್ರಿಕೆಯು ತನ್ನ ಉತ್ತರ ಕರ್ನಾಟಕ ಆವೃತ್ತಿಯನ್ನು ಆರಂಭಿಸಿದಾಗ ಈ ಸ್ಪರ್ಧೆಯ ಬಿಸಿ ಇಡೀ ರಾಜ್ಯಕ್ಕೆ ಹಬ್ಬಿತು. ಆಮೇಲೆ ಕೆಲಕಾಲ ತಣ್ಣಗಿದ್ದ ಈ ರಂಗದಲ್ಲಿ ಬಿರುಗಾಳಿ ಎದ್ದಿದ್ದು `ವಿಜಯ ಕರ್ನಾಟಕ'ದಿಂದ. ಎರಡು ವರ್ಷಗಳ ಹಿಂದೆ ಒಂದೂವರೆ ರೂಪಾಯಿ ಸಂಚಿಕೆಯ ಸ್ಪರ್ಧೆ ಶುರುವಾಗಿ ಈಗ, `ಕನ್ನಡಪ್ರಭ'ದ ಒಂದು ರೂಪಾಯಿ ಕೊಡುಗೆಯವರೆಗೆ ಈ ಸ್ಪರ್ಧೆ ಬೆಳೆದು ಬಂದಿದೆ.
ನಮ್ಮ ಮುಖ್ಯ ವಾಹಿನಿ ಪತ್ರಿಕೆಗಳ ಪ್ರಮುಖ ಸ್ವರೂಪ ಇತ್ತೀಚೆಗಿನ ವರ್ಷಗಳವರೆಗೂ ಹೀಗಿತ್ತು: ದಿನವಹಿ ಒಂದು ಮುಖ್ಯಪುಟಗಳ ಕಟ್ಟು ; ಭಾನುವಾರ ಸಾಹಿತ್ಯ – ಸಂಸ್ಕೃತಿ ಕುರಿತ ಸಾಪ್ತಾಹಿಕ ; ಶುಕ್ರವಾರ  ಸಿನಿಮಾ ಪುರವಣಿ. ಈ ಸಿನಿಮಾ ಪುರವಣಿಯೂ ಕೊಂಚ ಹೊಸದೇ.
ಈಗ ? ಮುಖ್ಯವಾಹಿನಿ ಪತ್ರಿಕೆಗಳು ದಿನವೂ ಜಿಲ್ಲಾಶಃ ಸುದ್ದಿಪುಟಗಳನ್ನು ಪ್ರಕಟಿಸುತ್ತವೆ. ಪ್ರತಿದಿನ ಅಲ್ಲದಿದ್ದರೂ ದಿನ ಬಿಟ್ಟು ದಿನ ಪ್ರಾದೇಶಿಕ ಸುದ್ದಿ ಸೊಬಗಿನ ಪುರವಣಿಗಳು ಬರುತ್ತವೆ. ಉಳಿದ ದಿನಗಳಲ್ಲಿ ಫೀಚರ್ ಲೇಖನಗಳನ್ನು ಹೊತ್ತ ಪುರವಣಿಗಳು. ಸಾಮಾನ್ಯವಾಗಿ ಸುದ್ದಿಪುಟದ ರಕ್ಷಾಪುಟಗಳು ಹಾಗೂ ಪುರವಣಿಗಳು ಬಹುವರ್ಣದಲ್ಲಿ ಮುದ್ರಿತವಾಗುತ್ತಿವೆ. 
ನಮ್ಮ ದಿನಪತ್ರಿಕೆಗಳು ನಿಜಕ್ಕೂ ನಾಡಿನ ವಿದ್ಯಮಾನಗಳನ್ನು ಮರುದಿನ ಬೆಳಗ್ಗೆ ಜನರಿಗೆ ತಲುಪಿಸುವಲ್ಲಿ ಸಮರ್ಥವಾಗಿವೆ. ಆದರೆ ಈ ಸಾಮರ್ಥ್ಯವನ್ನು ಇನ್ನಷ್ಟು ಹಿಗ್ಗಿಸಬಹುದಿತ್ತೇನೋ ಎನ್ನುವುದು ನನ್ನ ಈ ದಿನಗಳ ಅನಿಸಿಕೆ. ಈ ಚರ್ಚೆಯನ್ನು ವಿನ್ಯಾಸ, ವಸ್ತುವಿಷಯ, ಹೊಸತನ, ವೈವಿಧ್ಯ – ಈ ಮುಂತಾದ ವಿಭಾಗಗಳಲ್ಲಿ ಚರ್ಚಿಸಬಹುದು.
ಕನ್ನಡದ ದಿನಪತ್ರಿಕೆಗಳು ಈಗ ಹೊಸ ವಿನ್ಯಾಸದಿಂದ ಕಂಗೊಳಿಸುತ್ತಿವೆ ಎನ್ನಬಹುದು. ಈ ಟ್ರೆಂಡ್ ಆರಂಭವಾಗಿದ್ದೇ `ವಿಜಯ ಕರ್ನಾಟಕ'ದಿಂದ. ಈಗ ಕನ್ನಡಪ್ರಭ, ಸೂರ್ಯೋದಯ, ಹೊಸದಿಗಂತ – ಎಲ್ಲವೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಂಡಿವೆ. ಪ್ರಜಾವಾಣಿಯು ತನ್ನ ಮುಖ್ಯಪುಟಗಳ ವಿನ್ಯಾಸವನ್ನು ಹಿಂದಿನಂತೆ ಉಳಿಸಿಕೊಂಡಿದ್ದರೂ ಪುರವಣಿಗಳನ್ನು ಸಾಕಷ್ಟು ಸುಧಾರಿಸಿಕೊಂಡಿದೆ. ಈ ಪತ್ರಿಕೆಯ `ಕರ್ನಾಟಕ ದರ್ಶನ' ಪುರವಣಿಯಂತೂ ನಾಡಿನ ಸಂಸ್ಕೃತಿ, ಬದುಕಿನ ಕನ್ನಡಿ ಎಂದರೆ ತಪ್ಪಿಲ್ಲ. ಬಹುಶಃ ಕನ್ನಡದ ನಂ.೧ ಪುರವಣಿ ಇದು. ಹಿರಿಯ ಫೀಚರ್ ಪತ್ರಕರ್ತ ನಾಗೇಶ ಹೆಗಡೆಯವರಿಗೆ ಈ ಅಭಿನಂದನೆ ಸಲ್ಲುತ್ತದೆ. ಅದೇ ರೀತಿ ಉದಯವಾಣಿಯೂ ತನ್ನ ಪುರವಣಿಗಳನ್ನು (ಈ ಪುರವಣಿಗಳು ಕೇವಲ ಬೆಂಗಳೂರು ಆವೃತ್ತಿಯಲ್ಲಿ ಮಾತ್ರ ಸಿಗುತ್ತವೆ) ಅಚ್ಚುಕಟ್ಟಾಗಿ ಮುದ್ರಿಸುತ್ತಿದೆ.
ಮುಖಪುಟ ವಿನ್ಯಾಸದಲ್ಲೇ ಸುದ್ದಿಗಳ ಅಂದಂದಿನ ಸೊಬಗನ್ನು ಹಿಡಿದಿಡುವ ಕೆಲಸವೂ ಆಗಬೇಕಿದೆ. ಈ ದೃಷ್ಟಿಯಲ್ಲಿ ನೋಡಿದರೆ ನಮ್ಮ ಮುಖ್ಯವಾಹಿನಿ ಪತ್ರಿಕೆಗಳು ಇನ್ನಷ್ಟು ಸಮೃದ್ಧವಾಗಬೇಕಿದೆ. ಪತ್ರಿಕೆಗಳು `ಸ್ಲಿಮ್' ಆಗಿದ್ದರೆ ಚೆಂದ ಎಂಬ ವಾದ ಮುಂದಿಟ್ಟು ಅಗಲ ಕಡಿಮೆಯಾದ ಈ ಮುಖ್ಯವಾಹಿನಿ ಪತ್ರಿಕೆಗಳು ಮುಖಪುಟದಲ್ಲಿ ಹೆಚ್ಚೆಚ್ಚು ಸುದ್ದಿಗಳನ್ನು ಕೊಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿವೆ. ಪ್ರಜಾವಾಣಿ ಮಾತ್ರ ಹಿಂದಿನ ಆಕಾರದಲ್ಲೇ ಇದ್ದರೂ ಸುದ್ದಿಗಳನ್ನು ಅಗತ್ಯಕ್ಕಿಂತ ಕೊಂಚ ಹೆಚ್ಚಾಗಿ ಮುಖಪುಟದಲ್ಲಿ ನೀಡಿ ಸಮೃದ್ಧಿಗೆ ಕೊರತೆ ತಂದುಕೊಂಡಿದೆ.
ಮುಖ್ಯವಾಹಿನಿ ಪತ್ರಿಕೆಗಳ ಈಗಿನ ಮುಖ್ಯ ಸಮಸ್ಯೆ ಸ್ವಂತ ತನಿಖಾ ವರದಿಗಳದ್ದು. ಹ್ಯುಮನ್ ಇಂಟರೆಸ್ಟ್ ಸ್ಟೋರಿಗಳೇನೋ (ಮಾನವೀಯ  ಆಸಕ್ತಿಯ ಸುದ್ದಿಕಥೆಗಳು)  ಸಿಕ್ಕಿಬಿಡುತ್ತವೆ. ಆದರೆ ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುವ ಸುದ್ದಿಗಳ ವಾಸನೆಯನ್ನು ಮೊದಲೇ ಗ್ರಹಿಸುವಲ್ಲಿ ಇವು ಸರಿಸುಮಾರಾಗಿ ಸೋತಿವೆ ಎಂದೇ ಹೇಳಬೇಕಿದೆ. ನನ್ನ ಈ ಮಾತಿಗೆ ಎರಡು ನಿದರ್ಶನಗಳನ್ನು ನೀಡುವೆ:
ಮಧ್ಯಾಹ್ನದ ಬಿಸಿಯೂಟದ ಹಗರಣಗಳು ನಡೆದವಷ್ಟೆ? ಅವೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಸರ್ಕಾರವು ಈ ಯೋಜನೆಯನ್ನು ಆರಂಭಿಸಿದ ಮೇಲೆಯೇ. ಅಲ್ಲಿಯವರೆಗೆ ಯಾವೊಂದು ಪತ್ರಿಕೆಯೂ ಮುಖ್ಯ ವರದಿಯಾಗಿ, ತನಿಖಾ ವರದಿಯಾಗಿ ಈ ಕುರಿತ ಸುದ್ದಿಗಳನ್ನು ಪ್ರಕಟಿಸಿರಲಿಲ್ಲ.
ಇನ್ನೊಂದು ನಿದರ್ಶನ: ಬೆಂಗಳೂರಿಗೆ `ಮೆಟ್ರೋ' ಬಹುರಾಷ್ಟ್ರೀಯ ಕಂಪೆನಿ ಬಂತಲ್ಲ? ಈ ಮಳಿಗೆಗಳು ಆರಂಭವಾದ ಮೇಲೆಯೇ ಪತ್ರಿಕೆಗಳಲ್ಲಿ ಮೆಟ್ರೋ ಕುರಿತು ತನಿಖಾ ವರದಿಗಳು ಬಂದವು. ಅವೂ ಅಷ್ಟೇನೂ ಮಾಹಿತಿಪೂರ್ಣವಾಗಿರಲಿಲ್ಲ. ಕೆಲವು ಪತ್ರಿಕೆಗಳಂತೂ `ಮೆಟ್ರೋ' ನೀಡಿದ ಮಾಹಿತಿಗಳನ್ನೇ ತಮ್ಮ ತನಿಖಾ ವರದಿಯೆಂದು ಪ್ರಕಟಿಸಿದ್ದು ತುಂಬಾ ತಮಾಷೆಯಾಗಿತ್ತು.
ಹೊಸದಿಗಂತವು ಇತ್ತೀಚೆಗೆ ಹುಲಿ ಯೋಜನೆ, ಕೊರಗರ ಅಭಿವೃದ್ಧಿ ಮುಂತಾದ ಸುದ್ದಿಗಳಲ್ಲಿ ಸ್ವಂತ ಮಾಹಿತಿಗಳನ್ನು ಕಲೆಹಾಕಿ ತನಿಖಾ ವರದಿಗಳನ್ನು ಪ್ರಕಟಿಸಿದೆ. ಅಭ್ಯುದಯ ಪತ್ರಿಕೋದ್ಯಮದಲ್ಲಿ ಈ ಬೆಳವಣಿಗೆ ಸ್ವಾಗತಾರ್ಹ. ಅಭ್ಯುದಯದ ಸುದ್ದಿಗಳು ರೋಚಕವಷ್ಟೇ ಅಲ್ಲ, ವಿಧಾಯಕವೂ ಆಗಿರಬಹುದು ಎನ್ನುವುದಕ್ಕೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ `ಶ್ರೀ' ಪಡ್ರೆಯವರ `ಹನಿಗೂಡಿಸೋಣ' ಅಂಕಣವು ನಿದರ್ಶನ.
ಮುಖ್ಯವಾಹಿನಿ ಪತ್ರಿಕೆಗಳಿಗೆ ಈಗ ಎದುರಾಗಿರುವ ಇನ್ನೊಂದು ಸವಾಲು – ಸ್ಪರ್ಧೆಯ ರಭಸದಲ್ಲಿ ಜಿಲ್ಲಾಶಃ ಆವೃತ್ತಿಗಳನ್ನು ತಂದಮೇಲೆಯೂ ಪ್ರಾದೇಶಿಕ ಚಹರೆಯನ್ನು ಪತ್ರಿಕೆಯ ಸುದ್ದಿಪುಟಗಳಲ್ಲಿ ಬಿಂಬಿಸುವುದು ಹೇಗೆ ಎಂಬುದು. ಈಗಿರುವ ಸಾಮಾನ್ಯ ಪದ್ಧತಿಯಲ್ಲಿ ಅತಿಮುಖ್ಯ ಸುದ್ದಿಗಳು ಪತ್ರಿಕೆಯ ಎಲ್ಲಾ ಆವೃತ್ತಿಗಳಲ್ಲಿ ಪ್ರಕಟವಾಗುತ್ತವೆ. ಆದರೆ ಒಂದು ಭಾಗದಲ್ಲಿ ನಡೆಯುವ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ಇನ್ನೊಂದು ಭಾಗದ ಓದುಗರಿಗೆ ಸಿಗುವುದೇ ಇಲ್ಲ. ಪತ್ರಿಕೆಗಳು ಸಾಂಸ್ಕೃತಿಕ ರಾಂiiಭಾರಿಗಳೂ ಹೌದು ಎಂದು ಒಪ್ಪಿಕೊಂಡರೆ, ಈ ಬೆಳವಣಿಗೆ ತೀರಾ ವಿಷಾದನೀಯ. ನಮ್ಮ ನಾಗರಿಕತೆಗೆ ವೇಗ ಸಿಕ್ಕಂತೆಲ್ಲ ನಾವೂ ಹೀಗೆ ಬದಲಾಗುತ್ತ ಹೋಗಬೇಕು ಎಂದು ನಂಬುವುದೇ ತಪ್ಪು ಎನಿಸುತ್ತದೆ. ಅಥವಾ ಆರ್ಥಿಕ ಬೆಳವಣಿಗೆಗಳಿಗೆ ತಕ್ಕಂತೆ ಪತ್ರಿಕೆಯ ಪುಟಗಳಾಗಲೀ, ಓದುಗರ ಖರೀದಿ ಸಾಮರ್ಥ್ಯವಾಗಲೀ ಬೆಳೆದಿಲ್ಲ ಎನ್ನಬಹುದೆ? ಯಾಕೆಂದರೆ ಇಂದು ಯಾವ ಪತ್ರಿಕೆಯೂ ೩೨ ಪುಟಗಳ ಮುಖ್ಯಪತ್ರಿಕೆಯನ್ನು ವಿತರಿಸಿದ ನಿದರ್ಶನ ಇನ್ನೂವರಗೆ ಸಿಕ್ಕಿಲ್ಲ. ಹಾಗೆ ಓದುವವರೂ ಇದ್ದಾರೆಯೆ?
ಇನ್ನು ಪುರವಣಿಗಳ ವಿಷಯಕ್ಕೆ ಬಂದರೆ ಚರ್ಚೆ ನಡೆಸುವುದೇ ದುಸ್ತರವಾಗುತ್ತದೆ! ಯಾಕೆಂದರೆ ನಮ್ಮ ಪುರವಣಿಗಳು ಈಗಲೂ ಅದೇ ಹಳೆಯ ಫಾರ್ಮುಲಾಗಳಿಗೆ ಅಂಟಿಕೊಂಡಿವೆ. ಭಾನುವಾರದ ಮುಖಪುಟಲ್ಲಿ ಒಂದೆರಡು ಫೀಚರ್ ಲೇಖನಗಳು, ಒಳಗೆ ಕಥೆ, ಕವನ, ವಿಮರ್ಶೆ, ಪುಟ್ಟ ಮಕ್ಕಳಿಗೆ, ಮಹಿಳೆಯರಿಗೆ ಪುಟಗಳು – ಇವು ಈಗ ಬರುತ್ತಿರುವ ಸಾಪ್ತಾಹಿಕಗಳ ಸಾಮಾನ್ಯ ಫಾರ್ಮುಲಾ ಆಗಿದೆ. ಈಗಷ್ಟೆ ವಿಜಯ ಕರ್ನಾಟಕವು ಸಾಪ್ತಾಹಿಕದಲ್ಲಿ ಕಥೆ, ಕವನ, ವಿಮರ್ಶೆಗಳ ವಿಭಾಗವನ್ನೇ ಕತ್ತರಿಸಿದೆ.
ಸಾಮಾನ್ಯವಾಗಿ ಮ್ಯಾಗಜಿನ್ ಎಂದೇ ಕರೆಯುವ ಈ ಸಾಪ್ತಾಹಿಕಗಳಲ್ಲಿ ಸಾಮಯಿಕ ಚರ್ಚೆಗಳು ನಡೆಯುವುದೇನೋ ನಿಜ. ಆದರೆ ಸಾಪ್ತಾಹಿಕಗಳೂ ಭಾನುವಾರದ ಪ್ರಮುಖ ಸುದ್ದಿಗಳಾಗಿ ವಿಜೃಂಭಿಸಬಹುದು ಎಂಬ ಅಂಶವನ್ನು ಗಮನಿಸಿಲ್ಲ. ಸಾಮಯಿಕ ವಿಷಯಗಳನ್ನು ಬರೆಯುವಾಗ ಹೆಚ್ಚಾಗಿ ಈಗಾಗಲೇ ಪ್ರಕಟವಾಗಿರುವ ಮಾಹಿತಿಗಳ ಆಧಾರದಲ್ಲೇ ತಾರ್ಕಿಕ ಚರ್ಚೆಗಳು ನಡೆಯುವುದು ಹೆಚ್ಚು. ಇವುಗಳು ಆಸಕ್ತಿ ಮೂಡಿಸುವುದು ಕಷ್ಟ. ಬದಲಿಗೆ ಹೊಸ ವಿಷಯಗಳನ್ನು, ಮಾಹಿತಿಗಳನ್ನು ಹುಡುಕಿ ತೆಗೆದು, ಮಥಿಸುವ ಕೆಲಸ ನಡೆದರೆ ಎಷ್ಟು ಚೆನ್ನು ಅನಿಸುತ್ತದೆ. ಅದಿಲ್ಲದೆ ಹೋದರೆ ಈ ಮ್ಯಾಗಜಿನ್‌ಗಳಲ್ಲಿ ಸಾಮಾನ್ಯವಾಗಿ ಕಾಣುವ ಸಂಗತಿಗಳು ಇವು: ವ್ಯಕ್ತಿ ಪರಿಚಯ, ಸಂದರ್ಶನ, ಫೋಟೋ ಫೀಚರ್, ಹಬ್ಬಗಳ, ಇತರೆ ಸಾಂದರ್ಭಿಕ ಲೇಖನಗಳು.
ಮುಖ್ಯ ವಾಹಿನಿಗಳ ಕೃಷಿಪುರವಣಿಗಳು ಮಾತ್ರ ನಾವೆಲ್ಲರೂ ಅತ್ಯಂತ ಕಟುವಾಗಿ ಖಂಡಿಸಲೇಬೇಕಾದ ಪುರವಣಿಗಳಾಗಿವೆ. ಬೆರಳೆಣಿಕೆಯ ಅಂಕಣಗಳನ್ನು ಬಿಟ್ಟರೆ, ಈ ಪುರವಣಿಗಳಲ್ಲಿ ಪ್ರಕಟವಾಗುವ ಸಾಕಷ್ಟು ಲೇಖನಗಳು ಯಾವುದೇ ಹೆಚ್ಚಿನ ಕಸರತ್ತಿಲ್ಲದೆ ಬರೆದ ಲೇಖನಗಳು. ಇಂಥ ಲೇಖನಗಳಲ್ಲಿ `ಲಾಭದಾಯಕತೆ', `ಹೆಚ್ಚಿನ ಇಳುವರಿ', `ಚಿನ್ನದ ಬೆಳೆ', `ಅಧಿಕ ಫಸಲು' – ಮುಂತಾದ ಪದಗುಚ್ಛಗಳನ್ನು ಬೇಕಾಬಿಟ್ಟಿಯಾಗಿ ಬಳಸುವುದನ್ನು ಕಾಣಬಹುದು. ಕೇರಳದಲ್ಲಿ ಇರುವ ಪತ್ರಿಕೆಗಳಲ್ಲಿ ಕೃಷಿಮಾಹಿತಿಯು ಹೆಚ್ಚು ನಿಖರವಾಗಿರುತ್ತದೆ ಎಂದು ಮಲಯಾಳಂ ಬಲ್ಲ ನನ್ನ ಮಿತ್ರರು ಹೇಳುತ್ತಾರೆ. ನಮ್ಮಲ್ಲಿ ಗಂಭೀರ ಕೃಷಿ ಪತ್ರಿಕಾ ಕೃಷಿಗೆ ಇನ್ನೂ ಮುಖ್ಯವಾಹಿನಿ ಪತ್ರಿಕೆಗಳು ಮನಸ್ಸು ಮಾಡಿಲ್ಲ. `ಅಡಿಕೆ ಪತ್ರಿಕೆ'ಯಂಥ ಪುಟ್ಟ ಮ್ಯಾಗಜಿನ್ ಮಾಡಿರುವ ಕೃಷಿ ಪತ್ರಿಕೋದ್ಯಮದ ಪ್ರಯೋಗವನ್ನು ಮುಖ್ಯವಾಹಿನಿ ಪತ್ರಿಕೆಗಳು ಅನುಸರಿಸಿದರೆ ತಪ್ಪೇನೂ ಇಲ್ಲ.
ಕನ್ನಡದಲ್ಲಿ ಈಗ ಕಂಡು ಬಂದಿರುವ ಹೊಸ ಟ್ರೆಂಡ್ ಎಂದರ ನಗರ ಉದ್ದೇಶಿತ ಪುರವಣಿಗಳು. ನಮ್ಮ ಬೆಂಗಳೂರು, ಬೆಂಗಳೂರು ವಿಜಯ, ಮೆಟ್ರೋ ಹೀಗೆ ಈ ಪಟ್ಟಿ ಬೆಳೆಯುತ್ತದೆ. ರಾಜ್ಯದ ಇತರೆ ಮಹಾನಗರಗಳಿಗೂ ಇಂಥ ಪುರವಣಿಗಳಿವೆ. ಸಾಮಾನ್ಯವಾಗಿ ಈ ಮಹಾನಗರಗಳ ಸುದ್ದಿಗಳನ್ನು ಇಲ್ಲಿ ಪ್ರಕಟಿಸುತ್ತಾರೆ. ಹೆಚ್ಚು ಮಸಾಲೆ ತುಂಬಿಸುವ ಇಲ್ಲಿ ನಡೆದಿದೆ. ಈ ಪುರವಣಿಗಳು ಹೆಚ್ಚು ಹೆಚ್ಚು ಆಕರ್ಷಕವಾಗಿರಬೇಕು ಎಂಬ ಸ್ಪರ್ಧೆಯೂ ನಡೆದಿದೆ. ಸ್ಥಳೀಯ ಜಾಹೀರಾತುಗಳನ್ನು ಪಡೆಯುವಲ್ಲಿ ಈ ಪುರವಣಿಗಳು ನೆರವಾಗಬಹುದು ಎಂಬ ನಂಬಿಕೆ ಈ ಪತ್ರಿಕೆಗಳದ್ದು. ಮೆಟ್ರೋ ಪುರವಣಿಯು (ಪ್ರಜಾವಾಣಿ) ಈ ನಿಟ್ಟಿನಲ್ಲಿ ವಿಶಿಷ್ಟವಾಗಿದೆ. ಇಲ್ಲಿ ನಗರದ ಬದುಕಿನ ಮಗ್ಗುಲುಗಳು ಬಿಚ್ಚಿಕೊಳ್ಳುವ ರೀತಿ ಕುತೂಹಲ ಹುಟ್ಟಿಸುತ್ತದೆ. ಕೆಲವು ಲೇಖನಗಳು ಇಂದಿನ ಅರ್ಬನ್ ಕಲ್ಚರ್‌ನ ಅಪ್ಪಟ ಉದಾಹರಣೆಗಳಾಗಿವೆ. ಕೃಷಿ ಪತ್ರಿಕೋದ್ಯಮದಲ್ಲಿ ಅಡಿಕೆ ಪತ್ರಿಕೆ ಮಾಡುತ್ತಿರುವ ಕೆಲಸವನ್ನು ನಗರಗಳ ಮಟ್ಟಿಗೆ ಮೆಟ್ರೋ ಮಾಡುತ್ತಿದೆ ಎನ್ನಬಹುದು.
ಇಲ್ಲಿ ಒಂದು ಪುಟ್ಟ ಟೀಕೆ ಮಾಡಬೇಕಿದೆ. ಕೆಲವು ಪತ್ರಿಕೆಗಳು ಪುರವಣಿಗಳ ನಿಭಾವಣೆಯ ಹಾದಿಯಲ್ಲಿ ಸೊರಗುತ್ತ ಮೇಜು ಪತ್ರಿಕೋದ್ಯಮಕ್ಕೆ ಅಂಟಿಕೊಂಡಿವೆ. ಅಂದರೆ ಫ್ಯಾನಿನ ಕೆಳಗೆಕೂತು, ಮೇಜಿನ ಮೇಲೆ ಹಾಸಿದ ಹಾಳೆಗಳ ಮೇಲೆ ಕಲ್ಪನೆಗಳನ್ನು ಹಾರಿಬಿಡುವುದು. ಹಾಗೇ ಹಾಗೇ ಯೋಚಿಸುತ್ತ, ಹೀಗಿರಬಹುದು ಎಂದುಕೊಂಡು ಒಂದಷ್ಟನ್ನು ಬರೆಯುವುದು ; ಅಥವಾ ಇವೇ ವಾಸ್ತವ ಎಂಬ ಭ್ರಮೆಯನ್ನು ಹುಟ್ಟಿಸುವುದು. ಬೆಂಗಳೂರು ವಿಜಯ (ವಿಜಯ ಕರ್ನಾಟಕ)ದ ಸಿಂಪ್ಲಿಸಿಟಿ ಪುಟವನ್ನು ಇಲ್ಲಿ ಉದಾಹರಿಸಬಹುದು. ವೃತ್ತಪತ್ರಿಕೆಯ ಕೆಲಸ ಭ್ರಮೆಗಳನ್ನು ಹುಟ್ಟಿಸುವುದಲ್ಲ, ಅಳಿಸುವುದು ಎಂಬುದು ನನ್ನ ವಿನಮ್ರ ಅನಿಸಿಕೆ.
ನಮ್ಮ ಮುಖ್ಯವಾಹಿನಿ ಪತ್ರಿಕೆಗಳಲ್ಲಿ ವಿಜ್ಞಾನ ತಂತ್ರಜ್ಞಾನಕ್ಕೆ ಈಗ ಕೊಂಚ ಜಾಗ ಸಿಗುತ್ತಿದೆ. ಆದರೆ ಈ ಪ್ರಮಾಣದಲ್ಲಿ ಮಾಹಿತಿಗಳನ್ನು ಬಯಸುವವರೂ ಇದ್ದಾರೆಯೆ? ಬಹುಶಃ ಈ ಇಂಟರ್‌ನೆಟ್, ಮಾಹಿತಿ ತಂತ್ರಜ್ಞಾನ, ಆಧುನಿಕ ವಿಜ್ಞಾನ – ಇವೆಲ್ಲ ನಮ್ಮ ನಾಡಿನಲ್ಲಿ ಸಹಜ ಓದಿನ ಸಂಗತಿಗಳಾಗುವುದಕ್ಕೆ ಇನ್ನೂ ಸಾಕಷ್ಟು ಕಾಲ ಹಿಡಿಯಬಹುದು. ಆದರೂ ಈಗ ನೀಡುತ್ತಿರುವ ಸ್ಥಳಾವಕಾಶವನ್ನು ಕೊಂಚ ಹಿಗ್ಗಿಸಲು ಯತ್ನಿಸಿದರೆ ದೋಷವಿಲ್ಲ.
ಇಷ್ಟು ಹೇಳಿದ ಮೇಲೆ ಮುಂದಿನ ದಿನಗಳಲ್ಲಿ ನಾನು ಮುಖ್ಯವಾಹಿನಿ ಪತ್ರಿಕೆಗಳಿಂದ ನಿರೀಕ್ಷೆ ಮಾಡುವುದಾದರೂ ಏನು ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
  ಈ ಮುಖ್ಯವಾಹಿನಿ ಪತ್ರಿಕೆಗಳು ಮುಖ್ಯವಾಗಿ ಬೆಲೆಸಮರದ ಆರ್ಥಿಕ ಲೆಕ್ಕಾಚಾರದ ಜೊತೆಗೇ ಗುಣಮಟ್ಟ ಸಮರದ ಸಾಂಸ್ಕೃತಿಕ ಲೆಕ್ಕಾಚಾರಕ್ಕೂ ಮುಂದಾಗಬೇಕಿದೆ. ಬೆಲೆಸಮರದಲ್ಲಿ ಪತ್ರಿಕೆಗಳ ಆಡಳಿತ ಮಂಡಳಿಗಳಿಗೆ ಹೊಣೆಗಾರಿಕೆ ಇದೆ. ಆದರೆ ಸಾಂಸ್ಕೃತಿಕ ಗುಣಮಟ್ಟವನ್ನು ನಿಭಾಯಿಸುವ ಹೊಣೆ ಯಾರದ್ದು? ಸಂಪಾದಕೀಯ ಮಂಡಳಿಯದು ಎಂದು ಸುಲಭವಾಗಿ ಹೇಳಬಹುದು. ಆದರೆ ಆಡಳಿತ ಮಂಡಳಿಯ ಆರ್ಥಿಕ ಮಾದರಿಗೆ ತಕ್ಕಂತೆ ನಮ್ಮ ಪುಟಗಳನ್ನು  ರೂಪಿಸಬೇಕಿದೆ ಎಂದು ಸಂಪಾದಕೀಯ  ಸಿಬ್ಬಂದಿ ಹೇಳಿದರೆ ಓದುಗರ ಗತಿ?  ಓದುಗರೇ ಇವನ್ನೆಲ್ಲ  (ಹೊಸ ಮಾದರಿ ಪುಟಗಳು) ಇಷ್ಟಪಡುತ್ತಾರೆ ಎಂದು ಹೇಳುವ ಪತ್ರಕರ್ತ ವರ್ಗವೂ ಇದೆ. `ಜನ ಇಂಥ ಸಿನಿಮಾ ಇಷ್ಟ ಪಡುತ್ತಾರೆ ಅದಕ್ಕೇ ಹಾಗೆ ನಿರ್ಮಿಸುತ್ತೇವೆ' ಎಂದು ಸಿನಿಮಾ ನಿರ್ಮಾಪಕರು ಹೇಳುವ ಹಾಗೆ ಪತ್ರಿಕೆಗಳಲ್ಲೂ ಇಂಥ ಪ್ರವೃತ್ತಿ ಬೆಳೆದರೆ ಸಮಾಜದ ಒಟ್ಟಾರೆ ಸ್ವಾಸ್ಥ್ಯವನ್ನು ನೋಡುವರು ಯಾರು? ಸಿನಿಮಾದಿಂದ, ಪತ್ರಿಕೆಯಿಂದ ಜನ ಹಾಳಾಗುವುದು ಸಹಜ. ಆದರೆ ಜನರಿಂದ ಪತ್ರಿಕೆಗಳು ಹಾಳಾಗಬಾರದಲ್ಲ? ಈ ನಿಯಂತ್ರಣ ಸಾಧಿಸಲು ಇರುವ ಮಾಂತ್ರಿಕ ಕೋಲು ಯಾವುದು? ಪತ್ರಿಕೆಗಳು ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡಬೇಕಿದೆ.
  ಮುಖ್ಯವಾಹಿನಿ ಪತ್ರಿಕೆಗಳಲ್ಲಿ ತನಿಖಾವರದಿಗಳ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಬೇಕು. ಬಹುಶಃ ಅವೇ ಈ ಪತ್ರಿಕೆಗಳ ವಿಶಿಷ್ಟ ಮಾರಾಟದ ಸರಕು (ಯೂನಿಖ್ ಸೆಲ್ಲಿಂಗ್ ಪಾಯಿಂಟ್) ಆಗಬಹುದು. ಇದಕ್ಕೆ ಪಕ್ಷಾತೀತವಾಗಿ ಕರ್ತವ್ಯ ನಿಭಾಯಿಸುವ ಅಪಾರ ಕಾರ್ಯಶ್ರದ್ಧೆ ಬೇಕಾಗುತ್ತದೆ. ಇಂದಿನ ರಾಜಕೀಯವು ಎಲ್ಲ ಪತ್ರಕರ್ತರನ್ನು, ಪತ್ರಿಕೆಗಳ ಆಡಳಿತ ಮಂಡಳಿಗಳನ್ನು ವ್ಯಾಪಿಸುವ ಅಪಾಯವೇ ಇರುವಾಗ ಇಂಥ ವೃತ್ತಿಪರ ಪತ್ರಿಕೋದ್ಯಮವನ್ನು ನಿರೀಕ್ಷಿಸುವುದು ತೀರಾ ಅತಿ!
  ಮುಖ್ಯವಾಹಿನಿ ಪತ್ರಿಕೆಗಳ ಪತ್ರಿಕಾ ಸಿಬ್ಬಂದಿಗಳಿಗೆ ದಿನವೂ ಸುದ್ದಿ ಸಂಗ್ರಹಿಸುವುದೇ ದೊಡ್ಡ ಕೆಲಸವಾಗುತ್ತದೆ. ಈ ಕಾಯಕದಲ್ಲಿ ಅವರ ವೈಯಕ್ತಿಕ eನ, ತಿಳಿವಳಿಕೆ ಹೆಚ್ಚುವ ನಿರೀಕ್ಷೆ ಇಟ್ಟುಕೊಳ್ಳಬಹುದಾದರೂ, ಅವರಿಗೆ ವೈಯಕ್ತಿಕ ಕಲಿಕೆ, ತನಿಖೆ,ಅಧ್ಯಯನ, ಸಾರ್ವಜನಿಕ ಸಂಪರ್ಕ – ಇವಕ್ಕೆಲ್ಲ ಆಡಳಿತ ಮಂಡಳಿಯೇ  ಅವಕಾಶ ಮಾಡಿಕೊಡಬೇಕು. ಅದಿಲ್ಲದೆ ಈ ಪತ್ರಕರ್ತರಿಂದ ಹೆಚ್ಚಿನ ಗುಣಮಟ್ಟವನ್ನಾಗಲೀ, ಆಧುನಿಕ ಸಂಗತಿಗಳ ಹೊಳಹಿನ ಸುದ್ದಿಗಳನ್ನಾಗಲೀ ನಿರೀಕ್ಷಿಸುವಂತಿಲ್ಲ. ಪತ್ರಕರ್ತರಿಗೆ ಕಾನೂನು ರೀತ್ಯಾ ವೇತನ ನೀಡುವಷ್ಟೇ ಮುಖ್ಯ ಹೀಗೆ ಅವರಿಗೆ ಕಾನೂನುಬಾಹಿರವಾಗಿ ಇತರೆ ಅವಕಾಶಗಳನ್ನೂ ಮಾಡಿಕೊಡುವುದು!
  ನಮ್ಮ ಪತ್ರಿಕೆಗಳಲ್ಲಿ ನವಸಾಕ್ಷರರಿಗೆ,ಮಕ್ಕಳಿಗೆ ಮುಖ್ಯಸುದ್ದಿಗಳನ್ನು ತಿಳಿಸುವ ವ್ಯವಸ್ಥೆ ಇಲ್ಲ. ಈ ವ್ಯವಸ್ಥೆಯನ್ನು ನಿಧಾನವಾಗಿಯಾದರೂ ತರುವುದು ಸಾಮಾಜಿಕ ಅಗತ್ಯ.
  ಇವಿಷ್ಟನ್ನು ಈ ಹೊತ್ತಿನ ತುರ್ತು ಎಂದು ಹೇಳಬಹುದಷ್ಟೆ. ಕನ್ನಡಿಗರು ಬಯಸುವ ಯಾವುದೇ ಒಳ್ಳೆ ಸಂಗತಿಗಳನ್ನು, ಪತ್ರಿಕೆಗಳಲ್ಲಿ ಇರುವ ಸಿಬ್ಬಂದಿಗಳು ಹುಡುಕುವ ಒಳ್ಳೆಯ ಐಡಿಯಾಗಳನ್ನು ಪ್ರಕಟಿಸಲು ಮುಖ್ಯವಾಹಿನಿ ಪತ್ರಿಕೆಗಳು ಆರಂಭಿಸಲು ಯಾವುದೇ ಅಡ್ಡಿಯೂ ಇಲ್ಲ.

Leave a Reply

Theme by Anders Norén