ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

A slow Tsunami called civilization

ನಾಗರಿಕತೆಯೆಂಬ ನಿಧಾನ ಸುನಾಮಿ

ಸುನಾಮಿ ಎಂಥ ದುರಂತ ಎಂದು ಈಗಲೂ ನಾವೆಲ್ಲ ನೆನಪಿಸಿಕೊಳ್ಳುತ್ತಿರುತ್ತೇವೆ. ಆದರೆ ಅಂಡಮಾನಿನ ಒಂಗೆ ಬುಡಕಟ್ಟು ಜನರಿಗೆ ಸುನಾಮಿಯ ಅರಿವು ಮುಂಚಿತವಾಗಿಯೇ ಆಗಿತ್ತೆಂದೂ, ಅವರೆಲ್ಲ ಎತ್ತರದ ನೆಲೆಗೆ ಹೋಗಿ ರಕ್ಷಿಸಿಕೊಂಡರೆಂದೂ ನಾವು ಸುದ್ದಿ ಕೇಳಿದ್ದೇವೆ. ಆದರೆ ಅವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದೂ ನಮಗೆ ಗೊತ್ತಿರಬೇಕು. ಹತ್ತಾರು ಸಾವಿರ ವರ್ಷಗಳಿಂದ ಈ ಬುಡಕಟ್ಟಿನ ಜನ ಇಲ್ಲಿಯೇ ವಾಸವಾಗಿದ್ದರು. ಬ್ರಿಟಿಶರು ಈ ದ್ವೀಪಸಮೂಹವನ್ನು ಆಕ್ರಮಿಸಿಕೊಂಡು ವಸಾಹತು ಸ್ಥಾಪಿಸಿದ ನಂತರ ಕೇಳಬೇಕೆ? ಕಾಯಿಲೆ ಕಸಾಲೆಗಳು ಮುತ್ತಿಕೊಂಡು ಜನ ಸಾಯತೊಡಗಿದರು. ಸೆಂಟಿನೆಲೀಯರು ಮಾತ್ರ ಹೆಚ್ಚಾಗಿ ಬದುಕುಳಿದಿದ್ದಾರೆ. ಗ್ರೇಟ್ ಅಂಡಮಾನೀಸ್ ಜನಸಂಖ್ಯೆ ೫೩ ದಾಟುತ್ತಿಲ್ಲ. ಒಂಗೆ ಜನಸಂಖ್ಯೆ ೧೯೦೦ರಲ್ಲಿ ೬೭೦ ಇದ್ದಿದ್ದು ೧೯೯೧ರಲ್ಲಿ ೭೬ಕ್ಕೆ ಇಳಿದಿತ್ತು. ಇಲ್ಲಿಯೇ ಇರುವ ಜರಾವಾ ಬುಡಕಟ್ಟಿನ ಕಥೆಯೂ ಇಂಥದ್ದೇ.
ಇಂಥ ಹತ್ತಾರು ಕಥೆಗಳನ್ನು ಸರ್ವೈವಲ್ ಇಂಟರ್‌ನ್ಯಾಶನಲ್ ಎಮಬ ಸಂಘಟನೆ ತನ್ನ ಇತ್ತೀಚೆಗಿನ ವರದಿ – “ ಪ್ರೋಗ್ರೆಸ್ ಕೆನ್ ಕಿಲ್" ಯಲ್ಲಿ ಸಚಿತ್ರವಾಗಿ ವರದಿ ಮಾಡಿದೆ. ಈ ವರದಿಯನ್ನು ನೀವು ಯಾವುದೋ ಹಿಡನ್ ಅಜೆಂಡಾ ಎಂದು ಅಕಸ್ಮಾತ್ ಪರಿಗಣಿಸಿದರೂ ಪರವಾಗಿಲ್ಲ; ಒಮ್ಮೆ ಓದಿ. ಈ ವರದಿಯ ಕೆಲವು ಆರಿಸಿದ ಮಾಹಿತಿಗಳು ಇಲ್ಲಿವೆ:
ಆಸ್ಟ್ರೇಲಿಯಾದಲ್ಲಿ ಅಲ್ಲಿನ `ನಾಗರಿಕ'ರಿಗಿಂತ ಮೂಲನಿವಾಸಿಗಳಲ್ಲಿ ಮಧುಮೇಹದಿಂದ ಸಾಯುವ ಸಾಧ್ಯತೆ ೨೨ ಪಟ್ಟು ಹೆಚ್ಚು.
ನ್ಯೂಝೀಲ್ಯಾಂಡಿನಲ್ಲಿ ಮಾವೋರಿ ನಿವಾಸಿಗಳು ತಮ್ಮ ನೆರೆಹೊರೆಯವರಿಗಿಂತ ಸರಾಸರಿ ೯-೧೦ ವರ್ಷ ಮುಂಚಿತವಾಗಿಯೇ ಸಾಯುತ್ತಾರೆ. ಆದರೆ ಮೂಲಸ್ಥಾನದಲ್ಲಿಯೇ ವಾಸಿಸುತ್ತಿರುವವರು ಉಳಿದವರಿಗಿಂತ ೧೦ ವರ್ಷ ಕಳೆದೇ ಸಾಯುತ್ತಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಹ್ಯೂಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್) ಆಸ್ಟ್ರೇಲಿಯಾಗೆ ಪ್ರಥಮ ಸ್ಥಾನವಿದೆ. ಆದರೆ ಅಲ್ಲಿನ ಮೂಲನಿವಾಸಿಗಳು ನಾಗರಿಕರಿಗಿಂತ ೮ ಪಟ್ಟು ಹೆಚ್ಚು ಪ್ರಮಾಣದಲ್ಲಿ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಆರು ಪಟ್ಟು ಹೆಚ್ಚು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ. ೨೩ ಪಟ್ಟು ಹೆಚ್ಚು ಪ್ರಮಾಣದಲ್ಲಿ ಮೂತ್ರಪಿಂಡ ಸಮಸ್ಯೆಯನ್ನು ಅನುಭವಿಸುತ್ತಾರೆ.
ಅಂಡಮಾನಿನಲ್ಲಿ ಹುಟ್ಟುವ ೧೫೦ ಮೂಲನಿವಾಸಿ ಮಕ್ಕಳಲ್ಲಿ ಇಬ್ಬರು ಉಳಿದುಕೊಂಡರೆ ಹೆಚ್ಚು.
ದಕ್ಷಿಣ ಅಮೆರಿಕಾದ ಬೇಟೆಗಾರ ಮೂಲನಿವಾಸಿಗಳ ಆಹಾರದಲ್ಲಿ ಪಿಷ್ಟ, ನಾರು, ಜೀವಸತ್ವ, ಖನಿಜ ಪದಾರ್ಥಗಳು ಹೆಚ್ಚಾಗಿರುತ್ತವೆ. ಇದೀಗ ಪರಿಸರ ಮಾಲಿನ್ಯದಿಂದ ಇಂಥ ಪೌಷ್ಟಿಕ ಆಹಾರಕ್ಕೆ ಧಕ್ಕೆ ಒದಗಿದೆ.
ಬಹುಬಗೆಯ ಮೆಕ್ಕೆಜೋಳವನ್ನು ಬೆಳೆಯುತ್ತಿದ್ದ ಬ್ರೆಝಿಲಿನ ಕ್ರಾಹೋ ಮೂಲನಿವಾಸಿಗಳು ಈಗ ಜೋಳವನ್ನೇ ಬಹುತೇಕ ಮರೆತಿದ್ದಾರೆ.
ಕೆನಡಾದ ಇನ್ನು ಮೂಲನಿವಾಸಿಗಳು ತಮ್ಮ ಬದುಕಿಗಾಗಿ ಸದಾ ಪ್ರಯಾಣಿಸುತ್ತಲೇ ಇದ್ದವರು. ಅವರೆಲ್ಲ ಇನ್ನುಮುಂದೆ ನಿಶ್ಚಿತ ಸ್ಥಳದಲ್ಲೇ ಬದುಕಬೇಕು ಎಂದು ಕೆನಡಾ ಸರ್ಕಾರವು ಆದೇಶಿಸಿದ ಪರಿಣಾಮವಾಗಿ ಅಂಗಡಿ ಆಹಾರಕ್ಕೇ ಮೊರೆ ಹೋಗಬೇಕಾಯಿತು. ಪ್ರತಿವರ್ಷ ಸರಕು ಹೊತ್ತುಕೊಂಡು ಸರಾಸರಿ ೨೦೦೦ ಕಿಲೋಮೀಟರ್ ನಡೆಯುತ್ತಿದ್ದ ಇವರೆಲ್ಲ ವ್ಯಾಯಾಮ ಕಡಿಮೆಯಾಗಿ ಬೊಜ್ಜಿನಿಂದ ಬಳಲುತ್ತಿದ್ದಾರೆ.
ಅರ್ಜೆಂಟೈನಾ ಮತ್ತು ಬ್ರೆಝಿಲ್ ದೇಶಗಳಲ್ಲಿ ಇರುವ ಗುವಾರಾನಿ ಮೂಲನಿವಾಸಿಗಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ೨೦೦೫ರ ಹೊತ್ತಿಗೆ ಇಗುವಾಕು ಪ್ರದೇಶದ ಗುವಾರಾನಿ ನಿವಾಸಿಗಳ ಶೇ. ೬೦ರಷ್ಟು ಮಕ್ಕಳು ಆಹಾರದ ಕೊರತೆಗೆ ತುತ್ತಾಗಿದ್ದರು.
೧೯೮೫ರಿಂದ ೨೦೦೦ದ ಅವಧಿಯಲ್ಲಿ ೩೦೦ಕ್ಕೂ ಹೆಚ್ಚು ಗುವಾರಾನಿ – ಕಾಯಿಯೋವಾ ಮೂಲನಿವಾಸಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಒಂಬತ್ತರ ಹರೆಯದ ಲೂಸಿಯಾನಾ ಓರ್ಟಿಜ್ ಕೂಡಾ ಒಬ್ಬಳು. ಕಾಡಿನ ಕನಸಿನಲ್ಲೇ ಮೈಮರೆತು ಕಾಡಿಲ್ಲದೆ ಬದುಕಲಾಗದೆ ಇವರೆಲ್ಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಕಾಡಿನಲ್ಲಿ ಅಲೆದಾಡಿ, ಅಲ್ಲಿರುವ ಹಣ್ಣುಗಳನ್ನು ತಿಂದು, ಜೇನು ಕುಡಿಯುವ ಸವಿನೆನಪಿನಲ್ಲೇ ಈ ಜನ ಸತ್ತುಹೋಗುತ್ತಿದ್ದಾರೆ.
ಪಾಪುವಾ ದ್ವೀಪದಲ್ಲಿ ೨೦೦೪ರ ಹೊತ್ತಿಗೆ ೬೦ ಸಾವಿರ ಜನರಿಗೆ ಏಡ್ಸ್ ರೋಗ ತಗುಲಿತ್ತು.
ಬೋಟ್ಸ್‌ವಾನಾದಲ್ಲಿರುವ ಬುಡಕಟ್ಟು ಜನರಿಗೆ ಏಡ್ಸ್ ಬರುವುದೇ ಇಲ್ಲ ಎಂಬ ಮಾತೂ ಸುಳ್ಳಾಗಿ ಅವರೂ ಈಗ ಈ ರೋಗಕ್ಕೆ ತುತ್ತಾಗಿದ್ದಾರೆ.
ಅಂಡಮಾನಿನಲ್ಲಿ ಹೆದ್ದಾರಿಯೊಂದು ಬಂದು ಮೂಲನಾಡನ್ನೆಲ್ಲ ನಾಶ ಮಾಡಿದೆ. ಈ ರಸ್ತೆಯ ಬಗ್ಗೆಯೇ ಭಾರೀ ಚರ್ಚೆ ನಡೆದದ್ದು ಈಗ ಇತಿಹಾಸ. ಇಂಥ ಅಭಿವೃದ್ಧಿ ಕಾರ್ಯಗಳು ನಮ್ಮ ಮೂಲನಿವಾಸಿಗಳನ್ನು ದರದರ ಎಳೆದು ಹೆದ್ದಾರಿಗೋ, ಭಾರೀ ಸಾಧನ ಸಲಕರಣೆಗಳಿರುವ ಆಸ್ಪತ್ರೆಗೋ, ಸರಕಾರಿ ಕಛೇರಿಗೋ, – ಎಲ್ಲೆಲ್ಲಿಗೋ ತಂದಿವೆ. ನಮ್ಮ ರಾಜ್ಯದ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಇರುವ ಹತ್ತಾರು ಮೂಲನಿವಾಸಿಗಳ ಕುಟುಂಬಗಳು ಇಂದು ಬದಲಾವಣೆಯ ಕವಲುದಾರಿಯಲ್ಲಿ ಕ್ಷಮಿಸಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ. ಪ್ರಗತಿ ಕೊಲ್ಲುತ್ತದೆ ಎಂದು ಸರ್ವೈವಲ್ ಇಂಟರ್‌ನ್ಯಾಶನಲ್‌ನ ವರದಿ ಹೇಳಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ.
ನಾಗರಿಕತೆಯ ಹೆಸರಿನಲ್ಲಿ ಇವರನ್ನೆಲ್ಲ ಬದಲಾವಣೆ – ತಂತ್ರeನ ಮುಂತಾದ ಭೂತಗಾತ್ರದ ಒರೆಸುಯಂತ್ರಗಳಿಂದ ಸಂಪೂರ್ಣ ಒರೆಸಬೇಕೆ? ಪ್ರಜಾಪ್ರಭುತ್ವದ ಹೆಸರಿನಲ್ಲೋ, ಬಂಡವಾಳದ ನೆಪದಲ್ಲೋ ಬಯಲಿಗೆ ತಂದು ಅವರ ಮುಜುಗರವನ್ನು ನೋಡಿ ಮಹಾನ್ ಸಮಾಜಸೇವಕರಂತೆ ಕನಿಕರ ಪಡಬೇಕೆ?
ಅರೆ, ಅವರಿಗೂ ರಸ್ತೆ, ದೀಪ, ಮನೆ, ಔಷಧ ಕೊಟ್ಟರೆ ತಪ್ಪೇನು? ಅವರೂ ಈ ಜಗತ್ತಿನಲ್ಲಿ ಖುಷಿಯಿಂದ ಇರಕೂಡದೆ? – ಈ ಪ್ರಶ್ನೆಯೂ ಸಹಜ.
ಹಣಕಾಸಿನ ವಿಷಯದಲ್ಲಿ ಇಂಥ ಮೂಲನಿವಾಸಿಗಳು ನಮಗಿಂತ ಎಷ್ಟೋಪಟ್ಟು ದುರ್ಬಲರು ಎಂಬುದೇನೋ ನಿಜ. ಆದರೆ ಸುಖದ ವಿಷಯಕ್ಕೆ ಬಂದರೆ ಅವರಿಗಿಂತ ಸುಖಜೀವಿಗಳು ಸಿಗುವುದೇ ಇಲ್ಲ. ಫೋರ್ಬಿಸ್ ಮ್ಯಾಗಜಿನ್ ಪಟ್ಟೀಕರಿಸಿದ ೪೦೦ ಜನ ಅತಿ ಶ್ರೀಮಂತರು ಈಗ ಅನುಭವಿಸುತ್ತಿರುವ ಹಿತ, ಸಮಾಧಾನ, ಸಂತೃಪ್ತಿಯನ್ನೇ ಸಾಂಪ್ರದಾಯಿಕ ಮಾಸಾಯಿ ಮೂಲನಿವಾಸಿಗಳು ಅನುಭವಿಸುತ್ತಿದ್ದಾರೆ ಎಂಬುದನ್ನೂ ಸಮೀಕ್ಷೆಗಳು ಕಂಡುಕೊಂಡಿವೆ. ಸುಖದ ಮೂಲ ಹಣದಲ್ಲಿಲ್ಲ, ನಮ್ಮೊಳಗಿನ ಆನಂದದಲ್ಲಿದೆ ಎಂದು ಈ ಮೂಲನಿವಾಸಿಗಳೂ ನಮಗೆ ತಿಳಿಹೇಳುತ್ತಿದ್ದಾರೆ!
ಮೂಲನಿವಾಸಿಗಳು ಇದ್ದಲ್ಲಿ ಖನಿಜವಿದೆ, ಭಾರೀ ಮರಗಳಿವೆ; ವನ್ಯ ಸಂಪತ್ತಿದೆ…. ಅಂದಮೇಲೆ ಆಕ್ರಮಣಕ್ಕೆ, ಭೂಮಿಯ ಮೇಲೊಂದು ಅತ್ಯಾಚಾರ ಎಸಗಲು ನಾಗರಿಕರಿಗೆ ಎಲ್ಲ ಕಾರಣಗಳೂ ಇವೆ.
ನಮಗೆ ಸುನಾಮಿ ಒಂದು ಭೀಕರ ಸುದ್ದಿ; ಅವರಿಗೆ ಅದು ಜೀವನದ ಒಂದು ಸಹಜ ಅನುಭವ. ಅದಕ್ಕೇ ಅವರು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರೂ ಸುನಾಮಿಗೆ ನಾಶವಾಗಲಿಲ್ಲ. ಅಂದು ನಾವು ಕೋಟಿಗಟ್ಟಳೆ ಸಂಖ್ಯೆಯಲ್ಲಿದ್ದವರು ಕೆಲವೇ ನಿಮಿಷಗಳಲ್ಲಿ ಒಂದಷ್ಟು ಲಕ್ಷ ಜೀವಗಳನ್ನು ಕಳೆದುಕೊಂಡು ದುಃಖಿಸಿದೆವು. ಹಠಾತ್ ಜೀವನಾಶವಾದರೆ ನಾವೆಲ್ಲ ಎಷ್ಟು ರೋದಿಸುತ್ತೇವೆ…. ಎಷ್ಟೆಲ್ಲ ಮೋಂಬತ್ತಿಗಳನ್ನು ಹಚ್ಚಿ ಟಿವಿ ಚಾನೆಲ್‌ಗಳಲ್ಲಿ ಸುದ್ದಿ ಮಾಡುತ್ತೇವೆ.
ನಾಗರಿಕತೆಯೆಂಬ ನಿಧಾನ ಸುನಾಮಿಗೆ ಸಿಲುಕಿ ಶತಮಾನಗಳಿಂದಲೂ ಬದುಕುಳಿದವರಿಗೆ ದೀಪವೂ ಬೇಡ; ಅಭಿವೃದ್ಧಿಯೆಂಬ ಹೊಟ್ಟೆ ಹೊಡೆಯುವ, ಕುತ್ತಿಗೆ ಬಿಗಿಯುವ ಸಂಕಟವೂ ಬೇಡ.
ಸರ್ವೈವಲ್ ಇಂಟರ್‌ನ್ಯಾಶನಲ್ ವರದಿಯನ್ನು ನೀವು ನನ್ನ beಟuಡಿu.googಟeಠಿಚಿges.ಛಿom/miಣಡಿಚಿmಚಿಚಿಜhಥಿಚಿmಚಿ ಈ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

Leave a Reply

Theme by Anders Norén