ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

ಕದಿಯೋಣು ಬಾರಾ, ಕಲಿಯೋಣು ಬಾ !

ಬಹುದಿನಗಳಿಂದ ಬರೆಯಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದ್ದ ವಿಷಯವನ್ನು ಈಗ ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಇಡುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಮೊದಲೇ ಹೇಳಿಬಿಡುತ್ತೇನೆ: ವಾಣಿಜ್ಯದ, ಹಣಕಾಸಿನ ಕಾರಣಕ್ಕಾಗಿ ಕದಿಯುವುದು ಅಪರಾಧ. ಪುಸ್ತಕಗಳನ್ನು, ಸಿನೆಮಾ ಸಿಡಿಗಳನ್ನು ಲೈಬ್ರರಿಗಳಿಂದ ಕದಿಯುವುದು ಅಕ್ಷಮ್ಯ. ಇನ್ನೊಬ್ಬರು ಖರೀದಿಸಿದ್ದನ್ನು ಅವರಿಗೂ ಒಂದು ಪ್ರತಿಯನ್ನು ಬಿಡದೆ ಲಪಟಾಯಿಸುವುದು ತರವಲ್ಲ. ಮುಖ್ಯವಾಗಿ ಕದಿಯುವುದೇ ತಪ್ಪು. ಅಕಸ್ಮಾತ್ ಕದ್ದರೆ ಅದನ್ನು ಆಸಕ್ತರಿಗೆ, ಯೋಗ್ಯರಿಗೆ ಹಂಚಬೇಕು. ಹಂಚಿ ಉಂಡರೆ ಹಸಿವಿಲ್ಲ!

ಆದರೆ ಕಲಿಯಲು ಕದಿಯುವುದಾದರೆ ಕೊಂಚ ರಿಯಾಯ್ತಿ, ನನ್ನ ಅಭಿಮತದಂತೆ, ಇದೆ. ಯಾಕೆಂದರೆ ಒಳ್ಳೆಯ ವಿಷಯಗಳನ್ನು ಕೇಳಿ, ನೋಡಿ, ತಿಳಿದು ಕಲಿಯಬೇಕು. ನೋಡಿ ಕಲಿ, ಮಾಡಿ ತಿಳಿ ಎಂದು ನಮ್ಮ ಪಠ್ಯಪುಸ್ತಕಗಳಲ್ಲಿ ಯಾವಾಗಲೂ ಎಲ್ಲ ಪಾಠಗಳ ಕೊನೆಯಲ್ಲಿಯೂ ಇರುತ್ತಿದ್ದಿಲ್ಲವೆ? ತುಂಬಾ ಒಳ್ಳೆಯ ವಿಷಯವಾಗಿದ್ದರೆ ಅದನ್ನು ಹೇಗಾದರೂ ಮಾಡಿ ಕಲಿಯಬೇಕು. ಸಂಗೀತ ಕಲಿಯಲು ಆಸಕ್ತಿ ಇದ್ದವರು ಎಷ್ಟೋ ಜನ ಕದ್ದು ಮುಚ್ಚಿ ಗುರುಗಳು ಹಾಡುವುದನ್ನು, ಬಾರಿಸುವುದನ್ನು ಕೇಳಿ ಕಲಿತ ಉದಾಹರಣೆಗಳೂ ನಮ್ಮಲ್ಲಿವೆ. ಆದ್ದರಿಂದ ಹಲವು ಷರತ್ತುಗಳಿಗೆ ಒಳಪಟ್ಟು, ಕೇವಲ ರಚನಾತ್ಮಕ ಕಲಿಕೆಗಾಗಿ ಕದಿಯುವುದಕ್ಕೆ ಅಡ್ಡಿಯಿಲ್ಲ.
ಇಷ್ಟೆಲ್ಲ ಸುತ್ತುಬಳಸು ಮಾತಾಡುವುದಕ್ಕೆ ಕಾರಣವಿದೆ. ಈಗಾಗಲೇ ವಿಶ್ವಾದ್ಯಂತ ಲಕ್ಷಗಟ್ಟಳೆ ಜನ ಮಾಡುತ್ತಿರುವ ಈ ನಿರಂತರ ಕಾಯಕವನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಗೊತ್ತಿದ್ದರೆ ಸುಮ್ಮನಿದ್ದುಬಿಡಿ. ಗೊತ್ತಿರೋ ಜೋಕನ್ನೇ ಮತ್ತೆ ಕೇಳಿ ನಗುವ ಹಾಗೆ !
ಇಂಟರ್‌ನೆಟ್ ನಿಮಗೆ ಗೊತ್ತಿರಬಹುದು. ವಿಶ್ವವ್ಯಾಪಿ ಕಂಪ್ಯೂಟರುಗಳ ಜಾಲ. ಜಾಲತಾಣ (ವೆಬ್‌ಸೈಟ್) ಎಂದರೆ ನಿರ್ದಿಷ್ಟ ಕಂಪ್ಯೂಟರುಗಳಲ್ಲಿ ಇರುವ ಮಾಹಿತಿಗಳ ವ್ಯವಸ್ಥಿತ ನಿರೂಪಣೆ. ಹಾಗಂತ ನಿಮ್ಮ ಕಂಪ್ಯೂಟರಿನಲ್ಲಿ ಯಾವುದೋ ಜಾಲತಾಣವನ್ನು ನೋಡಿದ್ದೀರಿ. ಆದರೆ ನೀವು ಬಳಸುತ್ತಿರುವಂಥ ಕಂಪ್ಯೂಟರನ್ನು, ಅದರಲ್ಲಿರೋ ಕಡತವನ್ನು ನೋಡಿದ್ದೀರಾ? ಅಥವಾ ಈ ಪ್ರಶ್ನೆಯನ್ನು ಹೀಗೆ ಕೇಳುತ್ತೇನೆ: ಇಂಟರ್‌ನೆಟ್ ಸಂಪರ್ಕ ಸಾಧಿಸಿದ ಮೇಲೆ ನೀವು ವೆಬ್‌ಸೈಟ್‌ಗಳನ್ನು ನೋಡಬೇಕೆಂದರೆ ಬ್ರೌಸರ್ (ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅಥವಾ ಮೋಝಿಲ್ಲಾ ಅಥವಾ ಒಪೆರಾ ಇತ್ಯಾದಿ) ಬಳಸಬೇಕು; ಹಾಗೆ ಬ್ರೌಸರ್ ಬಳಸದೆಯೇ ವಿಶ್ವದ ಇನ್ನೊಂದು ಮೂಲೆಯ ಕಂಪ್ಯೂಟರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಿದೆ ತಾನೆ?
ಹೀಗೆ ಒಂದು ಕಂಪ್ಯೂಟರಿನಿಂದ ನೇರವಾಗಿ ಇನ್ನೊಂದು ಕಂಪ್ಯೂಟರನ್ನು ಬ್ರೌಸರಿನ ಬಳಕೆಯೇ ಇಲ್ಲದೆ ಸಂಪರ್ಕಿಸುವುದನ್ನು ಪೀರ್ ಟು ಪೀರ್ ಎನ್ನುತ್ತಾರೆ. ಇದನ್ನು ಸಂಕ್ಷಿಪ್ತವಾಗಿ ಪಿ೨ಪಿ ಎಂದು ಕರೆಯುತ್ತಾರೆ. ಈ ಪಿ೨ಪಿಯನ್ನು ವಿಶ್ವದಲ್ಲಿ ಹಲವು ಬಗೆಯ ಕೆಲಸಗಳಿಗೆ ಬಳಸುತ್ತಾರೆ. ಅದರಲ್ಲಿ ನಾನು ಈಗ ಹೇಳಹೊರಟಿರುವುದು ಪುಸ್ತಕ, ಸಿನೆಮಾಗಳನ್ನು ನಮ್ಮ ವೈಯಕ್ತಿಕ ಕಲಿಕೆಗಾಗಿ ಪಡೆಯುವುದು; ಇದನ್ನು ಕದಿಯುವುದು ಎಂದು ಪುಸ್ತಕ/ಸಿನೆಮಾ/ಹಾಡಿನ ಆಲ್ಬಮ್ ಉತ್ಪಾದಿಸಿದ ಸಂಸ್ಥೆ ಕರೆಯುತ್ತದೆ. ಇದಕ್ಕಾಗೇ ಅಮೆರಿಕಾದಲ್ಲಿ ಕಾನೂನು ಸಮರಗಳು ನಡೆದಿವೆ.
ಈ ಪುಸ್ತಕಗಳನ್ನು/ಸಿನೆಮಾಗಳನ್ನು (ಇವುಗಳನ್ನು ಇನ್ನುಮುಂದೆ ಕಲಿಕೆ ಕಡತಗಳು ಎಂದು ಕರೆಯೋಣ) ಹೇಗೆ ಪಡೆಯುವುದು?
ಈ ಕಲಿಕೆ ಕಡತಗಳನ್ನು ಬಿಟ್ ಟೊರೆಂಟ್ ಎಂಬ ವಿಧಾನದಲ್ಲಿ (ವರ್ಡ್, ಎಕ್ಸೆಲ್ ಇದ್ದ ಹಾಗೆ) ಒಂದು ಸಂಕೇತನಾಮ ಕಡತವಾಗಿ ಪರಿವರ್ತಿಸಿರುತ್ತಾರೆ. ಇಂಥ ಕಡತಗಳನ್ನು ಟೊರೆಂಟ್ ಸರ್ಚ್ ವೆಬ್‌ಸೈಟ್‌ಗಳಲ್ಲಿ (ಗೂಗಲ್ ಸರ್ಚ್ ಇದ್ದ ಹಾಗೆ) ಹುಡುಕಬಹುದು.  ಅವುಗಳಲ್ಲಿ ಮುಖ್ಯವಾದವು: ತಿತಿತಿ.ಣoಡಿಡಿeಟಿಣz.ಛಿom ಮತ್ತು ತಿತಿತಿ.miಟಿiಟಿovಚಿ.oಡಿg
ಈ ಬಿಟ್ ಟೊರೆಂಟ್ ಕಡತವನ್ನು ಒಮ್ಮೆ ಪಡೆದ ಮೇಲೆ ಅದನ್ನು ಟೊರೆಂಟ್ ಡೌನ್‌ಲೋಡ್ ಮಾಡುವ (ಅಂದರೆ ಈ ಟೊರೆಂಟ್ ಫೈಲಿನ ಮೂಲ ಕಡತವಾದ ನಮ್ಮ ಆಸಕ್ತಿಯ ಕಲಿಕೆ ಕಡತವನ್ನು ನಮ್ಮ ಕಂಪ್ಯೂಟರಿನೊಳಕ್ಕೆ ಇಳಿಸುವ) ಕೆಲಸವನ್ನು ಮಾಡಲೆಂದೇ ಹತ್ತಾರು ಉಚಿತ ತಂತ್ರಾಂಶಗಳಿವೆ. ಅವುಗಳಲ್ಲಿ ಮುಖ್ಯವಾದುದು: ಮ್ಯೂಟೊರೆಂಟ್  ಎಂಬ ತಂತ್ರಾಂಶ. ಈ ತಂತ್ರಾಂಶವನ್ನು ನೀವು ತಿತಿತಿ.uಣoಡಿಡಿeಟಿಣ.ಛಿom ಈ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಸ್ಥಾಪಿಸಿಕೊಂಡಿರಬೇಕು.
ಈ ತಂತ್ರಾಂಶವನ್ನು ತೆರೆದು ಅದರಲ್ಲಿ ಟೊರೆಂಟ್‌ನ್ನು ಸೇರಿಸು ಎಂಬ ಆದೇಶವನ್ನು ಕ್ಲಿಕ್ ಮಾಡಿ, ಅದರಲ್ಲಿ ನೀವು ಈಗಾಗಲೇ ಡೌನ್‌ಲೋಡ್ ಮಾಡಿದ ಟೊರೆಂಟ್ ಫೈಲನ್ನು ಆಯ್ಕೆ ಮಾಡಿ ಓಕೆ ಎಂದು ಕ್ಲಿಕ್ ಮಾಡಿ.
ನಿಮ್ಮ ಇಂಟರ್‌ನೆಟ್ ಸಂಪರ್ಕ ಶಕ್ತಿಯುತವಾಗಿದ್ದರೆ, ತಕ್ಷಣವೇ ಈ ಕಡತವು ನಿಮ್ಮ ಕಂಪ್ಯೂಟರಿನಲ್ಲಿ ಡೌನ್‌ಲೋಡ್ ಆಗಲು ಶುರುವಾಗುತ್ತದೆ.
ಹಾಗಾದರೆ ಈ ಬಿಟ್ ಟೊರೆಂಟ್ ಫೈಲ್ ಏನು ಮಾಡುತ್ತದೆ? ಕಲಿಕೆ ಕಡತವನ್ನು ಹೇಗೆ ಹುಡುಕುತ್ತದೆ?
ಮೊದಲು ಈ ಕಡತವನ್ನು ಯಾರೋ ಮಹಾನುಭಾವರು ತಮ್ಮ ಗಣಕದಲ್ಲಿ ಹಾಕಿ ಅದನ್ನು ಟೊರೆಂಟ್ ವೆಬ್‌ಸೈಟಿನಲ್ಲಿ ಪ್ರಕಟಿಸಿರುತ್ತಾರೆ. ಒಬ್ಬರಾದ ಮೇಲೆ ಇನ್ನೊಬ್ಬರು ಈ ಕಡತವನ್ನು ತಮ್ಮ ಗಣಕದಲ್ಲಿ ಇಳಿಸುತ್ತ ಹೋಗುತ್ತಾರೆ. ಎಲ್ಲರ ಗಣಕದಲ್ಲೂ ಇದು ಸಂಪೂರ್ಣವಾಗಿ ಇರದೇ ಹೋಗಬಹುದು. ಆಗ ಈ ಬಿಟ್ ಟೊರೆಂಟ್ ಡೌನ್‌ಲೋಡ್ ಮಾಡುವ ಮ್ಯೂ ಟೊರೆಂಟ್ ತಂತ್ರಾಂಶವು ಎಲ್ಲೆಲ್ಲಿ ಈ ಕಲಿಕೆ ಕಡತದ ತುಣುಕುಗಳು ಇವೆ ಎಂದು ಹುಡುಕುತ್ತದೆ. ಚೂರುಪಾರು ಸೇರಿಸಿ ನಮ್ಮ ಗಣಕದಲ್ಲಿ ಒಂದು ಸಂಪೂರ್ಣ ಕಡತವನ್ನು ಜೋಡಿಸಿಕೊಡುತ್ತದೆ. (ನಿಮಗಾಗಿ ಸರಳೀಕೃತ ವಿವರಣೆ ಇದು).
ಇದಕ್ಕೆ ಇನ್ನೊಂದು ಮುಖ್ಯ ಕಾರಣವಿದೆ. ಕಲಿಕೆ ಕಡತ ಇರುವ ಗಣಕಗಳನ್ನು ಅದರ ಬಳಕೆದಾರರು ಆಫ್ ಮಾಡಿರಬಹುದು. ಆಗ ಡೌನ್‌ಲೋಡ್ ಆಗುವುದಿಲ್ಲ. ಅದಕ್ಕಾಗೇ ಮ್ಯೂಟೊರೆಂಟ್ ಇನ್ನೊಂದು ಬಳಕೆಯಲ್ಲಿರುವ ಗಣಕವನ್ನು ಹುಡುಕುತ್ತದೆ. ಈ ಕೆಲಸ ನಿರಂತರವಾಗಿ ನಡೆಯುವುದನ್ನು ನೀವು ತಂತ್ರಾಂಶದಲ್ಲೇ ಕಾಣಬಹುದು.
ಆದರೆ ಈ ಬಳಕೆ ಮಾಡುವಾಗ ಕೆಲವು ಎಚ್ಚರಿಕೆಗಳನ್ನು ನೀವು ಕಟ್ಟುನಿಟ್ಟಾಗಿ ಪಾಲಿಸಬೇಕು:
ಮಕ್ಕಳಿಗೆ ನೇರವಾಗಿ ಇಂಥ ತಂತ್ರಾಂಶಗಳನ್ನು ಬಳಸಲು ಬಿಡಬಾರದು. ಯಾಕೆಂದರೆ ವಾಸ್ತವ ಜಗತ್ತಿನ ಹಾಗೆಯೇ ಈ ಕಂಪ್ಯೂಟರ್ ಜಗತ್ತಿನಲ್ಲೂ ಕೆಟ್ಟ ಸಂಗತಿಗಳು ಇರುತ್ತವೆ.  ಈ ಬಗ್ಗೆ ಪಾಲಕರು, ಹಿರಿಯರು ಎಚ್ಚರಿಕೆ ವಹಿಸಬೇಕು. ಅದಕ್ಕೇ ನಾನು ಪದೇ ಪದೇ ಹೇಳುತ್ತೇನೆ: ಕಂಪ್ಯೂಟರನ್ನು, ಮುಖ್ಯವಾಗಿ ಮಾನಿಟರನ್ನು ಮನೆಯಲ್ಲಿ ಎಲ್ಲರಿಗೂ ಕಾಣುವ ಹಾಗೆ ಇಡಿ. ಮನೆಯ ಕಂಪ್ಯೂಟರಿನಲ್ಲಿ ಪ್ರೈವಸಿ, ಸೀಕ್ರೆಸಿ ಬೇಡ.
ಈ ತಂತ್ರಾಂಶದ ಮೂಲಕ ಬೇಡದ ತಂತ್ರಾಂಶಗಳು, ವೈರಸ್‌ಗಳು ಒಳನುಸುಳುವ ಸಾಧ್ಯತೆ ತುಂಬಾ ಹೆಚ್ಚು. ಆದ್ದರಿಂದ ನಿಮ್ಮ ವೈರಸ್ ನಾಶಕ ತಂತ್ರಾಂಶ ಬಲವಾಗಿ ಇಲ್ಲದಿದ್ದರೆ ಈ ಸಾಹಸಕ್ಕೆ ಕೈ ಹಾಕಬೇಡಿ.
ನಿಮ್ಮ ಗಣಕವು ಆನ್ ಆಗಿದ್ದಾಗ, ನಿಮ್ಮಲ್ಲಿರುವ ಕಲಿಕೆ ಕಡತಗಳನ್ನು ವಿಶ್ವದ ಇನ್ನೊಂದು ಮೂಲೆಯಲ್ಲಿರುವ ಬಳಕೆದಾರನು ಪಡೆಯುತ್ತಿರುತ್ತಾನೆ. ಅದಕ್ಕೂ ನಿಮ್ಮ ಬ್ಯಾಂಡ್‌ವಿಡ್ತ್ ಬಳಕೆಯಾಗುತ್ತದೆ. ಇದನ್ನು ನೀವು ತಡೆಯಲು ಬರುವುದಿಲ್ಲ! ಆದ್ದರಿಂದ ನಿಮ್ಮ ಇಂಟರ್‌ನೆಟ್ ಸಂಪರ್ಕವು ಅನ್‌ಲಿಮಿಟೆಡ್ ಖಾತೆಯದಾಗಿರಬೇಕು. ಅಂದರೆ ನಿಮ್ಮ ಗಣಕದಿಂದ ಮಾಹಿತಿ ತುಣುಕುಗಳು ಹೊರಹೋಗುವುದಕ್ಕೆ ಅಸೀಮ ಅವಕಾಶ ಇರಲೇಬೇಕು. (ಸಾಮಾನ್ಯವಾಗಿ ಒಂದು ಗಿಗಾಬೈಟ್, ೪ ಗಿಗಾಬೈಟ್ ಮಿತಿಯಲ್ಲೇ ನಿಮ್ಮ ಬ್ರಾಡ್‌ಬ್ಯಾಂಡ್ ಸಂಪರ್ಕ ಇರುತ್ತದೆ; ಇದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ತಿಂಗಳಿಗೆ ಸಾವಿರಾರು ರೂ. ಕಕ್ಕಬೇಕಾಗುತ್ತದೆ).
ನಿಮ್ಮ ಗಣಕದ ಎಲ್ಲಾ ಕಡತಗಳೂ ಇಲ್ಲಿ ಹಂಚಿಕೆಯಾಗುವುದಿಲ್ಲ; ಕೇವಲ ಮ್ಯೂಟೊರೆಂಟ್ ತಂತ್ರಾಂಶದ ಮೂಲಕ ನೀವು ನಿರ್ದಿಷ್ಟವಾಗಿ ಗುರುತಿಸಿದ ಫೋಲ್ಡರಿನಲ್ಲಿ ಇರುವ ಕಡತಗಳು ಮಾತ್ರವೇ ಇನ್ನೊಬ್ಬರಿಗೆ ಹಂಚಿಕೆಯಾಗುತ್ತವೆ. ಇದೊಂದು ಸಮಾಧಾನದ ವಿಷಯ.
ಹೀಗೆ ಕಲಿಕೆ ಕಡತಗಳನ್ನು ಇಳಿಸಿಕೊಳ್ಳಲು ನಿಮ್ಮ ಗಣಕದಲ್ಲಿ ಸಾಕಷ್ಟು ಹಾಡ್‌ಡಿಸ್ಕ್ ಸ್ಪೇಸ್ ಇರಬೇಕು. ಉದಾಹರಣೆಗೆ ಒಂದು ಹಾಲಿವುಡ್ ಸಿನೆಮಾ ಪಡೆಯಲು ನಿಮ್ಮಲ್ಲಿ ೭೦೦ ಮೆಗಾಬೈಟ್ ಜಾಗ ಬೇಕಾಗುತ್ತದೆ. ಈ ಕಲಿಕೆ ಕಡತಗಳ ಗಾತ್ರವೂ ನಿಮಗೆ ಮೊದಲೇ ತಿಳಿಯುತ್ತದೆ; ಅದಕ್ಕೆ ತಕ್ಕಂತೆ ನೀವೂ ಹಾಡ್ ಡಿಸ್ಕ್ ಹಾಕಿಕೊಂಡು ತಯಾರಿರಬೇಕು.
ಗಣಕವನ್ನು ಆಫ್ ಮಾಡಿದರೆ ಡೌನ್‌ಲೋಡ್ ಸ್ಥಗಿತಗೊಳ್ಳುತ್ತದೆ. ಶುರು ಮಾಡಿದರೆ ಮತ್ತೆ ಆರಂಭವಾಗುತ್ತದೆ. ಕೆಲವೊಮ್ಮೆ ಹಳೆಯ, ಅಪರೂಪದ ಕಡತಗಳನ್ನು ಪಡೆಯಲು ದಿನಗಟ್ಟಳೆ ಬೇಕಾಗುತ್ತದೆ. ಸಹನೆ ಮುಖ್ಯ.
ಹೊಸ ಕಡತಗಳನ್ನು, (ಹೊಸ ಸಿನೆಮಾ, ಹೊಸ ಪುಸ್ತಕ, ಹೊಸ ಹಾಡು) ಹೆಚ್ಚು ಜನ ಹುಡುಕುತ್ತ, ಪಡೆಯುತ್ತ ಇರುತ್ತಾರೆ; ಆದ್ದರಿಂದ ಇಂಥ ಕಡತಗಳು ಬಹುಬೇಗ ಸಿಗುತ್ತವೆ; ಸಂಪೂರ್ಣವಾಗಿ ಡೌನ್‌ಲೋಡ್ ಆಗುತ್ತವೆ.
ಪರಿಭಾಷೆ: ಪಿ೨ಪಿಯಲ್ಲಿ ಇನ್ನೊಬ್ಬರಿಂದ ಕಡತ ಪಡೆಯುವವರನ್ನು ಲೀಚ್‌ಗಳು ಎಂದೂ (ರಕ್ತ ಹೀರುವ ಜಿಗಣೆಗಳು), ಕಡತಗಳನ್ನು ನೀಡುವವರನ್ನು ಸೀಡ್‌ಗಳು ಎಂದೂ (ಬೀಜ ಬಿತ್ತುವವರು) ಕರೆಯುತ್ತಾರೆ. ಸೀಡ್‌ಗಳು ಹೆಚ್ಚಿದ್ದಷ್ಟೂ ನಿಮ್ಮ ಕಡತ ಬೇಗ ಸಿಗುತ್ತದೆ.
ಪುಸ್ತಕದ ಅಂಗಡಿಗಳಲ್ಲಿ ಸಿಗದ ವಾಣಿಜ್ಯ, ಶಿಕ್ಷಣ, ಗಣಿತ, ವಿಜ್ಞಾನ ಇತ್ಯಾದಿ ವಿಷಯಗಳ ಮೇಲಿನ ಸಾವಿರಾರು ಉತ್ಕೃಷ್ಟ ಪುಸ್ತಕಗಳು ಪಿಡಿಎಫ್ (ಅಕ್ರೊಬಾಟ್‌ನಲ್ಲಿ ಓದುವಂಥವು), ಹಾಲಿವುಡ್‌ನಲ್ಲಿ ಬಿಡುಗಡೆಯಾಗಿ ಭಾರತದಲ್ಲಿ ಸಿಗದ ಸಿನೆಮಾಗಳು (ವಿವಿಧ ವಿಡಿಯೋ ಫಾರ್ಮಾಟಿನಲ್ಲಿ ನೋಡುವಂಥವು) ಸರಿಯಾಗಿ ಹುಡುಕಿದರೆ ಸಿಗುತ್ತವೆ.
ಪರಮಾಣು ಶಕ್ತಿಯನ್ನು ಒಳ್ಳೆಯದಕ್ಕೂ, ಕೆಡುಕಿಗೂ ಬಳಸುವ ಹಾಗೆ, ಈ ತಂತ್ರಾಂಶಗಳನ್ನೂ ನೀವು ಒಳ್ಳೆಯದಕ್ಕೂ ಬಳಸಬಹುದು; ಕೆಡುಕಿಗೂ ಬಳಸಬಹುದು. ಅದೆಲ್ಲ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನನ್ನ ವಿನಂತಿ ಇಷ್ಟೆ: ನಾನಂತೂ ನನ್ನ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ದಿನಾಲೂ ಬಳಸುತ್ತೇನೆ. ಜಗತ್ತಿನ ಹಲವು ಸಂಸ್ಥೆಗಳು ಇದನ್ನು ಹೇಗೆ ಮನುಕುಲದ ಏಳಿಗೆಗಾಗಿ ಬಳಸುತ್ತಿವೆ ಎಂಬುದನ್ನು ಮುಂದಿನ ಅಂಕಣದಲ್ಲಿ ಬರೆಯುವೆ.
ಪ್ರಶ್ನೆಗಳಿದ್ದರೆ ದಯಮಾಡಿ ಈ ಮೈಲ್ ಮಾಡಿ; ಮುಂದಿನ ಅಂಕಣದಲ್ಲಿ ವಿವರಿಸುತ್ತೇನೆ.

Leave a Reply

Theme by Anders Norén