ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Development and “million dollars” questions

ಅಭಿವೃದ್ಧಿ ಯೋಜನೆಗಳ ಮಿಲಯನ್ ಡಾಲರ್ ಪ್ರಶ್ನೆಗಳು

ಅಭಿವೃದ್ಧಿ ಎಂದ ಕೂಡಲೇ ಯೋಜನೆಗಳ ನೆನಪಾಗಲೇಬೇಕು. ರಾಜ್ಯ ಮಟ್ಟದಲ್ಲಿ, ದೇಶಮಟ್ಟದಲ್ಲಿ, ವಿಶ್ವಮಟ್ಟದಲ್ಲಿ ನೂರಾರು ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಲೇ ಇವೆ. ಈ ಯೋಜನೆಗಳ ಅಗಾಧತೆಯನ್ನು ನಾವು ನೀವು ಸುಮ್ಮನೆ ಕೂತು ಊಹಿಸಲು ಸಾಧ್ಯವೇ ಇಲ್ಲ. ಉದಾಹರಣೆಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವ ಅನ್ಬರಸುರವರು ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯನ್ನು ಸದ್ಯದಲ್ಲೇ ಜಾರಿ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಯೋಜನೆಯ ಮೊತ್ತವೇ ೮೦೦೦ ಕೋಟಿ ರೂಪಾಯಿಗಳು.
ಇಲ್ಲಿ ನೋಡಿ: ದೇಶದಲ್ಲಿ ಹುಲಿ ಸಂರಕ್ಷಣೆ ಕುರಿತು ಸಾಕಷ್ಟು ವರದಿಗಳು ಬಂದಿವೆ. ಹುಲಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಹುಲಿ ಸಂರಕ್ಷಣಾ ಯೋಜನೆಗಳಿಗೆ ನೀಡಿದ ಮೊತ್ತದಲ್ಲೇನೂ ಖೋತಾ ಆಗಿಲ್ಲ. ಈ ಯೋಜನೆಯ ಭಾಗವಾಗಿ ಬಯೋಡೈವರ್ಸಿಟಿ ಕನ್ಸರ್ವೇಶನ್ ಎಂಡ್ ರೂರಲ್ ಲೈಲ್ವಿಹುಡ್ಸ್ ಇಂಪ್ರೂಮೆಂಟ್ಸ್ ಪ್ರಾಜೆಕ್ಟ್ಸ್ ಎಂಬ ಇನ್ನೊಂದು ಯೋಜನೆಗೆ ಇಂಟರ್‌ನ್ಯಾಶನಲ್ ಡೆವೆಲಪ್‌ಮೆಂಟ್ ಅಸೋಸಿಯೇಶನ್‌ನಿಂದ ೨೪ ಮಿಲಿಯ ಅಮೆರಿಕನ್ ಡಾಲರ್ ಹಣ ಬಂದಿದೆ. ಅದಲ್ಲದೆ ಇಂಟರ್‌ನ್ಯಾಶನಲ್ ಬ್ಯಾಂಕ್ ಫಾರ್ ರಿಕನ್‌ಸ್ಟ್ರಕ್ಷನ್ ಎಂಡ್ ಡೆವೆಲಪ್‌ಮೆಂಟ್ (ಐ ಬಿ ಆರ್ ಡಿ) ಮೂಲಕವೂ ಮತ್ತೆ ೨೪ ಮಿಲಿಯ ಡಾಲರ್‌ಗಳಷ್ಟು ಹಣ ಈ ಯೋಜನೆಗೆ ಬಂದಿದೆ. ಈ ಕುರಿತು ಇದೀಗ ಕೆಲಸ ಆರಂಭವಾಗಿದೆಯಂತೆ. ಈ ಸಾಲದ ಮೂಲ ಸಂಸ್ಥೆ ಎಂದಿನಂತೆ ವಿಶ್ವಬ್ಯಾಂಕ್. (ಅದಿರಲಿ, ಹುಲಿಗಣತಿಯ ಬಗ್ಗೆ ಇತ್ತೀಚೆಗೆ ಬಂದ ವರದಿಯಲ್ಲಿ ಎಲ್ಲೂ ನಮ್ಮ ಹುಲಿಗಣತಿ ಪ್ರಖ್ಯಾತಿಯ ಉಲ್ಲಾಸ ಕಾರಂತರ ಹೆಸರು ಕಂಡುಬಂದಿಲ್ಲ!)
ನಮ್ಮ ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಜಲಸಂವರ್ಧನೆ ಯೋಜನೆಯ ಬಗ್ಗೆ ನಿಮಗೆಲ್ಲ ಒಂದಲ್ಲ ಒಂದು ಮಾಹಿತಿ ಗೊತ್ತಿರಲೇಬೇಕು. ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣಾ ಯೋಜನೆಗೆ ೨೦೦೨ರಲ್ಲಿ ವಿಶ್ವಬ್ಯಾಂಕಿನಿಂದ ಒಟ್ಟು ೯೮.೯ ಮಿಲಿಯ ಡಾಲರ್ ಹಣ ಬಂದಿತ್ತು. ಈಗ, ೨೦೦೭ರ ಸೆಪ್ಟೆಂಬರಿನಲ್ಲಿ ಮತ್ತೆ ೬೪ ಮಿಲಿಯ ಡಾಲರ್ ಹಣ ಬಂದಿದೆ ಎಂಬ ಸಂಗತಿ ಮಾತ್ರ ನಮ್ಮ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯಲೇ ಇಲ್ಲ. ಕೇಂದ್ರ ವಿತ್ತ ಸಚಿವ ಚಿದಂಬರಂರವರು ಈ ೬೪ ಮಿಲಿಯ ಡಾಲರ್‌ಗಳೂ ಹೊಸ ಯೋಜನೆಗಾಗಿ ಬಂದ ಹಣ ಎಂಬಂತೆ ದಿಲ್ಲಿಯಲ್ಲಿ ಪ್ರಕಟಿಸಿದ್ದು ಮಾತ್ರ ಒಂದೆರಡು ಇಂಗ್ಲಿಶ್ ಪತ್ರಿಕೆಗಳಲ್ಲಿ ಕೊನೇ ಪ್ಯಾರಾವಾಗಿ ಪ್ರಕಟವಾಗಿದೆ. ೬೪ ಮಿಲಿಯ ಡಾಲರ್ ಎಂದರೆ ಕನಿಷ್ಠ ೨೫೦ ಕೋಟಿ ರೂ. ಎಂದು ಲೆಕ್ಕ ಹಾಕಿದರೆ ಈ ಸುದ್ದಿಲೋಪದ ಮಹತ್ವ ಗೊತ್ತಾದೀತು.
ಹೀಗೆ ವಿಶ್ವಬ್ಯಾಂಕಿನ ಯೋಜನೆಗಳಲ್ಲಿ ಕರ್ನಾಟಕಕ್ಕೆ ಬಂದ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಸಿಗಬೇಕೆಂದರೆ ನೀವು ವಿಶ್ವಬ್ಯಾಂಕಿನ ಜಾಲತಾಣದಲ್ಲಿ ಹಾಖಿರುವ ಸ್ಥಿತಿವರದಿಯ ಪುಸ್ತಕವನ್ನು ಡೌನ್‌ಲೋಡ್ ಮಾಡಿಕೊಂಡು ಅದರ ೨೪೯೭ ಪುಟಗಳಲ್ಲಿ ಹುಡುಕಬೇಕು. ಆಗ ನಿಮಗೆ ಗ್ರಾಮೀಣ ನೀರು ಸರಬರಾಜು ಯೋಜನೆಗೆ ೧೮೦ ಮಿಲಿಯ ಡಾಲರ್, ವಾಟರ್‌ಶೆಡ್ ಅಭಿವೃದ್ಧಿ ಯೋಜನೆಗೆ ೧೧೯ ಮಿಲಿಯ ಡಾಲರ್, ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ೩೬೦ ಮಿಲಿಯ ಡಾಲರ್, ಆರೋಗ್ಯ ವ್ಯವಸ್ಥೆ ಸುಧಾರಣೆಗೆ ೧೪೬ ಮಿಲಿಯ ಡಾಲರ್, ಪಂಚಾಯತಿಗಳ ಬಲವರ್ಧನೆಗೆ ೧೨೪ ಮಿಲಿಯ ಡಾಲರ್, ಮುನಿಸಿಪಲ್ ಸುಧಾರಣೆಗೆ ೨೧೬ ಮಿಲಿಯ ಡಾಲರ್, ನಗರ ನೀರು ವ್ಯವಸ್ಥೆಗಾಗಿ ೩೯ ಮಿಲಿಯ ಡಾಲರ್, – ಹೀಗೆ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ ಎಷ್ಟೆಲ್ಲ ಹಣ ಕೇವಲ ವಿಶ್ವಬ್ಯಾಂಕಿನಿಂದ ಬಂದಿದೆ ಎಂಬ ಮಾಹಿತಿ ಸಿಗುತ್ತದೆ. ಅದನ್ನೇ ಇನ್ನೂ ಕೆದಕಿದರೆ ಈ ಯೋಜನೆಗಳ ಕುರಿತ ಒಪ್ಪಂದಗಳನ್ನು ನೀವು ಓದಬಹುದು; ಸಾಲ ವಾಪಸಾತಿಯ ಕರಾರುಗಳನ್ನು ನೋಡಬಹುದು; ಇನ್ನೂ ಹತ್ತು ಹಲವು ಮಾಹಿತಿಗಳನ್ನು ಪಡೆಯಬಹುದು. ನೀವು ಪತ್ರಕರ್ತರಾಗಿದ್ದರೆ ಇವುಗಳನ್ನೇ ಬಳಸಿಕೊಂಡು ಒಂದು ತನಿಖಾ ವರದಿಯನ್ನೂ ಸಿದ್ಧಪಡಿಸಬಹುದು. ಸರ್ವಸಾಮಾನ್ಯ ಓದುಗರಾಗಿದ್ದರೆ ಓಹೋ, ಇಷ್ಟೆಲ್ಲ ಸ್ಕೀಮುಗಳು ಇವೆಯಾ ಮಾರಾಯ್ರೆ” ಎಂದು ಅಚ್ಚರಿಪಡುತ್ತ ಪುಟ ತಿರುಗಿಸಬಹುದು!
ನಗರ ಎಂದ ಕೂಡಲೇ ನಗರಗಳಲ್ಲಿರುವ ಹಲವು ಸ್ವಯಂಸೇವಾ ಸಂಸ್ಥೆಗಳು ವಿದೇಶಿ ಸಂಸ್ಥೆಗಳಿಂದ ಪಡೆಯುತ್ತಿರುವ ಹಣದ ನೆನಪಾಗುತ್ತಿದೆ. ಫೋರ್ಡ್ ಫೌಂಡೇಶನ್ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಕೆಲವು ವರ್ಷಗಳ ಹಿಂದೆ ಈ ಪ್ರತಿಷ್ಠಾನವು ದೇಶದ ೬೦೦ಕ್ಕೂ ಹೆಚ್ಚು ಸ್ವಯಂಸೇವಾ (?) ಸಂಸ್ಥೆಗಳಿಗೆ ಕೋಟಿಗಟ್ಟಳೆ ಡಾಲರ್ ಗ್ರಾಂಟ್ ನೀಡಿತ್ತು. ಕೊಪ್ಪಳ ಜಿಲ್ಲೆಯಲ್ಲಿ ಏಡ್ಸ್ ಜಾಗೃತಿಗಾಗಿ ಒಂದು ಕೋಟಿ ರೂಪಾಯಿ ನೀಡಿದ್ದೂ ಈ ಸಂಸ್ಥೆಯೇ. ಹಾಗಂತ ಕೊಪ್ಪಳದಲ್ಲಿ ಈ ಬಗ್ಗೆ ಏನಾಯಿತು ಎಂಬ ವರದಿ ನನ್ನಲ್ಲಂತೂ ಇಲ್ಲ !
ನೀವು ಹುಲಿ ಗಣತಿ ಎನ್ನಿ, ನಿರಾಶ್ರಿತರ ಮರುವಸತಿ ಎನ್ನಿ, ದುರ್ಬಲರ ಏಳಿಗೆ ಎನ್ನಿ.॒. ಎಲ್ಲೆಲ್ಲೂ ಜನಪರ ಕಾಳಜಿಯ ಕೆಲಸಗಳಿಗೆ ಹಣ ಹರಿದು ಬರುತ್ತಲೇ ಇದೆ. ಉತ್ತರಕನ್ನಡದ ಪ್ರಖ್ಯಾತ ಪರಿಸರ ಹೋರಾಟಗಾರರೊಬ್ಬರಿಗೆ ಯಾವುದೋ ವಿಷಯಗಳ ಅಧ್ಯಯನಕ್ಕೆ ೨೭ ಲಕ್ಷ ರೂ.ಗಳ ಒಂದು ನಿರ್ದಿಷ್ಟ ನೆರವು ಬಂದಿದ್ದನ್ನು ನಾನು ಕೆಲವು ವರ್ಷಗಳ ಹಿಂದೆ ಉದಯವಾಣಿ’ಯಲ್ಲೇ ಗಮನಕ್ಕೆ ತಂದಿದ್ದೆ. ಅದನ್ನು ಅಲ್ಲಗಳೆದ ಹೇಳಿಕೆ ಇನ್ನೂ ಬಂದಿಲ್ಲ. ಈ ಹಣವನ್ನು ಬಳಸಿ ಏನೆಲ್ಲ ಪರಿಸರ ರಕ್ಷಣಾ ಕಾರ್ಯಗಳನ್ನು ಮಾಡಲಾಯಿತು ಎಂಬ ಬಗ್ಗೆಯೂ ತಿಳಿದುಬಂದಿಲ್ಲ.
ಇಂಥ ಘನಕಾರ್ಯಗಳಿಗೆ ಹಣ ಬರುವುದು ತಪ್ಪೇನಲ್ಲ. ಆದರೆ ಇವೆಲ್ಲವೂ ಖಾಸಗಿ ಹಣ, ಇದರ ಬಗ್ಗೆ ಸಾರ್ವಜನಿಕ ಚರ್ಚೆ ಏಕೆ ಎಂದು ಕೇಳುವವರೂ ಇದ್ದಾರೆ. ಈ ಹಣ ಬರುವುದು ಎಲ್ಲಿಂದಲೋ ಇರಬಹುದು ; ಆದರೆ ಹಣ ಬಂದಿರುವುದೇ ಸಾರ್ವಜನಿಕ ಕೆಲಸಕಾರ್ಯಗಳಿಗೆ; ಜನರಿಗೇ ಗೊತ್ತಿಲ್ಲದೆ ಜನಪರ ಕಾರ್ಯ ಮಾಡಲು ಹಣ ಪಡೆಯುವುದು ಎಷ್ಟು ಸರಿ? ಆದ್ದರಿಂದ ಇಲ್ಲಿ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ಇಡುವ ಬಗ್ಗೆ ಸಂಘಸಂಸ್ಥೆಗಳ ಬದ್ಧತೆಯನ್ನು ಪ್ರಶ್ನಿಸಬೇಕು. ದಕ್ಷಿಣ ಕನ್ನಡದಿಂದ ಹಿಡಿದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೀಗೆ ಹಣ ಪಡೆದು ಸುಮ್ಮನೆ ಅಧ್ಯಯನ ಮಾಡಿ ವರದಿಯನ್ನು ಕಳಿಸುವ ಪರಿಪಾಠವನ್ನು ರೂಢಿಸಿಕೊಂಡಿರುವ ಹಲವು ಸಂಸ್ಥೆಗಳಿವೆ. ಅವುಗಳ ಮೇಲೆ ನಿಗಾ ಇಡಬೇಕು. ವಿಶ್ವಬ್ಯಾಂಕಿನಿಂದ ಬರುವ ಹಣ ಸರ್ಕಾರಲ್ಲಿ ಸದ್ಬಳಕೆ ಆಗುತ್ತಿದೆಯೆ? ಫೌಂಡೇಶನ್‌ಗಳಿಂದ ಬರುವ ಹಣವನ್ನು ಸ್ವಯಂಸೇವಾ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಸೂಕ್ತವಾಗಿ ಬಳಸುತ್ತಿದ್ದಾರೋ, ಕೇವಲ ಹುಸಿವರದಿಗಳನ್ನು ತಯಾರಿಸುತ್ತಿದ್ದಾರೋ? – ಸಾರ್ವಜನಿಕ ಉದ್ದೇಶಗಳಿಗೆ ಬಳಸುವ ಹಣದ ಬಗ್ಗೆ ಪ್ರಶ್ನಿಸುವುದು ನಮ್ಮೆಲ್ಲರ ಹಕ್ಕು.
ಸುಮ್ಮನೆ ಪತ್ರಿಕೆಗಳನ್ನು ಓದುವಾಗೆಲ್ಲ ಈ ನೂರಾರು – ಸಾವಿರಾರು ಕೋಟಿ ಯೋಜನೆಗಳ ಪತ್ರಿಕಾತುಣುಕುಗಳನ್ನು ಕಲೆಹಾಕಿ. ಒಂದೆರಡು ವರ್ಷಗಳ ನಂತರ ಹಿಂದಿರುಗಿ ನೋಡಿ:
ಎಷ್ಟು ಸಲ ಇಂಥ ಯೋಜನೆಗಳ ಬಗ್ಗೆ ನಾಯಕರು ಹೇಳಿಕೆಗಳನ್ನು ಕೊಟ್ಟಿದ್ದಾರೆ, ಎಷ್ಟೆಲ್ಲ ಟನ್ನು ಕಾಗದವನ್ನು ಪತ್ರಿಕೆಗಳು ಈ ಸುದ್ದಿಗಳಿಗಾಗಿ ಖರ್ಚು ಮಾಡಿದವು, ಆಮೇಲೆ ಈ ಯೋಜನೆಯ ಫಲಾನುಭವಿಗಳು ಎಷ್ಟು ಅನುಕೂಲ ಪಡೆದರು, – ಊಹಿಸಿ, ವಿಚಾರಿಸಿ, ಲೆಕ್ಕ ಹಾಕಿ.
ಇವೆಲ್ಲ ನಿಮ್ಮನ್ನು ಬೆಚ್ಚಿಬೀಳಿಸುವ ಸಂಗತಿಗಳು ಎಂದೆನ್ನಿಸಿದರೆ ಸುಮ್ಮನೆ ಇದ್ದುಬಿಡಿ. ಸಮಾಜದ ಬಗ್ಗೆ, ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡಿ.
————-

Leave a Reply

Theme by Anders Norén