ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Gimbel’s Hampi

ಗಿಂಬೆಲ್ ಕಂಡ ಬಾಳು ಹಂಪಿ


ಆತನ ಪುಟ್ಟ ಕಚೇರಿ ಇರೋದು ನ್ಯೂಯಾರ್ಕ್‌ನಲ್ಲಿ ಕಳೆದ ವರ್ಷ ಬಿದ್ದ ವಿಶ್ವ ವ್ಯಾಪಾರ ಕೇಂದ್ರಕ್ಕೆ ೨೫೦ ಮೀಟರುಗಳ ದೂರದಲ್ಲಿ. ಅವನ ಗಂಟಲಿನೊಳಗೆ ತೂರಿದ ಧೂಳು ಇನ್ನೂ ಇದೆ. ಆದರೆ ಅವನ ಕಣ್ಣಿನಲ್ಲಿ, ಹೃದಯದಲ್ಲಿ ಅಚ್ಚೊತ್ತಿರೋದು ಮಾತ್ರ ಹಂಪಿ. ಅದೇ, ಶತಮಾನಗಳ ಹಿಂದೆ ಕಾಲದ ಆಘಾತಕ್ಕೆ ಸಿಲುಕಿ ಉರುಳಿದ ಮಹಾಸಾಮ್ರಾಜ್ಯ ವಿಜಯನಗರ.
ಅದಕ್ಕೇ ಇರಬೇಕು ಕಳೆದ ವರ್ಷದಿಂದ ಎರಡು ಸಲ ಹಂಪಿಯಲ್ಲಿ ಮೊಕ್ಕಾಂ ಹೂಡಿದ್ದಾನೆ ಗಿಂಬೆಲ್. ನಿರಾಶ್ರಿತರ ಹಾಗೆ ಒಂದು ತಟ್ಟಿ ಗುಡಿಸಲಿನಲ್ಲಿ ವಾಸ. ಅಲ್ಲಿರೋದು ಅತ್ಯಾಧುನಿಕ ಕಂಪ್ಯೂಟರುಗಳು.ಚಿತ್ರವಿಚಿತ್ರ ಸಾಧನಗಳು.ಬೋರಾದಾಗ ಓದಲು ಡಾಂಟೆಯ ಫಿಲಾಸಫಿ ಪುಸ್ತಕ. ಜೊತೆಗೆ ಜೆಸಿಕಾ ಗ್ಲಾಸ್ ಎಂಬ ವಿಡಿಯೋಗ್ರಾಫರ್. ಇಬ್ಬರು ಸಹಾಯಕರು.
ನಾನು ಇರೋದು ಅಂದಿನ ಕಾಲದ ವಿಶ್ವದ ಅತಿದೊಡ್ಡ ನಗರದಲ್ಲಿ. ಎಂಥ ಅದ್ಭುತ ನಗರ ಇದು ಎಂದು ಕಣ್ಣರಳಿಸುತ್ತಾನೆ ಗಿಂಬೆಲ್. ಒಂದು ವರ್ಷದಿಂದ ಸಾವಿರಾರು ಡಾಲರ್ ದೇಣಿಗೆ ಸಂಗ್ರಹಿಸಿ ಹಂಪಿಯ ಬಾಳನ್ನು ದಾಖಲಿಸಲು ಹೆಣಗಿದ್ದಾನೆ. ಈ ಎರಡನೆಯ ಪ್ರವಾಸ ಮುಗಿದು ವಾಪಸಾಗೋದು ಯಾವಾಗ ಎಂದು ಗೊತ್ತಿಲ್ಲ. ಅಮೆರಿಕದ ಆರ್ಥಿಕತೆ ಕುಸಿದಿದೆ. ದಾನ ಮಾಡೋರೇ ಇಲ್ಲ. ಮುಖ್ಯ ಅಮೆರಿಕಾದಲ್ಲಿ ಪುರಾತತ್ವ ಇಲಾಖೆಯೇ ಇಲ್ಲ!
ಮೂರು ವರ್ಷಗಳ ಹಿಂದೆ ಗಿಂಬೆಲ್ ಹುಟ್ಟು ಹಾಕಿದ್ದು ಆರ್ಕಿಯೋಸ್ ಎಂಬ ಸರ್ಕಾರೇತರ ಸಂಸ್ಥೆ. ನಾಶವಾಗುತ್ತಿರುವ ವಿಶ್ವದ ಪ್ರಮುಖ ಐತಿಹಾಸಿಕ ನೆಲೆಗಳನ್ನು ಆಧುನಿಕ ಸಾಧನಗಳಿಂದ ಮತ್ತೆ ನಿಖರವಾಗಿ ಗುರುತಿಸುವುದೇ ಗಿಂಬೆಲ್ ಉದ್ದೇಶ. ಮೊದಲು ಸಿರಿಯಾ ಮತ್ತು ಯೆಮೆನ್‌ನಲ್ಲಿ ಈ ಯೋಜನೆಯ ಕೆಲಸ ಆರಂಭವಾಗಿದ್ದೇನೋ ಹೌದು. ಆದರೆ ಸಂಶೋಧನೆಯ ಸ್ವಾತಂತ್ರ ಸಿಗಲಿಲ್ಲ. ಅಷ್ಟುಹೊತ್ತಿಗೆ ಜಾನ್ ಫ್ರಿಜ್ ಎಂಬವರ ಕರೆ. “ನೀವು ಆಧುನಿಕ ಸಾಧನಗಳನ್ನು ಬಳಸೋದು ಹೇಗೆ ತಿಳಿಸ್ತೀರಾ, ನಾನೂ ೨೦ ವರ್ಷಗಳಿಂದ ಅಂಥ ಒಂದು ಐತಿಹಾಸಿಕ ಸ್ಥಳದಲ್ಲಿ ಸಂಶೋಧನೆ ಮಾಡ್ತಾ ಇದೀನಿ'' ಎಂದು ಜಾನ್ ಹೇಳಿದಾಗ ಗಿಂಬೆಲ್‌ಗೆ ಅಚ್ಚರಿ. ಆಗ ಅವನೆದುರಿಗೆ ಅನಾವರಣಗೊಂಡದ್ದು ವಿಜಯನಗರ. ಜಾನ್‌ಗೆ ನೆರವಾಗಲು ಹೋಗಿ ತಾನೇ ಈ ಸಂಶೋಧನೆಯ ನೊಗ ಹೊತ್ತ ಗಿಂಬೆಲ್.
ಮೂಲತಃ ಗಿಂಬೆಲ್ ಓದಿದ್ದು ಸಾಹಿತ್ಯ. ಕೊನೆಗೆ ಶರಣಾದದ್ದು ಪುರಾತತ್ವ ಶಾಸ್ತ್ರಕ್ಕೆ. ಈಗಾತ ಪ್ರಾಚೀನ ಲಿಪಿಗಳ ಕುರಿತು ಡಾಕ್ಟರೇಟ್ ಮಾಡ್ತಾ ಇದ್ದಾನೆ. ಹಂಪಿಯ ಸೆಳೆತದಿಂದ ಅದು ನಿಂತಿದೆ. “ನಾನು ಈಗ ವಾಪಸಾದ್ರೆ ಮೊದಲು ಡಾಕ್ಟರೇಟ್ ಮುಗಿಸಬೇಕು'' ಎನ್ನುವ ಗಿಂಬೆಲ್‌ಗೆ ಹಂಪಿಯನ್ನು ಬಿಡಲು ಮನಸ್ಸಿಲ್ಲ. ಇರಲು ದುಡ್ಡಿಲ್ಲ.
ಉರಿ ಬಿಸಿಲಲ್ಲೂ ನಮ್ಮನ್ನು ತಾನು ಕಂಡ ಹಂಪಿಯ ಅದ್ಭುತಗಳನ್ನು ತೋರಿಸಲು ಗಿಂಬೆಲ್ ನಡೆದದ್ದೇ ಅಂದಿನ ವಿಜಯನಗರದ ಒಂದು ಪ್ರಮುಖ, ಜನನಿಬಿಡ ಬೀದಿ.
“ಬನ್ನಿ, ಈ ಹಾದಿ ತುಂಬಾ ಚಿಕ್ಕದು, ಆದ್ರೆ ಸುತ್ತಮುತ್ತ ನೋಡಿ, ಎಷ್ಟು ಮನೆಗಳಿದ್ವು ಇಲ್ಲ ಗೊತ್ತ? ಆ ಬಾಗಿಲಿನ ಗುರುತು ನೋಡಿ…ಇದೋ, ಇಲ್ಲಿದ್ದದ್ದು ದೊಡ್ಡ ಜಗಲಿ. ಇಲ್ಲಿ ಮೆಟ್ಟಿಲುಗಳು. ಎಡಕ್ಕೆ ನೋಡ್ತಿರೋದೇ ದೊಡ್ಡ ದೇಗುಲ. ಅದರ ಗರ್ಭಗುಡಿಯಲ್ಲಿ ಒಂದು ದೊಡ್ಡ ಕಲ್ಲಿದೆ ಗಮನಿಸಿದ್ರಾ ?''
ನಾರ್ತ್ ರಿಡ್ಜ್ ಎಂದು ಕರೆಯುವ ಗಿರಿಸಾಲನ್ನು ಹತ್ತುತ್ತ, ಇಳಿಯುತ್ತ ಗಿಂಬೆಲ್ ಸೀದಾ ಗತಕಾಲಕ್ಕೆ ಜಾರಿದ್ದ.
“ಈ ರಿಡ್ಜ್ ಎಷ್ಟು ದೂರಕ್ಕೆ ಹಬ್ಬಿದೆ ಎಂದು ಹೇಳಕ್ಕೆ ನನಗಂತೂ ಆಗಲ್ಲ. ನೀವುಬೇಕಾದ್ರೆ ಐದಾರು ಕಿಲೋಮೀಟರು ನಡೆದುಹೋಗಿ'' ಎಂದು ಕೀಟಲೆ ಮಾಡುತ್ತ ಗಿಂಬೆಲ್ ತಲುಪಿದ್ದು ಒಂದು ಇಳಿಜಾರಾದ ಅಂಗಳಕ್ಕೆ. ಅಲ್ಲಿಯೂ ಹೇರಳವಾಗಿ ಗೋಡೆಗೆ ಬಳಸಿದ ಕಲ್ಲುಗಳು ಹರಡಿದ್ದವು. “ಇದು ಗೊತ್ತ, ವಿಜಯನಗರದ ಸುರಕ್ಷತಾ ಅಕಾರಿಯೊಬ್ಬನ ಅರಮನೆ ಎನ್ನಬಹುದು. ಇಲ್ಲಿ ಹೀಗೆ ಒಳಗೆ ಬಂದ್ರೆ ನಿಮಗೆಏನೂ ಕಾಣಲ್ಲ. ಮತ್ತೆ ನೀವು ಒಂದು ಗೋಡೆ ಹಾದು ಎಡಕ್ಕೆ ತಿರುಗಿ ಮತ್ತೆ ಬಲಗಡೆ ತಿರುಗಿ ನಡೀಬೇಕು. ಅಷ್ಟು ಭದ್ರತೆ ಇಲ್ಲಿದೆ. ನೀವೇನಾದ್ರೂ ಅಪಾಯಕಾರಿ ಆಗಿದ್ರೆ ನಿಮ್ಮನ್ನ ಮುಗಿಸಲಿಕ್ಕೆ ಇಲ್ಲಿ ಕಾಣದ ಹಾಗೆ ಒಬ್ಬ ಸೈನಿಕ ಕೂತಿರಬಹುದು ನೋಡಿ'' ಎಂದು ಗಿಂಬೆಲ್ ಅಭಿನಯ ಮಾಡುತ್ತ ಹೋದ.
ಗಿಂಬೆಲ್ ಹೇಳಿದ ಅಕಾರಿ ಪೀಠದ ಸ್ಥಳದಲ್ಲಿ ನಿಂತು ನೋಡಿದರೆ, ಹೌದು ! ಇಡೀ ನಗರದ ಪಕ್ಷಿನೋಟ ಕಾಣುತ್ತದೆ. ಎಲ್ಲಾ ದಿಕ್ಕುಗಳೂ ಗೋಚರ. ಕೆಳಗೆ ಇನ್ನೊಂದು ಗುಡ್ಡಕ್ಕಿಂತ ಮುನ್ನ ಹಾಸಿದ ಹಸಿರು ಬಯಲಿನ ಸೆರಗು. ನಗರದ ನಿಗಾ ವಹಿಸಲು ಆಯಕಟ್ಟಿನ ಸ್ಥಳ.
ಹಂಪಿ ಎಂದರೆ ದೇಗುಲ, ಮಹಾರ್ನವಮಿ ದಿಬ್ಬ, ಪುರಂಧರ ಮಂಟಪ, ಕಮಲ್ ಮಹಲ್ ಮಾತ್ರವಲ್ಲ, ಇಲ್ಲಿ ಉತ್ತರ ಶ್ರೇಣಿಯ ಗುಂಟ ಕಣ್ಣು ಹಾಯುವವರೆಗೆ ಇದ್ದ ದಟ್ಟ ಜನವಸತಿ ತುಂಬಾ ಮುಖ್ಯವಾದ ಇತಿಹಾಸ ಹೇಳುತ್ತದೆ ಎಂದು ಗಿಂಬೆಲ್ ಉಸುರುತ್ತಾನೆ. ಅವನಿಗೆ ದೇಗುಲಗಳಿಗಿಂತ ಜನಸಾಮಾನ್ಯರ ಮನೆಗಳನ್ನು ಗುರುತಿಸೋದೇ ಆದ್ಯತೆಯ ಕೆಲಸ.
ಕಲ್ಲುಗುಡ್ಡಗಳಲ್ಲಿ ತನ್ನ ಸಂಶೋಧನೆಗೆ ಬೇಕಾದ ಗುರುತುಗಳನ್ನು ಮಾಡಿಕೊಂಡಿರುವ ಗಿಂಬೆಲ್‌ಗೆ ಹಂಪಿ ಸ್ವಂತ ಮನೆ ಥರ ತೀರಾ ಪರಿಚಿತ. ಪ್ರತೀ ಕಲ್ಲಿನ ಜೊತೆಗೂ ಅವನ ಸಂವಾದ ನಡೀತಿರುತ್ತೆ. ಇಲ್ಲಿ ಕಲ್ಲುಗಳನ್ನು ಕಡಿಯೋದಕ್ಕೆ ಕಚ್ಚುಗಳನ್ನು ಮಾಡ್ತಾ ಇದ್ರು. ಇಲ್ಲಿ ಇರೋದು ಆನೆಗಳನ್ನು ಕಟ್ಟಲಿಕ್ಕೆ ಮಾಡಿದ ಕಲ್ಲುಗುಣಿಕೆ ಅಲ್ಲ. ಬೇಲಿ ಥರದ ನಿರ್ಮಿತಿಗೆ ಬೇಕಾದ ಹಗ್ಗವನ್ನು ಜಾರಿಸಲಿಕ್ಕೆ ಮಾಡಿದ ಮಾರ್ಗೋಪಾಯ. ಇಂಥ ಹಲವು ವಿವರಗಳನ್ನು ಗಿಂಬೆಲ್ ನೀಡತೊಡಗಿದ.
ಹೀಗೆ ಗಿಂಬೆಲ್ ಕರಾರುವಾಕ್ಕಾಗಿ ಹೇಳಲಿಕ್ಕೆ ಕಾರಣ ಇದೆ. ಅವನು ತನ್ನ ಪುರಾತತ್ವ ಸರ್ವೇಕ್ಷಣೆಗೆ ಬಳಸೋದು ಅತ್ಯಾದುನಿಕ ಆಪಲ್ ಕಂಪ್ಯೂಟರ್. ಅದರಲ್ಲಿರೋದು ಮೂರು ಆಯಾಮಗಳಲ್ಲಿ ( ಉದ್ದ, ಆಳ, ಅಗಲ) ಒಂದು ಚಿತ್ರವನ್ನು ರೂಪಿಸಿ ಬೇಕಾದ ಹಾಗೆ ನೋಡೋ ಸಾಫ್ಟ್‌ವೇರ್. ಇದಕ್ಕೆ ಮಾಹಿತಿ ತುಂಬೋದು ಹ್ಯಾಗೆ ? ಸರಳ. ನೀವು ನೋಡಿರೋ ಸಾಮಾನ್ಯ ಸರ್ವೇಕ್ಷಣಾ ಸಾಧನ ಇದೆಯಲ್ಲ, ಅದಕ್ಕೆ ಸಿಯಾನ್ ಡಾಟಾ ಕಲೆಕ್ಷನ್ ಅನ್ನೋ ಜ್ಯಾಮೆಟ್ರಿ ಬಾಕ್ಸ್ ಅಳತೆಯ ಸಾಧನವನ್ನು ಜೋಡಿಸಿರ್‍ತಾರೆ. ಜೊತೆಗೆ ಟೋಟಲ್ ಸ್ಟೇಶನ್ ಎಂಬ ಸಾಧನ ಕೂಡಾ ಇರುತ್ತೆ. ಸರ್ವೇಕ್ಷಕನ ಸಹಾಯಕ ಒಂದು ನಿರ್ದಿಷ್ಟ ಜಾಗದಲ್ಲಿ ದಿಕ್ಸೂಚಿ ಕೋಲಿನೊಂದಿಗೆ ನಿಲ್ಲುತ್ತಾನೆ. ಅದರಲ್ಲಿ ಇರೋ ಒಂದು ಪಟ್ಟಕವು ಟೋಟಲ್ ಸ್ಟೇಶನ್‌ನಿಂದ ಹೊರಟ ಬೆಳಕನ್ನು ಪ್ರತಿಫಲಿಸಿ ಸೀದಾ ಅದಕ್ಕೇ ಮರಳಿ ತಲುಪಿಸುತ್ತೆ.
ಅಷ್ಟೆ. ಈ ಬೆಳಕಿನ ಯಾತ್ರೆಯ ಮೂಲಕ ಒಟ್ಟಾರೆ ಬಿಂದುವಿನ ದೂರ, ಎತ್ತರ, ಎಲ್ಲ ವಿವರಗಳೂ ಸೀದಾ ಸಿಯಾನ್‌ನ ಪೋಸರ್ವ್ ಎಂಬ ಸಾಫ್ಟ್‌ವೇರ್‌ಗೆ ಹರಿಯುತ್ತೆ. ಹೀಗೆ ದಿನಾ ನೂರಾರು ಬಿಂದುಗಳನ್ನು ಕರಾರುವಾಕ್ಕಾಗಿ ಗುರುತಿಸಬಹುದು. ನಾನಂತೂ ಒಂದು ದಿನ ಒಂದು ಸಾವಿರ ಬಿಂದುಗಳನ್ನು ದಾಖಲಿಸಿದ್ದೇನೆ ಎಂದು ಗಿಂಬೆಲ್ ಬೀಗುತ್ತಾನೆ. ಯಾಕೆಂದರೆ ಆ ಕೆಲಸವನ್ನು ಈಗಿನ ಸಾಧಾರಣ ಸಾಧನಗಳಿಂದ ಮಾಡಲಿಕ್ಕೆ ನೂರಾರು ಗಂಟೆ ಬೇಕು!
ದಿನವಿಡೀ ಹೀಗೆ ಬಿಂದುಗಳನ್ನು ದಾಖಲಿಸಿ ವಾಪಸಾಗಿ ಕಂಪ್ಯೂಟರಿಗೆ ಈ ಸಿಯಾನ್‌ನ್ನು ಜೋಡಿಸಿದರೆ ಸರಿ, ಎಲ್ಲಾ ಮಾಹಿತಿಗಳೂ ಕೂಡಿ ಸದರಿ ಸರ್ವೇಕ್ಷಣೆಯ ಪ್ರದೇಶವೇ ಒಂದು ಚಿತ್ರವಾಗಿ ಮೂಡುತ್ತದೆ ! ಇದು ಮೂರು ಆಯಾಮಗಳನ್ನು ಹೊಂದಿರೋದ್ರಿಂದ ಇದನ್ನು ಕಂಪ್ಯೂಟರಿನ ಮೌಸ್ ಮೂಲಕ ಯಾವ ಕೋನದಲ್ಲಿ ಬೇಕಾದ್ರೂ ನೋಡಬಹುದು.
ಪ್ರಯೋಜನ ಏನು ? ಬರೀ ಬೇಗ ಬೇಗ ಕೆಲಸ ಆಗುತ್ತೆ ಅನ್ನೋದು ಮಾತ್ರವಾ ? ಅಲ್ಲ. ಇಲ್ಲಿ ಪ್ರತೀ ಬಿಂದುವಿನ ಪ್ರಮುಖ ಲಕ್ಷಣಗಳನ್ನೂ ದಾಖಲಿಸಿರ್‍ತಾರೆ. ಹೀಗೆ ಮಾಡ್ತಾ ಮಾಡ್ತಾ ಆ ಪ್ರದೇಶದ ಕಟ್ಟಡ, ಬೀದಿಗಳ ವಿವರಗಳು ದಟ್ಟವಾಗುತ್ತವೆ. ಆಗ ಅಲ್ಲಿನ ಆರ್ಥಿಕ, ಸಾಮಾಜಿಕ ಸನ್ನಿವೇಶಗಳನ್ನು ಇನ್ನಷ್ಟು ನಿಖರವಾಗಿ ಊಹೆ ಮಾಡಲು ಸಾಧ್ಯ. ಯಾಕೆಂದರೆ ಪುರಾತತ್ವ ಶುದ್ಧ ವಿeನವಲ್ಲ. ಅದು ಅರ್ಧ ವಿeನ, ಅರ್ಧ ತರ್ಕದಿಂದ ಕೂಡಿದ್ದು. ಗಿಂಬೆಲ್ ಸೂತ್ರದಲ್ಲಿ ಈ ತರ್ಕಕ್ಕೆ ಇನ್ನಷ್ಟು ವೈeನಿಕ ಬಲ ಬರುತ್ತೆ. ಇತಿಹಾಸವನ್ನು ವೈeನಿಕವಾಗಿ ರಚಿಸಬೇಕು ಅಂದ್ರೆ ಇದೇ. ಒಣತರ್ಕಗಳಲ್ಲ ಎಂದು ಗಿಂಬೆಲ್ ನೆನಪಿಸುತ್ತಾನೆ.
ಉತ್ತರ ಶ್ರೇಣಿಯ ಒಂದು ಭಾಗದ ಸರ್ವೇಕ್ಷಣೆಯನ್ನು ಗಿಂಬೆಲ್ ಮುಗಿಸಿದ್ದಾನೆ. ಕಳೆದ ವರ್ಷವೇ ಗಿಂಬೆಲ್ ತಂಡವು ೪೦,೦೦೦ ಚದರ ಕಿಮೀ ಪ್ರದೇಶದ ಸಮೀಕ್ಷೆ ಮುಗಿಸಿತ್ತು. ೨೦ ವರ್ಷಗಳಿಂದ ಇಲ್ಲಿ ಸಂಶೋಧನೆ ಮಾಡುತ್ತಿದ್ದ ಜಾನ್ ವಿಜಯನಗರ ರಿಸರ್ಚ್ ಪ್ರಾಜೆಕ್ಟ್ ಅಡಿಯಲ್ಲಿ ೩೧ ಸಾವಿರ ಸಾಂಸ್ಕೃತಿಕ ಗುರುತುಗಳನ್ನು ದಾಖಲಿಸಿದ್ದರು. ೫೫೦ ಚದರ ಕಿಮೀ ವ್ಯಾಪ್ತಿಯ ಭವ್ಯ ನಗರವನ್ನು ಸರ್ವೇಕ್ಷಣೆ ಮಾಡುವುದು ಸಾಮಾನ್ಯ ಕೆಲಸವಂತೂ ಅಲ್ಲವಲ್ಲ?
ಮುಂದೆ ? ಗೊತ್ತಿಲ್ಲ. ಇಡೀ ಹಂಪಿಯ ೩ಡಿ (ಮೂರು ಆಯಾಮ) ಸರ್ವೇಕ್ಷಣೆಗೆ ಕನಿಷ್ಠ ಎರಡು ಕೋಟಿ ರೂಪಾಯಿ ಬೇಕು. ಸ್ಥಳೀಯ ನೆರವು ದೊರೆತರೆ? ಹಾಗೆ ನೆರವು ಸಿಗುತ್ತಾ ಎಂದು ಗಿಂಬೆಲ್ ಬೆರಗಿನಿಂದ ನೋಡುತ್ತಾನೆ. ನಾನೇನೂ ಇಂಡಾಲಜಿಸ್ಟ್ ಅಲ್ಲ. ನಾನು ನಾಯಕನೂ ಅಲ್ಲ. ಕೇವಲ ಅನುಕೂಲಕಾರಿ ಅಷ್ಟೆ.ಆದ್ರೆ ಹಂಪೀನ ನಾನಂತೂ ತುಂಬಾ ತುಂಬಾ ಪ್ರೀತಿಸ್ತೀನಿ. ಜಗತ್ತಿನ ಸಂಶೋಧಕರಿಗೆ ಇಂಥ ಸ್ಥಳ ಸಿಗೋದೇ ಇಲ್ಲ. ನಾವು ಬಳಸ್ತಾ ಇರೋ ತಂತ್ರeನಾನ ಭಾರತೀಯರಿಗೆ ಹೇಳಿಕೊಡೋದಕ್ಕೆ ನಾವಂತೂ ತಯಾರು. ಈ ದೇಶದಲ್ಲಿ ೧೦೦ ಕೋಟಿ ಜನ ಇದ್ದಾರೆ. ಯಾವುದು ಮುಖ್ಯ, ಯಾವುದು ಅಮುಖ್ಯ ಅಂತ ಅವರೇ ತಿಳ್ಕೋಬೇಕು ಎನ್ನುತ್ತಾನೆ ಗಿಂಬೆಲ್.
ನಾನು ಸಂಶೋಧನೆ ಮಾಡಿದ ಬೇರೆ ಸ್ಥಳಗಳಲ್ಲಿ ಈಗಿರೋ ಸಂಸ್ಕತೀನೇ ಬೇರೆ. ಆದರೆ ಭಾರತದಲ್ಲಿ ಅದೇ ಸಂಸ್ಕೃತಿಯ ಜನ ಈಗಲೂ ಆಯಾ ಸ್ಥಳಗಳಲ್ಲಿದ್ದಾರೆ. ಹಂಪಿಯ ವಿರೂಪಾಕ್ಷನ್ನ ಈಗಲೂ ಪೂಜಿಸ್ತಾರೆ. ಇದು ಜೀವಂತ ಸಂಸ್ಕೃತಿಯ ಪ್ರತೀಕ.
ಇತಿಹಾಸಕ್ಕೆ ಮುಖ ಮಾಡಿದ ಗಿಂಬೆಲ್ ವರ್ತಮಾನವನ್ನೇನೂ ಮರೆತಿಲ್ಲ. ಭಾರತ ವಿಶ್ವದ ಅತ್ಯಂತ ಪ್ರಜಾತಾಂತ್ರಿಕ ದೇಶ. ಅದಕ್ಕೇ ನನಗೆ ಇಲ್ಲಿ ಮುಕ್ತವಾಗಿ ಸಂಶೋಧನೆ ಮಾಡೋದಕ್ಕೆ ಆಗ್ತಿದೆ. ರಾಜ್ಯ ಸರ್ಕಾರದ ಪುರಾತತ್ವ ಇಲಾಖೆಯವರು ನೆರವಿಗೆ ಬಂದಿದ್ದಾರೆ. ಅಮೆರಿಕಾದಲ್ಲಿ ಇದನ್ನು ನಿರೀಕ್ಷೆ ಮಾಡಕ್ಕಾಗಲ್ಲ. ಅಲ್ಲಿ ಎಲ್ಲವೂ ಖಾಸಗಿ ಸ್ಥಳ. ಯಾರು ಬೇಕಾದರೂ ಇತಿಹಾಸದ ದಾಖಲೆಗಳನ್ನು ಸೋಟಿಸಬಹುದು, ಅಳಿಸಿ ಹಾಕಬಹುದು. ಅದೇ ಭಾರತದಲ್ಲಿ ಹಾಗಿಲ್ಲ. ಇಲ್ಲಿ ಇವೆಲ್ಲ ರಾಷ್ಟ್ರೀಯ ಸ್ಮಾರಕಗಳು. ಅಮೆರಿಕಾಕ್ಕಿಂತ ಭಾರತವೇ ಹೆಚ್ಚು ಪ್ರಜಾತಾಂತ್ರಿಕ. ನನಗೆ ಕೆಲಸ ಮಾಡಲಿಕ್ಕೆ ಇದೇ ಸೂರ್ತಿ. ಇಲ್ಲಿ ಎಂಥ ಸ್ವಾತಂತ್ರ್ಯ ಇದೆ ನೋಡಿ…ಇನ್ನು ಯೆಮೆನ್, ಸಿರಿಯಾಗಳಲ್ಲಿ ತುಂಬಾ ನಿರ್ಬಂಧ. ಮೊಬೈಲ್ ಇಟ್ಕೊಳ್ಳೋದಕ್ಕೂ ಬಿಡಲ್ಲ.
ಅದೆಲ್ಲ ಸರಿ. ಪುರಾತತ್ವ ಸರ್ವೇಕ್ಷಣೆಯಿಂದ ಇವತ್ತಿನ ಬದುಕಿಗೆ ಆಗಬೇಕಾದ್ದಾದರೂ ಏನು ? ಮನುಷ್ಯರು ಹೇಗೆ ಬದುಕಿದ್ದರು, ಪ್ರಕೃತಿಯೊಂದಿಗೆ ಹೇಗೆ ಸಹಬಾಳ್ವೆ ನಡೆಸಿದ್ರು ಅನ್ನೋ ತಿಳಿವಳಿಕೆಯಿಂದ ನಾವು ಮುಂದೆ ಇರೋ ಬದುಕನ್ನು ಹಸನು ಮಾಡ್ಕೋಬಹುದು. ಪುರಾತತ್ವ ಶಾಸ್ತ್ರ ನೋಡಲಿಕ್ಕೆ ಕೇವಲ ಅಂಕೆಗಳದ್ದು. ಆದ್ರೆ ಅವುಗಳನ್ನು ವಿಶ್ಲೇಷಿಸಿದ್ರೆ ನಮಗೆ ಮಾನವೀಯ ಅಂಶಗಳನ್ನು ತಿಳಿಸುತ್ತೆ. ನಮ್ಮ ಸಾಂಸ್ಕೃತಿಕ ವಿಕಾಸವು ನಮ್ಮ ಪ್ರಜ್ಞೆಯ ವಿಕಾಸಕ್ಕೆ ಸಮಾಂತರವಾಗಿ ಹರೀತಿದೆ.
೩೫ ರ ಹರೆಯದ ಗಿಂಬೆಲ್ ಕಂಡ ಹಂಪಿಯದು ತುಂಬು ಬಾಳಿನ ಬದುಕು. ಈಗಿರೋದು ಹಾಳು, ನಿಜ. ಅದನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯ ಇದೆ ಎನ್ನುತ್ತಾನೆ.ಕ್ರಿ.ಶ. ೧೫೩೭ ರಲ್ಲಿ ಡೆಮಿಂಗೋಸ್ ಪಯಸ್ ಎಂಬ ಪ್ರವಾಸಿ ಬರೆದಿದ್ದ ಬೀದಿಯ ದೃಶ್ಯಗಳು ಗಿಂಬೆಲ್ ಕಣ್ಣಿನಲ್ಲಿ ಮಿಂಚುತ್ತಿವೆ. “ ನಾನು ಈ ನಗರದ ಅಳತೆಯನ್ನು ವಿವರಿಸಲಾರೆ. ಅದು ಅನೇಕ ಗುಡ್ಡಬೆಟ್ಟಗಳನ್ನು ಹಾದುಹೋಗಿದೆ. ರೋಮ್‌ನಂಥ ದೊಡ್ಡ ನಗರ ಎಂದು ಮಾತ್ರ ಹೇಳಬಹುದು. ಬೀದಿಗಳಲ್ಲಿ ಜನ ಕಿಕ್ಕಿರಿದಿದ್ದಾರೆ ; ಅಲ್ಲಿ ಒಂದು ಕುದುರೆಯೂ ಹಾದುಹೋಗುಂತಿಲ್ಲ'' ಎಂದು ಡೆಮಿಂಗೋಸ್ ಬರೆದಿದ್ದಾನೆ.
ಇನ್ನೂ ಗಿಂಬೆಲ್‌ಗೆ ಆಸೆ ಬತ್ತಿಲ್ಲ. ಮುಂದೆ ಉಪಗ್ರಹ ನೆರವಿನ ಜಿಯೋ ಇನ್‌ಫಾರ್ಮೇಶನ್ ವ್ಯವಸ್ಥೆಯಿಂದ ( ಜಿ ಐ ಎಸ್) ಇಲ್ಲಿ ಇನ್ನಷ್ಟು ಸರ್ವೇಕ್ಷಣೆ ನಡೆಸಬಹುದು ಎಂಬ ಭರವಸೆ ಅವನಿಗಿದೆ. ಅದಕ್ಕೆ ಕೇವಲ ಉಪಗ್ರಹಗಳ ಸೇವ ಸಾಕಾಗದು. ಯಾಕೆಂದರೆ ಹಂಪಿಯ ಕಲ್ಲುಗಳು ರೂಪಾಂತರಿತ. ಇಲ್ಲಿ ಜಿ ಎಸ್ ಎಂ ತರಂಗಗಳು ಸರಿಯಾಗಿ ಹರಿಯುವುದಿಲ್ಲ. ಆದ್ದರಿಂದ ದೂರವಾಣಿ ತಂತಿಗಳನ್ನು ಬಳಸಬೇಕು. ೧೫ ನೆಯ ಶತಮಾನದ ದೇಗುಲದಲ್ಲಿ ಪೂಜೆ ಇನ್ನೂ ನಡೆಯುತ್ತಿದೆ, ಅದರ ಪಕ್ಕದಲ್ಲೇ ಸೈಬರ್ ಕೆಫೆಯೂ ಇದೆ ಎನ್ನುವುದೇ ಗಿಂಬೆಲ್‌ಗೆ ಒತ್ತಾಸೆಯಾಗಿದೆ. ಸಂಪೂರ್ಣ ಪ್ರಾಚೀನ ವಸ್ತುಗಳು ಸಂಪೂರ್ಣ ಸಮಕಾಲೀನವಾದ ತಂತ್ರeನದ ಜೊತೆಜೊತೆಗೇ ಇರುವುದು ಭಾರತದಲ್ಲಿ ಮಾತ್ರ ಎಂದು ಆತ ಉದ್ಗರಿಸುತ್ತಾನೆ.
ಈಗ ಗಿಂಬೆಲ್ ಅಮೆರಿಕಾಗೆ ಮರಳಿದ್ದಾನೆ. ಅವನ ಯೋಜನೆಗೆ ಸದ್ಯ ರಜೆ. ಈ ಮಧ್ಯೆ ಕೇಂದ್ರ ಸರ್ಕಾರ ಹಂಪಿಗಾಗಿ ವಿಶೇಷ ನೆರವು ಪ್ರಕಟಿಸಿದೆ. ಅದು ಯಾರಿಗೆ ತಲುಪುತ್ತದೆ ಎನ್ನುವುದು ಗೊತ್ತಿಲ್ಲ. ಸ್ಥಳೀಯ ಮುಖಂಡರು ಒಗ್ಗೂಡಿ ಎರಡು ಕೋಟಿ ರೂ. ಒದಗಿಸುವುದು ಕಷ್ಟದ ಮಾತೇನಲ್ಲ. ಹಾಗೆ ಮಾಡಿದರೆ ಗಿಂಬೆಲ್‌ಗೆ `ಬಾ ಮಹರಾಯ, ಸಂಶೋಧನೆ ಮುಗಿಸು. ನಾವೂ ನಿಮ್ಮೊಂದಿಗಿದ್ದೇವೆ. ಮತ್ತೆ ಆ ವ್ಯಾಪಾರ ಕೇಂದ್ರದ ಅವಶೇಷಗಳನ್ನು ನೋಡುತ್ತ ಕೂರುವ ಬದಲು ನಿನ್ನ ಕನಸಿನ ಸಾಮ್ರಾಜ್ಯವನ್ನು ಕಂಪ್ಯೂಟರಿನಲ್ಲಿ ಕಟ್ಟಿಕೊಡಬಹುದು' ಎಂದು ಈ ಮೇಲ್ ಕಳಿಸಬಹುದು. ಏನಂತೀರ ?
ನೆರವು : ಮಾಲತೀಶ ಭಟ್, ಸೃಜನ್, ಜೆಸಿಕಾ ಗ್ಲಾಸ್.

Leave a Reply

Theme by Anders Norén