ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Internet: The more u search, the more u get

ಹುಡುಕಿದಷ್ಟೂ ಹೊಸ ಸುದ್ದಿ ಕೊಡುವ ಇಂಟರ್‌ನೆಟ್

ಆತ ತಿಪಟೂರಿನಲ್ಲಿರುವ ಪತ್ರಕರ್ತ. ಸಾಕಷ್ಟು ಫೀಚರ್ ಲೇಖನಗಳನ್ನು ಬರೆದಿದ್ದಾನೆ. ಪತ್ರಕರ್ತರಿಗೆ ನೀಡುವ ತರಬೇತಿಗಳಲ್ಲೂ ಭಾಗವಹಿಸಿದ್ದಾನೆ. ರಂಗಾಸಕ್ತ. ಚೇಳಿನ ಬಗ್ಗೆ ನುಡಿಚಿತ್ರ ಬರೆಯುವಾಗ ಅದರ ಹೆಸರು ಗೊತ್ತಾಗಲಿಲ್ಲ ಎಂದು ಒಂದು ಚೇಳನ್ನೇ ಸಾಕಿದ ಮಹಾರಾಯ!

ಆತನ ಪರಿಚಯ ಆಯ್ತು. `ಸಾರ್, ಸೆಗಣಿ ಹುಳ ಗೊತ್ತಲ್ಲ, ಅದರ ಬಗ್ಗೆ ಇಂಟರ್‌ನೆಟ್‌ನಲ್ಲಿ ಮಾಹಿತಿ ಇದ್ರೆ ಹುಡುಕಿ ಕೊಡಿ' ಎಂದ. ನಾನೂ ಹುಡುಕಿದೆ. ಮಾಹಿತಿಸ್ಫೋಟದ ಮಹಾನ್ ಸಾಧನವಾದ ಇಂಟರ್‌ನೆಟ್ ಎಲ್ಲಿ? ತಾನಾಯ್ತು, ತನ್ನ ಸೆಗಣಿ ಉಂಡೆ ಆಯ್ತು ಎಂದು ಗುಡುಗುಡು ಓಡಾಡ್ತಾ ಇರೋ ಸೆಗಣಿ ಹುಳ ಎಲ್ಲಿ! ಹುಡುಕಿದರೆ ಅಲ್ಲಿ ಸೆಗಣಿ ಹುಳವನ್ನು ಪ್ರೀತಿಸಿ, ಅವುಗಳ ದಾಖಲಾತಿ ಮಾಡ್ತಾ ಇರೋ ದೊಡ್ಡ ಗುಂಪೇ ಇದೆ. ಒಂದು ಪುಟ ಹೇಳುತ್ತೆ: `ಸೆಗಣಿ ಹುಳ ಇಲ್ಲದೇ ಹೋಗಿದ್ರೆ ನಾವೂ ನೀವೂ ಯಾವುದರ ಕಂಠಮಟ್ಟ ಹುಗಿದುಹೋಗ್ತಿದ್ವಿ ಗೊತ್ತ?!'

ಇಂಟರ್‌ನೆಟ್‌ನಲ್ಲಿ ಮಾಹಿತಿ ಬೇಕಾದಷ್ಟಿದೆ. ಯಾವ ಉದ್ದೇಶವೂ ಇಲ್ಲದೆ ಚಾಟ್‌ರೂಮ್‌ಗಳಲ್ಲಿ ಹರಟೆ ಕೊಚ್ಚುವ ಬದಲಿಗೆ, ಯಾವ ಗುರಿಯೂ ಇಲ್ಲದೆ ಗೂಗಲ್ ವೆಬ್‌ಸೈಟ್ ಮೂಲಕ ಮನಸ್ಸಿಗೆ ಬಂದ ಪದಗಳನ್ನು ತುಂಬಿ ವಿಚಿತ್ರ ವೆಬ್‌ಸೈಟ್‌ಗಳಿಗೆ ಕಾತರಿಸುವ ಬದಲಿಗೆ ದಿನಕ್ಕೊಂದು ಉಪಯುಕ್ತ ಮಾಹಿತಿ ಪಡೆಯುವ ಉದ್ದೇಶ ನಿಮಗೆ ಇದ್ದರೆ ಚೆನ್ನಾಗಿರುತ್ತೆ ಅಲ್ವೆ?

ಸಾಮಾನ್ಯವಾಗಿ ಸರ್ಚ್ ಮಾಡಲು ಹೋಗುವವರಿಗೆ ಒಂದು ಉದ್ದೇಶ ಇದ್ದೇ ಇರುತ್ತೆ. ಆದರೆ ಒಂದು ಲಿಂಕ್ ಹಿಡಿದು ಅದರ ಹಿಂದೆ ಹೋದಮೇಲೆ ದಾರಿ ತಪ್ಪುತ್ತೆ! ಈ ಸೈಟಿನಲ್ಲಿ ಯಾವುದೋ ವಿಶೇಷ ಮಾಹಿತಿ ಇರಬಹುದು ಅಂದುಕೊಂಡು ಅಲ್ಲೇ ಗಿರಕಿ ಹೊಡೆಯುತ್ತೀರಿ. ಅಥವಾ ಅಲ್ಲಿ ಸಿಕ್ಕಿದ ಇನ್ನೊಂದು ಲಿಂಕ್ ಹಿಡಿದುಕೊಂಡು ಬೇರೆಲ್ಲೋ ಹೋಗುತ್ತೀರಿ. ಕೆಲವು ಜಾಹೀರಾತುಗಳಿಗೆ ಮರುಳಾಗಿ ಅವುಗಳಿಗೆ ಅಂಟಿಕೊಳ್ಳುತ್ತೀರಿ. ಹಾಗೇ ಹಾಗೇ ಹೋಗುತ್ತ ಯಾವುದೋ ಅಪಾಯಕಾರಿ ವೈರಸ್, ಟ್ರೋಜನ್ ಹಾರ್ಸ್, ಆಡ್‌ವೇರ್ – ಇತ್ಯಾದಿ ಮಾರಕಾಸ್ತ್ರಗಳಿಗೆ ಬಲಿಯಾಗುತ್ತೀರಿ!

ವೆಬ್‌ಸೈಟ್‌ಗಳನ್ನು ಹುಡುಕಲಿಕ್ಕೆ ಗೂಗಲ್ ಬಿಟ್ರೆ ಬೇರೆ ವೆಬ್‌ಸೈಟ್ ಇಲ್ವಾ? ಇದೆ ಮಾರಾಯ್ರೆ… ಅದಕ್ಕೇ ಹೇಳಿದ್ದು ಗೂಗಲ್ ಬಿಟ್, ಯಾಹೂ ಬಿಟ್, ರಿಡಿಫ್‌ನ್ನೂ ಬಿಟ್…. ಬಿಟ್ಬಿಡಿ! ನಿಮ್ಮೊಳಗೆ ಇರೋ ಬಾವಿ ಕಪ್ಪೇನ ಸುಮ್ನೆ ಸೈಡಲ್ಲಿಟ್ಬಿಡಿ!

ಈ ಮಾಹಿತಿ ಗಮನಿಸಿ:
ಗೂಗಲ್ ವೆಬ್‌ಸೈಟಿನಲ್ಲಿ ಸಿಗೋ ಮಾಹಿತಿಗಳ ೫೫೦ಕ್ಕೂ ಹೆಚ್ಚುಪಟ್ಟು ಮಾಹಿತಿ ಆಳಜಾಲತಾಣಗಳಲ್ಲಿ ಇದೆ.
ಅದರಲ್ಲೂ ಆಳಜಾಲತಾಣಗಳ ಮಾಹಿತಿ ಗೂಗಲ್‌ನಲ್ಲಿ ಸಿಗೋ ಮಾಹಿತಿಗಿಂತ ಹೆಚ್ಚು ನಿಖರ ಮತ್ತು ಒರಿಜಿನಲ್.
ಈ ಜಾಲತಾಣಗಳಲ್ಲಿ ಕೃಷಿ ಮುಂತಾದ ವಿಷಯಗಳ ಮೇಲೆ ಹೆಚ್ಚೆಚ್ಚು ಮಾಹಿತಿ  ಇದೆ.
ಆಳದಲ್ಲಿ ಇರೋ ಜಾಲತಾಣಗಳ ಸಂಖ್ಯೆ ಕವಲ ಮೂರೂವರೆ ಲಕ್ಷ. ಅದರಲ್ಲಿ ತುಂಬಾ ಒಳ್ಳೆ ಮಾಹಿತಿ ಇರೋ ಜಾಲತಾಣಗಳ ಸಂಖ್ಯೆ ಒಂದೂವರೆ ಲಕ್ಷ ಮಾತ್ರ. `ಮಾತ್ರ' ಅಂತ ಯಾಕೆ ಹೇಳ್ತಿದೀನಿ ಅಂದ್ರೆ ಜಗತ್ತಿನಲ್ಲಿ ಈಗ (ಮಾರ್ಚ್ ೨೦೦೮) ಇರುವ ಜಾಲತಾಣಗಳ ಸಂಖ್ಯೆ ೧೦ ಕೋಟಿ!
ಬ್ರೈಟ್‌ಪ್ಲಾನೆಟ್ ಅನ್ನೋ ಸಂಸ್ಥೆ ಈ ಸಮೀಕ್ಷೆ ನಡೆಸಿ, `ಡೀಪ್‌ವೆಬ್: ಸರ್ಫೇಸಿಂಗ್ ದಿ ಹಿಡನ್  ವ್ಯಾಲ್ಯೂ' ಅನ್ನೋ ಶ್ವೇತಪತ್ರವನ್ನು ಪ್ರಕಟಿಸಿ ಐದು ವರ್ಷಗಳಾಗಿವೆ. ಆದರೆ ಈಗಲೂ ಆ ಮಾಹಿತಿಯೇ ನಿಜ, ಸಕಾಲಿಕ.

ಹಾಗಾದರೆ ಈ ಥರ ಡೀಪ್ ಸರ್ಚ್ ಮಾಡೋದಾದ್ರೂ ಹ್ಯಾಗೆ? ಇದೇ ಸಂಸ್ಥೆ ಹಿಂದೆ ಲೆಕ್ಸಿಬಾಟ್ ಅನ್ನೋ ಡೀಪ್  ಸರ್ಚ್ ತಂತ್ರಾಂಶವನ್ನು ಮಾರುಕಟ್ಟೆಗೆ ತಂದಿತ್ತು. ನೀವು ಯಾವುದೋ ಪದಗುಚ್ಚವನ್ನು ಹುಡುಕಲು ಹೊರಟಿದ್ದೀರಿ ಅಂದುಕೊಳ್ಳಿ. ಲೆಕ್ಸಿಬಾಟ್ ಮೊದಲು ಈ ಪದ ಅಥವಾ ಪದಗುಚ್ಛ ಇರೋ ಎಲ್ಲ ಜಾಲತಾಣಗಳಲ್ಲೂ ಪಟ್ಟಿ ಮಾಡಿಕೊಳ್ಳುತ್ತದೆ. ಆಮೇಲೆ ಎಲ್ಲಾ ತಾಣಗಳಿಗೂ ಭೇಟಿ ನೀಡಿ ಅಲ್ಲಿ ಪ್ರಯೋಜನಕ್ಕೆ ಬಾರದ, ಲಿಂಕ್‌ಗಳೇ ಇಲ್ಲದ, ಜೀವಚ್ಛವವಾದ ಪುಟಗಳನ್ನು ಕಸದ ಬುಟ್ಟಿಗೆ ಹಾಕುತ್ತದೆ. ಮಾಹಿತಿಗಳ ಆಧಾರದಲ್ಲಿ ಅದರ ಸಕಾಲಿಕತೆ, ತಾಜಾತನ – ಇವೆಲ್ಲವನ್ನೂ ತನ್ನದೇ ಲೆಕ್ಕದಲ್ಲಿ ಮಾಡಿ ಒಂದು ಶ್ರೇಣೀಕೃತ ಮತ್ತು ಫೋಲ್ಡರೀಕೃತ ಪಟ್ಟಿಯನ್ನು ನೀಡುತ್ತದೆ. ಅಂದರೆ ಮೊದಲ ಫೋಲ್ಡರಿನಲ್ಲಿ ತುಂಬಾ ಪ್ರಯೋಜನಕ್ಕೆ ಬರುತ್ತದೆ ಎಂದು ಲೆಕ್ಕ ಹಾಕಿದ ಮಾಹಿತಿ, ಆಮೇಲೆ ಅದಕ್ಕಿಂತ ಕೆಳಮಟ್ಟದ ಮಾಹಿತಿ… ಹೀಗೆ.

ಆದರೆ ಈಗ ಲೆಕ್ಸಿಬಾಟ್ ಇಲ್ಲ. ಅದೇ ಕಾಲಕ್ಕೆ ಬಂದ ಇಂಟೆಲ್ಲಿಸೀಕ್ ಸಂಸ್ಥೆಯ ಬುಲ್ಸ್ ಐ ಎಂಬ ಇಂಥದ್ದೇ ತಂತ್ರಾಂಶವೂ ಈಗಿಲ್ಲ. ಅವುಗಳ ಕೃತಾರ್ಥತೆಗೆ ತಲೆಬಾಗಿ ಎರಡು ನಿಮಿಷ ಮೌನ ಆಚರಿಸಿ ಮುಂದೆ ಹೋಗೋಣ!

ಹಾಗೆಂದ ಮಾತ್ರಕ್ಕೆ ಬೇಜಾರಾಗಬೇಡಿ. ಈ ಕೆಳಗಿನ ಎರಡು ವೆಬ್‌ಸೈಟ್‌ಗಳಲ್ಲಿ ನಿಮಗೆ ಬೇಕಾದ ಮಾಹಿತಿಗಳನ್ನು ಸಾಕಷ್ಟು ಆಳವಾಗಿ ಹುಡುಕಿ ಕೊಡ್ತಾರೆ. ಇದೇನು ಆಳತಾಣ ಹುಡುಕಾಟವಲ್ಲ. ಆದರೂ, ಪರವಾಯಿಲ್ಲ!  ಇಲ್ಲಿ ಗೂಗಲ್, ಯಾಹೂ, ಆಸ್ಕ್‌ಜೀವ್ಸ್ ಮುಂತಾದ ಹುಡುಕಾಟದ ತಾಣಗಳನ್ನೆಲ್ಲ ಒಗ್ಗೂಡಿಸಿ ಹುಡುಕಾಟ ನಡೆಸಿ ಫಲಿತಾಂಶ ಹೊರಬೀಳುತ್ತದೆ. ಆದ್ದರಿಂದ ಸುಧಾರಿತ ಹುಡುಕಾಟ ಎನ್ನಬಹುದು.

www.metacrawler.com

www.dogpile.com 

ಇಂಥ ಹುಡುಕಾಟ ಮಾಡಲು ನಿಮಗೆ ಬೇಕಾದ್ದು ಕೇವಲ ಹುಡುಕಾಟದ ಪದಗಳು ಮಾತ್ರವಲ್ಲ. ಹುಡುಕಾಟಕ್ಕೆ ಪದಗಳನ್ನು ತುಂಬೋ ಜಾಗದಲ್ಲಿ ಹೇಗೆ ತುಂಬ್ತೀರ ಅನ್ನೋದೂ ಮುಖ್ಯ. ಪದಗಳ ನಡುವೆ ಪ್ಲಸ್ ಚಿಹ್ನೆ ಹಾಕುವ, ಅಥವಾ ಪದಗುಚ್ಛದ ಆಚೀಚೆ ಇನ್ವರ್ಟೆಡ್ ಕಾಮಾಗಳನ್ನು ಹಾಕುವ ವಿಧಾನವೂ ಇದೆ. ಇವು ಕೇವಲ ಉದಾಹರಣೆಗಳು. ನಿಮಗೆ ಈ ಹುಡುಕಾಟವನ್ನೇ ಚೆನ್ನಾಗಿ ಕಲಿಯೋ ಆಸಕ್ತಿ ಇದ್ದರೆ ಮತ್ತೆ ಬ್ರೈಟ್‌ಪ್ಲಾನೆಟ್ ಸಂಸ್ಥೆಯ ವೆಬ್‌ಸೈಟಿಗೆ ಹೋಗೋಣ. ಅಲ್ಲಿ ಸಮರ್ಥ ಹುಡುಕಾಟಕ್ಕೆ ಮಾರ್ಗದರ್ಶಿ ಸೂತ್ರಗಳು ಎಂಬ ಪುಸ್ತಕ ಇದೆ. ಉಚಿತವಾಗಿ ಸಿಗುತ್ತೆ ಬಿಡಿ. ಕಾಲೇಜು ವಿದ್ಯಾರ್ಥಿಗಳು, ಸಂಶೋಧಕರು, ಪತ್ರಕರ್ತರು, ಸಾಹಿತಿಗಳು – ಎಲ್ಲ ಮಾಹಿತಿ ಬೇಡಿಕೆಯ ಜನರಿಗೆ ಈ ಪುಸ್ತಕ ತುಂಬಾ ಉಪಯುಕ್ತ. ಹೇಗೆ ಹುಡುಕಾಟ ನಡೆಸಬೇಕು ಅನ್ನೋ ಬಗ್ಗೆ ಬೇಕಾದಷ್ಟು ಪುಸ್ತಕಗಳಿವೆ. ಇದು ಮಾತ್ರ ಹತ್ತು ಹಲವು ಪ್ರಶಸ್ತಿಗಳನ್ನು  ಬಾಚಿಕೊಂಡ ಪುಸ್ತಕ. (ದಿಢೀರ್ ಪ್ರಕಟಣೆಯ ಹುಚ್ಚಿನಲ್ಲಿ ಅದನ್ನು ಕನ್ನಡಕ್ಕೆ ತಂದುಬಿಡುವ ಯೋಚನೆ ಬೇಡ. ಹಕ್ಕುಸ್ವಾಮ್ಯದ ಉಲ್ಲಂಘನೆಯ ಶಿಕ್ಷೆ ಕಾದಿದೆ! )

ಈ ಪುಸ್ತಕವನ್ನು ಪಡೆಯಲಾಗದವರಿಗೆ ಪುಸ್ತಕದಲ್ಲಿ ಇರುವ ಸೂತ್ರಗಳನ್ನು ಪಟ್ಟಿ ಮಾಡುವೆ:

೧) ನಿಮ್ಮ ಹುಡುಕಾಟಕ್ಕೆ ಹೆಚ್ಚೆಚ್ಚು ಪದಗಳನ್ನು ಬಳಸಿ. ಆಗ ಫಲಿತಾಂಶದಲ್ಲಿ ನಿಖರತೆಯೂ ಹೆಚ್ಚಾಗುತ್ತದೆ.

೨) ನಾಮಪದ ಮತ್ತು ವಿಷಯಪದವನ್ನು ಹೆಚ್ಚಾಗಿ ಬಳಸಿ.

೩) ಸೋಲಾರ್ ಸಿಸ್ಟಮ್ ಎಂಬ ಪದ ಹುಡುಕುವಾಗ ಅದರ ಆಚೀಚೆ ಇನ್ವರ್ಟೆಡ್ ಕಾಮಾ (“ ಮತ್ತು") ಹಾಕುವುದನ್ನು  ಮರೆಯಬೇಡಿ.  ಹೀಗೆ ಒಟ್ಟಿಗೇ ಎರಡು ಮೂರು ಪದಗುಚ್ಛಗಳನ್ನು ತುಂಬಿದರೆ ಫಲಿತಾಂಶ ಚೆನ್ನಾಗಿರುತ್ತದೆ.

೪) ನೀವು ಹುಡುಕಾಟ ನಡೆಸುವಾಗ ಸರ್ಚ್ ಎಂಜಿನ್ ಯಾವುದು, ಡೈರೆಕ್ಟರಿ ಯಾವುದು ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ಯಾಹೂ ವೆಬ್‌ಸೈಟ್‌ನವರು ಇತ್ತೀಚಿನವರೆಗೂ ಡೈರೆಕ್ಟರಿ ಹುಡುಕಾಟದ ಸೇವೆ ನೀಡುತ್ತಿದ್ದರು. ಈಗಷ್ಟೇ ಅವರು ಸರ್ಚ್ ಎಂಜಿನ್ ಮೂಲಕ ಸೇವೆ ನೀಡುತ್ತಿದ್ದಾರೆ. ಸರ್ಚ್ ಎಂಜಿನ್ ಎಂದರೆ ಅದು ಯಾವಾಗಲೂ ಹುಡುಕಾಟ ನಡೆಸುತ್ತದೆ. ಜಗತ್ತಿನಲ್ಲಿ ಎಲ್ಲರೂ ಹುಡುಕಿದ ಮಾಹಿತಿಯನ್ನು ಕಲೆಹಾಕುತ್ತ, ಜೇಡದ ಹಾಗೆ  ಮಾಹಿತಿಯ ಬಲೆ ಕಟ್ಟುತ್ತದೆ ; ಈ ಬಲೆಯನ್ನು ವಿಸ್ತರಿಸುತ್ತ ಹೋಗುತ್ತದೆ. ಇದನ್ನೇ ಕ್ರಾಲಿಂಗ್ ಎನ್ನುತ್ತಾರೆ. 

ಆದರೆ ಡೈರೆಕ್ಟರಿ ಎಂದರೆ ಕೇವಲ ಪಟ್ಟಿ ಮಾಡಿದ ಜಾಲತಾಣಗಳು ಮಾತ್ರ ಇರುತ್ತವೆ. ಅಲ್ಲಿ ಹುಡುಕಾಟವು ವಿಸ್ತರಿಸುತ್ತ ಹೋಗುವುದಿಲ್ಲ.

ಇದು ಕೇವಲ ಮೊದಲ ಹಂತದ ಹುಡುಕಾಟ ಆಯ್ತು. ಒಂದು ಜಾಲತಾಣಕ್ಕೆ ಹೋದಮೇಲೆ ಅದರಲ್ಲಿ ನಮಗೆ ಬೇಕಾದ ಮಾಹಿತಿ ಎಲ್ಲಿರುತ್ತದೆ ಎನ್ನುವುದನ್ನು ಹುಡುಕುವುದು ಎರಡನೇ ಹಂತ. ಇಲ್ಲಿ ಸಾಮಾನ್ಯವಾಗಿ ಡೌನ್‌ಲೋಡ್ಸ್, ಪೇಪರ್‍ಸ್, ಮೀಡಿಯಾ ಕಿಟ್, ಹೀಗೆ ವಿಭಾಗಗಳಿರುತ್ತವೆ. ಅಲ್ಲಿ ಹೋಗಿ ನಿಮಗೆ ಬೇಕಾದ ಮಾಹಿತಿಗಳನ್ನು ಹುಡುಕಿ  ಡೌನ್‌ಲೋಡ್ ಮಾಡಿಕೊಳ್ಳಿ. ಹುಷಾರ್! ಎಲ್ಲಾ ಮಾಹಿತಿಗಳೂ ಉಚಿತವಲ್ಲ. ಕೆಲವು ಮಾಹಿತಿಗಳನ್ನು ವೆಬ್‌ಸೈಟ್‌ಗಳು ಉಚಿತವಾಗಿ ನೀಡುವುದಿಲ್ಲ. ನೀವು ಹಣ ಕಕ್ಕಬೇಕು.

ಮಾಹಿತಿ ಮಾಧ್ಯಮವಾದ ಇಂಟರ್‌ನೆಟ್ ಎಂದರೆ ಈಗಂತೂ ಬಹು ಅಗತ್ಯವಾದ ಸಾಧನವಾಗಿದೆ ಎಂಬುದನ್ನು ಮತ್ತೆ ಮತ್ತೆ ನಿಮಗೆ ಹೇಳುವುದಕ್ಕೆ ಕಾರಣವಿದೆ: ಮುದ್ರಣ ಮಾಧ್ಯಮದಿಂದ ಕೊಂಚ ಬ್ರೇಕ್ ಪಡೆದು ಅಲ್ಲಿಗೆ ಹೋಗಿ ಬನ್ನಿ. ಆಗ ಮತ್ತೆ ಈ ಮಾಧ್ಯಮವೂ ರುಚಿಸುತ್ತದೆ; ಹೊಸ ಲೋಕವೂ ಕಾಣುತ್ತದೆ.

ಆಳ ಹುಡುಕಾಟದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಜಾಲತಾಣಗಳಿಗೆ ಭೇಟಿ ನೀಡಿ:

www.brightplanet.com

www.completeplanet.com

Leave a Reply

Theme by Anders Norén