ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ

Feature article published in Udayavani Yugadi Special Issue 2007


ಸಂಕ್ರಾಂತಿಯ ಹಬ್ಬ  ಬಂತೆಂದರೆ, ಹಿಂದಿನ ತಲೆಮಾರಿನ ಹಳ್ಳಿಗರ ಸಂಭ್ರಮವೋ ಸಂಭ್ರಮ. ಆ ಸಂಜೆ, ರೈತರು ತಮ್ಮ ತಮ್ಮ ಹಳ್ಳಿಗಳಿಂದ ಗೋ ಕರುಗಳನ್ನು ಕರೆತಂದು, ಈ ಬಂಡೆಯ ಕೆಳಬದಿಯಲ್ಲಿದ್ದ ದೇವರಕೆರೆಯಲ್ಲಿ ಅವುಗಳ ಮೈ ತೊಳೆದು, ಹಣೆ-ಕೊಂಬು-ಬೆನ್ನು-ಮುಂಗಾಲು-ಕಾಲ್ಗೊರಸುಗಳಿಗೆ ಕುಂಕುಮ ಹಚ್ಚಿ, ಕೊಂಬುಗಳಿಗೆ ವಿವಿಧ ಬಣ್ಣಗಳನ್ನು ಲೇಪಿಸುತ್ತಿದ್ದರು. ಕೊಂಬುಗಳ ತುದಿಗಳಿಗೆ ಹಿತ್ತಾಳೆ ಕಳಶ, ಗೆಜ್ಜೆ ಕುಚ್ಚುಗಳನ್ನು ಕಟ್ಟಿ, ಕತ್ತಿಗೆ ಕರೀಕಂಬಳಿ ಹಗ್ಗಗಳಿಂದ ಗಂಟೆ ಕಟ್ಟಿ, ಬೆನ್ನ ಮೇಲೆ ಬಣ್ಣಬಣ್ಣದ ಕಿಂಕಾಪಿನ  ಮೇಲುದಗಳನ್ನು ಹೊದ್ದಿಸಿ, ಹೂ ಹಾರಗಳಿಂದ ಅಲಂಕರಿಸುತ್ತಿದ್ದರು. ಕೊನೆಗೆ ತಾವೂ ಈ ಕೆರೆಯಲ್ಲೇ ಮಿಂದು ಶುಚಿರ್ಭೂತರಾಗಿ, ಹೊಸ ಉಡುಗೆ ತೊಟ್ಟು ಸಿಂಗರಿಸಿಕೊಂಡು ವಿಜೃಂಭಣೆಯಿಂದ ತಮ್ಮಟೆ – ಮಂಗಳವಾದ್ಯಗಳ ಸಮೇತ ಮೆರವಣಿಗೆಯಲ್ಲಿ ಊರ ಬದಿಯ ಆ ಬಂಡೆಯ ಕೆಳಬದಿಯಲ್ಲಿದ್ದ ಶ್ರೀ ಮುತ್ತರಾಯನಿಗೆ  ಪೂಜೆ ಸಲ್ಲಿಸುತ್ತಿದ್ದರು. ಹೆಂಗಳೇಯರೂ ವಿವಿಧ ಹೂಗಳಿಂದ ತಮ್ಮನ್ನು ಸಿಂಗರಿಸಿಕೊಂಡು, ಕಳಶದೊಂದಿಗೆ ತಂಬಿಟ್ಟಿನ ದೀಪಾರತಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ಗೋವೃಂದವನ್ನು  ನಡೆಸಿಕೊಂಡು ಬರುತ್ತಿದ್ದರು. ಆಮೇಲೆ ಎಲ್ಲರೂ ಹಿಂದಿನ ದಿನವೇ ಮಣ್ಣಿನಲ್ಲಿ ಆರಡಿ ಎತ್ತರದ ಹುತ್ತದಾಕಾರದ ಆಕೃತಿಯನ್ನು ನಿರ್ಮಿಸಿ, ಅಲಂಕರಿಸಿ ಸಿದ್ಧಪಡಿಸಿರುತ್ತಿದ್ದ ಶ್ರೀ ಕಾಟಮರಾಯಸ್ವಾಮಿ, ಶ್ರೀ ಮುನೇಶ್ವರ ಸ್ವಾಮಿಗಳಿಗೆ ಪೂಜೆ  ಸಲ್ಲಿಸುತ್ತಿದ್ದರು.
ನಂತರ ಕೆಳಬದಿಯಲ್ಲಿ ಕೆರೆಕಟ್ಟೆ ಮೇಲೆ ನೆಲ್ಲುಹುಲ್ಲು, ರಾಗಿ ಹುಲ್ಲುಗಳನ್ನು ಹಾಸಿ ಅರ್ಧ ಫರ್ಲಾಂಗ್ ಉದ್ದ ಕಿಚ್ಚನ್ನು ಹೊತ್ತಿಸಿ  ಗೋವುಗಳನ್ನು ಈ ಬೆಂಕಿಯ ಮೇಲೆ ನಡೆಸಿಕೊಂಡು, ಓಡಿಸಿಕೊಂಡು ಕೇಕೆ ಹಾಕುತ್ತ ದನಗಾಹಿಗಳು ತಾವೂ ಅದರ ಮೇಲೆ ಓಡುತ್ತ ಕಿಚ್ಚು ಹಾಯಬೇಕು! ಕುಣಿಯಬೇಕು! ಕುಪ್ಪಳಿಸಬೇಕು! ಆನಂದಿಸಬೇಕು!
ಹಳ್ಳಿಯ ಹೆಂಗಳೆಯರು ಈ ಬಂಡೆಯ ಬೆನ್ನಮೇಲೆಯೇ ಅಡುಗೆ ಮಾಡಿ, ನೈವೇದ್ಯ ಕೊಟ್ಟು (ಅಲ್ಲಿಯೇ ಭತ್ತ ಕುಟ್ಟಿಕೊಂಡು ಅಕ್ಕಿ ಮಾಡಿ, ಆ ಅಕ್ಕಿಯಿಂದಲೇ ಅನ್ನ, ಪರಮಾನ್ನ, ಚಿತ್ರಾನ್ನಗಳನ್ನು ಮಾಡಬೇಕು) ಹಳ್ಳಿಗರೆಲ್ಲ ಇಲ್ಲೇ, ಬೆಳದಿಂಗಳಲ್ಲಿ ಉಂಡು ತಣಿಯುತ್ತಿದ್ದರು. ಬಾಣ ಬಿರುಸುಗಳನ್ನು ಬಿಟ್ಟು ಕೋಲಾಟ ಆಡುತ್ತಿದ್ದರು. ಹೀಗೆ ಊರಿಗೆ ಊರೇ, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಒಟ್ಟಾಗಿ ಸೇರಿ ನಲಿಯುತ್ತಿತ್ತು.
ಕೇತಮಾರನಹಳ್ಳಿ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಈಗಲೂ ಅದೇ ಮಧುರ ಸ್ಮರಣೆಯಲ್ಲಿ ಬದುಕುತ್ತಿರುವ ಕೆ.ಎನ್. ಶ್ರೀಹರಿಯವರು ಎಪ್ಪತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ಸುಂದರ ದೃಶ್ಯವಿದು. ಈ ದೃಶ್ಯವನ್ನು ಸವಿದು ಸವಿದು ಇಂದಿಗೂ ಇದೇ ಬೀದಿಯಲ್ಲಿ ವಾಸಿಸುತ್ತಿರುವ ಕೇತಮಾರನಹಳ್ಳಿಯ ನರಹರಯ್ಯ  ಶ್ರೀಹರಿಯವರನ್ನು ನೀವು ಈಗಲೂ ಭೇಟಿಯಾಗಬಹುದು.  ನರಹರಯ್ಯನವರು ಕೇತಮಾರನಹಳ್ಳಿಯ ಶ್ಯಾನುಭೋಗರಾಗಿದ್ದವರು. ಅವರ ತಂದೆ , ಅಂದರೆ ಶ್ರೀಹರಿಯವರ ತಾತ ಪುಟ್ಟನರಸಯ್ಯನವರೂ ಯವರೂ ಶ್ಯಾನುಭೋಗರೇ.
ಗೋಕುಲ ಎಂಬ ತಮ್ಮ ಮನೆಗೆ ಗೋಧೂಳಿ ಎಂದು ಶ್ರೀಹರಿ ಮರುನಾಮಕರಣ ಮಾಡಿದ್ದರೆ ಅವರಿಗೆ ಸದಾ ಕಣ್ಣಮುಂದೆ ಕನಸಿನಂತೆ ಹಾಯುವ ಈ ದನಕರುಗಳ ಕಿಣಿಕಿಣಿಯೇ ಕಾರಣ. ಅವರ ಮನೆಯಲ್ಲಿ ಇರುವ ಗೋಧೂಳಿಯ ದೃಶ್ಯದ ಗಾಜಿನ ಕಲಾಕೃತಿಗೂ ಅವರ ಈ ಕನಸೇ ಕಾರಣ.
ಶ್ರೀ ಹರಿಯವರ ಮನೆಗೆ ಹೋಗಬೇಕೆಂದರೆ ನೀವು ಬೆಂಗಳೂರಿನ ಮೆಜೆಸ್ಟಿಕ್‌ನಿಂದ ನವರಂಗ್ ಥಿಯೇಟರನ್ನು ದಾಟಿ ಬಲಕ್ಕೆ ತಿರುಗಿ ಎರಡು ಫರ್ಲಾಂಗ್ ಹೋಗಬೇಕು. ಅಲ್ಲಿ ನೀವುದಾರಿ ತಪ್ಪಿದರೆ ರಾಜಾಜಿನಗರ ಕೆ ಬ್ಲಾಕ್‌ನ ವರದರಾಯಸ್ವಾಮಿ ದೇವಸ್ಥಾನವನ್ನು ಹುಡುಕಿ. ಇತಿಹಾಸಪ್ರಸಿದ್ಧ ಈ ದೇಗುಲದ ಬಳಿಯೇ ಗೋಧೂಳಿ ಇದೆ.
ಕೆ ಬ್ಲಾಕ್ ಎಂದರೆ ಮತ್ತೆನಲ್ಲ, ಕೇತಮಾರನಹಳ್ಳಿ ಬ್ಲಾಕ್. ಊರೇನೋ ಕಳೆದುಹೋಯಿತು.  ದೇವರಕೆರೆಯೂ ಉದ್ಯಾನವಾಯಿತು. ಇದ್ದ ೭೦-೮೦ ಮನೆಗಳ ಕುಟುಂಬಗಳು ಎಲ್ಲೆಲ್ಲಿಗೋ ಹೋದವು. ಕೊನೇ ಪಕ್ಷ ಈ ಹಳ್ಳಿಯ ಕೇಂದ್ರಬಿಂದುವಿಗಾದರೂ ಅದೇ ಹೆಸರು ಇರಲಿ ಎಂದು ಶ್ರೀಹರಿ ಮತ್ತಿತರರು ಒತ್ತಡ ಹೇರಿದ ಮೇಲೆ ಕೇತಮಾರನಹಳ್ಳಿ ಒಂದ ಬ್ಲಾಕ್ ಆಗಿ ಉಳಿದುಕೊಂಡಿದೆ. ಗೋಧೂಳಿಯಿಂದ ಪಾವನವಾದ, ಹಳ್ಳಿ ತಳಿಯ ಹಸುಗಳಿಂದಲೇ ಹಾಲುಣ್ಣುತ್ತಿದ್ದ ಈ ಊರಿನಲ್ಲಿ ಪ್ಯಾಕೆಟ್ ಹಾಲಿನ ದಿನಚರಿ ಬಂದು ದಶಕಗಳಾದವು.
ಬೇಂದ್ರೆ ಅಭ್ಯಂಜನ, ಮಾತಿನ ಹೊಳೆ
ಹಳೆ ವಿನ್ಯಾಸ, ಹೊಸ ನೆಲಹಾಸಿನ ಮಧುರ ಮಿಶ್ರಣದ ಶ್ರೀಹರಿ ಮನೆಯಲ್ಲಿ ಏನುಂಟು ಏನಿಲ್ಲ… ಕನ್ನಡ ಸಾರಸ್ವತ ಲೋಕದ ಹಿರಿಯರೆಲ್ಲ ಈ ಮನೆಯ ಮೆತ್ತಿನ ಹಜಾರದಲ್ಲಿ ಸಭೆ ನಡೆಸಿದ್ದಾರೆ. ಸಾಹಿತ್ಯ – ಸಂಸ್ಕೃತಿ  ಚರ್ಚಿಸಿದ್ದಾರೆ. ಇದೇ ಮನೆಯಲ್ಲಿ ಎಂಟು ದಿನ ಉಳಿದುಕೊಂಡಿದ್ದ ವರಕವಿ ಬೇಂದ್ರೆ ಅಭ್ಯಂಜನ ಮಾಡಿಸಿಕೊಳ್ಳುತ್ತ ಗಂಟೆಗಟ್ಟಳೆ ಹರಟಿದ್ದಾರೆ.
`ಕೇತಮಾರನಹಳ್ಳಿ.. ಇದರ ಇತಿಹಾಸವನ್ನು ನೀವು ಲಿಪಿಬದ್ಧಗೊಳಿಸಬೇಕಲ್ರೀ’ ಎಂದು ಬೇಂದ್ರೆ ಅಂದೇ ಹೇಳಿದ್ದರು. ಕೇತಮಾರನಹಳ್ಳಿಯ ಸೊಗಡು, ಹಂಡೆಯಲ್ಲಿ ಕೊತ ಕೊತ ನೀರು, ಹೆಂಚಿನ ಮನೆಯ, ರೆಡ್ ಆಕ್ಸೈಡ್ ಹಾಸಿನ ಆ ಮನೆಯ ಸುಮಧುರ ಆತಿಥ್ಯದಲ್ಲಿ ಬೇಂದ್ರೆ ಕೇತಮಾರನಹಳ್ಳಿಯನ್ನು ಪ್ರೀತಿಸಿದರು.

ಬೇಂದ್ರೆಯವರ ಕಣ್ಣಿಗೂ ಹಿತ ತಂದ ಕೇತಮಾರನಹಳ್ಳಿ ಬೆಂಗಳೂರಿನ ಪ್ರಮುಖ ಮೂಲಸ್ಥಳ. ಈ ಹಳ್ಳಿಯ ಸರಹದ್ದು ಪೀಣ್ಯ – ಯಶವಂತಪುರ.ಲಗ್ಗೆರೆ, ಈಗಿನ ಕೇಂದ್ರ ರೈಲು ನಿಲ್ದಾಣ. ನವರಂಗ್ ರಸ್ತೆಯಾಗಲೀ, ಡಾ|| ರಾಜ ರಸ್ತೆಯಾಗಲೀ ಅಂದು ಬರೀ ಬಂಡಿಜಾಡುಗಳಾಗಿದ್ದವು. ಮಲ್ಲೇಶ್ವರಕ್ಕೆ ಬರಬೇಕೆಂದರೆ ಮೂರು ಹಳ್ಳಗಳನ್ನು ದಾಟಬೇಕಾದ ಸ್ಥಿತಿ.  ನವರಂಗ್‌ಪಾರ್ಕ್ ಇದ್ದಲ್ಲಿ  ಜೂಗನಹಳ್ಳಿ ಕೆರೆ. ಆಮೇಲೆ ಎಲ್ಲ ಗದ್ದೆ ಬಯಲು. ಮಳೆಗಾಲದಲ್ಲಿ ಶಾಲೆ ಮುಗಿದ ಮೇಲೆ ಅಪ್ಪಂದಿರ ಹೆಗಲ ಮೇಲೆಯೇ ಮನೆಗೆ ಪಯಣ. ಈಗಿನ ಸುಜಾತಾ ಥಿಯೇಟರಿನ ಆಸುಪಾಸಿನಲ್ಲಿ ಬರೀ ಹೂವಿನ ತೋಟಗಳು. ಸುಗಂಧರಾಜ, ಸೇವಂತಿಗೆ, ಮಲ್ಲಿಗೆ. ತೆಂಗಿನ ಸಾಲು ಮರಗಳು. ಬಸವೇಶ್ವರ ನಗರ ಅಂದು ದೊಡ್ಡ ಕಾಡುಪ್ರದೇಶ. ಕೆಲವರಿಗೆ ಮೊಲ ಬೇಟೆಯ ತಾಣ; ಹುಡುಗರಿಗೆ ಸುಮ್ಮನೆ ಕೂತು ಪಾಠ ಓದಿಕೊಳ್ಳಲು ಅರಸಿಕೊಂಡ ಜಾಗ. ಅಲ್ಲೇ ವೃಷಭಾವತಿ ನದಿ. ೨೪ ಕಣ್ಣಿನ ಸೇತುವೆ.
ಈಗ ಜೂಗನಹಳ್ಳಿ ಕೆರೆಯೂ ಇಲ್ಲ, ಸುಗಂಧರಾಜನೂ ಇಲ್ಲ. ಸುಜಾತಾ ಥಿಯೇಟರ್ ಬಳಿ ಹೋದರೆ ದುರ್ನಾತ ಬೀರುವ ಕೊಚ್ಚೆ ಹರಿಯುತ್ತದೆ. ಪಕ್ಕದಲ್ಲೇ ಮಹಿಳಾ ಕಾಲೇಜೂ ಹುಟ್ಟಿಕೊಂಡಿದೆ. ನವರಂಗ್ ಸುತ್ತಮುತ್ತ ಬಸ್ಸುಗಳ ಭರಾಟೆ. ಎಲ್ಲೆಲ್ಲೂ ಜಂಕ್ ಫುಡ್ ಜಂಕ್ಷನ್‌ಗಳು. ಪಕ್ಕದಲ್ಲೇ ಗ್ರಿಡ್ ಸೆಪರೇಟರ್ ಬಂದಿದೆ.
ಕೇತಮಾರನಹಳ್ಳಿ ಈಗ ಕೆ ಬ್ಲಾಕ್ ಆಗಿ ರಾಜಾಜಿನಗರದ ಹೊಟ್ಟೆಯಲ್ಲಿ ಅಡಗಿಹೋಗಿದೆ. ಅಲ್ಲೀಗ ಒಂದೇ ಒಂದು ಮನೆ ನೂರು ವರ್ಷಗಳ ನಂತರವೂ ಕಾಲನ ಹೆಜ್ಜೆಗೆ ಬಗ್ಗದೆ ನಿಂತಿದೆ. ಮುನಿಸುಬ್ಬಯ್ಯನವರಿಗೆ ತಮ್ಮ ಮನೆಯ ಮೇಲೆ ತುಂಬಾ ಪ್ರೀತಿ.

ನೋಡಿ ಮಗಳೊಂದಿಗೆ ಎಷ್ಟು ಆರಾಮಾಗಿ ಕಟ್ಟೆಯ ಮೇಲೆ ಕೂತಿದ್ದಾರೆ. ಪಕ್ಕದಲ್ಲೇ ವರದರಾಜಸ್ವಾಮಿ ದೇವಾಲಯ. ಶತಮಾನಗಳ ಇತಿಹಾಸ ಅದಕ್ಕಿದೆ. ಈಗ ರಾಜಾಜಿನಗರದ ಗಿಜಿಗಿಜಿಯ ನಡುವೆಯೂ ಈ ದೇಗುಲದ ಪ್ರಾಂಗಣದಲ್ಲಿ ಶಾಂತ ಸ್ಥಿತಿಯಿದೆ. ಘಂಟಾನಾದ ಅನುರಣಿಸುತ್ತದೆ. ದೇಗುಲದ ಆವರಣಗೋಡೆಯಿಂದ ಇಣುಕಿದರೆ ಕಾಲದ ಗರ್ಭದಿಂದ ಎದ್ದು ಬಂದಂತೆ ಕೇತಮಾರನಹಳ್ಳಿಯ ಮಿನಿಯೇಚರ್  ದೃಶ್ಯ ಕಾಣುತ್ತದೆ. ಹುಡುಗನೊಬ್ಬ ಅಲ್ಲಿ ಸೈಕಲ್ ಓಡಿಸುತ್ತಿದ್ದಾನೆ. ಪಡ್ಡ ಹಡುಗರು ಮಾತುಕತೆಯಲ್ಲಿ ತೊಡಗಿದ್ದಾರೆ.
`ಮೊದಲು ಇಲ್ಲಿ ಇದ್ದಿದ್ದೇ ಒಂದೇ ರೇಡಿಯೋ. ಈ ಊರಿಗೆ ಕರೆಂಟು ಬಂದಿದ್ದೇ ೧೯೫೮ರಲ್ಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿ ಡಿ ಎ)  ಕೇತಮಾರನಹಳ್ಳಿಯನ್ನು ವಶಪಡಿಸಿಕೊಂಡ ಹತ್ತು ವರ್ಷಗಳ ನಂತರ. ತಾರಸಿ ಮನೆ ಕಂಡಿದ್ದೇ ೧೯೫೬ರಲ್ಲಿ.ನಲ್ಲಿ ನೀರನ್ನು ನಾವು ನೋಡಿದ್ದೇ ೧೯೬೬ರಲ್ಲಿ’ ಶ್ರೀಹರಿ ನೆನಪಿನ ಬುತ್ತಿ ಬಿಚ್ಚುತ್ತಾರೆ.
ಆಗ ಕೇತಮಾರನಹಳ್ಳಿ ಇಂಡಸ್ಟ್ರಿಯಲ್ ಸಬರ್ಬ್ ಆಗಿತ್ತು. ಅದಕ್ಕಾಗೇ ಲೇಬರ್ ಕ್ವಾರ್ಟರ್‍ಸ್ ಕಟ್ಟಿದ್ದರು. ಆದರೆ ೧೯೫೭ರ ಏಕೀಕರಣದ ನಂತರ ಬೆಂಗಳೂರಿಗೆ ಅಧಿಕಾರಿ, ಸಿಬ್ಬಂದಿಗಳ ದೊಡ್ಡ ದಂಡೇ ಬಂತು. ಸಚಿವಾಲಯದಲ್ಲೆ ಕೆಲಸಕ್ಕೆಸೇರಿಕೊಂಡ ಇವರಿಗೆಲ್ಲ ಈ ಕ್ವಾರ್ಟರ್‍ಸ್‌ಗಳನ್ನೇ ವಿತರಿಸಲಾಯಿತು. ಆಗ ಎರಡು ಸಾವಿರ ಇದ್ದ ನಿವೇಶನಗಳಿಗೆ ಈಗ ಏನಿಲ್ಲೆಂದರೂ ಹಲವು ಲಕ್ಷಗಳ ಬೆಲೆಯಿದೆ.
ಬಿ ಡಿ ಎ ಯು ಈ ಹಳ್ಳಿಯ ಕೃಷಿಭೂಮಿಯನ್ನು ವಶಪಡಿಸಿಕೊಂಡು ಎಕರೆಗೆ ೬೦೦ ರೂ.ಗಳ ಪರಿಹಾರವನ್ನು ಕೊಟ್ಟಿದ್ದೇ ಕೇತಮಾರನಹಳ್ಳಿಯ ಪತನಕ್ಕೆ ಕಾರಣವಾಯ್ತು ಎಂದು ಶ್ರೀಹರಿ ಹಳಹಳಿಸುತ್ತಾರೆ. `ಆ ಕಾಲದಲ್ಲಿ ಅದು ಭಾರೀ ಮೊತ್ತ. ಜನ ಹಣದಾಸೆಗೆ ಮಾರುಹೋದರು. ಬಂದ ಹಣವನ್ನು ಎಲ್ಲೆಲ್ಲೋ ಚೆಲ್ಲಿದರು. ಕೇತಮಾರನಹಳ್ಳಿಯಲ್ಲಿ ಸ್ಥಳೀಕರು ಕಾಣೆಯಾಗೋದಕ್ಕೆ ಇದೇ ಕಾರಣ. ಈಗ ಬಹುಶಃ ನನ್ನಂಥ ಮೂಲನಿವಾಸಿಗಳು ಕೆಲವರು ಮಾತ್ರ’ ಎಂದು ಶ್ರೀಹರಿ ಮೆದುವಾಗಿ ನುಡಿಯುತ್ತಾರೆ. ಕೊನೆಗೆ ದೇವರಕೆರೆಯ ಕಟ್ಟೆಯನ್ನೂ ಒಡೆದಾಗ ಶ್ರೀಹರಿ ಕಣ್ಣೀರಿಟ್ಟರು. ಕೆರೆಯೇನೂ ಉಳಿಯಲಿಲ್ಲ.
ಕೇತಮಾರನಹಳ್ಳಿಯಲ್ಲೂ ಗಾಂಧಿಯುಗ
ಕೇತಮಾರನಹಳ್ಳಿಯಲ್ಲಿ ಗಾಂಧಿಯುಗವೂ ಅಡಗಿದೆ. ಅದಕ್ಕೆ ಶ್ರೀಹರಿಯವರೇ ಮುಖ್ಯ ಕಾರಣ. ಅಜ್ಜನ ವಿರೋಧ ಕಟ್ಟಿಕೊಂಡು ವರದರಾಜಸ್ವಾಮಿ ದೇಗುಲಕ್ಕೆ ಹರಿಜನ ಪ್ರವೇಶ ಮಾಡಿಸಿದವರೂ ಶ್ರೀಹರಿಯವರೇ. ಹತ್ತಿರದ ಬೋವಿಪಾಳ್ಯದಲ್ಲಿ ಖಾನೇಶುಮಾರಿಗೆ (ಸಮೀಕ್ಷೆ ಮಾಡುವುದಕ್ಕೆ) ಹೋದ ಶ್ರೀಹರಿ ಕಂಡಿದ್ದು ಬಡತನ; ದಾರಿದ್ರ್ಯ.  ಅವರೇಕೆ ಹಾಗೆ, ನಾನೇಕೆ ಹೀಗೆ ಎಂದು ಶ್ರೀಹರಿ ಪ್ರಶ್ನಿಸಿಕೊಂಡರು. ಮೊದಲಿನಿಂದಲೂ ಗಾಂಧಿ, ವಿನೋಬಾ ಭಾವೆ ಪ್ರಭಾವದಲ್ಲಿದ್ದ ಶ್ರೀಹರಿ ನಿಧಾನವಾಗಿ ಹರಿಜನ ಸೇವೆಗೆ ನಿಂತರು.
ಯಾಕೆಂದರೆ  ತಮ್ಮ ತಾತನ ಖುರ್ಚಿಯ ಮೇಲೆ ಅಕಸ್ಮಾತ್ತಾಗಿ ಹರಿಜನನೊಬ್ಬ ಕುಳಿತಿದ್ದೇ ಮಹಾಪರಾಧ ಎನ್ನುವಂತೆ ಮರುದಿನ ಬೆಳಗ್ಗೆ  ತಾತ ಖುರ್ಚಿಯನ್ನೇ  ಸೀಳಿಸಿ ಒಗಾಯಿಸಿದ್ದನ್ನು ಕಂಡವರೂ ಶ್ರೀಹರಿಯವರೇ.
ಆಮೇಲೆ ಹರಿಜನರು, ದುರ್ಬಲರು ಮನೆಗೆ ಬಂದಾಗ ತಮ್ಮ ದುಪ್ಪಡಿಗೇ ಅನ್ನ, ಹುಳಿ, ಸಾರನ್ನು ಹಾಕಿಸಿಕೊಂಡ ದೈನ್ಯದ ಸ್ಥಿತಿಯನ್ನು ಕಂಡವರೂ ಶ್ರೀಹರಿಯವರೇ.
ಶ್ರೀಹರಿ ಕೇವಲ ಸಮಾಜಸೇವೆ ಅಂತ ಕೂರಲಿಲ್ಲ. ಸಿದ್ಧವನಹಳ್ಳಿ ಕೃಷ್ಣಶರ್ಮರ ಗರಡಿಯಲ್ಲಿ ಪಳಗಿ ಅಧ್ಯಯನಶೀಲರಾದರು. `ಊರು ನ್ಯಾಯ’ ಎಂಬ ರೇಡಿಯೋ ನಾಟಕ ಬರೆದರು.  ಅದರಲ್ಲಿ ಕದರಗ ಹಾರ್ಮೋನಿಯಂ ನುಡಿಸಿದ್ದಕ್ಕೆ ಕಲ್ಲು ತೂರಾಟವೂ ಆಯ್ತಂತೆ. ಅಜ್ಜನಂತೂ ಕಿಡಿ ಕಾರಿದರು. `ಅರೆ, ಕದರಗ ಬಾರಿಸಿದರೇನಂತೆ, ಹಾರ್ಮೋನಿಯಂ ಸುಶ್ರಾವ್ಯವಾಗಿತ್ತಲ್ವೆ?’ ಎಂದು ಶ್ರೀಹರಿ ಪ್ರಶ್ನಿಸಿದ್ದೂ ಈಗ ಬರೀ ನೆನಪು.
ಈಗ ಶ್ರೀಹರಿಯವರು ಸುಪ್ರಸಿದ್ಧ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿಯಾಗಿದ್ದಾರೆ. ಅಚ್ಚುಕಟ್ಟಾದ, ಶಿಸ್ತಿನ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವ ತಂಡದಲ್ಲಿ ಪ್ರಮುಖರಾಗಿದ್ದಾರೆ. ಈ ವಿದ್ಯಾವರ್ಧಕ ಸಂಘವೂ ಕೇತಮಾರನಹಳ್ಳಿಯ ನವ ಸಾಕ್ಷಿಯಾಗಿದೆ. ಈ ಲೇಖನದ ಮೊದಲ ಪ್ಯಾರಾದಲ್ಲಿ ಉಲ್ಲೇಖಿಸಿದ  ಗುಡ್ಡವಾದರೂ ಸಾರ್ವಜನಿಕ ಶಾಂತಿ ಸ್ಥಳವಾಗಲಿ ಎಂದುದೇಗುಲ ಕಟ್ಟಿದ ತಂಡದಲ್ಲೂ ಶ್ರೀಹರಿ ಇದ್ದಾರೆ.
`ಕಳ್ಳರನ್ನು ಈ ತೆಂಗಿನ ಮರಕ್ಕೆ ಕಟ್ಟಿ ಹೊಡೀತಿದ್ರು, ಇದಕ್ಕೆ ನೂರು ವರ್ಷ ದಾಟಿದೆ’ ಎಂದು ಶ್ರೀಹರಿ ತೋರಿಸುತ್ತಿದ್ದರೆ…. ಅರೆ, ನಿಮಗೆ ಕೇತಮಾರನಹಳ್ಳಿಯ ದೃಶ್ಯ ಕಾಣಿಸ್ತೀನಿ ಎಂದು ಹಳೆ ಬಾಗಿಲುಗಳನ್ನು ದಾಟುತ್ತ ನಡೆದವರು ಅವರ ಪತ್ನಿ ಪರಿಮಳ…

ಗೋಧೂಳಿಯ ತಾರಸಿಯಿಂದ ಕೇತಮಾರನಹಳ್ಳಿಯ ಪುಟ್ಟ ದೃಶ್ಯ ಕಣ್ಣಿಗೆ ಎಟಕುತ್ತದೆ. ಅಲ್ಲಿರೋದೇ ಹಳೆ ಆಲದ ಮರ… ಅಲ್ಲಿ ಮಲ್ಲೇಶ್ವರ ಎಷ್ಟು ಸೊಗಸಾಗಿ ಕಾಣ್ತಾ ಇತ್ತು…. ಈಗ ನೋಡಿ ಎಲ್ಲೆಲ್ಲೂ ಕಾಂಕ್ರೀಟ್ ಕಟ್ಟಡಗಳು ಎದ್ದುಬಿಟ್ಟಿವೆ… ಈ ಮನೆ ಎದುರಿಗೆ ಇರೋದೆಲ್ಲಾ ರಾಗಿ, ಜೋಳದ ಹೊಲಗಳು….
ಎಲ್ಲಿದೆ ಎಂದು ಈ ಲೇಖಕ ನೋಡಲು ಯತ್ನಿಸಿದರೆ  ಮತ್ತೆ ಆದೆ ಕಾಂಪೌಂಡುಗಳು, ಮನೆಗಳು…..ಸೈಟುಗಳು…. ಕಾಂಪ್ಲೆಕ್ಸ್‌ಗಳು…. ಕೇತಮಾರನಹಳ್ಳಿಯ ಪುಟ್ಟ ಚೂರಿನಲ್ಲಿ ಅದೇ ಹಳೆಯ ಮನೆಯನ್ನೇ ಸಿಂಗರಿಸಿಕೊಂಡ ಶ್ರೀಹರಿ… ನೂರು ವರ್ಷಗಳ ಮನೆಯಲ್ಲೇ ಸೊಗಸಾಗಿ ಬದುಕುತ್ತಿರುವ ………….. ಪಕ್ಕದಲ್ಲೇ ಶಾಂತ ನಗು ಬೀರುತ್ತಿರುವ ವರದರಾಜಸ್ವಾಮಿ…
ಬೆಂಗಳೂರು ಈಗ ಬೃಹನ್ ಬೆಂಗಳೂರು ಆಗುತ್ತಿರೋ ಈ ಹೊತ್ತಿನಲ್ಲಿ, ಬೆಂಗಳೂರಿನಲ್ಲಿ ಮೆಟ್ರೋ ರೈಲಿಗಾಗಿ ಭೂಮಿ  ಅಗೆಯುತ್ತಿರೋ ಈ ಕ್ಷಣದಲ್ಲಿ, ದೇಶದ ಸಿಲಿಕಾನ್ ಕಣಿವೆಯಾಗಿ ಮೆರೆಯುತ್ತಿರೋ ಈ ಸಂದರ್ಭದಲ್ಲಿ ಕೇತಮಾರನಹಳ್ಳಿ ಕೊನೇಪಕ್ಷ ಒಂದುಬ್ಲಾಕ್ ಆಗಿದೆಯಲ್ಲ ಎಂದು ಖುಷಿಪಡಬೇಕು ಅಷ್ಟೆ!

Leave a Reply

Theme by Anders Norén