ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !

೬೦ಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಹೂಡಿದ ಹಣ ೧.೮೦ ಕೋಟಿ ರೂಪಾಯಿ. ಅದರ ಯೋಜನೆಯ ರೂವಾರಿಯೆಂಬ ಅಧಿಕಪ್ರಸಂಗ, ಹಮ್ಮಿನಿಂದ ಈ ಮನೋಹರ ಮಸ್ಕಿ ಮಾಡಿದ್ದೇನು? ಕ್ರಿಮಿನಲ್ ಕೂಟಕ್ಕೆ ಅಕ್ರಮ ಸಾಲದ ನೆಪದಲ್ಲಿ ೮೦ ಲಕ್ಷ ರೂ. ದುರ್ಬಳಕೆ. 

 

ವಿಷಯ ಗೊತ್ತಾಗಿದ್ದೇ ತಡ, ಹಲವು ಸಹಕಾರಿ ರಂಗದ ಧುರೀಣರು ಮಸ್ಕಿಯೆಂಬ ಮಾಯಾಂಗನೆಯ ಮೋಹದಿಂದ ಹೊರಬಂದರು; ಪರಿಣಾಮ:  ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಎಂಬ ತನ್ನದೇ ಸಂಸ್ಥೆಯ ಅಧ್ಯಕ್ಷಸ್ಥಾನದಿಂದ ಮಸ್ಕಿಗೆ ಎತ್ತಂಗಡಿ. 

 

ನಿನ್ನೆ ನಾನು ‘ಮಿತ್ರಮಾಧ್ಯಮ’ದಲ್ಲಿ ಪ್ರಕಟಿಸಿದ ಪತ್ರೋತ್ತರದ ಸುದ್ದಿಯನ್ನು ಓದಿ ನನಗೆ ಬೈದವರೇ ಹೆಚ್ಚು. ಅಲ್ಲಯ್ಯಾ….. ನೀವು ಹೀಗೆ ಓದುಗರನ್ನು ಕನ್‌ಫ್ಯೂಸ್ ಮಾಡಬಹುದೇ? ವಿಷಯ ಏನೆಂದು ಹೇಳು ಎಂದು ಎಲ್ಲರೂ ಕಟುವಾಗಿ ಟೀಕಿಸಿದರು. ನನ್ನ ವೆಬ್‌ಸೈಟಿನ ಹಿಟ್‌ರೇಟ್ ಹೆಚ್ಚುತ್ತಲೇ ಹೋಯಿತು. 

 

ನನ್ನ ಮಿತ್ರರಿಗೆ ನಿನ್ನೆ ಬರೆದ ಕಾಗದದಲ್ಲಿ ತಿಳಿಸಿದ್ದೆ: ಸ್ನೇಹಿತ ಪ್ರದೀಪ್ ಪೈಯವರು ನನ್ನ ಮತ್ತು ಮಸ್ಕಿಯವರ ತಾಜಾ ಬಲಿಪಶು ಅನೂಪ ದೇಶಪಾಂಡೆಯವರ ಮಸ್ಕಿ ದೂಷಣೆಯನ್ನು ‘ವೈಯಕ್ತಿಕ ವಿದ್ವೇಷದ ಕೃತ್ಯ’ ಎಂದು (ಈ ಎಲ್ಲ ಹಗರಣಗಳನ್ನು ತಿಳಿದೂ) ಮತ್ತೆ ಬ್ಲಾಗಿಸಿದ್ದರಿಂದ ನಾನು ಹೀಗೆ ಮಸ್ಕಿಯ ಬಗ್ಗೆ ಬರೆಯಬೇಕಾಗಿ ಬಂದಿದೆ. 

 

ಗಮನಿಸಿ: ನಾನೇನೂ ಸಾಚಾ ಎಂದು ಪ್ರೂವ್ ಮಾಡುವುದಕ್ಕೆ ಈ ಸುದ್ದಿ ಬರೆಯುತ್ತಿಲ್ಲ; ಆದರೆ ನಾನೆಂದೂ ಸಾರ್ವಜನಿಕ ಹಣವನ್ನು ಲೂಟಿ ಮಾಡಿಲ್ಲ; ಎಂದೂ ನನ್ನ ಖಾಸಗಿ ತೆವಲುಗಳಿಗೆ ಸಾರ್ವಜನಿಕ ತಲೆ ಬೋಳಿಸಿಲ್ಲ. ಆದರೆ ಮಸ್ಕಿ ಹೀಗೆ ಮಾಡುತ್ತಿದ್ದಾನೆ ಎಂದು ನನಗೆ ಅನ್ನಿಸಿದ್ದಾದರೂ ಇತ್ತೀಚೆಗೆ; ಆತನ ಈ ಸಾರ್ವಜನಿಕ ಹೇರ್‌ಕಟಿಂಗ್ ಶುರುವಾಗಿ ಹಲವು ವರ್ಷಗಳಾದ ಮೇಲೆ. ನನ್ನ ಕೆಲವು ಹಿರಿಯ ಮಿತ್ರರು ಮೊದಲೇ ನನ್ನನ್ನು ಎಚ್ಚರಿಸಿದ್ದರು. ನಾನು ಅವರ ಹತ್ತಿರ ಇದ್ದೇನೆಂದೋ, ಅಥವಾ ಈ ಮೂರ್ಖನಿಗೆ ಹೇಳಿ ಏನು ಪ್ರಯೋಜನವೆಂದೋ ಮತ್ತೆ ಮತ್ತೆ ನನ್ನನ್ನು ಎಚ್ಚರಿಸಲಿಲ್ಲ. ಆದರೆ ೨೦೦೬ರ ಫೆಬ್ರುವರಿ ಹೊತ್ತಿಗೇ ನನಗೆ ಇವೆಲ್ಲ ಸರಿಯಿಲ್ಲ ಎಂಬ ವಾಸನೆ ಹೊಡೆಯತೊಡಗಿತು. ಅಂದಿನಿಂದ ಇಂದಿನವರೆಗೆ ನಾನು ಸುಮ್ಮನೆ ಕುಳಿತಿಲ್ಲ; ಈ ಮನುಷ್ಯನ ಎಲ್ಲ ದಂಧೆಗಳನ್ನು ತನಿಖೆ ಮಾಡುತ್ತಲೇ ಬಂದೆ. 

 

ಒಮ್ಮೆ ಈ ದರಿದ್ರ ಮನುಷ್ಯನೇ ನನಗೆ ‘ನೀನೇನಂಥ ತನಿಖಾ ವರದಿಗಾರನಲ್ಲ’ ಎಂದು ಛೇಡಿಸಿದ್ದ. ಈಗ ಮತ್ತು ಮುಂದೆ ನಾನು ಸಾದರಪಡಿಸಲಿರುವ ದಾಖಲೆಗಳನ್ನು ಓದಿದ ಮೇಲೆ ನೀವೇ ನಿರ್ಧರಿಸಿ. 

 

ಈ ದಾಖಲೆಗಳನ್ನು ನಾನು ದೇಶದ ಹಿರಿಯ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ತೋರಿಸಿದೆ. ಅವರು ಇದುವರೆಗೂ ಅದರಲ್ಲಿ ಯಾವುದೇ ಅನುಮಾನಗಳಿವೆ ಎಂದು ತಿಳಿಸಿಲ್ಲ. ಈ ಮಾತನ್ನು ವಿನಮ್ರವಾಗಿಯೇ ಹೇಳಬಯಸುವೆ. 

 

೨೫ ವರ್ಷಗಳಿಂದ ನಾನು ಈ ಮನುಷ್ಯನನ್ನು ಹಿರಿಯ ಸ್ನೇಹಿತ ಎಂದು ನಂಬಿಕೊಂಡು ಬಂದೆ. ಈತನ ಚುನಾವಣೆಯಲ್ಲಿ ಹಗಲೂ ರಾತ್ರಿ ದುಡಿದೆ. ಒಂದು ಸಲವಂತೂ, ೫೫ ಸಾವಿರ ಪತ್ರಗಳನ್ನು ಪ್ರತಿಯೊಬ್ಬ ಮತದಾರನ ವಿಳಾಸ ಸಹಿತ ಮೂರು ಪ್ರಿಂಟರ್‌ಗಳಲ್ಲಿ ಸತತ ಮೂರು ದಿನ ಪ್ರಿಂಟ್ ಮಾಡಿದ್ದು ಈಗಲೂ ನೆನಪಿದೆ. ಆದರೆ ಈ ಮಸ್ಕಿಗೆ ಮಾತ್ರ ನೆನಪಿರೋದು ಒಂದೇ: ಹಣದ ಥೈಲಿ. 

 

ಇದನ್ನು ಹೇಳಲು ಕಾರಣವಿಷ್ಟೆ: ೨೦೦೭ರ ಜೂನ್ ೧೬ರಂದು ಈ ಮನುಷ್ಯ ನನಗೆ ಫೋನ್ ಮಾಡಿದ: ನಾನು ಎಂ ಎಲ್ ಸಿ ಆಗಿ ಒಂದು ವರ್ಷ ಆಯ್ತಲ್ಲ, ಅದಕ್ಕೇ ಕಾರ್ಯಕರ್ತರನ್ನು ನೆನಪಿಸಿಕೊಂಡು ಫೋನ್ ಮಾಡಿದೆ ಎಂದ! ಅವನೇನಾದರೂ ಸಮಾಜಕ್ಕೆ, ತನ್ನನ್ನು ಆರಿಸಿಕೊಟ್ಟ ಕ್ಷೇತ್ರಕ್ಕೆ ನಯಾಪೈಸೆ ಅಭಿವೃದ್ಧಿ ಕೆಲಸ ಮಾಡಿದ್ದರೆ ಆ ದಿನದಂದು ಆತ ಎಲ್ಲೋ ಯಾವುದೋ ಸನ್ಮಾನ ಕಾರ್ಯಕ್ರಮದಲ್ಲಿ ಇರಬೇಕಾಗಿತ್ತು ತಾನೆ? ಆದರೆ ಅವನೇ ಕಾರ್ಯಕರ್ತರಿಗೆ ಫೋನ್ ಮಾಡುವ ದೈನೇಸಿ ಸ್ಥಿತಿಗೆ ಬಂದಿದ್ದ!  ಹಾಗಂತ ೨೦೦೮ರಲ್ಲೇನೂ ನನಗೆ ಫೋನ್ ಮಾಡಲಿಲ್ಲ ಬಿಡಿ. ಅವನ ಪಾಡಿಗೆ ಅದೂ ವೇಸ್ಟ್. ಯಾಕೆಂದರೆ ಅಷ್ಟು ಹೊತ್ತಿಗೆ ಸಿಫಿನ್ ಎಂಬ ಹೊಸ ಹಣದ ಕಾರ್ಖಾನೆ ಆರಂಭವಾಗಿತ್ತು. ಮನೆಯೆದುರೇ, ಹೊಸ್ತಿಲು ಎಡವಿದರೆ ಆಫೀಸು. ಖಾತೆಗಳಲ್ಲಿ ತುಂಬಿಟ್ಟಿದ್ದ ಸಹಕಾರಿಗಳ ಹಣ ಕಣ್ಣಿಗೆ ಬೀಳುತ್ತಿದೆ. ಕೇಳಬೇಕೆ? 

 

ಈ ಬಗ್ಗೆ ನಾನು ಈ ಸುದೀರ್ಘ ವರದಿಯಲ್ಲಿ ಎಲ್ಲವನ್ನೂ ಈಗಷ್ಟೇ ಬರೆಯುತ್ತಿಲ್ಲ. ನಾನು ಎರಡು ತಿಂಗಳುಗಳ ಕಾಲ ಹಗಲು-ರಾತ್ರಿ, ಇಡೀ ಕರ್ನಾಟಕದಾದ್ಯಂತ ಮಾಹಿತಿ ಸಂಗ್ರಹಿಸಿ ಈ ಮಾಹಿತಿಪತ್ರವನ್ನು ಬರೆದಿರುವೆ. ಈ ಪತ್ರ ಎಲ್ಲಿ ಎಂದು ಮಸ್ಕಿ ಹುಡುಕುತ್ತಿದ್ದ; ಈಗಲೂ ನೀವು ಇಣುಕಿದರೆ, ಅವನ ಮನೆಯಲ್ಲಿ ಮಿತ್ರಮಾಧ್ಯಮ ವೆಬ್‌ಸೈಟ್ ಓಪನ್ ಮಾಡಿ ಕೂತಿರೋದನ್ನು ನೀವು ಕಾಣಬಹುದು! 

 

ಯಾಕೆಂದರೆ ಈ ಸ್ಕೀಮರ್‌ನಿಗೆ ವೆಬ್‌ಸೈಟ್ ಗೊತ್ತು. ಈ ಮೈಲ್ ಗೊತ್ತು; 

 

ಇರಲಿ, ಈ ಲೇಖನವನ್ನು ಶಾಂತವಾಗಿ ಓದಿ. ನಿಮ್ಮ ಗೊಂದಲಗಳು ಪರಿಹಾರವಾಗುತ್ತವೆ ಮತ್ತು ಮಸ್ಕಿಯ ಕರಾಳ ಮುಖದ ಪರಿಚಯವಾಗುತ್ತದೆ ಎಂದುಕೊಂಡಿದ್ದೇನೆ. 

 

ಏಳು ಸಂಸ್ಥೆಗಳ ಪಾಳೇಗಾರನೆ? 

 

೧. ಸಿಂಧನೂರು ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಸಿಂಧನೂರು (ಸುಕೋಬ್ಯಾಂಕ್ )

೨. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು (ಛೆ, ಈಗ ಪದಚ್ಯುತ!) 

೩. ಸೌಹಾರ್ದ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಸರ್ವಿಸಸ್ ಲಿ., ಬೆಂಗಳೂರು (ಸಿಫಿನ್: ಹೌದ್ರೀ, ಇದೇ ಸ್ಕಾಂಡಲ್ ಸಂಘಟನೆ, ಇದರ ಬಗ್ಗೇನೇ ನೀವು ಹೆಚ್ಚು ತಿಳಿದುಕೊಳ್ಳಬೇಕಾಗಿದ್ದು) 

೪. ಸಹಕಾರ ಅಭಿವೃದ್ಧಿ ಪ್ರತಿಷ್ಠಾನ, ಬೆಂಗಳೂರು (ಸ್ಯಾಪ್-ಕೆ: ಸದ್ಯಕ್ಕೆ ಇದು ಇವನ ಕೈ ತಪ್ಪಿ ಸಂಯುಕ್ತ ಸಹಕಾರಿಯ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಖಾತೆಯಲ್ಲಿದ್ದ ಹಣ ಮಾತ್ರ ಎಲ್ಲಿಗೆ ಹೋಯ್ತು ಎಂದು ಕೇಳಬೇಡಿ!) 

೫. ಸಹಕಾರ ಅಭಿವೃದ್ಧಿ ಸಂಘಟನೆ, ಸಿಂಧನೂರು (ಸಹಚರ)

೬. ನ್ಯಾಷನಲ್ ಯುವಾ ಕೋ-ಆಪರೇಟಿವ್ ನಿ., ದೆಹಲಿ

೭. ಟ್ಯಾಫ್‌ಕಬ್ (ಟಾಸ್ಕ್ ಫೋರ್ಸ್ ಆನ್ ಅರ್ಬನ್ ಬ್ಯಾಂಕ್ಸ್), ಭಾರತೀಯ ರಿಸರ್ವ್ ಬ್ಯಾಂಕ್ ಸದಸ್ಯ

 

ಮಸ್ಕಿಯು ಪರೋಕ್ಷವಾಗಿ ಆಸಕ್ತಿ ಹೊಂದಿದ ಸಂಸ್ಥೆಗಳು

 

೧. ಅಂಬಾ ದೇವಿ ವಿದ್ಯಾವರ್ಧಕ ಸಂಘ, ಸಿಂಧನೂರು (ಇದು ಹಸ್ತಾಂತರದ ಪ್ರಸ್ತಾವನೆಯಲ್ಲಿದೆ.)

೨. ಜನತಾ ಸೌಹಾರ್ದ ಸಹಕಾರಿ ನಿ., ಸಿಂಧನೂರು (ಇದನ್ನು ಬೇರೆಯವರಿಗೆ ಹಸ್ತಾಂತರಿಸಲಾಗಿದೆ.)

 

ಈಗ ಬನ್ನಿ: ಒಂದೊಂದಾಗಿ ವಿವರಿಸುತ್ತೇನೆ: 

೧. ಸುಕೋಬ್ಯಾಂಕ್ 

ಸಿಂಧನೂರು ಸೌಹಾರ್ದ ಸಹಕಾರಿ ಬ್ಯಾಂಕ್ ನಿ., ಇದು ಪ್ರಸ್ತುತ ಸಿಂಧನೂರು, ರಾಯಚೂರು, ಗಂಗಾವತಿ, ಕೊಪ್ಪಳ ಹಾಗೂ ಬಳ್ಳಾರಿಗಳಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಾರಂಭವಾಗಿ ೧೨ ವರ್ಷಗಳಾದವು. ಅಂದಿನಿಂದಲೂ ಮಸ್ಕಿಯೇ ಅಧ್ಯಕ್ಷ. ಈಗ ಹುಬ್ಬಳ್ಳಿಯ ವರ್ಧಮಾನ ಸಹಕಾರಿ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡು ಹುಬ್ಬಳ್ಳಿ ಹಾಗೂ ಗದಗಗಳಲ್ಲಿ ಶಾಖೆ ಹೊಂದಲು ಮತ್ತು ಕಟಗೋಳ ಸಹಕಾರಿ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡು ಬೆಳಗಾವಿ ಜಿಲ್ಲೆಯಲ್ಲಿ ಹತ್ತು ಶಾಖೆಗಳನ್ನು ಹೊಂದಲು ಯತ್ನಿಸುತ್ತಿದೆ. 

 

ಇದರ ವಾಹನ ಸಂಪೂರ್ಣ ಮಸ್ಕಿಯ ಉಪಯೋಗಕ್ಕೆ. ಮಾಸಿಕ ಗೌರವಧನ (೧೦ ಸಾವಿರ ರೂ.), ದೂರವಾಣಿ, ಮೊಬೈಲ್ ಮುಂತಾದ ಸೌಲಭ್ಯ ಹೊಂದಿದ್ದಾನೆ. ವೈಯಕ್ತಿಕ ಪ್ರಯಾಣದ ಖರ್ಚುಗಳೂ ಹಾಗೂ ವಸತಿಯ ಬಿಲ್ಲುಗಳನ್ನು ಇದರಿಂದಲೇ ನೀಡಲಾಗುತ್ತದೆ. ಸಾಲ ನೀಡಲು ಕಮೀಶನ್ ಪಡೆಯಲಾಗುತ್ತದೆ. ದುಬಾರಿ ಹ್ಯಾಂಡ್ ಸೆಟ್ ಬ್ಯಾಂಕಿನಿಂದಲೇ ನೀಡಲಾಗಿದೆ. 

 

೮-೯ ವರ್ಷಗಳ ಕೆಳಗೆ ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಯೊಬ್ಬನನ್ನು ಲೋಕಾಯುಕ್ತಕ್ಕೆ ಸುಕೋ ಬ್ಯಾಂಕ್ ಹಿಡಿದುಕೊಟ್ಟಿತ್ತು. ವಾಸ್ತವಿಕವಾಗಿ ಆ ಅಧಿಕಾರಿ ಬೇನಾಮಿ ಖಾತೆಯೊಂದನ್ನು ಪತ್ತೆಹಚ್ಚಿದ್ದ. ಗ್ರಾಹಕರಿಗೆ ಬ್ಯಾಂಕಿನಿಂದ ಸಾಲ ನೀಡಿದ್ದರ ಒಂದು ಭಾಗ ಈ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಇದರ ಸುಳಿವು ಪಡೆದು ಆ ಅಧಿಕಾರಿಯನ್ನೇ ಲೋಕಾಯುಕ್ತಕ್ಕೆ ಹಿಡಿದುಕೊಡುವ ತಂತ್ರ ರೂಪಿಸಿ ಯಶಸ್ವಿಯಾದ ಈ ಮಸ್ಕಿ. ಅದಕ್ಕೇ ವಿಕ ಹೇಳಿದೆ: ಅರೆ ಇಸ್ಕಿ! 

 

೨. ಪದಚ್ಯುತ ಅಧ್ಯಕ್ಷ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು.

 

ಇದು ಸೌಹಾರ್ದ ಸಹಕಾರಿ ಕಾಯ್ದೆಯಡಿ ರಚಿತವಾದ ಶಾಸನಬದ್ಧ ಸಂಸ್ಥೆ. ಸುಕೋ ಬ್ಯಾಂಕೂ ಸೇರಿದಂತೆ ಸೌಹಾರ್ದ ಸಹಕಾರಿ ಕಾಯ್ದೆಯಡಿ ನೋಂದಣಿಯಾದ ಸಹಕಾರಿ ಸಂಸ್ಥೆಗಳು ಇದರ ಸದಸ್ಯರು. ಮಸ್ಕಿಯು ಸುಕೋ ಬ್ಯಾಂಕಿನ ಪ್ರತಿನಿಧಿಯಾಗಿ ರಾಯಚೂರು ಜಿಲ್ಲೆಯ ನಿರ್ದೇಶಕನಾಗಿದ್ದು, ಇದರ ಅಧ್ಯಕ್ಷನಾಗಿದ್ದ, ಮೊನ್ನೆ ಮೊನ್ನೆ ಸೆಪ್ಟೆಂಬರ್ ೩೦ರವರೆಗೆ. ಆಡಳಿತ ಮಂಡಳಿಯ ಅವಧಿ ಐದು ವರ್ಷ. ಅದರಲ್ಲಿ ಪದಾಧಿಕಾರಿಗಳ ಅವಧಿ ಎರಡೂವರೆ ವರ್ಷ. ೨೦೦೨ ರಿಂದ ೨೦೦೭ ಮಂಡಳಿಯ ಒಂದು ಅವಧಿ. ಸಂಪೂರ್ಣ ಐದೂ ವರ್ಷ (ಪದಾಧಿಕಾರಿಗಳ ಎರಡೂವರೆ ವರ್ಷಗಳ ಎರಡು ಅವಧಿ) ಮತ್ತು ೨೦೦೭ ರಿಂದ ಇಲ್ಲಿಯವರೆಗೆ ಅವರೇ ಅದರ ಅಧ್ಯಕ್ಷನಾಗಿ ಮೆರೆದ. ಈಗ ಮಾಜಿಯಾಗಿ ಕುಸಿದ.  

 

ಈ ಸಂಸ್ಥೆಯಿಂದ ಮಸ್ಕಿಯು ಪಡೆಯುತ್ತಿದ್ದ ಅಧಿಕೃತ ಸೌಲಭ್ಯಗಳು: 

ಅ) ಮಾಸಿಕ ಗೌರಧನ ರೂ.೧೦೦೦೦/-

ಆ) ಅನಿಯಮಿತ ವಾಹನ ಸೌಲಭ್ಯ, ಡ್ರೈವರ್ ಸಹಿತ.

ಇ) ಮನೆಗೆ ದೂರವಾಣಿ

ಈ) ಮೊಬೈಲ್

ಉ) ಆಪ್ತ ಸಹಾಯಕ

ಊ) ಮನೆ

ಋ) ಅನಿಯಮಿತ ಪ್ರಯಾಣ ಸೌಲಭ್ಯ.

 

I) ಇತರೆ ಖರ್ಚುಗಳ ಭರಣೆ

ವಾಹನ: ಸಂಪೂರ್ಣ ಸ್ವಂತ ಉಪಯೋಗಕ್ಕೆ. ಸಂಸ್ಥೆಯ ಕೆಲಸಕ್ಕೆ ಓಡಾಟ ಒಟ್ಟು ಓಡಾಟದ ಶೇ ೧೦ಕ್ಕೂ ಕಡಿಮೆ. ಮನೆಯ ಜನರೂ ಅನಿಯಮಿತವಾಗಿ ಉಪಯೋಗಿಸುತ್ತಾರೆ. ಅವರು ಇಲ್ಲದಿರುವಾಗಲೂ ಮನೆಯ ಜನರ ಓಡಾಟ. ಡ್ರೈವರ್ ಅವರ ಮನೆಗೇ.

 

ದೂರವಾಣಿ: ಅಧಿಕೃತವಾಗಿ ಒಂದು ದೂರವಾಣಿ ನೀಡಿದ್ದರೂ, ಮನೆಗೆ ಎರಡು ದೂರವಾಣಿಗಳಿವೆ.

 

ಮೊಬೈಲ್: ಇದರ ನಂಬರ್ ಸಂಸ್ಥೆಯ ನೌಕರರು, ನಿರ್ದೇಶಕರ ಬಳಿ ಇಲ್ಲ. ಇದರಿಂದ ಯಾರಿಗೆ ಮಾಡಿದರೂ ನಂಬರ್ ಕಾಣದಂತೆ ಸೌಲಭ್ಯ ಪಡೆದಿದ್ದಾರೆ. ನಂಬರ್ ಗೊತ್ತಿದ್ದರೂ ಅವರು ಒಪ್ಪಿಗೆ ನೀಡಿದ ನಂಬರ್‌ಗಳಿಂದ ಮಾತ್ರ ಅದಕ್ಕೆ ಕರೆ ಮಾಡಬಹುದು. ಇದರಿಂದ ಈ ಮೊಬೈಲ್ ಕೂಡ ಸಂಸ್ಥೆಯ ಉಪಯೋಗಕ್ಕೆ ಅಲ್ಲ. ದುಬಾರಿ ಹ್ಯಾಂಡ್ ಸೆಟ್ ನೀಡಲಾಗಿದೆ. ಅದು ಈಗ ಕಳೆದಿದೆ. ಅದರ ವರದಿ ನೀಡಿಲ್ಲ. 

 

ಮನೆ: ಈ ಸೌಲಭ್ಯ ಪಡೆಯದಿದ್ದರೂ ಸುಳ್ಳು ಬಾಡಿಗೆ ಕರಾರು ಪತ್ರದ ಮೂಲಕ ಮಾಸಿಕ ರೂ. ೯೦೦೦/- ಬಾಡಿಗೆ ಪಡೆಯುತ್ತಿದ್ದಾರೆ. ಕರಾರು ಪತ್ರದಲ್ಲಿದ್ದ ವಿಳಾಸದಲ್ಲಿ ಕೆಲವು ಕಾಲ ಇವ ಮಸಾಜ್ ಸೆಂಟರ್ ನಡೆಸಿದ. ಹಲವು ಪ್ರತಿಷ್ಠಿತರಿಗೆ ಕಾಗದ ಬರೆದು ‘ಬನ್ನಿ, ಮಸಾಜ್ ಮಾಡಿಸಿಕೊಳ್ಳಿ’ ಎಂದು ಕರೆದ; ಆದರೆ ಅವರೆಲ್ಲ ಮೈಗೆ ಎಣ್ಣೆ ಹಚ್ಚಿಕೊಂಡೇ ಇದ್ದವರು; ನಯವಾಗಿ ಜಾರಿಕೊಂಡರು. 

 

ಈಗ ಮಸ್ಕಿಯು ಆ ಸೆಂಟರ್ ಅನ್ನು ಬೇರೆಯವರಿಗೆ ಮಾರಿದ್ದಾನೆ. ಈ ಮನೆಗೆ ನೀಡಿದ ರೂ.೧೫೦೦೦೦/- ಮುಂಗಡ ಹಣ ಕೂಡ ಇವನ ಬಳಿಯೇ ಇತ್ತು. ಈಗ ವಾಪಸು ಮಾಡಿದ್ದಾರಾ… ಗೊತ್ತಿಲ್ಲ… 

 

ಪ್ರಯಾಣ ಸೌಲಭ್ಯ: ಇದರ ದುರುಪಯೋಗವೂ ಧಾರಾಳವಾಗಿ ನಡೆದಿದೆ. ಶೇ.೧೦ಕ್ಕಿಂತ ಕಡಿಮೆ ಸಂಸ್ಥೆಯ ಉಪಯೋಗಕ್ಕೆ. ಬಾಕಿ ಸ್ವಂತ ಅಥವಾ ರಾಜಕೀಯಕ್ಕೆ. ಇಲ್ಲಿಯ ಪ್ರಯಾಣದ ಟಿಕೇಟಿನ ನಕಲು ಸುಕೋ ಬ್ಯಾಂಕ್, ಸಿಫಿನ್, ಸ್ಯಾಪ್-ಕೆ ಮುಂತಾದ ಸಂಸ್ಥೆಗಳಲ್ಲಿ ಸಲ್ಲಿಸಿ ಎಲ್ಲ ಕಡೆಯಿಂದಲೂ ಹಣ ಪಡೆದಿದ್ದಾನೆ. 

 

ಇತರೆ ಸೌಲಭ್ಯ: ಹೊಟೆಲ್ ಬಿಲ್‌ಗಳು ಸಂಸ್ಥೆಗೆ ಸಂಬಂಧವಿಲ್ಲದ್ದು, ವೈಯಕ್ತಿಕ ಎಲ್ಲಾ ಖರ್ಚುಗಳೂ ಯಾವುದಾದರೂ ಸಂಸ್ಥೆಯಿಂದ ಭರಿಸುವಂತೆ ವ್ಯವಸ್ಥೆ ಮಾಡಲಾಗಿದೆ. 

 

ಇದಲ್ಲದೇ ಒಂದು ಕಂಪ್ಯೂಟರ್, ಪ್ರಿಂಟರ್ ಅನಧಿಕೃತವಾಗಿ ಅವನಿಗೆ ನೀಡಲಾಗಿದೆ. ೨೦೦೭-೦೮ ರಲ್ಲಿ ಅಧ್ಯಕ್ಷರಿಗಾಗಿ ಈ ಸಂಸ್ಥೆ ಮಾಡಿದ ಖರ್ಚು ಅಂದಾಜು ರೂ.೧೨ ಲಕ್ಷ. 

 

ತಾನು ಸಂಯುಕ್ತ ಸಹಕಾರಿಗೆ ಕೆಲಸ ಮಾಡುವಾಗ ಸುಕೋಬ್ಯಾಂಕಿನಿಂದ ಯಾವುದೇ ಹಣ ಪಡೆಯುವುದಿಲ್ಲ ಎಂದು ಅವನು ಮಾತು ಕೊಟ್ಟಿದ್ದರಿಂದಲೇ ಈ ಸೌಕರ್ಯಗಳನ್ನು ನೀಡಲಾಗಿತ್ತು. ಆದರೆ ಅವನು ಮಾತ್ರ  ಸುಕೋಬ್ಯಾಂಕ್, ಸಂಯುಕ್ತ ಸಹಕಾರಿ, ಸ್ಯಾಪ್ – ಕೆ, ಸಿಫಿನ್, ಶಾಸಕಸ್ಥಾನ, – ಈ ಎಲ್ಲ ಮೂಲಗಳಿಂದ ಬೇರೆ ಬೇರೆ ರೂಪದಲ್ಲಿ ಹಣ ಪಡೆಯುವುದನ್ನು ಬಿಡಲಿಲ್ಲ; ತೀರಾ ನೀವು ನನ್ನನ್ನು ನಂಬದಿದ್ದರೆ ಮಸ್ಕಿಗೇ ಕೇಳಿ!  

 

೩. ಪರಮ ನೀಚ ಕೃತ್ಯಗಳ ಹೊಸ ತಾಣ: ಅಧ್ಯಕ್ಷ, ಸೌಹಾರ್ದ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಸರ್ವಿಸಸ್ ಲಿ., ಬೆಂಗಳೂರು (ಸಿಫಿನ್)

 

ಸೌಹಾರ್ದ ಸಹಕಾರಿಗಳೇ ಸೇರಿ ತಮ್ಮ ವ್ಯವಹಾರ ವೃದ್ಧಿಗೆ ಇನ್ನೊಂದು ಸಂಸ್ಥೆಯನ್ನು ರಚಿಸಿಕೊಳ್ಳಬಹುದು ಎಂಬ ಕಾಯ್ದೆಯ ಪ್ರಾವಧಾನದಡಿ ರಚಿತಗೊಂಡ ಸಂಸ್ಥೆ. ಅಂದಾಜು ರೂ. ೧ ಕೋಟಿ ೮೦ ಲಕ್ಷ ಶೇರು ಬಂಡವಾಳವನ್ನು ೬೦ಕ್ಕೂ ಹೆಚ್ಚು ಸಂಸ್ಥೆಗಳು ನೀಡಿದ್ದವು. ( ನನ್ನ ಮತ್ತು ಅನೂಪ ದೇಶಪಾಂಡೆಯವರ ಸತತ ಮನವಿಯ ಪರಿಣಾಮವಾಗಿ ಹಲವು ಸಹಕಾರಿಗಳು ಹಣ ವಾಪಸು ಪಡೆದಿವೆ ಎಂಬುದು ಈಗಿನ ಸುದ್ದಿ) 

 

ಮನೋಹರ ಮಸ್ಕಿಯೇ ಇದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ. 

 

ಕಾಯ್ದೆಯಡಿ ವ್ಯಕ್ತಿಗತ ಸದಸ್ಯತ್ವಕ್ಕೆ ಅವಕಾಶವಿಲ್ಲ. ಕೇವಲ ಸಹಕಾರಿ ಸಂಸ್ಥೆಗಳು ಮಾತ್ರ ಸದಸ್ಯತ್ವ ಪಡೆಯಬಹುದು. ಆದರೂ ಇಲ್ಲಿ ಮನೋಹರ ಮಸ್ಕಿ ವ್ಯಕ್ತಿಗತ ಸದಸ್ಯ. ಅವರ ಶ್ರೀಮತಿಗೂ ಸದಸ್ಯತ್ವ ನೀಡಲು ಯತ್ನ ನಡೆದಿತ್ತು. 

 

ಒಂದು ವರ್ಷವಾದರೂ ಚಟುವಟಿಕೆ ಆರಂಭವಾಗಿರಲಿಲ್ಲ. ಖರ್ಚು ಮಾತ್ರ ನೀರಿನಂತೆ.  

 

ನಿಯಮಾವಳಿಯಂತೆ ಸಿಫಿನ್‌ನಲ್ಲಿ ಏಳು ಜನ ನಿರ್ದೇಶಕರಿರಬೇಕು. ಆದರೆ ಮೂವರೇ ಇದ್ದಾರೆ. ೧. ಮನೋಹರ ಮಸ್ಕಿ ೨ ಯು.ಎಚ್.ರಾಮಪ್ಪ ಹಾಗೂ ೩. ಸಚಿನ್ ಪಾಟೀಲ್ (ಸದ್ಯಕ್ಕೆ ಇಬ್ಬರು. ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶ್ರೀ ಸಚಿನ್ ಪಾಟೀಲ್ ರಾಜೀನಾಮೆ ನೀಡಿದ ನಂತರ ನಿರ್ದೇಶಕರ ಸಂಖ್ಯೆ ೨ಕ್ಕಿಳಿದಿದೆ. ನಿರ್ದೇಶಕರ ಸಂಖ್ಯೆ ಯವುದೇ ಸಂದರ್ಭದಲ್ಲಿ ೩ಕ್ಕಿಂತ ಕಡಿಮೆ ಇರಬಾರದು) ಮಂಡಳಿ ಸಭೆ ನಡೆಸಿಲ್ಲ. ಕೇವಲ ನಿರ್ಣಯ ಬರೆದಿದ್ದಾನೆ. ಸಾಮಾನ್ಯ ಸಭೆ ನಡೆಸಿಲ್ಲ. ಆಡಿಟ್ ಇಲ್ಲ. ಇದರ ಆಡಿಟ್ ವರದಿ ಎಲ್ಲಾ ಶೇರುದಾರ ಸಹಕಾರಿಗಳ ಸಾಮಾನ್ಯ ಸಭೆಯಲ್ಲಿಡಬೇಕು. ಹಾಗೆ ಇಡದೇ ಕಾಯ್ದೆ ಉಲ್ಲಂಘನೆ. ಈಗ ಸೆಪ್ಟೆಂಬರ್ ೨೦೦೮ರ ಕೊನೆಯ ವಾರ ಆಡಿಟ್ ವರದಿ ತಯಾರಾಗಿ ಸಭೆ ನಡೆದು, ಅಲ್ಲಿಯೂ ಹಗರಣದ ವಿಷಯ ಬಂದಿದ್ದು ಈಗ ಇತಿಹಾಸ.  

 

ಇವನ ಮನೆಯ ಎದುರಿನ ಮನೆಯೇ ಸಿಫಿನ್‌ನ ಕಛೇರಿ. ಈ ಮನೆ ಮತ್ತು ಇದರೊಂದಿಗೆ ಇರುವ ಇನ್ನೂ ಐದು ಮನೆಗಳನ್ನು ಬಿಡಿಎ ನಿಯಮಗಳನ್ನು ಸುತ್ತುಬಳಸಿ ಕಟ್ಟಲಾಗಿದ್ದು ಇದಕ್ಕಾಗಿ ಸಾಲ ಒದಗಿಸಿಕೊಟ್ಟ ದಶಕಗಳ ಕಾಲದ ಆಪ್ತಮಿತ್ರ ಹಾಗೂ ಬ್ಯಾಂಕ್ ಅಧಿಕಾರಿಯೊಬ್ಬರು ಇವರ ದುರ್ನಡತೆಗೆ ಬೇಸತ್ತು ಇವರೊಂದಿಗೆ ತಮ್ಮ ಸಂಪರ್ಕವನ್ನು ಸಂಪೂರ್ಣ ಕಡಿದುಕೊಂಡಿದ್ದಾರೆ.  ಅದೆಂಥ ದುರ್ನಡತೆ ಎಂದು ಕೇಳಬೇಡಿ; ದುರ್ನಾತ ನಿಮ್ಮ ಮೂಗಿಗೆ ರಾಚುತ್ತದೆ. 

 

ವೈಯಕ್ತಿಕ ಖರ್ಚುಗಳು ಸಂಸ್ಥೆಗೆ. ಬೇರೆ ಸಂಸ್ಥೆಯಿಂದ ಪಡೆದ ಖರ್ಚುಗಳ ಬಾಬ್ತನ್ನು ಇಲ್ಲಿಂದಲೂ ಪಡೆಯಲಾಗಿದೆ. 

 

ಈ ಸಂಸ್ಥೆಯ ಅಧಿಕೃತ ಸಹಿದಾರರು: ವೇದಾವತಿ. (ಇವರು ಮಸ್ಕಿಯವರ ಶ್ರೀಮತಿಯವರೋ ಅಥವಾ ಅದೇ ಹೆಸರಿನ ಇನ್ನೊಬ್ಬ ನೌಕರರೋ? – ಗೊಂದಲ ಇದೆ). ವೇದಾ ಮನೋಹರ್, ವೇದವತಿ ಮತ್ತು ದಯಾವತಿ – ಈ ಮೂರು ಹೆಸರುಗಳನ್ನೂ ಶ್ರೀ ಮನೋಹರ ಮಸ್ಕಿಯ ಪತ್ನಿ ಬಳಸುತ್ತಿದ್ದಾಳೆ. ಕೊಡಗಿನಲ್ಲಿ ವ್ಯಕ್ತಿಗಳಿಗೆ ಎರಡು ಹೆಸರುಗಳು ಇರುವುದನ್ನು ಇಲ್ಲಿ ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ದಾಖಲೆಗಳೇ ಹೇಳುತ್ತವೆ. (ಯಾವ ದಾಖಲೆ? ಮಸ್ಕಿ ಕೇಳಲಿ ಬಿಡಿ… ಆಗ ಪ್ರಕಟಿಸುತ್ತೇನೆ) 

 

ಅತಿಮುಖ್ಯ ಮತ್ತು ತುರ್ತು ಗಮನಿಸಬೇಕಾದ ಸಂಗತಿ: ಸಿಫಿನ್ ಸಂಸ್ಥೆಯು ಸಹಕಾರಿಗಳಿಂದ ಸಂಗ್ರಹಿಸಿದ ೮೦ ಲಕ್ಷ ರೂ.ಗಳನ್ನು ಕರ್ನಾಟಕ ಕೆಮಿಸ್ಟ್ಸ್ ಫೌಂಡೇಶನ್ ಎಂಬ ಕಳಂಕಪೂರಿತ ( ಈ ಸಂಸ್ಥೆಯು ಈಗಾಗಲೇ ೧.೦೨ ಕೋಟಿ ರೂ.ಗಳನ್ನು ಕರ್ನಾಟಕ ಕೆಮಿಸ್ಟ್ಸ್ ಎಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಶನ್ ಖಾತೆಯಿಂದ ವರ್ಗಾಯಿಸಿದೆ ಎಂಬ ಬಗ್ಗೆ ದಾವೆ ನಡೆಯುತ್ತಿದೆ.  ಈ ದಾಖಲೆಗಳನ್ನು ಬ್ಲಾಗಿನಲ್ಲಿ ಎಂದಾದರೂ ಲಗತ್ತಿಸಲು ನಾನು ಬದ್ಧ). ಈ ಸಾಲ ನೀಡಿಕೆಗೆ ನಿರ್ದೇಶಕ ಮಂಡಳಿಯ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಖೋಟಾ ದಾಖಲೆಯನ್ನು ಸೃಜಿಸಲಾಗಿದೆ ಎಂಬ ಅನುಮಾನ ಇದೆ. ಈ ಸಾಲ ಪಡೆದ ಕೆ ಸಿ ಎಫ್ ಎಂ ಸಂಸ್ಥೆಯ ಹುಟ್ಟು ಮತ್ತು ಅದು ತನ್ನ ಮಾತೃಸಂಸ್ಥೆಯಿಂದ ಹಣವನ್ನು ವರ್ಗಾಯಿಸಿಕೊಂಡ ಬಗ್ಗೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು ಸದ್ಯ ಕ್ರಿಮಿನಲ್ ಪ್ರೊಸೀಡಿಂಗ್‌ಗಳಿಗೆ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ. ಹೊರತು ಸಂಸ್ಥೆಯು ಆರೋಪ ಮುಕ್ತವಾಗಿಲ್ಲ. ಈ ಸಂಸ್ಥೆಯು ತನ್ನ ದುರ್ವ್ಯವಹಾರವನ್ನು ಮುಚ್ಚಿಹಾಕಲು ಸದರಿ ೮೦ ಲಕ್ಷ ರೂ.ಗಳನ್ನು  ಬಳಸಿಕೊಂಡಿರುವುದರಿಂದ (ಅಂದರೆ ಯಾವುದೇ ನೇರ ಮತ್ತು ಪಾರದರ್ಶಕ ಮಾದರಿಯಲ್ಲಿ ವರಮಾನ ಬರುವ ಉದ್ದೇಶವಲ್ಲ) ಈ ಸಾಲವು ಮರುಪಾವತಿಯಾಗುವ ಬಗ್ಗೆ ಅನುಮಾನವಿದೆ. ಈವರೆಗೆ ನಮ್ಮ ಪ್ರಯತ್ನ ಮತ್ತು ಒತ್ತಡದಿಂದ ಮಸ್ಕಿಯು ‘ಸಾಯಲಿ’ ಎಂದು ಶಪಿಸುತ್ತ ೪೦ ಲಕ್ಷ ರೂ.ಗಳನ್ನು ಹೇಗೋ ತಂದು ತುಂಬಿದ್ದಾನೆ. ಉಳಿದ ೪೦ ಲಕ್ಷ ಬರುತ್ತಾ? ಕಣಿ ಕೇಳಿ. 

 

 

೪. ‘ನಂಬಿಕೆಗೆ ಅನರ್ಹ’ ಟ್ರಸ್ಟಿ,  ಸಹಕಾರ ಅಭಿವೃದ್ಧಿ ಪ್ರತಿಷ್ಠಾನ, ಬೆಂಗಳೂರು (ಸ್ಯಾಪ್-ಕೆ)

 

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಯೋಜಿಸಿದ ಟ್ರಸ್ಟ್. ಇವರು ಹಾಗೂ ಸಾಗರದ ಶ್ರೀ ಯು. ಎಚ್. ರಾಮಪ್ಪ ಇವರ ಟ್ರಸ್ಟಿಗಳು. ಸಂಯುಕ್ತ ಸಹಕಾರಿಯ ಮಂಡಳಿ ೪ ಟ್ರಸ್ಟಿಗಳನ್ನು ನೇಮಿಸುವ ಅಧಿಕಾರ ಹೊಂದಿದೆ. ಆದರೆ ಯಾರನ್ನೂ ನೇಮಿಸಿಲ್ಲ. ಇದರಿಂದ ಮೈಸೂರು ವಿವಿ ಸಹಯೋಗಿತ್ವದಲ್ಲಿ ಎಂಬಿಎ ಕೋರ್ಸ್ ನಡೆಸಲಾಗುತ್ತಿದೆ. ಮೈಸೂರು ವಿವಿಯ ಔಟ್ ರೀಚ್ ಕಾರ್ಯಕ್ರಮದಡಿ ಈ ಕೋರ್ಸ್ ಆರಂಭಿಸಲಾಗಿತ್ತು. ೨೦೦೭ ಜೂನ್ ನಿಂದ ಆರಂಭವಾದ ಈ ಕೋರ್ಸ್‌ನಲ್ಲಿ ೪೦ ವಿದ್ಯಾರ್ಥಿಗಳು ಇದ್ದಾರೆ. ೨೦೦೭ ನವೆಂಬರ್‌ನಲ್ಲಿ ಮೈಸೂರು ವಿವಿ ಈ ಔಟ್ ರೀಚ್ ಕಾರ್ಯಕ್ರಮವನ್ನೇ ನಿಲ್ಲಿಸಿದ್ದರಿಂದ ಮೊದಲ ಸೆಮಿಸ್ಟರ್ ಪರೀಕ್ಷೆ ಎರಡನೇ ಸೆಮಿಸ್ಟರ್ ವೇಳೆಯವರೆಗೂ ನಡೆದಿರಲೆ ಇಲ್ಲ. ಈಗ ೨೦೦೭ ಜೂನ್‌ನಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಕೋರ್ಸ್ ಮುಗಿಸಲು ವಿವಿಯು ಅವಕಾಶ ಮಾಡಿಕೊಟ್ಟಿದೆ. ಪ್ರಸ್ತುತ ಬೆಂಗಳೂರು ವಿವಿಯಿಂದ ಸಂಲಗ್ನತೆ ಪಡೆಯಲು ಯತ್ನ ನಡೆದಿದೆ. ಒಟ್ಟಾರೆ ಅನಧಿಕೃತ ಕೋರ್ಸಿಗೆ ಲಕ್ಷಾಂತರ ರೂ ಹಣ ಖರ್ಚಾಗಿದೆ.  

 

ಇದಕ್ಕಾಗಿ ಸಂಯುಕ್ತ ಸಹಕಾರಿಯಿಂದ ನೀಡಿದ ಹಣದ ಬಗ್ಗೆ ಸಂಯುಕ್ತ ಸಹಕಾರಿಯಲ್ಲಿ ದಾಖಲೆಗಳಿವೆ. ಇದೆಲ್ಲ ಎಳ್ಳು ಬೆಲ್ಲಕ್ಕೆ  ಗುರಿಯಾಗಿವೆ.  

 

ವಿದ್ಯಾರ್ಥಿಗಳಿಂದ ಫೀ ರೂಪದಲ್ಲಿ ಸಂಗ್ರಹಿಸಿದ ಹಣ, ಸಂಬಳ, ದೂರವಾಣಿ, ಕಂಪ್ಯೂಟರ್, ಫರ್ನೀಚರ್ ಇತ್ಯಾದಿಗಳಿಗೆ ಖರ್ಚಾದ ಹಣ, ವೈಯಕ್ತಿಕ ಖರ್ಚುಗಳು, ಪ್ರಯಾಣದ ಖರ್ಚು – ಎಲ್ಲದರ ಲೆಕ್ಕ ಬಹಿರಂಗವಾಗಬೇಕಿದೆ. 

 

ಸಂಸ್ಥೆಯ ಸಂಪರ್ಕ ವ್ಯಕ್ತಿಯಾಗಿ ಈಗಷ್ಟೇ ಇಂಜಿನಿಯರಿಂಗ್ ಸೇರಿರುವ ಅವರ ಮಗ (ಇದನ್ನು ಈ ಸಂಸ್ಥೆಯ ವೆಬ್ ಸೈಟ್‌ನಲ್ಲಿ ನೋಡಬಹುದು) ಮಗನಿಗೆ ದೂರವಾಣಿ. ಕೆಲವು ತಿಂಗಳು ಇವನಿಗೂ ಸಂಬಳ ನೀಡಿದ್ದಾರೆ ಎನ್ನಲಾಗಿದೆ. ದಾಖಲೆ ಸಿಕ್ಕಿಲ್ಲ. ಸದ್ಯ ವೆಬ್‌ಸೈಟನ್ನು ಬ್ಲಾಕ್ ಮಾಡಿದ್ದ.  

 

ಸ್ಯಾಪ್ ಕೆ ಸಂಸ್ಥೆಯಿಂದಲೂ ಕೆಲವು ಸೌಲಭ್ಯ ಪಡೆಯಲಾಗಿದ್ದು ಬೇರೆ ಸಂಸ್ಥೆಯಿಂದ ಪಡೆದ ಖರ್ಚುಗಳನ್ನೇ ಇಲ್ಲಿಂದಲೂ ಪಡೆಯುತ್ತಿದ್ದಾನೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

 

ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ (ಅರ್ಬನ್ ಬ್ಯಾಂಕ್ ಫೆಡರೇಷನ್) ದಲ್ಲೂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾನೆ. ನನ್ನ ಕರ್ಮ ಏನಪ್ಪಾ ಎಂದರೆ ಅವನು ಈ ಫೆಡರೇಶನ್‌ನಲ್ಲಿ ಇದ್ದಾಗಲೇ ನಾನೂ ಇದ್ದೆ, ಮಾಧ್ಯಮ ಸಲಹೆಗಾರನಾಗಿ. ಅವನನ್ನು ಕುರುಡಾಗಿ ನಂಬಿ ಅವನು ಹೇಳಿದ್ದಕ್ಕೆಲ್ಲ ಸೈ ಎಂದುಕೊಂಡು; ಈಗ ನನಗೆ ಇಂಥವನ ಕರ್ಮಕಾಂಡಗಳಿಗೆ ಬೆಂಬಲ ನೀಡಿದೆನಲ್ಲ ಎಂದು ಹೇಸಿಗೆಯಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಾದ ತಮ್ಮಲ್ಲಿ ಕ್ಷಮೆ ಕೇಳಲು ನನಗೆ ಹಿಂಜರಿಕೆಯಿಲ್ಲ.   

 

ಟೀಕ್ ಪ್ಲಾಂಟೇಶನ್ ವ್ಯವಹಾರದಲ್ಲೂ ಕೈ ಹಾಕಿದ್ದ ಮಸ್ಕಿಯು ತಾನೇನೂ ನಟವರ ಗಂಗಾಧರನಿಗೆ ಕಡಿಮೆ ಇಲ್ಲ ಎಂಬಂತೆ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ.  

 

ವಿ-ಟೂ ಮಾರ್ಕೆಟಿಂಗ್ ಹೆಸರಿನಲ್ಲಿ ಹಲವು ಬಗೆಯ ಬ್ಯಾಂಕಿಂಗ್ ಸೇವೆ, ಸಾಫ್ಟ್‌ವೇರ್ ನೀಡಿಕೆ ಮುಂತಾದ ವ್ಯವಹಾರಗಳಲ್ಲಿ ಬ್ಯಾಂಕುಗಳು ಸರ್ವಿಸ್ ಪ್ರೊವೈಡರ್‌ಗಳಿಗೆ ನೀಡುವ ಹಣದಲ್ಲಿ ಕಮಿಶನ್ ಪಡೆದಿದ್ದಾನೆ.   

 

ಜಾಲಹಳ್ಳಿ ವೃತ್ತದ ಬಳಿ ಸುರಭಿ ಸೌಹಾರ್ದ ಸಹಕಾರಿಯನ್ನು ತಮ್ಮ ಪತ್ನಿಯ ಮೂಲಕ ಸ್ಥಾಪಿಸಿ ಅದರ ನಿರ್ವಹಣೆ ಮಾಡಲಾಗದೆ ಬೇರೆಯವರಿಗೆ ಕೊಟ್ಟಿದ್ದಾನೆ.  

 

 

೮. ಇದೂ ಒಂದು ಗ್ರಹಚಾರ: ಸಹಚರ – ಸಹಕಾರ ಅಭಿವೃದ್ಧಿ ಸಂಘಟನೆ, ಸಿಂಧನೂರು 

 

ಈ ಸಂಸ್ಥೆಯು ಜೈವಿಕ ಇಂಧನ ಸಂಶೋಧನೆಗಾಗಿ ಹುಟ್ಟಿಕೊಂಡಿದ್ದು ಈ ಸಂಸ್ಥೆ ಸದ್ಯ ಯಾವುದೇ ಹೆಚ್ಚಿನ ಮುನ್ನಡೆ ಸಾಧಿಸಿಲ್ಲ. ಸೌಹಾರ್ದ ಕಾಯ್ದೆಯಡಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸಣ್ಣ ಸಣ್ಣ ಸಹಕಾರಿ ಸಂಸ್ಥೆಗಳನ್ನು ಪ್ರಾಯೋಜಿಸುವುದೂ ಮತ್ತು ಅವುಗಳಿಗೆ ಬೇಕಾದ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದು ಇದರ ಒಂದು ಉದ್ದೇಶ. ಅಂದಾಜು ೨೫ ಸಹಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಲಾಗಿದೆ. ಸದ್ಯಕ್ಕೆ ಇದರ ಚಟುವಟಿಕೆಗಳೇನೂ ಇಲ್ಲ. 

 

೯. ನ್ಯಾಷನಲ್ ಯುವಾ ಕೋ-ಆಪರೇಟಿವ್ ನಿ., ದೆಹಲಿ

 

ದಿಲ್ಲಿಗೆ ಹೋಗಿಬರಲು ಕೆಲವು ಸಲ ಈ ಸಂಸ್ಥೆಯ ಸ್ಥಾನವನ್ನು ಬಳಸಿಕೊಳ್ಳುತ್ತಿದ್ದಾನೆ, ನಮ್ಮ ಶಾಣ್ಯಾ ಮಸ್ಕಿ. 

 

೧೦. ಟ್ಯಾಫ್‌ಕಬ್ (ಟಾಸ್ಕ್ ಫೋರ್ಸ್ ಆನ್ ಅರ್ಬನ್ ಬ್ಯಾಂಕ್ಸ್), ಭಾರತೀಯ ರಿಸರ್ವ್ ಬ್ಯಾಂಕ್ ಸದಸ್ಯ

 

ಈ ಕಾರ್ಯಪಡೆಯು ಬೆಂಗಳೂರಿನಲ್ಲೇ ಸಭೆ ಸೇರುತ್ತದೆ. ರಾಜ್ಯದ ಅರ್ಬನ್ ಬ್ಯಾಂಕುಗಳ ಬಗ್ಗೆ ಈ ಸಭೆಯು ಕಾಲಕಾಲಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಇಲ್ಲಿನ  ಸ್ಥಾನವನ್ನು ತಾನು ರಿಸರ್ವ್ ಬ್ಯಾಂಕಿನ ಭಾಗ ಎಂದು ಬಿಂಬಿಸಿಕೊಂಡು ಸಹಕಾರಿ ಸಂಸ್ಥೆಗಳಿಗೆ ತಪ್ಪಾಗಿ ಬಿಂಬಿಸುತ್ತಿದ್ದಾನೆ; ಜನರನ್ನು ಮರುಳು ಮಾಡುವುದಕ್ಕೆ ಇವೆಲ್ಲ ಬೇಕಲ್ಲ…. 

 

ಮನೋಹರ ಮಸ್ಕಿ ಉತ್ತರಿಸುತ್ತಾನಾ? ನೀವೇ ಕೇಳಿ: 

 

೧) ಸಿಫಿನ್ ಸಂಸ್ಥೆಯಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿಯು ಭಾಗಿಯಾಗಿದೆಯೆ? ಇಲ್ಲವೆ? ಇದೆ ಎಂದರೆ ಸಿಫಿನ್ ಸಂಸ್ಥೆಗೂ ಸಂಯುಕ್ತ ಸಹಕಾರಿಗೂ ಸಂಬಂಧ ಇಲ್ಲವೆಂದು ಹೇಳಿದ್ದಾರೆ ಎಂಬ ಮಾತಿದೆ. ಇದು ಯಾಕೆ? ಒಂದುವೇಳೆ ನಿಜಕ್ಕೂ ಸಂಬಂಧವೇ ಇಲ್ಲವಾದರೆ ಮನೋಹರ ಮಸ್ಕಿ ಯಾವ ಸಹಕಾರಿ ಸ್ಥಾನಮಾನದ ನಾತೆಯಲ್ಲಿ ಸಿಫಿನ್‌ನ ಮುಖ್ಯಸ್ಥನಾಗಿದ್ದಾನೆ? ಅವನ ಸ್ಥಾನಕ್ಕೆ ಕಾನೂನಿನ ಬೆಂಬಲ ಇದೆಯೆ? 

 

೨) ಸಿಫಿನ್ ಸಂಸ್ಥೆಯು ಕರ್ನಾಟಕ ಕೆಮಿಸ್ಟ್ಸ್ ಫೌಂಡೇಶನ್‌ಗೆ ೮೦ ಲಕ್ಷ ರೂ. ಹಣವನ್ನು ನೀಡಿದ್ದಕ್ಕೆ ಯಾವ ಅಧಿಕೃತ ಮಾನ್ಯತೆ ಇದೆ? ಈ ಸಾಲ ನೀಡಿಕೆ (ಅಥವಾ ಒಪ್ಪಂದದ ಪ್ರಕಾರ ಪಾವತಿ)ಯ ದಾಖಲೆ ಏನು ಹೇಳುತ್ತದೆ? ಈ ಹಣ ಪಾವತಿಗೆ ಸಿಫಿನ್‌ನ ನಿರ್ದೇಶಕ ಮಂಡಳಿಯು ಒಪ್ಪಿತ್ತೆ? ಯಾವಾಗ ಈ ಸಭೆ ನಡೆಯಿತು? ಈ ಹಣದ ಬಾಕಿ ಮರುಪಾವತಿ ಆಗುತ್ತಿದೆಯೆ? ಇಲ್ಲವಾದರೆ ಯಾಕೆ? ಇಷ್ಟಕ್ಕೂ ಹೀಗೆ ಹಣ ನೀಡುವುದಕ್ಕೆ ಸಿಫಿನ್‌ನ ನಿಯಮಾವಳಿಗಳಲಿ,(ಎಂ ಓ ಎ) ಕಂಪನಿ ಕಾಯ್ದೆಯಡಿ ಹಾಗೂ ರಿಸರ್ವ ಬ್ಯಾಂಕಿನ ನಿಯಮಾವಳಿಗಳಡಿ ಅವಕಾಶವಿದೆಯೆ? 

 

೩) ಸಿಫಿನ್‌ಗೂ – ಮೋತಿಲಾಲ್ ಓಸ್ವಾಲ್ ಸಂಸ್ಥೆಗೂ ಈ ಮೊದಲು ಆಗಿದ್ದ ವ್ಯಾಪಾರ ಒಪ್ಪಂದವು ಮುರಿದು ಬೀಳಲು ಕಾರಣವೇನು? ಈಗ ಹೇಮ್ ಸೆಕ್ಯುರಿಟೀಸ್ ಸಂಸ್ಥೆಯ ಜೊತೆಗೆ ನಡೆದಿರುವ ಒಪ್ಪಂದದ ಮಾಹಿತಿಯನ್ನು ಸದಸ್ಯ ಸಹಕಾರಿಗಳಿಗೆ ನೀಡಿದ್ದಾನೆಯೆ? 

 

೪) ಸಿಫಿನ್ ವ್ಯವಹಾರಗಳಿಗೆ ಸಹಕಾರಿಗಳಿಂದ ಹೇಮ್ ಸೆಕ್ಯುರಿಟೀಸ್ ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ತೆಗೆದು, ಸೌಹಾರ್ದ ಸಂಯುಕ್ತ ಸಹಕಾರಿಯ ರಸೀದಿ ನೀಡಿರುವುದು ನಿಜವೆ? ಯಾಕೆ? ಸೌಹಾರ್ದ ಸಂಯುಕ್ತ ಸಹಕಾರಿಗೆ ಸಂಬಂಧ ಇರದೇ ಇದ್ದರೆ ಹೀಗೆ ಸಂಯುಕ್ತ ಸಹಕಾರಿಯಿಂದ ರಸೀತಿ ನೀಡಿದ್ದು ಎಷ್ಟು ಸರಿ? 

 

೫) ಸಿಫಿನ್‌ಗೂ ಸಂಯುಕ್ತ ಸಹಕಾರಿಗೂ ಸಂಬಂಧ ಇಲ್ಲದಿದ್ದರೂ ಈ ವ್ಯವಹಾರಕ್ಕೆ ಸಂಯುಕ್ತ ಸಹಕಾರಿಯೇ ವಿಸ್ಯಾಟ್ ಸೇವೆಯನ್ನು ಸ್ಥಾಪಿಸುವುದಾಗಿ ಹೇಳಿರುವುದು ಎಷ್ಟು ನ್ಯಾಯಸಮ್ಮತ? ಸಂಯುಕ್ತ ಸಹಕಾರಿಯು ಈ ಸಹೋದ್ಯಮದ ಸಂಸ್ಥೆಯನ್ನು ಸೇರುವ ಅಧಿಕಾರ ಸೌಹಾರ್ದ ಸಹಕಾರ ಕಾಯ್ದೆಯಲ್ಲಿ ಇದೆಯೆ?

 

೬) ಸಿಫಿನ್ ಹೇಳಿಕೇಳಿ ಸಹಕಾರಿಗಳ ಸಹೋದ್ಯಮ. ಹಾಗಿದ್ದೂ ಅಮರೇಗೌಡ ಎಂಬ ಖಾಸಗಿ ವ್ಯಕ್ತಿಯ ಹೂಡಿಕೆಗೆ ರಿಲೇಶನ್‌ಶಿಪ್ ಮ್ಯಾನೇಜರ್ ಆಗಿ ಸಿಫಿನ್‌ನನ್ನು ನೇಮಿಸಲಾಗಿದೆ. ಹೀಗೆ ನೇಮಿಸಿದ್ದು ಹೇಮ್ ಸೆಕ್ಯುರಿಟೀಸ್. ಇದಕ್ಕೆ ಯಾವ ಬಗೆಯ ಕಾನೂನಿನ ರಕ್ಷಣೆ ಇದೆ? 

 

೭) ಸ್ಯಾಪ್ – ಕೆ ಸಂಸ್ಥೆಯ ಸಂಪರ್ಕ ವ್ಯಕ್ತಿಯಾಗಿ ವಿದ್ಯಾರ್ಥಿಯಾಗಿರುವ ತನ್ನ ಮಗನನ್ನೇ ನೇಮಿಸಿದ ಕ್ರಮ ಎಷ್ಟು ಕಾನೂನುಬದ್ಧವಾಗಿದೆ? ಈ ಸಂಸ್ಥೆಯ ಲೆಕ್ಕಪತ್ರಗಳೇನು? 

 

೮) ಸಂಯುಕ್ತ ಸಹಕಾರಿಯು ಪಾವತಿ ಮಾಡುತ್ತಿರುವ ಮನೆ ಬಾಡಿಗೆ ಹಣವನ್ನು ಬಾಲಕೃಷ್ಣ ಎಂಬವರ ಹೆಸರಿಗೆ ಪಡೆದು ಕೂಡಲೇ ಕಚೇರಿಯ ಉಪಸಿಬ್ಬಂದಿಯ ಮೂಲಕ ನಗದೀಕರಿಸಿ ಹಣ ಪಡೆಯುತ್ತಿರುವುದು ನಿಜವೆ? ಈ ಪಾವತಿಯನ್ನು ಯಾವುದಕ್ಕೆ ಬಳಸಿಕೊಂಡಿದ್ದಾರೆ? 

 

೯) ಸಿಫಿನ್‌ಗೂ ಸಂಯುಕ್ತ ಸಹಕಾರಿಗೂ ಸಂಬಂಧ ಇಲ್ಲದಿದ್ದರೂ ಸಿಫಿನ್ ನೌಕರರೊಬ್ಬರನ್ನು ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಅಧಿಕ ಪ್ರಭಾರ ನೀಡಿದ್ದು ಏಕೆ? ಸಂಬಂಧವಿಲ್ಲದ ವ್ಯಕ್ತಿಗೆ ಸಂಯುಕ್ತ ಸಹಕಾರಿಯಂತಹ ಶಾಸನಬದ್ಧ ಸಂಸ್ಥೆಯ ಅತಿ ಪ್ರಮುಖ ಹುದ್ದೆಯ ಪ್ರಭಾರ ನೀಡುವುದು ಕಾಯ್ದೆ, ನಿಯಮಗಳಿಗೆ ಅನುಸಾರವಾಗಿದೆಯೇ?

 

ಸಿಫಿನ್ ಮತ್ತು ಕರ್ನಾಟಕ ಕೆಮಿಸ್ಟ್ ಫೌಂಡೇಶನ್: ೮೦ ಲಕ್ಷ ರೂ. ಹಗರಣದ ವಿವರಗಳು 

 

 1. ಕರ್ನಾಟಕ ಕೆಮಿಸ್ಟ್ಸ್ ಎಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್ (ಕೆ ಸಿಡಿ ಎ) ಎಂಬ ಸಂಸ್ಥೆಯು ರಾಜ್ಯದ ಕೆಮಿಸ್ಟ್‌ಗಳ ಸಂಘಟನೆ. ಈ ಸಂಘಟನೆಯು ಕರ್ನಾಟಕ ಸೊಸೈಟೀಸ್ ಕಾಯ್ದೆಯಡಿ ನೋಂದಣಿಯಾಗಿದೆ. 
 2. ಈ ಸಂಸ್ಥೆಯ ಮುಖ್ಯಸ್ಥರಾಗಿ ದುಡ್ಡೋಡಗಿ ಮತ್ತು ಇತರರು ಇದ್ದಾರೆ. 
 3. ಈ ಸಂಸ್ಥೆಯು ಯಾವುದೇ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಡಲಾಗಿತ್ತು. 
 4. ಹೀಗಿದ್ದೂ ಈ ದುಡ್ಡೋಡಗಿ ಮತ್ತು ಇತರರು ೨೦೦೫ರಲ್ಲಿ ಕರ್ನಾಟಕ ಕೆಮಿಸ್ಟ್ಸ್‌ಫೌಂಡೇಶನ್ (ಕೆ ಸಿ ಎಫ್) ಎಂಬ ಟ್ರಸ್ಟನ್ನು ಈ ಕೆ ಸಿ ಡಿ ಎ ಸಂಸ್ಥೆಯ ೧.೦೨ ಕೋಟಿ ರೂ.ಗಳ ಫಿಕ್ಸೆಡ್ ಡಿಪಾಸಿಟ್ ಹಣವನ್ನು ಸದಸ್ಯರ ಗಮನಕ್ಕೆ ತರದೆಯೇ, ಸಾಮಾನ್ಯ ಸಭೆಯ ನಡಾವಳಿಗಳನ್ನು ಫೋರ್ಜರಿ ಮಾಡಿ ಸ್ಥಾಪಿಸಿದರು ಎಂಬ ಆರೋಪದ ಮೇಲೆ ಆರೋಪಪಟ್ಟಿ ದಾಖಲಾಗಿದ್ದು ದಾವೆ ನಡೆದಿದೆ. 
 5. ಈ ಫೌಂಡೇಶನ್ ಮೂಲಕ (೧.೦೨ ಕೋಟಿ ರೂ. ಹಣವನ್ನು ಬಳಸಿ) ಸಾಹಿತಿ ದಿ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರಿಗೆ ಸೇರಿದ ನಿವೇಶನವನ್ನು ಗೊರೂರರ ಮಕ್ಕಳಿಂದ ಖರೀದಿಸಿದರು. 
 6. ಈ ಬಗ್ಗೆ ಕೆ ಸಿ ಡಿ ಎ ಸಂಸ್ಥೆಯ ಕೆಲವು ಸದಸ್ಯರು ಆಕ್ಷೇಪ ಎತ್ತಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಆಗ ಸೆಂಟ್ರಲ್ ಕ್ರೈಮ್‌ಬ್ರಾಂಚ್‌ನವರು ತನಿಖೆ ನಡೆಸಿ ಚಾರ್ಜ್‌ಶೀಟ್ ಹಾಕಿದರು. ಈ ಚಾರ್ಜ್‌ಶೀಟನ್ನು ರದ್ದು ಮಾಡಲು ದುಡ್ಡೋಡಗಿ ಮತ್ತಿತರರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯು ತಿರಸ್ಕೃತವಾಗಿ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಲು ಕೋರ್ಟ್ ಆದೇಶ ನೀಡಿತು. 
 7. ಈ ದಾವೆಯಲ್ಲಿ ದುಡ್ಡೋಡಗಿ ಮತ್ತು ಇತರರು ೫೦ಲಕ್ಷ ರೂ.ಗಳ ಜಾಮೀನು ನೀಡಿ ಬಿಡುಗಡೆಯಾದರು. ಅಲ್ಲದೆ ಕ್ರಿಮಿನಲ್ ದಾವೆ ಕ್ರಮಗಳ ಜಾರಿ ವಿರುದ್ಧ ಹೈಕೋರ್ಟ್‌ನಿಂದ ತಡೆ ತಂದರು. ಈಗಲೂ ಈ ದಾವೆ ವಿಚಾರಣೆಯಲ್ಲಿದೆ. 
 8. ಈ ಮಧ್ಯೆ, ೨೦೦೮ರ ಮಾರ್ಚ್‌ನಲ್ಲಿ ಕರ್ನಾಟಕ ಕೆಮಿಸ್ಟ್ ಫೌಂಡೇಶನ್ ವತಿಯಿಂದ ೧.೨೦ ಕೋಟಿ ರೂ.ಗಳನ್ನು ಕೆ ಸಿ ಡಿ ಎ ಖಾತೆಗೆ ವರ್ಗಾಯಿಸಿದರು. ಈ ಹಣದಲ್ಲಿ ೮೦ ಲಕ್ಷ ರೂ.ಗಳನ್ನು ಸಿಫಿನ್‌ನಿಂದ ಪಡೆದಿದ್ದಾರೆ. 
 9. ಈ ಹಣವನ್ನು ಪಾವತಿ ಮಾಡಿದ ಬಗ್ಗೆ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದ್ದಾರೆ. ಆದ್ದರಿಂದ ಸದರಿ ದಾವೆಯ ಮೇಲೆ ಅಂತಿಮ ತೀರ್ಪು ಬರುವವರೆಗೂ ಈ ೮೦ ಲಕ್ಷ ರೂ.ಗಳು ವಾಪಸಾಗುವ ಪ್ರಶ್ನೆಯೇ ಇಲ್ಲ. 
 10. ಈ ಸಾಲವನ್ನು ನೀಡಿದ ಸಿಫಿನ್ ಸಂಸ್ಥೆಯು ಸದರಿ ಆಸ್ತಿಯ ಮೇಲೆ ಯಾವುದೇ ಋಣಭಾರ (ಬೋಜಾ ಕೂರಿಸುವುದು) ಕೂರಿಸಿಲ್ಲ ಎಂಬುದು ಸಬ್ ರಿಜಿಸ್ಟ್ರಾರ್ ಕಚೇರಿ ದಾಖಲೆಗಳಿಂದ ತಿಳಿದು ಬರುತ್ತದೆ. (ಇದು ಸೆಪ್ಟೆಂಬರ್ ೩೦ರ ಸ್ಥಿತಿ) 
 11. ದಾವೆಯಲ್ಲಿರುವ ಆಸ್ತಿಯ ಮೇಲೆ, ಕ್ರಿಮಿನಲ್ ಮೊಕದ್ದಮೆ ಎದುರಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ವ್ಯಕ್ತಿಗಳ ನೇತೃತ್ವದ ಟ್ರಸ್ಟಿಗೆ ಸಿಫಿನ್ ಸಂಸ್ಥೆಯು ತನ್ನ ಬಂಡವಾಳವನ್ನೇ ಯಾವ ಭದ್ರತೆ ಇಲ್ಲದ ಸಾಲವಾಗಿ ನೀಡಿ ಅದನ್ನು ಮುಂಗಡ ಎಂದು ತೋರಿಸಿರುವುದು ಅತ್ಯಂತ ಗಂಭೀರ ಅವ್ಯವಹಾರವಾಗಿದೆ. 
 12. ಈ ಮುಂಗಡವನ್ನು ಆಸ್ತಿಯಲ್ಲಿ ಕಟ್ಟಲಾಗುವ ಕಟ್ಟಡದ ಲೀಸ್‌ಗೆ ನೀಡಲಾಗಿದೆ ಎಂದು ಸಿಫಿನ್ ಆಡಿಟ್ ವರದಿ ಹೇಳುತ್ತದೆ. ಆದರೆ ದಾವೆ ಮುಗಿದು ಇಲ್ಲಿ ಕಟ್ಟಡ ಕಟ್ಟುವುದು ಯಾವಾಗ? 
 13. ಕೆಸಿಎಫ್ ವತಿಯಿಂದ ಈವರೆಗೂ (೧೦ ಮಾರ್ಚ್ ೨೦೦೮ರಿಂದ, ಸುಮಾರು ಆರು ತಿಂಗಳುಗಳು) ಸಿಫಿನ್‌ಗೆ ಯಾವುದೇ ಬಡ್ಡಿ, ಅಸಲು ಪಾವತಿಯಾದ ಬಗ್ಗೆ ಸಿಫಿನ್‌ನ ಮುಖ್ಯಸ್ಥರು ಮಾಹಿತಿ ಕೊಡುತ್ತಾರೆಯೆ? ಕೆಸಿಎಫ್ – ಸಿಫಿನ್ ಮುಂಗಡ ನೀಡಿಕೆ ಒಪ್ಪಂದದ ಪ್ರತಿ ಎಲ್ಲಿದೆ? ಅದರಲ್ಲಿ ಮರುಪಾವತಿ ಬಗ್ಗೆ ಏನು ಹೇಳಿದೆ? 

(ಈ ಎಲ್ಲ ಮಾಹಿತಿಗಳಿಗೂ ಕಾಗದ ಪತ್ರಗಳು ಲಭ್ಯವಿವೆ) 

 

 

Leave a Reply

Theme by Anders Norén