ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Learning Curve, a A I R Speech

ಕಲಿವ ತವಕ

This is a speech given at AIR sometime back in 2006. This is one of my pet subject and I haveeven prepared a session on this. Interested people can contact me.

ನಮ್ಮ ಬದುಕು ಸಂಕೀರ್ಣವಾಗಿದೆ, ಎಲ್ಲೆಡೆ ಮಾಹಿತಿಸೋಟವಾಗಿದೆ, ಜಗತ್ತು ಬಹುಬೇಗ  ಬದಲಾಗುತ್ತಿದೆ. ಉದ್ಯಮಗಳು ಶರವೇಗದಲ್ಲಿ ಬೆಳೆಯುತ್ತಿವೆ; ಬದಲಾಗುತ್ತಿವೆ. ವಸುಧೆಯೇ ಒಂದು ಕುಟುಂಬ ಎಂದು ನಮ್ಮ ಹಿರಿಯರು ಹೇಳಿದ ಮಾತು ನಿಜವಾಗುತ್ತಿದೆ. ವಿಶ್ವವೇ ಗ್ರಾಮವಾಗಿದೆ. ಸಮಾಜದಲ್ಲಿ ಸಂಸ್ಕೃತಿ, ಪರಂಪರೆಯ ಪರಿಕಲ್ಪನೆಗಳೇ ಚಹರೆ ಬದಲಿಸಿಕೊಂಡಿವೆ.
ಉದ್ಯಮೀಕರಣದ ರಭಸದಿಂದ ನಮ್ಮ ಸಮಾಜವು ತತ್ತರಿಸಿದೆ.  ಮಾಹಿತಿಯ ಸೋಟಕ್ಕೆ ನಾವಿನ್ನೂ ಸಜ್ಜಾಗಿಲ್ಲ. ಇರುವ ಸಾಂಪ್ರದಾಯಿಕ ಉದ್ಯೋಗಾವಕಾಶಗಳು  ಕಡಿಮೆಯಾಗುತ್ತಿವೆ. ಹೊಸ ಕೆಲಸಗಳು ಹುಟ್ಟಿಕೊಂಡಿವೆ. ಇವತ್ತಿನ ಸಂಗೀತ ಜಗತ್ತನ್ನೇ ನೋಡಿ. ಯುವಕರು ಸಂಗೀತದ ಕಡೆಗೆ ಒಲವು ತ ಓರುತ್ತಿದ್ದಾರೆ. ಆದ್ದರಿಂದಲೇ ಸಂಗೀತರಂಗದ ಕುರಿತು ಮಾಹಿತಿ ತಂತ್ರ eನದ ಆವಿಷ್ಕಾರಗಳೂ ಹೆಚ್ಚಾಗಿವೆ.
ಹಾಗಾದರೆ ನಾವು ಇವತ್ತು ಏನು ಕಲಿಯಬೇಕು? ಏನನ್ನು ಕಲಿಯುವ ಅಗತ್ಯವಿಲ್ಲ ಎಂದು ಯೋಚಿಸಬೇಕಲ್ವೆ? ಯಾವುದನ್ನು ಎಷ್ಟು ಕಲಿಯಬೇಕು, ಎಲ್ಲಿ, ಯಾರಿಂದ ಕಲಿಯಬೇಕು, ಅದನ್ನು ಹೇಗೆ ಬಳಸಿಕೊಳ್ಳಬೇಕು – ಎಲ್ಲವೂ ನಮ್ಮ ಮುಂದೆ ಈಗ ಇರುವ ಪ್ರಶ್ನೆಗಳು.
ಹಾಗಂತ ನಾವು ವಿದ್ಯಾರ್ಥಿಗಳಾಗಿದ್ದಾಗ    ಕಲಿತದ್ದು ಸುಳ್ಳೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ನಿಜ. ಶಾಲೆ – ಕಾಲೇಜುಗಳಲ್ಲಿ ನಾವು ಅನೇಕ ಸಂಗತಿಗಳನ್ನು ಓದಿದ್ದೇವೆ. ಪರೀಕ್ಷೆ ಬರೆದು ಪಾಸಾಗಿದ್ದೇವೆ. ಆದರೆ ಅವೆಲ್ಲವೂ ನನ್ನ ದೃಷ್ಟಿಯಲ್ಲಿ ತಿಳಿದುಕೊಂಡ ವಿಷಯಗಳೇ ಹೊರತು ಕಲಿತ ವಿಷಯವಲ್ಲ. ನಮಗೆ ಪಟ್ಟಕದ, ಬೆಳಕಿನ ವಿಭಜನೆಯ ಬಗ್ಗೆ ಪಾಠ ಕಲಿತಮೇಲೆ ಬದುಕಿನಲ್ಲಿ ಪಟ್ಟಕ ಬರುವುದೇ ಇಲ್ಲ ಎಂದು ಇತ್ತೀಚೆಗೆ ಭಾಷಣ ಮಾಡುತ್ತ ಹಿರಿಯ ಪತ್ರಕರ್ತ ನಾಗೇಶ ಹೆಗಡೆಯವರು ಅಚ್ಚರಿಪಟ್ಟಿದ್ದರು. ಅಂಥ ಅನೇಕ ಸಂಗತಿಗಳು ನಮ್ಮ ಬದುಕಿನಲ್ಲಿ ಮತ್ತೆ ಬಳಕೆಯಾಗುವುದೇ ಇಲ್ಲ. ಆದರೆ ಕಾಮನಬಿಲ್ಲಿನ ಬಗ್ಗೆ ಕವನ ಬರೆಯುವಾಗ, ಅದನ್ನು ಕಂಪ್ಯೂಟರಿನಲ್ಲಿ ಚಿತ್ರಿಸುವಾಗ  ಈ ಕಲಿಕೆ ಹಿನ್ನೆಲೆಯಲ್ಲಿ ನೆರವು ನೀಡುತ್ತದೆ.  ಓದಿದ ಸಂಗತಿಗಳೆಲ್ಲವೂ ಕಲಿತ ವಿಷಯಗಳು ಎಂಬ ತಪ್ಪು ಕಲ್ಪನೆಯಿಂದ ಮೊದಲು ಹೊರಗೆ ಬನ್ನಿ. ಶಾಲೆ ಕಾಲೇಜುಗಳಲ್ಲಿ ತಿಳಿದ ಸಂಗತಿಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದೇ ನಿಜವಾದ ಕಲಿಕೆ. ಬದುಕಿನ ಬಟಾಬಯಲಿನಲ್ಲಿ ನಿಂತು ನೋಡಿ. ಬದುಕು ನಮಗೆ ಕಲಿಸುತ್ತದೆ. ಘಟನೆಗಳು ನಮ್ಮನ್ನು ತಿದ್ದುತ್ತವೆ. ವ್ಯಕ್ತಿಗಳು ನಮ್ಮ ಮೇಲೆ ಪ್ರಭಾವ ಬೀರುತ್ತಾರೆ. ದೃಶ್ಯಗಳು ನಮ್ಮ ಮನಸ್ಸಿನಲ್ಲಿ ಗೂಡು ಕಟ್ಟುತ್ತವೆ. ಮಾಹಿತಿಗಳು ನಮ್ಮ ಕುಶಲತೆಯನ್ನು ಹೆಚ್ಚಿಸುತ್ತವೆ. ಕಲಿಯುವ ಈ ವೈವಿಧ್ಯಮಯ ಜಗತ್ತು ನಿಮ್ಮನ್ನು ಕ್ಷಣಕ್ಷಣವೂ ಕೈ ಬೀಸಿ ಕರೆಯುತ್ತದೆ. ಕಲಿಯುವುದು ಬಿಡುವುದು ನಿಮಗೆ ಬಿಟ್ಟಿದ್ದು.
ಹೀಗೆ ಕ್ಷಣಕ್ಷಣವೂ ನಾವು ಕಲಿಯುತ್ತ ಹೋಗುವುದಕ್ಕೆ ಬೇಕಾದ ಭಾವಾಸಕ್ತಿಯನ್ನು ಬೆಳೆಸಿಕೊಳ್ಳುವುದೇ ಕಲಿವ ತವಕ. ಇದನ್ನು ಸಾಮಾನ್ಯವಾಗಿ ಲರ್ನಿಂಗ್ ಕರ್ವ್ ಎಂದು ಕರೆಯುತ್ತಾರೆ. ಈ ಕಲಿವ ತವಕಕ್ಕೆ ವಯಸ್ಸಿನ ಹಂಗಿಲ್ಲ. ೭೫ರ ಅಜ್ಜಿ ಭಗವದ್ಗೀತೆ ಕಲಿಯುವುದಕ್ಕಾಗಿ ಕನ್ನಡ ಬರೆಯಲು ಓದಲು ಕಲಿತಿದ್ದನ್ನು ನಾನು ಕಂಡಿದ್ದೇನೆ. ಮನೆಯಲ್ಲಿ ಮಕ್ಕಳ ಹೊಣೆಗಾರಿಕೆ ಮುಗಿದ ಮೇಲೆ ಸುಮ್ಮನಿರುವ ಬದಲು ಎರಡು ಮೂರು ಸ್ನಾತಕೋತ್ತರ ಡಿಗ್ರಿಗಳನ್ನು ದೂರಶಿಕ್ಷಣದಲ್ಲಿ ಮಾಡಿದ ಅಜ್ಜಿಯರೂ ನಮ್ಮ ನಡುವೆ ಇದ್ದಾರೆ. ವಿದೇಶದಲ್ಲಿ ಇರುವ ಮಕ್ಕಳ ಜೊತೆ ಪತ್ರ ವ್ಯವಹಾರ ಮಾಡಲು ಕಂಪ್ಯೂಟರ್ ಕಲಿತ ವೃದ್ಧ ದಂಪತಿಗಳನ್ನು ನಾನು ಬಲ್ಲೆ. ಹಾಗೆಯೇ ತಂದೆಯ ಸಂಗೀತಪಾಠಗಳನ್ನು ಮನಸ್ಸಿನಲ್ಲೇ ಕರಗಿಸಿ ರಾಗಗಳನ್ನು ಕರಗತ ಮಾಡಿಕೊಂಡ ನಾಲ್ಕರ ಪೋರನೂ ನನಗೆ ಗೊತ್ತು.
ಕಲಿವ ತವಕಕ್ಕೆ ಇನ್ನೂ ಒಂದು ವಿವರಣೆ ನೀಡಬಹುದು. ನಮ್ಮ ಕರ್ತವ್ಯದ ಭಾಗವಾದ ಕಚೇರಿ ಕೆಲಸಗಳ ಹೊರತಾಗಿ ಇನ್ನೊಂದು ಅಥವಾ ಹೆಚ್ಚಿನ ವಿಷಯಗಳನ್ನು ಗಂಭೀರವಾಗಿ ಕಲಿಯುವುದು ನಿಜವಾದ ಕಲಿವ ತವಕ. ಅಷ್ಟೇ ಅಲ್ಲ, ನಮ್ಮ ಕೆಲಸಕ್ಕೆ ಬೇಕಾದ ನೈಪುಣ್ಯವನ್ನೂ ಗಳಿಸಿಕೊಳ್ಳುವುದು ಕಲಿವ ತವಕವಾಗುತ್ತದೆ. ಟೈಪಿಸ್ಟ್ ಕಂಪ್ಯೂಟರ್ ಕಲಯುವುದು, ಲೆಕ್ಕಾಕಾರಿಯು ಲೆಕ್ಕಪತ್ರ ತಂತ್ರಾಂಶವನ್ನು ಕಲಿಯುವುದು, ನಟಿಯು ಕುದುರೆ ಸವಾರಿಯನ್ನು ಕಲಿಯುವುದು ಇವೆಲ್ಲವೂ ವೃತ್ತಿಸಂಬಂತ ಕಲಿಕೆಯ ಪುಟ್ಟ ಉದಾಹರಣೆಗಳು.
ಕೇವಲ ಕಂಪ್ಯೂಟರ್ ರಂಗದಲ್ಲೇ ಕಲಿಯವ ಸಂಗತಿಗಳ ದೊಡ್ಡ ಪಟ್ಟಿಯೇ ಇದೆ. ಕಲಾವಿದರು, ಸಾಹಿತಿಗಳು, ತಂತ್ರಜ್ಞರು, ಎಲ್ಲರಿಗೂ ಕಂಪ್ಯೂಟರಿನಲ್ಲಿ  ಇರುವ ಅನುಕೂಲ ಗೊತ್ತಾಗುತ್ತಿದೆ. ಹಾಗೆ ನೋಡಿದರೆ  ಇಂದು ಕಂಪ್ಯೂಟರ್ ನಮ್ಮ ಕಲಿವ ತವಕಕ್ಕೆ ಹೆಚ್ಚು ಉತ್ಸಾಹ ತುಂಬುತ್ತಿದೆ; ಕಲಿಕೆಯ ಶಿಸ್ತನ್ನೂ ಹೇಳಿಕೊಡುತ್ತಿದೆ ಎಂಬುದು ನನ್ನ ಅನಿಸಿಕೆ.
ಅಂದವಾಗಿ ಬರೆಯುವ ಶಿಕ್ಷಕ – ಶಿಕ್ಷಕಿಯರು ಮಕ್ಕಳ ಮೇಲೆ ಪರಿಣಾಮ ಬೀರುತ್ತಾರೆ. ಶಾಸ್ತ್ರೀಯ ಸಂಗೀತದ ಜೊತೆಗೇ ವಿದೇಶಿ ಸಂಗೀತದ ತಿಳಿವಳಿಕೆ ಇದ್ದರೆ ಹಿನ್ನೆಲೆ ಸಂಗೀತಕ್ಕೆ ಮೆರಗು ಬರುತ್ತದೆ. ಹೀಗೆ ಕಲಿವ ತವಕವನ್ನು ಹೆಚ್ಚಿಸಿಕೊಂಡರೆ ಕೇವಲ ನಮ್ಮ ವ್ಯಕ್ತಿತ್ವವನ್ನು ಮಾತ್ರವಲ್ಲ ; ಇನ್ನೊಬ್ಬರ ವ್ಯಕ್ತಿತ್ವವನ್ನು ಬದಲಿಸಬಹುದು. ಶಿಸ್ತಿನಿಂದ ಉಡುಗೆ ಹಾಕಿಕೊಳ್ಳುವುದು, ಭಾಷಣ ಮಾಡುವುದು, ಭಾಷಣ ಮುಂತಾದ ವರದಿಗಳನ್ನು ದಾಖಲಿಸುವುದು, ಕಚೇರಿ ಕಡತಗಳನ್ನು ನಿರ್ವಹಿಸುವುದು – ಎಲ್ಲವೂ ಕಲಿಕೆಗಳೇ.
ಕಲಿವ ತವಕದಿಂದ ನಮಗೆ ಹಲವು ಪ್ರಯೋಜನಗಳಿವೆ. ಯಾಕೆಂದರೆ ಇಷ್ಟೆಲ್ಲ ಹೇಳಿಯೂ ಈ ಪ್ರಪಂಚದಲ್ಲಿ ಕಲಿಯುವವರು ಕಡಿಮೆ. ಆದ್ದರಿಂದ ಕಲಿತವರಿಗೆ ಹೆಚ್ಚಿನ ಮಾರುಕಟ್ಟೆ ಇದೆ. ನಮಗೆ ಹೆಚ್ಚಿನ ಲಾಭವಿದೆ. ಇಂದಿನ ಸಂಕೀರ್ಣ  ಜಗತ್ತಿನಲ್ಲಿ ಯಾವಾಗಲೂ ಹಳೆ ವಿಷಯಗಳನ್ನು ಮಾತ್ರವೇ ನಮ್ಮ ಬಂಡವಾಳವಾಗಿ ಇಟ್ಟುಕೊಂಡರೆ ಕೆಲಸ ಕಳೆದುಕೊಳ್ಳುತ್ತೇವೆ. ನೋಡಿ, ಈಗ ಜಗತ್ತಿನಲ್ಲಿ ಒಂದು ಸಾವಿರ ಹೊಸ ಹುದ್ದೆಗಳು ನಿರ್ಮಾಣವಾಗಿವೆ. ಕೇವಲ ಅಕಾರಿ, ಕಾರಕೂನ ಎಂಬ ಕಲ್ಪನೆಗಳು ಬಿದ್ದುಹೋಗುತ್ತಿವೆ. ಹೆಚ್ಚಿನ ಕಲಿಕೆಯಿಂದ ನಮ್ಮ ಉದ್ಯೋಗದ ಸ್ಥಾನಮಾನಗಳು ಹೆಚ್ಚುತ್ತವೆ ; ವರಮಾನವೂ ಹೆಚ್ಚುತ್ತದೆ.
ಹಾಗಾದರೆ ಕಲಿವ ತವವನ್ನು ಬೆಳೆಸಿಕೊಳ್ಳುವುದು ಹೇಗೆ?
ಮೊದಲು ನೀವು ಮಾಡಬೇಕಾದದ್ದು  ತುಂಬಾ ಸರಳ: ನಿಮ್ಮ ಸುತ್ತಮುತ್ತಲಿನ ಎಲ್ಲಾ ವಿಷಯಗಳನ್ನೂ ಆಸಕ್ತಿಯಿಂದ ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಸಿನಿಮಾ ನೋಡಿ; ಹಾಡು ಕೇಳಿ; ಆಟ ಆಡಿ; ಬಗೆಬಗೆಯ ವಿಷಯಗಳ ಮೇಲಿನ ಪುಸ್ತಕಗಳನ್ನು ಓದಿ; ಸಮುದ್ರದ ದಂಡೆಯಲ್ಲಿ ನಡೆದಾಡಿ; ಕಾಡಿನಲ್ಲಿ ಟ್ರೆಕಿಂಗ್ ಮಾಡಿ; ಸಂಗೀತ ಕೇಳಿ ಕಲಿಯುವ ಪ್ರಯತ್ನ ಮಾಡಿ; ಕಂಪ್ಯೂಟರಿನಲ್ಲಿ ಆಟ ಆಡಿ; ಪಿಕ್‌ನಿಕ್ ಹೋಗಿ, ಬೆಟ್ಟಗುಡ್ಡಗಳ ಮೇಲಿರುವ ದೇಗುಲಗಳಿಗೆ ಹೋಗಿ ನಮಸ್ಕಾರ ಹಾಕಿ; ಸಿಟಿ ಬಸ್ಸಿನಲ್ಲಿ ಕೊನೇ ಸ್ಟಾಪ್‌ವರೆಗೂ ಹೋಗಿ ಬನ್ನಿ;  ಎಡಗೈಯಿಂದ  ಬರೆಯಲು ಯತ್ನಿಸಿ…. ಪತ್ರಿಕೆಗಳನ್ನು ಓದಿ… ವಾಚಕರ ವಾಣಿ ಬರೆಯಿರಿ…… ಗಿಟಾರ್ ಬಾರಿಸಿ… ಒಟ್ಟಿನಲ್ಲಿ ಮೊದಲು ನಮ್ಮ ಕಲಿವ ತವಕವನ್ನು ಉತ್ತೇಜಿಸುವುದಕ್ಕೆ ನಮಗೇ ನಾವು ಹುಮ್ಮಸ್ಸು  ತುಂಬಿಕೊಳ್ಳುವುದಕ್ಕೆ ಇವನ್ನೆಲ್ಲ ಮಾಡಬೇಕಾಗುತ್ತೆ.  
ಒಂದು ವಿಷಯ ನೆನಪಿಡಿ: ಆಸಕ್ತಿ ಇಲ್ಲದ ವಿಷಯಗಳನ್ನು ಕಲಿಯುತ್ತೇವೆ ಎಂದು ಹೊರಡುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಒಂದಷ್ಟು ದಿನ ಈ ಥರ ಬಗೆಬಗೆಯ ವಿಷಯಗಳನ್ನು ಅನುಭವಿಸಿದ ನಂತರ ಆಮೇಲೆ ನಮ್ಮ ಆಸಕ್ತಿಯ ವಿಷಯಗಳಾವುವು ಎಂಬುದನ್ನು ಪಟ್ಟಿ ಮಾಡಿ.  ಉದಾಹರಣೆಗೆ ನನಗೆ ಟ್ರೆಕಿಂಗ್ ಕಷ್ಟ; ಹಾಗಾದರೆ ಅದನ್ನು ಬಿಟ್ಟುಬಿಡೋಣ. ನನಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ; ಬೇಡ. ನನಗೆ ಓದಲು ಇಷ್ಟ. ಮುಂದುವರಿಸೋಣ. ನನಗೆ ಹಾಡು ಹೇಳುವುದು ಇಷ್ಟ, ಮುಂದುವರಿಸೋಣ.
ಹೀಗೆ ನಮ್ಮ ಆಸಕ್ತಿಗಳನ್ನು  ಒಂದು ಪಟ್ಟಿ ಮಾಡಿ ಆ ಬಗ್ಗೆ  ಮತ್ತೆ ಹೆಚ್ಚಿ ನ ಮಾಹಿತಿಗಳನ್ನು ಕಲೆ ಹಾಕಿ.
 ಇದಕ್ಕೆಲ್ಲ ಒಂದೆರಡು ತಿಂಗಳು ಮಾತ್ರವೇ ಹಿಡಿಯುತ್ತದೆ ಎಂದು ಭಾವಿಸಬೇಡಿ. ಹಲವು ವರ್ಷಗಳ ಸತತ ಪರಿವೀಕ್ಷಣೆಯಿಂದ ಈ ಬಗ್ಗೆ , ಅಂದರೆ ನಮ್ಮ ಬಗ್ಗೆ ನಾವೇ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವುದು ಸಾಧ್ಯವಾಗುತ್ತದೆ. ಈ ಮಾಹಿತಿಗಳನ್ನು ತಿಳಿದವರು ನನ್ನ ಊರಿನಲ್ಲಿ, ನನ್ನ ಬಡಾವಣೆಯಲ್ಲಿ ಯಾರಿದ್ದಾರೆ ಅಂತ ಪಟ್ಟಿ ಮಾಡಿ. ಅವರ ಸಂಪರ್ಕ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಗುರುತು ಮಾಡಿಕೊಳ್ಳಿ. ಸಾಧ್ಯವಾದರೆ ಅವರನ್ನು ಭೇಟಿ ಮಾಡಿ. ವಿನಯದಿಂದ ಮಾತನಾಡಿ ಅವರಲ್ಲಿ ಹೆಚ್ಚಿನ ಮಾಹಿತಿಗಳು ಸಿಗುತ್ತವೆಯೇ ಎಂದು ನೋಡಿ. ಅವರಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಪುಸ್ತಕಗಳು, ಕ್ಯಾಸೆಟ್‌ಗಳು, ವಿಡಿಯೋಗಳು ಇರಬಹುದು. ಅವನ್ನು ಬಳಸಲು ಎರವಲು ಕೇಳಿ. ಅದನ್ನು ವಾಪಸು ಮಾಡದೇ ಹೋದರೆ ಅಪಾಯ ಅನ್ನೋದನ್ನ ಮರೆಯಬೇಡಿ.
ನಿಮ್ಮ ಆಸಕ್ತಿಯ ವಿಷಯವನ್ನು ಒಂದು ಹಂತದವರೆಗೆ ಕಲಿಯುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿ. ಸಾಫ್ಟ್‌ವೇರ್ ಕಲಿಯಲು, ಸಂಗೀತ ಕಲಿಯಲು, ಅಥವಾ ಕರಕುಶಲ ಕಲೆಯನ್ನು ಕಲಿಯಲು ಬೇರೆ ಬೇರೆ ಕಾಲಾವ ಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಕಾರ್ ಡ್ರೈವಿಂಗ್ ಕಲಿಯಲು ಒಂದು ವಾರ ಸಾಕು; ಆದರೆ ಕಾರಿನ ಮೆಕ್ಯಾನಿಕ್ ಆಗಲು ಎರಡು ವರ್ಷ ಬೇಕಾಗುತ್ತೆ. ಶಾಸ್ತ್ರೀಯ ಸಂಗೀತವನ್ನು ಕಲಿಯಲು ಕನಿಷ್ಟ ಹತ್ತು ವರ್ಷಗಳು ಬೇಕು. ಆದರೆ ಡಿಜಿಟಲ್ ಫೋಟೋಗ್ರಫಿ ಕಲಿಯಲು ಎರಡು ತಿಂಗಳು ಸಾಕು. ಕಂಪ್ಯೂಟರಿನಲ್ಲಿ ಎಕ್ಸೆಲ್ ವರ್ಕ್‌ಶೀಟ್  ಕಲಿಯಲು ಮೂರು ತಿಂಗಳು ಸಾಕಾಗಬಹುದು. ಆದರೆ ಕಲಾವಿದರಿಗೆ ಅನುಕೂಲವಾಗುವ ಅಡೋಬ್ ಫೋಟೋಶಾಪ್ ಕಲಿಯಲು ಎರಡು ವರ್ಷಗಳಾದರೂ ಸಾಕಾಗುವುದಿಲ್ಲ.
ಕಲಿಯುವುದಕ್ಕೆ ಸಮಯ, ಸಹನೆ ಮತ್ತು ಶಿಸ್ತು ಎಲ್ಲವೂ ಬೇಕು ಎಂಬುದನ್ನು ಗಮನದಲ್ಲಿಡಿ. ಕಲಿಯವುದು ಎಂದರೆ ಒಂದು ನಿರಂತರ ಕಾಯಕ. ಅದಕ್ಕೆ ಅದರದ್ದೇ ಆದ ಘನತೆ ಇದೆ. ಕಲಿವ ತವಕದಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೂ ಉತ್ತರ ಸಿಗುತ್ತದೆ. ವೃತ್ತಿಯ ಏಕತಾನತೆ,  ಮನೆಯಲ್ಲಿ ಇರುವ ಚಿಕ್ಕಪುಟ್ಟ ಸಮಸ್ಯೆಗಳು, ಎಲ್ಲವೂ ಈ ಕಲಿಕೆಯಿಂದ ಮರೆಯಾಗುತ್ತವೆ.
ಕಲಿಯುವುದನ್ನು ಮುಂದುವರೆಸುತ್ತ ಹೋದಂತೆ  ವಿಷಯ ನೈಪುಣ್ಯ ಹೆಚ್ಚುತ್ತದೆ. ಇದೇ ನಮ್ಮನ್ನು ಬೇರೊಂದು ಮೇಲ್ ಸ್ತರಕ್ಕೆ ಒಯ್ಯುತ್ತದೆ.  ಈಗ ವಿಷಯ ನೈಪುಣ್ಯವೇ ಒಳ್ಳೆಯ ಕೆಲಸ ಸಿಗುವ ಮತ್ತು ಸಿಕ್ಕ ಕೆಲಸದಲ್ಲಿ ಉನ್ನತಿ ಸಾಸುವ  ಪ್ರಮುಖ ಅಗತ್ಯ ಎಂಬುದನ್ನು ಮರೆಯಬೇಡಿ.
ಒಂದಕ್ಕಿಂತ ಹೆಚ್ಚು ವಿಷಯವನ್ನು ಕಲಿಯುವಾಗ ಇರಬೇಕಾದ ಕೆಲವು ಎಚ್ಚರಿಕೆಗಳನ್ನು ಗಮನದಲ್ಲಿಡಿ: ಯಾವುದಕ್ಕೆ ನಮ್ಮ ಆದ್ಯತೆ ಎಂಬುದನ್ನು ಗಮನದಲ್ಲಿಡಿ. ಸಂಗೀತ ಕಲಿಯುವಾಗ ಒಂದು ಬಗೆಯ ವಾದ್ಯವನ್ನೋ, ಪ್ರಕಾರವನ್ನೋ ಆಯ್ದುಕೊಳ್ಳಿ.  ಆಮೇಲೆ ಅದರಲ್ಲಿ ಬೇರೆ ಬೇರೆ ಕಲಿಕೆಗಳಿವೆಯೆ  ಎಂಬುದನ್ನು ಗಮನಿಸಬಹುದು. ಅದು ಮೂಲ ಕಲಿಕೆಗೆ ಪೂರಕವಾಗಿರಬೇಕು.  ಹೊರತು ನೀವು ಕಲಿತದ್ದನ್ನು ಮರೆಸುವ ಹಾಗಿರಬಾರದು. ಹಾಗಾದಾಗ ಆವರೆಗೆ ಕಲಿತದ್ದೆಲ್ಲ ವ್ಯರ್ಥವಾಗುತ್ತದೆ.
ನಾವು ಕಲಿಯುವ ವಿಷಯವು ನಮ್ಮ ವೃತ್ತಿಗೆ ಪೂರಕವಾಗಿದ್ದಷ್ಟೂ ಒಳ್ಳೆಯದು. ಹಾಗಂತ ಶಿಕ್ಷಕರು ಒಳ್ಳೆಯ ಟ್ಯೂಶನ್ ಕೊಡುವುದನ್ನು ಕಲಿಯುವುದು ಕಲಿಕೆಯಾಗುವುದಿಲ್ಲ.  ಆದರೆ ಕಚೇರಿ ನಿರ್ವಹಣೆ ವಿಷಯ ಕಲಿಯುವಾಗ ದೂರವಾಣಿ ಸಂಭಾಷಣೆ ಮಾಡುವುದು ಹೇಗೆ ಎಂದು ಕಲಿಯುವುದು ಒಳ್ಳೆಯದು; ಪೂರಕವೂ ಹೌದು.
ಕಲಿವ ತವಕಕ್ಕೆ ಬೇಕಾಗುವ ಕೆಲವು ಪರಿಕರಗಳನ್ನು ಜೋಡಿಸಿಕೊಳ್ಳಿ. ನಿಮ್ಮ ದಿನಚರಿ ಪುಸ್ತಕವನ್ನು ತೆರೆದು ಅದರಲ್ಲಿ ನೀವು ಪ್ರತಿ ದಿನದಲ್ಲಿ, ತಿಂಗಳಿನಲ್ಲಿ, ಮತ್ತು ಇಡೀ ವರ್ಷದಲ್ಲಿ ಮಾಡಲು ಹಾಕಿಕೊಂಡಿರುವ ಕಲಿಕೆಯ ಗುರಿಗಳನ್ನು ಬರೆಯಿರಿ. ಅದನ್ನು ಆಗಾಗ ನೋಡುತ್ತಿರಿ. ಕಲಿಕೆಯಲ್ಲಿ ಹಿಂದೆ ಬಿದ್ದರೆ ಅದು ನಿಮ್ಮನ್ನು ಎಚ್ಚರಿಸುತ್ತದೆ. ನಿಮ್ಮ ರೂಮಿನಲ್ಲಿ ಕಲಿಯುವ ಬಗ್ಗೆ ಒಂದು ಪೋಸ್ಟರ್ ಅಂಟಿಸಿ ಅದನ್ನು ಎದ್ದಕೂಡಲೇ ನೋಡಿ.  ನಿಮ್ಮ ಹಾಗೆಯೇ ಸಮಾನ ಆಸಕ್ತಿಗಳಿರುವ ಹಾಗೂ ಕಲಿಯುತ್ತಿರುವ ವ್ಯಕ್ತಿಗಳ ಹೆಚ್ಚಿನ ಸ್ನೇಹ – ಸಹವಾಸ ಹೆಚ್ಚು ಮಾಡಿ. ಅವರಿಂದ ನೀವು ಮತ್ತು ನಿಮ್ಮಿಂದ ಅವರು ಹೆಚ್ಚಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಕಲಿವ ರಭಸ  ಹೆಚ್ಚುತ್ತದೆ.  ಪ್ರತಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ನೀವು ಕಲಿತದ್ದೇನು ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಿ. ವಿಫಲತೆಯೇನೂ ತಪ್ಪಲ್ಲ. ಮರಳಿ ಯತ್ನವ ಮಾಡು ಎಂಬ ಮಾತು ನೆನಪಿರಲಿ.
ಕಲಿಯವುದಕ್ಕೆ ಬೇಕಾಗಿರುವ ಒಂದು ಪ್ರಮುಖ ಗುಣ ಅಂದರೆ ಸಹಿಷ್ಣುತೆ. ಏನಾದರೂ ಬರಲಿ, ನಾನು ಇದನ್ನು ಕಲಿತೇ ಕಲಿಯುತ್ತೇನೆ ಎಂಬ ತೀವ್ರ ಭಾವಾಸಕ್ತಿಗೆ ನೀವು ಒಳಗಾಗಬೇಕು. ಹಾಗಾದಾಗಲೇ ಕಲಿಕೆ ಸಾಧ್ಯ. ೨೧ ವರ್ಷ  ಚೀನಾದ ಕಾರ್ಮಿಕ ಶಿಬಿರದಲ್ಲಿ ಕಳೆ ಹುಲ್ಲಿನ ಸಾರನ್ನೇ ಕುಡಿದು ಕಳೆದ ಝಾಂಗ್‌ಶಾನ್‌ಲಿಯಾಂಗ್, ೩೧ ವರ್ಷ ಸೆರೆಮನೆವಾಸ, ಚಿತ್ರಹಿಂಸೆ ಅನುಭವಿಸಿದ ಟಿಬೆಟನ್ ಭಿಕ್ಷು ಪಾಲ್ದೆನ್  ಗ್ಯಾತ್ಸೋ, ಮುಂದೆ ತಮ್ಮ ಅನುಭವವನ್ನೆಲ್ಲ ನೆನಪಿಟ್ಟುಕೊಂಡು ಬರೆದರು. ತಮ್ಮ ಯಾತನೆಯನ್ನು ಹೊರಜಗತ್ತಿಗೆ ವಿವರಿಸಲೇಬೇಕೆಂಬ ತೀವ್ರತೆ ಇದ್ದಿದ್ದೇ  ಅವರ  ಬರವಣಿಗೆ ಶ್ರೇಷ್ಠವಾಗಲು ಕಾರಣ. ಕಣ್ಣು ಕಳೆದುಕೊಂಡ ಇತಿಹಾಸ ಸಂಶೋಧಕ ವಿಲಿಯಂ ಪ್ರೆಸ್ಕಾಟ್ ತನ್ನೊಳಗೇ ಮಾಹಿತಿಯನ್ನು ಮಥಿಸಿ ಮಥಿಸಿ ಬರೆದ ಪೆರು ದೇಶದ ಇತಿಹಾಸದ ಗ್ರಂಥ ಇಂದಿಗೂ ಅತ್ಯಂತ ಕರಾರುವಾಕ್ಕಾದ ದಾಖಲೆಯಾಗಿದೆ.  ನಮ್ಮ ನಡುವೆ ಇರುವ ಅತಿಶ್ರೇಷ್ಠ ವಿeನಿ ಸ್ಟೀಫನ್ ಹಾಕಿಂಗ್‌ಗೆ ಮೆದುಳೊಂದೇ ಕೆಲಸ ಮಾಡುತ್ತದೆ. ಆದರೆ ಆತ ಬ್ರಹ್ಮಾಂಡದ ಬಗ್ಗೆ ಹೊಸ ತಿಳಿವು ಕೊಡುವ ವಿeನಿಯಷ್ಟೇ ಅಲ್ಲ; ಒಬ್ಬ ಹಾಸ್ಯಪ್ರeಯ ಮನುಷ್ಯನೂ ಹೌದು. ಕನ್ನಡದಲ್ಲೇ ಬಗೆಬಗೆಯ ಗ್ರಂಥಗಳನ್ನು ಬರೆದ ಡಾ|| ಶಿವರಾಮ ಕಾರಂತರದು ನಮ್ಮ ಅತೀ ಹತ್ತಿರದ ಕಲಿವ ತವಕದ ಉದಾಹರಣೆ. ಅವರ ಹಾದಿಯಲ್ಲೇ ಮುಂದುವರಿದ ಪೂರ್ಣಚಂದ್ರ ತೇಜಸ್ವಿಯವರು ಹೊಳೆಯಲ್ಲಿ ಮೀನು ಹಿಡಿದಷ್ಟು ಸಲೀಸಾಗಿ ಕಂಪ್ಯೂಟರಿನಲ್ಲಿ ಚಿತ್ರವನ್ನೂ ಬರೆಯುತ್ತಾರೆ.
ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಹೇಳಬೇಕು. ನೀವು ಕಲಿಯುತ್ತಿರುವ ವಿಷಯದ ಬಗ್ಗೆ ಆಸಕ್ತಿ ಕಳೆದೇ ಹೋದರೆ ಆ ವಿಷಯದ ಬಗ್ಗೆ ಮತ್ತೆ ಮತ್ತೆ ಕಲಿಯುವ ಯತ್ನ ಮಾಡಬೇಡಿ. ಅದು ನಿಮ್ಮ ಆಸಕ್ತಿಯ ವಿಷಯವಲ್ಲ ಎಂಬುದನ್ನು ನೆನಪಿಡಿ.  ಆಮೇಲೆ ಮತ್ತೆ ನಿಮ್ಮ ಆಸಕ್ತಿಯ  ವಿಷಯದ ಹುಡುಕಾಟ ಶುರು ಮಾಡಿ. ಏನಾದರೂ ಮಾಡುತಿರು ನೀ ಸುಮ್ಮನಿರಬ್ಯಾಡ ಎಂದು ಕವಿ ಗೋಪಾಲಕೃಷ್ಣ ಅಡಿಗರು ಹೇಳಿದ್ದನ್ನು  ಕಲಿವ ತವಕಕ್ಕಾಗಿ, ಕಲಿಯವುದಕ್ಕಾಗಿ ಬಳಸಿ. ಇವತ್ತೇ ನಿಮ್ಮ ಡೈರಿಯಲ್ಲಿ ಈ ವರ್ಷ ಕಲಿಯುವ ಹೊಸ ಸಂಗತಿಯೇನು ಎಂದು ಬರೆದರೆ ನನ್ನ ಈ  ಅನುಭವದ ಮಾತುಗಳು ಸಾರ್ಥಕ.

Leave a Reply

Theme by Anders Norén