ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು

ರಂಗನಾಥ ಯಾರು ಮಾರಾಯ್ರೆ ಎಂದು ನನ್ನ ಬ್ಲಾಗ್ ಓದುಗ ಮತ್ತು ಪ್ರಿಯ ಹಿರಿಯ ಪತ್ರಕರ್ತ ಶ್ರೀ ನಾಗೇಶ್ ಹೆಗಡೆ ಕೇಳಿದ್ದಾರೆ. ಇಂಥ ವ್ಯಕ್ತಿಯ ಬಗ್ಗೆ ನೆನಪಿಸಿಕೊಂಡು ಬರೆಯುವ ನಿಮ್ಮಂಥ ಮಿತ್ರ ನನಗೆ ಸಿಕ್ಕಿದ್ದು ನಿಜಕ್ಕೂ ಖುಷಿಯಾಗಿದೆ ಎಂದು ಹೊಸ ಗೆಳೆಯ, ವಾಸ್ತುಶಾಸ್ತ್ರಜ್ಞ ಸತ್ಯು ಬರೆದಿದ್ದಾರೆ. ಸತ್ಯು, ನಿಮ್ಮ ಮನೆಯ ಕೂಗಳತೆಯಲ್ಲೇ ರಂಗನಾಥರ ಮನೆ ಇದೆ; ನಾನು ನಿಮ್ಮ ಕಚೇರಿಗೆ ಬಂದಾಗೆಲ್ಲ ರಂಗನಾಥರನ್ನು ಕಾಣಬೇಕೆಂದಿದ್ದೆ; ಆಗಲಿಲ್ಲ….

ಹಾಗಾದ್ರೆ ರಂಗನಾಥ ಯಾರು? ನನಗೂ ಹದಿಮೂರು ವರ್ಷಗಳ ಹಿಂದೆ ರಂಗನಾಥ ಯಾರು ಎಂಬುದು ಗೊತ್ತಿರಲಿಲ್ಲ. ಮಲ್ಲೇಶ್ವರದಲ್ಲಿ ಇದ್ದ ಅವರ ಮನೆಗೆ ನಾನು ಹೋದಾಗ ಯಾಕೋ ಈ ಮನುಷ್ಯ ಎಲ್ಲರಂತಿಲ್ಲ ಅನ್ನಿಸಿತ್ತು; (ಅವರನ್ನು ನನಗೆ ಪರಿಚಯಿಸಿದವರು ಈಗ ೮೦ ಲಕ್ಷ ರೂ.ಗಳ ಸಹಕಾರಿ ಹಣವನ್ನು ಜಾಮೀನಿನಲ್ಲದೆ, ಕಾನೂನುಬಾಹಿರವಾಗಿ ಇನ್ನೊಂದು ಕ್ರಿಮಿನಲ್ ಆರೋಪಿತ ತಂಡಕ್ಕೆ ನೀಡಿದ ಅಪವಾದಕ್ಕೆ ಗುರಿಯಾಗಿ ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಪದವಿಯನ್ನು ರಾತ್ರೋರಾತ್ರಿ ಕಳೆದುಕೊಂಡ ಎಂ ಎಲ್ ಸಿ ಮನೋಹರ ಮಸ್ಕಿ ಎಂದು ಸಂಕೋಚದಿಂದಲೇ ಹೇಳಬೇಕಿದೆ. ರಂಗನಾಥರನ್ನು ಚೆನ್ನಾಗಿ ಬಳಸಿಕೊಂಡು, ಅವರು ಮಸ್ಕಿಯವರ ವ್ಯವಹಾರದ ಷರತ್ತುಗಳಿಗೆ ಬಗ್ಗದಿದ್ದಾಗ ತಳ್ಳಿಹಾಕಿ ತಾವೇ ಬ್ಯಾಂಕಿಂಗ್ ರಂಗದಲ್ಲಿ ತಾನೇ ಎಲ್ಲ ತಿಳಿವಳಿಕೆ ಇದ್ದವನು ಎಂದು ಈಗಲೂ ಹೇಳಿಕೊಳ್ಳುವ ಈ ವ್ಯಕ್ತಿ ಈ ಆರೋಪದಿಂದ ಮುಕ್ತನಾಗಲು ಸಾಧ್ಯವೇ ಇಲ್ಲ ಎಂಬುದು ರಂಗನಾಥರಿಗೂ ಗೊತ್ತಿದ್ದ ಸತ್ಯವಾಗಿತ್ತು).

ರಂಗನಾಥರು ರಿಸರ್ವ್ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿದ್ದರು; ಅವರು ಹಾಗೆಯೇ ಇದ್ದರೆ ರಿಸರ್ವ್ ಬ್ಯಾಂಕಿನಲ್ಲಿ ದೇವಕಿ ಮುತ್ತುಕೃಷ್ಣನ್‌ರಂಥವರು ಹೊಂದಿದ್ದ ಹಿರಿಯ ಸ್ಥಾನಗಳಿಗೆ ಕಡಿಮೆಯಿಲ್ಲದಂತೆ ಏರಬಹುದಾಗಿತ್ತು.

ಹಾಗಾಗಲಿಲ್ಲ.

ರಂಗನಾಥರು ಯಾಕೋ, ಬ್ಯಾಂಕಿಂಗ್ ಕನ್ಸಲ್ಟಂಟ್ ಆಗೋಣ ಎಂದುಕೊಂಡು ಆರ್ ಬಿ ಐಗೆ ರಾಜೀನಾಮೆ ಕೊಟ್ಟರು. ಹಾಗೆ ಅವರು ಕನ್ಸಲ್ಟಂಟ್ ಆದ ಕೆಲವೇ ದಿನಗಳಲ್ಲಿ ನನಗೆ ಅವರ ಪರಿಚಯವಾಯ್ತು. ಅದಾದ ಕೆಲವೇ ದಿನಗಳಲ್ಲಿ ನಾನು ಅವರ ಬುದ್ಧಿಮತ್ತೆಗೆ ಮಾರುಹೋದೆ. ಅವರು ನನ್ನನ್ನು ಮನೆಗೆ ಕರೆದು ಗೌರವಿಸಿದ ರೀತಿ, ನನ್ನನ್ನು ಒಬ್ಬ ಕಿರಿಯ ಗೆಳೆಯನಂತೆ ಕಾಣದೆ ಲೋಕದ ಎಲ್ಲ ಸಂಗತಿಗಳನ್ನೂ ಚರ್ಚಿಸಿದ ರೀತಿ ನನ್ನನ್ನು ಬಗ್ಗಿಸಿತ್ತು.

ಅವರ ಪರಿಚಯವಾದ ಹೊತ್ತಿನಲ್ಲೇ ಈ ಮಸ್ಕಿಯವರಿಗೆ ನಾನು ಅತ್ಯಂತ ಹತ್ತಿರದ ಗೆಳೆಯನಾಗಿದ್ದೆ; ಅವರ ಎಲ್ಲ ಯೋಜನೆಗಳಿಗೆ ಸಾಹಿತ್ಯ ಬರೆಯುವ, ಸಿದ್ಧತೆ ಮಾಡುವ ಬಂಟನಾಗಿದ್ದೆ. ಇದೇ ಹೊತ್ತಿನಲ್ಲೇ ಈಗಿನ ‘ವಿಜಯ ಕರ್ನಾಟಕ’ದ ಸಂಪಾದಕ ವಿಶ್ವೇಶ್ವರ ಭಟ್ಟರು ನಾನು ಸಂಪಾದಕನಾಗಿದ್ದ ‘ಹೊಸದಿಗಂv’ಕ್ಕೆ ‘ಕಲ್ಪನೆಗೆ ಕನ್ನಡಿ’ ಎಂಬ ಕಾಲಂ ಬರೆಯುತ್ತಿದ್ದರು.

ಅಂಥ ಒಂದು ದಿನ, ನಾನು, ಮಸ್ಕಿ, ಭಟ್ಟ ಮತ್ತು ರಂಗನಾಥರು ಎರಡು ದಿನ ರಂಗನಾಥರ ೩೫೩೮ ಸಂಖ್ಯೆಯ ಮಾರುತಿ ವ್ಯಾನಿನಲ್ಲಿ ಕಬಿನಿ ರಿಸಾರ್ಟ್‌ಗೆ ಹೋಗಿದ್ದೆವು, ಅಲ್ಲಿ ಹೋಟೆಲ್ ಉದ್ಯಮ ಹೇಗಿದೆ ಎಂದು ವಿಚಾರಿಸಿದ್ದೆವು. ದೋಣಿಯಲ್ಲಿ ಸಾಗುತ್ತ ರಂಗನಾಥರು ಬೀರು ಏರಿಸಿದ್ದನ್ನು ನೋಡಿ ಅಚ್ಚರಿಪಟ್ಟಿದ್ದೆವು; ದಾರಿಯುದ್ದಕ್ಕೂ ಅವರು ಭೌತಶಾಸ್ತ್ರದ ಸಂಕೀರ್ಣ ಸೂತ್ರಗಳನ್ನು, ಯೂಕ್ಲಿಡನ ಅಂತಿಮ ಪ್ರಮೇಯವನ್ನು ಬಿಡಿಸಿಟ್ಟ ಪರಿಗೆ ತೇಲುಗಣ್ಣು ಮಾಡಿದ್ದೆವು…… ರಂಗನಾಥರು ನಮ್ಮ ಹೀರೋ ಆಗಿದ್ದರು.

ಆಗಲೇ ಅವರು ಮಸ್ಕಿಯ ಸುಕೋ ಬ್ಯಾಂಕಿನ ಸಲಹೆಗಾರರಾಗಿದ್ದರು. ಸುಕೋ ಬ್ಯಾಂಕಿಗೆ ರಿಸರ್ವ್ ಬ್ಯಾಂಕು ಅದೆಷ್ಟೋ ಲಕ್ಷ ರೂ.ಗಳ ದಂಡ ವಿಧಿಸಿದಾಗ ರಂಗನಾಥರು ಸೀದಾ ಮುಂಬಯಿಗೆ ಹೋಗಿದ್ದರು. ರಿಸರ್ವ್ ಬ್ಯಾಂಕಿನ ಗವರ್ನರ್ ವೈ ವಿ ರೆಡ್ಡಿಯವರನ್ನು ಭೇಟಿ ಮಾಡಿ ನೀವು ಮಾಡಿದ್ದು ತಪ್ಪು ಎಂದು ನೇರವಾಗಿ ಮುಖಕ್ಕೇ ಮುಖ ಕೊಟ್ಟು ಹೇಳಿದ್ದರು. ಆ ಪ್ರಕರಣವನ್ನು ಗೆದ್ದರು ಕೂಡಾ. ರಂಗನಾಥರು ನಮ್ಮೆಲ್ಲ ಮಿತಿಗಳಿಗೆ ಅರಿವಾಗದ ಅನುಭವಿಯಾಗಿದ್ದರು.

ಸುಕೋ ಬ್ಯಾಂಕಿನ ಸಕಲ ಪ್ರಗತಿಗೂ ಕಾರಣರಾದ ಅವರು ಕೊನೆಗೆ ಮಸ್ಕಿ ಮತ್ತು ಹೊಸಪೇಟೆ ವಿಕಾಸ ಬ್ಯಾಂಕಿನ ವಿಶ್ವನಾಥ ಹಿರೇಮಠರ ಸಾಂಸ್ಥಿಕ ಬಂಡವಾಳದೊಡನೆ ಸ್ವಂತ ಬ್ಯಾಂಕಿಂಗ್ ತಂತ್ರಾಂಶವನ್ನು ರೂಪಿಸಿದರು. ನಿಮಗೆ ಗೊತ್ತಿರಲಾರದು: ಬ್ಯಾಂಕಿಂಗ್ ತಂತ್ರಾಂಶಗಳು ಹಲವಾರಿವೆ; ಆದರೆ ಅವೆಲ್ಲವೂ ಬ್ಯಾಂಕಿಂಗ್ ತಜ್ಞತೆಯ ಗಟ್ಟಿ ತಳಹದಿ ಹೊಂದಿರುವುದಿಲ್ಲ. ಆದರೆ ‘ಸುವಿಕಾಸ’ ತಂತ್ರಾಂಶ ಮಾತ್ರ ರಂಗನಾಥರ ಮ್ಯಾಜಿಕಲ್ ಸ್ಪರ್ಶದಿಂದಾಗಿ ಬಲವಾದ ತಂತ್ರಾಂಶವಾಗಿ ರೂಪುಗೊಂಡಿತ್ತು. ಲಿನಕ್ಸ್ ಹೋರಾಟಗಾರರು ಇನ್ನೂ ಕಣ್ಣು ಬಿಟ್ಟಿರದ ಸಮಯದಲ್ಲೇ ರಂಗನಾಥರು ಈ ತಂತ್ರಾಂಶವನ್ನು ಲಿನಕ್ಸ್ ಆಪರೇಟಿಂಗ್ ಸಿಸ್ಟಂನಲ್ಲಿ ರೂಪಿಸಿ ಬೆರಗು ಮೂಡಿಸಿದ್ದರು.

ಯಾಕೋ, ಮಸ್ಕಿಯವರಿಗೆ ರಂಗನಾಥರ ಈ ತಿಳಿವಳಿಕೆಯ ಮೇಲ್ಮಟ್ಟ ಸರಿಬರಲಿಲ್ಲ; ಅದಕ್ಕೆ ಬೇಕಾದಷ್ಟು ಕಾರಣ ಕೊಟ್ಟು ರಂಗನಾಥರಿಗೆ ವಿದಾಯ ಹೇಳಿದರು; ತಂತ್ರಾಂಶದ ಸಂಸ್ಥೆಯೇನೋ ರಂಗನಾಥರಲ್ಲೇ ಉಳಿಯಿತೆನ್ನಿ. ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ: ಮಸ್ಕಿ ಮತ್ತು ಹಿರೇಮಠರು ಡಬಲ್ ರೋಡಿನ ಸೌಹಾರ್ದ ಕಚೇರಿಗೆ ಬಂದರು. ತಾನು ಹೇಗೆ ರಂಗನಾಥರನ್ನು ಮಣಿಸಿದೆ ಎಂದು ಮಸ್ಕಿ ಬಣ್ಣಿಸಿದ್ದ. ನನಗೂ ಅದು ಸರಿ ಇರಬಹುದು ಎಂದೇ ಅನ್ನಿಸಿತ್ತು. ಆದರೆ ಕೆಲದಿನಗಳ ನಂತರ ಅವರ ಕಚೇರಿಗೆ ಹೋದಾಗ ನನಗೆ ತಿಳಿವಳಿಕೆಯಾಗಿತ್ತು. ರಂಗನಾಥರು ಎಂದಿನಂತೆ ಬೆಳ್ಳಬೆಳಗ್ಗೆ ಫ್ರೆಶ್ ಆಗಿ ಸಿಗರೇಟು ಸೇದುತ್ತ ನನ್ನನ್ನು ನಂದಿನಿ ಹೋಟೆಲಿಗೆ ಕರೆದುಕೊಂಡು ಹೋಗಿ ವಡೆ ತಿನ್ನಿಸಿ ಇದ್ದ ವಿಚಾರವನ್ನೆಲ್ಲ ಬಿಡಿಸಿಟ್ಟರು.

ಒಂಥರ ರಂಗನಾಥರು ಸುಕೋ ಬ್ಯಾಂಕಿಗೇ ತಮ್ಮೆಲ್ಲ ಫ್ರೀಲಾನ್ಸ್ ಬದುಕನ್ನು ಕೊಟ್ಟುಬಿಟ್ಟಿದ್ದರು; ಆದ್ದರಿಂದಲೇ ನಾನು ಹೇಳೋದು: ನಾನು ರಂಗನಾಥರ ಬಗ್ಗೆ ಬರೆಯೋವಾಗೆಲ್ಲ ಈ ಮಸ್ಕಿಯ ದುರುಳ ಕೃತ್ಯಗಳ ಬಗ್ಗೆಯೂ ಬರೆಯಬೇಕು ಅನ್ನಿಸುತ್ತೆ. ಇಂಥ ಮಸ್ಕಿ ಮೊನ್ನೆ ರಂಗನಾಥರ ಪಾರ್ಥಿವ ಶರೀರಕ್ಕೆ ಹಾರ ಹಾಕಿದಾಗ ಅದನ್ನು ಕಣ್ಣಾರೆ ಕಂಡ ಮಸ್ಕಿಯ ಇನ್ನೊಬ್ಬ ಬಲಿಪಶು ಅನೂಪ ದೇಶಪಾಂಡೆಗೆ ಏನನ್ನಿಸಬೇಡ? ಅದಕ್ಕೇ ಅನೂಪ ದೇಶಪಾಂಡೆ ತನ್ನ ಬ್ಲಾಗಿನಲ್ಲಿ ಮೊಸಳೆ ಕಣ್ಣೀರಿಟ್ಟ ಮಸ್ಕಿಯ ಬಗ್ಗೆ ಬರೆದಾಗ ನಮ್ಮ ಇನ್ನೊಬ್ಬ ಕಾಮನ್ ಸ್ನೇಹಿತ ಪ್ರದೀಪ್ ಪೈಗೆ ಸಿಟ್ಟು ಬಂದಿದೆ. ಅದೆಲ್ಲವನ್ನೂ ನೀವು ಅನೂಪದೇಶಪಾಂಡೆಯವರ ಈ ಬ್ಲಾಗಿನಲ್ಲಿ ಓದಬಹುದು; ನನ್ನ ಖಾರವಾದ ಪ್ರತಿಕ್ರಿಯೆಯನ್ನೂ. ರಂಗನಾಥರ ಬದುಕಿನಲ್ಲಿ ಅಮಾಯಕನಂತೆ ಪ್ರವೇಶಿಸಿ ಖಳನಾಯಕನಂತೆ ಹೊರಗೆ ಬಂದ ಮಸ್ಕಿಯ ಬಗ್ಗೆ ರಂಗನಾಥರಿಗೆ ಎಳ್ಳಷ್ಟೂ ಒಳ್ಳೆಯ ಭಾವನೆ ಇರಲಿಲ್ಲ. ಆದರೆ ಎಂದೂ ಅವರು ನಮ್ಮಲ್ಲಿ ಮಸ್ಕಿಗೆ ಹೀನಾಯಮಾನ ಬೈಯಲಿಲ್ಲ; ನನ್ನ ಥರ ಏಕವಚನವನ್ನೂ ಬಳಸಲಿಲ್ಲ.

ಅದೇನೇ ಇರಲಿ, ವಿಶ್ವನಾಥ ಹಿರೇಮಠರಿಗೂ ಕೊನೆಗೆ ತನ್ನ ತಪ್ಪಿನ ಅರಿವಾಗಿತ್ತು. ರಂಗನಾಥರಿಗೆ ಮತ್ತೆ ಮನ್ನಣೆ ಕೊಟ್ಟ ಅವರು ತಮ್ಮ ವಿಕಾಸ ಬ್ಯಾಂಕಿನ ನಿರ್ದೇಶಕತ್ವವನ್ನೂ ನೀಡಿ ಗೌರವಿಸಿದರು. ಕೊನೆಯವರೆಗೂ ರಂಗನಾಥರು ವಿಕಾಸ ಬ್ಯಾಂಕಿನ ಏಳಿಗೆಗೆ ಹಲವು ಸೂತ್ರಗಳನ್ನು ಹುಡುಕುತ್ತಲೇ ಇದ್ದರು. ಇವತ್ತು ವಿಕಾಸ ಬ್ಯಾಂಕು ಇಡೀ ದಏಶದಲ್ಲೇ ವರ್ಷದ ೩೬೫ ದಿನಗಳಲ್ಲೂ ಕೆಲಸ ಮಾಡುವ ವಿಶಿಷ್ಟ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಗುರಿಯಾಗಿದ್ದರೆ ಅದಕ್ಕೆ ರಂಗನಾಥರೇ ಕಾರಣ. ಇವತ್ತು ವಿಕಾಸ ಬ್ಯಾಂಕು ತನ್ನೆಲ್ಲ ಸೋಲುಗಳನ್ನೂ ಮೀರಿ ಉತ್ತರ ಕರ್ನಾಟಕದ ನೈಜ ನಂಬರ್ ಒನ್ ಬ್ಯಾಂಕ್ ಆಗಿದ್ದರೆ ಅದರಲ್ಲಿ ರಂಗನಾಥರ ಪಾತ್ರವೇ ಮುಖ್ಯ. ಸುಕೋ ಬ್ಯಾಂಕೇ ನಂಬರ್ ಒನ್ ಎಂದು ನಾನು ಬರೆಯುತ್ತಿದ್ದಾಗೆಲ್ಲ ನನ್ನನ್ನು ಹಂಗಿಸುತ್ತಿದ್ದ ರಂಗನಾಥರು ಎಷ್ಟು ವಾಸ್ತವವಾದಿಯಾಗಿದ್ದರು ಎಂದು ನನಗೆ ತಡವಾಗಿ ಗೊತ್ತಾಯಿತು. (ನಾನು ಸುಕೋ ಬ್ಯಾಂಕ್ ಮತ್ತು ವಿಕಾಸ ಬ್ಯಾಂಕ್ – ಎರಡೂ ಬ್ಯಾಂಕುಗಳ ದಶವಾರ್ಷಿಕ ಕಾರ್ಯಕ್ರಮಗಳ ಸಂಘಟಕನಾಗಿ ವರ್ಷವಿಡೀ ಕೆಲಸ ಮಾಡಿದ್ದೇನೆ).

ವಿಕಾಸ ಬ್ಯಾಂಕಿನ ದಶವಾರ್ಷಿಕ ಕಾರ್ಯಕ್ರಮದ ಒಂದು ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಂಡು ಈ ಕಂತನ್ನು ನಿಲ್ಲಿಸುವೆ. ಅವತ್ತು ನಾನು ನಮ್ಮ ಸರಂಗಿ ವಾದಕ ಉಸ್ತಾದ್ ಫಯಾಜ್ ಖಾನರನ್ನು ಹೊಸಪೇಟೆಗೆ ಕರೆಸಿದ್ದೆ. ಅವರು ‘ಸುದರ್ಶನ್ ನಾನು ಬರೀ ದಾಸರ ಪದ ಹೇಳ್ತೇನ್ರಿ… ತುಂಬಾ ಅನ್ನಿಸ್ಯದ’ ಎಂದಿದ್ದರು. ನನಗೂ ಇಂಥದ್ದೊಂದು ಆಫ್‌ಬೀಟ್ ಬೇಕಾಗಿತ್ತು. ಮಲ್ಲಿಗೆ ಹೋಟೆಲಿನ ಸಭಾಂಗಣದಲ್ಲಿ ಕಾರ್ಯಕ್ರಮ ಆರಂಭವಾದಾಗ ರಂಗನಾಥರು ಎಂದಿನಂತೆ ಹೊರಗೆ ಬಂದು ಸಿಗರೇಟು ಸೇದುತ್ತಿದ್ದರು. ‘ಸಂಗೀತ ಎಲ್ಲ ನಿನಗೇ ಬಿಟ್ಟಿದೀನಿ ಕಣೋ’ ಎಂದು ಹುಲ್ಲುಹಾಸಿನಲ್ಲಿ ಶಥಪಥ ಹಾಕುತ್ತಿದ್ದರು.

ಫಯಾಜ್ ಖಾನ್ ಒಂದು ಪದ ಹೇಳುತ್ತಿದ್ದಂತೆ ರಂಗನಾಥರು ಸಭಾಂಗಣದೊಳಗೆ ಬಂದು ಮುಂದಿನ ಸಾಲು ಹಿಡಿದರು. ಅರೆ ಎಷ್ಟು ಚೆನ್ನಾಗಿ ಹಾಡ್ತಾನೆ ಈತ ಎಂದು ಗಟ್ಟಿಯಾಗಿಯೇ ಕಾಮೆಂಟ್ ಮಾಡುತ್ತ ಕೂತರು. ಫಯಾಜ್ ಖಾನ್ ಹಾಡಬೇಕು, ರಂಗನಾಥ್ ವಾರೆವ್ಹಾ ಎನ್ನಬೇಕು…… ಎಲ್ಲ ಹಾಡಿಗೂ ಇದೇ ಮೆಚ್ಚುಗೆ. ಚರಣ ಚರಣಕ್ಕೆ ರಂಗನಾಥರಿಂದ ಫಯಾಜ್ ಖಾನರಿಗೆ ಕೈಯೆತ್ತಿ ನಮಸ್ಕಾರ. ಕಣ್ಣು ಮುಚ್ಚಿ ಧೇನಿಸಿ ಕುಳಿತ ರಂಗನಾಥರನ್ನು ನೋಡಿ ನಾನೂ ಬೆರಗಾಗಿದ್ದೆ. ಇಡೀ ಸಭಾಂಗಣದಲ್ಲಿ ಎಲ್ಲರೂ ಮಂತ್ರಮುಗ್ಧರಾಗಿ ಫಯಾಜ್‌ಖಾನ್‌ರ ಮೋಡಿಗೆ ಒಳಗಾಗಿದ್ದರು; ರಂಗನಾಥರಂತೂ ಎದ್ದು ನಿಂತು ನಮಸ್ಕಾರ ಮಾಡುತ್ತಿದ್ದರು; ಗಟ್ಟಿಯಾಗಿ ಚಪ್ಪಾಳೆ ತಟ್ಟುತ್ತಿದ್ದರು. ನಿಜ; ಅವರು ಆಗಲೇ ಗುಂಡು ಹಾಕಿದ್ದರು. ಗುಂಡಿಲ್ಲದ ರಂಗನಾಥರನ್ನು ನೆನಪಿಸಿಕೊಳ್ಳುವುದೇ ಕಷ್ಟ.

ಫಯಾಜ್ ಖಾನ್ ಕಚೇರಿ ತನ್ನ ಪರಾಕಾಷ್ಠೆ ತಲುಪಿತ್ತು. ರಂಗನಾಥ್ ನನ್ನನ್ನು ಕರೆದು ಕೂರಿಸಿಕೊಂಡು ಕಿವಿಯಲ್ಲಿ ಉಸುರಿದರು: ಅಲ್ಲ ಕಣೋ, ಅವರಿಗೆ ಫರ್‌ಮಾಯಿಶ್ ಕೇಳಬಹುದಾ, ಅವರಿಗೆ ಭಕ್ಷೀಸು ಕೊಟ್ರೆ ತಗೋತಾರಾ…… ಎಷ್ಟು ಮುಗ್ಧ ಮುಖದಿಂದ ಅವರು ಕೇಳಿದರೆಂದರೆ ನನಗೆ ಆ ಹಾಡಿನ ಲೋಕದಲ್ಲಿ ಒಂಥರ ಸಡಗರ, ಬಿಗುಮಾನ, ಕೊಂಚ ರೋಮಾಂಚನ, ಅಚ್ಚರಿ – ಎಲ್ಲ ಮೂಡಿದವು. ಸರ್ ನಿಮ್ಮ ಇಷ್ಟ… ಏನು ಬೇಕಾದ್ರೂ ಮಾಡಿ.. ಫಯಾಜ್ ಖಾನ್ ಒಳ್ಳೇಯವ್ರು ಎಂದೆ.

ರಂಗನಾಥ್ ಸೀದಾ ಒಂದು ಸಾವಿರ ರೂ. ನೋಟನ್ನು ಎತ್ತಿ ಹಿಡಿದು ವೇದಿಕೆ ಹೋಗಿ ಫಯಾಜ್ ಖಾನ್ ಮುಂದೆ ಇಟ್ಟು ಎರಡೂ ಕೈಜೋಡಿಸಿ ಅಡ್ಡಬಿದ್ದರು. ಫಯಾಜ್ ಖಾನ್ ಹಾಡುತ್ತಲೇ ಅವರಿಗೆ ಗೌರವ ಸೂಚಿಸಿದರು. ನಿಜಕ್ಕೂ ಆ ಕ್ಷಣ ಮರೆಯಲಾರೆ. ರಂಗನಾಥರ ಭಾವುಕತೆಗೆ ಇದೊಂದು ಕ್ಷಣವೇ ಸಾಕು ಅನ್ನಿಸುತ್ತೆ.

ಗುಂಡು ಹಾಕಿದಾಗ, ಹಾಕದಿದ್ದಾಗ, – ಅವರ ಮಾತಿನಲ್ಲಿ ಎಂದೂ ವ್ಯತ್ಯಾಸ ಇರ್‍ತಿರಲಿಲ್ಲ. ಆದ್ದರಿಂದಲೇ ನಾನು ಅವರ ಅವತ್ತಿನ ವರ್ತನೆಯನ್ನು ನೈಜವೆಂದೇ ಭಾವಿಸಿದ್ದೇನೆ. ಆಮೇಲೆಯೂ ಅವರು ಫಯಾಜ್‌ಖಾನರನ್ನು ಹೊಗಳುತ್ತಲೇ ಇದ್ದರು. ‘ಅಂತೂ ನೀನು ಒಳ್ಳೇ ಕಲಾವಿದನನ್ನ ಪರಿಚಯ ಮಾಡಿಸಿದೆ ಕಣಯ್ಯ’ ಎಂದು ಬೆನ್ನು ತಟ್ಟುತ್ತಿದ್ದರು.

ಅವರ ಜೊತೆಗೆ ಕಳೆದ ಎಷ್ಟೋ ಕ್ಷಣಗಳನ್ನು, ಮಾಡಿದ ಜಗಳಗಳನ್ನು ನೆನಪಿಸಿಕೊಂಡರೆ….. ನನ್ನಂಥ ಸಾಮಾನ್ಯನನ್ನೂ ಅವರು ಎಷ್ಟೆಲ್ಲ ಕಕ್ಕುಲತೆಯಿಂದ ಕಂಡರಲ್ಲ ಎಂದು ಕಣ್ಣು ಮಂಜಾಗುತ್ತದೆ.

ಮುಂದಿನ ಸಲ ಅವರನ್ನು ಮತ್ತಷ್ಟು ನೆನಪಿಸಿಕೊಂಡು ಬರೆಯುತ್ತೇನೆ. ಮೊದಲು ನನಗಾಗಿ; ಆಮೇಲೆ ಇಲ್ಲೀವರೆಗೆ ಬಂದು ಪ್ರೀತಿ  ತೋರಿಸಿದ ನಿಮಗಾಗಿ…..

1 Comment

  1. Samad Kottur

    My deep condolences to Sree.Ranganath. Your description is magical. Strange is the human nature as for as the friendship is concerned.

Comments are Closed

Theme by Anders Norén