ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Our Universities : What to do ?

ವಿಶ್ವವಿದ್ಯಾಲಯಗಳ ಗತಿ ಸ್ಥಿತಿಗೆ ಏನೆನ್ನೋಣ?

ಖ್ವಾಕರೆಲ್ಲಿ ಸೇಮಂಡ್ಸ್ ಎಂಬ ಸಂಸ್ಥೆ ಮತ್ತು ಟೈಮ್ಸ್ ಹೈಯರ್ ಎಜುಕೇಶನ್ ಸಪ್ಲಿಮೆಂಟ್ ಸಂಸ್ಥೆಗಳು ಒಟ್ಟಾಗಿ ನಡೆಸಿದ ವಿಶ್ವ ವಿಶ್ವವಿದ್ಯಾಲಯ ರ್‍ಯಾಂಕಿಂಗ್ ಪಟ್ಟಿ ಈಗಷ್ಟೆ ಪ್ರಕಟವಾಗಿದೆ. ಈ ಪಟ್ಟಿಯ ಮೊದಲ ಇನ್ನೂರು ವಿಶ್ವವಿದ್ಯಾಲಯಗಳಲ್ಲಿ ಭಾರತದ ಹೆಸರೇ ಇಲ್ಲ. ಎಲ್ಲ ಮುದ್ರಣ ಮಾಧ್ಯಮಗಳೂ ಇದನ್ನು ಪ್ರಕಟಿಸಿವೆ. ಪಿ ಟಿ ಐ (ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ) ಸುದ್ದಿಸಂಸ್ಥೆ ಮಾಡಿದ ಈ  ವರದಿಯ ಬೆನ್ನು ಹತ್ತಿ ಹೋದಾಗ ಹಲವು ಸಂಗತಿಗಳು ಗೋಚರವಾದವು.
ಮೊದಲನೆಯದಾಗಿ ಈ ವರದಿಯನ್ನು ಈ ಕೆಳಗಿನ ಮೂಲಗಳಿಂದ ಸಂಗ್ರಹಿಸಲಾಗಿದೆ:
೧) ೫೧೦೧ ಶಿಕ್ಷಣತಜ್ಞರ ಹೇಳಿಕೆಗಳು
೨) ೧೪೮೨ ನೇಮಕಾತಿ ಸಂಸ್ಥೆಗಳ ಅಭಿಪ್ರಾಯಗಳು
೩) ಅಂತಾರಾಷ್ಟ್ರೀಯ ಶಿಕ್ಷಕ ಪ್ರಮಾಣದ ಅನುಪಾತ
೪) ಅಂತಾರಾಷ್ಟ್ರೀಯ ವಿದ್ಯಾರ್ಥಿ ಅನುಪಾತ
೫) ವಿದ್ಯಾರ್ಥಿ – ಶಿಕ್ಷಕ ಅನುಪಾತ
೬) ಸ್ಕೋಪಸ್ ಸಂಸ್ಥೆಯು ನೀಡಿದ ಸಿಬ್ಬಂದಿಶಃ ಸೈಟೇಶನ್ ಅನುಪಾತ
ಈ ಸಮೀಕ್ಷೆಯು ಕಳೆದ ನಾಲ್ಕು ವರ್ಷಗಳಿಂದಷ್ಟೆ ನಡೆಯುತ್ತಿದೆ. ಈ ಸಮೀಕ್ಷೆಯ ಮಾನದಂಡಗಳನ್ನು ಈ ವರ್ಷವೂ ಸಾಕಷ್ಟು ಬದಲಾಯಿಸಲಾಗಿದೆ. ೧೪ ವಿವಿಧ ದೇಶಗಳಿಂದ ೨೭ ವಿಶ್ವವಿದ್ಯಾಲಯಗಳು ಈ ಟಾಪ್ ೨೦೦ ವಿವಿಗಳ ಪಟ್ಟಿಗೆ ಬಂದಿರುವುದರಿಂದ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಯಕರಣ ಭಾರೀ ಪ್ರಮಾಣದಲ್ಲಿ ಆಗುತ್ತಿದೆ ಎಂಬ ಹೇಳಿಕೆಯನ್ನೂ ಈ ಸಂಸ್ಥೆ ನೀಡಿದೆ.
ಹಾಗಾದರೆ ಇದೆಲ್ಲ ನಿಜವೆ? ಭಾರತದ ವಿಶ್ವವಿದ್ಯಾಲಯಗಳು ನಿಜಕ್ಕೂ ಕಳಪೆಯೆ? ಛೆ,ಹಾಗೇನಿಲ್ಲ ಎಂದು ಈ ವರದಿ ಕೊಂಚ ಸಮಾಧಾನವನ್ನೂ ನೀಡುತ್ತದೆ: ವಿಶ್ವದ ಸಾಮಾಜಿಕ ಅಧ್ಯಯನದ ವಿವಿಗಳಲ್ಲಿ ದಿಲ್ಲಿ ವಿಶ್ವವಿದ್ಯಾಲಯವು ೯೨ನೇ ಸ್ಥಾನದಲ್ಲಿದೆ. ನಿಸರ್ಗ ವಿeನದಲ್ಲಿ ಈ ವಿವಿಯು ೯೯ನೇ ಸ್ಥಾನದಲ್ಲಿದ್ದರೆ, ಮುಂಬಯಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು (ಐ ಐ ಟಿ, ಮುಂಬಯಿ) ೬೭ನೇ ಸ್ಥಾನದಲ್ಲಿದೆ. ಕಲೆ ಮತ್ತು ಮಾನವಿಕ ವಿಷಯಗಳಲ್ಲಿ ಭಾರತಕ್ಕೆ ಯಾವುದೇ ಸ್ಥಾನವಿಲ್ಲ. ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರeನದಲ್ಲಿ ಮಾತ್ರ ಭಾರತದ ಮುಂಬಯಿ ಐ ಐ ಟಿ (೩೩), ದಿಲ್ಲಿ ಐ ಐ ಟಿ ( ೩೭), ಖರಗ್‌ಫುರ ಐ ಐ ಟಿ (೮೧), ಕಾನ್‌ಪುರ ಐ ಐ ಟಿ (೯೨) ಗಳು ಸ್ಥಾನ ಪಡೆದಿವೆ.
ಕಳೆದ ವರ್ಷ ಶಾಂಘಾಯ್ ಜಿಯಾವೋ ಟಾಂಗ್ ವಿಶ್ವವಿದ್ಯಾಲಯವೂ ಇಂಥದ್ದೇ ಸಮೀಕ್ಷೆಯನ್ನು ಮಾಡಿ ಪ್ರಕಟಿಸಿತ್ತು. ಅದರಲ್ಲೂ ಭಾರತದ ವಿವಿಗಳ ಹೆಸರೇ ಇರಲಿಲ್ಲ. ಯಾಕೆಂದರೆ ನೋಬೆಲ್ ಪ್ರಶಸ್ತಿ ಪಡೆದಿದ್ದರೆ ಅಂಥ ವಿಶ್ವವಿದ್ಯಾಲಯಕ್ಕೆ ಶೇ. ೩೦ರಷ್ಟು ಅಂಕಗಳು ಗ್ಯಾರಂಟಿಯಾಗಿದ್ದವು. ಶಿಕ್ಷಣದ ಗುಣಮಟ್ಟವೇ ಇಂಥ ಪ್ರಶಸ್ತಿಗೆ ಕಾರಣವೆ? ಅಥವಾ ಈ ಸಂಶೋಧಕರ ಪಾತ್ರವೇ ಇದರಲ್ಲಿ ಹೆಚ್ಚಿದೆಯೆ?
ನಮ್ಮ ದೇಶದ ಸಾವಿರಾರು ಪ್ರತಿಭೆಗಳು ನಾಸಾದಲ್ಲಿ ಇವೆ ಎಂದೋ, ಅಮೆರಿಕಾದ ಮಾಹಿತಿ ತಂತ್ರeನ ಸಂಸ್ಥೆಗಳಲ್ಲಿ ಇವೆ ಎಂದೋ ನಾವು ಹೇಳುತ್ತಿರುವುದೇ ತಪ್ಪೆ? ಹಾಗಾದರೆ ಸರಕಿನಂತೆ ಪ್ರತಿಭೆಗಳನ್ನು ಸೃಜಿಸಿವುದೇ ಒಂದು ವ್ಯರ್ಥ ಕಾರ್ಯಾಚರಣೆಯೆ? ಪರಿಸರ ಜಾಗೃತಿಯಲ್ಲಿ, ಅದರಲ್ಲೂ ಜಾಗತಿಕ ತಾಪಮಾನ ಏರಿಕೆಯ (ಗ್ಲೋಬಲ್ ವಾರ್ಮಿಂಗ್) ಬಗ್ಗೆ  ಒಂದು ವಿಶ್ವಸ್ತರದ ಸಂಸ್ಥೆಯನ್ನೇ ಮುನ್ನಡೆಸಿದ ಪಚೌರಿ ಮುಂತಾದವರು ಭಾರತೀಯ ಪ್ರತಿಭೆಯ ಸಂಕೇತವಲ್ಲವೆ?
ನಾವು ಹೆಸರುಗಳನ್ನು ತೆಗೆದುಕೊಳ್ಳುವುದೇನೂ ಬೇಕಾಗಿಲ್ಲ. ಆದರೆ ಈ ಸಮೀಕ್ಷೆಗಳಿಂದ ನಮ್ಮ ವಿವಿಗಳ ಶಿಕ್ಷಣಮಟ್ಟ ಕುಸಿದ ಬಗ್ಗೆ ಏನಾದರೂ ಗೊತ್ತಾಗುತ್ತದೆಯೆ?
ಹಾಗೇನಿಲ್ಲ. ಯಾಕೆಂದರೆ ಈ ಸಮೀಕ್ಷೆಗಳು ತಮಗೆ ಬಂದ ಪ್ರತಿಕ್ರಿಯೆ ಮತ್ತು ವರದಿಗಳನ್ನು ಆಧರಿಸಿ ಕೆಲಸ ಮಾಡುತ್ತಿವೆಯೇ ವಿನಃ ಎಲ್ಲ ವಿವಿಗಳನ್ನೂ ಸಮೀಕ್ಷಿಸಿ ವರದಿ ತಯಾರಿಸುತ್ತಿಲ್ಲ. ಉದಾಹರಣೆಗೆ ನಮ್ಮ ಜನಗಣತಿಯನ್ನೇ ತೆಗೆದುಕೊಳ್ಳೋಣ: ಅಕಸ್ಮಾತ್ ನಮ್ಮ ಜನಗಣತಿಯು ಕೇವಲ ತನಗೆ ಸಲ್ಲಿಕೆಯಾದ ಮಾಹಿತಿಯನ್ನು ಮಾತ್ರವೇ ಆಧರಿಸಿದ್ದರೆ ಏನಾಗುತ್ತಿತ್ತು?  ನಮ್ಮ ದೇಶದ ಜನಸಂಖ್ಯೆ ಈಗಿದ್ದಷ್ಟು ಇರುತ್ತಲೇ ಇರಲಿಲ್ಲ, ದಾಖಲೆಗಳಲ್ಲಿ!
ಆದ್ದರಿಂದ ಇಂಥ ಸಮೀಕ್ಷೆಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಕೊರತೆಗಳಿರಬಹುದು; ಶಿಕ್ಷಣವ್ಯವಸ್ಥೆಯೇ ಲೋಪಗಳಿಂದ ತುಂಬಿರಬಹುದು; ಆದರೆ ಇವುಗಳ ಬಗ್ಗೆ ಇಂಥ ಜಾಗತಿಕ ಸಮೀಕ್ಷೆಗಳನ್ನು ಆಧರಿಸಿ ಹಿಮ್ಮಾಹಿತಿ (ಫೀಡ್‌ಬ್ಯಾಕ್) ಪಡೆಯುವುದು ಮೂರ್ಖತನ. ಅದರಲ್ಲೂ ವಿಶ್ವಮಟ್ಟದ ಸಮೀಕ್ಷೆ ನಡೆಸಬೇಕಾದಾಗ ಸಾಕಷ್ಟು ಸಾಂಸ್ಕೃತಿಕ ಮತ್ತು ರಾಜಕೀಯ ಸಂಗತಿಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಚೀನಾ ದೇಶದಲ್ಲಿ ಇರುವ ಮಾನವ ಹಕ್ಕುಗಳ ದಮನಪ್ರವೃತ್ತಿಯ ಹಿನ್ನೆಲೆಯಲ್ಲಿ ಅಲ್ಲಿಯ ಶಿಕ್ಷಣವನ್ನು ಗಮನಿಸಬೇಕು. ಅಮೆರಿಕಾದಲ್ಲಿ ಇರುವ ಮೂಲಭೂತ ಸೌಕರ್ಯಗಳ ಹಿನ್ನೆಲೆಯಲ್ಲಿ ಅಲ್ಲಿಯ ಶಿಕ್ಷಣವನ್ನು ಅಳೆಯಬೇಕು. ಭಾರತದಲ್ಲಿ ಇರುವ ಜನಸಂಖ್ಯಾ ಸಾಂದ್ರತೆಯನ್ನು ಗಮನದಲ್ಲಿ ಇಟ್ಟುಕೊಳ್ಳದೇ ಇಲ್ಲಿಯ ಗುಣಮಟ್ಟವನ್ನು ಅಳೆಯುವುದು ಸರಿಯಲ್ಲ. ನಮ್ಮ ದೇಶದಲ್ಲಿ ಹಲವು ಸ್ವತಂತ್ರ ವಿಶ್ವವಿದ್ಯಾಲಯಗಳೂ (ಡೀಮ್ಡ್ ಯೂನಿವರ್ಸಿಟಿ) ಇವೆ. ಇವುಗಳು ಬಹುತೇಕ ಖಾಸಗಿ ಸಂಘ – ಸಂಸ್ಥೆಗಳಿಗೆ ಸೇರಿವೆ. ಇವುಗಳ ಗುಣಮಟ್ಟವೇನೂ ಕಡಿಮೆಯಲ್ಲ.
ಮುಖ್ಯ ಸಮಸ್ಯೆ ಎಂದರೆ ನಮ್ಮಲ್ಲಿ ಇನ್ನೂ ಹತ್ತಾರು ವಿಶ್ವವಿದ್ಯಾಲಯಗಳು ಬೇಕೇ ಬೇಕು. ಕೇವಲ ತುಮಕೂರು ವಿಶ್ವವಿದ್ಯಾಲಯವೊಂದನ್ನು ಅರೆಬರೆಯಾಗಿ ಸ್ಥಾಪಿಸುವ ಕ್ರಮ ಸರಿಯಲ್ಲ. ಜಿಲ್ಲೆಗೊಂದು ವಿವಿ ಇದ್ದರೆ ತಪ್ಪೇನೂ ಇಲ್ಲ. ಆದರೆ ಅದಕ್ಕೆ ತಕ್ಕ ಸಂಪನ್ಮೂಲಗಳನ್ನು ಜೋಡಿಸಿಕೊಂಡೇ (ಸಿಮೆಂಟ್ ಮಾತ್ರವಲ್ಲ, ಮಾನವ ಸಂಪನ್ಮೂಲವೂ ಬೇಕು ಮಾರಾಯ್ರೆ) ವಿವಿಗಳನ್ನು ಸ್ಥಾಪಿಸಬೇಕು. ಜಿಲ್ಲೆಗೊಂದು ವಿಶೇಷ ಬೆಳೆ ಬೆಳೆಯುವ ನಮ್ಮ ದೇಶದಲ್ಲಿ ವೈವಿಧ್ಯಮಯ ವಿಷಯಗಳ ಮೇಲೆ ಅಧ್ಯಯನ ಮಾಡುವುದಕ್ಕೆ ಇನ್ನೂ ಸ್ಕೋಪ್ ಇದೆ. ಈ ಅವಕಾಶವನ್ನು ರಾಜಕೀಯ ಅವಕಾಶವಾಗಿ ಬಗೆಯದೇ ಒಂದು ನೈಜ ಶಿಕ್ಷಣ ವ್ಯವಸ್ಥೆಗಾಗಿ ಬಳಸಿಕೊಳ್ಳುವ ನಿಷ್ಪಕ್ಷಪಾತತನ ನಮ್ಮಲ್ಲಿದ್ದರೆ ನಿಜಕ್ಕೂ ನಮ್ಮ ಯುವಕರಿಗೆ ಊರಲ್ಲೇ ಒಂದು ವಿಶ್ವವಿದ್ಯಾಲಯ ತೆರೆದುಕೊಳ್ಳುತ್ತದೆ. ಮಾಹಿತಿ ತಂತ್ರeನವು ಅಂಗೈಯಲ್ಲೇ ಇರುವಾಗ ನಾವಿನ್ನೂ ಬೆಂಗಳೂರಿನಲ್ಲೇ ಎಲ್ಲ ಮಾಹಿತಿಯೂ ಕೇಂದ್ರೀಕೃತವಾಗಿರಲಿ ಎಂದು ಬಯಸುತ್ತಿರುವುದು ವಿಷಾದನೀಯ. ಗದಗದಲ್ಲಾಗಲೀ, ದಾವಣಗೆರೆಯಲ್ಲಾಗಲೀ, ಜೊಯಿಡಾದಲ್ಲಾಗಲೀ, ಕೊಪ್ಪದಲ್ಲಾಗಲೀ, ತಜ್ಞರಿರುವ ವಿಶ್ವವಿದ್ಯಾಲಯವನ್ನು  ಸ್ಥಾಪಿಸುವುದು ಕಷ್ಟವೇನಲ್ಲ.
ಇಲ್ಲಿಗೆ ಮಾಹಿತಿ ಹರಿಸುವುದು ಹೇಗೆ ಎಂದು ಕೇಳುತ್ತೀರ? ಚೆನ್ನೈನಲ್ಲಿ ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಡಾ|| ಅಶೋಕ್ ಝುಂಝುನ್‌ವಾಲಾರನ್ನೇ ಕೇಳಿ ನೋಡಿ; ನೂರುದಾರಿ ಹುಡುಕಿಕೊಡುತ್ತಾರೆ.  ಬೇಕಾದರೆ ಈ ಕೊಂಡಿಗಳನ್ನು ಅಂತರ್ಜಾಲದಲ್ಲಿ ಹುಡುಕಿಕೊಂಡು ಹೋಗಿ.

http://www.rediff.com/money/2003/nov/03it.htm

http://www.tenet.res.in/Aboutus/People/Faculty/personalPages/ashok.php

 

ಸುಮ್ಮನೆ ಒಂದು ಉದಾಹರಣೆ ಕೊಟ್ಟೆ ಅಷ್ಟೆ; ಇಂಥ ಹತ್ತು ಹಲವು ಪರಿಹಾರಗಳು ನಮ್ಮ ಕಣ್ಣಮುಂದೆಯೇ ಇರುವಾಗ ಕಣ್ಣುಮುಚ್ಚಿ ಕೂರುವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ.

Leave a Reply

Theme by Anders Norén