ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಕಲಿ ಯುಗ

Privacy? Forget it !

ಖಾಸಗಿತನವನ್ನು ಕಳಕೊಂಡವರೆ, ಹೇಗಿದ್ದೀರಿ?

ನೀವು ಯಾವುದೇ ಕಂಪ್ಯೂಟರಿನಿಂದ ಇಂಟರ್‌ನೆಟ್ ಬಳಸಿರಿ, ನಿಮ್ಮನ್ನು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಬಹುದು.
ನಿಮ್ಮ ಇಂಟರ್‌ನೆಟ್ ಸಂಪರ್ಕವೆಲ್ಲವೂ ಅಮೆರಿಕಾದ ಪೆಂಟಾಗನ್ ನಿಯಂತ್ರಣದಲ್ಲೇ ಇನ್ನೂ ಮುಂದುವರೆದಿರುವುದರಿಂದ ಯಾವುದೇ ಪತ್ರವೂ ಖಾಸಗಿ ಎಂದು ನೀವು ಬಡಾಯಿ ಕೊಚ್ಚಿಕೊಳ್ಳುವಂತಿಲ್ಲ.
ನೀವು ಬಳಸುವ ಮೊಬೈಲ್‌ನಿಂದಾಗಿ ನೀವು ಯಾವ ಝೋನ್‌ನಲ್ಲಿ ಮಸಾಲೆ ದೋಸೆ ಕತ್ತರಿಸುತ್ತಿದ್ದೀರಿ ಎಂದು ಯಾವುದೇ ಭದ್ರತಾ ಸಂಸ್ಥೆಯೂ ತಿಳಿಯಬಹುದು.
ಈಗಾಗಲೇ ಎಲ್ಲ ಮೊಬೈಲ್ ಬಳಕೆದಾರರಿಗೂ ಗೊತ್ತಾಗಿರುವಂತೆ ಸಿಮ್ ಕಾರ್ಡಿನಲ್ಲಾಗಲೀ, ಮೊಬೈಲ್‌ನ ಮೆಮೊರಿಯಲ್ಲಾಗಲೀ ಒಮ್ಮೆ ಬರೆದ ಮಾಹಿತಿಯು ಶಾಶ್ವತವಾಗಿ ಇರುತ್ತದೆ. ಇದನ್ನೇ ಒಂದು ತತ್ವವಾಗಿ ಹೇಳುವುದಾದರೆ, ನಿಮ್ಮ ಗಣಕ, ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್‌ನಿಂದ ಹಿಡಿದು, ಡಿಜಿಟಲ್ ಕ್ಯಾಮೆರಾದವರೆಗೆ ಎಲ್ಲ ಮೆಮೊರಿ ಸಾಧನಗಳಲ್ಲಿ (ಹಾರ್ಡ್ ಡಿಸ್ಕ್, ಮೆಮೊರಿ ಕಾರ್ಡ್, ಫ್ಲ್ಯಾಶ್ ಕಾರ್ಡ್ ಇತ್ಯಾದಿ) ನೀವು ದಾಖಲಿಸುವ ಯಾವುದೇ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾಹಿತಿಯೂ ನಾಶವಾಗುವುದೇ ಇಲ್ಲ. ಆದನ್ನೆಲ್ಲ ಮರಳಿ ಪಡೆಯಬಹುದು.
ನಿಮ್ಮ ಇಂಟರ್‌ನೆಟ್ ಬಳಕೆಯ ಸಮಯದಲ್ಲಿ ನಿಮ್ಮ ಗಣಕದಲ್ಲಿ ಇರುವ ತಂತ್ರಾಂಶಗಳೂ ನಿಮ್ಮ ಬಳಕೆಯ ಹವ್ಯಾಸಗಳನ್ನು ದಾಖಲಿಸಿ ತಮ್ಮ ತಮ್ಮ ಸಂಸ್ಥೆಗೆ ತಣ್ಣಗೆ ರವಾನಿಸುತ್ತವೆ.
ನೀವು ಈ ಮೈಲ್‌ಗಾಗಿ ಬಳಸುವ ಗೂಗಲ್, ಯಾಹೂ, ರಿಡಿಫ್, ಯಾವುದೇ ಉಚಿತ ಸೇವೆಗಳೂ, ಉಚಿತ ಇಂಟರ್‌ನೆಟ್ / ವರ್ಚುಯಲ್ ಹಾರ್ಡ್ ಡಿಸ್ಕ್ ಸೇವೆ ನೀಡುವ ಸಂಸ್ಥೆಗಳು, ಉಚಿತ ಬ್ಲಾಗ್ ಸೇವೆ ನೀಡುವ ಉದಾರಿ ಆಂಗಡಿಗಳು, ನಿಮ್ಮ ಎಲ್ಲ ಬಳಕೆ, ಹವ್ಯಾಸ ಮುಂತಾದ ಮಾಹಿತಿಗಳನ್ನು ಸಂಗ್ರಹಿಸುತ್ತವೆ. ಆವುಗಳನ್ನೇ ವಿವಿಧ ವಸ್ತುಗಳ ಉತ್ಪಾದಕರಿಗೆ ಮಾರುತ್ತವೆ. ಆಕ್ಕ ಚಿಕ್ಕ ಅಕ್ಷರಗಳಲ್ಲಿ ಇರುವ ಒಪ್ಪಂದ ಪತ್ರಕ್ಕೆ ನಾವು ಸಹಿ ಹಾಕಿರುವುದೇ ನಮಗೆ ಮರೆತುಹೋಗಿರುತ್ತದೆ!
ನೀವು ಬಳಸುವ ಕ್ರೆಡಿಟ್ ಕಾರ್ಡ್ ಆಧಾರದಲ್ಲಿ ನಿಮ್ಮ ಖರೀದಿ ಹವ್ಯಾಸ / ಚಟಗಳು, ಊಟ, ತಿಂಡಿಪೋತತನದ ಕಥೆಗಳು ಬ್ಯಾಂಕುಗಳಿಗೆ ರವಾನೆಯಾಗುತ್ತವೆ. ನಿಮ್ಮ ವಿಳಾಸವನ್ನು ಖುದ್ದಾಗಿ ಪರಿಶೀಲಿಸುವ ನಮ್ಮ ಶತಮಾನ ಕಾಲತ್ತಿಲ ಅಂಚೆಯ ಅಣ್ಣನೂ ಈಗ ಜಾಣನಾಗಿದ್ದಾನೆ. ನಿಮ್ಮಿಂದ ಸ್ವಯಂ ಒಪ್ಪಿಗೆಯ ಪತ್ರ ಪಡೆದುಕೊಂಡು ವಿವಿಧ ಆಕರ್ಷಕ ಸೇವೆಗಳ ಕರಪತ್ರಗಳನ್ನು ನಿಮ್ಮ ಮನೆಗೆ ತಲುಪಿಸಿ ಕೊಂಚ ಹೆಚ್ಚು ಕಾಸು ಗಳಿಸುತ್ತಿದ್ದಾನೆ.
ನಿಮ್ಮ ಲ್ಯಾಂಡ್ ಲೈನಿಗೆ ಯಾವಾಗಲೂ ಕರೆಗಳು ಬರುತ್ತಲೇ ಇರುತ್ತವೆ. ನಿಮ್ಮ ಹೆಸರನ್ನು ನಯವಾಗಿ ಉಲಿಯುವ ವನಿತೆಯರು ಯಾವುದೋ ಡಾಟಾಬೇಸ್‌ನಿಂದ ನಿಮ್ಮ ಹೆಸರನ್ನು ಪಡೆದಿದ್ದಾಗಿಯೂ, ನಿಮಗೆ ಯಾವುದೇ ಬ್ಯಾಂಕಿಂಗ್, ಕ್ರೆಡಿಟ್ ಸೇವೆ ಬೇಕಾದರೂ ತಮ್ಮ ಘನ ಸಂಸ್ಥೆಯು ನೀಡುವುದಾಗಿಯೂ ಭರವಸೆ ನೀಡಿ ಅಪಾಯಿಂಟ್‌ಮೆಂಟ್ ಕೇಳುತ್ತಾರೆ.
ಇಂಥ ಕರೆಗಳನ್ನು ಮಾಡಬಾರದೆಂದು ನೀವು ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾವು ರೂಪಿಸಿರುವ ಜಾಲತಾಣದಲ್ಲಿ ನಿಮ್ಮ ಹೆಸರನ್ನು ದಾಖಲಿಸಿದರೆ ಸಾಕು ಎಂದುಕೊಳ್ಳಬೇಡಿ. ನಾನು ಹೀಗೆ ದಾಖಲಿಸಿದ ೪೫ ದಿನಗಳ ತರುವಾಯವೂ ನನಗೆ ಇಂಥದ್ದೇ ಕರೆ ಇವತ್ತು ತಾನೇ ಬಂದಿದೆ.
ಮುಕ್ತ ಮತ್ತು ಉಚಿತ ತಂತ್ರಾಂಶಕ್ಕಾಗಿ ಈಗಲೂ ಹೋರಾಟ ಮಾಡುತ್ತಿರುವ ರಿಚರ್ಡ್ ಸ್ಟಾಲ್‌ಮನ್ ತನ್ನಲ್ಲಿ ಮೊಬೈಲ್ ಇಟ್ಟುಕೊಂಡಿಲ್ಲ. ಯಾವುದೋ ಖಾಸಗಿ ಸಂಸ್ಥೆಗೆ ನಾನು ಎಲ್ಲಿದ್ದೇನೆ ಎಂದು ಗೊತ್ತಾಗುವುದು ಯಾಕೆ ಎಂಬುದು ಅವನ ತಗಾದೆ. ಅವನೇ ಸ್ವತಃ ವಿಶ್ವದ ನಂಬರ್ ಒನ್ ಹ್ಯಾಕರ್ (ಪರರ ಗಣಕಗಳನ್ನು ಇಂಟರ್‌ನೆಟ್ ಮೂಲಕ ಅನುಮತಿಯಿಲ್ಲದೇ ನೋಡುವುದು) ಆಗಿರುವುದರಿಂದ ಅವನು ತನ್ನ ಗಣಕದಲ್ಲೂ ತನ್ನಿರವು ಗೊತ್ತಾಗದ ಹಾಗೆ ಮಾಡಿಕೊಂಡಿದ್ದಾನೆ. ಇಂಟರ್‌ನೆಟ್‌ನಲ್ಲಿ ನಿಮ್ಮನ್ನು ಸದಾ ಅಡಗಿಸಿ ಇಡುವಂಥ ತಂತ್ರಾಂಶಗಳೂ ಬೇಕಾದಷ್ಟಿವೆ ನಿಜ ; ಆದರೆ ಅವು ಎಲ್ಲರಿಗೂ ದಕ್ಕುವುದಿಲ್ಲ.
ಮುಂದೆ ಏನಾಗಲಿದೆ? ಮತದಾರರ ಗುರುತು ಚೀಟಿ, ಚಾಲನಾ ಅನುಮತಿ ಕಾರ್ಡ್, – ಎಲ್ಲವನ್ನೂ ಕ್ರೋಡೀಕರಿಸುವ ದಿನ ದೂರವಿಲ್ಲ. ನಿಮ್ಮ ಪೂರ್ತಿ ಜಾತಕವೇ ಇರುವ ಕಾರ್ಡೊಂದನ್ನು ನೀವು ಸದಾ ಕಿಸೆಯಲ್ಲಿ ಇಟ್ಟುಕೊಳ್ಳಬೇಕಾದೀತು. ತೀರಾ ಡಿಜಿಟಲ್ ಚಿಂತನೆ ನಡೆಸುವ ಸರ್ಕಾರವು ನಿಮ್ಮ ಬಲ ತೋಳಿಗೆ ಎಲೆಕ್ಟ್ರಾನಿಕ್ ಬೆಲ್ಟನ್ನು ಕಟ್ಟಿದರೂ ಕಟ್ಟಬಹುದು! ಆಥವಾ ಉಳ್ಳವರಿಗೆ ಗೊತ್ತಾಗದ ಹಾಗೆ ಚರ್ಮದ ಬಣ್ಣದಲ್ಲೇ ಒಂದು ಬಿಲ್ಲೆಯನ್ನು ಅಂಟಿಸಲೂ ಬಹುದು! ಊಹೆ ಎಂದುಕೊಳ್ಳಬೇಡಿ. ಊಹೆಗೂ, ವಾಸ್ತವಕ್ಕೂ ಅಂತರ ಕಡಿಮೆಯಾಗುತ್ತಿದೆ.
ನಿಮ್ಮ ವಾಹನದ ಸಂಖ್ಯೆಯನ್ನು ಬಾರ್‌ಕೋಡಿನ ಮೂಲಕ ದಾಖಲಿಸುವ ವ್ಯವಸ್ಥೆ ಪೂರ್ತಿಯಾಗಿ ಜಾರಿಯಾದರೆ, ನೀವು ಯಾವ ಬಡಾವಣೆಯ ಯಾವ ಕ್ರಾಸಿನಲ್ಲಿ ನಿಂತು ಯಾರಿಗೆ ಕಾಯುತ್ತಿದ್ದೀರ ಎಂದು ಹುಡುಕುವುದು ಆರ್ ಟಿ ಓ ಗೆ ಕಷ್ಟವೇ ಅಲ್ಲ. ಅಕಸ್ಮಾತ್ ಆಗಲೂ ಇವತ್ತಿನ ಪ್ರಜಾತಂತ್ರವೇ ಮೆರೆಯುತ್ತಿದ್ದರೆ ನೀವು ನಯವಾಗಿ ಡೀಲ್ ಕುದುರಿಸಬಹುದು.
ಡಿಜಿಟಲ್ ಯುಗದಲ್ಲಿ ಖಾಸಗಿತನವೇ ಮರೆಯಾಗುತ್ತಿದೆ. ಈ ಬಗ್ಗೆ ಪುಂಖಾನುಪುಂಖವಾಗಿ ಲೇಖನಗಳು ಬರುತ್ತಿವೆ. ಡಿಜಿಟಲ್ ಫ್ರೀಡಂ ಬಗ್ಗೆ ಬಂದ ಜಾಲತಾಣವನ್ನು ನಾನು ಸಂಪರ್ಕಿಸಿಯೇ ಎಂಟು ವರ್ಷಗಳಾದವು. ರಿಚರ್ಡ್ ಸ್ಟಾಲ್‌ಮನ್ ಪುಸ್ತಕಗಳನ್ನು ಬರೆದು ವರ್ಷಗಳಾಗಿವೆ. ನಿಯಾಂ ಚೋಮ್‌ಸ್ಕಿ ಎಂಬ ವಿಶ್ವದ ಉನ್ನತ ಶ್ರೇಯಾಂಕದ ಚಿಂತಕರು ಈ ಬಗ್ಗೆ ನಿಮ್ಮನ್ನು ಬೆಚ್ಚಿಬೀಳಿಸುವ ಲೇಖನಮಾಲೆಯನ್ನೇ ಬರೆದಿದ್ದಾರೆ. ಯೂರೋಪಿನಲ್ಲಿ ಡಿಜಿಟಲ್ ಹಕ್ಕುಗಳ ಬಗ್ಗೆ ಭಾರೀ ಚಳವಳಿ ಶುರುವಾಗಿದೆ.
ಒಟ್ಟಿನಲ್ಲಿ ಡಿಜಿಟಲ್ ಯುಗವೂ ಎಲ್ಲ ಯುಗಗಳಂತೆ ನಮ್ಮನ್ನು ಮತ್ತೆ ಬಂಡವಾಳಶಾಹಿ ವ್ಯವಸ್ಥೆಯ ಗುಲಾಮರನ್ನಾಗಿ ಮಾಡುತ್ತಿದೆ. ಜನಪ್ರಿಯವಾಗುತ್ತಿರುವ ಬಯೋಮೆಟ್ರಿಕ್ ವ್ಯವಸ್ಥೆಯಿಂದಾಗಿ ಹೆಬ್ಬೆಟ್ಟು ಒತ್ತಿಯೇ ಕೆಲಸಕ್ಕೆ ಹಾಜರಾಗಬೇಕಾದ ಕಾಲ ಬಂದುಬಿಟ್ಟಿದೆ ; ಈ ಕುರಿತ ಅರ್ನಾಲ್ಡ್ ಶ್ವಾಜೆಂಜರನ ಸಿನೆಮಾ ತೀರಾ ಹಳೆಯದಾಯಿತು.
ಹೌದು ಸ್ವಾಮಿ ; ಡಿಜಿಟಲ್ ಯುಗ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ನಿಮ್ಮ ಎಲ್ಲ ಖಾಸಗಿತನವನ್ನು ದರದರ ಎಳೆದು ತರಿದುಹಾಕುತ್ತಿದೆ.
ಹಾಗಾದರೆ ಈ ಖಾಸಗಿತನವಾದರೂ ಯಾಕೆ ಬೇಕು? ಇದು ಮೂರಾಬಟ್ಟೆಯಾದರೆ ಏನಂಥ ಅಪಾಯವಿದೆ?
ಕೇಳಿ, ನಾನಂತೂ ಈಗ ಉತ್ತರಿಸುವುದಿಲ್ಲ. ಯಾಕೆಂದರೆ ಈಗಲೂ ನಾವು ಚಾರ್ಮಾಡಿ ಘಾಟಿನಲ್ಲಿ ಖಾಸಗಿತನವನ್ನು ಅನುಭವಿಸುತ್ತ ಪ್ರಿಯರಿಗೆ ಮೊಬೈಲ್ ಕರೆ ಮಾಡಬಹುದು. ಯಾವುದೋ ಮೊಬೈಲ್ ಜಾಹೀರಾತಿನಲ್ಲಿ ತೋರಿಸಿದ ಹಾಗೆ ಮಳೆಯ ಸದ್ದನ್ನು ಇನ್ನೊಬ್ಬರಿಗೆ ಕೇಳಿಸಬಹುದು.
ಒಂದೇ ಷರತ್ತು: ನಿಮ್ಮ ಇರುವಿಕೆ ಯಾರಿಗೂ ಗೊತ್ತಿಲ್ಲ ಎಂದೇ ಭಾವಿಸಿ ; ಕಣ್ಣುಮುಚ್ಚಿಕೊಂಡು ಹಾಲು ಕುಡಿವ ಬೆಕ್ಕಿನ ಹಾಗೆ.
ಅದಿಲ್ಲವಾದರೆ, ನೀವೂ ಡಿಜಿಟಲ್ ಫ್ರೀಡಂ ಬಗ್ಗೆ ಒಂದಷ್ಟು ಚಿಂತಿಸಿ. ಬದುಕು ವಿದ್ಯುನ್ಮಾನ ಆಲೆಗಳ ಸವಾರಿಯಲ್ಲಿ ಕಳೆದುಹೋಗುವುದು ಬೇಡ. ಡಿಜಿಟಲ್ ಕ್ರಾಂತಿಯನ್ನು ಬಳಸೋಣ; ಆದರೆ ಎಲ್ಲವನ್ನೂ ಮರೆತು ಬದುಕುವುದನ್ನೂ ಕಲಿಯೋಣ.
ಯಾಕೆಂದರೆ ಇಂಥ ಯಾವ ಸಾಧನಗಳೂ ಇಲ್ಲದೆ ಇರುವರು ಬೇಕಾದಷ್ಟು ಜನ ಇದ್ದಾರೆ. ಒಂದು ರೀತಿಯಲ್ಲಿ ಅವರೆಲ್ಲ ಅದೃಷ್ಟವಂತರೇ! ಆದರೆ ಅವರಿಗೆ ಈ ಪತ್ರಿಕೆ ಸಿಕ್ಕುವುದೇ ಇಲ್ಲ. ಸಿಕ್ಕಿದರೂ, ಈ ಅಕ್ಷರಗಳು ಅರ್ಥವಾಗುವುದೇ ಇಲ್ಲ.
ಈ ಅರಿವು ನಮ್ಮೆಲ್ಲ ಯುವಸಮುದಾಯಕ್ಕೆ ಅರಿವಾಗಬೇಕು. ನಾಗರಿಕತೆ ಬೆಳೆದಂತೆ ಎಸ್ ಎಂ ಎಸ್‌ಗಳೇ ಬದುಕಿನ ನೂರಾರು ಗಂಟೆಗಳನ್ನು ತೆಗೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಈ ಹೊಣೆಗಾರಿಕೆಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು.
———————-

Leave a Reply

Theme by Anders Norén