ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

ರಂಗನಾಥರ ಬಹುಮುಖೀ ಬದುಕು

ಕ್ಯಾಮೆರಾ ಇಲ್ಲದೆ ಇದ್ದರೂ ನಾನು ಪತ್ರಕರ್ತನಂತೆ ಬೀಗುತ್ತಿದ್ದ ಆ ದಿನಗಳಲ್ಲಿ ರಂಗನಾಥ ನನಗೆ ತಮ್ಮದೇ ಒಂದು ಎಸ್ ಎಲ್ ಆರ್ ಕ್ಯಾಮೆರಾವನ್ನು ಕಡ ಕೊಟ್ಟಿದ್ದರು. ನಿನ್ನದೇ ಕ್ಯಾಮೆರಾ ಅಂತ  ತಿಳ್ಕೋ… ನಾನು ಕೇಳ್ದಾಗೆಲ್ಲ ಕೊಡು ಎಂದು ತಮಾಷೆ ಮಾಡಿದ್ದರು. ನಾನು ಸುಮಾರು ಐದು ವರ್ಷ ಅವರ ಕ್ಯಾಮೆರಾವನ್ನು ಇಟ್ಟುಕೊಂಡಿದ್ದೆ. ಫಿಲ್ಮ್ ಹಾಕುವುದಷ್ಟೇ ನನ್ನ ಕೆಲಸ. ನನ್ನ ಅಮ್ಮನ ತವರೂರಾದ ಹೊಡಬಟ್ಟೆಯಲ್ಲಿ (ಉಳವಿ ಹತ್ತಿರ, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ) ಕೇಶವ ನಾರಾಯಣನ ಚಿತ್ರ ತೆಗೆದಿದ್ದು ಈಗ ಒಂದು ಒಳ್ಳೇ ನೆನಪು.

ಈ ಮಧ್ಯೆ ಮಸ್ಕಿಯು ಕೂಪ್‌ಮನ್ ಕನ್ಸಲ್ಟನ್ಸಿ ಸರ್ವಿಸಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದ. ಅದರಲ್ಲಿ ಬಿ.ಆರ್. ರವೀಂದ್ರನಾಥ ಎಂಬ ನಮ್ಮೆಲ್ಲರ ಕಾಮನ್ ಪರಿಚಿತರೂ ನಿರ್ದೇಶಕರಾಗಿದ್ದರು. ಅವರನ್ನು ತೆಗೆದುಹಾಕುವ ಭರದಲ್ಲಿ ನನ್ನನ್ನೇ ಅದರ ನಿರ್ದೇಶಕ ಎಂದು ದಾಖಲಿಸಿದ್ದರು. ಸೆಕೆಂಡ್ ಹ್ಯಾಂಡ್ ಬಜಾಜ್ ಸ್ಕೂಟರಿನಲ್ಲಿ ಓಡಾಡುತ್ತಿದ್ದ ನಾನು ಇಂಥ ಸಂಸ್ಥೆಯ ನಿರ್ದೇಶಕನಾಗೋದು ಎಂದರೆ ಸಣ್ಣ ವಿಚಾರವೆ? ತುಂಬಾ ಬೀಗಿದ್ದೆ. 

ಆದರೆ ಕೆಲವು ದಿನಗಳಾದ ಮೇಲೆ ರಂಗನಾಥರು ‘ಸುದರ್ಶನ ಎಲ್ಲ ಸರಿ, ಆದರೆ ಟೀಮ್ ಪ್ಲೇಯರ್ ಅಲ್ಲ’ ಎಂದರೆಂದು ಮಸ್ಕಿ ಹೇಳಿದ್ದ. ಹಾಗೆ ಅವರು ಹೇಳಿದ್ದು ನಿಜವೋ ಸುಳ್ಳೋ ಎಂಬ ಅನುಮಾನ ಈಗ ಕಾಡುತ್ತಿದೆ. ಅದಕ್ಕೇ ನಾನು ಕೋಪಿಸಿಕೊಂಡು ಕ್ಯಾಮೆರಾವನ್ನು ಅವರಿಗೆ ವಾಪಸು ಮಾಡಿದ್ದೆ. ಕೆಲವು ತಿಂಗಳುಗಳ ಕಾಲ ಅದು ಅವರಲ್ಲೇ ಇತ್ತು. ಒಂದು ದಿನ ಫೋನ್ ಮಾಡಿ ‘ಏನಪ್ಪಾ, ಈ ಮನುಷ್ಯನ ಮೇಲೆ ಯಾಕೆ ನಿನಗೆ ಬೇಜಾರು? ಕ್ಯಾಮೆರಾ ತಗೊಂಡು ಹೋಗು’ ಎಂದು ಕರೆದರು. ನನ್ನ ಕೋಪವೆಲ್ಲ ಜರ್ರನೆ ಇಳಿಯಿತು. 

ಅದಾದ ಮೇಲೆ ನಾನು ಈ ಮಸ್ಕಿಯ ಸುಕೋ ಬ್ಯಾಂಕಿನಲ್ಲೇ ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಮಾರುತಿ ಕಾರು ತಗೊಂಡೆ. ( ಈ ಕಾರಿನ ಸಾಲದ ಕಂತುಗಳನ್ನು ಅಂತೂ ಇಂತೂ ಬಡ್ಡಿಸಮೇತ ತೀರಿಸಿದ್ದೇನೆ ಅಂದುಕೊಂಡಿದ್ದೇನೆ) ಕಾರು ಬಂದ ಮೊದಲನೇ ದಿನವೇ ಸೀದಾ ರಂಗನಾಥರ ಮನೆಗೆ ಹೋದೆ. ರಾತ್ರಿ ಎಂಟು ಗಂಟೆ. ರಂಗನಾಥರು ಎಂದಿನಂತೆ ಗುಂಡು ಹಾಕಿ ಯಾವುದೋ ಪುಸ್ತಕ ಓದುತ್ತಿದ್ದರು. ಕರೆದೆ. ಕೊಡಯ್ಯಾ ನಾನೂ ಡ್ರೈವ್ ಮಾಡ್ತೀನಿ ಎಂದು ಕೀಲಿ ಕಸಿದುಕೊಂಡರು. ನನಗೋ ಭಯ. ಅದಾಗಲೇ ಅವರು ಮಲ್ಲೇಶ್ವರದಿಂದ ವೈಯಾಲಿ ಕಾವಲ್‌ಗೆ ಬಂದಿದ್ದರು. ಮೊದಲೇ ಏರಿಳಿಯುವ ನ್ಯಾರೋ ಕ್ರಾಸ್ ರೋಡ್‌ಗಳು. ರಾತ್ರಿ; ಗುಂಡೇರಿಸಿದ ರಂಗನಾಥ. ಭಯವೇ ಆಯ್ತು. ಆದರೆ ರಂಗನಾಥರು ತುಟಿ ಬಿಗಿ ಹಿಡಿದು ಕಾರು ಓಡಿಸಿದರು. ಹದಿನೈದನೇ ಕ್ರಾಸಿನಲ್ಲಿ ಓಡಿಸಿ ಮತ್ತೆ ಮಾರ್ಗೋಸಾ ರಸ್ತೆಯಗುಂಟ ಸಾಗಿ ಯೂ ಟರ್ನ್ ಮಾಡಿಕೊಂಡು ಮನೆಗೆ ಬಂದರು. ಸ್ವಲ್ಪ ಸರ್ವಿಸ್ ಮಾಡ್ಸು, ಚೆನಾಗಿದೆ ಕಾರು ಎಂದರು. 

ಅವರ ಮಾರುತಿ ವ್ಯಾನಿನಲ್ಲಿ ನೂರಾರು ಸಲ ಓಡಾಡಿದ್ದೇನೆ. ಗುಂಡು ಹಾಕಿರಲಿ, ಹಾಕದಿರಲಿ, ಒಂದೇ ಥರ, ನಿಧಾನವಾಗಿ, ಸುರಕ್ಷಿತವಾಗಿ ಕಾರು ಓಡಿಸುತ್ತಿದ್ದರು. ಎಲ್ಲೂ ಟ್ರಾಫಿಕ್ ನಿಯಮಗಳನ್ನು ಮೀರಲಿಲ್ಲ. ಕೈಯಲ್ಲೊಂದು ಸಿಗರೇಟು ಹಿಡಿಯುತ್ತಿದ್ದರು. 

ನಾನು ನನ್ನ ಕಾರಿನಲ್ಲಿ ಯಾರಿಗೂ ಸ್ಮೋಕಿಂಗ್ ಮಾಡಲು ಬಿಟ್ಟಿರಲಿಲ್ಲ; ಆದರೆ ರಂಗನಾಥರಿಗೆ ಬ್ಲಾಂಕೆಟ್ ಅನುಮತಿ ಇತ್ತು. ಅವರಿಗೆ ಹೇಳಿದ್ದೆ: ನೀವು ನನ್ನ ಪ್ರಿಯ ಸ್ನೇಹಿತರು; ನನ್ನ ಕಾರಿನಲ್ಲಿ ನೀವು ಸಿಗರೇಟು ಸೇದಬಹುದು; ಗುಂಡು ಹಾಕಿ ಕೂರಬಹುದು…..  ನಿಜಕ್ಕೂ ರಂಗನಾಥರು ತಮ್ಮ ಈ ಹವ್ಯಾಸಗಳ ಹೊರತಾಗಿಯೂ ನನಗೆ, ನನ್ನಂಥ ಹಲವರಿಗೆ ಇಷ್ಟವಾಗಿದ್ದರು.

ಬ್ರಿಟಿಶ್ ಲೈಬ್ರರಿಗೆ ಹೋಗಿ ಮೂರ್‍ನಾಲ್ಕು ಪುಸ್ತಕಗಳನ್ನು ತರುವುದು; ಹಾಸಿಗೆಯಲ್ಲಿ ಒರಗಿ ಓದುವುದು ಅವರ ಪ್ರೀತಿಯ ಹವ್ಯಾಸವಾಗಿತ್ತು. ಒಂದು ಪುಸ್ತಕವನ್ನು ಒಂದೆರಡು ದಿನಗಳಲ್ಲೇ ಓದುವುದು ಅವರ ಜಾಯಮಾನ. ಆಮೇಲೆ ನನಗೋ, ಯಗಟಿ ಕೃಷ್ಣಮೂರ್ತಿಗೋ ಫೋನ್ ಮಾಡಿ ಪುಸ್ತಕದಲ್ಲಿ ಏನು ಹೇಳಿದ್ದಾನೆ, ಯಾಕೆ ಅವನ ಅಭಿಪ್ರಾಯ ಸರಿಯಾಗಿದೆ, ತಪ್ಪಾಗಿದೆ ಎಂದು ತಮ್ಮೆಲ್ಲ ಕಾಮೆಂಟ್‌ಗಳನ್ನೂ ವಿವರಿಸುತ್ತಿದ್ದರು. ನಾನೂ ಅವರ ಹತ್ತಿರ ಹೋಗುತ್ತಿದ್ದುದು ಇದೇ ಕಾರಣಕ್ಕಾಗಿ; ನಾನು ಪುಸ್ತಕ ಓದುವ ಬದಲು ಅವರ ಕಾಮೆಂಟ್ ಕೇಳಿಯೇ ತೃಪ್ತನಾಗುತ್ತಿದ್ದೆ. ಜಾನ್ ಗ್ರಿಬಿನ್‌ನ ವಿಜ್ಞಾನ ಲೇಖನಗಳ ಬಗ್ಗೆ ವಿವರಿಸಿ ಅವನ ಬಗ್ಗೆ ಆಸಕ್ತಿ ಹುಟ್ಟಿಸಿದ್ದೇ ರಂಗನಾಥರು. ಹಾಗೇ ಶ್ರೀನಿವಾಸ ರಾಮಾನುಜಮ್ ಸ್ನೇಹಿತ / ಗುರು ಜಿ.ಎಚ್. ಹಾರ್ಡಿಯ ‘ಎ ಮ್ಯಾಥೆಮ್ಯಾಟಿಶಿಯನ್ಸ್ ಅಪಾಲಜಿ’ ಎಂಬ ಅತಿ ಸರಳ ಪುಸ್ತಕವನ್ನು ನನಗೆ ಓದಿ ಹೇಳಿದ್ದರು. ಗಣಿತಜ್ಞನ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂದು ಹಾರ್ಡಿ ಬರೆದ ಈ ಪುಟ್ಟ ಪುಸ್ತಕ ನಿಜಕ್ಕೂ ಕಾವ್ಯದ ಗುಣಗಳನ್ನು,  ಲಲಿತ ಪ್ರಬಂಧದ ಛಾಯೆಯನ್ನು ಹೊಂದಿದೆ.

ಜೀನಿಯಸ್‌ಗಳೂ ಒಂದಲ್ಲ ಒಂದು ಸಲ ಮೂರ್ಖರ ಥರ ತೋರಿಸ್ಕೋತಾರೆ ಎಂದು ನಾವೆಲ್ಲ ಕೇಳಿದೇವೆ. ರಂಗನಾಥರೂ ಇದಕ್ಕೆ ಹೊರತಾಗಿರಲಿಲ್ಲ. ಒಂದ್ಸಲ ಈ ಮಸ್ಕಿ ಬ್ಯಾಂಕಿನ ಸಿಬ್ಬಂದಿಗಳಿಗಾಗಿ ಒಂದು ಕಾರ್ಯಾಗಾರ ಏರ್ಪಡಿಸಿದ್ದ. ಅದರಲ್ಲಿ ನಾನೂ ಭಾಗವಹಿಸಿದ್ದೆ. ರಂಗನಾಥರೂ ಇದ್ದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶಿಕಾರಿಪುರ ಕೃಷ್ಣಮೂರ್ತಿಯವರು ಯಥಾಪ್ರಕಾರ ಒಂದು ಹಾಳೆ ಕೊಟ್ಟು ಇದರಲ್ಲಿ ಇರೋದನ್ನೆಲ್ಲ ಪಾಲಿಸಿರಿ ಎಂದು ಸೂಚಿಸಿದರು. ಅದರಲ್ಲಿದ್ದ ಸೂಚನೆಗಳನ್ನು ಎಲ್ಲರೂ ಸರಸರ ಓದಿದರು. ಕೆಲವು ಎದ್ದುನಿಂತು ‘ನನ್ನ ಹೆಸರು….. ’ ಎಂದು ಕೂರುತ್ತಿದ್ದರು. ನಾನು ಇನ್ನೂ ಸೂಚನೆಗಳನ್ನು ಓದ್ತಾನೇ ಇದ್ದೆ. ಸಡನ್ನಾಗಿ ರಂಗನಾಥರೂ ಎದ್ದು ನಿಂತು ‘ರಂಗನಾಥ, ಬ್ಯಾಂಕಿಂಗ್ ಸಲಹೆಗಾರ’ ಎಂದು ಗಟ್ಟಿಯಾಗಿ ಹೇಳಿ ಕೂತರು. ವಾಸ್ತವವಾಗಿ ಕೃಷ್ಣಮೂರ್ತಿ ಕೊಟ್ಟ ಸೂಚನೆಗಳ ಪಟ್ಟಿಯ ಕೊನೆಯಲ್ಲಿ ‘ಈ ಸೂಚನೆಗಳನ್ನು ಮೊದಲು ಓದಿಕೊಳ್ಳಿ. ಯಾವುದೇ ಸಂದರ್ಭದಲ್ಲೂ ಪ್ರತಿಕ್ರಿಯೆ ನೀಡಬೇಡಿ’ ಎಂಬ ಅರ್ಥ ಬರುವ ಇನ್ನೊಂದು ಅಲ್ಟಿಮೇಟ್ ಸೂಚನೆಯಿತ್ತು! ಆದರೆ ರಂಗನಾಥರೂ ಸೇರಿದಂತೆ ಹಲವರು ಅರ್ಧದಲ್ಲಿಯೇ ಸೂಚನೆಗಳನ್ನು ಪಾಲಿಡುವ ಗಡಿಬಿಡಿ ತೋರಿದ್ದರು! ಅದಾದ ಮೇಲೆ ರಂಗನಾಥರು ‘ಪರವಾಗಿಲ್ಲ, ವರ್ಕ್‌ಶಾಪ್‌ನಲ್ಲಿ ಸ್ಟಫ್ ಇದೆ’ ಎಂದು ಉದ್ಗರಿಸಿದರು.

ರಂಗನಾಥರ ಇನ್ನೊಂದು ಮುಖ ಎಂದರೆ ತಮ್ಮ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಲು ತವಕಿಸಿದ ಮನಸ್ಸು. ಅವರ ತಂದೆ ಹಿರಿಯ ವಿದ್ವಾಂಸರಾಗಿದ್ದರು. ತಾಯಿಯವರಂತೂ ದೈವತ್ವದ ಬಿಂಬ. ನನಗಂತೂ ಅವರನ್ನು ನೋಡಿದರೆ ಪೂಜ್ಯ ಭಾವನೆ ಬರುತ್ತಿತ್ತು. ಅವರನ್ನು ನೋಡಿಕೊಳ್ಳಲೆಂದೇ ರಂಗನಾಥರು ವೈಯಾಲಿ ಕಾವಲ್‌ಗೆ ಮನೆ ಬದಲಿಸಿದ್ದರು. ಕೆಳಗೆ ಅಪ್ಪ, ಅಮ್ಮ; ಮೇಲೆ ರಂಗನಾಥರ ಮನೆ. ಅಪ್ಪನಿಗೆ, ಅಮ್ಮನಿಗೆ ದಿನಹಿ ಕೆಲಸಗಳಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಅವರು ಮಾಡಿದ್ದರು. ರಂಗನಾಥರು ತೀರಿಕೊಳ್ಳುವ ಕೆಲ ತಿಂಗಳ ಮುಂಚೆಯಷ್ಟೇ ಅವರ ತಂದೆಯವರೂ ದೈವಾಧೀನರಾದರು. 

ನಾನು ಪ್ರತೀ ಸಲ ಕೆಲಸ ಬದಲಿಸಿದಾಗಲೂ ಅವರ ಮನೆಗೆ ಹೋಗಿ ಹೇಳುತ್ತಿದ್ದೆ. ಪ್ರತೀ ಸಲವೂ ಅವರು ನನಗೆ ಶುಭಾಶಯ ಹೇಳಿ, ಸಿಹಿ ಕೊಡುತ್ತಿದ್ದರು. ತಮ್ಮ ಪತ್ನಿಯನ್ನು ಕರೆದು ಮತ್ತೆ ಮತ್ತೆ ನನ್ನನ್ನು ಛೇಡಿಸುತ್ತಿದ್ದರು. ಅವರ ಮನೆಯಲ್ಲಿ ಊಟ ಮಾಡಿದ ದಿನಗಳಿಗೆ ಲೆಕ್ಕವಿಲ್ಲ. ‘ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ, ಊರಿಗೆ ದ್ರೋಹ ಮಾಡಿ ಬದುಕಲೆಣಿಸಬೇಡ’ ಎಂಬ ಮಾತು ಅವರಿಗೆ ನಿಜಕ್ಕೂ ಅನ್ವಯವಾಗಿತ್ತು. ದುರದೃಷ್ಟವಶಾತ್ ಅವರಿಗೆ ಎರಡು ಬಗೆದವರು ಊರಿಗೂ ದ್ರೋಹ ಮಾಡುತ್ತಿದ್ದಾರೆ. 

ಟೆಸ್ಟ್ ಕ್ರಿಕೆಟ್ ಅವರಿಗೆ ಒಬ್ಸೆಶನ್. ಅಂಥ ಸಮಯದಲ್ಲಿ ನಾನು ಹೋದರೆ ಚಹಾ ತರಿಸಿ ಕ್ರಿಕೆಟ್ಟಿನಲ್ಲೇ ಮಗ್ನರಾಗುತ್ತಿದ್ದರು. ಕ್ರಿಕೆಟ್ ಅನಲಿಸಿಸ್‌ನ್ನು ಅವರ ಬಾಯಲ್ಲೇ ಕೇಳಬೇಕು. ನನಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಚಕತೆ ಇದೆ ಎಂದು ಅನಿಸಿದ್ದೇ ಅವರ ಮಾತಿನಿಂದ. 

ಒಮ್ಮೆ ಮುರ್ಡೇಶ್ವರದಲ್ಲಿ ಬ್ಯಾಂಕಿಂಗ್ ತರಬೇತಿ ಇತ್ತು. ಅರ್ಬನ್ ಬ್ಯಾಂಕ್ ಫೆಡರೇಶನ್‌ನಲ್ಲಿ ಮಾಧ್ಯಮ ಸಲಹೆಗಾರನಾಗಿದ್ದಾಗ ಇಂಥ ಕಾರ್ಯಾಗಾರಗಳಲ್ಲಿ ನಾನೂ ಭಾಗವಹಿಸುತ್ತಿದ್ದೆ. ಅಲ್ಲಿಗೆ ರಂಗನಾಥರೂ ಸಂಪನ್ಮೂಲ ವ್ಯಕ್ತಿಯಾಗಿ ಬಂದಿದ್ದರು. ಮೊದಲ ದಿನವೇ ಅವರು ವಾಪಸಾಗಬೇಕಿತ್ತು. ಸರಿ, ಸಂಜೆಯೇ ಬಾ ಎಂದು ಕರೆದು ಬಾರಿನಲ್ಲಿ ಕೂತು ಗುಂಡು ಹಾಕಿದರು. ಬೇಡ ಬೇಡ ಎಂದರೂ ನನಗೆ ವೈನ್ ತರಿಸಿದರು. ‘ನಮ್ಮಿಬ್ಬರಿಗೂ ಪ್ರಿಯವಾದ ಜಲಪುಷ್ಪಗಳನ್ನು ಸವಿಯೋಣ’ ಎಂದರು. ಮೀನು ಐಟಂಗಳನ್ನು ತರಿಸಿದರು.  ಎಷ್ಟೋ ಪೆಗ್ ಹಾಕಿ ರಾತ್ರಿ ಬಸ್ಸಿಗೆ ಹೊರಟರು. 

ಮರುದಿನ ಬೆಳಗ್ಗೆಯೇ ಫೋನ್. ‘ಸುದರ್ಶನ, ನಿನ್ನೆ ನಾನು ಮುಡೇಶ್ವರದಿಂದ ಬೆಂಗಳೂರಿಗೆ ಬಂದ್ನಲ್ಲ, ಎಂಥ ರ ಮ್ಯವಾದ ರೂಟ್ ಮಾರಾಯ….. ರಾತ್ರಿಯಿಡೀ ಘಾಟಿ ಸೆಕ್ಷನ್ನಿನಲ್ಲಿ ಸಾಗಿದ ಆ ರೂಟನ್ನು ನಾನು ಮರೆಯೋ ಹಾಗೆಯೇ ಇಲ್ಲ. ನಿಜಕ್ಕೂ ಬಸ್ಸು ಹತ್ತಿ ಘಾಟಿ ನೋಡಿದ ಮೇಲೆ ನನ್ನ ಅಮಲೆಲ್ಲ ಇಳಿದೇ ಹೋಯ್ತು ಎಂದರು. ಪ್ರಕೃತಿಯ ರಮ್ಯ ತಾಣಗಳನ್ನು ನೋಡಿದಾಗ ಅವರು ಭಾವುಕರಾಗುತ್ತಾರೆ; ಗುಂಡು ಹಾಕಿದ್ದರೂ ಅವರು ಕಿಕ್‌ಗೆ ಒಳಗಾಗುವುದಿಲ್ಲ ಎಂಬುದಕ್ಕೆ ಇದೊಂದು ಪುಟ್ಟ ನಿದರ್ಶನ. 

ಎಲ್ಲಕ್ಕಿಂತ ನಾನು ಅವರನ್ನು ಇನ್ನೊಂದು ವಿಶಿಷಟ ಕೆಲಸಕ್ಕೆ ಬಳಸಿಕೊಳ್ತಾ ಇದ್ದೆ. ಹಣಕಾಸು, ಬ್ಯಾಂಕಿಂಗ್,ತೆರಿಗೆ, ಇತಿಹಾಸ, ವಿಜ್ಞಾನ – ಹೀಗೆ ಯಾವುದೇ ವಿಷಯದಲ್ಲಿ ಅನುಮಾನ ಬಂದಾಗಲೂ ನಾನು ಸೀದಾ ನನ್ನ ಲೈವ್ ಎನ್‌ಸೈಕ್ಲೋಪೀಡಿಯಾ ರಂಗನಾಥರಿಗೆ ಫೋನ್ ಮಾಡುತ್ತಿದ್ದೆ. ತಕ್ಷಣವೇ ಅವರಿಂದ ಸರಿಯಾದ ಉತ್ತರ ಸಿಗುತ್ತಿತ್ತು. ಹೀಗೆ ಈ ವರ್ಷಗಳಲ್ಲಿ ನಾನು ಅವರಿಗೆ ನೂರಾರು ಕಾಲ್ ಮಾಡಿದ್ದೇನೆ. ಎಂದೂ ಅವರು ಬೇಸರಿಸಲಿಲ್ಲ. 

ಬಿಡಿ ಬಿಡಿ ನೆನಪುಗಳು ಚಡಪಡಿಸಿಕೊಂಡು ಹೊರಬರುತ್ತಿವೆ. ರಂಗನಾಥರನ್ನು ಮತ್ತೆ ನಾನು ನೋಡುವುದಿಲ್ಲ, ಅವರೊಂದಿಗೆ ವಾಕಿಂಗ್ ಮಾಡುವುದಿಲ್ಲ. ಪುಸ್ತಕಗಳ ಬಗ್ಗೆ ಚರ್ಚೆ ನಡೆಸುವುದಿಲ್ಲ. ಎದೆಯೊಳಗೆ ರಂಗನಾಥರ ನಗು, ಅವರ ದಪ್ಪ ತುಟಿಗಳಿಂದ ಸೂಸುವ ನಗೆ, ಅವರ ಪ್ರೀತಿಹೊತ್ತ ಕಣ್ಣುಗಳು, ಅವರ ಇಂಟೆಲೆಕ್ಚುಯಲ್ ಜೋಕ್‌ಗಳ ವೈಖರಿ, ಅವರ ಬದುಕಿನ ಪರಿ – ಎಲ್ಲವೂ ಮತ್ತೆ ಮತ್ತೆ ನೆನಪಾಗುತ್ತಿವೆ. ನನ್ನ ಪ್ರಿಯ ರಂಗನಾಥರು ಮೊನ್ನೆ ಹೇಗೆ ಶಾಂತವಾಗಿ ನನ್ನನ್ನು ಬಿಟ್ಟುಹೋದರು ಎಂದು ಮನಸ್ಸು ಭಾರವಾಗುತ್ತಿದೆ. 

ಏನೇ ಇರಲಿ, ರಂಗನಾಥರ ಬದುಕಿನ ಶೈಲಿ ನನ್ನ ಮೇಲೆ ತುಂಬಾ ಪರಿಣಾಮ ಬೀರಿದೆ. ಅವರು ದೋಷಗಳನ್ನು ಅನಲೈಸ್ ಮಾಡುವ ರೀತಿ ನನ್ನ ವಿಶ್ಲೇಷಣಾ ವಿಧಾನವನ್ನು ತಿದ್ದಿದೆ. ನನಗೇನಾದೂ ಹಣಕಾಸಿನ ದಾಖಲೆಗಳ ಬಗ್ಗೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬಂದಿದ್ದರೆ ಅದಕ್ಕೆ ಅವರೇ ಕಾರಣ. 

ನಾನು ೧೯೯೫ರಲ್ಲಿ ಬೆಂಗಳೂರಿಗೆ ಬಂದಾಗಿನಿಂದ ಇದುವರೆಗೆ ಕಂಡುಕೊಂಡ ಹೊಸ ಗೆಳೆಯರಲ್ಲಿ ರಂಗನಾಥರಿಗೆ ಮೊದಲ ಸ್ಥಾನವಿದೆ. ಆ ಸ್ಥಾನವನ್ನು ಅವರು ಎಂದೂ ಕಳೆದುಕೊಳ್ಳುವುದಿಲ್ಲ. ಬೇರೆಯವರು ಅವರನ್ನು ಬದಲಿಸುವುದು ನನಗಂತೂ ಊಹಿಸಲಸಾಧ್ಯ.

 

1 Comment

  1. Samad Kottur

    Remembering the departed beloved ones gives much relief and at the same time sadness of for the void. Your description is fantastic.

Leave a Reply

Theme by Anders Norén