ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Santa Kabira: The weaver of social harmony

ಸಾಮರಸ್ಯದ ನೇಕಾರ ಸಂತ ಕಬೀರ

ಸಾಮರಸ್ಯದ ನೇಕಾರ
ಸಂತ ಕಬೀರ
`ಕೇವಲ ಅಬ್ರಾಹ್ಮಣರು ಮುಟ್ಟಿದಾಗ ಮಾತ್ರವೇ ಈ ನೀರು ಕಲುಷಿತವಾಗುವುದು ಹೇಗೆ?  ನೀರು ಕುಡಿಯಬೇಕಾದರೆ ನಿನಗೆ ನೀರಿನೊಳಗೆ ಇರುವುದೇನು ಎಂದು ಗೊತ್ತಿರಬೇಕು.  ಮಹಾಭಾರತ ಯುದ್ಧದಲ್ಲಿ ೫೬ ಕೋಟಿ ಯಾದವರು ಮತ್ತು ೮೮ ಸಾವಿರ ಇತರರು ಸತ್ತರು ಎಂದು ನಿಮ್ಮ  ಪವಿತ್ರಗ್ರಂಥಗಳು ಹೇಳುತ್ತವೆ. ಅವರ ಮಾಂಸ, ರಕ್ತ, ಮಜ್ಜೆಗಳೆಲ್ಲ ಈ ನೀರಿನಲ್ಲಿ ಬೆರೆತಿವೆ.  ಈ ನೆಲದಲ್ಲಿ ಪ್ರತಿಯೊಂದು ಅಂಗುಲದಲ್ಲೂ ಮೃತದೇಹಗಳನ್ನು ಹೂಳಲಾಗಿದೆ. ಅವುಗಳೆಲ್ಲ ಕೊಳೆತು ನೀರಿನಲ್ಲಿ ಬೆರೆತಿವೆ. ಲಕ್ಷಗಟ್ಟಳೆ ಆಮೆಗಳು, ಮೊಸಳೆಗಳು, ಕಪ್ಪೆಗಳು, ಮೀನುಗಳು ಈ ನೀರಿನಲ್ಲೇ ಬದುಕುತ್ತವೆ ; ಸಂತಾನಕ್ರಿಯೆ ನಡೆಸುತ್ತವೆ. ಈ ಎಲ್ಲ ಪ್ರಾಣಿಗಳು ಸತ್ತು ಅವುಗಳ ದೇಹಗಳು ಈ ನೀರಿನಲ್ಲಿ ಬೆರೆತಿವೆ. ನೀನು ಕುಟಿಯುತ್ತಿರುವ ನೀರು ಇಷ್ಟೆಲ್ಲ ಕಲುಷಿತವಾಗಿದೆ. ನೀರಿನ ಮೇಲೆ, ನೆಲದ ಮೇಲೆ ಅಸಂಖ್ಯ ಕೀಟಗಳು ಬುದಕಿ ಸಾಯುತ್ತವೆ. ಅವು ಈ ನೆಲದಲ್ಲಿ, ನೀರಿನಲ್ಲಿ ಬೆರೆತಿವೆ. ಅಲ್ಲ, ನೀನು ಕುಡಿಯುವ ಹಾಲಿನಲ್ಲಿ ಏನೇನಿದೆ ಗೊತ್ತೆ? ನಿನ್ನ ತಾಯಿಯ ಮೂಳೆ-ಮಾಂಸಗಳಿವೆ. ಪಂಡಿತನೆ, ಕೇವಲ ಮನುಷ್ಯನ ಸ್ಪರ್ಶಮಾತ್ರದಿಂದ ನೀರು ಅಪವಿತ್ರವಾಗುವುದಿಲ್ಲ. ಅದು ಲಕ್ಷಗಟ್ಟಳೆ ಜೀವಂತ ಮತ್ತು ಮೃತ ಪ್ರಾಣಿಗಳಿಂದ ಕಲುಷಿತಗೊಂಡಿದೆ. ನಿನ್ನ ವೇದ-ಶಾಸ್ತ್ರಗಳನ್ನೆಲ್ಲ ಎಸೆ. ಅವೆಲ್ಲ ಮನಸ್ಸಿನಿಂದ ಹುಟ್ಟಿದ್ದು; ದೇವರಿಂದಲ್ಲ.'
ಈ ಮಾತನ್ನು, ಅರೆ ಎಂಥ ಪ್ರಗತಿಗಾಮಿ, ಬುದ್ಧಿಜೀವಿ ಹೇಳಿದ್ದಾನೆ ಎಂದು ಉದ್ಗರಿಸಬಹುದು.
ಹೇಳಿದವ ಸಂತ ಕಬೀರ. ಹಾಗೆ ಹೇಳಿ ಸುಮಾರು ಆರುನೂರು ವರ್ಷಗಳಾಗಿವೆ.
ಸಂತ ಕಬೀರ ಬರಿಯ ನೇಕಾರ. ಬಟ್ಟೆ ಹೊಲೆದಂತೆ ನಾಡನ್ನೂ ನೇಯ್ದ. ಬೋಧನೆಯ ಬಟ್ಟೆಗೆ ಭಕ್ತಿಯ ಹದ ತಂದ.
ಅಲ್ಲಾನೂ ದೇವರೇ, ರಾಮನೂ ದೇವರೆ ಎಂದ ಮೊತ್ತಮೊದಲ ಸಂತ ಕಬೀರನೇ.
ಜನಸಾಮಾನ್ಯರ ಭಾಷೆಯಲ್ಲಿ ಕಬೀರ ರಚಿಸಿದ ಸಾಹಿತ್ಯವು ಈಗ ಹಿಂದಿ ಸಾಹಿತ್ಯದ ಮೂಲಾಧಾರವಾಗಿದೆ. ಮುಂದೆ ಸ್ಥಾಪಿತವಾದ ಸಿಖ್ ಪಂಥದ ಪ್ರಮುಖ ಗ್ರಂಥವಾದ ಗುರುಗ್ರಂಥಸಾಹೇಬದಲ್ಲಿ ಸಂತ ಕಬೀರನ ಪದಗಳಿವೆ.
ಹೌದಲ್ಲ, ಸಂತ ಕಬೀರ ಎಂದರೆ ಎಷ್ಟೆಲ್ಲ ಅಚ್ಚರಿ!
ಹಿಂದು ಸನ್ಯಾಸಿ ರಾಮಾನಂದರ ಶಿಷ್ಯನಾದ ಕಬೀರ ; ಅತ್ತಾರ್, ಸಾದಿ, ಜಲಾಲುದ್ದೀನ್ ರೂಮಿ, ಹಫೀಜ್ರಂಥ ಮಹಾನ್ ಪರ್ಶಿಯನ್ ಸಂತರ ಸಮಾನ ; ಆತ ಬ್ರಾಹ್ಮಣನೆ, ಮಹಮ್ಮದನೆ, ಬ್ರಾಹ್ಮಣನೆ, ವೈಷ್ಣವಿಯೆ? ತನ್ನ ವಂಶಾವಳಿಯೇ ಮುಂದೆ ಯಾರಿಗೂ ಖಚಿತವಾಗಿ ತಿಳಿಯಲಾಗದಂತೆ ೧೧೮ ವರ್ಷ ಬಾಳಿದ ಸಂತ ಕಬೀರ.
೧೫ನೇ ಶತಮಾನ. ವಾರಾಣಸಿಯಲ್ಲಿ ಭಕ್ತಿಪಂಥದ ಪರಾಕಾಷ್ಠೆ.  ಬ್ರಾಹ್ಮಣರು ಮತ್ತು ಮುಸ್ಲಿಮರು ಅಲ್ಲಿ ಸ್ವಾಮಿ ರಾಮಾನಂದರ ಆಶೀರ್ವಚನ ಕೇಳಲು ಬರುತ್ತಿದ್ದರು. ಹುಡುಗ ಕಬೀರನಿಗೆ ರಾಮಾನಂದರು ತೀರಾ ಹಿಡಿಸಿದರು.  ಅವರೇ ತನ್ನ ಗುರು ಎಂದು ಕಬೀರ ಕಂಡುಕೊಂಡ. ಆದರೆ ಅವರ ಶಿಷ್ಯನಾಗುವುದು ಹೇಗೆ? ರಾಮಾನಂದರು ದಿನವೂ ಗಂಗಾನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದರು. ಕಬೀರ ಅವರ ದಾರಿಯಲ್ಲಿ ಆಡಗಿ ಕುಳಿತ. ಅಕಾಸ್ಮಾತ್ತಾಗಿ ರಾಮಾನಂದರು ಕಬೀರನ ದೇಹವನ್ನು  ಮುಟ್ಟಿ ದಾಟಬೇಕಾಯಿತು. ಅರೆಕ್ಷಣ ಬೆಚ್ಚಿದ ಅವರು `ರಾಮಾ! ರಾಮಾ!' ಎಂದು. `ಸ್ವಾಮಿ, ನೀವು ಈಗ ನನಗೆ  ದೀಕ್ಷಾಮಂತ್ರ ಬೋಧಿಸಿದ್ದೀರಿ!' ಎಂದು ಕಬೀರ ತಣ್ಣಗೆ ಘೋಷಿಸಿದ.
ಕಬೀರ ಬಡವ, ಆತ ಅನಾಥ ಎಂದು ರಾಜ ತೀರ್ಮಾನಿಸಿದ. ಅವನಿಗೆ ಕೊಡಲೆಂದು ಭಾರೀ ಸಂಪತ್ತನ್ನು ದೂತರ ಬಳಿ ಕಳಿಸಿದ. ಗಂಗೆಯಲ್ಲಿ ಮಿಂದು ಬಂದ ಕಬೀರ ನೋಡಿದರೆ, ಮನೆ ಮುಂದೆ ಐಶ್ವರ್ಯ. ಕಬೀರನಿಗೆ ಆಶ್ಚರ್ಯ. ದೂತರ ಜೊತೆಗೆ ಕಬೀರನ ಸಂಭಾಷಣೆ ಹೀಗೆ ನಡೆಯಿತು:
`ಇದನ್ನೆಲ್ಲ ಯಾರು ಕಳಿಸಿದ್ದು?'
`ಮಹಾರಾಜರು ತಮಗಾಗಿ ಇದನ್ನು ಕಳಿಸಿದ್ದಾರೆ.'
`ಯಾಕೆ?'
`ತಾವು ಅನಾಥರು ಎಂದು ತಿಳಿದು.'
`ನಾಥರಿಲ್ಲದವರು ಅನಾಥರು. ನನಗೆ ಶ್ರೀ ರಾಮಚಂದ್ರನೇ ನಾಥ. ಆದ್ದರಿಂದ ನಾನು ಅನಾಥನಾಗುವುದೇ ಇಲ್ಲ. ಶ್ರೀ ರಾಮಚಂದ್ರನಿಗೆ ಮಿಗಿಲಾದವರಿಲ್ಲ. ಅದೇನಿದ್ದರೂ ನಾಥ ಶ್ರೀರಾಮಚಂದ್ರನಿಗೆ ಕೊಡಿ.'
ಕಂದಾಚಾರದ ಕಟುಟೀಕಾಕಾರ
ಕಬೀರ ಎಂದೂ ಕಂದಾಚಾರಗಳನ್ನು ಬೆಂಬಲಿಸಲಿಲ್ಲ. ಬದಲಿಗೆ ಅವುಗಳನ್ನು ವಿರೋಧಿಸುವುದರಲ್ಲಿ ಮುಂದು. ಮುಸ್ಲಿಮರ ಸುನ್ನತ್ ವಿಧಿಯನ್ನು ಕಬೀರ ಟೀಕಿಸಿದಂತೆ ಟೀಕಿಸಲು ಈಗಲೂ ನಮ್ಮ ಪ್ರಗತಿಪರ ಚಿಂತಕರಿಗೆ ಸಾಧ್ಯವಿಲ್ಲ. `ಮುಸ್ಲಿಮ್ ಪುರುಷರು ಸುನ್ನತ್ ಮಾಡಿಸಿಕೊಂಡರೆ ಮಾತ್ರ ನಿಜ ಮುಸಲ್ಮಾನರಾಗುವುದಾದರೆ ಸುನ್ನತ ಮಾಡಿಸಿಕೊಳ್ಳದ ಮುಸ್ಲಿಮ್ ಮಹಿಳೆಯರು ಮುಸ್ಲಿಮರಾಗುವರೆ? ಹಾಗಂತ ಅವರು ಕಾಫಿರರಾಗುವರೆ?' ಎಂದು ಕಬೀರ ಆಗಿನ ಮೌಲ್ವಿಗಳನ್ನು ಕೇಳಿ ತಬ್ಬಿಬ್ಬುಗೊಳಿಸಿದ್ದ.
ರಂಝಾನ್ ವಿಷಯದಲ್ಲೂ ಅಷ್ಟೆ: `ನೀವು ಹಗಲಿಡೀ ಉಪವಾಸ ಆಚರಿಸುತ್ತೀರಿ. ರಾತ್ರಿ ಗೋಹತ್ಯೆ ಮಾಡುತ್ತೀರಿ. ಇಲ್ಲಿ ಕೊಲೆ, ಅಲ್ಲಿ ಭಕ್ತಿ. ಇದಾವ ದೇವರಿಗೆ ಪ್ರೀತಿ?' ಎಂದು ಕಬೀರ ಕೇಳಿದ್ದ. ಖುರಾನ್ನನ್ನು ಕೇವಲ ಓದುವವರಿಗೆ ಕಬೀರ ಹೇಳುತ್ತಿದ್ದ: ಅರೆ, ನಿನಗೆ ಬರಿಯ ಓದಿನಿಂದ ಏನೂ ಸಿಗುವುದಿಲ್ಲ. ಯಾಕೆಂದರೆ ನೀನು ಅವನನ್ನು ನಿನ್ನ ಹೃದಯದಲ್ಲಿ ಹುಡುಕುತ್ತಿಲ್ಲ.
ಹಾಗೆಂದು ಹಿಂದು ಮತಾಂಧರನ್ನೂ ಕಬೀರ ಸುಮ್ಮನೆ ಬಿಡಲಿಲ್ಲ. ಬ್ರಹ್ಮೋಪದೇಶದ ಸಮಯದಲ್ಲಿ ಕಬೀರ ಕೇಳಿದ: `ಪುರುಷರು ಜನಿವಾರ ಹಾಕಿಕೊಂಡು ಬ್ರಾಹ್ಮಣರಾದರೆ ಮಹಿಳೆಯರ ಗತಿ ಏನು? ಅದಲ್ಲದೆ ಈ ಜನಿವಾರವೋ ಮುಸಲ್ಮಾನರಿಂದ ಮಾಡಿದ್ದು. ಅದನ್ನು ಹಾಕಿಕೊಂಡರೆ ನೀವು ಅಪವಿತ್ರರಾಗುತ್ತೀರಿ.'
ಪುಣ್ಯಸ್ನಾನ, ತೀರ್ಥಯಾತ್ರೆ, ಉಪವಾಸ, ಯಾಂತ್ರಿಕ ಪ್ರಾರ್ಥನೆಗಳು – ಎಲ್ಲವನ್ನೂ ಕಬೀರ ಎಷ್ಟು ಟೀಕಿಸಿದ ಎಂದರೆ ಆಗಿನ ಕಾಲದ ಬ್ರಾಹ್ಮಣರು ರೋಸಿಹೊಗಿದ್ದರು.
ಜಾತಿ, ಮನೆತನ, ವಂಶವೃಕ್ಷದ ಮೋಹವನ್ನು ಬಿಡಿ ; ಒಂದು ಲೆಕ್ಕಕ್ಕಿಲ್ಲದ ಇರುವೆಗೂ ಈ ಮೋಹಗಳಿಲ್ಲ. ಹಾಗೆ ಮಾಡಿದರೆ ನಿಮಗೆ ಸಕ್ಕರೆಯಂಥ ಮೋಕ್ಷ ಸಿಗುತ್ತದೆ' ಎಂದು ಕಬೀರ ಬುದ್ಧಿವಾದ ಹೇಳುತ್ತಿದ್ದ.
ಅದು ಬಿಡಿ, ಸಾಧು ಸನ್ಯಾಸಿಗಳ ಭಕ್ತಿಯ ಮಾರಾಟವನ್ನೂ ಕಬೀರ ಕಟುವಾಗಿ ಟೀಕಿಸಿದ:`ನಗ್ನವಾದರೆ ಮೋಕ್ಷ ಸಿಗುವುದೆಂದಾದರೆ ಕಾಡಿನಲ್ಲಿರುವ ಎಲ್ಲ ಪ್ರಾಣಿಗಳಿಗೂ ಮೋಕ್ಷ ಸಿಗುತ್ತದೆ. ಗಡ್ಡ ತೆಗೆದುಕೊಂಡರೆ ಮೋಕ್ಷ ಸಿಗುವುದಾದರೆ, ಎಲ್ಲ ಕುರಿಗಳಿಗೂ ಮೋಕ್ಷ ಸಿಗುತ್ತದೆ. ಬ್ರಹ್ಮಚರ್ಯವೇ ಮೋಕ್ಷಕ್ಕೆ ದಾರಿಯಾದರೆ ಎಲ್ಲ ಹಿಜಡಾಗಳೂ ಸಂತರಾಗುವರು' ಎಂದು ಕಬೀರ ಹೇಳಿದ್ದು ಆರುನೂರು ವರ್ಷಗಳ ಹಿಂದೆ!
ಒಂದು ಮಾತು ನೆನಪಿಡಿ: ಅಂದು ಬ್ರಾಹ್ಮಣವರ್ಗವು ತುಂಬಾ ಪ್ರಭಾವಶಾಲಿಯಾಗಿತ್ತು. ಜಾತಿನಿಯಮಗಳಂತೂ ನಾವು ಊಹಿಸದಷ್ಟು ಕಟ್ಟುನಿಟ್ಟಾಗಿತ್ತು. ಜಾತಿಬಾಹಿರ ಎಂದರೆ ಅವನ ಕಥೆ ಮುಗಿದಂತೆಯೇ. ಇಡೀ ಕುಟುಂಬವೇ ಸಮಾಜದಿಂದ ಬಹಿಷ್ಕೃತ. ಆ ಕುಟುಂಬದ ಮಕ್ಕಳಿಗೆ ಮದುವೆಯಾಗುವುದೇ ಅಸಾಧ್ಯ. ದಿನಸಿ ಸಿಗುವುದೂ ಕಷ್ಟದ ಮಾತೇ.
ಆದರೆ ಕಬೀರನೋ, ಹಿಂದುವಾಗಿ ಪರಿವರ್ತಿತನಾದ ಮುಸ್ಲಿಮ್!  ಆದರೆ ಆಚರಣೆಯಲ್ಲಿ ಎಲ್ಲೂ ಮುಸ್ಲಿಮ್ತನವಿಲ್ಲ.
ರಾಜನ ಶಿಕ್ಷೆಗೂ ಮಣಿಯದ ಧೀರ
ಕಬೀರನ ಈ ಮುಸ್ಲಿಮ್ – ಹಿಂದು ಸಂಪ್ರದಾಯ ವಿರೋಧಿ ಹೇಳಿಕೆಗಳು ಆಗಿನ ರಾಜ ಸಿಕಂದರ್ ಲೋದಿಯವರೆಗೂ ತಲುಪಿದವು. ಮುಸ್ಲಿಮರು – ಹಿಂದುಗಳು ಅವನಲ್ಲಿ ದೂರಿತ್ತರು. ಕಬೀರ ಬೀದಿ ಬೀದಿಗಳಲ್ಲಿ ರಾಮ ರಾಮ ಎಂದು ಹಾಡುತ್ತಾನೆ ಎಂದು ಮುಸ್ಲಿಮರು ಹೇಳಿದರೆ, ಆತ ಜನಿವಾರವನ್ನೇ   ಟೀಕಿಸಿದರೂ ಅದನ್ನು ಹಾಕಿಕೊಂಡು ಹಣೆಗೆ ತಿಲಕ ಹಚ್ಚಿಕೊಂಡು ಹಿಂದುಗಳನ್ನು ಅವಮಾನಿಸಿದ್ದಾನೆ ಎಂದು ಹಿಂದುಗಳು ದೂರಿದರು. ಆದರೆ ಲೋದಿ ಅದನ್ನು ಅಲಕ್ಷಿಸಿದ.
ಕೊನೆಗೆ ಶೇಖ್ ತಖ್ಖಿ ಎಂಬ ಪ್ರಭಾವಶಾಲಿ ವ್ಯಕ್ತಿ  ಕಬೀರ ಒಬ್ಬ ರಾಜಕೀಯ ತಂತ್ರಿ ಎಂದು ಲೋದಿಯ ಬಳಿ ಚಾಡಿ ಹೇಳಿದ. ಈ ಬಾರಿ ಲೋದಿ ಕಬೀರನನ್ನು ತನ್ನ ಆಸ್ಥಾನಕ್ಕೆ ಕರೆಸಿದ. ಜಾತಿವ್ಯವಸ್ಥೆಯನ್ನು ಅಲಕ್ಷಿಸಿದ ಮತ್ತು ಅಗೌರವಯುತವಾದ ಬದುಕು ನಡೆಸುತ್ತಿರುವ ಆಪಾದನೆ ಕಬೀರನ ಮೇಲಿತ್ತು.
ಕಬೀರ ಅಂತೂ ಇಂತೂ ತುಂಬಾ ತಡ ಮಾಡಿ ಲೋದಿಯ  ಆಸ್ಥಾನಕ್ಕೆ ಬಂದ. `ಯಾಕೆ ತಡ ಮಾಡಿದೆ?' ಎಂದು ಲೋದಿ ಕೇಳಿದರೆ ಕಬೀರ ಹೇಳಿದ್ದಿಷ್ಟೆ: `ದಾರಿಯಲ್ಲಿ ಆನೆಗಳು ಮತ್ತು ಒಂಟೆಗಳು ಒಂದು ಸೂಜಿಯ ತೂತಿನಲ್ಲಿ ಹೋಗ್ತಾ ಇದ್ದಿದ್ದನ್ನು ನೋಡುತ್ತಿದ್ದೆ. ಅದಕ್ಕೇ ತಡವಾಯಿತು.'  ಎಂಥ ಹಸಿ ಸುಳ್ಳು ಎಂದು ಲೋದಿ ಅಬ್ಬರಿಸಿದ.
ಕಬೀರ ಹಿಂಜರಿಯದೆ ಉತ್ತರಿಸಿದ:
ಕಬೀರನೆ ಎಂದೂ ಸುಳ್ಳನಾಡದಿರು.
ಕ್ಷಣದ ಕಾಲುಭಾಗದಲ್ಲಿ ನಡೆವುದೇನೆಂದು ಯಾರಿಗೂ ಗೊತ್ತಿಲ್ಲ.
ಕಬೀರನೆ, ಸಮುದ್ರಕ್ಕೆ ಹನಿಯೊಂದು ಸೇರಿದೆ ಎಂದು ಎಲ್ಲರಿಗೂ ಗೊತ್ತು.  ಆದರೆ ಸಮುದ್ರವೇ ಹನಿಯೊಳಗೆ ಬಂದಿದೆ : ಇದು ಕೆಲವರಿಗೇ ಅರಿವಾಗುವುದು.
ಹೊರಗಣ್ಣುಗಳೇ ಹೊರಟುಹೋಗಿವೆ ; ಮನಸ್ಸಿನ ಕಣ್ಣೂ ಕಳೆದುಹೋಗಿದೆ.
ನಾಲ್ಕನ್ನೂ ಕಳೆದುಕೊಂಡವನಲ್ಲಿ ಕಾಣುವುದಾದರೂ ಏನು?
ಕಾಜಿಗಳು ಆತನಿಗೆ ಒಂದೋ ನಿಜ ಮುಸ್ಲಿಮನಂತೆ ವರ್ತಿಸು, ಇಲ್ಲವೇ ಮರಣದಂಡನೆ ಎದುರಿಸು ಎಂದು ಬೆದರಿಸಿದರು. `ಎಲ್ಲರಿಗೂ ದೇವರೊಂದೇ. ಹಿಂದು – ಮುಸ್ಲಿಮ್ ದೇಹಗಳಲ್ಲಿ ಆತ ಸಮಾನವಾಗಿ ಜೀವಿಸಿದ್ದಾನೆ. ಆತ ಯಾರದ್ದೇ ಆಸ್ತಿಯಲ್ಲ' ಎಂದುಬಿಟ್ಟ.
ನೀನು ಕಬೀರ ಎಂದ ದೊಡ್ಡ ಹೆಸರಿಟ್ಟುಕೊಂಡಿದ್ದೇಕೆ ಎಂದು ಕಾಜಿಗಳು ಕೇಳಿದರು.
ನನ್ನ ಹೆಸರು ಕಬೀರ. ಇಡೀ ಜಗತ್ತಿಗೇ ಇದು ಗೊತ್ತು.
ನನ್ನ ಹೆಸರು ಮೂಲೋಕದಲ್ಲಿ ಇದೆ. ಸಂತೋಷವೇ ನನ್ನ ಮನೆ.
ನೀರು, ಗಾಳಿ, ಋತುಗಳು,  – ನಾನು ಈ ಜಗತ್ತನ್ನು ಸೃಷ್ಟಿಸಿದೆ.
ಸ್ವರ್ಗದಲ್ಲಿ ಅಲೆ ಅಬ್ಬರಿಸಿದೆ. ಸೊಹಾಂಗ್ (ನಾಲ್ಕನೆಯ ಆಧ್ಯಾತ್ಮಿಕ ಪ್ರದೇಶದ ಆಡಳಿತಗಾರ)  ಕಾಲವನ್ನು ಕಾಯುತ್ತಿದ್ದಾನೆ.
ನಾನು ಬ್ರಹ್ಮನ ಬೀಜವನ್ನು ಬಿತ್ತಿದೆ. ಯಮನ ಸಂಕೋಲೆಯಿಂದ ಮುಕ್ತನಾದೆ. ದೇಹವನ್ನು ಶುದ್ಧೀಕರಿಸಿದೆ.
ನನ್ನ ಅಂತ್ಯವನ್ನು ದೇವರು, ಮನುಷ್ಯರು, ಮುನಿಗಳು ಅರಿಯಲಾರರು.
ಕಬೀರನ ಸಂತರಿಗೆ ಮಾತ್ರವೇ ಇದೆಲ್ಲ ಗೊತ್ತಾಗುವುದು.
ವೇದಗಳು ಮತ್ತು ಪುಸ್ತಕಗಳಿಂದ ದಡ ಸೇರಲಾಗದು. ನಿಗೂಢeನ ಅತಿ ಗಹನ.
ಈ ಉತ್ತರವನ್ನು ಕೇಳಿ ಲೋದಿ ಈತ ಧರ್ಮನಿಂದಕ ಎಂದೇ ನಿರ್ಣಯಿಸಿದ.
ಇಲ್ಲಿ ಕೆಲವು ಪವಾಡಗಳು ನಡೆದವು ಎಂಬ ಐತಿಹ್ಯಗಳಿವೆ. ಕಬೀರನ ಕೈ ಕಾಲು ಕಟ್ಟಿ ಗಂಗಾನದಿಗೆ ಎಸೆದರೆ ಆತ ನಿರಾಯಾಸವಾಗಿ ತೇಲಿದೆ. ಆತನನ್ನು ಆನೆಕಾಲಿನಿಂದ ತುಳಿಸಲು ನೋಡಿದರೆ ಮಾವುತನಿಗೆ ಕಬೀರ ಸಿಂಹವಾಗಿ ಕಂಡ. ಆನೆಯೂ ಬೆದರಿತು. ಇದೆಲ್ಲ ಮಾವುತನ ಕಲ್ಪನೆ ಎಂದು ಲೋದಿಯೇ ಸ್ವತಃ ಆನೆ ಹತ್ತಿದನಂತೆ. ಅವನಿಗೂ ಕಬೀರ ಸಿಂಹವಾಗಿ ಕಂಡ. ಆದರೂ ಲೋದಿ ಬಿಡಲಿಲ್ಲ. ಕಬೀರನನ್ನು ವಾರಾಣಸಿಯಿಂದ ಗಡೀಪಾರು ಮಾಡಿದ.
ಆದದ್ದೆಲ್ಲ  ಒಳ್ಳೆಯದೇ ಆಯಿತು. ಕಬೀರ ಉತ್ತರ ಮತ್ತು ಮಧ್ಯಭಾರತದಲ್ಲಿ ಓಡಾಡಿಕೊಂಡು ತನ್ನ ಪದಗಳನ್ನು ಜನರಿಗೆ ಹಂಚಿದ!
ಕಬೀರನಿಂದ ಸಣ್ಣಪುಟ್ಟ ನೆರವು ಪಡೆಯಲು ಜನ ಯಾವಾಗಲೂ ಮುತ್ತಿಕೊಳ್ಳುತ್ತಿದ್ದರಂತೆ. ಇದರಿಂದ ತಪ್ಪಿಸಿಕೊಳ್ಳಲು ಕಬೀರ ನಾನಾ ಉಪಾಯಗಳನ್ನು ಹೂಡುತ್ತಿದ್ದ. ಒಮ್ಮೆಯಂತೂ ತನ್ನ ಅನುಯಾಯಿಗೆ ಒಬ್ಬ ವೇಶ್ಯೆಯನ್ನು  ಕರೆದುತರಲು ಹೇಳಿ ಅವಳೊಡನೆ ಬಣ್ಣದ ನೀರಿನ ಬಾಟಲಿ ಹಿಡಿದು ನರ್ತಿಸಿದ. ಜನ ಈತ ಕೆಟ್ಟೇಹೋಗಿದ್ದಾನೆ ಎಂದು ತೀರ್ಮಾನಿಸಿ ದೊರೆ ಬೀರ್ ಸಿಂಗ್ಗೆ ದೂರು ಸಲ್ಲಿಸಿದರು. `ನಾನು ಪುರಿಯ ಜಗನ್ನಾಥ ದೇಗುಲಕ್ಕೆ ಬೆಂಕಿ ಹೊತ್ತಿದ್ದನ್ನು ಆರಿಸಿದೆ' ಎನ್ನುತ್ತ ಬಾಟಲಿಯನ್ನು ಬಗ್ಗಿಸಿ ನೀರು ಚೆಲ್ಲಿದ. ಕೊನೆಗೆ ನೋಡಿದರೆ ಪುರಿಯಲ್ಲಿ ಕಬೀರನೇ ಸ್ವತಃ ಬಂದಿದ್ದನಂತೆ!
ಯಾರು ಈ ನೇಕಾರರು?
ಕಬೀರನ ನೇಕಾರ ಸಮುದಾಯದ ಬಗ್ಗೆ ಪ್ರೊ|| ಹಜಾರಿ ಪ್ರಸಾದ್ ದ್ವಿವೆದಿಯವರು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. `ಈ ನೇಕಾರರು ಮುಸ್ಲಿಮರೇನೋ ಹೌದು. ಆದರೆ ಅವರ ಆಚರಣೆಗಳು ಮೂಲತಃ ಇತರೆ ಮುಸ್ಲಿಮರಂತೆ ಇಲ್ಲ. `೧೯೦೧ರ ಜನಗಣತಿಯ ಪ್ರಕಾರ ರಿಸ್ಲೆ `ಪೀಪಲ್ಸ್ ಆಫ್ ಇಂಡಿಯಾ' ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಮುಸ್ಲಿಮ್ ಸಯ್ಯದಿಗಳು, ಪಠಾಣರು ಮತ್ತು  ನೇಕಾರರ ಆಚರಣೆಗಳನ್ನು ತುಲನೆ ಮಾಡಿದ್ದಾರೆ. ಪಠಾಣರು ದೇಶದೆಲ್ಲೆಡೆ ಹರಡಿಕೊಂಡಿದ್ದಾರೆ. ಆದರೆ ನೇಕಾರರು ಮಾತ್ರ ಪಂಜಾಬ್, ಏಕೀಕೃತ ಪ್ರಾಂತ, ಬಿಹಾರ ಮತ್ತು ಬೆಂಗಾಳಗಳಲ್ಲಿ ಕಂಡುಬಂದಿದ್ದಾರೆ. ಬಹುಶಃ ಇವರೆಲ್ಲ ಹಿಂದು ಧರ್ಮದ ಯಾವುದೋ ಉಪೇಕ್ಷಿತ ಜಾತಿಯವರು. ಕಾಲಕ್ರಮೇಣ ಅವರು ಮುಸ್ಲಿಮ್ ಮತಕ್ಕೆ ಸೇರಿಕೊಂಡಿದ್ದಾರೆ. ಇಲ್ಲಾದರೂ ತಮಗೆ ಸಾಮಾಜಿಕ ಸ್ಥಾನಮಾನ ಸಿಗಬಹುದು ಎಂಬುದು ಅವರ ನಂಬುಗೆಯಾಗಿರಬೇಕು.
ಕಬೀರನಿಗಿಂತ ಕನಿಷ್ಠ ಒಂದು ಪೀಳಿಗೆಯ ಹಿಂದಿನವರು ಹೀಗೆ ಮುಸ್ಲಿಮ್ ಮತವನ್ನು ಒಪ್ಪಿಕೊಂಡಿರಬೇಕು ಎಂದು ರಿಸ್ಲೆ ತೀರ್ಮಾನಿಸುತ್ತಾರೆ.' ಇದು ದ್ವಿವೇದಿ ನೀಡುವ ಮಾಹಿತಿ.  ತಾನು ಒಬ್ಬ ಕೋರಿ ( ನೇಕಾರರಲ್ಲಿ ಬಹುಸಂಖ್ಯಾತ ವರ್ಗ) ಎಂದು ಕಬೀರನೇ ಕೆಲವೆಡೆ ಹೇಳಿಕೊಂಡಿದ್ದಾನೆ. ಬಹುಶಃ ಇವರೆಲ್ಲ ನಾಥಪಂಥೀಯರು ಎಂದು ದ್ವಿವೇದಿ ಹೇಳುತ್ತಾರೆ. ನಾಥಪಂಥೀಯರ ಬಗ್ಗೆ ಆ ಕಾಲದಲ್ಲಿ ಬಂದ ಗ್ರಂಥಗಳೆಲ್ಲವೂ ಮುಸ್ಲಿಮರೇ ಬರೆದದ್ದು! ಈ ಪಂಥೀಯರು ಮುಸಸ್ಲಿಮರಾದ ಮೇಲೆ ಜನಿವಾರವನ್ನು ಹಾಕಿಕೊಳ್ಳುವ ಸಂಪ್ರದಾಯವನ್ನೂ ಆರಂಭಿಸಿದರು ಎಂದು  ಆಚಾರ್ಯ ಕ್ಷಿತಿ ಮೋಹನ್ ಸೇನ್ ತಮ್ಮ `ಭಾರತ್ ವರ್ಷ್ ಮೇ ಜಾತಿಭೇದ್' ಎಂಬ ಪುಸ್ತಕದಲ್ಲಿ ಹೇಳುತ್ತಾರೆ.
ಏನೇ ಇರಲಿ, ಆತ ಮುಸ್ಲಿಮ್ ಮೂಲದವನು ಎಂಬುದಕ್ಕೆ ಅವನ ಹೆಸರೇ ಸಾಕ್ಷಿ ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಅಥವಾ ಆತನನ್ನು ವಾರಾಣಸಿಯ ಒಬ್ಬ ಮೊಹಮ್ಮದನ್ ನೇಕಾರ ಸಾಕಿದ ಎಂಬ ಪ್ರತಿಪಾದನೆಯನ್ನು ಒಪ್ಪಬಹುದು ಎನ್ನಿಸುತ್ತದೆ. ಈ ಎಲ್ಲ ಮಾಹಿತಿಗಳಿಂದ ಕೊನೆಗೆ ಈ ಅಂಶಗಳನ್ನು ಒಪ್ಪಬಹುದೇನೋ:
   ಬಹುಪಾಲು ನೇಕಾರರು ಬ್ರಾಹ್ಮಣರ ಪರಮಾಧಿಕಾರದಲ್ಲಿ ನಂಬಿಕೆ ಇಟ್ಟಿರಲಿಲ್ಲ.
   ನಾಥಪಂಥದ ಹಲವು ಯೋಗಿಗಳು ತಮ್ಮ ಸನ್ಯಾಸವನ್ನು ತೊರೆದು ಉತ್ತರ ಮತ್ತು ಪೂರ್ವ ಭಾರತದಲ್ಲಿ ಹರಡಿಕೊಂಡಿದ್ದರು. ಅವರು ಗೋರಖನಾಥ ಮತ್ತು ಭರ್ತೃಹರಿಯ ಹೆಸರಿನಲ್ಲಿ ಭಿಕ್ಷೆ ಕೇಳುತ್ತ, ನೇಕಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
   ಅವರೆಲ್ಲರೂ ಒಂದು ಅಮೂರ್ತ ದೇವರನ್ನು ಪೂಜಿಸುತ್ತಿದ್ದರು. ಅವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರಲಿಲ್ಲ.
   ಅವರ ಸುತ್ತಮುತ್ತಲಿನ ಹಿಂದು ಸಮಾಜವು ಅವರನ್ನು ಕಳವರ್ಗದವರು, ಅಸ್ಪೃಶ್ಯರು ಎಂದು ಭಾವಿಸಿತ್ತು.
   ಇಸ್ಲಾಮ್ ಹರಡಿದಂತೆ ಅವರೂ ಈ ಮತಕ್ಕೆ ಬರತೊಡಗಿದರು.
   ಪಂಜಾಬ್, ಏಕೀಕೃತ ಪ್ರಾಂತ ಮತ್ತು ಬಿಹಾರ – ಬಂಗಾಳಗಳಲ್ಲಿ ಆಗಿನ ಕಾಲದಲ್ಲಿ ಭಾರೀ ಪ್ರಮಾಣದಲ್ಲಿ ಮತಾಂತರ ನಡೆಯಿತು.
ಸಂಸಾರಿ ಕಬೀರ
ಸಂತ ಕಬೀರ ಸಂಸಾರಿಯೂ ಹೌದು. ಅವನಿಗೆ ಹೆಂಡತಿಗೆ  ಎರಡು ಹೆಸರುಗಳು. ಧನಿಯಾ ಮತ್ತು ಲೋಯಿ. `ಲೋಯಿ' ಎಂದರೆ `ಜಗತ್ತು' ಎಂದು ಕಬೀರ ತನ್ನ ಪುಸ್ತಕದಲ್ಲಿ ಹೇಳುತ್ತಾನೆ. ಕಬೀರನ ಮಗಳ ಹೆಸರು ಕಮಲಿ.
ಕಬೀರನ ಹೆಂಡತಿಯೂ ಕಬೀರನಷ್ಟೇ ಭಕ್ತಿ, ಶ್ರದ್ಧೆ ಉಳ್ಳವಳು. ಒಮ್ಮೆ ಹೀಗಾಯಿತು. ಕಬೀರ ರಾಮಭಜನೆ ಮಾಡುತ್ತ ಬಟ್ಟೆ ನೇಯುತ್ತಿದ್ದ. ಅವನ ಹೆಂಡತಿ `ಒಂದು ನೂಲು ಹರಿದಿದೆ' ಎಂದಳು. ಕಬೀರ `ಹೌದೆ? ಹಾಗಾದರೆ ದೀಪ ತೆಗೆದುಕೊಂಡು ಬಾ' ಎಂದ. ಆಕೆ ಮಾತಾಡದೆ ದೀಪ ತಂದಳು. ದೀಪ ಬಂದಂತೆಯೇ  ಕಬೀರ `ಬೇಡ ಬಿಡು' ಎನ್ನಬೇಕೆ? ಆಕೆ ಮತ್ತೂ ಮಾತಾಡಲಿಲ್ಲ. ಹಗಲಿನಲ್ಲಿ ನೇಯುತ್ತ ಇರುವಾಗ ದೀಪವಾದರೂ ಯಾಕೆ ಬೇಕು, ಅಥವಾ ದೀಪವನ್ನು ತಂದ ಮೇಲೆ ಯಾಕೆ ಬೇಡ ಎನ್ನಬೇಕು?  ಅಂಥ ಹೆಂಡತಿ ಸಿಕ್ಕಿದ್ದರಿಂದಲೇ ಇರಬೇಕು, ಕಬೀರ ಸಾವಿರಾರು ದೋಹಾಗಳನ್ನು ರಚಿಸಿದ!
ಒಮ್ಮೆ ಲೋಯಿ ಕಬೀರನ ಬಳಿಗೆ ಬಂದ ಸಾಧುಗಳಿಗೆ ಸರಿಯಾದ ಆತಿಥ್ಯ ನೀಡಲಿಲ್ಲ ಎಂದು ಕಬೀರ ಬೇಸರಿಸಿಕೊಂಡು ಈ ಪದ ಹಾಡುತ್ತಾನೆ:
ನನಗೆ ಬೆನ್ನು ತೋರಿಸುವುದಕ್ಕಿಂತ ನನ್ನನ್ನು ಗರಗಸದಲ್ಲಿ ಸೀಳುವುದೇ ಲೇಸು.
ನನ್ನ ಪ್ರಾರ್ಥನೆ ಕೇಳು, ಅಪ್ಪಿಕೋ ನಿನ್ನೆದೆಗೆ.
ನನ್ನೆಡೆಗೆ ಮುಖ ತಿರುಗಿಸು, ಪ್ರಿಯೆ.
ನನಗೆ ಬೆನ್ನು ತೋರಿ ಯಾಕೆ ನನ್ನನ್ನು ಕೊಲ್ಲುವೆ?
ನೀನು ನನ್ನು ದೇಹವನ್ನು ತೊರೆದರೆ ನಾನು ಅಲ್ಲಾಡಲಾರೆ.
ನನ್ನ ದೇಹ ಬೀಳಬಹುದು.
ಆದರೆ ನಿನ್ನ ಮೇಲಣ ಪ್ರೀತಿಯನ್ನೆಂದೂ ಬಿಡೆನು.
ಓ ಲೋಯಿ, ನನ್ನ ಮಾತು ಕೇಳು.
ನಿನ್ನನ್ನು ಇನ್ನೆಂದೂ ನಂಬಲಾರೆ. (ಗುರುಗ್ರಂಥ)
ಹಸಿದು ಪ್ರಾರ್ಥಿಸಲಾರೆ
ಕಬೀರನಿಗೆ ಬಡತನದ ಬೇಗೆಯ ಅನುಭವ ಆಗುತ್ತಿರಲಿಲ್ಲವೆ? ಇಲ್ಲದೆ ಏನು, ಕಬೀರ ಕೆಲವೊಮ್ಮೆ ತನ್ನ ಹಸಿವು ತಾಳಲಾಗದೆ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದ:
ಖಾಲಿಹೊಟ್ಟೆಯಲ್ಲಿ ನಾನು ಭಕ್ತಿ ಪ್ರಕಟಿಸಲಾರೆ.
ನಿನ್ನ ಮಣಿಮಾಲೆಯನ್ನು ತಗೋ.

ದೇವಾ, ನನ್ನನ್ನು ನಿನಗಾಗಿ ಹೇಗೆ ತೊಡಗಿಸಿಕೊಳ್ಳಲಿ ಹೇಳು?
ನೀನೇ ಕೊಡದಿದ್ದರೆ ನಾನೇ ಕೇಳುವೆ.
ನನಗೆ ನಾಲ್ಕು ಸೇರು ಹಿಟ್ಟು
ಕಾಲು ಸೇರು ತುಪ್ಪ
ಸ್ವಲ್ಪ ಉಪ್ಪು ಬೇಕು.
ಅರ್ಧ ಸೇರು ಕಾಳು.
ಇವಿಷ್ಟು ನನ್ನ ಎರಡು ಹೊತ್ತು ಊಟಕ್ಕೆ ಸಾಕು.
ನಾಲ್ಕು ಕಾಲುಗಳ ಹಾಸಿಗೆ ಕೊಡು (ಮಂಚ?)
ಒಂದು ದಿಂಬು, ಒಂದು ಹಾಸಿಗೆ
ಹೊದೆಯಲೊಂದು ಕವದಿ.
ಇಷ್ಟಾದರೆ ನಾನು ನಿನ್ನ ಧ್ಯಾನದಲ್ಲೇ ಇರುವೆ!
ಕಬೀರನ ಸುತ್ತಮುತ್ತ ಪವಾಡಗಳ ಕಥೆಗಳು ಹೆಣೆದಿದ್ದರೂ ಕಬೀರ ಮಾತ್ರ ಎಂಥ ವಾಸ್ತವದಲ್ಲಿ ಬದುಕಿದ್ದ ಎನ್ನುವುದಕ್ಕೆ ಇದೊಂದೇ ಪದ ಸಾಕಲ್ಲವೆ?
ಕಬೀರ ಎಂದೂ ಶಾಯಿ,ದೌತಿ ಬಳಸಿ ತನ್ನ ಪದಗಳನ್ನು ದಾಖಲಿಸಲಿಲ್ಲ. ಅವನ ಎಲ್ಲಾ ಬೋಧನೆಗಳೂ ಮೌಖಿಕವಾಗಿದ್ದವು. ಅವನ ಬೋಧನೆಗಳನ್ನು ದಾಖಲಿಸಿದವರು ಅವನ  ಅನುಯಾಯಿಗಳು.  ಈವರೆಗೆ ಕಬೀರ ಬರೆದದ್ದು ಎನ್ನಲಾದ ೭೨ ಗ್ರಂಥಗಳು ದೊರೆತಿವೆ. ಅವುಗಳಲ್ಲಿ `ಬೀಜಕ'ವೇ ಅತ್ಯಂತ ಅಧಿಕೃತವಾದದ್ದು.  ಗುರುಗ್ರಂಥದಲ್ಲಿ ಕಬೀರನ ೨೨೮ ಪದಗಳಿವೆ.
ಈಗ ಕಬೀರಪಂಥಿಗಳು ಹೇಗಿದ್ದಾರೆ?
ಕಬೀರಪಂಥ ಈಗಲೂ ಇದೆ. ಸುಮಾರು ಹತ್ತು ಲಕ್ಷ ಜನ ಕಬೀರಪಂಥಿಗಳು ಈಗಲೂ ಕಬೀರನ ಹಾದಿಯಲ್ಲಿ ಸಾಗಿದ್ದಾರೆ. ಕಬೀರನನ್ನು ಅನುಸರಿಸಲು ಪಂಥ ಬೇಕಿಲ್ಲ. ಅವನ ಪದಗಳನ್ನು ಹಾಡುತ್ತಿದ್ದರೆ ಸಾಕು ಎಂಥವರಿಗೂ ಅರೆ, ಈ ಮಾತೆಲ್ಲ ನನ್ನ ಬದುಕಿಗೇ ಅನ್ವಯವಾಗುವುದಲ್ಲ ಎಂಬ ಅಚ್ಚರಿ ಮೂಡುವುದು ಸಹಜ.
ಕಬೀರನ ಅನುಯಾಯಿಗಳಲ್ಲಿ ಎರಡು ಗುಂಪುಗಳಿವೆ. ಒಂದು ಗುಂಪು ವಾರಾಣಸಿಯಲ್ಲಿ ಮುಖ್ಯಕಚೇರಿ ಹೊಂದಿದೆ. ಎರಡನೆಯು ಗುಂಪಿನ ಮುಖ್ಯ ಕಚೇರಿ ಛತ್ತೀಸ್ಗಢದಲ್ಲಿದೆ.  ಮೊದಲ ಗುಂಪಿಗೆ ಬಾಪ್ ಎಂಬ ಹೆಸರಿದ್ದರೆ, ಎರಡನೇ ಗುಂಪಿಗೆ ಮಾಯಿ ಎಂಬ ಹೆಸರಿದೆ.  ಜಾತಿಭೇದವಿಲ್ಲದೆ ಪೂಜೆಗೆ ಅವಕಾಶ ನೀಡುವ ಪುರಿಯ ಜಗನ್ನಾಥ ಮಠವು ಎರಡೂ ಗುಂಪುಗಳ ಪ್ರಮುಖ ತೀರ್ಥಯಾತ್ರೆಯ ಸ್ಥಳ.
ಈಗಲೂ ಕಬೀರ ಪಂಥಿಗಳಾಗಲು ಯಾರಿಗಾದರೂ ಅವಕಾಶವಿದೆ. ಈ ದಾರಿ ಹಿಡಿಯುವವರು ಮಾಂಸ-ಮದ್ಯ ಸೇವನೆ ಬಿಡಬೇಕು. ದಿನವೂ ಸ್ನಾನ ಮಾಡಿ ಬೆಳಗ್ಗೆ, ಸಂಜೆ ದೇವನ ಪ್ರಾರ್ಥನೆ ಮಾಡಬೇಕು. ಒಬ್ಬನೇ ದೇವನಲ್ಲಿ ನಂಬಿಕೆ ಇಡಬೇಕು. ಕೆಟ್ಟ ನಡತೆಯ ಹೆಂಗಸರ ಸಹವಾಸ ಬಿಡಬೇಕು. ಸುಳ್ಳು ಹೇಳಕೂಡದು. ಸುಳ್ಳು ಸಾಕ್ಷ್ಯವನ್ನು ಹೇಳಬಾರದು. ತನ್ನ ಆಸ್ತಿಯನ್ನು ಮುಚ್ಚಿಡಬಾರದು. ತನ್ನ ಹೆಂಡತಿ, ಮನೆಯನ್ನು ಬಿಡಬಾರದು.
ಮೋಕ್ಷಸ್ಥಳವನ್ನೇ ತ್ಯಜಿಸಿದ !
ಇಷ್ಟೆಲ್ಲ ಬೋಧನೆ, ಬದುಕು ಎಲ್ಲವನ್ನೂ ವಾರಾಣಸಿಯಲ್ಲಿ ನಡೆಸಿದ ಕಬೀರ ಕೊನೆಗೆ ತನ್ನ ಅಂತ್ಯ ಸಮೀಪಿಸಿತು ಎಂದಾಗ ವಾರಾಣಸಿಯನ್ನೇ ತೊರೆದ.
ಕಬೀರನಿಗೆ ತಾನಿನ್ನು ತುಂಬಾ ಕಾಲ ಬಾಳಲಾರೆ ಎಂದು ಅರಿವಾಯಿತು. ಅವನ ಮಾಂಶಖಂಡಗಳ ಜರ್ಝರಿತವಾಗಿದ್ದವು. ದೇಹ ಬಳಲಿತ್ತು. ಕಬೀರನೆಂದರೆ ಜೀವನವಿಡೀ ಕಂದಾಚಾರಗಳನ್ನು ವಿರೋಧಿಸಿದವ. ಮತಬೇಧವಿಲ್ಲದೆ ಎಲ್ಲರ ಮೂಢ ನಂಬಿಕೆ, ಮೂಲಭೂತವಾದಿ ಆಚರಣೆಗಳನ್ನು ಖಡಾಖಂಡಿತವಾಗಿ ಟೀಕಿಸಿದವ. ಕೊನೆಗಾಲದಲ್ಲಿ  ಮೂಢನಂಬಿಕೆಯ ಇನ್ನೊಂದು ಮುಖ್ಯ ಸೌಧವನ್ನು ಕಡವಲು ಸಜ್ಜಾದ.
ಹೇಳಿಕೇಳಿ ವಾರಾಣಸಿ ಒಂದು ಪುಣ್ಯಕ್ಷೇತ್ರ. ನೀವು ಅಲ್ಲಿ ಸತ್ತರೆ ಸ್ವರ್ಗ ಸೇರುತ್ತೀರಿ ಎಂಬ ನಂಬಿಕೆ ಇದೆ. ಈಗಲೂ ಅದು ಬಲವಾಗಿದೆ. ನಿಮ್ಮ ಜೀವನದಲ್ಲಿ ಎಂದೆಂದೂ ದೇವಸ್ಮರಣೆ ಮಾಡದಿದ್ದರೂ ಪರವಾಯಿಲ್ಲ, ಇಲ್ಲಿ ಸತ್ತರೆ ಮೋಕ್ಷ ಖಾತ್ರಿ. ನೀವು ಅಸಹಾಯಕರಾಗಿದ್ದಾಗ ನಿಮ್ಮನ್ನು ಸಾಕಲಿ ಸಲಹಿದ ತಂದೆ ತಾಯಂದಿರನ್ನು ಕೆಟ್ಟದಾಗಿ ನೋಡಿಕೊಂಡರೂ ಪರವಾಯಿಲ್ಲ. ನೀವು ಕುಡಿದು ಮನೆಗೆ ಹೋಗಿ ಹೆಂಡತಿ ಮಕ್ಕಳನ್ನು ಹೊಡೆದಿದ್ದರೂ ಪರವಾಯಿಲ್ಲ; ನೀವು ಬಡವರ ಶೋಷಣೆ ಮಾಡಿದ್ದರೂ ಸರಿಯೇ; ನೀವು ಜೀವಮಾನವಿಡೀ ವಂಚಕರಾಗಿದ್ದರೂ ಪರವಾಯಿಲ್ಲ; ವಾರಾಣಸಿಗೆ ಬನ್ನಿ, ಅಲ್ಲಿಯೇ ಕೊನೆ ಉಸಿರೆಳೆಯಿರಿ. ಮೋಕ್ಷ ಪಡೆಯಿರಿ.
ಕಬೀರನ ಕಾಲದಲ್ಲಂತೂ ಈ ಮಾತಿಗೆ ತುಂಬಾ ಬೆಲೆ ಇತ್ತು.
ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಇನ್ನೊಂದು ಪ್ರತೀತಿಯೂ ಆಗ ಬಲವಾಗಿತ್ತು: ನೀವು ಒಳ್ಳೆಯ ಬದುಕನ್ನೇ ನಡೆಸಿದ್ದರೂ ; ನೀವು ದಾನಿಯಾಗಿದ್ದರೂ ; ನೀವು ಅನಾಥರು ಮತ್ತು ದಿಕ್ಕೆಟ್ಟವರಿಗೆ ನೆರವು ನೀಡಿದ್ದರೂ ; ನೀವು ಅನ್ಯಾಯ ಹಾಗೂ ದಮನಕಾರಿ ವರ್ತನೆಯನ್ನು ವಿರೋಧಿಸಿದ್ದರೂ ; ನೀವು ಹಿಂದುಳಿದವರ ನ್ಯಾಯಕ್ಕಾಗಿ ಹೋರಾಡಿದ್ದರೂ ; ನೀವು ನಿಮ್ಮ ಶಕ್ತಿಯನ್ನೆಲ್ಲ ಬಳಸಿ ದೇವರ ಹುಡುಕಾಟದಲ್ಲಿ ತೊಡಗಿದ್ದರೂ; ಕೊನೆಗೆ ನೀವು ಪರಮ ಸಂತ ಸದ್ಗುರು  ಕಬೀರ ಸಾಹೇಬನ ಸ್ಥಾನಮಾನವನ್ನು ಗಳಿಸಿದ್ದರೂ, ವಾರಾಣಸಿಯಿಂದ ೨೪೦ ಕಿಮೀ ದೂರದಲ್ಲಿರುವ ಮಘರ್ ಎಂಬ ಹಳ್ಳಿಯಲ್ಲಿ ಸತ್ತರೆ ಮತ್ತೆ ನೀವು ಕತ್ತೆಯಾಗಿ ಹುಟ್ಟುವುದು ಖಚಿತ, ಶತಸ್ಸಿದ್ಧ.
ಈ ನಂಬಿಕೆಯನ್ನು ಬುಡಮೇಲು ಮಾಡಲು ಸಂತ ಕಬೀರನೇ ಮುಂದಾದ. ತನ್ನ ಅಂತ್ಯಕಾಲದ ಸೂಚನೆ ಸಿಕ್ಕಿದೊಡನೆಯೇ ಕಬೀರ ತನ್ನೆಲ್ಲ ಗಂಟು ಕಟ್ಟಿಕೊಂಡು ಮಘರ್ನ ದಿಕ್ಕಿಗೆ ನಡೆದ!
ಅವನ ಸ್ನೇಹಿತರು, ಅನುಯಾಯಿಗಳು, ಹಿತೈಷಿಗಳು – ಎಲ್ಲರೂ ಕಬೀರನನ್ನು ಪರಿಪರಿಯಾಗಿ ಬೇಡವೆಂದು ಗೋಗರೆದರು. ಪ್ರತಿಭಟಿಸಿದರು. ಕಣ್ಣೀರು ಹಾಕಿದರು. ಇಂಥ ಆಘಾತಕಾರಿ ಹೆಜ್ಜೆಯನ್ನು ತಮ್ಮ ಗುರುವೇ ಇಟ್ಟನಲ್ಲ ಎಂದು ಕೊರಗಿದರು.
ಆದರೆ ಕಬೀರ ಬಿಡಲಿಲ್ಲ. ಹೃದಯದಲ್ಲಿ ದೇವನಿದ್ದರೆ ಬನಾರಸ್ ಮತ್ತು  ಬಂಜರು ಮಘರ್ ನಡುವೆ ವ್ಯತ್ಯಾಸವೇನಿದೆ ಎಂದು ಪ್ರಶ್ನಿಸಿದ. ತನ್ನ ಎದುರಿಗೆ ಬಂದ ಜನರನ್ನು ಸರಿಸಿ ಮಘರ್ ಕಡೆಗೆ ಹೊರಟ. ಮಘರ್ನಲ್ಲಿ ಸಾಧುವೊಬ್ಬನ ಗುಡಿಸಲಿನಲ್ಲಿ ವಾಸಿಸುತ್ತ ದಿನ ಕಳೆದ. ತನ್ನ ಇಹಲೋಕತ್ಯಾಗದ ಕ್ಷಣ ಬಂದಾಗ ತನ್ನೆಲ್ಲ ಅನುಯಾಯಿಗಳನ್ನು ಹೊರಕಳಿಸಿದ. ಕೆಲವು ಗಂಟೆಗಳ ತರುವಾಯ ಅವರೆಲ್ಲ ಬಂದಾಗ, ಕಬೀರ `ಉಸಿರಿನಲ್ಲಿ ಉಸಿರಾಗಿದ್ದ. '
ಹೂವಾಗಿ ಅರಳಿದ ಸಂತ
ಬದುಕಿದ್ದಾಗ ಹಿಂದು ಮತ್ತು ಮುಸ್ಲಿಮರ ಆಕ್ರೋಶಕ್ಕೆ ಗುರಿಯಾಗಿದ್ದ ಕಬೀರ ಕೊನೆಗೆ ದೇಹವನ್ನು ತೊರೆದಾಗ, ಅವನ ಹಿಂದು – ಮುಸ್ಲಿಮ್ ಅನುಯಾಯಿಗಳ ನಡುವೆ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ಹಕ್ಕಿಗಾಗಿ ದೊಡ್ಡ ಜಗಳವೇ ನಡೆಯಿತು.  ಮರುದಿನ ಬೆಳಗ್ಗೆ ನೋಡಿದರೆ ಕಬೀರನ ದೇಹದ ಬದಲಿಗೆ ಹೂವುಗಳಿದ್ದವಂತೆ. ಎರಡೂ ಗುಂಪುಗಳು ಈ ಹೂವುಗಳನ್ನೇ ಹಂಚಿಕೊಂಡವು.  ಹಿಂದುಗಳು, ಮುಸ್ಲಿಮರು ತಂತಮ್ಮ ಸಂಪ್ರದಾಯದ ಅನುಸಾರ ಈ ಹೂವುಗಳಿಗೇ ಅಂತ್ಯಸಂಸ್ಕಾರ ಮಾಡಿದರು.
೨೧ನೇ ಶತಮಾನದಲ್ಲಿ ಎಂಬ ಕ್ಲೀಷೆಯನ್ನು ಬಿಡೋಣ. ಕಬೀರ ಬಂದು ಹೋದ ಆರು ಶತಮಾನಗಳ ನಂತರವೂ ಸವರ್ಣೀಯರ ಬಾವಿಯಲ್ಲಿ ಅಸ್ಪೃಶ್ಯರು ನೀರೆಳೆಯುವಂತಿಲ್ಲ. ಜಾತಿವ್ಯವಸ್ಥೆ ಎಂದಿಗಿಂತ ಬಲವಾಗಿದೆ. ಇತ್ತೀಚೆಗೆ ಮುಗಿದ ಚುನಾವಣೆಯ ವೇಳೆ ಯಾವ ಧರ್ಮ, ಜಾತಿ, ಕೋಮಿನ ಎಷ್ಟೆಲ್ಲ ಜನಪ್ರತಿನಿಧಿಗಳು ಚುನಾಯಿತವಾದರು ಎಂದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಾಧ್ಯಮಗಳೇ ಪಟ್ಟಿ ಮಾಡಿವೆ! ಚುನಾವಣೆಗೂ ಮೊದಲು ಇವೇ  ಮಾಧ್ಯಮಗಳು ಯಾವ ಅಭ್ಯರ್ಥಿಗೆ ಯಾವ ಕೋಮಿನವರ ಬೆಂಬಲ ಎಷ್ಟಿದೆ ಎಂದು  ಲೆಕ್ಕ ಹಾಕಿದ್ದವು. ಆಂಗ್ಲಪತ್ರಿಕೆಗಳ ವೈeನಿಕ ಚುನಾವಣಾ ಸಮೀಕ್ಷೆಗಳಲ್ಲೂ ಈ ಜಾತಿವಾರು ಲೆಕ್ಕಾಚಾರಗಳೇ ವಿಜೃಂಭಿಸಿದ್ದವು. ಅಂದಮೇಲೆ, ಈ ಸಮಾಜದಲ್ಲಿ ಈ ಎಲ್ಲ ಕ್ಷುಲ್ಲಕ ಜಾತಿ/ಕೋಮು/ಮತಾಭಿಮಾನದ ಕುರುಡುನಂಬಿಕೆಗಳನ್ನು ನಿವಾರಿಸಲು ಇನ್ನೆಷ್ಟು ಕಬೀರರು ಹುಟ್ಟಿಬರಬೇಕು?
ಬಿಡಿ, ಕೊನೇ ಪಕ್ಷ ನೀವಾದರೂ ಸಂತ ಕಬೀರನ ವಾಣಿಯನ್ನು ಸುಮ್ಮನೆ ಕೇಳಿ. ನಿಮ್ಮ ಮುಂಜಾವಿನಲ್ಲಿ ಸಾಮರಸ್ಯದ ತಂಗಾಳಿ ಬೀಸುತ್ತದೆ.
(ಉದಯವಾಣಿಯಲ್ಲಿ ಪ್ರಕಟಿತ)

(ಮುಗಿಯಿತು)

 

 

 

 

Leave a Reply

Theme by Anders Norén