ಮಿತ್ರಮಾಧ್ಯಮ MITRAMAADHYAMA

ಮುಕ್ತ ಮಾಹಿತಿಗಾಗಿ ಪುಟ್ಟ ಹೆಜ್ಜೆ

ಲೇಖನಗಳು

Sex: Common habba of internet

ಪಾಲಕರಿಗಾಗಿ ಹೋಳಿ ಸ್ಪೆಶಲ್
ಸೆಕ್ಸ್ : ಇಂಟರ್‌ನೆಟ್‌ನ ಕಾಮನ್ ಹಬ್ಬ

I wrote this in 2002. I find it still relevant, despite the recent technological developments.


೫೨ ವರ್ಷ, ಉನ್ನತ ಇಂಜಿನಿಯರಿಂಗ್ ಪದವೀಧರ, ತಿಂಗಳಿಗೆ ೫೦ ಸಾ.ರೂ. ವರಮಾನ, ಸ್ತ್ರೀಯರ ಸ್ನೇಹ ಬೇಕಿದೆ. ಈ ಮೇಲ್ ………
೩೨, ಎಂ ಬಿ ಎ, ಬಹುರಾಷ್ಟ್ರೀಯ ಕಂಪೆನಿ ಕೆಲಸ, ಸ್ತ್ರೀ ಸ್ನೇಹ ಬೇಕು; ವಿಧವೆಯರು, ವಿಚ್ಛೇದಿತರು ಸರಿ, ಗೌಪ್ಯತೆ ಕಾಪಾಡಲಾಗುವುದು. ಬಾಕ್ಸ್ ನಂ: ….
ಇಂಥ ನೂರಾರು ಪತ್ರಗಳನ್ನು ನೀವು ಓದಿದ್ದೀರ ? ೧೦ ರೂಪಾಯಿ ಕೊಟ್ಟು ಆಡ್‌ಮ್ಯಾಗ್ ಅಥವಾ ಫ್ರೀ ಆಡ್ ಎಂಬ ಜಾಹೀರಾತುಗಳು ಮಾತ್ರ ಇರುವ ವಾರಪತ್ರಿಕೆ (?) ಕೊಳ್ಳಿ. ಸತ್ಯ ಬರೀ ರಾಚುವುದಿಲ್ಲ, ನಿಮ್ಮ ತಲೆಯ ಮೇಲೆ ಮೊಟೆಯುತ್ತದೆ !
ಹಾಯ್, ಹೇಗಿದೀಯ ? ನಾನು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಬರ್‍ತೀಯಾ ಭೇಟಿಯಾಗುವಾ. ನನ್ನ ಮೊಬೈಲ್ ………. ಬೈ.. ನಿನ್ನ ರಾಜೇಶ್
ನಾನು ಕುಟುಂಬಸ್ತ. ಇಂದಿರಾನಗರದ ಅಪಾರ್ಟ್‌ಮೆಂಟಿನಲ್ಲಿದ್ದೇನೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ನಿನ್ನ ಜೊತೆ ಸ್ನೇಹ ಬೇಕಿದೆ. ದಯವಿಟ್ಟು ನಿನ್ನ ಹೆಚ್ಚಿನ ಪರಿಚಯ ನೀಡು. ನಾನು ತುಂಬಾ ಸಂವೇದನಾಶೀಲ. ನಿನ್ನವನೇ….. ಕೃಷ್ಣರಾವ್.
ಹಾಯ್, ನಾನು ಹೈದರಾಬಾದಿನಿಂದ ಯಾವಾಗ್ಲಾದ್ರೂ ಬೆಂಗಳೂರಿಗೆ ಬರ್‍ತಾ ಇರ್‍ತೇನೆ. ನಿನ್ನ ಸ್ನೇಹ ಬೇಕು. ನಾನು ಉಳಿಯೋದು ಇಂಥಾ ಲಾಡ್ಜ್‌ನಲ್ಲಿ. ಪ್ಲೀಸ್ ಕೂಡ್ಲೇ ಪತ್ರ ಬರಿ. ಯಾಹೂ ಗ್ರೂಪ್‌ನಲ್ಲಿ ನಿನ್ನ ಮೆಸೇಜ್ ನೋಡಿ ಈ ಕಾಗದ ಬರೀತಾ ಇದೀನಿ….
ಇವು ಎಲ್ಲಿ ಸಿಗುತ್ತವೆ ಎನ್ನುತ್ತೀರ ? ಯಾಹೂ ಗ್ರೂಪ್ಸ್ ನಲ್ಲಿ ಹುಡುಕಿದರೆ ನಿಮಗೆ ಇಂಥದ್ದು ಕೂಡಾ ನೂರಾರು ಗುಂಪುಗಳು ಸಿಗುತ್ತವೆ. ಬೆಂಗಳೂರಿಗರೂ ಇಂಥ ಒಂದು ದೊಡ್ಡ ಗುಂಪನ್ನು ಮಾಡಿಕೊಂಡಿದ್ದಾರೆ. ಇವು ವೆಬ್‌ಸೈಟುಗಳಲ್ಲ. ಎಲ್ಲವನ್ನೂ ಬಿಚ್ಚಿಡಲು ನೆರವಾಗುವ ಮುಕ್ತ ಕೋಣೆಗಳು. ಯಾರಾದರೂ ಇವುಗಳ ಸದಸ್ಯರಾಗಬಹುದು. ಪತ್ರ ಬರೆದುಕೊಳ್ಳಬಹುದು. ಚಿತ್ರ ಹಂಚಿಕೊಳ್ಳಬಹುದು. ಫೈಲುಗಳನ್ನು ಹಾರಾಡಿಸಬಹುದು.
ಉದಾಹರಣೆಗೆ ಈ ಗ್ರೂಪನ್ನೇ ನೋಡಿ. ಇಲ್ಲಿ ನೀವು ಈ ಗುಂಪಿನ ಕೆಲವು ಸದಸ್ಯರ ಚಿತ್ರಗಳನ್ನು ನೋಡಬಹುದು. ಅಶ್ಲೀಲದ ಮಾತು ದೂರ ಇಡಿ. ಒಬ್ಬೊಬ್ಬ ಸದಸ್ಯೆಯೂ ಇಲ್ಲಿ ತನ್ನನ್ನು ತಾನೇ ಮಾರಾಟಕ್ಕೆ ಇಟ್ಟಿದ್ದಾಳೆ. ಯಾಕೆಂದರೆ ಸೈಬರ್ ಜಗತ್ತನ್ನು ಕಾಯಬೇಕಾದ ಪೊಲೀಸರು ಸದಾ ನಿದ್ದೆ ಮಾಡುತ್ತಿರುತ್ತಾರೆ. ಜಗತ್ತೇ ಒಂದು ಹಳ್ಳಿಯಾಗಿದೆ. ಇಲ್ಲಿ ಗಡಿಯಿಲ್ಲ. ಕಾಮಾತುರಾಣಾಂ ನ ಭಯಂ, ನ ಲಜ್ಜಂ, ಮತ್ತು ನ ಬಾರ್ಡರಂ…. ! ಮಾಹಿತಿ ತಂತ್ರeನ ಕಾಯ್ದೆಯಲ್ಲಿ ಈ ಬಗ್ಗೆ ಹೇರಳ ಕಾನೂನುಗಳಿವೆ. ಇರಲಿ. ಆ ಕಾನೂನುಗಳಲ್ಲಿ ಇರುವ ಅಕ್ಷರಗಳಷ್ಟು ಸೆಕ್ಸ್ ಗುಂಪುಗಳು ಯಾವ ಹೆದರಿಕೆಯೂ ಇಲ್ಲದೆ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ತಮಿಳುನಾಡಿನ ಅಂಚಿನಲ್ಲಿ ಇತ್ತೀಚೆಗೆ ನಡೆದ ಘಟನೆ ಗೊತ್ತಲ್ಲವೆ ? ಒಬ್ಬಾತ ಒಂದು ಗುಡಿಸಲಿನಲ್ಲಿ ಹೆಂಗಳೆಯರನ್ನು ಕರೆತಂದು ನಗ್ನವಾಗಿ ಚಿತ್ರಿಸಿ ತನ್ನ ವೆಬ್‌ಸೈಟಿನಲ್ಲಿ ಸೂಕ್ತ ಚಂದಾದಾರರಿಗೆ ಅವುಗಳನ್ನು ಪ್ರದರ್ಶಿಸುತ್ತಿದ್ದ. ಇಂಥ ಅನೇಕ ವೆಬ್‌ಸೈಟುಗಳೂ ಇವೆ ಎನ್ನಿ.
ನಿಜವೆ ಎಂದು ಹುಬ್ಬೇರಿಸಬೇಡಿ. ನಿಜ. ವಾಸ್ತವವಾಗಿ ಮೂವತ್ತು ವರ್ಷಗಳ ಹಿಂದೆ ಹುಟ್ಟಿದ ಈ ಮೇಲ್ ಈಗ ಮೂರು ವರ್ಷಗಳಿಂದ ಎಬ್ಬಿಸಿರುವ ದಾಂದಲೆ ಸರ್ವವಿದಿತ. ಆದರೆ ಯಾರೂ ಬಾಯಿ ಬಿಚ್ಚುತ್ತಿಲ್ಲ. ವಾಸ್ತವ ಬದುಕಿನಲ್ಲಿ ಕಾಣುವ ಕಾಮಾಟಿಪುರಗಳ ಬಗ್ಗೆ ಬರೆಯುವ ನೂರು ಪಟ್ಟು ಸಂಗತಿಗಳು ಇಂಟರ್‌ನೆಟ್‌ನ ಚಾಟ್/ಮೇಲ್/ಗ್ರೂಪ್/ವೆಬ್‌ಸೈಟ್/ ವಾಯ್ಸ್ ಮೂಲಕ ದಿನದ ೨೪ ತಾಸೂ ನಡೆಯುತ್ತಿರುತ್ತವೆ. ಇವೆಲ್ಲ ಸುಮ್ಮನೆ ಭ್ರಮೆಯ ಬದುಕು ಎನ್ನುವವರಿಗೆ ಇದರ ಪರಿಣಾಮಗಳೇ ಗೊತ್ತಿಲ್ಲ ಎಂದು ಕನಿಕರಿಸಬೇಕು. ಕೂತಲ್ಲೇ ವಿಶ್ವಸದಂಚಾರ ಮಾಡಿಸಿ ದೇಹ-ಮನಸ್ಸು-ಬುದ್ಧಿಯನ್ನು ಹಾದಿ ತಪ್ಪಿಸುವ ಕೆಲಸ ಇಲ್ಲಿ ನಡೀತಿದೆ.
ಈ ಮೇಲ್ ಮೂಲಕ ಸ್ನೇಹ ಬೆಳೆಸಿ ಹೂಗುಚ್ಛ ಕಳಿಸಿದವರದು ತುಂಬಾ ಹಳೆಯ ಕಥೆ. ನೀನು ಇಲ್ಲಿಗೆ ಬಾ, ಭೇಟಿಯಾಗೋಣ ಎಂದು ಹೇಳಿ,ಭೇಟಿಯಾಗಿ ಹೊಸ ಬಗೆಯ ಕಾಮಸಂಬಂಧಗಳನ್ನು ಬೆಳೆಸಿಕೊಳ್ಳುತ್ತಿರುವುದು ಈ ಕಾಲದ ವಿದ್ಯಮಾನ. ಕೊಯಂಬತ್ತೂರಿನಿಂದ ಬರುವ ಉದ್ಯಮಿ ತನ್ನ ಅಕೃತ ಮೀಟಿಂಗುಗಳಿಗೆ ಮಾತ್ರ ತಯಾರಾಗುವುದಿಲ್ಲ. ಅನಕೃತ ಮೀಟಿಂಗುಗಳಿಗೆ ಜಾಗ ಸಿಗುವುದೇ ಎಂದು ಹೊಂಚು ಹಾಕುತ್ತಾನೆ. ಬೇರೆ ಬೇರೆ ಗ್ರೂಪುಗಳಿಗೆ ಸದಸ್ಯನಾಗಿ ಎಲ್ಲರಿಗೂ ತನ್ನ ಮುಕ್ತಕಾಮದ ಬಗ್ಗೆ ಬಹಿರಂಗ ಪತ್ರ ಬರೆಯುತ್ತಾನೆ. ತನ್ನ ವಯಸ್ಸು, ಎತ್ತರ, ಸಂಪಾದನೆ, ಉಳಿದುಕೊಳ್ಳುವ ಹೋಟೆಲು, ಅಪೇಕ್ಷೆ ಮತ್ತು ಹುಡುಗಿಯರನ್ನು ನಿಭಾಯಿಸುವ ತನ್ನ `ಕ್ಯೆಪಾಸಿಟಿಯನ್ನೂ' ಈತ ಯಾವ ಮುಲಾಜಿಲ್ಲದೆ ಬರೆಯುತ್ತಾನೆ. ಕ್ಷಮಿಸಿ, ಈತನ ಊರು ಮುಂಬಯಿ, ದಿಲ್ಲಿ, ಕೋಲ್ಕತ, ಲಖ್ನೋ, ಯಾವುದಾದರೂ ಆಗಬಹುದು.
ಇಂಥ ಮುಕ್ತ ಸ್ನೇಹ ನಿಜಕ್ಕೂ ಪರಸ್ಪರ ಭೇಟಿಯಾಗುವುದರಲ್ಲಿ ತಾರ್ಕಿಕ ಕೊನೆ ಕಂಡುಕೊಳ್ಳುತ್ತದೆಯೆ ? ಹೌದು. ಬೆಂಗಳೂರಿನ ಮಟ್ಟಿಗಂತೂ ಈ ಬಗೆಯ ಬಂಧಕ್ಕೆ ತೆರೆದುಕೊಳ್ಳುವುದು ಒಂದು ವಾಸ್ತವವಾಗಿ ಪರಿಣಮಿಸಿದೆ. ಈ ಲೇಖಕನಿಗೆ ಇಂಥ ನಿಕಟತೆಗೆ ಹಾತೊರೆದ ದಿಲ್ಲಿ, ದಾಂಡೇಲಿಯ ವ್ಯಕ್ತಿಗಳೂ ಸಿಕ್ಕಿದ್ದಾರೆ. ಅಂದರೆ ಸುಮಾರಾಗಿ ಇಂಟರ್‌ನೆಟ್ ಇರುವ ಎಲ್ಲ ಪ್ರದೇಶಗಳಲ್ಲಿ ಈ ಟ್ರೆಂಡ್ ಹಬ್ಬಿದೆ. ದೈಹಿಕ ಸಂಬಂಧ ಬಿಡಿ, ಕೊಂಚ ಮಜಾ ತಗೊಳ್ಳೋಣ ಎಂದು ಈ ಬಗೆಯ ಪತ್ರಮಿತ್ರತ್ವ ಬೆಳೆಸುವವರೂ ಇದ್ದಾರೆ.
ಇದು ಒಂದು ಬಗೆ. ಇನ್ನೊಂದು ಬಗೆ ಇಂಟರ್‌ನೆಟ್ ಚಾಟ್. ಬೆಂಗಳೂರಿನ ಹೈಸ್ಕೂಲುಗಳ ಪಕ್ಕದಲ್ಲಿರುವ ಸೈಬರ್ ಕೆಫೆಗಳಲ್ಲಿ ಒಮ್ಮೆ ಇಣುಕಿ ನೋಡಿ. ಹದಿಹರೆಯದವರು ಯಾರಿಗೂ ಕಾಣದ ಹಾಗೆ ಕಂಪ್ಯೂಟರಿನಲ್ಲಿ ಜಗತ್ತಿನ ಇನ್ನಾವುದೋ ಮೂಲೆಯಲ್ಲಿರುವ ಅಥವಾ ಹತ್ತಿರದ ಕೋರಮಂಗಲದಲ್ಲಿ ಇರುವ ಹುಡುಗ/ ಹುಡುಗಿ ಜೊತೆ ಮಾತುಕತೆಯಲ್ಲಿ ತೊಡಗಿರುತ್ತಾರೆ. ಒಂದು ಗಂಟೆಗೆ ೨೦-೩೦ ರೂಪಾಯಿ. ಅಪ್ಪ ಕೊಡುವ ಪಾಕೆಟ್ ಮನಿ ಸಾಕು. ಹೀಗೆ ಬಂಧ, ನಿರ್ಬಂಧ, ಕಾನೂನು, ಸರ್ಕಾರ, ನೈತಿಕತೆ, ಸಮಾಜ, ಯಾವುದೇ ನೆನಪಿಲ್ಲದೆ ಬಾಯಿಗೆ ಬಂದ ಪದಗಳನ್ನು, ಮನಸ್ಸಿಗೆ ಕಂಡ ಬೇಕಾಬಿಟ್ಟಿ ಕನಸುಗಳನ್ನು ಹಂಚಿಕೊಳ್ಳಬಹುದು. ಇದನ್ನೇ ಸೈಬರ್‌ಸೆಕ್ಸ್ ಎನ್ನುತ್ತಾರೆ. ಆದರೆ…..ಇದು ಲೈಂಗಿಕ ಸ್ವೇಚ್ಛಾಚಾರದ ಮೊದಲ ಹಂತ ಮಾತ್ರ !
ಯಾಕೆಂದರೆ ನೀವು ಇನ್ನೂ ಒಂದು ಗ್ಲೋಬಲ್ ಮಜಾ ಅನುಭವಿಸಬಹುದು, ಅದೃಷ್ಟ ಇದ್ದರೆ. ಅದೇ ವೆಬ್‌ಕ್ಯಾಮ್ ಚಾಟ್. ನಿಮ್ಮ ಮನೆಯಲ್ಲೋ, ಅಥವಾ ರೂಮಿನಲ್ಲೋ, ಅಥವಾ ಕಚೇರಿಯಲ್ಲೋ, ಖಾಸಗಿಯಾಗಿ ಬಳಸಬಹುದಾದ, ಇಂಟರ್‌ನೆಟ್ ಸಂಪರ್ಕದ ಕಂಪ್ಯೂಟರ್ ಇದ್ದರೆ ಸಾಕು. ಅದಕ್ಕೆ ಒಂದು ಮೈಕ್ರೋಫೋನ್ ಜೋಡಿಸಿದರೆ ಒಳ್ಳೇದೇ. ಹಾಗೇ ಐದಾರು ಸಾವಿರ ರೂಪಾಯಿಗೆ ಸಿಗೋ ಒಂದು ವೆಬ್‌ಕ್ಯಾಮೆರಾನ ತಂದ್ರಂತೂ, ಗ್ರೇಟ್. ನೀವು ಈಗ ಈ ಮಜಾ ಅನುಭವಿಸಲು ಸಿದ್ಧ.
ಇಂಟರ್‌ನೆಟ್ ಚಾಟ್ (ಹರಟೆ, ವಾರ್ತಾಲಾಪ ) ಎಂದೆನಲ್ಲ, ಇಲ್ಲಿ ನೀವು ಹಾಗೆ ಚಾಟ್ ಮಾಡುವ ಯಾವುದೋ ವ್ಯಕ್ತಿಯ ಮುಖಾರವಿಂದವನ್ನು ನೋಡಬಹುದು. ಅವ/ಅವಳು ಬಟ್ಟೆ ಧರಿಸಿರಬಹುದು, ನಗ್ನವಾಗಿರಲೂಬಹುದು. ಒಬ್ಬರೇ ಕಾಯುತ್ತಿರಬಹುದು, ದಂಪತಿಗಳೇ ಇರಬಹುದು. ಒಂದೆಂದರೆ ಇಲ್ಲಿ ಅವರ ಅನುಮತಿ ಸಿಕ್ಕಿದರೆ ಮಾತ್ರ ನೀವು ಅವರನ್ನು ನಿಮ್ಮ ಕಂಪ್ಯೂಟರಿನಲ್ಲಿ ಮೂಡುವ ಚಿಕ್ಕ ಟಿವಿ ಚೌಕಟ್ಟಿನಲ್ಲಿ ಜೀವಂತವಾಗಿ, ನೇರಪ್ರಸಾರದ ಕ್ರಿಕೆಟ್ ಮ್ಯಾಚಿನ ಹಾಗೆ ನೋಡಬಹುದು. ಇಲ್ಲಿ ಕಲ್ಪನೆಗಳು ವಾಸ್ತವಕ್ಕಿಂತ ಸಪ್ಪೆಯಾಗಿರುತ್ತವೆ ಎಂದು ಮಾತ್ರ ಹೇಳಬಹುದು!
ಪಕ್ಕದಲ್ಲೇ ಚಾಟ್ ರೂಮಿನಲ್ಲಿ ಅವರಿಗೆ, ಅವರಿಂದ ಬರುವ ಮಾತುಗಳನ್ನು ಓದಿ, ಅಥವಾ ನಿಮ್ಮ ಕಂಪ್ಯೂಟರಿನ ಮಲ್ಟಿಮೀಡಿಯಾ ವ್ಯವಸ್ಥೆಯ ಮೂಲಕ ಸ್ಪೀಕರಿನಲ್ಲಿ ಅವರ ಮಾತುಗಳನ್ನು, ಕಿರುಚಾಟಗಳನ್ನು `ಕೇಳಿ'. ನಿಮಗೆ ದರ್ದಿದ್ದರೆ ಮೈಕ್ರೋಫೋನಿನ ಮೂಲಕ ಮಾತನಾಡಿ. ಹೊರಜಗತ್ತಿಗೆ ಈ ಸಂಭಾಷಣಾ ವಿಧಾನ ` ವಾಯ್ಸ್‌ಚಾಟ್' ಎಂಬ ಗೌರವಯುತ ಹೆಸರಿನಿಂದ ಪ್ರಸಿದ್ಧ.
ಹೀಗೆ ಗಂಟೆಗಟ್ಟಳೆ, ದಿನಗಟ್ಟಳೆ ಇಂಟರ್‍ನೆಟ್‌ನಲ್ಲಿ ವಿಹರಿಸುತ್ತಿರೋ ಸಾವಿರಾರು ಜನರಿದ್ದಾರೆ. ಅವರ ಜಗತ್ತು ಭ್ರಮಾತ್ಮಕವಲ್ಲ. ಎದುರಿಗೆ ಅವಳಿದ್ದಾಳೆ/ನೆ. ಹಲವು ಬಗೆಯ ಕಾಮಕೇಳಿಗೆ ಪ್ರಚೋದನೆ ನೀಡುತ್ತಾಳೆ/ನೆ. ಅವರು ನಿಜ. ನೋಡುತ್ತಿರುವ ತಾನು ನಿಜ. ಅಂದಮೇಲೆ ಅದು ಸೈಬರ್‌ಲೋಕವೇನಲ್ಲ. ವಾಸ್ತವವೇ ಎಂದು ಇವರೆಲ್ಲ ವಾದಿಸುತ್ತಾರೆ. ಕೀಬೋರ್ಡಿನಲ್ಲಿ ಪ್ರೇಮ-ಕಾಮದ ಪದಗಳನ್ನು ಹುಡುಕುತ್ತಲೇ ಇರುತ್ತಾರೆ. ಇವರು ಮಾದಕದ್ರವ್ಯ ಮಾತ್ರ ಬಳಸಲ್ಲ ! ಹೆಚ್ಚೆಂದರೆ ಸಿಗರೇಟು, ಒಂದುಬಾಟಲಿ ಬೀರ್.
ಬೆಂಗಳೂರಿನ ಹಲವು ಮಾಹಿತಿ ತಂತ್ರeನ ಕಚೇರಿಗಳಲ್ಲಿ ಇಂಟರ್‌ನೆಟ್ ಸಂಪರ್ಕ ಅಬಾತ. ಹಲವೆಡೆ ಈ ಚಾಟ್‌ಗೆ ನಿಷೇಧ ಇದೆ. ಆದರೆ ಅದನ್ನೂ ಉಲ್ಲಂಘಿಸಿ ಬಳಸುವವರು ಇದ್ದಾರೆ. ಇನ್ನು ಸೈಬರ್‌ಕೆಫೆಗಳಲ್ಲಿ ಇದು ತೀರಾ ಸಾಮಾನ್ಯ.
ಇದನ್ನು ಪೊಲೀಸರು ಅಲ್ಲಗಳೆಯಬೇಕೆಂದಿಲ್ಲ. ಯಾಕೆಂದರೆ ಕಳೆದ ತಿಂಗಳು ಇಂಥ ಒಂದು ಗ್ರೂಪಿನ ಅನೈತಿಕ ಚಟುವಟಿಕೆಗಳ ಬಗ್ಗೆ ಒಂದು ದೂರು ಸಹಾ ದಾಖಲಾಗಿತ್ತು. ಆದರೆ ಹೇಗೋ ಗುಂಪಿನ ಘನತೆವೆತ್ತ ಸದಸ್ಯನ ಸಂಬಂಯಿಂದ ಅದು ಮುಚ್ಚಿಹೋಯಿತು ಎಂದು ಇದೇ ಗ್ರೂಪಿನಲ್ಲಿದ್ದವರು ಪತ್ರಮುಖೇನ ಮಾತನಾಡಿಕೊಳ್ಳುತ್ತಿದ್ದರು.
ಪರಿಹಾರ ?
ಸರ್ಕಾರಿ ನಿಯಂತ್ರಣಗಳಿಂದ ಈ ಬಿಂದುಕಾಮಲೋಕವನ್ನು (ಡಾಟ್‌ಕಾಮ್ ಜಗತ್ತು) ನಿಯಂತ್ರಿಸುವುದು ಮೂರ್ಖತನ. ತಂದೆ ತಾಯಂದಿರು ಈ ಕೆಲಸ ಮಾಡಬೇಕು. ಮನೆಯ ಕಂಪ್ಯೂಟರನ್ನು ಮನೆಯ `ಸಾರ್ವಜನಿಕ' ಸ್ಥಳದಲ್ಲಿ ಇಡಬೇಕು. ಮಕ್ಕಳು ಸೈಬರ್‌ಕೆಫೆಗೆ ಹೋಗುತ್ತಿದ್ದಾರೆಯೇ ಎಂದು ಗಮನಿಸಬೇಕು. ಅಲ್ಲಿನ ಮಾಲಿಕನ ನಡತೆಯ ಮೇಲೆ ನಿಗಾ ಇಡಬೇಕು. ವಾಸ್ತವ ಜಗತ್ತಿನಲ್ಲಿ ಒಳ್ಳೆಯ ಸ್ನೇಹ ಸಿಗಲಾರದ ಈ ಕಾಲದಲ್ಲಿ ಭ್ರಮಾತ್ಮಕ ಜಗತ್ತಿನಿಂದ ಭಾರೀ ಆತ್ಮೀಯ ಗೆಳೆತನ ದಕ್ಕುವುದು ದೂರದ ಮಾತೇ ಸರಿ ಎಂಬ ಮಾತನ್ನು ಮಕ್ಕಳಿಗೆ ತಿಳಿಹೇಳಬೇಕು. ಇಲ್ಲಿ ಈ ಮೇಲ್ ಸ್ನೇಹ ನೂರಕ್ಕೆ ನೂರು ತಪ್ಪು ಎಂದು ಹೇಳುತ್ತಿಲ್ಲ. ಆದರೆ ನೂರಕ್ಕೆ ತೊಂಬತ್ತೊಂಬತ್ತರಷ್ಟು ಅವಾಸ್ತವ ಎಂಬುದಂತೂ ನಿಜ.
ದುರದೃಷ್ಟವೆಂದರೆ ಈ ತಂದೆ ತಾಯಂದಿರನ್ನೂ ಹಾದಿ ತಪ್ಪಿಸುವ ಇನ್ನಿತರೆ ಗ್ರೂಪುಗಳು ಕಾರ್ಯನಿರತವಾಗಿವೆ. ಅವೇ ಸ್ವಿಂಗಿಂಗ್ ವೆಬ್‌ಸೈಟ್‌ಗಳು. ಅಂದರೆ ಒಬ್ಬಾತ ತನ್ನ ಪತ್ನಿಯನ್ನು ಇನ್ನೊಬ್ಬರ ಪತ್ನಿಯ ಸುಖ ಅನುಭವಿಸಲು ಎರವಲು ನೀಡುವುದು. ಭಾರತದ ದಂಪತಿಗಳಿಗಾಗಿಯೇ ಇಂಥ ಹಲವು ವೆಬ್‌ಸೈಟುಗಳು ಹಗಲಿರುಳೂ ಮಗ್ನ. ಯಾಕೆಂದರೆ ಇಲ್ಲಿ ಹಗಲೇ ಇರುಳು ! ಈ ಟ್ರೆಂಡನ್ನು ತಡೆಯುವುದು ಹೇಗೆ ?
ತುಂಬಾ ಕಷ್ಟ ಎನ್ನುತ್ತೀರ ? ಹೌದು. ಕಳೆದ ವರ್ಷ ಸಾವಿರಾರು ಡಾಟ್‌ಕಾಮ್‌ಗಳು ಬಿದ್ದವಲ್ಲ, ಎಲ್ಲೆಲ್ಲೂ ಈ ವೈಫಲ್ಯದ ಕಾರಣಕ್ಕಾಗಿ ಹುಡುಕಾಟ ನಡೆಯಿತು. ಕೊನೆಗೆ ಇಂಥ ಬೀಳುತ್ತಿರೋ ಡಾಟ್‌ಕಾಮ್‌ಗಳಿಗೆ ಹಲವು ಯಶಸ್ವೀ ಡಾಟ್‌ಕಾಮ್‌ಗಳ ಒಡೆಯರನ್ನು ಸಲಹಾಕಾರರಾಗಿ ನಿಯುಕ್ತಿ ಮಾಡಲಾಯಿತು.
ಇಲ್ಲೂ ದುರದೃಷ್ಟ ಕಾದಿದೆ : ಈ ಸಲಹಾಕಾರರೆಲ್ಲರೂ ಇಂಟರ್‌ನೆಟ್‌ನಲ್ಲಿ ಸೆಕ್ಸ್ ಮಾರಾಟ ಮಾಡಿ ಯಶಸ್ಸಿನ ಕಥೆ ಬರೆದವರು !
ಅಂದಮೇಲೆ…. ಕಾಮಣ್ಣನನ್ನು ಸುಡುವುದು ಹೇಗೆ ? ಕಂಪ್ಯೂಟರಿಗೆ ಬೆಂಕಿ ಇಡುತ್ತೀರ ? ಈಗ ಇಂಟರ್‌ನೆಟ್‌ನಲ್ಲಿ ಹೆಚ್ಚು ಬೇಗ ಚಿತ್ರಗಳ ರವಾನೆಗೆ ಅನುಕೂಲ ಮಾಡಿಕೊಡಲು ಬರ್‍ತಾ ಇರೋ ಆಪ್ಟಿಕಲ್ ಫೈಬರ್ ಜಾಲವನ್ನು ಕತ್ತರಿಸಿ ಹಾಕುತ್ತೀರ ? ಅಥವಾ ನಿಮ್ಮ ಮನೆಗೆ ಯಾವ ತಂತಿಯೂ ಬೇಡ ಎಂದು ದ್ವೀಪವಾಗುತ್ತೀರ ? ಇಂಟರ್‌ನೆಟ್ ತರೋ ಮಾಹಿತಿಗಳ ಉಸಾಬರಿಯೇ ಬೇಡ ಎಂದು ಹೊದ್ದು ಮಲಗುತ್ತೀರ ?
ಒಂದು ಈ ಮೇಲ್‌ನಿಂದ ಒಳ್ಳೆಯದೂ ಆಗುತ್ತದೆ. ಆದರೆ ಕೆಟ್ಟದ್ದು ಖಂಡಿತಾ ಘಟಿಸುತ್ತದೆ.

Leave a Reply

Theme by Anders Norén